Wednesday, 11th December 2024

ಹೋಯ್! ಐಪಿಎಲ್ ಸಿನೆಮಾ ಮುಗೀತಾ !?

ವಿದೇಶವಾಸಿ

dhyapaa@gmail.com

ಒಂದು ಕಾಲದಲ್ಲಿ ಶುಭ್ರ ಬಿಳಿಯ ಸಮವಸ್ತ್ರದಲ್ಲಿ ಆಡುತ್ತಿದ್ದ ಆಟ ಕ್ರಿಕೆಟ್. ದೇಶ ದೇಶದ ನಡುವೆ, ರಾಜ್ಯ ರಾಜ್ಯದ ನಡುವೆ ನಡೆಯುತ್ತಿದ್ದ ಕ್ರಿಕೆಟ್ ರೂಪಾಂತರಗೊಂಡಿದೆ. ಒಂದೇ ದೇಶದ, ಒಂದೇ ರಾಜ್ಯದ ಜನ ಇಂದು ಹಂಚಿಹೋಗಿ ದ್ದಾರೆ. ಮೊದಲು ಎಂಟು ತಂಡವಿದ್ದದ್ದು ಈಗ ಹತ್ತು ತಂಡವಾಗಿದೆ.

ಐಪಿಲ್ ಜ್ವರ ಬಿಟ್ಟು ಇಂದಿಗೆ ಒಂದು ವಾರ ಆಯಿತು. ಕಳೆದ ಒಂದು ವಾರದಿಂದ ಮೂರು-ಮೂರೂವರೆ ಗಂಟೆಯ ಭೀಕರ ನಿರುದ್ಯೋಗ ಸಮಸ್ಯೆ. ಕಳೆದ ಎರಡು ತಿಂಗಳಿಗಿಂತ ಹೆಚ್ಚು, ಕ್ರಿಕೆಟ್ ಆಟಕ್ಕಿಂತಲೂ ಮನರಂಜನೆಯಾಗಿಯೇ ಮುದ ನೀಡಿದ್ದು ಇಂಡಿಯನ್ ಪ್ರೀಮಿಯರ್ ಲೀಗ್. ಮನೆಯಿಂದ ಹೊರಗೆ ಹೋಗಬೇಕಿಲ್ಲ, ಮಾಸ್ಕ್ ಧರಿಸಬೇಕಿಲ್ಲ, ಸಾಲಲ್ಲಿ ನಿಲ್ಲಬೇಕಿಲ್ಲ, ಕಾಸು ಕೊಡಬೇಕಿಲ್ಲ.

ಒಂದು ಟಿವಿ, ಒಂದು ರಿಮೋಟ್ ಇದ್ದರೆ ಸಾಕು. ಅದೂ ಇಲ್ಲವೆಂದರೆ ಒಂದು ಮೊಬೈಲ್ ಫೋನ್ ಇದ್ದರೂ ಬೇಕಾದಷ್ಟಾಯಿತು.
ಒಂದು ಸಿನಿಮಾದಲ್ಲಿ ಅಬ್ಬಬ್ಬಾ ಎಂದರೆ ಎರಡು ಎಮೋಷನ್, ನಾಲ್ಕು ಫೈಟ್, ಒಂದೆರಡು ಐಟಮ್ ಸಾಂಗ್, ಒಂದು ಕ್ಲೈಮ್ಯಾಕ್ಸ್. ಕೆಲವೊಂದು ಸಿನಿಮಾದಲ್ಲಿ ಅದೂ ಇಲ್ಲ. ಐಪಿಎಲ್ ಹಾಗಲ್ಲ, ಸೆಂಟಿಮೆಂಟ್, ಫೈಟ್, ಸ್ಟಂಟ್, ಕ್ಲೈಮ್ಯಾಕ್ಸ್ ಎಲ್ಲವೂ ಭರಪೂರು. ವುಹಾನ್ ವೈರಸ್ ಬರುವುದಕ್ಕಿಂತ ಮೊದಲು ಪ್ರತಿ ವಿಕೆಟ್‌ಗೆ, ಸಿಕ್ಸರ್‌ಗೆ ಐಟಮ್ ಸಾಂಗ್ ಕೂಡ ಇರುತ್ತಿತ್ತು.

ಒಟ್ಟೂ ಎಪ್ಪತ್ತನಾಲ್ಕು ಪಂದ್ಯ, ಎಪ್ಪತ್ತನಾಲ್ಕು ಸಿನಿಮಾ ಇದ್ದಂತೆ. ಅ ಇ ಒಂದೊಂದು ಆರ್ಟ್ ಮೂವಿಯಂತಹ ಮ್ಯಾಚ್ ಬಿಟ್ಟರೆ ಬಹುತೇಕ ಎಲ್ಲ ಪಂದ್ಯಗಳೂ ಕಮರ್ಶಿಯಲ್ ಸಿನಿಮಾನೇ. ಒಂದಂತೂ ನಿಜ, ಭಾರತದಲ್ಲಿ ಸಾವಿರ ಕೋಟಿ ಗಳಿಸಿದ ಚಿತ್ರಗಳು ಕೇವಲ ನಾಲ್ಕು. ಅದರಲ್ಲೂ ಎರಡು ಚಿತ್ರ ಈ ವರ್ಷ ಸೇರಿಕೊಂಡದ್ದು. ಆದರೆ ಐಪಿಎಲ್ ಎಂಬ ಚಿತ್ರ (ತಂಡ) ಗೆಲ್ಲಲಿ, ಸೋಲಲಿ, ಎಂಟು (ಈ ವರ್ಷ ಹತ್ತು) ನಿರ್ಮಾಪಕರು ಅಥವಾ ಮಾಲೀಕರೆಲ್ಲರೂ ಸಾವಿರ ಕೋಟಿ ಕ್ಲಬ್ ಸೇರಿದವರೇ.

ಅಷ್ಟಾಗಿಯೂ ಐಪಿಎಲ್ ಎಂಬುದು ಒಂದು ರಿಮೇಕ್, ಇನ್ನೊಂದು ಕಡೆಯಿಂದ ಕದ್ದ ಸರಕು ಎಂಬುದನ್ನು ಇಂದಿನ ಬಹುತೇಕ ಯುವ ಪೀಳಿಗೆ ತಿಳಿದಿರಲಿಕ್ಕಿಲ್ಲ. ಐಪಿಎಲ್ ಆರಂಭವಾಗುವುದಕ್ಕೆ ಒಂದು ವರ್ಷ ಮೊದಲೇ ಈ ರೀತಿಯ ಒಂದು ಕಥೆ ಹೆಣೆದದ್ದು
‘ಝೀ’ ಎಂಟರ್ಟೈನ್‌ಮೆಂಟ್ ಎಂಟರ್‌ಪ್ರೈಸಸ್. ಝೀ ಟಿವಿ, ಝೀ ನ್ಯೂಸ್, ಝೀ ಮ್ಯೂಸಿಕ್ ಇತ್ಯಾದಿಗಳನ್ನು ಹೊಂದಿದ ಮಾತೃ ಸಂಸ್ಥೆ ಅದು.

ಝೀ ಸಂಸ್ಥೆಯ ಸುಭಾಷ್ ಚಂದ್ರ ಅವರ ಇಂಡಿಯನ್ ಕ್ರಿಕೆಟ್ ಲೀಗ್ ಅಥವಾ ‘ಐಸಿಎಲ’ಗೆ ಕಪಿಲ್ ದೇವ್, ಕಿರಣ್ ಮೋರೆ ಯಂತಹ ಅನೇಕ ದಿಗ್ಗಜರು ಸೇರಿಕೊಂಡಿದ್ದರು. ಐಪಿಎಲ್‌ನಂತೆಯೇ ಬೇರೆ ಬೇರೆ ನಗರದ ಹೆಸರಿನ ತಂಡಗಳು, ಆಟಗಾರರ ಹರಾಜು ಪ್ರಕ್ರಿಯೆ ಎಲ್ಲವೂ ಅಲ್ಲಿದ್ದವು.

ಐಸಿಸಿ ಅಥವಾ ಬಿಸಿಸಿಐ ಇದನ್ನು ಮಾನ್ಯ ಮಾಡಿರಲಿಲ್ಲ. ಬದಲಾಗಿ ಬಹಳಷ್ಟು ಆಟಗಾರರು ಐಸಿಎಲ್ ಸೇರಿಕೊಳ್ಳುತ್ತಿದ್ದಾರೆ ಎಂಬ ಅಸಮಾಧಾನ ಎರಡೂ ಸಂಸ್ಥೆಗಳಲ್ಲೂ ಇತ್ತು. ಇದನ್ನು ತಡೆಯಲು ಬಿಸಿಸಿಐ ದೇಶೀಯ ಆಟಗಾರರ ಸಂಬಳವನ್ನು
ಹೆಚ್ಚಿಸಿದ್ದಷ್ಟೇ ಅಲ್ಲದೆ, ಐಸಿಎಲ್‌ನಲ್ಲಿ ಭಾಗವಹಿಸಿದವರ ಮೇಲೆ ಜೀವನ ಪರ್ಯಂತ ನಿಷೇಧ ಹೇರುವುದಾಗಿ ಹೇಳಿತು. ವಿಚಿತ್ರ ವೆಂದರೆ ಸೆಪ್ಟೆಂಬರ್ ೨೦೦೭ ರಲ್ಲಿ ಅದೇ ಐಸಿಎಲ್ ಸ್ಕ್ರಿ ಹಿಡಿದುಕೊಂಡು ಐಪಿಎಲ್ ಆರಂಭಿಸುವುದಾಗಿ ಅಂದಿನ ಬಿಸಿಸಿಐ
ಉಪಾಧ್ಯಕ್ಷ ಲಲಿತ್ ಮೋದಿ ಹೇಳಿದರು.

ಎಂದಿನಂತೆ, ‘ನಾವು ಇದನ್ನು ಕದ್ದಿಲ್ಲ’ ‘ಯಾರಿಂದ ಸ್ಫೂರ್ತಿಯನ್ನೂ ಪಡೆದಿಲ್ಲ’ ‘ಇದು ನಮ್ಮದೇ ಸರಕು’ ‘ನಮಗೆ ಮೊದಲಿ ನಿಂದಲೂ ಈ ರೀತಿಯ ವಿಚಾರ ಇತ್ತು’ ಇತ್ಯಾದಿ ಡೈಲಾಗ್‌ಗಳು! ಐಸಿಎಲ್‌ನವರೂ ಹೆಚ್ಚು ಮಾತಾಡುವಂತಿರಲಿಲ್ಲ. ಏಕೆಂದರೆ ಈ ರೀತಿಯ ಪ್ರಯೋಗ ಮಾಡಿದವರಲ್ಲಿ ಅವರೇ ಮೊದಲಿಗರೂ ಆಗಿರಲಿಲ್ಲ. ಇದಕ್ಕೂ ಮೊದಲು ಫುಟ್ಬಾಲ್‌ನಲ್ಲಿ ಇಂಗ್ಲಿಷ್ ಪ್ರೀಮಿ ಯರ್ ಲೀಗ್ (ಇಪಿಎಲ್) ಮತ್ತು ಬಾಸ್ಕೆಟ್‌ಬಾಲ್‌ನಲ್ಲಿ ನ್ಯಾಷನಲ್ ಬಾಸ್ಕೆಟ್‌ಬಾಲ್ ಅಸೋಸಿಯೇಷನ್ (ಎನ್‌ಬಿಎ) ಈ ರೀತಿಯ ಪ್ರಯತ್ನ ಮಾಡಿ ಯಶಸ್ವಿಯಾಗಿದ್ದವು.

ಬಿಸಿಸಿಐ ಆಟಗಾರರ ಮೇಲೆ ಹೇರಿದ ನಿರ್ಬಂಧದಿಂದ ೨೦೦೮ ರಲ್ಲಿ ಐಸಿಎಲ್‌ನ ಪಿಕ್ಚರ್ ಬಿಡ್ತು. ಇದನ್ನು ಏಕೆ ಹೇಳಬೇಕಾಯಿ ತೆಂದರೆ, ಅಂದು ಒಂದು ವೇಳೆ ಐಸಿಎಲ್ ಯಶಸ್ವಿಯಾಗಿದ್ದರೆ, ಇಂದು ಬಿಸಿಸಿಐ ಸಂಸ್ಥೆ ಅಸ್ತಿತ್ವದಲ್ಲಿ ಇರುತ್ತಿತ್ತೋ ಇಲ್ಲವೋ. ಏಕೆಂದರೆ ಬಿಸಿಸಿಐ ಸರಕಾರಿ ಸಂಸ್ಥೆಯಲ್ಲ. ಸರಕಾರ ಇದರಲ್ಲಿ ಹಸ್ತಕ್ಷೇಪ ಮಾಡುವಂತೆಯೂ ಇಲ್ಲ. ಅದಕ್ಕೂ ಝೀ ಸಂಸ್ಥೆಗೂ ಹೆಚ್ಚಿನ ವ್ಯತ್ಯಾಸವೇನೂ ಇಲ್ಲ.

ಒಂದು ವೇಳೆ ಬಿಸಿಸಿಐಗಿಂತ ಹೆಚ್ಚಿನ ಹಣವನ್ನು ಝೀ ಸಂಸ್ಥೆ ಐಸಿಸಿಗೆ ನೀಡಿದ್ದರೆ, ಐಸಿಸಿ ಕೂಡ ಮಾನ್ಯತೆ ನೀಡದಿರಲು ಕಾರಣ
ಇರುತ್ತಿರಲಿಲ್ಲ. ಆ ಒಂದು ಲೆಕ್ಕಾಚಾರದಲ್ಲಿ ಲಲಿತ್ ಮೋದಿ ಬಿಸಿಸಿಐ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು ಎಂದರೆ ತಪ್ಪಾಗಲಿಕ್ಕಿಲ್ಲ. ಈಗ ಐಪಿಎಲ್‌ನ ಹಣದ ಲೆಕ್ಕಾಚಾರ ನೋಡೋಣ. ಇದರಲ್ಲಿ ಪ್ರಮುಖವಾಗಿರುವುದು ಪ್ರಾಯೋಜಕರು, ಪ್ರಸಾರ ಮಾಧ್ಯಮದವರು ಮತ್ತು ತಂಡಗಳು. ಐಪಿಎಲ್‌ನ ಶೀರ್ಷಿಕೆ ಪ್ರಾಯೋಜಕತ್ವಕ್ಕಾಗಿ ಮೊದಲು ಐದು ವರ್ಷ ‘ಡಿಎಲ್ಎಫ್’  ಸಂಸ್ಥೆ ಪ್ರತಿ ವರ್ಷ ನಲವತ್ತು ಕೋಟಿ ರುಪಾಯಿ ನೀಡಿತ್ತು.

ನಂತರ ಎರಡು ವರ್ಷ ‘ಪೆಪ್ಸಿ’ ಕಂಪನಿ ಪ್ರತಿ ವರ್ಷ ಎಂಬತ್ತು ಕೋಟಿ ನೀಡಿತು. ಆಮೇಲೆ ಬಂದ ಚೀನಾ ಕಂಪನಿ ‘ವಿವೊ’ ಮೊದಲ ವರ್ಷ ನೂರು ಕೋಟಿ ರುಪಾಯಿ ನೀಡಿದರೆ ಎರಡನೆಯ ವರ್ಷ ನಾಲ್ಕುನೂರ ನಲವತ್ತು ಕೋಟಿ ರುಪಾಯಿ ನೀಡಿತು. ೨೦೨೦ರಲ್ಲಿ ಭಾರತ ಮತ್ತು ಚೀನಾದ ಸಂಬಂಧ ಹಳಸಿದ ಸಂದರ್ಭದಲ್ಲಿ ವಿವೊ ಬಿಟ್ಟು ‘ಡ್ರೀಮ್ ಎಲೆವೆನ್ ’ಗೆ ಇನ್ನೂರು ಇಪ್ಪತ್ತು ಕೋಟಿಗೆ ಶೀರ್ಷಿಕೆಯನ್ನು ಮಾರಲಾಯಿತು.

ಕಳೆದ ವರ್ಷ ನಾಲ್ಕುನೂರ ನಲವತ್ತು ಕೋಟಿ ರುಪಾಯಿಗೆ ಪುನಃ ವಿವೋಗೆ ಶೀರ್ಷಿಕೆ ನೀಡಲಾಯಿತು. ಈ ವರ್ಷ ‘ಟಾಟಾ’
ಸಂಸ್ಥೆ ಶೀರ್ಷಿಕೆಯನ್ನು ಮುನ್ನೂರ ಮೂವತ್ತು ಕೋಟಿ ರುಪಾಯಿಗೆ ಪದೆದುಕೊಂಡಿದೆ. ಮುಂದಿನ ವರ್ಷವೂ ಟಾಟಾ ಸಂಸ್ಥೆ ಶೀರ್ಷಿಕೆ ಪ್ರಾಯೋಜಕರಾಗಿ ಮುಂದುವರಿಯಲಿದೆ. ಈ ಪ್ರಾಯೋಜಕತ್ವದಿಂದ ಬಂದ ಮೊತ್ತದಲ್ಲಿ ಶೇಕಡಾ ಐವತ್ತರಷ್ಟು ಬಿಸಿಸಿಐಗೆ. ಉಳಿದ ಶೇಕಡಾ ಐವತ್ತನ್ನು ತಂಡಗಳಿಗೆ ಸಮನಾಗಿ ಹಂಚಲಾಗುತ್ತದೆ.

ಅದರ ಹೊರತಾಗಿ ಕೆಲವು ಅಧಿಕೃತ ಪ್ರಾಯೋಜಕರಿರುತ್ತಾರೆ. ಉದಾಹರಣೆಗೆ, ಆಟದ ನಡುವೆ ಬರುವ ‘ಸ್ಟ್ರಾಟೆಜಿಕ್ ಟೈಮ್ ಔಟ್’. ಆಟ ಆಡಿದ್ದಕ್ಕೆ ಪ್ರಾಯೋಜಕತ್ವ ಅಂದರೆ ಹೌದು, ಆಡದೇ ಇದ್ದ ಅಥವಾ ವಿಶ್ರಾಂತಿಯ ಎರಡೂವರೆ ನಿಮಿಷಕ್ಕೂ
ಪ್ರಾಯೋಜಕತ್ವ ಇದೆ ಎಂದರೆ… ನಂಬಬೇಕು, ಬೇರೆ ವಿಧಿ ಇಲ್ಲ. ಇದನ್ನು ‘ಸಿಯಟ್ ಟಾಯರ್ಸ್’ ಮೂವತ್ತು ಕೋಟಿ ರುಪಾಯಿ ನೀಡಿ ಪಡೆದುಕೊಂಡಿದೆ! ಅದರೊಂದಿಗೆ ‘ಡ್ರೀಮ್ ಎಲೆವೆನ್ ಗೇಮ್ ಚೇಂಜರ್’ ‘ಕ್ರೆಡ್ ಪಾವರ್ ಪ್ಲೇಯರ್’ ಹೀಗೆ ಪ್ರತಿಯೊಂದೂ ಇಲ್ಲಿ ಮಾರಾಟದ ಸರಕು. ಇಂತಹ ಪ್ರಾಯೋಜಕರಿಂದ ಬಿಸಿಸಿಐ ಒಟ್ಟೂ ಇನ್ನೂರು ಕೋಟಿ ರುಪಾಯಿಗೂ ಹೆಚ್ಚು ಹಣ ಸಂಗ್ರಹಿಸುತ್ತದೆ.

ಬಿಸಿಸಿಐ ಐಪಿಎಲ್‌ನ ನೇರ ಪ್ರಸಾರದ ಹಕ್ಕನ್ನು ಟಿವಿ ಚಾನೆಲ್‌ಗಳಿಗೆ ನೀಡುತ್ತದೆ. ಮೊದಲ ಹತ್ತು ವರ್ಷ, ಈ ಹಕ್ಕನ್ನು ಪ್ರತಿ ವರ್ಷ ಎಂಟುನೂರ ಇಪ್ಪತ್ತರಂತೆ ಒಟ್ಟೂ ಎಂಟು ಸಾವಿರದ ಎರಡುನೂರು ಕೋಟಿ ರುಪಾಯಿಗೆ ‘ಸೋನಿ ಟಿವಿ’ಗೆ ನೀಡಲಾಗಿತ್ತು. ನಂತರದ ಐದು ವರ್ಷಕ್ಕಾಗಿ ಈ ಹಕ್ಕನ್ನು ‘ಸ್ಟಾರ್ ಸ್ಪೋರ್ಟ್ಸ’ ಸುಮಾರು ಹದಿನಾರುವರೆ ಸಾವಿರ ಕೋಟಿ ರುಪಾಯಿಗೆ ಖರೀದಿಸಿತು. ಇದರಲ್ಲೂ ಬಿಸಿಸಿಐ ಮತ್ತು ತಂಡಗಳಿಗೆ ಫಿಫ್ಟಿ-ಫಿಫ್ಟಿ ಲೆಕ್ಕಾಚಾರ ಎಂದು ಪ್ರತ್ಯೇಕ ಹೇಳಬೇಕಿಲ್ಲವಲ್ಲ.

ಟಿವಿ ಚಾನೆಲ್‌ನವರು ಇಷ್ಟು ಹಣ ಸುರಿಯಬೇಕಾದರೆ ಅವರಿಗೆ ಹಣ ಎಲ್ಲಿಂದ ಬರುತ್ತದೆ ಎಂದರೆ, ಅವರಿಗೂ ಜಾಹೀತಾತು ಮತ್ತು ಪ್ರಾಯೋಜಕತ್ವದಿಂದಲೇ. ನಿಮಗೆ ತಿಳಿದಿರಲಿ, ಆಟದ ನಡುವೆ ಬರುವ ಜಾಹೀರಾತಿಗೆ ಟಿವಿ ಚಾನೆಲ್‌ನವರು ಪ್ರತಿ ಸೆಕೆಂಡಿಗೆ ಒಂದೂವರೆ ಲಕ್ಷ ರುಪಾಯಿ ಪೀಕುತ್ತಾರೆ. ಪ್ರತಿ ಓವರ್ ನಡುವೆ ಎಷ್ಟು ಸೆಕೆಂಡ್ ಇರುತ್ತದೆ, ಪ್ರತಿ ಇನ್ನಿಂಗ್ಸ್  ಆರಂಭ ವಾಗುವುದಕ್ಕೆ ಮೊದಲು ಎಷ್ಟು ನಿಮಿಷ ಜಾಹೀರಾತಿಗಾಗಿ ದೊರಕುತ್ತದೆ ಎಂಬುದರ ಮೇಲೆ ಒಟ್ಟೂ ಜಾಹೀರಾತಿನಿಂದ ಬರುವ ಮೊತ್ತವನ್ನು ನೀವೇ ಲೆಕ್ಕ ಹಾಕಿಕೊಳ್ಳಿ.

ಇನ್ನು ತಂಡಗಳ ವಿಷಯಕ್ಕೆ ಬರೋಣ. ಒಮ್ಮೆ ತಂಡದ ಮಾಲೀಕರು ಅಟಗಾರರನ್ನು ಖರೀದಿಸಿದ ಮೇಲೆ, ಆಟಗಾರರ ಮತ್ತು ಸಿಬ್ಬಂದಿ ಸಂಬಳ, ತರಬೇತಿ, ಅಭ್ಯಾಸ, ಪ್ರಯಾಣ, ಊಟೋಪಚಾರಗಳಿಗೆ ಖರ್ಚು ಮಾಡಬೇಕಾಗುತ್ತದೆ. ಇದಕ್ಕೆ ಖರ್ಚಾಗುವುದು ಸುಮಾರು ಎರಡುನೂರು ಕೋಟಿ ರುಪಾಯಿ. ಹಾಗಾದರೆ ತಂಡಕ್ಕೆ (ಮಾಲೀಕರಿಗೆ) ಈ ಹಣ ಬರುವುದು ಎಲ್ಲಿಂದ? ಒಂದು, ಈಗಾಗಲೇ ಹೇಳಿದಂತೆ ಬಿಸಿಸಿಐನ ಆದಾಯದ ಅರ್ಧ ಭಾಗ. ಅದರಿಂದ ಅಷ್ಟೂ ಖರ್ಚು ಪೂರೈಸಲು ಸಾಧ್ಯವಿಲ್ಲವಾದ್ದರಿಂದ,
ಅವರೂ ಪ್ರಾಯೋಜಕರನ್ನು ಹುಡುಕುತ್ತಾರೆ.

ಸಿಟಿ ಬಸ್ಸಿನ ಬೋರ್ಡಿಗಿಂತ ದೊಡ್ಡ ಬೋರ್ಡು ಆಟಗಾರರ ಅಂಗಿಯ ಮೇಲೆ ಕಾಣಲು ಅಥವಾ ಅಂಗಿ, ಪ್ಯಾಂಟಿನ ಮೇಲೆ ಅಲ್ಲಲ್ಲಿ ತೇಪೆ ಹಚ್ಚಿದಂತೆ ಕಾಣಲು ಇದೇ ಕಾರಣ. ಒಂದು ಸಮವಸದಲ್ಲಿ, ಅಂಗಿಯ ಮೇಲೆ ಆರು, ಪ್ಯಾಂಟಿನ ಮೇಲೆ ಎರಡು, ಟೊಪ್ಪಿ(ಕ್ಯಾಪ್)ಯ ಮೇಲೆ ಎರಡು, ಹೀಗೆ ಒಟ್ಟೂ ಹತ್ತು ಜಾಹೀರಾತು ಪ್ರದರ್ಶಿಸಬಹುದಾಗಿದೆ.

ತಂಡಗಳಿಗೆ ಇನ್ನೊಂದು ಆದಾಯ ಎಂದರೆ, ಕ್ರೀಡಾಂಗಣದಲ್ಲಿ ಪಂದ್ಯಗಳು ನಡೆದಾಗ ಟಿಕೆಟ್ ಮಾರಿ ಬಂದ ಹಣ. ಅದರಲ್ಲಿ ಶೇಕಡಾ ಎಂಬತ್ತರಷ್ಟು ತಂಡಕ್ಕೆ, ಉಳಿದ ಇಪ್ಪತ್ತು ಸ್ಥಳೀಯ ತಂಡದ ಕ್ರಿಕೆಟ್ ಅಸೋಸಿಯೇಷನ್‌ಗೆ ಹಂಚಿಕೆಯಾಗುತ್ತದೆ. ಒಂದು
ಪಂದ್ಯದ ಟಿಕೆಟ್ ಮಾರಾಟದಿಂದ ತಂಡಕ್ಕೆ ಸುಮಾರು ನಾಲ್ಕು ಕೋಟಿ ರುಪಾಯಿಯಂತೆ ಒಟ್ಟೂ ಹದಿನಾಲ್ಕು ಪಂದ್ಯಗಳು. ಹೆಚ್ಚು ಕಮ್ಮಿ ಐವತೈದರಿಂದ ಅರವತ್ತು ಕೋಟಿ ರುಪಾಯಿ. ಅದರ ಹೊರತಾಗಿ ತಂಡದ ಜರ್ಸಿ, ಕ್ಯಾಪ್, ಕೀ ಚೈನ್, ಮೊಬೈಲ್
ಕರ್ವ, ರಿ ಬ್ಯಾಂಡ್ ಇತ್ಯಾದಿ ಮರ್ಚಂಡೈಸ್ ವಸ್ತುಗಳನ್ನು ಮಾರಿದ ಹಣವೂ ತಂಡಕ್ಕೆ ಸೇರುತ್ತದೆ.

ಇನ್ನು ಗೆದ್ದವರಿಗೆ ಸಿಗುವ ಬಹುಮಾನದ ಮೊತ್ತ. ಕಪ್ ಗೆದ್ದವರಿಗೆ ಇಪ್ಪತ್ತು ಕೋಟಿ, ಸೋತವರಿಗೆ (ಅಂತಿಮ ಪಂದ್ಯದಲ್ಲಿ) ಹದಿಮೂರು ಕೋಟಿ, ಮೂರನೆಯ ಸ್ಥಾನದಲ್ಲಿರುವ ತಂಡಕ್ಕೆ ಏಳು ಕೋಟಿ, ನಾಲ್ಕನೆಯ ಸ್ಥಾನದಲ್ಲಿರುವ ತಂಡಕ್ಕೆ ಆರೂವರೆ
ಕೋಟಿ ರುಪಾಯಿ. ಈ ಹಣದಲ್ಲಿ ಅರ್ಧ ಮಾಲೀಕರಿಗೆ, ಉಳಿದ ಅರ್ಧ ಆಟಗಾರರಿಗೆ. ಆಟಗಾರರಿಗೆ ಹರಾಜಿನಲ್ಲಿ ಬಂದ ಹಣ, ಗೆದ್ದರೆ ಸಿಗುವ ಹಣದ ಒಂದು ಭಾಗದೊಂದಿಗೆ, ಪಂದ್ಯ ಶ್ರೇಷ್ಠ, ಸರಣಿ ಶ್ರೇಷ್ಠ, ಗೇಮ್ ಚೇಂಜರ್, ಹೆಚ್ಚು ರನ್ ಗಳಿಸಿದವ, ಹೆಚ್ಚು ವಿಕೆಟ್ ಪದೆದವ, ಹೀಗೆ ವೈಯಕ್ತಿಕ ಸಾಧನೆಗೆ ತಕ್ಕಂತೆ ಪುರಸ್ಕಾರ, ಬಹುಮಾನದ ಮೊತ್ತ ಲಭಿಸುತ್ತದೆ.

ಒಂದು ತಂಡದ ದೃಷ್ಟಿಯಿಂದ ನೋಡುವುದಾದರೆ, ಇಲ್ಲಿ ತಂಡ ಗೆದ್ದಾಗ ಸಿಗುವ ಮೊತ್ತ ಎಷ್ಟು ಎಂಬುದು ಮುಖ್ಯವಲ್ಲ. ಗೆದ್ದಾಗ ಸಿಗುವ ಪ್ರಚಾರ, ಬರುವ ಹೆಸರು ಮುಖ್ಯ. ಆ ಹೆಸರಿನಿಂದ ತಂಡಕ್ಕೆ ಹೆಚ್ಚು ಜಾಹೀರಾತು ಪಡೆಯಲು ಅನುಕೂಲವಾಗುತ್ತದೆ ಎಂಬುದು ಪ್ರಮುಖ ಅಂಶ. ಈ ಎಲ್ಲ ಲೆಕ್ಕಾಚಾರ ನೋಡಿದಾಗ, ಐಪಿಎಲ್ ಚಿತ್ರ ಸೋಲುವ ಛಾ…ನ್ಸೇ ಇಲ್ಲ…! ಅದಕ್ಕೇ ಹೇಳಿದ್ದು ಐಪಿಎಲ್ ಎಂದರೆ ಸಾವಿರ ಕೋಟಿ ಕ್ಲಬ್ ಸೇರಿದ ಪಕ್ಕಾ ಮನರಂಜನೆಯ ಸಿನಿಮಾ!

ಅದಿರಲಿ, ಇದರಿಂದ ಬಿಸಿಸಿಐಗೆ, ಆಟಗಾರರಿಗೆ, ಮಾಲೀಕರಿಗೆ ಲಾಭವಿದೆ. ಲಾಭ ಇಲ್ಲದೇ ಕಾದಾಡುವವರು ಎಂದರೆ ಅಭಿಮಾನಿ ಗಳು! ಒಂದು ಕಾಲದಲ್ಲಿ ಶುಭ್ರ ಬಿಳಿಯ ಸಮವಸದಲ್ಲಿ ಆಡುತ್ತಿದ್ದ ಆಟ ಕ್ರಿಕೆಟ್. ದೇಶ ದೇಶದ ನಡುವೆ, ರಾಜ್ಯ ರಾಜ್ಯದ ನಡುವೆ ನಡೆಯುತ್ತಿದ್ದ ಕ್ರಿಕೆಟ್ ರೂಪಾಂತರಗೊಂಡಿದೆ. ಒಂದೇ ದೇಶದ, ಒಂದೇ ರಾಜ್ಯದ ಜನ ಇಂದು ಹಂಚಿಹೋಗಿದ್ದಾರೆ.

ಮೊದಲು ಎಂಟು ತಂಡವಿದ್ದದ್ದು ಈಗ ಹತ್ತು ತಂಡವಾಗಿದೆ. ಅಂದರೆ, ಅಷ್ಟೇ ಅಭಿಮಾನಿಗಳ ಗುಂಪು. ಈ ಅಭಿಮಾನಿಗಳದ್ದೂ ಒಂದು ವಿಚಿತ್ರ ಪ್ರೇಮ. ‘ಬೆಂಗಳೂರು’ ಎಂಬ ಒಂದು ಪದ ಇದೆ ಎಂಬ ಕಾರಣಕ್ಕೆ ನಾವು ಆರ್‌ಸಿಬಿ ಅಭಿಮಾನಿಗಳು. ಅದರಲ್ಲಿ ಕರ್ನಾಟಕದ ಒಬ್ಬೇ ಒಬ್ಬ ಆಟಗಾರ ಇಲ್ಲದಿದ್ದರೂ ಅಡ್ಡಿಯಿಲ್ಲ, ನಾಯಕ ವಿದೇಶಿ ಆಟಗಾರನಾದರೂ ಪರವಾಗಿಲ್ಲ, ತಂಡ
ಕೊಂಡುಕೊಂಡವ ಮದ್ಯದ ದೊರೆಯಾದರೂ ಚಿಂತೆ ಇಲ್ಲ, ಆಟ ಬೆಂಗಳೂರಿನಲ್ಲಿ ನಡೆಯದಿದ್ದರೂ ನಷ್ಟವಿಲ್ಲ, ನಮ್ಮದು ಆರ್‌ಸಿಬಿ, ಕಳೆದ ಹದಿನೈದು ವರ್ಷದಿಂದಲೂ ‘ಈ ಸಲ ಕಪ್ ನಮ್ದೇ!’.

ನಮ್ಮದೇ ರಾಜ್ಯದ ಹುಡುಗರು ಬೇರೆ ತಂಡದಲ್ಲಿದ್ದು, ಚೆನ್ನಾಗಿ ಆಡಿದರೂ, ಆಡುತ್ತಿದ್ದರೂ ನಮ್ಮ ಸಪೋರ್ಟ್ ಆರ್ಸಿಬಿಗೆ. ಪುಣ್ಯಕ್ಕೆ ಕರ್ನಾಟಕದ ಎರಡು ತಂಡಗಳಿಲ್ಲ. ಮುಂದೊಂದು ದಿನ ‘ಕರ್ನಾಟಕ ವಾರಿಯರ್ಸ’ ‘ಮೈಸೂರು ಮಹಾರಾಜಾಸ್’ ಎಂದೇನಾದರೂ ತಂಡಗಳ ಸೇರ್ಪಡೆಯಾದರೆ (ಹಾಗಾಗುವ ಛಾನ್ಸ್ ಇಲ್ಲ ಬಿಡಿ) ನಮ್ಮ ನಮ್ಮ ನಾವು ಕಿತ್ತಾಡಿಕೊಳ್ಳುತ್ತೇವೆ,
ಜಗಳಾಡುತ್ತೇವೆ. ಇಲ್ಲಿ ಆರ್‌ಸಿಬಿ ಒಂದು ಉದಾಹರಣೆ ಮಾತ್ರ, ಎ ರಾಜ್ಯಗಳ ಕಥೆಯೂ ಇಷ್ಟೇ. ಅಲ್ಲಿಗೆ ಕ್ರಿಕೆಟ್ ಢಮಾರ್!

ಆದರೇನಂತೆ, ವರ್ಷದಲ್ಲಿ ಎರಡೂವರೆ ತಿಂಗಳು ಪ್ರತಿನಿತ್ಯ ಮೂರು ತಾಸಿನ ಸಿನಿಮಾ ನೋಡಿದರಾಯಿತು. ಅನಾದರೂ ಮಜ ಬರಲಿಲ್ಲವೆಂದರೆ, ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳ ಟೀಕೆ, ವಿಮರ್ಶೆ, ಎಕ್ಸ್ಪರ್ಟ್ ಕಮೆಂಟ್ಸ್, ಕಿತ್ತಾಟ, ಬೈಗುಳ ನೋಡಿದರಾಯಿತು. ಆಟಗಾರರು ಕೈ ಕೊಡಬಹುದು, ಪಂದ್ಯ ನೀರಸ ಎನಿಸಬದು, ಅಭಿಮಾನಿಗಳು ಎಂದೂ ನಿರಾಶೆ ಗೊಳಿಸುವುದಿಲ್ಲ!