Saturday, 14th December 2024

ಸತ್ತು ಬದುಕುವ ಸವಾಲು

ವೇದಾಂತಿ ಹೇಳಿದ ಕಥೆ

ಶಶಾಂಕ್ ಮುದೂರಿ
ಇಂದಿನ ಇರಾನ್ ಪ್ರಾಂತ್ಯದಲ್ಲಿದ್ದ ನಿಶಾಪುರ ಎಂಬ ಪಟ್ಟಣದಲ್ಲಿ ಅತ್ತಾರ್ ಎಂಬ ಕವಿ ಮತ್ತು ಸೂಫಿ ಸಂತನಿದ್ದ. ಈತನ ಕಾಲ ಸುಮಾರು 1145-1220. ಆತ ಅಧ್ಯಾತ್ಮ ಪಥವನ್ನು ಅನುಸರಿಸುವ ಮೊದಲು, ಔಷಧಗಳನ್ನು ನೀಡುವ ಪಂಡಿತನ ಕೆಲಸ ಮಾಡುತ್ತಿದ್ದ. ಈತ ನೀಡುವ ಔಷಧಗಳು ಪರಿಣಾಮಕಾರಿ ಯಾಗಿದ್ದುದರಿಂದ, ಸಾಕಷ್ಟು ರೋಗಿಗಳು ಸದಾಕಾಲ ಅವನನ್ನು ಮುತ್ತಿಕೊಂಡಿರುತ್ತಿದ್ದರು.

ಹಲವು ವರ್ಷಗಳ ಕಾಲ ಈ ವೃತ್ತಿಯನ್ನು ಮಾಡಿದ್ದರಿಂದ, ಆತ ಸ್ಥಿತಿವಂತನೂ ಆಗಿದ್ದ. ಒಂದು ದಿನ ಅತ್ತಾರನು ತನ್ನ ಅಂಗಡಿಯಲ್ಲಿ ಕಾರ್ಯನಿರತನಾಗಿದ್ದ. ಆ ದಿನ ಬಹಳಷ್ಟು ರೋಗಿಗಳು ಅವನಿಂದ ಔಷಧ ಪಡೆಯಲು ಕಾಯತ್ತಾ ನಿಂತಿದ್ದರು. ಆ ಸಮಯಕ್ಕೆ ಅಲ್ಲಿಗೆ ಒಬ್ಬ ದರ್ವೇಶಿ (ಸನ್ಯಾಸಿ) ಬಂದು, ‘ಭಿಕ್ಷೆ ಕೊಡು’ ಎಂದು ಕೇಳತೊಡಗಿದ. ಆದರೆ, ಅತ್ತಾರನಿಗೆ ಈ ದರ್ವೇಶಿಯನ್ನು ಮಾತನಾಡಿಲು ಸಮಯವೇ ಇರಲಿಲ್ಲ. ಜತೆಗೆ, ಮುತ್ತಿಕೊಂಡಿದ್ದ ರೋಗಿಗಳು, ಬೇಗನೆ ಔಷಧ ನೀಡುವಂತೆ ಮನವಿ ಮಾಡುತ್ತಿದ್ದರು. ಆ ದರ್ವೇಶಿಯು ಮತ್ತೆ ಮತ್ತೆ ಭಿಕ್ಷೆಗಾಗಿ ಪೀಡಿಸುತ್ತಾ,ದೊಡ್ಡ ದನಿಯಲ್ಲಿ ಕೇಳುತ್ತಿದ್ದ. ಕೆಲಸದ ಒತ್ತಡ ದಲ್ಲಿದ್ದ ಅತ್ತಾರನು, ಆ ಮಾತು ಗಳನ್ನು ಕೇಳಿಸಿಕೊಳ್ಳದವನಂತೆ ನಟಿಸಿದ.

ಭಿಕ್ಷೆಗಾಗಿ ಆತನ ಅಂಗಡಿಯ ಮುಂದೆ ಬಹಳ ಹೊತ್ತು ಕೇಳಿಕೊಂಡ ಆ ದರ್ವೇಶಿಯು, ಕೊನೆ ಕೊನೆಗೆ ತಾಳ್ಮೆ ಕಳೆದುಕೊಂಡು, ದೊಡ್ಡ ದನಿಯಲ್ಲಿ ಅತ್ತಾರನನ್ನು ಕರೆದ. ‘ಅತ್ತಾರ್, ನೀನು ನನ್ನ ಮಾತನ್ನು ಕೇಳಿಸಿಕೊಳ್ಳದೇ ಇರುವ ರೀತಿ ಕಂಡು ನನಗೆ ಆಶ್ಚರ್ಯವಾಗಿದೆ. ನನಗೆ ಕೋಪವೂ ಬರುತ್ತಿದೆ. ನೀನು ನಿನ್ನ ಪಾಡಿಗೆ ವ್ಯಾಪಾರ ಮಾಡುತ್ತಿದ್ದೀಯೆ. ಸುತ್ತಲೂ ಮುತ್ತಿದ ರೋಗಿಗಳೇ ನಿನಗೆ ಹೆಚ್ಚಾದರೆ?’ ಎಂದು ಕೇಳಿದ. ‘ನಿಜ, ನಾನು ನನ್ನ ಕರ್ತವ್ಯವನ್ನು ಮಾಡುತ್ತಿದ್ದೇನೆ. ಈ ರೋಗಿಗಳಿಗೆ ಔಷಧ ತಯಾರಿಸಿ ಕೊಡುವುದೇ ನನ್ನ ಮುಖ್ಯ ಕೆಲಸ. ಅದಕ್ಕೆ ಭಂಗ ಬಂದರೆ ನಾನು ಸಹಿಸುವುದಿಲ್ಲ.ನೀನು ಹೀಗೆ ಕೂಗಿದರೆ, ನನಗೂ ಕೂಗುವು ದಕ್ಕೆ ಬರುತ್ತದೆ. ಸುಮ್ಮನಿರು ಈಗ’ ಎಂದು ಅತ್ತಾರನೂ ತಿರುಗಿ ಗದರಿಸಿದ.

‘ಏ ಅತ್ತಾರ್, ನಿನಗೇನಾಗಿದೆ? ಔಷಧ ತಯಾರಿಸುವುದೇ ನಿನ್ನಮುಖ್ಯ ಕೆಲಸವೆ? ನಿನ್ನ ಮುಖ್ಯ ಉದ್ಯೋಗ ಬೇರೆಯೇ ಇದೆ. ಬದುಕಿನಲ್ಲಿ ನೀನು ಬೇರೇನೋ ಆಗಬೇಕಿದೆ. ಹಣ ಪಡೆದು ಔಷಧ ಕೊಡುತ್ತಾ ಈ ಜೀವನವನ್ನು ಕಳೆಯುವುದು ನಿನ್ನ ಗುರಿ ಅಲ್ಲ’ ಎಂದು ಆ ದರ್ವೇಶಿ. ‘ಸರಿ. ಈಗ ನನಗೆ ಕೆಲಸ ಮಾಡಲು ಬಿಡು’ ಎಂದು ಅತ್ತಾರ್, ತನ್ನ ರೋಗಿಗಳಿಗೆ ಔಷಧ ನೀಡುವುದನ್ನು ಮುಂದುವರಿಸಿದ.

‘ಇಷ್ಟೇನಾ ನಿನ್ನ ನಿಯತ್ತು? ನನಗೆ ಈಗ ನಿಜಕ್ಕೂ ಅಚ್ಚರಿಯಾಗುತ್ತಿದೆ. ಈ ರೀತಿ ಕೆಲಸ ಮಾಡುತ್ತಾ, ಮಾಡುತ್ತಾ ಇರುವೆಯ್ಲಾ, ನೀನು ಸಾಯುವುದು ಹೇಗೆ ಗೊತ್ತಾ?’ ಎಂದ ದರ್ವೇಶಿ. ‘ನೀನು ಸತ್ತಂತೆಯೇ ನಾನೂ ಸಾಯುವುದು’ ಎಂದು ಅತ್ತಾರ್ ಗದರಿ ಉತ್ತರಿಸಿದ. ‘ನೀನು ನಿಜವಾಗಿಯೂ ಹಾಗೆ ಹೇಳುತ್ತಿರು ವೆಯಾ? ಈ ನಿನ್ನ ಉತ್ತರ ನಿನ್ನ ಹೃದಯದಿಂದ ಬಂದ ಮಾತುಗಳೇ?’ ಎಂದು ದರ್ವೇಶಿಯು ಮತ್ತಷ್ಟು ದೊಡ್ಡ ದನಿಯಲ್ಲಿ ಕೇಳಿದ. ಅತ್ತಾರನಿಗೆ ಸಹನೆಯ ಕಟ್ಟೆ ಒಡೆಯಿತು. ‘ಹೌದು’ ಎಂದ. ತಕ್ಷಣ ಆ ದರ್ವೇಶಿಯು ತನ್ನ ಭಿಕ್ಷಾಪಾತ್ರೆಯನ್ನು ಕೆಳಗೆ ಎಸೆದು, ಅತ್ತಾರದ ಅಂಗಡಿಯ ಮುಂದೆ, ಬೀದಿಯ ದೂಳಿನಲ್ಲಿ ಮಲಗಿದ.
ಜತೆಗೆ ದೊಡ್ಡ ದನಿಯಲ್ಲಿ ‘ಓ ದೇವರೇ, ನಿನ್ನ ಕರುಣೆ ನನ್ನ ಮೇಲಿರಲಿ’ ಎಂದು ಕೂಗಿದ.

ಅತ್ತಾರನು ನೋಡನೋಡುತ್ತಿದ್ದಂತೆಯೇ, ಆ ದರ್ವೇಶಿಯು ಮಲಗಿದಲ್ಲೇ ಇಹಲೋಕ ತ್ಯಜಿಸಿದ. ಒಂದೇ ಕ್ಷಣದಲ್ಲಿ ದೇಹತ್ಯಾಗ ಮಾಡಿದ ಆ ದರ್ವೇಶಿಯನ್ನು ಕಂಡು ಅತ್ತಾರನು ನಿಜಕ್ಕೂ ವಿಚಲಿತ ನಾದ. ನೆರೆದಿದ್ದ ಜನರು ಗುಜು ಗುಜು ಎನ್ನತೊಡಗಿದರು. ಔಷಧ ತಯಾರಿಸುವುದನ್ನು ನಿಲ್ಲಿಸಿ, ಅತ್ತಾರನು ಅಲ್ಲೇ ಮೂಲೆ ಯಲ್ಲಿ ಕುಳಿತು, ‘ನಿಜವಾಗಿಯೂ ತನ್ನ ಜೀವನದ ಗುರಿ ಏನು? ಈ ರೀತಿ ಅಂಗಡಿಯಲ್ಲಿ ಕುಳಿತು ದಿನ ಕಳೆಯುವುದೇ ಅಥವಾ ಈ ಜಗತ್ತಿನ ವಿಸ್ಮಯಗಳನ್ನು ಅರಸುವುದೆ?’ ಎಂದು ಯೋಚಿಸಿದ.

ಮರುದಿನದಿಂದ ಅತ್ತಾರನು ತನ್ನ ಅಂಗಡಿಯನ್ನು ಮುಚ್ಚಿದ. ತನ್ನೆಲ್ಲಾ ಸಂಪತ್ತನ್ನು ಇದ್ದಲ್ಲೇ ಬಿಟ್ಟ. ಬೆಲೆಬಾಳುವ ಬಟ್ಟೆಯನ್ನು ತ್ಯಜಿಸಿ, ಸನ್ಯಾಸಿಗಳು ಧರಿಸುವಂತೆ ಬಟ್ಟೆ ಧರಿಸಿ, ಕೈಯಲ್ಲಿ ಒಂದು ಭಿಕ್ಷಾ ಪಾತ್ರೆ ಹಿಡಿದು, ಅಧ್ಯಾತ್ಮ ಪಥವನ್ನು ಹುಡುಕುತ್ತಾ ಹೊರಟ. ನಂತರದ ವರ್ಷಗಳಲ್ಲಿ ಆತನೊಬ್ಬ ಅಧ್ಯಾತ್ಮ ಕವಿ ಮತ್ತು ಸೂಫಿ ಚಿಂತಕನ ಸ್ಥಾನ ಪಡೆದು, ಹಲವರಿಗೆ ಮಾರ್ಗದರ್ಶನ ನೀಡಿದ. ಆತನ ಶಿಷ್ಯರಲ್ಲಿ ರೂಮಿಯೂ ಒಬ್ಬನು.