ಗಂಟಾಘೋಷ
ಗುರುರಾಜ್ ಗಂಟಿಹೊಳೆ
ಕೇಂದ್ರ ಸರಕಾರವು ಈ ಬಾರಿಯ ಬಜೆಟ್‌ನಲ್ಲಿ ಯುವಕರಿಗೆ ದೊಡ್ಡ ಉಡುಗೊರೆ ನೀಡಿದೆ. ಸ್ಕಿಲ್ ಇಂಡಿಯಾ ಯೋಜನೆಯಡಿ ೧೨ ಕೋಟಿಗೂ ಅಧಿಕ ಯುವಕ ರಿಗೆ ತರಬೇತಿಗೆ ಅವಕಾಶ ಕಲ್ಪಿಸಲಾಗಿದ್ದು, ಅವರು ‘ಮುದ್ರಾ’, ‘ಉದ್ಯಮ್’ ಯೋಜನೆಗಳಡಿ ಪ್ರೋತ್ಸಾಹಿಕ ಸಾಲದ ನೆರವು ಪಡೆದು ಸ್ವಾವಲಂಬಿ ಬದುಕು ಕಟ್ಟಿಕೊಳ್ಳುವಲ್ಲಿ ಸಫಲರಾಗಬಹುದಾಗಿದೆ.
ಒಂದೊಮ್ಮೆ ‘ಬಜೆಟ್’ ಅಂತ ಹೇಳಿದರೆ, ‘ರಾಜಕೀಯದ ಗಿಮಿಕ್, ಪ್ರಚಾರದ ಹಂಗು, ಅಧಿಕಾರ ಉಳಿಸಿಕೊಳ್ಳುವ ಆತಂಕ, ತಮ್ಮ ನಾಯಕರನ್ನು ಮೆಚ್ಚಿಸುವ ಓಲೈಸುವ ಕಸರತ್ತು’ ಎಂದೆಲ್ಲ ಹೇಳುವ ದಿನಗಳಿದ್ದವು. ಆರ್ಥಿಕ ಲೆಕ್ಕಾಚಾರ, ದೇಶದ ಮತ್ತು ಯುವಜನತೆಯ ಭವಿಷ್ಯ, ಅಂತಾರಾಷ್ಟ್ರೀಯ ಆರ್ಥಿಕತೆಯ ಬೆಳವಣಿಗೆಯ ಮೇಲೆ ದೂರದೃಷ್ಟಿ ಇಟ್ಟುಕೊಂಡು ಮಂಡಿಸುವ ಬಜೆಟ್ ಮೇಲ್ನೋಟಕ್ಕೆ ಸಪ್ಪೆಯಾಗಿ ಕಾಣಿಸಬಹುದು. ಆದರೆ, ಅದು ದೇಶದ ಹಿತದೃಷ್ಟಿಯನ್ನು ಒಳಗೊಂಡಿದ್ದು ಒಂದು ತೂಕ ಹೆಚ್ಚೇ ಇರುತ್ತದೆ ಎಂಬುದನ್ನು ಜನಸಾಮಾನ್ಯರೂ ಇಂದು ಮನಗಾಣಬಹುದಾಗಿದೆ.
ಮೊನ್ನಿನ ಮಧ್ಯಂತರ ಬಜೆಟ್ ಮಂಡನೆಯ ಮೂಲಕ, ಸತತ ೬ನೇ ಬಾರಿಗೆ ಬಜೆಟ್ ಮಂಡಿಸಿದ ವಿತ್ತ ಸಚಿವೆ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ ನಿರ್ಮಲಾ ಸೀತಾರಾಮನ್ ಅವರು. ಹಾಗೆಯೇ ಇದು, ನರೇಂದ್ರ ಮೋದಿ ಸರಕಾರದ ಎರಡನೇ ಅವಽಯ ಕೊನೆಯ ಮಧ್ಯಂತರ (ಚುನಾವಣಾ ಪೂರ್ವ) ಆಯವ್ಯಯ ಮಂಡನೆ ಕೂಡ ಆಗಿದೆ. ಈ ದೇಶದಲ್ಲಿ ಪ್ರತಿಸಲ ಚುನಾವಣೆಗೂ ಮುನ್ನ ಮಂಡಿಸುವ ಬಜೆಟ್‌ನಲ್ಲಿ, ಜನಸಾಮಾನ್ಯರ ಮೂಗಿಗೆ ತುಪ್ಪ ಹಚ್ಚುವ ಕೆಲಸವನ್ನು ಹಿಂದಿನ ಸರಕಾರಗಳು ತಪ್ಪದೇ ಮಾಡುತ್ತಿದ್ದವು. ಜನಪ್ರಿಯವೆನಿಸುವ ಮತ್ತು ದೇಶದ ಆರ್ಥಿಕತೆಗೆ ಹಿತಕರವಲ್ಲದ ಅನಗತ್ಯ ಘೋಷಣೆಗಳನ್ನು ಮಾಡುವ ಮೂಲಕ, ಆಡಳಿತಯಂತ್ರವು ಭ್ರಷ್ಟಾಚಾರ ಎಸಗಲು ಅವು ಅನುವುಮಾಡಿಕೊಡುತ್ತಿದ್ದವು. ಆ ಬಾಬತ್ತಿಗೆ ಇಂಥ ಬಜೆಟ್ ಬಹುದೊಡ್ಡ ರಹದಾರಿ ಕೂಡ
ಆಗಿತ್ತು.
ಆದರೆ ನಮ್ಮ ವಿತ್ತಸಚಿವೆ ಇಂಥದೊಂದು ಸಂಪ್ರದಾಯವನ್ನು ಮುರಿದಿದ್ದಾರೆ ಎನ್ನಬಹುದು. ಮೊದಲನೆಯದಾಗಿ, ತೆರಿಗೆದಾರರಿಗೆ ಯಾವ ಭಾರವನ್ನೂ ಹಾಕದೆ,
ಹಿಂದಿನ ಅವಽಯಲ್ಲಿನ ೭ ಲಕ್ಷ ರು. ಮಿತಿಯ ತೆರಿಗೆ ವಿನಾಯಿತಿ ನೀತಿಯನ್ನೇ ಈ ಸಲವೂ ಮುಂದುವರಿಸುವ ಮೂಲಕ ತಮ್ಮದು ಬಡವರು, ಮಹಿಳೆಯರು,
ಯುವಕರು ಮತ್ತು ರೈತರನ್ನು ಗಮನದಲ್ಲಿಟ್ಟುಕೊಂಡು ಆಡಳಿತ ನಡೆಸುತ್ತಿರುವ ಸರಕಾರ ಎಂದು ಹೇಳಲು ಯತ್ನಿಸಿದ್ದಾರೆ.
ವಿತ್ತ ಸಚಿವೆ ತಮ್ಮ ಆಯವ್ಯಯ ಮಂಡನೆಯ ಸಂದರ್ಭದಲ್ಲಿ ಜಿಡಿಪಿಗೆ ‘ಬೆಳವಣಿಗೆ-ಅಭಿವೃದ್ಧಿ-ಪ್ರಗತಿ’ (ಎಎಟಡಿಠಿe, ಈ ಈಛಿqಛ್ಝಿಟmಞಛ್ಞಿಠಿ, PPಟಜ್ಟಛಿoo) ಎಂಬ ಹೊಸ ಪರಿಭಾಷೆ ನೀಡಿದರು; ಭ್ರಷ್ಟಾಚಾರ-ಮುಕ್ತ ಆಡಳಿತ ನೀಡಿದ ಹೆಮ್ಮೆ ನಮ್ಮ ಸರಕಾರದ್ದು ಎನ್ನುತ್ತ, ಜಾಗತಿಕವಾಗಿ ಆರ್ಥಿಕ ಸಂಕಷ್ಟಗಳಿದ್ದರೂ ಭಾರತದ ಆರ್ಥಿಕ ಸ್ಥಿತಿಯು ಉತ್ತಮವಾಗುತ್ತ ಸಾಗುತ್ತಿರುವುದಕ್ಕೆ ಮೋದಿ ಸರಕಾರದ ‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್’ ಎಂಬ ಧ್ಯೇಯವೇ ಕಾರಣ ಎಂಬುದನ್ನು ತಮ್ಮ ಮಾತಿನಲ್ಲಿ ಸಚಿವೆ ಖಚಿತಪಡಿಸಿದರು ಹಾಗೂ ೨೦೪೭ಕ್ಕೆ ಭಾರತವು ಪೂರ್ಣ ಪ್ರಮಾಣದಲ್ಲಿ ವಿಕಸಿತ ದೇಶವಾಗುವ ಭರವಸೆಯನ್ನು ಈ
ಮೂಲಕ ವ್ಯಕ್ತಪಡಿಸಿದರು ಕೂಡ.
ಕೇಂದ್ರ ಸರಕಾರವು ಈ ಬಾರಿಯ ಬಜೆಟ್‌ನಲ್ಲಿ ಯುವಕರಿಗೆ ಬಹುದೊಡ್ಡ ಉಡುಗೊರೆಯನ್ನೇ ನೀಡಿದೆ ಎನ್ನಬಹುದಾಗಿದೆ. ಸ್ಕಿಲ್ ಇಂಡಿಯಾ ಯೋಜನೆಯಡಿ
೧೨ ಕೋಟಿಗೂ ಅಽಕ ಯುವಕರಿಗೆ ತರಬೇತಿಗೆ ಅವಕಾಶ ಕಲ್ಪಿಸಲಾಗಿದ್ದು, ಅವರು ‘ಮುದ್ರಾ’, ‘ಉದ್ಯಮ್’ ಯೋಜನೆಗಳಡಿ ವಿವಿಧ ಹಂತದ ಪ್ರೋತ್ಸಾಹಿಕ ಸಾಲದ ನೆರವು ಪಡೆದು ಸ್ವಾವಲಂಬಿ ಬದುಕು ಕಟ್ಟಿಕೊಳ್ಳುವಲ್ಲಿ ಮತ್ತು ಇತರರಿಗೂ ಉದ್ಯೋಗ ನೀಡುವಲ್ಲಿ ಸಫಲರಾಗಬಹುದಾಗಿದೆ. ಇದರ ಮುಂದಿನ ಹಂತ ಎಂಬಂತೆ, ತಂತ್ರಜ್ಞಾನ ಕ್ಷೇತ್ರದಲ್ಲಿ ಆಸಕ್ತಿಯುಳ್ಳ ಯುವಜನರಿಗೆ ಶೂನ್ಯ ಬಡ್ಡಿದರದಲ್ಲಿ ಹಣಕಾಸಿನ ನೆರವು ನೀಡಲು ೧ ಲಕ್ಷ ಕೋಟಿ ರು. ನಿಧಿ ಸ್ಥಾಪನೆಗೆ ಅನುಮತಿಸಲಾಗಿದೆ. ಈ ನಿಟ್ಟಿನಲ್ಲಿ ಕುಶಲಕರ್ಮಿಗಳನ್ನು ಗುರಿಯಾಗಿಸಿಕೊಂಡಿರುವ ‘ಪಿಎಂ ವಿಶ್ವಕರ್ಮ’ ಯೋಜನೆ ಕೂಡ ಈಗಾಗಲೇ ಜಾರಿಯಲ್ಲಿದೆ.
ಇದರೊಟ್ಟಿಗೆ, ಯುವಕರ ಉದ್ಯೋಗದ ವಿಚಾರದಲ್ಲಿ ಗಮನವಿರಿಸಿ, ಲಕ್ಷದ್ವೀಪವನ್ನು ಅಂತಾರಾಷ್ಟ್ರೀಯ ಪ್ರವಾಸೋದ್ಯಮ ತಾಣವಾಗಿಸುವ ಯೋಜನೆ ಕೂಡ ಶೀಘ್ರದಲ್ಲೇ ಆರಂಭವಾಗಲಿದೆ. ಇವೆಲ್ಲದರೊಟ್ಟಿಗೆ, ಹಿಂದೆಯೇ ಹೇಳಿದಂತೆ, ಮೀನುಗಾರಿಕೆಗೆಂದು ಈ ಬಾರಿ ಪ್ರತ್ಯೇಕ ಮಂತ್ರಾಲಯವನ್ನು ಸ್ಥಾಪಿಸಲಾಗಿದ್ದು, ಈ ಮೂಲಕ ಮತ್ಸ್ಯಸಂಪದ ಯೋಜನೆಯಡಿಯಲ್ಲಿ ೫೫ ಲಕ್ಷದಷ್ಟು ಹೊಸ ಉದ್ಯೋಗಗಳ ಸೃಷ್ಟಿಗೆ ಆದ್ಯತೆ ನೀಡಲಾಗಿದೆ. ಜತೆಗೆ, ಇಲೆಕ್ಟ್ರಿಕ್ ವಾಹನಗಳ ಉತ್ಪಾದನೆ, ಚಾರ್ಜಿಂಗ್ ಸ್ಟೇಷನ್‌ಗಳ ಹೆಚ್ಚಳಕ್ಕಿರುವ ಅನುಮತಿ ವಿಧಾನವನ್ನು ಸರಳಗೊಳಿಸಲಾಗಿದೆ.
೪೦ ಸಾವಿರ ರೈಲು ಬೋಗಿಗಳನ್ನು ವಂದೇಭಾರತ್ ಬೋಗಿಗಳಾಗಿ ಪರಿವರ್ತಿಸುವ ಕಾರ್ಯ ಚಾಲ್ತಿಯಲ್ಲಿದೆ. ಉಡಾನ್ ಯೋಜನೆಯಡಿ ೫೧೭ ಹೊಸ ಮಾರ್ಗಗಳನ್ನು ಸಣ್ಣ ಸಣ್ಣ ನಗರಗಳಿಗೂ ಒದಗಿಸಲು ಯೋಜಿಸಲಾಗಿದೆ. ಈ ಮೂಲಕ ಹಾಗೂ ಇತರೆ ಯೋಜನೆಗಳ ನೆರವಿನಿಂದ ಯುವಜನರಿಗೆ ಉದ್ಯೋಗಾ ವಕಾಶ ಮತ್ತು ಸ್ವಯಂ ಉದ್ಯೋಗದ ಸಾಧ್ಯತೆಗಳು ತೆರೆದುಕೊಳ್ಳಲಿವೆ ಎಂಬುದು ಗಮನಾರ್ಹ. ಇನ್ನು, ಮಹಿಳೆಯರ ವಿಷಯದಲ್ಲಿ ಗಮನಿಸುವುದಾದರೆ, ಈ ಹಿಂದೆ ಘೋಷಿಸಲಾಗಿದ್ದ ‘ಆರೋಗ್ಯ’ ಯೋಜನೆಯನ್ನು ಈ ಬಾರಿ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೂ ವಿಸ್ತರಿಸಲಾಗಿದೆ. ಇದರಿಂದಾಗಿ ದೇಶದ ಒಂದು ಕೋಟಿ ಮಹಿಳೆಯರು ವಿವಿಧ ಯೋಜನೆಗಳನ್ನು ಅಳವಡಿಸಿಕೊಂಡು ಬಡತನದಿಂದ ಹೊರಬಂದು ಸ್ವಾವಲಂಬಿ ಬದುಕನ್ನು ಕಟ್ಟಿಕೊಳ್ಳುವುದರ ಜತೆಗೆ ಆರ್ಥಿಕವಾಗಿ ‘ಲಕ್ಷಾಧಿಪತಿ ಸಹೋದರಿ’ ಆಗಲಿದ್ದಾರೆ.
೯ರಿಂದ ೧೪ ವರ್ಷದವರೆಗಿನ ಹೆಣ್ಣು ಮಕ್ಕಳಿಗೆ ಉಚಿತವಾಗಿ ಗರ್ಭಕೋಶದ ಕ್ಯಾನ್ಸರ್ ನಿರೋಧಕ ಲಸಿಕೆ ನೀಡಲು ಸರಕಾರ ಯೋಜನೆ ರೂಪಿಸಿದೆ. ಬಡ ಮಹಿಳೆಯರಿಗೆ ‘ಪಿಎಂ ಆವಾಸ್’ ಯೋಜನೆಯಡಿಯಲ್ಲಿ ಮನೆ ನಿರ್ಮಾಣಕ್ಕೆಂದು ಸಹಾಯಧನವು ಈಗಾಗಲೇ ನೇರವಾಗಿ ಅವರ ಖಾತೆಗೆ ವರ್ಗಾವಣೆ ಯಾಗುತ್ತಿದೆ. ಇದರ ಭಾಗವಾಗಿ, ಮುಂದಿನ ೫ ವರ್ಷಗಳಲ್ಲಿ ೩ ಕೋಟಿ ಹೊಸ ಮನೆಗಳನ್ನು ನಿರ್ಮಿಸುವ ಗುರಿ ಹೊಂದಲಾಗಿದೆ. ಈಗ, ಬಡವರ ಕಡೆಗೆ ಇನ್ನೂ ಒಂದು ಹೆಜ್ಜೆ ಎಂಬಂತೆ, ಮೊದಲ ಹಂತದಲ್ಲಿ ಒಂದು ಕೋಟಿ ಮನೆಗಳಿಗೆ ತಿಂಗಳಿಗೆ ೩೦೦ ಯುನಿಟ್‌ವರೆಗೆ ಉಚಿತವಾಗಿ ಸೌರ ವಿದ್ಯುತ್ ನೀಡಲು ‘ಸೂರ್ಯೋದಯ’ ಯೋಜನೆ ರೂಪಿಸಲಾಗಿದೆ.
ಈ ಯೋಜನೆಯಲ್ಲಿ ಹೆಚ್ಚುವರಿಯಾಗಿರುವ ವಿದ್ಯುತ್ ಉತ್ಪಾದನೆಯನ್ನು ಸರಕಾರಕ್ಕೆ ಮಾರುವ ಮೂಲಕ ತಿಂಗಳಿಗೆ ೧೦ರಿಂದ ೧೫ ಸಾವಿರ ರುಪಾಯಿಯಷ್ಟು
ಹಣವನ್ನು ಸಂಪಾದಿಸಲೂಬಹುದು. ಕೋವಿಡ್ ಸಂಕಷ್ಟ ಎದುರಾದ ಸಮಯದಲ್ಲಿ ಕಲ್ಪಿಸಲಾಗಿದ್ದ ಉಚಿತ ಪಡಿತರ ವಿತರಣೆ ಯೋಜನೆಯನ್ನು ಮುಂದುವರಿಸುವ
ವಿಚಾರವನ್ನು ಪರಿಗಣಿಸಲಾಗಿದ್ದು, ೮೦ ಕೋಟಿ ಜನರಿಗೆ ಉಚಿತ ಆಹಾರಧಾನ್ಯ ಒದಗಿಸಲು ಈ ಬಜೆಟ್‌ನಲ್ಲಿ ಅವಕಾಶ ಕಲ್ಪಿಸಲಾಗಿದೆ. ‘ವಿಕಸಿತ ಭಾರತ ೨೦೪೭’ ಎಂಬ ಮಹತ್ತರ ಧ್ಯೇಯದೊಂದಿಗೆ ಮುಂದಡಿಯಿಡುತ್ತಿರುವ ಕೇಂದ್ರ ಸರಕಾರವು, ‘ಆಧುನಿಕ ಮೂಲಸೌಕರ್ಯಗಳು ಮತ್ತು ಎಲ್ಲರಿಗೂ ಸಮಾನ ಅವಕಾಶಗಳ ಜತೆಗೆ ಪ್ರಕೃತಿಯೊಂದಿಗಿನ ಸಾಮರಸ್ಯ ಭಾರತದ ಗುರಿ’ ಎಂಬ ಮಂತ್ರದೊಂದಿಗೆ ಒಂದಷ್ಟು ಉಪಕ್ರಮಗಳಿಗೆ ಮುಂದಾಗಿದೆ.
ಅವೆಂದರೆ: ಜನಕೇಂದ್ರಿತ ಅಭಿವೃದ್ಧಿ ಯೋಜನೆಗಳಾದ ಫಿಜಿಕಲ್ -ಡಿಜಿಟಲ್-ಸೋಷಿಯಲ್ ಇನ್ ಫ್ರಾಸ್ಟ್ರಕ್ಚರ್; ಡಿಜಿಟಲ್ ಪಬ್ಲಿಕ್ ಇನ್ ಫ್ರಾಸ್ಟ್ರಕ್ಚರ್ (ಅವಕಾಶ ಮತ್ತು ಹಣಕಾಸಿನ ನೆರವು ಸಮೇತ); ಜಿಎಸ್‌ಟಿಯನ್ನು ಸುಧಾರಿಸುವ ಮೂಲಕ ಬ್ಯಾಂಕಿಂಗ್ ವ್ಯವಸ್ಥೆಯ ಸರಳೀಕರಣ. ಎಲ್ಲರಿಗೂ ಬ್ಯಾಂಕ್ ಎಂಬ ಧ್ಯೇಯ;
ಜಾಗತಿಕ ಮಟ್ಟದಲ್ಲಿ ಹಣಕಾಸು ವರ್ಗಾವಣೆ ತಂತ್ರದ ಸಮರ್ಪಕ ಅಳವಡಿಕೆ; ಸಂಭಾವ್ಯ ಹಣದುಬ್ಬರವನ್ನು ತಡೆಯಲು ಪೂರ್ವಭಾವಿ ವ್ಯವಸ್ಥೆ ಸ್ಥಾಪನೆ ಮತ್ತು ನಿರ್ವಹಣೆ. ಇದರೊಟ್ಟಿಗೆ, ಜನೋಪಕಾರಿ ಆಡಳಿತವನ್ನು ನೀಡಬೇಕಾದರೆ ಕೆಲವೊಂದು ವಿಚಾರಗಳನ್ನು ವಿಶೇಷ ಯೋಜನೆಗಳಾಗಿ ಪರಿಗಣಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ಮೋದಿ ಸರಕಾರವು ಪ್ರಮುಖವಾಗಿ ‘ಬಡವರ ಕಲ್ಯಾಣ, ದೇಶದ ಕಲ್ಯಾಣ’ ಮತ್ತು ‘ಯುವಜನರ ಸಬಲೀಕರಣ’ ಎಂಬ ಎರಡು ಧ್ಯೇಯಗಳನ್ನು ಹಮ್ಮಿಕೊಂಡಿದೆ. ಜತೆಗೆ ‘ಅಮೃತಕಾಲ ಘಟ್ಟ’ದ ವಿಶೇಷವಾಗಿ ಸುಸ್ಥಿರ ಅಭಿವೃದ್ಧಿ, ಮೂಲಸೌಕರ್ಯಗಳು ಮತ್ತು ಹೂಡಿಕೆ, ಎಲ್ಲರನ್ನೂ ಒಳಗೊಂಡ ಅಭಿವೃದ್ಧಿ, ಆರೋಗ್ಯ ಕ್ಷೇತ್ರ, ಕೃಷಿ ಮತ್ತು ಸಂಸ್ಕರಣೆ ಎಂಬ ೫ ಆದ್ಯತಾ ಯೋಜನೆಗಳನ್ನು ಹಾಕಿಕೊಂಡಿದೆ.