Friday, 13th December 2024

ಸದೃಢ ರಾಜ್ಯ ಎನ್ನಿಸಿಕೊಳ್ಳುವುದೇ ಕರ್ನಾಟಕದ ಸಮಸ್ಯೆಯೇ !?

ಅಶ್ವತ್ಥಕಟ್ಟೆ

ರಂಜಿತ್ ಎಚ್.ಅಶ್ವತ್ಥ

ಸ್ವಾವಲಂಭಿಗಳಿಗೆ ತುರ್ತು ಸಹಾಯಬೇಕೆಂದರೆ, ಬಹು ಸಮಯದಲ್ಲಿ ಸಿಗುವುದಿಲ್ಲ. ಇದಕ್ಕೆ ಕಾರಣ ‘ಅಯ್ಯೋ ಅವರಿಗೆ ಏನಾಗಿದೆ? ಅವರೇ ಎಲ್ಲವನ್ನು ನಿಭಾಯಿಸಿಕೊಳ್ಳುವ ಸಾಮರ್ಥ್ಯವಿದೆ’ ಎನ್ನುವ ಮಾತುಗಳು ಎಲ್ಲರೂ ಹೇಳಿ ತೇಲಿಸುತ್ತಾರೆ. ಆದರೆ ಎಷ್ಟೇ ಸದೃಢರಾಗಿದ್ದರೂ, ತುರ್ತು ಸಮಯದಲ್ಲಿ ಇನ್ನೊಬ್ಬರ ಸಹಾಯ ಅತ್ಯಗತ್ಯ ಎನ್ನುವುದನ್ನು ಅರ್ಥೈಸಿಕೊಳ್ಳುವು ದಿಲ್ಲ. ಇದೀಗ ಇದೇ ಪರಿಸ್ಥಿತಿಯಲ್ಲಿ ಕರ್ನಾಟಕವೂ ಇದೆ ಎಂದರೆ ಅತಿಶಯೋಕ್ತಿಯಲ್ಲ.

ಹೌದು, ಕರೋನಾ ಎರಡನೇ ಅಲೆಯಲ್ಲಿ ಇತರ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕ ಅಕ್ಷರಕ್ಷ ನರಳಿ ಹೋಗಿದೆ. ಕಳೆದ ಬಾರಿ Peak ನಲ್ಲಿ ಬರುತ್ತಿದ್ದ ಕರೋನಾ ಸೋಂಕಿತರ ಕೇಸ್‌ಗಳ ದುಪ್ಪಟ್ಟು ಈಗಲೇ ರಾಜ್ಯದಲ್ಲಿ ಕಾಣಿಸಿಕೊಂಡಿದೆ. ಅದರಲ್ಲಿಯೂ ರಾಜಧಾನಿ ಬೆಂಗಳೂರಿನಲ್ಲಿ ಕಳೆದೊಂದು ವಾರದಲ್ಲಿ ಬರುತ್ತಿರುವ ಕರೋನಾ ಸೋಂಕಿತರ ಪ್ರಕರಣಗಳ ಸಂಖ್ಯೆ ಅರಗಿಸಿ ಕೊಳ್ಳಲು ಸಾಧ್ಯವಾಗದಷ್ಟು ಏರುತ್ತಿದೆ. ಇನ್ನು ಈ ಬಾರಿ ಕರೋನಾ ಭೀಕರತೆ ಇನ್ನಷ್ಟು ಏರಲು ಮತ್ತೊಂದು ಕಾರಣ ಎಂದರೆ, ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಕರೋನಾ ಸೋಂಕಿನಿಂದ ಐಸಿಯು ಸೇರುವವರು, ವೆಂಟಿಲೇಟರ್ ಸಹಾಯ ಬಯಸು ವವರು, ಆಸ್ಪತ್ರೆಗೆ ದಾಖಲಾಗುವವರು ಹಾಗೂ ಉಸಿರಾಟದ ಸಮಸ್ಯೆ ಎದುರಿಸುವವರ ಸಂಖ್ಯೆ ತೀವ್ರಗತಿಯಲ್ಲಿ ಏರುತ್ತಿದೆ.

ಇಂತಹ ಆತಂಕದ ಸನ್ನಿವೇಶದಲ್ಲಿ ಸಹಜವಾಗಿ ಕರ್ನಾಟಕದಲ್ಲಿ ಎಲ್ಲಿ ನೋಡಿ ದರೂ, ಆಸ್ಪತ್ರೆಯಲ್ಲಿ ಬೆಡ್ ಕೊರತೆ, ವೆಂಟಿಲೇಟರ್ ಕೊರತೆ ಹಾಗೂ ಕರೋನಾ ದಿಂದ ಉಳಿಸಲು ಇರುವ ರೆಮ್‌ಡಿಸಿವರ್ ಔಷಧದ ಕೊರತೆ ಘನಘೋರವಾಗಿ ಕಾಣಿಸಿಕೊಂಡಿದೆ. ಇಂಥ ಸಮಯದಲ್ಲಿ ರಾಜ್ಯ ಸರಕಾರ, ಸಹಾಯಹಸ್ತ ನೀಡುವಂತೆ ಕೇಂದ್ರದತ್ತ ನೋಡುತ್ತಿದೆ. ಆದರೆ ಎಲ್ಲೋ ಒಂದು ಕಡೆ ಕರ್ನಾಟಕವನ್ನು ನಿರ್ಲಕ್ಷ್ಯ ಮಾಡಿ, ‘ನಿಮ್ಮ ವ್ಯವಸ್ಥೆ ನೀವೇ ಮಾಡಿಕೊಳ್ಳಿ’ ಎನ್ನುವ ರೀತಿ ನಡೆದುಕೊಳ್ಳುತ್ತಿದೆ ಎಂದರೆ ತಪ್ಪಾಗುವುದಿಲ್ಲ.

ಇದು ಕೇವಲ ಕರೋನಾ ಸಮಯದಲ್ಲಿ ಮಾತ್ರವಲ್ಲ. ಇತರ ಸಮಯದಲ್ಲಿಯೂ ಅನೇಕ ಬಾರಿ ರಾಜ್ಯವನ್ನು ಕೇಂದ್ರ ಸರಕಾರ ಕೈ ಬಿಟ್ಟಿರುವ ಉದಾಹರಣೆಗಳಿವೆ. ಆದರೀಗ ಕರೋನಾ ಸಮಯದಲ್ಲಿ ಕೇಂದ್ರದಿಂದ ಆಗುವ ಸಮಸ್ಯೆ ಏನು ಎನ್ನುವುದನ್ನು ನೋಡಿ ಬಳಿಕ ಇನ್ನಿತರ ಉದಾಹರಣೆ ನೀಡುವುದು ಈಗ ಸೂಕ್ತ. ಕರೋನಾ ಎರಡನೇ ಅಲೆ ಕಾಣಿಸಿಕೊಂಡ ಬಳಿಕ ಮೊದಲು ಹಾಹಕಾರ ಎದ್ದಿದ್ದು ರೆಮ್‌ಡಿಸಿವರ್ ಔಷಧಕ್ಕೆ.

ರಾಜ್ಯದಲ್ಲಿ ಈ ಔಷಧದ ಕೊರತೆ ಕಾಣಿಸಿಕೊಳ್ಳುತ್ತಿದ್ದಂತೆ ಔಷಧವನ್ನು ಹುಡುಕಲು ಸರಕಾರ ಮುಂದಾಗಿತ್ತು. ಈ ಸಮಯದಲ್ಲಿ ಕೇಂದ್ರ ಸರಕಾರ ಎಲ್ಲ ರಾಜ್ಯಗಳಿಗೆ ರೆಮ್ ಡಿಸಿವರ್ ಹಂಚಿಕೆ ಮಾಡಿತ್ತು. ಕೇಂದ್ರ ಸರಕಾರ ಒಟ್ಟು 11 ಲಕ್ಷ ಡೋಸ್ ರೆಮ್‌ಡಿ ಸಿವರ್ ಔಷಧವನ್ನು ಬಿಡುಗಡೆ ಮಾಡಿದರೂ, ಕರ್ನಾಟಕಕ್ಕೆ ಸಿಕ್ಕಿದ್ದು ಮಾತ್ರ 25 ಸಾವಿರ ಡೋಸ್ ಮಾತ್ರ. 10 ದಿನಕ್ಕೆ 25 ಸಾವಿರ ಡೋಸ್ ಕರ್ನಾಟಕಕ್ಕೆ ನೀಡಿದ್ದ ಕೇಂದ್ರ, ಗುಜರಾತ್‌ಗೆ ಲಕ್ಷಕ್ಕೂ ಹೆಚ್ಚು ಡೋಸ್ ನೀಡಿತ್ತು.

ಮಹಾರಾಷ್ಟ್ರ ನಂತರ ಅತಿಹೆಚ್ಚು ಕೇಸ್ ಗಳನ್ನು ಹೊಂದಿರುವ ಕರ್ನಾಟಕಕ್ಕೆ 25 ಸಾವಿರ ಡೋಸ್ ಮಾತ್ರ ನೀಡಿದ್ದಕ್ಕೆ ಸಾರ್ವ ಜನಿಕ ವಲಯದಲ್ಲಿ ಭಾರಿ ವಿರೋಧ ವ್ಯಕ್ತವಾಗಿತ್ತು. ಆದರೆ ಕೇಂದ್ರದಲ್ಲಿ ಬಿಜೆಪಿ ಇರುವುದರಿಂದ, ಅದರ ವಿರುದ್ಧ ಮಾತನಾ ಡಲು ರಾಜ್ಯ ಬಿಜೆಪಿ ನಾಯಕರಿಗೆ ಆಗಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಆಗಲಿ ಸಾಧ್ಯವಾಗದೇ ಹಲ್ಲುಕಚ್ಚಿ
ಕೂತಿದ್ದರು. ಕೊನೆಗೆ ಸಾಮಾಜಿಕ ಜಾಲತಾಣದಲ್ಲಿ ಇದಕ್ಕೆ ಭಾರಿ ವಿರೋಧ ವ್ಯಕ್ತವಾದ ಬೆನ್ನಲ್ಲೇ, ಕೇಂದ್ರ ಸಚಿವ ಸದಾನಂದಗೌಡ ಅವರು ಮಧ್ಯಪ್ರವೇಶ ಮಾಡಿ ಡೋಸ್ ಗಳನ್ನು ಒಂದು ಲಕ್ಷಕ್ಕೆ ಏರಿಸಲಾಯಿತು. (ವಿಪರ್ಯಾಸ ಎಂದರೆ ಕೇಂದ್ರ ರಸಾಯನಿಕ ಸಚಿವರು ಕರ್ನಾಟಕದ ಸದಾನಂದಗೌಡರು).

ಕೇವಲ ರೆಮ್‌ಡಿಸಿವರ್ ಮಾತ್ರವಲ್ಲ, ಆಮ್ಲಜನಕ ಪೂರೈಕೆಯಲ್ಲಿ ಇದೇ ರೀತಿಯ ತಾರತಮ್ಯವಿದೆ. ರೈಲ್ವೇ ಇಲಾಖೆಯಿಂದ ಆಮ್ಲಜನಕ ರೈಲು ಓಡಿಸುತ್ತಿದ್ದರೂ, ಅದು ಕರ್ನಾಟಕದಲ್ಲಿ ನಿಲ್ಲಿಸುವುದಿಲ್ಲ. ಆಮ್ಲಜನಕ ಪೂರೈಕೆ ವಿಷಯದಲ್ಲಿಯೂ ಕರ್ನಾಟಕವನ್ನು ಕೇಂದ್ರ ನಿರ್ಲಕ್ಷ್ಯ ಮಾಡಿತ್ತು. ಬಳಿಕ ಹೊಡೆದಾಡಿ, ಬಡಿದಾಡಿ ನಮ್ಮ ಪಾಲು ನಾವು ತಗೆದುಕೊಳ್ಳುವಂತಾ ಯಿತು. ಇನ್ನು ಭಾನುವಾರವಷ್ಟೇ ರೈಲ್ವೇ ಇಲಾಖೆಯಿಂದ ೬೪ಸಾವಿರ ಬೆಡ್ ಸಾಮರ್ಥ್ಯದ ನಾಲ್ಕು ಸಾವಿರ ಕೋಚ್‌ ಗಳನ್ನು ನಿರ್ಮಿಸಿದೆ.

ಆದರೆ ಈ ಎಲ್ಲವೂ ಉತ್ತರ ಪ್ರದೇಶ, ಮಧ್ಯಪ್ರದೇಶ, ಮಹಾರಾಷ್ಟ್ರ ಹಾಗೂ ದೆಹಲಿಗೆ ಮಾತ್ರ ಸೀಮಿತವಾಗಿವೆ. ಈ ರೀತಿಯ ತಾರತಮ್ಯ ಕಾರಣವನ್ನು ಕೇಳಿದಾಗ, ‘ಕರ್ನಾಟಕ ಸದೃಢ ರಾಜ್ಯ. ಕರ್ನಾಟಕದಲ್ಲಿ, ತಮ್ಮಲ್ಲಿಯೇ ಎಲ್ಲ ರೀತಿಯ ಸಂಪನ್ಮೂಲ ಗಳನ್ನು ನಿರ್ಮಿಸಿಕೊಳ್ಳುವ ಸಾಮರ್ಥ್ಯವಿದೆ. ಆದ್ದರಿಂದ ಈ ಸಾಮರ್ಥ್ಯವಿಲ್ಲದ ರಾಜ್ಯಗಳಿಗೆ ಕೇಂದ್ರ ನೆರವಿನ ಹಸ್ತ ಚಾಚುತ್ತದೆ’ ಎನ್ನುವ ಸಹಜ ಮಾತುಗಳು ರಾಜಕಾರಣಿಗಳಿಂದ ಬರುತ್ತಿದೆ. ಆದರೆ ಇಂತಹ ಸಂದಿಗ್ನ ಸ್ಥಿತಿಯಲ್ಲಿ ಸದೃಢ, ಸದೃಢವಲ್ಲದ
ರಾಜ್ಯಗಳು ಎನ್ನುವುದಕ್ಕಿಂತ ಯಾರಿಗೆ ಅವಶ್ಯಕತೆಯಿದೆ ಎನ್ನುವುದನ್ನು ನೋಡಬೇಕಿದೆ ಅಲ್ಲವೇ?!

ಈ ರೀತಿಯ ತಾರತಮ್ಯ ಕೇವಲ ಕರೋನಾ ಸಂಕಷ್ಟ ಕಾಲದಲ್ಲಿ ಆಗಿದೆ ಎಂದಲ್ಲ. ಇದೀಗ ದೇಶದ ಎಲ್ಲೆಡೆ ಒಂದೇ ಸಮಸ್ಯೆ ಇರುವುದರಿಂದ ಕೇಂದ್ರಕ್ಕೂ ಎಲ್ಲವನ್ನು ಒಟ್ಟಿಗೆ ನಿಭಾಯಿಸುವುದು ಕಷ್ಟ. ಆದ್ದರಿಂದ ಈ ರೀತಿ ಆಗುತ್ತದೆ ಎನ್ನುಬಹುದು. ಆದರೆ ಕಳೆದ ಮೂರು ವರ್ಷದಿಂದ ರಾಜ್ಯದಲ್ಲಿ ಸಂಭವಿಸುತ್ತಿರುವ ನೆರೆ ವಿಷಯದಲ್ಲಿಯೂ ಕೇಂದ್ರ ನಿಲುವು ಏನು ಭಿನ್ನವಾಗಿಲ್ಲ.
ಪ್ರವಾಹದಿಂದ ರಾಜ್ಯ ಸರಕಾರ 40ರಿಂದ 50 ಸಾವಿರ ಕೋಟಿ ರು. ವರೆಗೆ ನಷ್ಟವಾಗಿದೆ ಎಂದು ಕೇಂದ್ರ ಬಳಿ ಫೈಲ್ ಹಿಡಿದು ಹೋದರೆ, ಆ ಕಡೆಯಿಂದ ಎನ್‌ಡಿಆರ್‌ಎಫ್ ನಿಯಮ ಎನ್ನುವ ಮಾತು ಹೇಳಿ ಎರಡು ಮೂರು ಸಾವಿರ ಕೋಟಿ ರು. ನಲ್ಲಿ ಎಲ್ಲ ಪರಿಹಾರ ಕೊಟ್ಟು ಕೈತೊಳೆದುಕೊಳ್ಳುತ್ತಿದ್ದಾರೆ.

ಇದು ಕೇವಲ ಬಿಜೆಪಿ ಸರಕಾರದ ಅವಧಿಯಲ್ಲಿ ಆಗುತ್ತಿರುವ ಸಮಸ್ಯೆ ಏನಲ್ಲ. ರಾಷ್ಟ್ರದಲ್ಲಿ ಯಾವುದೇ ಸರಕಾರ ಬಂದರೂ, ಈ ಸಮಸ್ಯೆ ತಪ್ಪಿದ್ದಲ್ಲ. ಈ ಹಿಂದೆ ಯುಪಿಎ ಸರಕಾರದಲ್ಲಿಯೂ ಕರ್ನಾಟಕ ಎಂದರೆ ‘ಆಮೇಲೆ ನೋಡೋಣ’ ಎನ್ನುವ ಮನಸ್ಥಿತಿ ಇತ್ತು ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯ. ಕೇಂದ್ರ ಸರಕಾರ ಜಿಎಸ್‌ಟಿಯನ್ನು ಜಾರಿಗೊಳಿಸಿದ ಬಳಿಕ, ಕರ್ನಾಟಕ
ಪಾಲು ಹೆಚ್ಚಿದೆ. ಆದರೆ ಮೊದಲ ಐದು ವರ್ಷಗಳ ಕಾಲ ಈ ಜಿಎಸ್‌ಟಿಯಿಂದ ರಾಜ್ಯಕ್ಕೆ ಆಗುವ ನಷ್ಟ ಸರಿದೂಗಿಸಲು ಇಂತಿಷ್ಟು ಅನುದಾನ ನೀಡಲು ಮುಂದಾಗಿತ್ತು. ಆದರೆ ಕೇಂದ್ರ ಸರಕಾರ ಕಳೆದ ವರ್ಷ ಕರೋನಾ ನೆಪದಲ್ಲಿ ಈ ಅನುದಾನವನ್ನು ಪೂರ್ಣ
ಪ್ರಮಾಣದಲ್ಲಿ ನೀಡಲಿಲ್ಲ.

ಸರಕಾರದ ಬೊಕ್ಕಸವೇ ಖಾಲಿಯಾಗಿದೆ ಎಂದು ಸ್ವತಃ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದರೂ, ಅದಕ್ಕೆ ಸಕಾರಾತ್ಮಕವಾಗಿ
ಸ್ಪಂದಿಸುವ ಕೆಲಸವನ್ನು ಕೇಂದ್ರದಿಂದ ಮಾಡಲಿಲ್ಲ. ಇದಾದ ಬಳಿಕ 15 ಹಣಕಾಸು ಆಯೋಗದಲ್ಲಿ ಮೀಸಲಿಡುವ ವಿಷಯ ದಲ್ಲಿಯೂ ಕರ್ನಾಟಕವನ್ನು ನಿರ್ಲಕ್ಷ್ಯ ಮಾಡಿದ್ದ ಉದಾಹರಣೆ ನಮ್ಮ ಮುಂದಿದೆ. ಹಾಗೇ ನೋಡಿದರೆ ಕರ್ನಾಟಕ ತೆರಿಗೆ ಪಾವತಿ ಯಲ್ಲಿ ಕರ್ನಾಟಕ ಮೂರನೇ ಸ್ಥಾನದಲ್ಲಿದೆ. ವಾಣಿಜ್ಯ ನಗರಿ ಮುಂಬೈ ಅನ್ನು ಹೊಂದಿರುವ ಮಹಾರಾಷ್ಟ್ರ ವಾರ್ಷಿಕ ವಾಗಿ 4.25 ಲಕ್ಷ ಕೋಟಿ ರು. ನೀಡಿದರೆ, ರಾಷ್ಟ್ರ ರಾಜಧಾನಿ ದೆಹಲಿ ಕೇಂದ್ರಕ್ಕೆ 1.66 ಲಕ್ಷ ಕೋಟಿ ರು.ಗಳನ್ನು ನೀಡಿದೆ.

ನಂತರದ ಸ್ಥಾನದಲ್ಲಿರುವ ಕರ್ನಾಟಕ 1.20 ಲಕ್ಷ ಕೋಟಿ ರು.ಗಳನ್ನು ನೀಡುತ್ತಿದೆ. ಮುಂದಿನ ಕೆಲವೇ ವರ್ಷದಲ್ಲಿ ದೆಹಲಿ ಯನ್ನು ಮೀರಿ ಬೆಂಗಳೂರು ಆ ಸ್ಥಾನವನ್ನು ಆಕ್ರಮಿಸಿದರೂ ಅಚ್ಚರಿಯಿಲ್ಲ. ಹೀಗಿರುವಾಗ, ಕರ್ನಾಟಕಕ್ಕೆ ವಾಪಸು ನೀಡುವ ಸಮಯ ದಲ್ಲಿ ಮಾತ್ರ ಕೇಂದ್ರ ಸರಕಾರಗಳು ಈ ರೀತಿ ಏಕೆ ಹಿಂಜಿರಿಯುತ್ತದೆ ಎನ್ನುವುದಕ್ಕೆ ಉತ್ತರ ಮಾತ್ರಯಿಲ್ಲ.

ಇದು ಆರ್ಥಿಕವಾಗಿ ನೋಡಿದರೆ, ರಾಜಕೀಯವಾಗಿ ನೋಡಿದರೂ ಬಿಜೆಪಿಗೆ ದಕ್ಷಿಣ ಭಾರತದ ಸೇಫ್ ರಾಜ್ಯ ಕರ್ನಾಟಕವೇ ಆಗಿದೆ. ಹಲವು ರಾಜ್ಯದಲ್ಲಿ ಲೋಕಸಭಾ ಖಾತೆಯನ್ನೇ ತೆರಯದಿದ್ದಾಗ ಎಂಟರಿಂದ 10 ಸಂಸದರನ್ನು ಕಳುಹಿಸಿಕೊಟ್ಟ ರಾಜ್ಯ ಕರ್ನಾಟಕ. ಇನ್ನು ಈ ಬಾರಿಯಂತೂ ಬರೋಬ್ಬರಿ 25 ಸಂಸದರನ್ನು ಆಯ್ಕೆ ಮಾಡಿ ಬಿಜೆಪಿಯ ಮಡಿಲಿಗೆ ಕರ್ನಾಟಕ ಕೊಟ್ಟಿತ್ತು. ಈ 25 ಜನರ ಪೈಕಿ ಮೂರರಿಂದ ನಾಲ್ಕು ಮಂದಿ ಕೇಂದ್ರದ ಸಚಿವರೂ ಆಗಿದ್ದರು. ಆದರೆ ರಾಜ್ಯದ ಹಿತ ಬಂದಾಗ ಮಾತ್ರ ಈ ಎಲ್ಲರೂ ಮೌನವಾಗಿರುತ್ತಾರೆ. ಇದು ಕೇವಲ ಬಿಜೆಪಿ ಮಾತ್ರವಲ್ಲ, ಕಾಂಗ್ರೆಸ್ ಅವಧಿಯಲ್ಲಿಯೂ ರಾಜ್ಯದ ವಿಷಯ ಗಳಲ್ಲಿ, ಅಂದಿನ ಕಾಂಗ್ರೆಸ್ ಸಂಸದರು ‘ಮೌನ’ ಹೊರತು ಬೇರೇನು ಮಾಡಿಲ್ಲ. (ಕಾವೇರಿ ನೀರು ಹಂಚಿಕೆ ವಿಷಯದಲ್ಲಿ ಅಂಬರೀಷ್ ಅವರು ರಾಜೀನಾಮೆ ನೀಡಿದ್ದು ಹೊರತುಪಡಿಸಿ).

ಈ ರೀತಿ ಪದೇ ಪದೆ ತಾರತಮ್ಯ ಮಾಡುವುದಕ್ಕೆ ರಾಜಕೀಯ ಇಚ್ಛಾಶಕ್ತಿಯ ಕೊರತೆ ಅಲ್ಲದೇ ಬೇರೇನು ಇಲ್ಲ. ಯಾವುದೇ ಪಕ್ಷವಾ ಗಲಿ, ದೆಹಲಿ ನಾಯಕರ ಮುಂದೆ ನಿಂತು ರಾಜ್ಯಕ್ಕೆ ಆದ ಅನ್ಯಾಯದ ಬಗ್ಗೆ ಮಾತನಾಡುವ ಧೈರ್ಯವನ್ನು ಎಂದಿಗೂ ತೋರುವು ದಿಲ್ಲ. ರಾಷ್ಟ್ರೀಯ ಪಕ್ಷಗಳ ನಾಯಕರ ಕಥೆ ಇದಾದರೆ, ಪ್ರಾದೇಶಿಕ ಪಕ್ಷವಾಗಿರುವ ಜೆಡಿಎಸ್ ಕೇಂದ್ರದಲ್ಲಿ ತನ್ನ ಅಸ್ತಿತ್ವವನ್ನು
ತೋರಿಸುವಲ್ಲಿ ಈಗಲೂ ಹೆಣಗಾಡುತ್ತಿದೆ. ಕೇಂದ್ರದಲ್ಲಿ ಆಡಳಿತ ನಡೆಸುವ ಪಕ್ಷಗಳಿಂದ ಕರ್ನಾಟಕಕ್ಕೆ ಸೌಲಭ್ಯಕೊಡದಿದ್ದರೆ, ಸಮಸ್ಯೆಯಾಗುತ್ತದೆ ಎನ್ನುವುದು ತಿಳಿಯದಿದ್ದರೆ ಅವರು ಸಹ ಸಮಸ್ಯೆಯಾಗುವ ರಾಜ್ಯಗಳಿಗೆ ಬೇಕಾದ ಸಹಾಯ ಮಾಡುವಲ್ಲಿ
ತಲೀನವಾಗಿರುತ್ತಾರೆ.

ಆದ್ದರಿಂದ ರಾಜ್ಯದ ಹಿತಾಶಕ್ತಿಗಾಗಿ ಪಕ್ಷಬೇಧ ಮರೆತು ಹೋರಾಡುವ ತನಕ ರಾಜ್ಯಕ್ಕೆ ಈ ರೀತಿಯ ಸಮಸ್ಯೆ ಆಗ್ಗಾಗೆ
ಎದುರಾಗವುದು ಸಹಜ. ಆದರೆ ಬಿಜೆಪಿ ಅಧಿಕಾರದ ಗದ್ದುಗೆ ಹಿಡಿಯುವಾಗ, ರಾಜ್ಯದಲ್ಲಿ ಬಿಜೆಪಿ ಬಂದರೆ ಕರ್ನಾಟಕವನ್ನು ಸ್ವರ್ಗ ಮಾಡುವ ಮಾತನ್ನು ಆಡಿತ್ತು. ಅದರಲ್ಲೂ ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಅವರೂ ಇದೇ ಮಾತುಗಳನ್ನು ಆಡಿದ್ದರಿಂದ ಈ ಮಾತಿಗೆ ಇನ್ನಷ್ಟು ತೂಕ ಬಂದಿತ್ತು.

ಹೀಗೆ ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬರುವ ಹೊಸ್ತಿಲಿನಲ್ಲಿ ರಾಜ್ಯ ಹಾಗೂ ಕೇಂದ್ರದಲ್ಲಿ ಬಿಜೆಪಿ ಸರಕಾರ ಅಧಿಕಾರದ ಗಾದಿ ಹಿಡಿದರೆ, ಡಬಲ್ ಎಂಜಿನ್ ಸರಕಾರವಾಗಲಿದೆ. ಇದರಿಂದ ರಾಜ್ಯದ ಅಭಿವೃದ್ಧಿ ಏರುಗತಿಯಲ್ಲಿ ಸಾಗುತ್ತದೆ  ಎನ್ನುತ್ತಿದ್ದ ವರು, ಅಭಿವೃದ್ಧಿ ಹೋಗಲಿ ಇಂದಿನ ತುರ್ತು ಪರಿಸ್ಥಿತಿ ಬೇಕಿರುವ ಸಹಾಯವೂ ಸಿಗಲಿಲ್ಲ ಎಂದರೆ ಇದನ್ನು ಡಬಲ್ ಎಂಜಿನ್
ಎನ್ನಲು ಸಾಧ್ಯವೇ? ಇದಕ್ಕೆ ಉತ್ತರ ಜನರೇ ನೀಡಬೇಕಿದೆಯಷ್ಟೆ.