Friday, 13th December 2024

ಕೋವಿಡ್ ಸಾಂಕ್ರಾಮಿಕ ಪ್ರತಿರೋಧ ವ್ಯವಸ್ಥೆಯನ್ನು ಬದಲಿಸುವುದೇ ?

ವೈದ್ಯವೈವಿಧ್ಯ

ಡಾ.ಎಚ್.ಎಸ್‌.ಮೋಹನ್‌

ಈ ಕೋವಿಡ್ ಸಾಂಕ್ರಾಮಿಕ ಕಾಣಿಸಿಕೊಂಡು ಒಂದು ವರ್ಷಕ್ಕೂ ಜಾಸ್ತಿ ಸಮಯ ಆಯಿತು. ಈ ಅವಧಿಯಲ್ಲಿ ಜಗತ್ತಿನ ಹೆಚ್ಚು ಜನತೆ ಲಾಕ್ ಡೌನ್ ಕಾನೂನು, ಕ್ವಾರಂಟೈನ್ ಹಾಗೂ ದೈಹಿಕವಾದ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಕೈಗೆ ಸ್ಯಾನಿ ಟೈಸರ್ ಉಪಯೋಗಿಸುವುದು (ತುಂಬಾ ದಿನಗಳವರೆಗೆ) ಈ ರೀತಿಯಲ್ಲಿ ಕಳೆದಿದ್ದಾರೆ.

ಈ ಅವಧಿಯಲ್ಲಿ ಎಂದಿನ ಶೀತ, ನೆಗಡಿ ಇವೆ ಮುಖ್ಯ ಎನಿಸಿಲ್ಲ. ಈ ರೀತಿಯ ನಮ್ಮ ಜೀವನ ಶೈಲಿಯ ಬದಲಾವಣೆ ನಮ್ಮ ಆರೋಗ್ಯದ ಮೇಲೆ ಯಾವ ತರಹದ ಪರಿಣಾಮಗಳನ್ನು ಬೀರಿದೆ? ಈ ಲಾಕ್ ಡೌನ್ ವಯಸ್ಕರ, ಮಕ್ಕಳ ಮತ್ತು ಇನ್ನೂ ಚಿಕ್ಕ ಮಕ್ಕಳ ಪ್ರತಿರೋಧ ವ್ಯವಸ್ಥೆಯ ಮೇಲೆ ಯಾವ ಪರಿಣಾಮಗಳನ್ನು ಬೀರಿದೆ? ಸಾಮಾನ್ಯ ಜನತೆ ಈಗ ಇತರರೊಡನೆ ಮೊದಲಿ ನಂತೆ ಸರಿಯಾಗಿ ಮಿಕ್ಸ್ ಆಗುತ್ತಿಲ್ಲವಾದ್ದರಿಂದ ನಮ್ಮ ಪ್ರತಿರೋಧ ವ್ಯವಸ್ಥೆ (Immune system)ಗೆ ತೀವ್ರವಾದ ಸಮಸ್ಯೆ ಎದುರಾಗಿದೆಯೇ ಎಂದು ಕೆಲವರು ಸಂದೇಹಿಸುತ್ತಿದ್ದಾರೆ.

ಹೀಗೆಯೇ ಮುಂದುವರಿದರೆ ವಿವಿಧ ಕಾಯಿಲೆ ತರುವ ಸೂಕ್ಷ್ಮಜೀವಿಗಳನ್ನು ಗುರುತಿಸಲು ನಮ್ಮ ಪ್ರತಿರೋಧ ವ್ಯವಸ್ಥೆ ಮರೆತು
ಬಿಡುತ್ತದೆಯೇ? ಆದರೆ ವಯಸ್ಕರಲ್ಲಿ ಮತ್ತು ಸ್ವಲ್ಪ ಬೆಳೆದ ಮಕ್ಕಳಲ್ಲಿ ಈ ರೀತಿಯಲ್ಲಿ ಆಗುವುದಿಲ್ಲ ಎಂಬುದು ಒಂದು ಒಳ್ಳೆಯ ಸಮಾಚಾರ. ಅಮೆರಿಕದ ಎಂಐಟಿ ಮೆಡಿಕಲ್ ಸಂಸ್ಥೆಯ ಪ್ರಕಾರ ಒಬ್ಬ ವ್ಯಕ್ತಿ ವಯಸ್ಕತನವನ್ನು ತಲುಪುತ್ತಿದ್ದ ಹಾಗೇ ಅವರ ಪ್ರತಿರೋಧ ವ್ಯವಸ್ಥೆಯು ಹಲವಾರು ಬ್ಯಾಕ್ಟೀರಿಯಾ ಮತ್ತು ವೈರಸ್‌ಗಳಿಗೆ ಒಡ್ಡಲ್ಪಟ್ಟಿರುತ್ತದೆ.

ಹಾಗಾಗಿ ಇವು ದೇಹವನ್ನು ಆಕ್ರಮಿಸಲು ಪ್ರಯತ್ನಿಸಿದಾಗ ನಮ್ಮ ಪ್ರತಿರೋಧ ವ್ಯವಸ್ಥೆ ಅವುಗಳ ವಿರುದ್ಧ ಹೋರಾಡುತ್ತದೆ. ಹಾಗಾಗಿ ಈ ವಯಸ್ಸಿನವರಲ್ಲಿ ಅಂದರೆ ವಯಸ್ಕರು ಮತ್ತು ದೊಡ್ಡ ಮಕ್ಕಳಲ್ಲಿ ನಮ್ಮ ದೇಹದ ಪ್ರತಿರೋಧ ವ್ಯವಸ್ಥೆ ಹೊರಗಿನ ಸೂಕ್ಷ್ಮ ಜೀವಿಗಳ ವಿರುದ್ಧ ಹೋರಾಡುವುದನ್ನು ಕಲಿತದ್ದರಿಂದ ದೀರ್ಘ ಕಾಲದ ಈ ಲಾಕ್ ಡೌನ್ ಅವಧಿ ಇದ್ದರೂ ಅವುಗಳ ವಿರುದ್ಧ ಹೋರಾಡುವ ಕ್ರಮದಲ್ಲಿ ಏನೂ ವ್ಯತ್ಯಾಸವಾಗುವುದಿಲ್ಲ.

ಹಾಗಾದರೆ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಈ ವ್ಯವಸ್ಥೆ ಹೇಗೆ ಕೆಲಸ ಮಾಡುತ್ತದೆ? ಏಕೆಂದರೆ ಅವರ ಪ್ರತಿರೋಧ ವ್ಯವಸ್ಥೆ ಇನ್ನೂ
ಕಲಿಯುವ ಹಂತದಲ್ಲಿರುತ್ತದೆ. ಮಕ್ಕಳಲ್ಲಿ ವೈರಸ್ ಸೋಂಕಿನ ಪ್ರಮಾಣವನ್ನು ಕಡಿಮೆ ಮಾಡಲು ಅವರ ಕೈಗಳನ್ನು ಆಗಾಗ
ಸ್ವಚ್ಛಗೊಳಿಸುತ್ತಿರಬೇಕು. ಈ ರೀತಿಯ ಕ್ರಮಗಳನ್ನು ಮೊದಲಿನಿಂದ ಜಾರಿಗೆ ತಂದಾಗ ಅವರು ಈ ಸೂಕ್ಷ್ಮ ಜೀವಿಗಳಿಗೆ ಕಡಿಮೆ ಪ್ರಮಾಣದಲ್ಲಿ ಒಡ್ಡಿಕೊಳ್ಳುವುದರಿಂದ ಅವರು ಹೆಚ್ಚಾಗಿ ಅಲರ್ಜಿ ಸಂಬಂಧ ಕಾಯಿಲೆಗಳಿಗೆ ಒಳಗಾಗುತ್ತಾರೆ ಎನ್ನಲಾಗಿದೆ. ಇದನ್ನು ಹೈಜೀನ್ ಹೈಪಾಥಿಸಿಸ್ ಎನ್ನುತ್ತಾರೆ.

ಈ ರೀತಿಯ ಸಂಬಂಧವನ್ನು 1989ರಲ್ಲಿ ಡಾ.ಡೇವಿಡ್ ಸ್ಟ್ರಾಚನ್ ಎಂಬ ವಿಜ್ಞಾನಿ ಬ್ರಿಟಿಷ್ ಮೆಡಿಕಲ್ ಜರ್ನಲ್‌ನ ಒಂದು ಲೇಖನದಲ್ಲಿ ಪ್ರತಿಪಾದಿಸಿದ. 2016ರಲ್ಲಿ ಪ್ರೊ.ಸಾಲಿ ಬ್ಲೂಮ್ ಫೀಲ್ಡ ಮತ್ತು ಆತನ ಸಹೋದ್ಯೋಗಿಗಳು Perspectives in Public
Health ಎಂಬ ಜರ್ನಲ್‌ನ ಒಂದು ಲೇಖನದಲ್ಲಿ ಈ ಬಗ್ಗೆ ಪುನರ್ ವಿಮರ್ಶಿಸಿದರು. ಅವರುಗಳ ಅನಿಸಿಕೆ – ನಮ್ಮ ಪ್ರತಿರೋಧ ವ್ಯವಸ್ಥೆಯು ಸದಾ ಹೊಸತನ್ನು ಕಲಿಯುತ್ತಿರುತ್ತದೆ.

ನಾವು ಹುಟ್ಟಿದಾಗ ಅದು ಹಾರ್ಡ್ ವೇರ್, ಸಾಫ್ಟ್ ವೇರ್ ಮತ್ತು ಕೆಲವು ಮಾಹಿತಿಗಳನ್ನೊಳಗೊಂಡ ಕಂಪ್ಯೂಟರ್ – ಈ ರೀತಿ ಯಲ್ಲಿರುತ್ತದೆ. ಉಳಿದ ಹೆಚ್ಚಿನ ಮಾಹಿತಿಯು ಮಗುವಿನ ಮೊದಲ ವರ್ಷದಲ್ಲಿ ಹೆಚ್ಚೆಚ್ಚು ಸೂಕ್ಷ್ಮ ಜೀವಿಗಳೊಂದಿಗೆ, ಬೇರೆಯ ವ್ಯಕ್ತಿಗಳೊಂದಿಗೆ ಹಾಗೂ ಹೊರಗಿನ ಸಾಮಾನ್ಯ ವಾತಾವರಣದ ಸಂಪರ್ಕದಿಂದ ಲಭ್ಯವಾಗುತ್ತದೆ. ಯಾವುದೇ ಕಾರಣಗಳಿಂದ ಈ ರೀತಿಯ ಮಾಹಿತಿಗಳ ಪ್ರಮಾಣ ಕಡಿಮೆಯಾದರೆ, ಹಾಗಲ್ಲದೆ ಮಾಹಿತಿಗಳು ಸೂಕ್ತವಾಗಿಲ್ಲದಿದ್ದರೆ ನಮ್ಮ ಪ್ರತಿರೋಧ ವ್ಯವಸ್ಥೆಯ ನಿಯಂತ್ರಣ ಏರುಪೇರಾಗುತ್ತದೆ. ಹಾಗಾದಾಗ ದೇಹಕ್ಕೆ ಅಪಾಯ ತಂದೊಡ್ಡುವ ಸೂಕ್ಷ್ಮ ಜೀವಿಗಳು ದೇಹವನ್ನು ಆಕ್ರಮಿಸುವುದೇ ಅಲ್ಲದೆ ತೀವ್ರ ರೀತಿಯ ಸೋಂಕು ರೋಗಗಳು ದೇಹವನ್ನು ಆಕ್ರಮಿಸುತ್ತವೆ.

ಹಾಗಲ್ಲದೇ ಸಾಮಾನ್ಯವಾಗಿ ಅಪಾಯಕಾರಿ ವಸ್ತುಗಳಲ್ಲದ ಪೋಲೆನ್‌ಗಳು, ಮನೆಯಲ್ಲಿನ ಸೂಕ್ಷ್ಮ ಧೂಳುಗಳು, ಆಹಾರದಲ್ಲಿರುವ ಅಲರ್ಜಿ ಅಂಶಗಳು – ಇವೆ ದೇಹಕ್ಕೆ ತೀವ್ರ ರೀತಿಯ ಅಲರ್ಜಿ ಕಾಯಿಲೆ ಬರಲು ಕಾರಣವಾಗುತ್ತವೆ. ಐರ್ಲೆಂಡಿನ ಡಬ್ಲಿನ್‌ನ ಆರ್‌ಸಿಎಸ್‌ಐ ಯುನಿವರ್ಸಿಟಿ ಆಫ್ ಮೆಡಿಸಿನ್ ಮತ್ತು ಹೆಲ್ತ ಸೈನ್ಸ್ ನ ಪ್ರೊ.ಜೋನಾಥನ್ ಹೌರಿಹೇನ್ ಅವರ ಪ್ರಕಾರ
ಎಕ್ ಸೀಮಾ, ಅಸ್ತಮಾ, ಹೇ ಜ್ವರ ಮತ್ತು ಆಹಾರದ ಅಲರ್ಜಿಗಳು ಕಳೆದ 30 ವರ್ಷಗಳಲ್ಲಿ ಜಾಸ್ತಿಯಾಗಿವೆ.

ಕಾರಣ ಎಂದರೆ ನಮ್ಮ ಪ್ರತಿರೋಧ ವ್ಯವಸ್ಥೆ ಮತ್ತು ಸೂಕ್ತ ಸೋಂಕು ರೋಗಗಳಿಗೆ ಒಡ್ಡಿಕೊಳ್ಳದಿರುವುದರಿಂದ ಅವರ ಪ್ರಕಾರ ಮಕ್ಕಳು ನೆಲದಲ್ಲಿ ಆಡಿ ಮಣ್ಣು ಕಸಗಳೊಂದಿಗೆ ಒಳಗೊಳ್ಳಬೇಕು, ಹಲವಾರು ಜನರೊಂದಿಗೆ ಬೆರೆಯಬೇಕು, ಹಾಗೆಯೇ ಹೊರ ಗಿನ ತಾವರಣದಲ್ಲಿಯೂ ತಮ್ಮನ್ನು ತೊಡಗಿಸಿಕೊಳ್ಳಬೇಕು. ಹೀಗೆ ಮಾಡುವುದರಿಂದ ಗಟ್ಟಿ ಮತ್ತು ಬಲಿಷ್ಠವಾದ ಪ್ರತಿರೋಧ ವ್ಯವಸ್ಥೆ ರೂಪುಗೊಳ್ಳುತ್ತದೆ.

ಹಾಗೆಯೇ ನಮ್ಮ ಕರುಳಿನಲ್ಲಿ ಆರೋಗ್ಯಕರ ಬ್ಯಾಕ್ಟೀರಿಯಾಗಳ ಸಂಖ್ಯೆ ವೃದ್ಧಿಗೊಳ್ಳುತ್ತದೆ. ಪ್ರೊ.ಬ್ಲೂಮ್ ಫೀಲ್ಡ್ ಮತ್ತು ಅವರ
ಸಹೋದ್ಯೋಗಿಗಳ ಪ್ರಕಾರ ಈಗ ಲಭ್ಯವಿರುವ ಪುರಾವೆಗಳ ಪ್ರಕಾರ ಸೂಕ್ಷ್ಮ ಜೀವಿಗಳು – ನಮ್ಮ ದೇಹ ಇವುಗಳ ನಡುವಿನ ಪ್ರಕ್ರಿಯೆಗಳು ಪ್ರತಿರೋಧ ವ್ಯವಸ್ಥೆಯನ್ನು ಬಲಿಷ್ಠಗೊಳಿಸುತ್ತವೆ ಎಂಬ ಥಿಯರಿ ಯನ್ನು ತುಷ್ಟೀಕರಿಸುತ್ತವೆ. ಹಾಗಾಗಿ ಮೊದಲು ವ್ಯಕ್ತಪಡಿಸಿದ ಹೈಜೀನ್ ಹೈಪಾಥಿಸಿಸ್ ಎಂಬುದು ಸರಿಯಲ್ಲ. ಅದು ದಾರಿ ತಪ್ಪಿಸುತ್ತದೆ.

ಹೆಚ್ಚಿನ ಹೊರಗಿನ ವಾತಾವರಣಕ್ಕೆ, ಕಸ ಕಡ್ಡಿಗಳಿಗೆ ಒಡ್ಡಿಕೊಳ್ಳದೆ ಸ್ವಚ್ಛವಾಗಿರುವುದರಿಂದ ದೇಹಕ್ಕೆ ಏನೂ ಒಳ್ಳೆಯ ದಾಗುವುದಿಲ್ಲ. 2016ರ ಆ ಸಂಶೋಧನಾ ಪ್ರಬಂಧದಲ್ಲಿ ಅವರು ಸ್ವಚ್ಚತಾ ಕಾರಣಗಳಿಂದ ಸೋಂಕಿನ ರೀತಿಯ ಕಾಯಿಲೆಗಳು ಹೆಚ್ಚುತ್ತಿವೆ. ಇದು ಈಗಿನ ಕೋವಿಡ್ ಕಾಯಿಲೆಯ ಸಂದರ್ಭದಲ್ಲಿ ತುಂಬಾ ಮುಖ್ಯ ಎಂದು ಅವರ ಅನಿಸಿಕೆ. ಈ ರೀತಿಯ
ವೈರಸ್‌ಗಳನ್ನು ನಾವು ಕೈ ತೊಳೆಯುವುದು, ನೆಲವನ್ನು ಸ್ವಚ್ಛಗೊಳಿಸುವುದು ಕ್ರಿಯೆಗಳಿಂದ ಹಾಗೂ ಆಂಟಿಬಯೋಟಿಕ್ ಔಷಧಗಳಿಂದ ಚಿಕಿತ್ಸೆ ಮಾಡಲು ಸಾಧ್ಯವಿಲ್ಲ. ಹಾಗೆಯೇ ಅವರು ಪೋಸ್ಟ್ – ಹೈಜೀನ್ ಹೈಪಾಥಿಸಿಸ್ ಎಂಬ ಥಿಯರಿಯನ್ನು
ಪ್ರತಿಪಾದಿಸುತ್ತಾರೆ.

2003ರಲ್ಲಿ ಮೊದಲ ಬಾರಿಗೆ ಹೊರ ಬಂದ ಇದರಲ್ಲಿ ಜೀವಿಯ ಆರಂಭದ ದಿನಗಳಲ್ಲಿ ಶೀತ, ಮೀಸಲ್ಸ ಅಥವಾ ಇತರ ಮಕ್ಕಳ ಕಾಯಿಲೆಗಳಿಗೆ ಒಳಗೊಳ್ಳುವುದು ಮುಖ್ಯವಲ್ಲ. ಆದರೆ ಪ್ರತಿರೋಧ ವ್ಯವಸ್ಥೆ ರೂಪುಗೊಳ್ಳುತ್ತಿರುವಾಗ ಹೊರಗಿನ ವಾತಾವರಣ ದಲ್ಲಿನ ವಸ್ತುಗಳಿಗೆ ಒಡ್ಡಿಕೊಳ್ಳುವುದು ಮುಖ್ಯ. ಅವೆಂದರೆ ನಮ್ಮ ಸುತ್ತಲಿನ ಜನರ ಚರ್ಮ, ಕರುಳು, ಶ್ವಾಸಾಂಗ ವ್ಯೂಹಗಳಲ್ಲಿ ರುವ ಸೂಕ್ಷ್ಮ ಜೀವಿಗಳು. ಹೀಗೆ ನಮ್ಮ ಪ್ರತಿರೋಧ ವ್ಯವಸ್ಥೆ ಒಂದು ರೀತಿಯ ಸಮತೋಲನ ವ್ಯವಸ್ಥೆಯಲ್ಲಿ ಇರುತ್ತದೆ.

ಹಾಗೆಯೇ ಹೆಚ್ಚಿನ ಅನಗತ್ಯ ಪ್ರತಿಕ್ರಿಯೆ ತೋರಿಸುವುದು ಇಲ್ಲವಾಗುತ್ತದೆ. ಹೀಗೆ ವಿಧ ವಿಧದ ಸೂಕ್ಷ್ಮ ಜೀವಿಗಳಿಗೆ ಒಡ್ಡಿಕೊಂಡಾಗ ದೇಹದ ಪ್ರತಿರೋಧ ವ್ಯವಸ್ಥೆ ಗಟ್ಟಿಗೊಳ್ಳಲು ಅನುಕೂಲ ವಾಗುತ್ತದೆ. ಈ ರೀತಿಯ ಒಡ್ಡುಗೊಳ್ಳುವಿಕೆ ಸ್ತ್ರೀಯರು
ಗರ್ಭಿಣಿಯಾದಾಗ, ಹೆರಿಗೆಯ ಸಮಯದಲ್ಲಿ ಹಾಗೂ ಮಗುವಿನ ಆರಂಭಿಕ ತಿಂಗಳುಗಳು ಮುಖ್ಯವಾದದ್ದು ಎನ್ನಲಾಗುತ್ತದೆ. ತಾಯಿಯಲ್ಲಿನ ಸೂಕ್ಷ್ಮ ಜೀವಿಗಳಿಗೆ ಹೆರಿಗೆಯಾದ ಮಗು ಒಡ್ಡಿಕೊಂಡಷ್ಟೂ ಮಗುವಿಗೆ ತುಂಬಾ ಒಳ್ಳೆಯದು ಎಂದು ಅವರ ಅನಿಸಿಕೆ. ಹಾಗೆಯೇ ಮನೆಯಲ್ಲಿ ಸಾಕು ಪ್ರಾಣಿಗಳು ಇದ್ದರೆ ಮನೆಯಲ್ಲಿನ ಸೂಕ್ಷ್ಮ ಜೀವಿಗಳ ವೈವಿಧ್ಯತೆ ತುಂಬಾ ಜಾಸ್ತಿಯಾಗು ತ್ತದೆ.

ಹ್ಯಾಂಡ್ ಸ್ಯಾನಿಟೈಸರ್‌ಗಳು ಒಳ್ಳೆಯದೋ? ಕೆಟ್ಟದೋ?: ಈಗ ಬಹಳವಾಗಿ ನಾವು ಉಪಯೋಗಿಸುತ್ತಿರುವ ಪದೇ ಪದೆ ಕೈ ತೊಳೆಯುವುದು ಮತ್ತು ಸ್ಯಾನಿಟೈಸರ್ ಉಪಯೋಗ ಯುವಕ ಯುವತಿ ಯರಲ್ಲಿ ಯಾವ ಪರಿಣಾಮ ಬೀರುತ್ತದೆ? ಪ್ರೊ.
ಬ್ಲೂಮ್ ಫೀಲ್ಡ ಅವರ ಪ್ರಕಾರ ಇವು ಏನೂ ಪರಿಣಾಮ ಬೀರುವುದಿಲ್ಲ. ಮನೆಯನ್ನು ಬಹಳ ಸ್ವಚ್ಛಗೊಳಿಸಿ ಸ್ಟರೈಲ್ ಮನೆ ನಿರ್ಮಿಸುತ್ತೇವೆ ಎಂಬ ಭಾವನೆ ತಪ್ಪು.

ನಾವು ಸೂಕ್ಷ್ಮಜೀವಿಗಳನ್ನು ನಾಶಮಾಡಿದ ಹಾಗೂ ಅವು ಹೊರಗಿನ ವಾತಾವರಣದ ಗಾಳಿ ಮತ್ತು ಧೂಳಿನಿಂದ ಪುನಃ
ಕಾಣಿಸಿ ಕೊಳ್ಳುತ್ತವೆ. ಹಾಗೆಯೇ ನಮ್ಮ ಮತ್ತು ನಮ್ಮ ಹತ್ತಿರದ ಸಾಕು ಪ್ರಾಣಿಗಳಿಂದ, ಹಾಗೆಯೇ ನಾವು ಹೊರಗಿನಿಂದ ತರುವ ಆಹಾರ ಪದಾರ್ಥಗಳಿಂದ ಅವು ಪುನಃ ವೃದ್ಧಿಗೊಳ್ಳುತ್ತವೆ. ನಮ್ಮ ಜೀವನ ಶೈಲಿ, ವಾತಾವರಣದ ಬದಲಾವಣೆಗಳು, ಆಹಾರದಲ್ಲಿನ ಬದಲಾವಣೆಗಳು, ಆಂಟಿಬಯೋಟಿಕ್ ಔಷಧಗಳ ಅತಿಯಾದ ಬಳಕೆ ಮತ್ತು ಹೆಚ್ಚುತ್ತಿರುವ ನಗರೀಕರಣ – ಇವೆ ನಾವು ಒಡ್ಡಿಕೊಳ್ಳುವ ಸೂಕ್ಷ್ಮ ಜೀವಿಗಳಲ್ಲಿನ ಬದಲಾವಣೆಗೆ ಕಾರಣವಾಗಿವೆ. ಹಾಗಾಗಿಯೇ ಅಲರ್ಜಿ ಸಂಬಂಧ ಕಾಯಿಲೆಗಳಾದ ಎಕ್ಸೀಮಾ, ಹೇ ಜ್ವರ ಮತ್ತು ಆಹಾರದ ಅಲರ್ಜಿ ಕಾಯಿಲೆಗಳು ಹೆಚ್ಚಾಗಿವೆ.

ಪ್ರೊ. ಬ್ಲೂಮ್ ಫೀಲ್ಡರ ಪ್ರಕಾರ ಹದಿಹರೆಯದ ಮಕ್ಕಳ ಪಾಲಕರಿಗೆ ಧನಾತ್ಮಕ ವಿಷಯ ಏನೆಂದರೆ ಈ ಕೋವಿಡ್ ಕಾಯಿಲೆಯ ಸಂದರ್ಭದಲ್ಲಿ ಸಾಮಾನ್ಯ ರೀತಿಯ ಮಗುವಿನ ಜನನ, ಮಕ್ಕಳಲ್ಲಿ ಮತ್ತು ಸ್ನೇಹಿತರೊಡನೆ ಒಳಗೊಳ್ಳುವ ಬಾಂಧವ್ಯ, ಮನೆಯ
ಹೊರಗಿನ ಆಟ ಹಾಗೂ ಸಾಧ್ಯವಾದಷ್ಟು ಮನೆಯ ಹೊರಗಿನ ಚಟುವಟಿಕೆಗಳು – ಇವುಗಳನ್ನು ನಾವು ಉತ್ತೇಜಿಸಬೇಕು. ಹಾಗೆಯೇ ಮಗುವಿಗೆ ಸಾಧ್ಯವಾದಷ್ಟು ತಾಯಿಯ ಎದೆಯ ಹಾಲನ್ನು ಕುಡಿಸಬೇಕು.

ಸಾಧ್ಯವಾಗದಿದ್ದರೆ ದಾನಮಾಡಲ್ಪಟ್ಟ ಎದೆ ಹಾಲನ್ನಾದರೂ ಕುಡಿಸಬೇಕು. ಪ್ರತಿರೋಧ ವ್ಯವಸ್ಥೆಗೆ ಮಾನಸಿಕ ಪರಿಣಾಮಗಳು
ಏನು ಪರಿಣಾಮ ಬೀರುತ್ತವೆ? ವಯಸ್ಕರು ಮತ್ತು ಮಕ್ಕಳಲ್ಲಿ ಮೊದಲು ತಿಳಿಸಿದಂತೆ ಅವರ ಪ್ರತಿರೋಧ ವ್ಯವಸ್ಥೆಯಲ್ಲಿ ಸೂಕ್ಷ್ಮ ಜೀವಿಗಳಿಗೆ ಸ್ಪಂದಿಸುವ ಶಕ್ತಿ ಈ ಸಾಂಕ್ರಾಮಿಕ ಸಂದರ್ಭದಲ್ಲೂ ಉಳಿದುಕೊಳ್ಳುತ್ತವೆ ಎಂಬುದು ಸಮಾಧಾನಕರ ಅಂಶ. ಆದರೆ ಇಲ್ಲಿ ಗಮನಿಸಬೇಕಾದ ಇನ್ನೊಂದು ಮುಖ್ಯ ಅಂಶ ಎಂದರೆ – ಮಾನಸಿಕ ಒತ್ತಡ.

ಸಂಶೋಧಕರಾದ ಫಲ್ವಿಯೋ ಡಿ ಅಕ್ವಿಸ್ಟೋ ಮತ್ತು ಆಲಿಸ್ ಹೆಮಿಲ್ಟನ್ ಅವರು ಕಾರ್ಡಿಯೋವ್ಯಾಸ್ಕುಲಾರ್ ರೀಸರ್ಚ್ ಜರ್ನಲ್ ನಲ್ಲಿ ತಮ್ಮ ಅಧ್ಯಯನ ಪ್ರಕಟಿಸಿದರು. ಅದರಲ್ಲಿ ಸಾಮಾಜಿಕ ದೈಹಿಕ ಅಂತರವು ಕೋವಿಡ್ ಕಾಯಿಲೆಯನ್ನು ಕಡಿಮೆ ಮಾಡುತ್ತದೆ. ಆದರೆ ಅದು ಹೃದಯ, ರಕ್ತ ನಾಳಗಳು, ಮತ್ತು ಪ್ರತಿರೋಧ ವ್ಯವಸ್ಥೆಯ ಮೇಲೆ ಪರಿಣಾಮ ಹೊಂದಿವೆ. ಇಂಥವ ರಲ್ಲಿ ಅತೀ ಹೆಚ್ಚಿನ ಪ್ರಮಾಣದ ಉರಿಯೂತ (Inflammation) ಇರುತ್ತದೆ. ಅದು ಹೃದಯ ಮತ್ತು ರಕ್ತ ನಾಳಗಳ ಕಾಯಿಲೆ ಬರಲು ಅನುವು ಮಾಡಿಕೊಡುತ್ತದೆ. ವ್ಯಕ್ತಿ ಸಾಮಾಜಿಕವಾಗಿ ಏಕಾಂಗಿಯಾಗುವುದರಿಂದ ಇಂಟರ್-ರಾನ್‌ಗಳ ಮಟ್ಟ ಕಡಿಮೆ ಯಾಗುತ್ತದೆ.

ಪರಿಣಾಮ ಎಂದರೆ ಭವಿಷ್ಯದಲ್ಲಿ ಸೋಂಕು ಆದರೆ ದೇಹವು ಅದಕ್ಕೆ ಅಗತ್ಯ ಪ್ರತಿಕ್ರಿಯೆಗಿಂತ ಕಡಿಮೆ ಪ್ರಮಾಣದ ಪ್ರತಿಕ್ರಿಯೆ ತೋರಿಸುತ್ತದೆ. ಇದರಲ್ಲಿ ಮುಖ್ಯವಾದ ಅಂಶ ಎಂದರೆ ಸಾಮಾಜಿಕ ದೂರ ವಾಗುವಿಕೆಯು ದೈಹಿಕ ಅಂಶಗಳಿಗಿಂತ ಮಾನಸಿಕ
ಅಂಶಗಳು ಹೆಚ್ಚು ಕೆಲಸ ಮಾಡಿ ಮೇಲಿನ ಪರಿಣಾಮಕ್ಕೆ ಕಾರಣವಾಗುತ್ತವೆ ಎನ್ನಲಾಗಿದೆ. ಹಾಗೆಯೇ ಲಾಕ್ ಡೌನ್ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಅವಧಿ ಜಾಸಿಯಾಗುತ್ತಿದ್ದಂತೆಯೇ ವ್ಯಕ್ತಿಯಲ್ಲಿ ಒಂದು ರೀತಿಯ ಅಸಮಾಧಾನ ಮತ್ತು ಏಕಾಂಗಿತನದ ಅನುಭವ ಹೆಚ್ಚಾಗುತ್ತದೆ.

ಅದು ವ್ಯಕ್ತಿಯ ದೇಹದ ಪ್ರತಿರೋಧ ವ್ಯವಸ್ಥೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಸ್ಟಾನಫೋರ್ಡ್ ವಿಶ್ವವಿದ್ಯಾಲಯದ
ಸಂಶೋಧಕ ಫಿರ್ದಾಸ್ ದಾಬರ್ ಅವರು ಇಮ್ಯುನೊಲಾಜಿಕಲ್ ರೀಸರ್ಚ್ ಎನ್ನುವ ಜರ್ನಲ್ ನಲ್ಲಿ ದೀರ್ಘ ಅವಧಿಯ ಮಾನಸಿಕ ತ್ತಡವು ದೇಹವನ್ನು ರಕ್ಷಿಸುವ ಪ್ರತಿರೋಧ ಪ್ರಕ್ರಿಯೆಯನ್ನು ಅದುಮಿಟ್ಟು ಅಥವಾ ನಿಗ್ರಹಿಸಿ ದೇಹಕ್ಕೆ ಕಾಯಿಲೆ ತರುವ ಪ್ರತಿರೋಧ ಪ್ರಕ್ರಿಯೆ ಯನ್ನು ಉತ್ತೇಜಿಸುತ್ತದೆ ಎಂದು ನುಡಿಯುತ್ತಾರೆ.

ಜನರಿಂದ ದೂರವಿರುವ ಏಕಾಂಗಿತನ ತತ್ಪರಿಣಾಮದ ಮಾನಸಿಕ ಒತ್ತಡ ಮತ್ತು ಸಾಂಕ್ರಾಮಿಕ – ಇವೆ ಪ್ರತಿರೋಧ ವ್ಯವಸ್ಥೆಯ ಮೇಲೆ ಋಣಾತ್ಮಕ ಪರಿಣಾಮವನ್ನು ಬೀರುತ್ತವೆ.