ನಾಡಿಮಿಡಿತ
ವಸಂತ ನಾಡಿಗೇರ
vasanth.nadiger@gmail.com
ರಾಕೇಶ್ ಜುಂಜುನ್‌ವಾಲಾ. ಈ ಬಾರಿ ಇವರ ಕುರಿತು ಬರೆಯಬೇಕೆನಿಸಿದ್ದಕ್ಕೆ ಕಾರಣವಿದೆ. ಕಳೆದ ವಾರ ಮಾಧ್ಯಮ ಗಳಲ್ಲಿ ಅವರದೇ ದೊಡ್ಡ ಸುದ್ದಿ. ಎಲ್ಲರೂ ಹೌದಾ! ಎಂದು ಕೇಳುವಂಥ, ಹುಬ್ಬೇರಿಸುವಂಥ ಸುದ್ದಿ ಅದು. ರಾಕೇಶ್ ಜುಂಜುನ್‌ವಾಲಾ ಆಸ್ತಿ ಕೇವಲ ಹತ್ತು ನಿಮಿಷಗಳಲ್ಲಿ 850 ಕೋಟಿ ರು. ಏರಿಕೆ ಯಾಗಿತ್ತು. ಇದನ್ನು ಕೇಳಿದವರಿಗೆ ಅಳ್ಳೆದೆ ಇದ್ದರೆ ಹೃದಯಾಘಾತವಾಗುವ ಸಂಭವ.
ಏಕೆಂದರೆ ನೂರು, ಸಾವಿರ, ಲಕ್ಷವಲ್ಲ; ಕೋಟಿಯೂ ಅಲ್ಲ. ಬರೋಬ್ಬರಿ 850 ಕೋಟಿ ಎಂದರೆ ತಮಾಷೀನಾ ? ಇಷ್ಟಾಗಿ ಜುಂಜುನ್‌ವಾಲಾ ಸಂಪತ್ತು ಏಕ್‌ದಂ ಇಷ್ಟು ಹೆಚ್ಚಾಗಲು ಏನುಕಾರಣ? ಅವರ ಬಳಿ ಇದ್ದ ಟೈಟನ್ ಷೇರು. ಏಕೆಂದರೆ ಆ ಕಂಪನಿಯ ಷೇರು ಮೌಲ್ಯ 17, 770 ಕೋಟಿ ರು. ಹೆಚ್ಚಾಯಿತು. ಅಂದರೆ ಷೇರು ಬೆಲೆ ಒಂದು ಟ್ರೇಡಿಂಗ್‌ನಲ್ಲಿ 2347 ಕ್ಕೆ ಜಿಗಿಯಿತು. ಇದು ಶೇ. 9.32 ರ ವೃದ್ಧಿ. ವಾಚ್ ಹಾಗೂ ತನಿಷ್ಕ್ ಆಭರಣ ಬ್ರಾಂಡ್‌ಗಳನ್ನು ಟೈಟನ್ ಹೊಂದಿದೆ. ಜುಂಜುನ್‌ವಾಲಾ ಹಾಗೂ ಅವರ ಪತ್ನಿ ಟೈಟನ್‌ನಲ್ಲಿ ಶೇ. 4.81 ರಷ್ಟು ಷೇರುಗಳನ್ನು ಹೊಂದಿದ್ದಾರೆ.
ಕಂಪನಿಯ ಮೌಲ್ಯ ಹಾಗೂ ಷೇರು ಬೆಲೆ ಹೆಚ್ಚಾದಾಗ ಜುಂಜುನ್‌ವಾಲಾ ಅವರ ಸಂಪತ್ತಿನ ಮೌಲ್ಯವೂ ಸಹಜವಾಗಿ ಹೆಚ್ಚಾಯಿತು. ಇನ್ನೂ ಒಂದೆರಡು ಕಾರಣ ಕ್ಕಾಗಿ ಜುಂಜುನ್‌ವಾಲಾ ಸುದ್ದಿಯಲ್ಲಿದ್ದರು. ಮೊದಲ ನೆಯ ಸುದ್ದಿ ಎಂದರೆ ಅವರು ಭಾರತೀಯ ವಿಮಾನಯಾನ ಕ್ಷೇತ್ರ ಪ್ರವೇಶಿಸುತ್ತಿರುವುದು. ಹೌದು. ಆಕಾಶ ಏರ್‌ಲೈನ್ಸ್ ಎಂದು ಅದರ ಹೆಸರು. ಇದಕ್ಕೆ ನಾಗರಿಕ ವಿಮಾನಯಾನ ಸಚಿವಾಲಯದ ಹಸಿರು ನಿಶಾನೆ ದೊರೆತಿದೆ. ಮುಂದಿನ ವರ್ಷ ಇದು ಟೇಕ್ ಆಫ್ ಆಗಲಿದೆ. ಎಸ್‌ಎನ್‌ವಿ ಏವಿಯೇಶನ್ ಸಂಸ್ಥೆ ಆಕಾಶ ಏರ್ ಲೈನ್ಸ್ ಅನ್ನು ನಡೆಸುತ್ತದೆ.
ವಿಮಾನಯಾನ ಸಂಸ್ಥೆ ನಡೆಸುವುದು ಸುಲಭವೇನೂ ಅಲ್ಲ. ಈಗಾಗಲೇ ಎಷ್ಟೋ ಸಂಸ್ಥೆಗಳು ಶುರುವಾಗಿ, ಬಂದ್ ಆಗಿವೆ. ಇರುವ ಏರ್‌ಲೈನ್ಸ್‌ಗಳಲ್ಲಿ ಬಹುತೇಕ ನಷ್ಟ ಸೋಸುತ್ತಿವೆ. ಆದರೂ ಮತ್ಯಾಕೆ ಹುಳಗಳು ದೀಪಕ್ಕೆ ಬಂದು ಬೀಳುವಂತೆ ಇಂಥ ದುಸ್ಸಾಹಸಕ್ಕೆ ಕೈಹಾಕುವುದು ಎಂಬ ಪ್ರಶ್ನೆ ಸಹಜ. ಆದರೆ ಜುಂಜುನ್ ವಾಲಾ ಅವರ ವ್ಯಕ್ತಿತ್ವವೇ ಅಂಥಾದ್ದು. ರಿಸ್ಕ್ ತೆಗೆದುಕೊಳ್ಳುವುದೇ ಅವರ ಜಾಯಮಾನ. ಅತಿ ಕಡಿಮೆ ದರದಲ್ಲಿ, ವಿಶ್ವಾಸಾರ್ಹ ವಿಮಾನ ಯಾನ ಸಂಸ್ಥೆ ಇದಾಗಲಿದೆಯಂತೆ. ನಾಲ್ಕು ವರ್ಷಗಳಲ್ಲಿ 70 ವಿಮಾನಗಳ ಹಾರಾಟ ನಡೆಸಲು ಉದ್ದೇಶಿಸಲಾಗಿದೆಯಂತೆ. ವಿಮಾನಗಳನ್ನು ಪೂರೈಸಲು ಏರ್‌ಬಸ್ ಜತೆ ಮಾತುಕತೆ ನಡೆದಿದೆಯಂತೆ.
ಆದರೆ ಈ ವಹಿವಾಟಿನ ಮೊತ್ತ ಎಷ್ಟು, ಎಷ್ಟು ವಿಮಾನಗಳನ್ನು ಖರೀದಿಸಲಾಗುತ್ತಿದೆ ಎಂಬಿತ್ಯಾದಿ ವಿವರ ಗಳು ಇನ್ನೂ ಬಹಿರಂಗಗೊಂಡಿಲ್ಲ. ಇದರಲ್ಲಿ ಜುಂಜುನ್
ವಾಲಾ ಪಾಲು ಶೇ. ೪೦ ರಷ್ಟಿರಲಿದೆಯಂತೆ. ಜೆಟ್ ಏರ್ ವೇಸ್‌ನ ಸಿಇಒ ಆಗಿದ್ದ ವಿನಯ್ ದುಬೆ ಹಾಗೂ ಇಂಡಿಗೊ ಏರ್‌ಲೈನ್ಸ್‌ನ ಮಾಜಿ ಅಧ್ಯಕ್ಷ ಆದಿತ್ಯ ಘೋಷ್ ಅವರನ್ನು ಕರೆತಂದಿದ್ದಾರೆ. ಜುಂಜುನ್‌ವಾಲಾ 35 ದಶಲಕ್ಷ ಡಾಲರ್ ಹೂಡಲಿದ್ದಾರೆ. ಜುಂಜುನ್‌ವಾಲಾ ಅವರು ಪ್ರಾರಂಭಿಸಲು ಉದ್ದೇಶಿಸಿರುವ ಆಕಾಶ ಏರ್‌ಲೈನ್ಸ್ ಅನ್ನು ಅಲ್ಟ್ರಾ ಲೋ ಕಾಸ್ಟ್ ಕ್ಯಾರಿಯರ್ ಅಂದರೆ ಯುಎಲ್‌ಸಿಸಿ ಎಂದು ಕರೆಯುತ್ತಾರೆ. ಈಗ ನಾವು ಬಜೆಟ್ ಏರ್‌ಲೈನ್ಸ್ ಎಂದು ಕರೆಯಲಾಗುವ ಸಂಸ್ಥೆಗಳ ವಿಮಾನಪ್ರಯಾಣಕ್ಕಿಂತ ಕಡಿಮೆ ದರವನ್ನು ಇವು ಹೊಂದಿರುತ್ತವೆ.
ಹಾಗಾದರೆ ಇದು ಹೇಗೆ ಸಾಧ್ಯವಾಗುತ್ತದೆ ಎಂದರೆ ಸೀಟ್ ಸೆಲೆಕ್ಷನ್, ಆಹಾರ, ಪಾನೀಯ ಮೊದಲಾದ ಸೌಲಭ್ಯಗಳು ಇರುವುದಿಲ್ಲ. ಚೆಕ್ಡ್ ಇನ್ ಬ್ಯಾಗೇಜ್,
ಕ್ಯಾಬಿನ್ ಬ್ಯಾಗೇಜ್ ಮೊದಲಾದ ಸೌಲಭ್ಯಗಳಲ್ಲೂ ಕಡಿತ ಇರುತ್ತದೆ. ಈಗ ಇಂಡಿಗೊ, ಸ್ಪೈಸ್‌ಜೆಟ್ ಮೊದಲಾದವು ಕಡಿಮೆ ವಿಮಾನಯಾನದರ ಹಾಗೂ ಒಂದಷ್ಟು ಕಡಿಮೆ ಸೌಲಭ್ಯಗಳನ್ನು ಹೊಂದಿರುತ್ತವೆ. ಇವನ್ನು ಲೋ ಕಾಸ್ಟ್ ಕ್ಯಾರಿಯರ್(ಎಲ್‌ಸಿಸಿ) ಎಂದು ಕರೆಯುತ್ತಾರೆ. ಆದರೆ ಯುಎಲ್‌ಸಿಸಿ ಇದಕ್ಕಿಂದ ಒಂದು ಹೆಜ್ಜೆ ಮುಂದೆ ಹೋಗಿ ಮೇಲೆ ವಿವರಿಸಿದಂತೆ ಸೇವೆ ಒದಗಿಸುತ್ತದೆ. ಅಂದರೆ ವಿಮಾನ ಪ್ರಯಾಣ ದರ ಕಡಿಮೆ ಇದ್ದರೂ ಕೆಲವು ಸೇವಾ ಕಡಿತದಿಂದ ಅದರ ನಿರ್ವಹಣಾ ವೆಚ್ಚ ತಗ್ಗುತ್ತದೆ.
ಇಷ್ಟಕ್ಕೂ ವಿಮಾನಯಾನ ಕ್ಷೇತ್ರ ಮೊದಲೇ ನಷ್ಟದಲ್ಲಿರುವಾಗ ಇದು ಬೇಕಿತ್ತೇ? ಇನ್ನೊಂದು ವಿಮಾನ ಸಂಸ್ಥೆಗೆ ಅವಕಾಶವಿದೆಯೇ ಎಂಬ ಪ್ರಶ್ನೆಗೆ ಜುಂಜುನ್
ವಾಲಾ ಬಳಿ ಉತ್ತರವೂ ಇದೆ. ಅದೇನೆಂದರೆ ಜೆಟ್ ಏರ್ ವೇಸ್ ಈಗ ಇಲ್ಲ. ಏರ್ ಇಂಡಿಯಾ ಖಾಸಗೀಕರಣವಾಗಿದೆ. ಕರೋನಾ ಸಾಂಕ್ರಾಮಿಕದಿಂದಾಗಿ ಸಂಕಷ್ಟದಲ್ಲಿವೆ. ಆದರೆ ಇದೀಗ ಆರ್ಥಿಕ ಚಟುವಟಿಕೆಗಳು ಮತ್ತೆ ಗರಿಗೆದರಿರುವ ಹಿನ್ನೆಲೆಯಲ್ಲಿ ವಿಮಾನಯಾನ ಹೊಸ ಸಂಸ್ಥೆಗಳಿಗೆ ಅವಕಾಶವಿದೆ ಎನ್ನುತ್ತಾರೆ ಪರಿಣತರು. ಮೊದಲಿನಿಂದಲೂ ರಿಸ್ಕ್ ತೆಗೆದುಕೊಳ್ಳಲು ಹೆಸರಾಗಿರುವ ರಾಕೇಶ್ ಜುಂಜುನ್‌ವಾಲಾ ಅವರು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಲು ಉದ್ದೇಶಿಸಿದ್ದಾರೆ. ಆದರೆ ಅವರದು ಕೇವಲ ರಿಸ್ಕ್ ಅಲ್ಲ. ಆದರೆ ಅದನ್ನು ಕ್ಯಾಲ್ಕ್ಯುಲೇಟೆಡ್ ರಿಸ್ಕ್ ಎನ್ನುತ್ತಾರೆ. ಅಂದರೆ ಲೆಕ್ಕಾಚಾರ ಹಾಕಿ ಮುಂದಡಿ ಇಡುವ ಪ್ರವೃತ್ತಿ.
ರಾಕೇಶ್ ಜುಂಜುನ್‌ವಾಲಾ ಮತ್ತೂ ಒಂದು ಕಾರಣಕ್ಕೆ ಇತ್ತೀಚೆಗೆ ಸುದ್ದಿಯಲ್ಲಿದ್ದರು. ಅವರು ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ಮೋದಿಯವರು ಜುಂಜುನ್‌ವಾಲಾರನ್ನು ಲವಲವಿಕೆಯ, ಅಪಾರ ಒಳನೋಟವುಳ್ಳ ಹಾಗೂ ಭಾರತದ ಬಗ್ಗೆ ಅತ್ಯುತ್ಸಾಹ ಉಳ್ಳ ವ್ಯಕ್ತಿ ಎಂದು
ಕೊಂಡಾಡಿದ್ದು ವಿಶೇಷ. ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು ನಿಂತಿರುವಂತೆಯೇ ಜುಂಜುನ್‌ವಾಲಾ ತಮ್ಮ ಆಸನದಲ್ಲಿ ಕುಳಿತಿರು ಫೋಟೊ ಎಲ್ಲ ಕಡೆ ವೈರಲ್ ಆಗಿತ್ತು. ಪ್ರಧಾನಿ ನಿಂತಿದ್ದರೂ ಕುಳಿತಿರಲು ಎಷ್ಟು ಧೈರ್ಯ ಎಂದು ಅನೇಕರು ಟೀಕೆ ಮಾಡಿದರು. ಆದರೆ ಜುಂಜುನ್‌ವಾಲಾ ಅವರ ಆರೋಗ್ಯ ಇತ್ತೀಚೆಗೆ ಚೆನ್ನಾಗಿರಲಿಲ್ಲ. ಕೋವಿಡ್ ಪೀಡಿತರಾಗಿಯೂ ಸಮಸ್ಯೆಯಾಗಿತ್ತು. ಹೀಗಾಗಿ ಅವರು ಸದಾ ಗಾಲಿಕುರ್ಚಿಯಲ್ಲೇ ಕುಳಿತಿರುತ್ತಾರೆ. ಈ ವಿಷಯ ಬಹುತೇಕರಿಗೆ ಗೊತ್ತಿರದ ಕಾರಣ ಹೀಗೆಲ್ಲ ಟೀಕೆ ಮಾಡಿದ್ದುಂಟು.
ಇದೆಲ್ಲ ಏನೇ ಇರಲಿ. ಒಟ್ಟಿನಲ್ಲಿ ರಾಕೇಶ್ ಜುಂಜುನ್ ವಾಲಾ ಅವರು ಅತ್ಯಂತ ಕ್ರಿಯಾಶೀಲ, ವಿಭಿನ್ನವಾಗಿ ಯೋಚಿಸುವ ಹೂಡಿಕೆದಾರ ಎಂಬುದಂತೂ ನಿಜ.
ಹೀಗಾಗಿ ಸದಾ ಒಂದಲ್ಲ ಒಂದು ಕಾರಣಕ್ಕಾಗಿ ಸುದ್ದಿಯಲ್ಲಿದ್ದಾರೆ. ಅವರನ್ನು ಭಾರತದ ವಾರನ್ ಬಫೆಟ್ ಎಂದು ಬಣ್ಣಿಸುವುದುಂಟು. ಬಫೆಟ್ ಅವರೊಂದಿಗೆ ಹೋಲಿಸುವಷ್ಟರ ಮಟ್ಟಿಗೆ , ಅಷ್ಟು ಎತ್ತರಕ್ಕೆ ಇನ್ನೂ ಬೆಳೆದಿಲ್ಲದಿರಬಹದು. ಆದರೆ ಇಬ್ಬರಲ್ಲೂ ಇರುವ ಸಮಾನ ಗುಣಗಳ ಆಧಾರದಲ್ಲಿ ಈ ಹೋಲಿಕೆಯನ್ನು ಮಾಡಿರಬಹುದು.
ಜುಂಜುನ್‌ವಾಲಾ ಜೀವನ, ಬೆಳೆದುಬಂದ , ಬೆಳೆದ ಪರಿಯನ್ನು ನೋಡಿದರೆ ಇದು ನಿಜ ಎಂದು ಗೊತ್ತಾಗುತ್ತದೆ. 19060 ರಲ್ಲಿ ಮುಂಬೈನಲ್ಲಿ ಜನನ. ಅವರ ತಂದೆ ಆದಾಯ ತೆರಿಗೆ ಅಽಕಾರಿ. ತಂದೆಯಿಂದ ಸ್ಫೂರ್ತಿಗೊಂಡು ಇನ್ಸ್‌ಟ್ಯಿಟ್ಯೂಟ್ ಆಫ್ ಚಾರ್ಟರ್ಡ್ ಆಕೌಂಟಂಟ್ಸ್ ಆಫ್ ಇಂಡಿಯಾ ಸಂಸ್ಥೆಯನ್ನು ಸೇರಿದರು. ಅಂದರೆ ವೃತ್ತಿಯಿಂದ ಅವರು ಲೆಕ್ಕ ಪರಿಶೋಧಕರು. ಆದರೆ ಪ್ರವೃತ್ತಿಯಿಂದ ಅವರೊಬ್ಬ ಹೂಡಿಕೆದಾರರು. ಈಗ ಅದೇ ಮುಖ್ಯ ವೃತ್ತಿಯೂ ಹೌದು.
ಕಾಲೇಜಿನಲ್ಲಿ ಓದುತ್ತಿರುವಾಗಲೇ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಆರಂಭಿಸಿದರು. ಅಂದರೆ ಕಾಲೇಜು ದಿನಗಳಿಂದಲೇ ಅವರಲ್ಲೊಬ್ಬ ಹೂಡಿಕೆದಾ
ರನಿದ್ದ. ಆಗಿನಿಂದಲೇ ಸ್ಟಾಕ್ ಮಾರುಕಟ್ಟೆಯಲ್ಲಿ ದೊಡ್ಡ ಹೂಡಿಕೆದಾರನಾಗಬೇಕೆಂಬ ಕನಸು ಹೊತ್ತಿದ್ದರು. ಹಾಗೆಂದು ಅವರು ಆಗರ್ಭ ಶ್ರೀಮಂತರೇನಲ್ಲ. ಮಧ್ಯ
ಮ ವರ್ಗಕ್ಕೆ ಸೇರಿದ ಕುಟುಂಬ ಅವರದು. 1985 ರಲ್ಲಿ ದಲಾಲ್ ಸ್ಟ್ರೀಟ್‌ಗೆ ಎಂಟ್ರಿ ಕೊಟ್ಟ ಅವರ ಮೊದಲ ಹೂಡಿಕೆಯ ಮೊತ್ತ ಎಷ್ಟು ಗೊತ್ತೆ? ಕೇವಲ 5000 ರು. 2018 ರ ವೇಳೆಗೆ ಈ ಮೊತ್ತ 11000 ಕೋಟಿ ರು.ಗೆ ಏರಿದೆ ಎಂದರೆ ಅವರ ಬೆಳವಣಿಗೆಯ ಅಗಾಧತೆ ಎಷ್ಟೆಂಬುದು ಅರ್ಥವಾಗುತ್ತದೆ. ತಂದೆಯವರು ಆದಾಯ ತೆರಿಗೆ ಇಲಾಖೆ ಅಧಿಕಾರಿಯಾಗಿದ್ದರಲ್ಲವೆ.
ಅವರು ತಮ್ಮ ಸ್ನೇಹಿತರ ಜತೆಗೆ ಷೇರು ಮಾರುಕಟ್ಟೆಯ ಬಗ್ಗೆ ಚರ್ಚೆ ನಡೆಸುತ್ತಿರುವುದನ್ನು ಕೇಳುತ್ತ ಕೇಳುತ್ತ ರಾಕೇಶ್‌ಗೂ ಆಸಕ್ತಿ ಮೂಡಿತು. ‘ಪತ್ರಿಕೆಗಳನ್ನುಓದಿ
ಸುದ್ದಿಯನ್ನು ತಿಳಿದುಕೊ. ಸುದ್ದಿಗಳ ಆಧಾರದಲ್ಲಿ ಷೇರು ಮಾರುಕಟ್ಟೆಯ ಏರಿಳಿತ ಇರುತ್ತದೆ’ ಎಂದು ತಂದೆ ಹೇಳಿದ ಕಿವಿಮಾತು ಜುಂಜುನ್‌ವಾಲಾ ಮನಸ್ಸಿಗೆ ಬಲು ಬೇಗ ನಾಟಿತು. ‘ನೀನೂ ಬೇಕಾದರೆ ಸ್ಟಾಕ್ ಮಾರ್ಕೆಟ್ ವ್ಯವಹಾರ ಮಾಡು. ಆದರೆ ನಾನು ಹಣ ಕೊಡುವುದಿಲ್ಲ ’ ಎಂದು ಖಡಾಖಂಡಿತವಾಗಿ ಹೇಳಿಬಿಟ್ಟರು.
ಇದರಿಂದ ಕೊಂಚ ನಿರಾಶರಾದರೂ ಛಲ ಹೆಚ್ಚಾಯಿತು. ಮೊದಲಿನಿಂದ ಅವರಲ್ಲೊಬ್ಬ ಗೂಳಿ ಪ್ರವೃತ್ತಿಯ ಹೂಡಿಕೆದಾರ ಇದ್ದೇ ಇದ್ದ. ಹೀಗಾಗಿ ಹಿಂದೆ ಮುಂದೆ ನೋಡದೆ ನೀರಿಗೆ ಇಳಿದೇ ಬಿಟ್ಟರು. ಅವರು ತಮ್ಮ ಸೋದರನ ಗ್ರಾಹಕರಿಂದ ಹಣ ಪಡೆದರು. ಬ್ಯಾಂಕ್ ನಲ್ಲಿ ನಿಶ್ಚಿತ ಠೇವಣಿ ಇಟ್ಟರೆ ಬರುವುದಕ್ಕಿಂತಲೂ ಹೆಚ್ಚಿನ
ಆದಾಯವನ್ನು ನಿಮಗೆ ಕೊಡುತ್ತೇನೆ ಎಂದು ಭರವಸೆ ನೀಡಿದರು. ೧೯೮೬ ರಲ್ಲಿ ೫೦೦೦ ಟಾಟಾ ಟೀ ಷೇರುಗಳನ್ನು ತಲಾ ೪೩ ರು. ಗೆ ಖರೀದಿಸಿದರು. ಮೂರು ತಿಂಗಳಲ್ಲೇ ಅದು ೧೪೩ ಗೆ ಏರಿತು. ಮೂರು ವರ್ಷಗಳಲ್ಲಿ ೨೦-೨೫ ಲಕ್ಷ ಲಾಭ ಗಳಿಸಿದರು. ಅದಾದ ಬಳಿಕ ಹಿಂದಿರುಗಿ ನೋಡಿಯೇ ಇಲ್ಲ.
ವರ್ಷ ಕಳೆದಂತೆ ಟೈಟನ್, ಕ್ರಿಸಿಲ್ ಇತ್ಯಾದಿ ಷೇರು ಗಳಲ್ಲಿ ಹೂಡಿಕೆ ಮಾಡಿದರು. ೨೦೨೧ ರ ಮಾರ್ಚ್‌ನಲ್ಲಿದ್ದಂತೆ ರಾಕೇಶ್ ಜುಂಜುನ್‌ವಾಲಾ ಅವರು ೩೭ ಪ್ರಮುಖ ಕಂಪನಿಗಳ ಷೇರುಗಳನ್ನು ಹೊಂದಿದ್ದಾರೆ. ಷೇರು ಮಾರುಕಟ್ಟೆಯಲ್ಲಿ ಅವರು ಗೂಳಿ. ಅಂದರೆ ರಿಸ್ಕ್ ತೆಗೆದು ಕೊಂಡು ಷೇರುಗಳನ್ನು ಕೊಳ್ಳುವಂಥವರು. ಹರ್ಷದ್ ಮೆಹ್ತಾ ದಿನಗಳಲ್ಲಿ ಅವರು ಕರಡಿಯಂತಿದ್ದರು. ಅಂದರೆ ಹೆಚ್ಚು ಅಗ್ರೆಸ್ಸಿವ್ ಆಗಿರಲಿಲ್ಲ. ಆದರೆ ೧೯೯೨ ರ ಸೆಕ್ಯುರಿಟಿ ಹಗರಣದ ಬಳಿಕ ಗೂಳಿಯಾಗಿ ಬದಲಾದರು.
ರಾಕೇಶ್ ಜುಂಜುನ್‌ವಲಾ ರೇಖಾ ಅವರನ್ನು ಮದುವೆ ಯಾಗಿದ್ದಾರೆ. ಆಕೆಯೂ ಸ್ಟಾಕ್ ಮಾರ್ಕೆಟ್ ಹೂಡಿಕೆದಾರರು. ೨೦೦೩ ರಲ್ಲಿ ರೇರ್ ಎಂಟರ್‌ಪ್ರೈಸಸ್ ಎಂಬ ಹೂಡಿಕೆ ಸಂಸ್ಥೆಯನ್ನು ಹುಟ್ಟುಹಾಕಿದ್ದಾರೆ. ಆಪ್‌ಟೆಕ್ ಲಿಮಿಟೆಡ್, ಹಂಗಾಮಾ ಡಿಜಿಟಲ್ ಮೀಡಿಯಾ ಕಂಪನಿಗಳ ಚೇರ್‌ಮನ್. ಅಲ್ಲದೆ ಅನೇಕ ಕಂಪನಿಗಳ ನಿರ್ದೇಶಕ ಮಂಡಳಿಯಲ್ಲಿದ್ದಾರೆ.
ಜುಂಜುನ್‌ವಾಲಾ ಸದ್ಯ ಭಾರತದ ೪೮ ನೇ ಅತಿ ದೊಡ್ಡ ಶ್ರೀಮಂತ ವ್ಯಕ್ತಿ. ೨೦೨೧ ರ ಅಂಕಿ ಅಂಶಗಳ ಪ್ರಕಾರ ಅವರ ಒಟ್ಟು ಆಸ್ತಿ ೩೪ ಸಾವಿರ ಕೋಟಿ ರು.
ರಾಕೇಶ್ ಜುಂಜುನ್‌ವಾಲಾ ಅವರನ್ನು ವಾರೆನ್ ಬಫೆಟ್ ಗೆ ಹೋಲಿಸುವುದರ ಒಂದು ಕಾರಣ ಬಹುಶಃ ಆವರ ದಾನ ಧರ್ಮದ ಗುಣದಿಂದ ಇರಬಹುದು. ಬೇಕಾದಷ್ಟು ಶ್ರೀಮಂತರು, ಉದ್ಯಮಿಗಳು ಸಾಕಷ್ಟು ಸಮಾಜ ಸೇವೆ, ದಾನ ಧರ್ಮದ ಕಾರ್ಯ ಮಾಡುತ್ತಾರೆ. ಇದಕ್ಕೆ ಉದಾಹರಣೆಗಳು ಹೇರಳವಾಗಿವೆ. ಆದರೆ ರಾಕೇಶ್ ಅವರ ವೈಶಿಷ್ಟ್ಯ ಏನೆಂದರೆ ಇವರೇನೂ ಅವರಷ್ಟು ದೊಡ್ಡ ಶ್ರೀಮಂತರಲ್ಲ. ಹೀಗಿದ್ದೂ ಕೂಡ ಶೇ.೨೫ ರಷ್ಟು ಅವರ ಲಾಭ ಎನ್ನಿ, ಇಲ್ಲವೆ ಆದಾಯವೆನ್ನಿ-ಅದನ್ನು ದಾನ ಧರ್ಮ ಕಾರ್ಯಕ್ಕೆ ವಿನಿಯೋಗಿಸುತ್ತಾರೆ.
ವಿಶೇಷವಾಗಿ ಮಕ್ಕಳಿಗಾಗಿ ಹಾಗೂ ಶಿಕ್ಷಣದ ಕೆಲಸಗಳಿಗೆ ಅವರು ಹೆಚ್ಚಿನ ಹಣವನ್ನು ವಿನಿಯೋಗಿಸುತ್ತಾರೆ. ಕ್ಯಾನ್ಸರ್ ಪೀಡಿತ ಮಕ್ಕಳಿಗಾಗಿ ಆಶ್ರಯ ಕಲ್ಪಿಸುವ ಕೈಂಕರ್ಯದಲ್ಲಿ ತೊಡಗಿಕೊಂಡಿರುವ ಸೇಂಟ್ ಜೂಡ್ ಎಂಬ ಸಂಸ್ಥೆಗೆ ವಂತಿಗೆ ನೀಡುತ್ತಾರೆ. ಅಗಸ್ತ್ಯ ಇಂಟರ್ ನ್ಯಾಶನಲ್ ಫೌಂಡೇಶನ್ ಇದರ ಹೆಸರು. ಅದೇ ರೀತಿ ಲೈಂಗಿಕ ಶೋಷಣೆ ಕುರಿತಂತೆ ಮಕ್ಕಳಲ್ಲಿ ಜಾಗೃತಿ ಮೂಡಿಸುವ ಅರ್ಪಣ್ ಎಂಬ ಸಂಸ್ಥೆಯ ಜತೆಗೂ ಕೈಜೋಡಿಸಿದ್ದಾರೆ.
ಇಷ್ಟು ಮಾತ್ರವಲ್ಲದೆ ಅಶೋಕಾ ಯುನಿವರ್ಸಿಟಿ, ಫ್ರೆಂಡ್ಸ್ ಆಫ್ ಟ್ರೈಬಲ್ ಯುನಿವರ್ಸಿಟಿ, ಹಾಗೂ ಒಲಿಂಪಿಕ್ ಗೋಲ್ಡ್ ಕ್ವೆಸ್ಟ್ ಮೊದಲಾದ ಕೆಲಸಗಳಿಗೂ ನೆರವು
ನೀಡುತ್ತಿದ್ದಾರೆ. ನವಿ ಮುಂಬೈನಲ್ಲಿ ಕಣ್ಣಿನ ಆಸ್ಪತ್ರೆ ಯೊಂದನ್ನು ನಿರ್ಮಿಸುತ್ತಿದ್ದಾರೆ. ರಾಕೇಶ್ ಜುಂಜುನ್‌ವಾಲಾ ಅವರು ಬರಿ ಹಣ ಹೂಡುವುದು, ಹಣ ತೆಗೆಯುವುದು ಅಷ್ಟೇ ಅಲ್ಲ. ಅವರಿಗೆ ಬೇರೆ ಬೇರೆ ಕ್ಷೇತ್ರಗಳಲ್ಲೂ ಅಪಾರ ಆಸಕ್ತಿ. ಸಿನಿಮಾರಂಗದಲ್ಲಿ, ವಿಶೇಷವಾಗಿ ಬಾಲಿವುಡ್‌ನಲ್ಲಿ ವಿಶೇಷವಾದ ಆಸಕ್ತಿ.
‘ಇಂಗ್ಲಿಷ್ ವಿಂಗ್ಲಿಷ್’ ಚಿತ್ರವನ್ನು ನಿರ್ಮಿಸಿದ್ದಾರೆ. ಊಟೋ ಪಚಾರದಲ್ಲಿ ಅಪಾರ ಆಸಕ್ತಿ. ಚೈನೀಸ್ ತಿನಿಸುಗಳೆಂದರೆ ಬಾರಿ ಪ್ರೀತಿ. ಅಡುಗೆ ಕಾರ್ಯಕ್ರಮಗಳನ್ನು ಹೆಚ್ಚು ನೋಡುತ್ತಾರೆ.
ಷೇರುಪೇಟೆಯಲ್ಲಿ ಹಣ ತೊಡಗಿಸುವುದೆಂದರೆ ಬೆಂಕಿಯೊಂದಿಗೆ ಸರಸವಾಡಿದಂತೆ. ಬಂದರೆ ಬಂತು, ಹೋದರೆ ಹೋಯಿತು. ಇಲ್ಲಿ ಉದ್ಧಾರವಾದಷ್ಟೇ ಜನ ಪಾಪರ್ ಕೂಡ ಆಗಿದ್ದಾರೆ. ಹರ್ಷದ್ ಮೆಹತಾ ಅಂಥವರು ಮೋಸ, ವಂಚನೆಯ ಮೂಲಕ ಮಾನ ಕಳೆದುಕೊಂಡಿದ್ದಾರೆ. ಹೀಗಾಗಿ ಇದು ಬಲು ಅಪಾಯಕಾರಿ ವೃತ್ತಿ. ಆದರೆ ರಾಕೇಶ್ ಜುಂಜುನ್‌ವಾಲಾ ಷೇರುಗಳ ನಾಡಿಮಿಡಿತವನ್ನು, ಏರಿಳಿತವನ್ನು ಚೆನ್ನಾಗಿ ಬಲ್ಲವರಾಗಿದ್ದು ಲೆಕ್ಕಾಚಾರ ಮಾಡಿ ದೊಡ್ಡದಾಗಿ ಹೂಡಿಕೆ ಮಾಡುತ್ತಾರೆ. ಹೀಗಾಗಿಯೇ ಬಹುಶಃ ಅವರು ಇಷ್ಟರ ಮಟ್ಟಿನ ಯಶಸ್ಸು ಗಳಿಸಿರಬ ಹುದು.
ಅವರದು ಮಾತೆಂದರೆ ಮಾತು; ನಿರ್ಧಾರವೆಂದರೆ ನಿಧಾರ. ಈಚೆಗೆ ಜೊಮಾಟೊ ಐಪಿಒ ಬಂತಲ್ಲ. ಅದರಲ್ಲಿ ಹಣ ಹೂಡುವುದಿಲ್ಲ ಎಂದು ಖಡಾಖಂಡಿತವಾಗಿ ಘೋಷಿಸಿ ಬಿಟ್ಟರು. ಟೆಸ್ಲಾ ಷೇರುಗಳ ಸಹವಾಸಕ್ಕೂ ಹೋಗುವುದಿಲ್ಲ ಎನ್ನುತ್ತಾರೆ. ಏನು ಲೆಕ್ಕವೋ, ಯಾವ ಅಳತೆಯೋ ಗೊತ್ತಿಲ್ಲ. ಹೀಗಾಗಿಯೇ ಅವರು ವಿಭಿನ್ನವಾಗಿ, ವಿಶಿಷ್ಟವಾಗಿ ಕಾಣುವುದು.
ನಾಡಿಶಾಸ್ತ್ರ
ಮೈದಾಸನು ಮುಟ್ಟಿದ್ದೆಲ್ಲ ಚಿನ್ನ
ರಾಕೇಶ ಹೂಡಿಕೆ ಮಾಡಿದ್ದೆಲ್ಲ ಚೆನ್ನ
ಇವರು ಷೇರುಪೇಟೆಯ ಗೂಳಿ
ಗುಟುರು ಹಾಕಿದರೆ ಸುಂಟರಗಾಳಿ