Wednesday, 9th October 2024

ಹಣದುಬ್ಬರ ನಿಯಂತ್ರಣಕ್ಕೆ ಸುದೀರ್ಘ ಹೋರಾಟ

ವಿತ್ತಲೋಕ

ಚೇರ್ಕಾಡಿ ಸಚ್ಚಿದಾನಂದ ಶೆಟ್ಟಿ

ಕೋವಿಡ್ ಮತ್ತು ಉಕ್ರೇನ್ ಯುದ್ಧದ ಕಾರಣದಿಂದಾಗಿ, ೨೦೨೧ರ ಮಧ್ಯಭಾಗದಲ್ಲಿ ಆಹಾರ ಧಾನ್ಯ, ಇಂಧನಗಳ ಬೆಲೆ ಜಾಗತಿಕವಾಗಿ ಹೆಚ್ಚತೊಡಗಿತು. ೨೦೨೨ರಿಂದ ಇದರ ಪ್ರಭಾವ ಹೆಚ್ಚಾಯಿತು. ಇಂಧನ, ಗೋಧಿ, ಗೊಬ್ಬರ ಇತ್ಯಾದಿಗಳ ಪೂರೈಕೆಯ ಸಮಸ್ಯೆಯಿಂದ ಉಳಿದ ಸರಕು-ಸೇವೆಗಳ ಬೆಲೆ ಹೆಚ್ಚಾಗಿ ಪರಿಸ್ಥಿತಿ ಬಿಗಡಾಯಿಸಿತು.

ಹಣದುಬ್ಬರಕ್ಕೆ ಕಾರಣವೇನು ಎಂಬುದರ ಬಗ್ಗೆ ಅರ್ಥಶಾಸಜ್ಞರು ಚರ್ಚೆಗೆ ಇಳಿದರೆ ಎರಡು ಗುಂಪು ಗಳಾಗಿಬಿಡುತ್ತಾರೆ’ ಎಂಬುದು ಶತಮಾನಗಳಷ್ಟು ಹಳೆಯ ವ್ಯಾಖ್ಯಾನ. ಹಣದುಬ್ಬರವನ್ನು ನಿಯಂತ್ರಿಸುವುದರ ಬಗ್ಗೆ ಅರ್ಥಶಾಸ್ತ್ರಜ್ಞರಲ್ಲಿ ಒಮ್ಮತವಿಲ್ಲ. ಕೇಂದ್ರ ಬ್ಯಾಂಕುಗಳು ಮಾತ್ರ ಹಣದುಬ್ಬರದ ನಿಯಂತ್ರಣವನ್ನು ಸುದೀರ್ಘ ಹೋರಾಟವೆಂದು ಒಪ್ಪಿಕೊಂಡಿವೆ. ಇದೇ ಸಂದರ್ಭದಲ್ಲಿ, ಹಣದುಬ್ಬರದ ಗಾಢ ಪರಿಣಾಮಗಳಾದ ಅಸಮರ್ಪಕ ಹಂಚಿಕೆ, ಉತ್ಪಾದನೆ ಕುಂಠಿತ ಗೊಳ್ಳುವಿಕೆ, ಕಾಳಸಂತೆ ಮಾರಾಟ, ಹಣದ ಖರೀದಿ ಸಾಮರ್ಥ್ಯ ಕುಂಠಿತವಾಗುವಿಕೆ, ವಿದೇಶಿ ಬಂಡವಾಳದ ಹರಿವು ಕಡಿಮೆಯಾಗುವಿಕೆ, ಆದಾಯ ಮತ್ತು ಸಂಪತ್ತಿನ ವಿತರಣೆಯ ಮೇಲೆ ಬೀರುವ ಪರಿಣಾಮ ಇವು ಎಲ್ಲರೂ ಒಮ್ಮತದಿಂದ ಒಪ್ಪಿಕೊಂಡ ಪ್ರಮುಖ ವಿಚಾರ ಗಳಾಗಿವೆ.

ಹಣದುಬ್ಬರವು ಆಧುನಿಕ ಹಣದ ಆರ್ಥಿಕತೆಗಳನ್ನು ಸದಾ ಬಾಧಿಸುತ್ತಿರುತ್ತದೆ. ಇದೊಂದು ವಿಶ್ವವ್ಯಾಪಿ ವಿದ್ಯಮಾನವೂ ಹೌದು, ಅರ್ಥಶಾಸ್ತ್ರದ ಕೇಂದ್ರಬಿಂದುವೂ ಹೌದು. ಬೆಲೆಗಳು ನಿರಂತರ ಏರುತ್ತಿರುವ ಮತ್ತು ಹಣದ ಮೌಲ್ಯ ಕುಸಿಯುತ್ತಿರುವ ಸನ್ನಿವೇಶವೇ ಹಣದುಬ್ಬರ; ಇದರ ಹೊಡೆತ ಮೊದಲಿಗೆ ಬೀಳುವುದು ಜನಸಾಮಾನ್ಯರ ಮೇಲೆ. ಹಣದುಬ್ಬರ ಎಂಬುದು ಬೆಲೆಯೇರಿಕೆಯ ದೀರ್ಘಕಾಲಿಕ ಪರಿಣಾಮವಾಗಿರುತ್ತದೆ. ಕೇವಲ ಕೆಲವೊಂದು ಸರಕು ಮತ್ತು ಸೇವೆಗಳ ಬೆಲೆ ಹೆಚ್ಚಾದಾಗ ಅದು ಹಣದುಬ್ಬರ ಎನಿಸಿ ಕೊಳ್ಳುವುದಿಲ್ಲ. ವಿಭಿನ್ನ ಕ್ಷೇತ್ರಗಳಲ್ಲಿ ಈ ಬೆಳವಣಿಗೆ ಕಂಡುಬಂದಾಗ ಹಣದುಬ್ಬರ ಎಂದು ಕರೆಯುವುದು ವಾಡಿಕೆ.

ಸಾಂಪ್ರದಾಯಿಕ ಹಣಕಾಸು ತಜ್ಞರು ‘ಹಣದ ಪೂರೈಕೆಯ ಹೆಚ್ಚಳವು ಹಣದುಬ್ಬರಕ್ಕೆ ಕಾರಣ’ ಎನ್ನುತ್ತಾರೆ. ‘ದೊಡ್ಡಮೊತ್ತದ ಹಣ ಕೆಲವೇ ಸರಕುಗಳ ಮೇಲೆ ಬಿದ್ದಾಗ ಪದಾರ್ಥಗಳ ಬೆಲೆ ಹೆಚ್ಚುತ್ತದೆ’ ಎಂಬುದು ಇಂಥವರ ಮತ್ತೊಂದು ಪ್ರಮುಖ ಅಭಿಪ್ರಾಯ. ಮಾರುಕಟ್ಟೆಯಲ್ಲಿ ಹಣದ ಪ್ರಮಾಣ, ಅಂದರೆ ದ್ರವ್ಯತೆ
(ಔಜಿಟ್ಠಿಜಿbಜಿಠಿqs) ಹೆಚ್ಚಬೇಕಾದರೆ ಸಾಲ ಅಗ್ಗವಾಗಿ ಸಿಗಬೇಕು. ಆ ದ್ರವ್ಯತೆ ಹೆಚ್ಚಿದಾಗ ಹಣದುಬ್ಬರ ದರ ಹೆಚ್ಚುತ್ತದೆ. ಆ ಸಮಯದಲ್ಲಿ ಹಣದುಬ್ಬರವನ್ನು ನಿಯಂತ್ರಿಸಬೇಕಾದರೆ, ಆರ್ಥಿಕತೆಯಲ್ಲಿ ಚಲಾವಣೆಯಲ್ಲಿರುವ ಹಣದ ಪ್ರಮಾಣವನ್ನು ಕಡಿಮೆ ಮಾಡಬೇಕು, ಅಂದರೆ ಬಡ್ಡಿದರವನ್ನು ಏರಿಸಬೇಕು. ಇದರಿಂದ ಸಾಲದ ಪ್ರಮಾಣ ಕಡಿಮೆಯಾಗಬೇಕು. ಮಾರುಕಟ್ಟೆಯಲ್ಲಿ ಒಮ್ಮೆ ದ್ರವ್ಯತೆ ಕಡಿಮೆಯಾದರೆ, ಬೆಲೆ ಕಡಿಮೆಯಾಗುತ್ತದೆ.

ಆರ್ಥಿಕತೆಯನ್ನು ವಿಶ್ಲೇಷಿಸುವ ಇನ್ನೊಂದು ಪಂಗಡದ ಪ್ರಕಾರ, ಆದಾಯಕ್ಕಿಂತ ವೆಚ್ಚ ಹೆಚ್ಚಾದರೆ ಬೆಲೆಗಳು ಹೆಚ್ಚುತ್ತವೆ. ಅಂದರೆ ಸರಕು ಮತ್ತು ಸೇವೆಗಳಲ್ಲಿ ಹೆಚ್ಚು ಬೇಡಿಕೆಯಿದ್ದು ಪೂರೈಕೆಯಲ್ಲಿ ಸಮಸ್ಯೆಯಾದರೆ ಹಣದುಬ್ಬರ ಉಂಟಾಗುತ್ತದೆ. ಆದುದರಿಂದ ಹಣದುಬ್ಬರದ ಸಮಸ್ಯೆಯನ್ನು ಎರಡು ರೀತಿಯಲ್ಲಿ ಅರ್ಥಮಾಡಿಕೊಳ್ಳಬೇಕಾಗುತ್ತದೆ. ಒಂದನೆಯದು, ಬೇಡಿಕೆಯ ಹೆಚ್ಚಳದಿಂದಾಗುವ ಹಣ ದುಬ್ಬರ, ಅಂದರೆ ಪೂರೈಕೆಗಿಂತ ಬೇಡಿಕೆಗಳು ಹೆಚ್ಚಿದರೆ ಬೆಲೆಗಳು ಏರುತ್ತವೆ. ಇದು ಬೇಡಿಕೆಯ ಸೆಳೆತದಿಂದಾಗುವ ಹಣದುಬ್ಬರ.

ಎರಡನೆಯದು, ವೆಚ್ಚದ ಒತ್ತಡಗಳಿಂದಾಗುವ ಹಣದುಬ್ಬರ. ಪೂರೈಕೆಯ ಸಮಸ್ಯೆಯಿಂದಾಗಿ ಕೆಲವು ವಸ್ತುಗಳ ಬೆಲೆ ಹೆಚ್ಚಿದರೆ ಅಥವಾ ಆಮದು ದುಬಾರಿ ಯಾದರೆ, ಆಗ ಉತ್ಪಾದನಾ ವೆಚ್ಚ ಹೆಚ್ಚುತ್ತದೆ. ಆಗ ಸ್ವಾಭಾವಿಕ ವಾಗಿಯೇ ಸರಕು ಮತ್ತು ಸೇವೆಗಳ ಬೆಲೆ ಹೆಚ್ಚುತ್ತದೆ. ಇದು ವೆಚ್ಚದ ಒತ್ತಡದಿಂದಾಗುವ ಹಣದುಬ್ಬರ. ಹಣದುಬ್ಬರ ಯಾವ ಬಗೆಯದು ಎಂಬುದನ್ನು ಆಧರಿಸಿ ಸರಕಾರವು ಕ್ರಮ ಕೈಗೊಳ್ಳಬೇಕಾಗುತ್ತದೆ. ಇದೀಗ ಹಣದುಬ್ಬರವು ವಿಶ್ವ ವ್ಯಾಪಿಯಾಗಿ ಅರ್ಥಶಾಸಜ್ಞರನ್ನೂ ಗೊಂದಲಗೊಳಿಸಿದೆ. ಬೇಡಿಕೆಯ ಹೆಚ್ಚಳವು ಹಣದುಬ್ಬರಕ್ಕೆ ಕಾರಣವಾಗಿದ್ದರೆ, ಸರಕಾರ ಬಡ್ಡಿದರವನ್ನು ಹೆಚ್ಚಿಸುತ್ತದೆ. ಇದರಿಂದಾಗಿ ಸಾಲ
ದುಬಾರಿಯಾಗಿ ಆರ್ಥಿಕ ಚಟುವಟಿಕೆಯನ್ನು ಕುಗ್ಗಿಸುತ್ತದೆ. ಆ ಮೂಲಕ ಆರ್ಥಿಕತೆಯಲ್ಲಿ ಹಣದ ಪ್ರಮಾಣ ಕಡಿಮೆ ಯಾಗುತ್ತದೆ, ಬೇಡಿಕೆ ಕಮ್ಮಿಯಾಗುತ್ತದೆ. ಅಂತಿಮವಾಗಿ ಹಣದುಬ್ಬರ ನಿಯಂತ್ರಣಕ್ಕೆ ಬರುತ್ತದೆ. ಇದು ಒಂದು ಕ್ರಮ.

ಆದರೆ ದೊಡ್ಡ ವೆಚ್ಚದ ಹೆಚ್ಚಳದಿಂದ ಹಣದುಬ್ಬರ ಹೆಚ್ಚಿದರೆ ಬಡ್ಡಿದರವನ್ನು ಏರಿಸುವುದರಿಂದ ಲಾಭವಿಲ್ಲ. ಬದಲಿಗೆ ಇಂಥ ಬಿಗಿ ಹಣಕಾಸು ನೀತಿಯಿಂದ ಆರ್ಥಿಕ
ಚಟುವಟಿಕೆಗಳು ಕುಗ್ಗುವುದರ ಜತೆಗೆ, ಬೆಲೆಯೇರಿಕೆಯೂ ಮುಂದುವರಿಯಬಹುದು. ಆದರೆ ಹಣದುಬ್ಬರದ ಜತೆಗೆ ಆರ್ಥಿಕ ಸ್ಥಗಿತತೆ (oಠಿZಜ್ಛ್ಝZಠಿಜಿಟ್ಞ) ಸೇರಿಕೊಂಡ ಸ್ಥಿತಿ ನಿರ್ಮಾಣವಾಗಬಹುದು. ಐಎಂಎಫ್ ಡೆಪ್ಯುಟಿ ಮ್ಯಾನೇಜಿಂಗ್ ಡೈರೆಕ್ಟರ್ ಗೀತಾ ಗೋಪಿನಾಥನ್ ಹೇಳುವ ಪ್ರಕಾರ, ಹಣದುಬ್ಬರ ಕಡಿಮೆಯಾಗಬೇಕಾದರೆ ಉದ್ದಿಮೆ ಗಳು ತಮ್ಮ ಲಾಭಾಂಶವನ್ನು ಇಳಿಸಿಕೊಳ್ಳಲು ಸಿದ್ಧವಿರ ಬೇಕು. ಇದು ಸಾಧ್ಯವೇ? ಎಂಬುದು ಚರ್ಚಾಸ್ಪದ ವಿಷಯವಾಗಿದೆ.

ಪ್ರಸಕ್ತ ಪರಿಸ್ಥಿತಿಯಲ್ಲಿ ಹೆಚ್ಚಿನ ಕೇಂದ್ರ ಬ್ಯಾಂಕುಗಳು, ಬೇಡಿಕೆಯ ಹೆಚ್ಚಳವನ್ನು ಇಂದಿನ ಹಣದುಬ್ಬರಕ್ಕೆ ಕಾರಣ ವೆಂದು ಒಪ್ಪಿಕೊಂಡಂತೆ ಕಾಣುತ್ತದೆ. ಎಲ್ಲಾ ಬ್ಯಾಂಕುಗಳೂ ಬಡ್ಡಿದರವನ್ನು ಹೆಚ್ಚಿಸುತ್ತಾ ಸಾಗಿವೆ. ಇದೀಗ ಅಮೆರಿಕದ ಕೇಂದ್ರೀಯ ಬ್ಯಾಂಕ್ ಆಗಿರುವ ‘ಫೆಡರಲ್ ರಿಸರ್ವ್’ ತನ್ನ ಬಡ್ಡಿದರವನ್ನು ಶೇ.೦.೨೫ ರಷ್ಟು ಏರಿಕೆ ಮಾಡಿದೆ. ಇದರಿಂದಾಗಿ ಅಮೆರಿಕ ಕೇಂದ್ರೀಯ ಬ್ಯಾಂಕ್‌ನ ಬಡ್ಡಿದರವು ೨೨ ವರ್ಷಗಳಲ್ಲೇ ಗರಿಷ್ಠ ಮಟ್ಟಕ್ಕೆ ತಲುಪಿ ಶೇ.೫.೫ರ ವ್ಯಾಪ್ತಿಗೆ ತಲುಪಿ ದಂತಾಗಿದೆ. ಈ ನಿಟ್ಟಿನಲ್ಲಿ ಫೆಡ್ ರಿಸರ್ವ್, ೨೦೨೨ರ ಮಾರ್ಚ್‌ನಿಂದ ಈವರೆಗೆ ನಡೆದ ೧೨ ಸಭೆಗಳಲ್ಲಿ ೧೧ ಬಾರಿ ಬಡ್ಡಿದರವನ್ನು ಏರಿಸಿದೆ. ಅಮೆರಿಕ,
ಯುರೋಪ್, ಇಂಗ್ಲೆಂಡ್ ದೇಶಗಳು ಹಣದುಬ್ಬರದ ವಿರುದ್ಧ ಸಮರ ಸಾರಿವೆ.

ಒಂದು ದೇಶ ಬಡ್ಡಿದರವನ್ನು ಹೆಚ್ಚಿಸಿದರೆ ಮತ್ತೊಂದು ದೇಶಕ್ಕೆ ಬಡ್ಡಿದರ ಹೆಚ್ಚಿಸುವುದು ಅನಿವಾರ್ಯ ವಾಗುತ್ತದೆ. ಇಲ್ಲದೆ ಹೋದರೆ, ಅಲ್ಲಿಂದ ಬಂಡವಾಳವೂ ಹೆಚ್ಚಿನ ಬಡ್ಡಿ ಸಿಗುವ ಕಡೆಗೆ ಹರಿಯ ತೊಡ ಗುತ್ತದೆ. ಆ ಆತಂಕದಿಂದಲೇ ಒಂದೆಡೆ ಬಡ್ಡಿದರ ಹೆಚ್ಚಿದ ಕೂಡಲೇ ಉಳಿದ ಕೇಂದ್ರ ಬ್ಯಾಂಕುಗಳೂ ಬಡ್ಡಿ ದರವನ್ನು ಹೆಚ್ಚಿಸುತ್ತಾ ಹೋಗುತ್ತವೆ. ವಿಶ್ವದ ಬೃಹತ್ ಆರ್ಥಿಕತೆ ಯನ್ನು ಹೊಂದಿರುವ ಅಮೆರಿಕದ ನಿರ್ಧಾರಗಳು ಭಾರತ ಸೇರಿದಂತೆ ಜಾಗತಿಕ ಮಟ್ಟದಲ್ಲಿ ಪ್ರಭಾವ ಬೀರಬಲ್ಲವು.

ಅಮೆರಿಕದ ಕೇಂದ್ರ ಬ್ಯಾಂಕ್ ಮುಖ್ಯಸ್ಥರು, ತಮ್ಮ ಹಣದುಬ್ಬರ ದರವು ತನ್ನ ಪೂರ್ವನಿರ್ಬಂಽತ ಶೇ.೨ರ ಗುರಿಯೊಳಗೆ ಬರುವವರೆಗೆ ಬಡ್ಡಿದರವನ್ನು ಮುಂದುವರಿಸುತ್ತೇವೆ ಎನ್ನುತ್ತಾರೆ. ಕಳೆದ ವರ್ಷ ಶೇ.೯.೦೬ರಷ್ಟಿದ್ದ ಹಣದುಬ್ಬರ ಶೇ.೩ಕ್ಕೆ ಇಳಿದಿದೆ. ಕೋವಿಡ್ ಮಹಾಮಾರಿ ಮತ್ತು ಉಕ್ರೇನ್ ಯುದ್ಧದ
ಕಾರಣದಿಂದಾಗಿ, ೨೦೨೧ರ ಮಧ್ಯಭಾಗದಲ್ಲಿ ಆಹಾರ ಧಾನ್ಯಗಳು, ಇಂಧನಗಳ ಬೆಲೆ ಜಾಗತಿಕವಾಗಿ ಹೆಚ್ಚಲು ಪ್ರಾರಂಭವಾಗಿತ್ತು. ೨೦೨೨ರಿಂದ ಅದರ ಪ್ರಭಾವ ಹೆಚ್ಚಾಯಿತು. ಆಗ ಇಂಧನ, ಗೋಽ, ಗೊಬ್ಬರ ಇತ್ಯಾದಿ ಪದಾರ್ಥಗಳ ಪೂರೈಕೆಯ ಸಮಸ್ಯೆಯಿಂದ ಉಳಿದ ಸರಕು ಹಾಗೂ ಸೇವೆಗಳ ಬೆಲೆ ಹೆಚ್ಚಾಗಿ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಿತು.

? ದೇಶದಲ್ಲಿನ ಪ್ರಸಕ್ತ ಸನ್ನಿವೇಶ: ಭಾರತೀಯ ರಿಸರ್ವ್ ಬ್ಯಾಂಕ್‌ನ (ಆರ್‌ಬಿಐ) ಎಂಪಿಸಿ ಸಭೆ ಆಗಸ್ಟ್ ೮ರಿಂದ ೧೦ರ ವರೆಗೆ ನಡೆದು, ೧೦ರಂದು ರೆಪೋ ದರವನ್ನು ಘೋಷಿಸಲಿದೆ. ಈ ಬಾರಿ ರೆಪೋ ದರ ಕಡಿತದ ಹೊಸ ಆಸೆಯಿತ್ತು. ಜೂನ್ ತಿಂಗಳಲ್ಲಿ ಹಣದುಬ್ಬರ ಶೇ.೪.೮೧ಕ್ಕೆ ಏರಿದೆ. ಒಂದೇ ತಿಂಗಳಲ್ಲಿ ಆಹಾರ ಬೆಲೆಗಳಲ್ಲಿ ಶೇ.೧.೫೩ರಷ್ಟು,ತರಕಾರಿ ಬೆಲೆ ಶೇ.೧೨.೨ರಷ್ಟು ಏರಿಕೆಯಾಗಿರುವುದು ಪ್ರತಿ ಕೂಲ ಹವಾಮಾನ ವೈಪರೀತ್ಯದ ಪರಿಣಾಮ. ಇದೀಗ ಹಣದುಬ್ಬರದ ಒತ್ತಡ ಹೆಚ್ಚಾಗಿದೆಯಲ್ಲದೆ ಮುಂದಿನ ೩ ತಿಂಗಳಲ್ಲಿ ಶೇ.೬ರ ಆಸುಪಾಸು ತಲುಪುವ ಸಾಧ್ಯತೆಗಳಿವೆ.

ಇದೀಗ ಜುಲೈನಲ್ಲಿ ಹಣದುಬ್ಬರ ಇನ್ನೂ ಹೆಚ್ಚಾಗಬಹುದೆಂಬ ಆತಂಕ ಹಾಗೂ ಪ್ರತಿಕೂಲ ಜಾಗತಿಕ ಬೆಳವಣಿಗೆಗಳು ಆರ್‌ಬಿಐಗೆ ಸವಾಲಾಗಿ ಪರಿಣಮಿಸಿವೆ. ಪೆಸಿಫಿಕ್ ಪ್ರದೇಶದಲ್ಲಿ ಹವಾಮಾನ ವೈಪರೀತ್ಯ ಹೆಚ್ಚಲಿರುವ ಮುನ್ಸೂಚನೆ ಯಿಂದ ಕಡಿಮೆ ಮಳೆಯ ಬೆಳೆಗಳಾದ ದ್ವಿದಳ ಧಾನ್ಯಗಳ ಇಳುವರಿ ಕುಸಿಯಲಿದೆ ಯಾದ್ದರಿಂದ, ಹಣದುಬ್ಬರವನ್ನು ನಿಯಂತ್ರಿಸಲೇಬೇಕಾದ ಅನಿವಾರ್ಯತೆ ಮತ್ತು ಹೊಣೆ ಗಾರಿಕೆಯ ಹಿನ್ನೆಲೆಯಲ್ಲಿ ಆರ್‌ಬಿಐ ರೆಪೋ ದರವನ್ನು ಯಥಾಸ್ಥಿತಿಯಲ್ಲಿ ಮುಂದುವರಿಸುವಂತೆ ಕಾಣುತ್ತಿದೆ.

ಕೇಂದ್ರ ಮತ್ತು ರಾಜ್ಯ ಸರಕಾರಗಳೆರಡೂ ಮೊದಲಿನಿಂದಲೂ ಅಗತ್ಯ ವಸ್ತುಗಳ ಬೆಲೆ ನಿಯಂತ್ರಣದ ಬಗ್ಗೆ ಗಂಭೀರವಾದ ಕ್ರಮ ಕೈಗೊಳ್ಳಲು ಹೋಗಿಲ್ಲ. ಅನಗತ್ಯ
ದಾಸ್ತಾನನ್ನು ತಡೆಗಟ್ಟಲು ಇನ್ನೂ ಸಾಧ್ಯವಾಗಿಲ್ಲ. ದೇಶದಲ್ಲಿ ಪ್ರತಿ ಪ್ರಜೆಗೆ, ಅಕ್ಕಿಯಿಂದ ಹಿಡಿದು ಔಷಧದವರೆಗಿನ ೨೨ ಅಗತ್ಯ ವಸ್ತುಗಳ ಪಟ್ಟಿಯಿದೆ. ಅಗತ್ಯ ವಸ್ತುಗಳ ಬೆಲೆ ನಿಯಂತ್ರಣಕ್ಕೆ ಸರಿಯಾದ ವ್ಯವಸ್ಥೆಯಿಲ್ಲ. ಕೃಷಿ ಉತ್ಪನ್ನಗಳ ದಾಸ್ತಾನು ಬಹಳ ಕಷ್ಟ ಮತ್ತು ಅವು ಹೆಚ್ಚು ದಿನ ಉಳಿಯುವುದಿಲ್ಲ. ಅಗತ್ಯ ವಸ್ತುಗಳ ಮಹತ್ವವೆಂದರೆ, ಅವನ್ನು ಉತ್ಪಾದಿಸುವವನಿಗೂ ಖರೀದಿಸುವವನಿಗೂ ನಷ್ಟ ವಾಗಬಾರದು. ಕೇಂದ್ರ ಸರಕಾರವು ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ಘೋಷಿ ಸುವ ಮೂಲಕ ಬೆಲೆ ಸ್ಥಿರೀಕರಣಕ್ಕೆ ಪ್ರತ್ಯೇಕ ನಿಽಯನ್ನು ಹೊಂದಿದೆ.

ಕೇಂದ್ರ ಆಹಾರ ನಿಗಮವು ಸುಗ್ಗಿಯ ಕಾಲದಲ್ಲಿ ಆಹಾರ ಧಾನ್ಯಗಳನ್ನು ಸಂಗ್ರಹಿಸಿ, ಸಂರಕ್ಷಿಸಿ ಅಭಾವ ಕಾಲದಲ್ಲಿ ವಿಸ್ತರಿಸಬೇಕು. ರಾಜ್ಯ ಸರಕಾರಗಳು ಗೋದಾಮುಗಳಲ್ಲಿ ಸಾಮರ್ಥ್ಯವನ್ನು ಹೆಚ್ಚಿಸಿಕೊಂಡರೆ, ಕೇಂದ್ರ ಮತ್ತು ರಾಜ್ಯ ಸರಕಾರಗಳು ಪರಸ್ಪರ ಹೊಂದಾಣಿಕೆಯಿಂದ ಕೆಲಸ ಮಾಡಿದರೆ, ಅಗತ್ಯ
ವಸ್ತುಗಳು ಜನರಿಗೆ ಕಡಿಮೆ ಬೆಲೆಯಲ್ಲಿ ಲಭಿಸುವಂತೆ ನೋಡಿಕೊಳ್ಳಬಹುದು.