Saturday, 14th December 2024

ಸಮಾಜ ಪ್ರಾಮಾಣಿಕತೆ ಬಯಸುತ್ತಿಲ್ಲವೇ ? ಬೆಳೆಸುತ್ತಿಲ್ಲವೇ ?

ಅಭಿಮತ

ಪಿ.ಪ್ರತಾಪ್ ಕೊಡಂಚ

ಸಮಾಜದಲ್ಲಿ ನೈತಿಕ ಮೌಲ್ಯಗಳು ಮರೆಯಾಗುತ್ತಿವೆ. ಪ್ರಾಮಾಣಿಕರಿಗೆ, ಸತ್ಯವಂತರಿಗೆ ಇದು ಕಾಲವಲ್ಲ. ಕಲಿಯುಗದ ಮಹಿಮೆ! ನಾವಿನ್ನೇನೂ ನೋಡಬೇಕಿ ದೆಯೋ?, ಎಂಬ ಹತಾಶೆಯ ಮಾತುಗಳು ನಾವೆಲ್ಲರೂ ಆಗಾಗ ಕೇಳಿಯೇ ಇದ್ದೇವೆ. ಪರಿಸ್ಥಿತಿಯೇ ಹೀಗಿರುವಾಗ, ರಾಜಕೀಯದಲ್ಲಿ ಇನ್ನೇನು ನೀರಿಕ್ಷಿಸಲು  ಸಾಧ್ಯ? ಪ್ರಸ್ತುತ ಪ್ರಾಮಾಣಿಕತೆ ಎಂಬುದು ಬಹುತೇಕ ದಂತಕತೆ. ಹೀಗಿದ್ದರೂ, ಇವತ್ತಿಗೂ ರಾಜಕೀಯದಲ್ಲಿ, ಎಲ್ಲ ರಾಜಕೀಯ ಪಕ್ಷಗಳಲ್ಲಿಯೂ ಶುದ್ಧ ಹಸ್ತದ ರಾಜಕಾರಣಿಗಳು ಖಂಡಿತಾ ಇದ್ದಾರೆ. ಸಂಖ್ಯೆ ತೀರಾ ವಿರಳವಿರಬಹುದು.

ಆಳಕ್ಕಿಳಿದು ಯೋಚಿಸಿದಾಗ ರಾಜಕಾರಣಿಗಳನ್ನು ಪ್ರಾಮಾಣಿಕರಾಗಿ ಕಾಣಬಯಸುವ, ನಾವೆಷ್ಟು ಪ್ರಾಮಾಣಿ ಕರು? ಎಂಬ ಪ್ರಶ್ನೆಯೂ ಮೂಡುತ್ತದೆ. ಪ್ರಾಮಾಣಿಕ ರಾಗಿಯೇ ಸಮಾಜ ಸೇವೆಗಿಳಿದ ಬಹುತೇಕರನ್ನು ಭ್ರಷ್ಟ ರಾಗಿಸಿದ್ದರಲ್ಲಿ ಸಿಂಹಪಾಲು, ಸಮಾಜ, ನಮ್ಮೆಲ್ಲರದೂ ಇದೆಯಂಬುದು ಕಟು ಸತ್ಯ. ಇತ್ತೀಚಿಗೆ ಕರ್ನಾಟಕ ದಲ್ಲಿ ನಡೆದ ಕೆಲವು ಘಟನೆಗಳ ಹಿನ್ನೆಲೆಯಲ್ಲಿ ಅವಲೋಕಿಸಿದಾಗ ಹೊರಬಂದಿದ್ದು ಇನ್ನಷ್ಟು ಪ್ರಶ್ನೆಗಳೇ! ಅದನ್ನೇ ತೆರೆದಿಡುವ ಕಿರು ಪ್ರಯತ್ನವಿದು.

ಕರ್ನಾಟಕದಲ್ಲಿ ಹೊಸ ಮುಖ್ಯಮಂತ್ರಿ ಪ್ರಮಾಣವಚನ ಸ್ವೀಕರಿಸುತ್ತಲೇ, ಹಿಂದೆ ಸಚಿವರಾಗಿದ್ದ ಕೋಟ ಶ್ರೀನಿವಾಸ ಪೂಜಾರಿಯವರು, ಸರಕಾರಿ ವಾಹನವನ್ನು ರಾಜಭವನದ ಹಿಂತಿರುಗಿಸಿ, ಟಾಕ್ಸಿಯಲ್ಲಿ ತೆರಳುವ ಮೂಲಕ ಪ್ರಬುದ್ಧ, ಅನುಕರಣೀಯ ನಡತೆ ತೋರಿದ್ದರು. ಅದು ಅಷ್ಟೇನೂ ದೊಡ್ಡ ಸುದ್ದಿ ಮಾಡಿರಲಿಲ್ಲವೆನ್ನಿ. ಆದರೆ ಕೆಲ ದಿನಗಳ ನಂತರ ಅವರು ಆರು ಕೋಟಿಯ ಗುಡಿಸಲು ಕಟ್ಟಿಸಿಕೊಳ್ಳುತ್ತಿದ್ದಾರೆ!

ಪ್ರಾಮಾಣಿಕರೆನಿಸಿಕೊಂಡ ಅವರಿಗೆ, ಇದು ಹೇಗೆ ಸಾಧ್ಯ? ಎಂಬ ಕುಹಕ, ಅಪಪ್ರಚಾರಗಳು ಸಾಮಾಜಿಕ ಜಾಲ ತಾಣದಲ್ಲಿ ತುಸು ಹೆಚ್ಚೇ ಹರಿದಾಡಿ ಸುದ್ದಿ ಮಾಡಿತ್ತು. ಯಾವಾಗಲೂ ಹಾಗೆಯೇ ಅಲ್ಲವೇ ಒಳ್ಳೆಯ ಸುದ್ದಿಗಿಂತ, ದುರುದ್ದೇಶ ಪೂರಿತ ಅಪಪ್ರಚಾರದ ಸುದ್ದಿ ಕಾಳ್ಗಿಚ್ಚಿನಂತೆ ಹರಡುವುದು? ಸಜ್ಜನ, ಅಪರೂಪದ ರಾಜಕಾರಣಿ ಎನಿಸಕೊಂಡ ಶ್ರೀನಿವಾಸರಂತೂ, ಸ್ವತಃ ಲೋಕಾಯುಕ್ತಕ್ಕೆ, ಕಟ್ಟುತ್ತಿರುವ ತನ್ನ ಮನೆಯ ಮೌಲ್ಯ ಅರವತ್ತು ಲಕ್ಷ, ಅದಕ್ಕಾಗಿ ಮಾಡಿದ ಸಾಲ, ತನ್ನ ಆದಾಯದ ಮೂಲದ ಮಾಹಿತಿ ಕೊಟ್ಟು, ಅಪಚಾರವಾಗಿದ್ದರೆ ಕ್ರಮ ತೆಗೆದುಕೊಳ್ಳಿ ಎಂಬ ಮನವಿ ಸಲ್ಲಿಸಿದರು.

ಸುದ್ದಿ ಹಬ್ಬಿಸಿದವರು ಅರವತ್ತು ಲಕ್ಷಕ್ಕೆ ಆರು ಕೋಟಿ ಅಂದಿದ್ದು! ವ್ಯತ್ಯಾಸ ಒಂದು ಸೊನ್ನೆಯದು ಮಾತ್ರ! ಶೂನ್ಯಕ್ಕೆ ಬೆಲೆ ಇಲ್ಲ, ಎಂದು ಕೊಂಡಿರಬೇಕು ಸುದ್ದಿ ಹಬ್ಬಿಸಿದ ದುರುಳರು. ನಾವಿಲ್ಲಿ ಗಮನಿಸಬೇಕಾಗಿದ್ದು ಪ್ರಮುಖವಾದ ಎರಡು ಅಂಶಗಳು. ಮೊದಲನೆಯದು, ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳುಸುದ್ದಿ ಹಬ್ಬಿಸುವ ಪ್ರವೃತ್ತಿ ಮತ್ತು ಎರಡನೆಯದು ಪ್ರಾಮಾಣಿಕ, ಶುದ್ಧ ಹಸ್ತರೆಂದರೆ ಉತ್ತಮ ಬದುಕಿಗೆ ಅರ್ಹರಲ್ಲವೆಂಬ ದುರುಳ ದೃಷ್ಟಿಕೋನ.

ಎರಡನೆಯದಂತೂ ಅತ್ಯಂತ ಆತಂಕಕಾರಿ. ಇಂತಹ ದೃಷ್ಟಿಕೋನವೇ, ಪ್ರಾಮಾಣಿಕರಾಗಿರುವವರನ್ನೂ ಅಪ್ರಾಮಾಣಿಕರಾಗಿಸುವ ಬಲವಂತಕ್ಕೆ ತಳ್ಳುವುದು. ಈ
ಘಟನೆಯಲ್ಲಿ ಗಮನಿಸಬೇಕಾದ ಇನ್ನೊಂದು ಅಂಶ, ಸಾಮಾಜಿಕ ಜಾಲತಾಣದಲ್ಲಿ ತನ್ನ ಮೇಲಿನ ಅಪಪ್ರಚಾರದ ಕೂಗು ಕೇಳುತ್ತಲೇ, ಪೂಜಾರಿಯವರು ನಡೆದುಕೊಂಡ ರೀತಿ. ಆ ಕೂಡಲೇ ಎಲ್ಲ ಮಾಹಿತಿ ಒದಗಿಸಿ, ಈಗಾಗಲೇ ಸಲ್ಲಿಸಿದ ಆದಾಯ ಮೂಲಕ್ಕೆ ಮೀರಿ ತಾನು ಮನೆ ಕಟ್ಟುತ್ತಿರುವುದು ಸಾಬೀತಾದರೆ ಅಗತ್ಯ ಕ್ರಮ ಜರುಗಿಸಿ ಎಂದು ಲೋಕಾಯುಕ್ತಕ್ಕೆ ನೇರವಾಗಿ ಮನವಿ ಸಲ್ಲಿಸಿದ ಅವರ ನಡೆ ಪ್ರಶಂಸನಾರ್ಹ.

ಮನವಿ ಪತ್ರವನ್ನು ಮಾಜಿ ಸಚಿವರು, ಮತ್ತು ವಿಧಾನ ಪರಿಷತ್ ಸದಸ್ಯರು ಎಂಬ ತಲೆಬರಹದಡಿಯಲ್ಲಿಯೇ ಸಲ್ಲಿಸಿದ್ದು ಇನ್ನೊಂದು ಗಮನಾರ್ಹ ಸಂಗತಿ. ಅದಕ್ಕಾಗಿಯೇ, ಶ್ರೀನಿವಾಸರು ಬೇಕಿದ್ದರೆ ಸರಕಾರ ತನಿಖೆ ನಡೆಸಿ ಆರೋಪ ಸಾಬೀತಾಗಲಿ ಅಂತಲೋ, ಇದೆಲ್ಲ ಅಪಪ್ರಚಾರ ನಾನಿದಕ್ಕೆ ಉತ್ತರಿಸುವ
ಪ್ರಮೇಯವಿಲ್ಲ ಎಂದು ನುಣುಚಿಕೊಳ್ಳುವ ನಾಯಕರಿಗಿಂತ ವಿಭಿನ್ನರಾಗಿ ಕಾಣುವುದು.

ಮುಖ್ಯಮಂತ್ರಿ ಬದಲಾವಣೆಯಾದ ಕೆಲವೇ ದಿನಗಳಲ್ಲಿ, ಮಾಜಿ ಎಂದು ಒಪ್ಪಿಕೊಂಡ ಅವರ ಪ್ರಜ್ಞಾವಂತಿಕೆ, ಪ್ರಾಮಾಣಿಕತೆ, ಸಮಯ ಪ್ರಜ್ಞೆ ಅಭಿನಂದನೀಯ. ಗುರು ಹಿರಿಯರ ಆಶೀರ್ವಾದಕ್ಕಾಗಿ ದಿಲ್ಲಿಯಲ್ಲಿ ಧ್ಯಾನಸ್ಥರಾಗಿದ್ದ, ಝಿರೋ ಟ್ರಾಫಿಕ್ ಕೃಪೆಯಿಂದ 25ನೇ ನಿಮಿಷದಲ್ಲಿ ಬೆಂಗಳೂರು ವಿಮಾನ ನಿಲ್ದಾಣದಿಂದ ರಾಜಭವನ ತಲುಪಿ, ಮತ್ತೆ ಮಂತ್ರಿಣಿ ಎನಿಸಿಕೊಂಡವರಿಗಿಂತ ನಡುವೆ ಶ್ರೀನಿವಾಸರಂತವರು ಇನ್ನೂ ಇದ್ದಾರೆ ಎಂಬುದೇ ನಮ್ಮ ಭಾಗ್ಯ. ಹೊಸ ಸಂಪುಟ ಸೇರುವ ಮೊದಲೇ ಇಲಾಖೆಯ ಕೆಲಸಕ್ಕಾಗಿ ದೆಹಲಿ ತೆರಳಿ ಏಕೈಕ ಮಾಜಿ ಮಂತ್ರಿಣಿ ಇವರು!

ಜನಪರ ಕೆಲಸಕ್ಕಾಗಿಯೇ ಹೋಗಿದ್ದ ಅಲ್ಲವೇ ಅವರು ದಿಲ್ಲಿಗೆ? ಬರುವಾಗ ತಡವಾದ್ದರಿಂದ, ಝಿರೋ ಟ್ರಾಫಿಕ್ ಕೊಟ್ಟಿದಾರೆ. ಇದರಿಂದ ಬೆಂಗಳೂರಿಗರ ದೈನಂದಿನ ಸಂಚಾರಕ್ಕೆ ಸಂಚಕಾರವಾಯಿತೆಂಬ ಅರಿವೇ ನನಗಾಗಿರಲಿಲ್ಲ ಎಂದು ಬಹಿರಂಗವಾಗಿ ಜೊಳ್ಳು ಮಾತಿನತತ್ತಿ ಎಸೆದವರಿಗಿಂತ ಶ್ರೀನಿವಾಸರಂತ ರವರು ಭಿನ್ನರಾಗಿ ಕಾಣಿಸುವುದು. ಯಡಿಯೂರಪ್ಪ ಸಂಪುಟದಲ್ಲಿ ಸಚಿವರಾಗಿದ್ದ ಇವರೊಬ್ಬರೇ ಇರಬೇಕು ಸಂಪುಟ ವಿಸರ್ಜನೆಯ ನಂತರವೂ, ತನ್ನ ಇಲಾಖಾ ಕೆಲಸಕ್ಕಾಗಿ ದೆಹಲಿಗೆ ದೌಡಾಯಿಸಿದವರು! ಅಧಿಕಾರ ಹೋದ ಮೇಲೂ ಜನಪರವಾಗಿ, ಇಲಾಖೆಯ ಸರ್ವಾಂಗೀಣ ಅಭಿವೃದ್ದಿಗಾಗಿ ಶ್ರಮಿಸಿದ ಪರಿ ನೋಡಿಯೇ
ಇವರನ್ನು ಸಂಪುಟದಲ್ಲಿ ಪುನರ್‌ಪ್ರತಿಷ್ಠಾಪಿಸಿ ಹರಸಿರಬೇಕು!

ಇತ್ತೀಚಿನ ಕಾಲಘಟ್ಟದ ಇನ್ನೊಂದು ಸಮಸ್ಯೆ ಪ್ರಾಮಾಣಿಕ, ಶುದ್ಧಹಸ್ತರೆಂದರೆ ಉತ್ತಮ ಗುಣಮಟ್ಟದ ಬದುಕು ಕಟ್ಟಿಕೊಳ್ಳಲಾಗದವರು ಎಂಬ ತಪ್ಪು ಕಲ್ಪನೆ. ಇವತ್ತಿನ ಹಣದುಬ್ಬರ, ದುಡಿಮೆ ಮತ್ತು ಗಳಿಕೆಯ ಆಧಾರದಲ್ಲಿ ನೋಡಿದರೆ ಕೋಟಿ ಎಂಬುದು ಅಪಮೌಲ್ಯಗೊಂಡಿರುವ ಮೊತ್ತ. ಜನರ ಪ್ರಾಮಾಣಿಕ ದುಡಿಮೆಯ ಮಟ್ಟವೂ ಹತ್ತಿಪ್ಪತ್ತು ವರ್ಷಗಳ ಹಿಂದೆಗಿಂತ ಗಣನೀಯವಾಗಿ ಏರಿಕೆ ಕಂಡಿದೆ.

ಪಟ್ಟಣಗಳಲ್ಲಿ ಮಧ್ಯಮ ಗುಣಮಟ್ಟದ ಎರಡು ಬೆಡ್ ರೂಂ ಅಪಾರ್ಟ್‌ಮೆಂಟ್ ಕೂಡ ಕೋಟಿಗಳಿಗಿಂತ ಕಡಿಮೆಗೆ ದೊರಕುವುದು ಕಷ್ಟಕರ. ಜಾಗತೀಕರಣದ
ಹೊಸ್ತಿಲಲ್ಲಿ ದೊರಕಿದ ಕೌಶಲ್ಯಾಭಿವೃದ್ದಿಯ ಅವಕಾಶಗಳು ಬಹುತೇಕ ಎಲ್ಲ ವರ್ಗದ ಜನರನ್ನು, ಜೀವನವನ್ನು ಮೇಲಸ್ತರಕ್ಕೆ ಕೊಂಡೊಯ್ದಿರುವುದು ನಮ್ಮೆದುರಿ ರುವ ಸತ್ಯ. ಹೀಗಿರುವಾಗ ಕಳೆದ ಹದಿನೈದು ಇಪ್ಪತ್ತು ವರ್ಷಗಳಿಂದ ಶಾಸಕರಾಗಿರುವ, ಎರಡು ಬಾರಿ ಮಂತ್ರಿಯೂ ಆಗಿರುವ, ಇದೆಲ್ಲಕ್ಕಿಂತ ಮುಂಚೆ ಹಲವು ವರ್ಷ ವೃತ್ತಿಪರ ಛಾಯಾಗ್ರಾಹಕನಾಗಿ ಪ್ರಾಮಾಣಿಕವಾಗಿ ದುಡಿದವರೊಬ್ಬರು ಆರು ಕೋಟಿಯದ್ದೇ ಮನೆ ಕಟ್ಟಿಕೊಂಡರೂ ತಪ್ಪೇನು? ಪ್ರಾಮಾಣಿಕರು, ಸರಳ ಸಜ್ಜನರು ಎಂದ ಮಾತ್ರಕ್ಕೆ ಗುಣಮಟ್ಟದ ಜೀವನ ಅವರಿಗೆ ದೊರಕಬಾರದು ಎಂಬ ನಿಲುವು ತಪ್ಪೆನಿಸುವುದಿಲ್ಲವೇ? ಇನ್ನೊಬ್ಬ ಸರಳ, ಪ್ರಾಮಾಣಿಕ ಮಾಜಿ ಸಚಿವ ಸುರೇಶ ಕುಮಾರರ ಮೇಲೂ ಹಿಂದೊಮ್ಮೆ ಬೆಂಗಳೂರಿನ ಹೊರವಲಯದ ಮೂವತ್ತು ನಲವತ್ತರಂತಹ ಸೈಟು ಹೊಂದಿದ್ದಾರೆಂಬ ಕೂಗು ಕೇಳಿ ಬಂದಿತ್ತು.

ದೂರದೂರಿಂದ ಉದ್ಯೋಗ ಅರಸಿ ಇತ್ತೀಚಿಗೆ ಬಂದ ಹಲವರು ಬೆಂಗಳೂರಿನಲ್ಲಿ ಒಂದೆರಡು ಸೈಟು ಖರೀದಿಸುವುದು ಸಾಮಾನ್ಯವಾಗಿರುವಾಗ, ಇದು ಹೇಗೆ ತಪ್ಪಾದೀತು? ಎಂಬ ಪ್ರಶ್ನೆ ನನ್ನನ್ನು ಬಹುಕಾಲ ಕಾಡಿತ್ತು. ಅದು ಕೂಡಾ ಉಳಿದೆಲ್ಲ ಸದಸ್ಯರಂತೆ ಪೂರ್ತಿ ಹಣ ಪಾವತಿಸಿ ಖರೀದಿಸಿದ್ದ ನೀವೇಶನವಂತೆ. ಅವರು ಬೆಂಗಳೂರಿನಲ್ಲಿ ಸ್ವಂತ ಮನೆ ಹೊಂದಿದ್ದೂ, ಇನ್ನೊಂದು ಗೃಹ ನಿರ್ಮಾಣ ಸಹಕಾರ ಸಂಘದ ಸೈಟು ಖರೀದಿಸಿದ್ದು ಸರಿಯಲ್ಲವೆಂಬರ್ಥದ ಆರೋಪ ಅದಾಗಿತ್ತು ಎನಿಸುತ್ತದೆ.

ಪ್ರಭಾವ ಬಳಸಿ, ಅಪ್ರಾಮಾಣಿಕವಾಗಿ ಸಂಪಾದಿಸಬೇಕಾಗಿದ್ದರೆ ಅವರು ನಗರದ ಮಧ್ಯದ ಬೆಲೆ ಬಾಳುವ ನಿವೇಶನ, ಹಣ ಪಾವತಿಸದೇ ತನ್ನದಾಗಿಸಿಕೊಳ್ಳಬಹು ದಾಗಿತ್ತು. ವಾಮಮಾರ್ಗದಲ್ಲಿ ಲಪಟಾಯಿಸುತ್ತಲೇ ಇರುವ ಹಲವರನ್ನು, ಅವರು ಅಪ್ರಾಮಾಣಿಕರು ಬಿಡಿ, ಎಂದು ಪ್ರಶ್ನಿಸದ ನಾವು, ರಾಜಕೀಯ ದಲ್ಲಿದ್ದೂ ಪ್ರಾಮಾಣಿಕರಾಗಿ ಇರಬಯಸುವವರಿಗೆ ಪ್ರಶ್ನಿಸುವುದರಿಂದ, ಅಪ್ರಾಮಾಣಿಕತೆಯನ್ನು ಪ್ರೋತ್ಸಾಹಿಸಿದಂತಾಗುವುದಿಲ್ಲವೇ? ಶ್ರೀನಿವಾಸ ಪೂಜಾರಿ ಯವರೇ ಸದನದಮ್ಮೆ ಹೇಳಿದ, ಸಾಮಾಜಿಕ ಜಾಲತಾಣಗಳಲ್ಲಿ ತುಂಬಾ ಹರಿದಾಡಿದ ಕುಂದಾಪುರದ ಕುರುಡನ ಕತೆ ಇಲ್ಲಿಯೂ ಪ್ರಸ್ತುತವೆನಿಸುತ್ತದೆ.

ನಮ್ಮೂರು, ಕುಂದಾಪುರದ ಕಡೆ ಪ್ರಚಲಿತವಿರುವ ಈ ಕತೆಯ ಕಥಾನಾಯಕ ಕುಂದಾಪುರದ ಕುರುಡ, ಕುರುಡಣ್ಣ. ಕುರುಡಣ್ಣನನ್ನು ಅವನ ಮನೆಯವರೆಲ್ಲ ವಿಶೇಷ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರಂತೆ. ದೃಷ್ಟಿ ಹೀನನಾಗಿದ್ದ ಕುರುಡಣ್ಣ ಕೀಳಿರಿಮೆಯಿಂದ ಬಳಲಬಾರದೆಂದು ಮನೆಯವರೆಲ್ಲರೂ ಆತನನ್ನು ಅತ್ಯಂತ ಅಕ್ಕರೆಯಿಂದ ನೋಡಿಕೊಳ್ಳುತ್ತಿದ್ದರಂತೆ. ಪ್ರತಿ ಹಬ್ಬ ಹರಿದಿನಗಳಲ್ಲೂ ಹೊಸ ವಸ್ತ್ರ, ವಿಶೇಷ ತಿಂಡಿ ತಿನಿಸುಗಳನ್ನು ಕುರುಡಣ್ಣನಿಗೆ ಕೊಟ್ಟ ನಂತರವೇ ತಾವು ಸ್ವೀಕರಿಸುತ್ತಿದ್ದರಂತೆ. ಆದರೆ ಕುರುಡಣ್ಣನಿಗೋ, ಮನೆಯವರ ಮೇಲೆ ಅಪನಂಬಿಕೆ.

ನನಗೆ ಕಣ್ಣು ಕಾಣಿಸುವುದಿಲ್ಲವಲ್ಲ, ಹಾಗಾಗಿ ನನಗೆ ಮೋಸವಾಗುತ್ತಿದೆ. ಉಳಿದವರೆಲ್ಲ ಹೊಸ ಬಟ್ಟೆ, ವಿಶೇಷ ತಿನಿಸುಗಳನ್ನು ಬಳಸಿಕೊಂಡು, ನನಗೆ ಹಳೆ ಬಟ್ಟೆ, ಹಳಸಲು ಊಟವೇ ಬಡಿಸಿರಬೇಕು ಎಂಬ ಭಾವನೆ ಕುರುಡಣ್ಣನದು. ಹೀಗಿರುವಾಗ ಗಣೇಶ ಚೌತಿಯ ದಿನ ಮನೆಯವರೆಲ್ಲ ಕುರುಡಣ್ಣನಿಗೆ ಹೊಸ ಬಟ್ಟೆ ಕೊಟ್ಟು, ವಿಶೇಷವಾಗಿ ಅವನಿಗೆ ಅಂತಲೇ ಒಂದು ಸೇರು (ಸುಮಾರು ಒಂಬೈನೂರು ಕಿಲೋಗ್ರಾಮ) ಉದ್ದಿನ ದೊಡ್ಡ ಕಡುಬು ಮಾಡಿ ಬಡಿಸಿದರಂತೆ. ಮನೆಯವರಿಗೆಲ್ಲ ಸಾಧಾರಣ ಸಣ್ಣ ಕಡುಬು ಮಾಡಿ, ಕುರುಡಣ್ಣನಿಗೆ ಮಾತ್ರ ವಿಶೇಷ ಕಡುಬು ಬಡಿಸಿದ್ದರೂ, ಆ ಕಡುಬು ಮುಟ್ಟಿ ನೋಡಿದ ಕುರುಡಣ್ಣ ಮಾತ್ರ ಗೊಳೋ.. ಎಂದು ಅಳಲಾರಂಭಿಸಿದನಂತೆ!

ಯಾಕೆ ಏನಾಯ್ತು? ಎಂದು ಮನೆಯವರು ವಿಚಾರಿಸಿದಾಗ ಕುರುಡಣ್ಣ ಹೇಳಿದ್ದು, ಹೀಗಿತ್ತು. ಕಣ್ಣಿಲ್ಲದ ನನಗೇ ಇಷ್ಟು ದೊಡ್ಡ ಕಡುಬು ಬಡಿಸಿದ್ದರೆ, ನೀವೆಲ್ಲ ಎಷ್ಟು ದೊಡ್ಡ ದೊಡ್ಡ ಕಡುಬು ಮಾಡಿ ನುಂಗುತ್ತಿರಬಹುದು? ಎಂದು ಯೋಚಿಸಿಯೇ ನನಗೆ ಬೇಸರವಾಗಿದೆ ಎಂದಿದ್ದನಂತೆ!ಇಲ್ಲಿಯೂ ಹಾಗೆ, ಒಬ್ಬರಿಗಿಂತ ಒಬ್ಬರು
ಭ್ರಷ್ಟಾತಿಭ್ರಷ್ಟ ರಾಜಕಾರಣಿಗಳು ನಮ್ಮ ನಡುವಿರುವಾಗ, ಪ್ರಾಮಾಣಿಕರೂ ಭ್ರಷ್ಟರೇ ಎಂಬ ಅಪನಂಬಿಕೆ ಮೂಡಿಸುವ ಪ್ರಯತ್ನ ಕಳವಳಕಾರಿ. ಇಂತಹ ಪ್ರಯತ್ನಗಳನ್ನು ಬಯಲಿಗೆಳೆಯದಿದ್ದರೆ, ಪ್ರಾಮಾಣಿಕರನ್ನೂ, ಪ್ರಾಮಾಣಿಕತೆಯನ್ನೂ ಗುರುತಿಸಿ ಗೌರವಿಸದ ಅನಾಗರಿಕರುನಾವಾಗುವುದಿಲ್ಲವೇ?
‘ವಿಶ್ವವಾಣಿ’ಯ ಕ್ಲಬ್‌ಹೌಸ್ ಸಂವಾದದಲ್ಲಿ ಭಾಗವಹಿಸಿದ ಐದು ರುಪಾಯಿ ಡಾಕ್ಟ್ರು, ಎಂದೇ ಮನೆಮಾತಾದ ಮಂಡ್ಯದ ಜನಪ್ರಿಯ ವೈದ್ಯ ಶಂಕರೇ ಗೌಡರೂ ತಮ್ಮ ಚುನಾವಣಾ ರಾಜಕೀಯದ ಕಹಿ ಅನುಭವ ಹೇಳಿಕೊಂಡರು.

ಹಣ ಚೆಲ್ಲದೇ, ಪ್ರಾಮಾಣಿಕವಾಗಿ ಚುನಾವಣೆಗಳನ್ನು ಎದುರಿಸುವುದು ಅಸಾಧ್ಯ ಎಂಬ ಭಾವನೆ ನನ್ನದೂ ಕೂಡಾ ಎಂದ ಅವರ ಮಾತು ಕೇಳಿಸಿಕೊಳ್ಳಲು ದುಃಖವೆನಿಸಿತು. ಹಣಬಲ, ಜಾತಿಬಲ, ತೋಳ್ಬಲಗಳ ನಡುವೆ ಪ್ರಾಮಾಣಿಕತೆ, ಜನಪರ ಕಾಳಜಿಗಳು ಅರ್ಥಹೀನವೆನಿಸಿಕೊಂಡಿದ್ದಕ್ಕೆ ಅಲ್ಲಲ್ಲಿ ಕಾಣಿಸಿಕೊಳ್ಳುವ ಪ್ರಾಮಾಣಿಕರನ್ನು, ಸುಶಿಕ್ಷಿತರನ್ನು, ಸುಸಂಸ್ಕೃತರನ್ನು ನಾವು ಕಾಲ ಕಾಲಕ್ಕೆ ಕೈ ಹಿಡಿದು ಎತ್ತದಿದ್ದೇ ಕಾರಣ ಅನಿಸುವುದಿಲ್ಲವೇ? ಪ್ರಾಮಾಣಿಕ, ಸರಳ ಸಜ್ಜನ ರಾಜಕಾರಣಿಗಳು ಎಲ್ಲ ರಾಜಕೀಯ ಪಕ್ಷಗಳಲ್ಲೂ ಅಲ್ಪ ಸ್ವಲ್ಪ ಉಳಿದಿದ್ದಾರೆ.

ಶ್ರೀನಿವಾಸ ಪೂಜಾರಿ, ಸುರೇಶ ಕುಮಾರ್, ತನ್ನ ವಸ್ತ್ರಗಳಿಗೆ ತಾನೇ ಇಸ್ತ್ರಿ ಮಾಡಿಕೊಂಡು ಪ್ರಮಾಣ ವಚನಕ್ಕೆ ತೆರಳಿದ ಸುಳ್ಯದ ಅಂಗರ, ಸತತ ಐದು ಬಾರಿ ಶಾಸಕನಾಗಿದ್ದರೂ ಗನ್ ಮ್ಯಾನ್ ಬೇಕಿಲ್ಲವೆಂದು ಕ್ಷೇತ್ರದಲ್ಲಿ ಯಾವುದೇ ಶಂಕುಸ್ಥಾಪನೆ, ಉದ್ಘಾಟನೆಗೆ ತನ್ನನು ಕರೆದು ಸಮಾರಂಭ ಮಾಡಿ ಹಣಪೋಲು ಮಾಡಬೇಡಿ ಎಂಬ ಅರ್ಥಪೂರ್ಣ ನಿಲುವು ಹೊಂದಿದ ಕುಂದಾಪುರದ ಹಾಲಾಡಿ ಶ್ರೀನಿವಾಸ್ ಶೆಟ್ಟಿ, ತನ್ನ ಶಾಸಕತ್ವದ ಅವಧಿ ಮುಗಿದ ನಂತರ ತನ್ನ ಅಧ್ಯಾಪಕ ವೃತ್ತಿ ಪುನರಾರಂಭಿಸಿದ ವೈ.ಎಸ್.ವಿ ದತ್ತರಂತಹವರು ಕೆಲ ಉದಾಹರಣೆ ಅಷ್ಟೇ. ಉಲ್ಲೇಖಿಸಿದ ಸಚಿವರುಗಳ ಕುರಿತ ಎರಡು ಪ್ರಸಂಗಗಳು ಕೂಡ ಪ್ರಾಮಾಣಿಕ ರನ್ನು, ಶುದ್ಧ ಹಸ್ತರೆನಿಸಕೊಂಡವರನ್ನು ಸಮಾಜ ನೋಡುವ ದೃಷ್ಟಿಯ ಅಪಕ್ವತೆ ಉದಾಹರಿಸಲು ತೆಗೆದುಕೊಂಡಿದ್ದಷ್ಟೇ.

ಒಟ್ಟಿನಲ್ಲಿ, ಭ್ರಷ್ಟರೆನಿಸಕೊಂಡವರೇನೋ ಭ್ರಷ್ಟರಾಗಿಯಾಗಿದೆ. ಅವರ ತಪ್ಪುಗಳನ್ನು ನೋಡುವ ಅಗತ್ಯವೇನಿಲ್ಲ. ಆದರೆ ಪ್ರಾಮಾಣಿಕವಾಗಿ ಬದುಕು ಪ್ರಯತ್ನಿಸು ತ್ತಿರುವವರು ಎಲ್ಲಿ ಎಡವಬಹುದು? ಎಂಬುದನ್ನೇ ಹೊಂಚು ಹಾಕಿ, ದುರ್ಬಿನು ಹಾಕಿ ಹುಡುಕುವ, ಅಂತವರ ವ್ಯಕ್ತಿತ್ವಕ್ಕೆ ವೃಥಾ ಮಸಿ ಬಳಿದು ಕುಗ್ಗಿಸುವ ಪ್ರವೃತ್ತಿಯೇ ಪ್ರಾಮಾಣಿಕರಾಗಿ ಇರಬಯಸುವವರನ್ನೂ ಅಪ್ರಾಮಾಣಿಕತೆಯತ್ತ ತಳ್ಳುವುದು. ಹೀಗಾಗಿಯೇ ಪ್ರಜ್ಞಾವಂತರರಿಗಿಂತ ಹೆಚ್ಚು ಹಣಬಲ, ಜಾತಿಬಲ, ತೋಳ್ಬಲ ಇರುವವರೇ ರಾಜಕಾರಣಕ್ಕೆ ಬರುವಂತಾಗಿದ್ದು. ವ್ಯವಸ್ಥೆಯ ಬದಲಾವಣೆಯ ಕುರಿತು ಪ್ರಾಮಾಣಿಕ ಕಾಳಜಿಯುಳ್ಳ ಯುವಜನಾಂಗ ರಾಜಕೀಯ
ಸೇರಲು ಹಿಂಜರಿಯುತ್ತಿರುವುದು.

ವ್ಯವಸ್ಥೆ ಸುಧಾರಿಸಲು, ನಾವು ನೋಡುವ ದೃಷ್ಟಿಕೋನಗಳು ಸುಧಾರಿಸುವುದು ಅತ್ಯಗತ್ಯ. ಪ್ರಾಮಾಣಿಕ, ದಕ್ಷರನ್ನು ಗುರುತಿಸಿ ಕೈ ಹಿಡಿಯುವ ಕಾರ್ಯಕ್ಕೆ ನಾಗರಿಕ ಸಮಾಜ ಮುಂದಾಗದಿದ್ದರೆ, ಯುವಜನಾಂಗ ರಾಜಕೀಯದತ್ತ ಮುಖಮಾಡಲಾರರು. ರಾಜಕೀಯ ಒಂದು ಹಣ ಮಾಡುವ ಉದ್ಯೋಗವೆಂದು ನೆಚ್ಚಿಕೊಳ್ಳುವವರ ಬದಲು, ನಿಜವಾದ ಸಾಮಾಜಿಕ ಕಾಳಜಿಯುಳ್ಳ ಉತ್ಸಾಹಿಗಳಿಗೆ ಅವಕಾಶ ಒದಗಿಸಿ ಅವರು ಪ್ರಾಮಾಣಿಕರಾಗಿz ಬದುಕಿ ಕಟ್ಟಿಕೊಳ್ಳುವಂತೆ
ನೋಡಿಕೊಳ್ಳುವ ಹೊಣೆಗಾರಿಕೆಯೂ ನಮ್ಮ ಸಮಾಜದ್ದಲ್ಲವೇ?