Friday, 29th November 2024

ಅರುಂಧತಿ ಏನು ಮೇಲಿಂದ ಇಳಿದು ಬಂದವರೇ ?

ಬುಲೆಟ್ ಪ್ರೂಫ್

ವಿನಯ್ ಖಾನ್

ಇತ್ತೀಚೆಗೆ ಅರುಂಧತಿ ರಾಯ್‌ಗೆ ಪೆನ್ ಪಿಂಟರ್ ಎನ್ನುವ ಒಂದು ಪ್ರಶಸ್ತಿ ಬಂತು. ಆ ಪ್ರಶಸ್ತಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಲೇಖಕರಿಗೆ ಕೊಡುವಂತಹ ಪ್ರಶಸ್ತಿ. ಈ ಅರುಂಧತಿ ರಾಯ್ ಎಂದರೆ, ಕೆಲವೊಂದಿಷ್ಟು ಮಂದಿಗೆ ಗೊತ್ತಿರುವ ಹಾಗೆ ಓರ್ವ ಬರಹಗಾರ್ತಿ, ೧೯೯೯ರಲ್ಲಿ ಅವರಿಗೆ ಮ್ಯಾನ್ ಬೂಕರ್ ಸಹ ಬಂದಿದೆ. ಹಂಗೆ
ಒಂದು ಪುಸ್ತಕ ಹಿಟ್ ಆಗಿ, ಪ್ರಶಸ್ತಿಗಳನ್ನೂ ಗಳಿಸಿ, ಅವರನ್ನು ಅಟ್ಟಕ್ಕೇರಿಸಿದಾಗ ಉಳಿದ ಹಲವು ಪುಸ್ತಕ ಮತ್ತು ಚಲನಚಿತ್ರಗಳು ಭಿಕರಿಯಾಗದೇ ಮೂಲೆಗೆ ತಳ್ಳಿದ್ದವು.

ಆದರೂ, ಜನರ ಕಣ್ಣಲ್ಲಿ ಕಾಣಬೇಕು, ಜನರು ಅವರನ್ನು ನೆನಪಿನಲ್ಲಿಟ್ಟುಕೊಳ್ಳಬೇಕು ಎಂದು ಲೇಖನವನ್ನು ಬಿಟ್ಟು ಗನ್ ಹಿಡಿಯುವವರ ಕೈ ಹಿಡಿದಳು. ಇವರೂ ಗನ್ ಹಿಡಿದುಕೊಂಡು ಅವರ ಜತೆ ಹೋಗಲಿಲ್ಲ, (ಗನ್ ಅಲ್ಲ ಅದರ ಬುಲೆಟ್ ಅನ್ನು ಹೊರುವಷ್ಟು ಶಕ್ತಿ ಕೂಡ ಅವಳಲ್ಲಿ ಇಲ್ಲ.) ಬದಲಿಗೆ ಗನ್ ತೊಗೊಂಡು ಹೋಗುವಂತೆ ಜನರನ್ನು ಪ್ರೇರೇಪಿಸಿದರು. ಬಡ, ನಿರ್ಗತಿಕ, ಆದಿವಾಸಿ, ಹಿಂದುಳಿದವರ ಮಕ್ಕಳ ತಲೆಯಲ್ಲಿ ನಕ್ಸಲಿಸಂ, ಭಯೋತ್ಪಾದಕತೆಯನ್ನು ತುಂಬಿ ಅವರನ್ನು ಕಾಡಿಗೆ ಸೇರಿಸಿ, ಇಡೀ ಭಾರತದ ಭದ್ರತೆಗೆ ಕಪ್ಪುಚುಕ್ಕೆಯಾಗುವ ಕೆಲಸವನ್ನು ಮಾಡಿದರು. ಅದೆಲ್ಲ ಏಕೆಂದರೆ, ಹೇಗಿದ್ದರೂ ಕೆಲಸ ಇರಲಿಲ್ಲ, ಪುಸ್ತಕಗಳೂ ಮಾರಾಟವಾಗುತ್ತಿರಲಿಲ್ಲ.

ಹೇಗೆ, ಏನೇನೋ ಮಾಡಿಕೊಂಡು ದೇಶದ ಸಮಗ್ರತೆಯ ವಿರುದ್ಧ, ಸೈನಿಕರ ವಿರುದ್ಧ, ಶಾಂತಿಯ ವಿರುದ್ಧ, ಭಾರತೀಯರ ವಿರುದ್ಧ ಮಾತನಾಡುತ್ತಾ ಸಮಯ ಕಳೆಯುತ್ತಿದ್ದಳು. ಆದರೆ, ಅವಳು ಮಾತ್ರ ಎಂದಿಗೂ ಆಜಾದಿ ಎಂದೋ, ಲಾಲ್ ಸಲಾಂ ಎಂದೋ ಗನ್ ಹಿಡಿದುಕೊಂಡು ಹೋಗಲಿಲ್ಲ. ಆ ಜನರ ಮುಖವನ್ನು ತೋರಿಸಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೆಲವು ಹೆಸರು-ದುಡ್ಡು ಮಾಡಿಕೊಂಡು, ವಿಲಾಸಿ ಜೀವನ ಮಾಡಿ, ಜನರ ನೆಮ್ಮದಿಗೆ ಬೆಂಕಿ ಇಟ್ಟವರು. ಇವಳ ರೀತಿಯಲ್ಲೇ ಕನ್ನಡದಲ್ಲೂ ಕೆಲವು ಕೆಲಸಕಳೆದುಕೊಂಡಿದ್ದ ಲೇಖಕರು, ಪತ್ರಕರ್ತರು ಇದೇ ರೀತಿಯ ದೇಶದ್ರೋಹ ಕೆಲಸವನ್ನು ಮಾಡಿದ್ದರು.

ಉದಾಹರಣೆಗೆ, ಗೌರಿ ಲಂಕೇಶ್, ಗಿರೀಶ್ ಕಾರ್ನಾಡ್ ಮತ್ತಿತರ ಬರಹಗಾರರು(?!). ಇವಳು ಹಾಗೇ, ತನ್ನ ಪುಸ್ತಕಗಳಿಗಿಂತ ತನ್ನ ಮಾತುಗಳಿಗೇ ತುಂಬಾ ಹೆಸರಾದವರು. ಹಾಗಂತ ಅವಳು ಮೋಟಿವೇಷನ್ ಸ್ಪೀಕರ್ ಅಲ್ಲ. ಅಥವಾ ದೇಶವೇ ಮೆಚ್ಚುವಂತಹ ಮಾತುಗಳ ನ್ನಾಡುವ ವಾಗ್ಮಿ ಅಂತೂ ಅಲ್ಲವೇ ಅಲ್ಲ. ಅಥವಾ ದೇಶಕ್ಕಾಗಿ ಹೋರಾಟ ಮಾಡಿದ ಸ್ವಾತಂತ್ರ ಹೋರಾಟಗಾರ್ತಿಯೂ ಅಲ್ಲ. ಅವರು ಮಾಡಿದ್ದು ಇಷ್ಟೇ, ಕೆಲ ಅವಳದ್ದೇ ರೀತಿಯಲ್ಲಿ ಮಾಡೋಕೆ ಏನು ಕೆಲಸ ಇಲ್ಲದೇ, ಅಥವಾ ಕೆಲಸದಿಂದ ರಿಟೈರ್ ಆಗಿ ಮನೆನಲ್ಲಿ ಕುಳಿತಿರುವವರು, ವಿದ್ಯಾರ್ಥಿ ಹೆಸರಲ್ಲಿ ೩೫ ವರ್ಷ ಮೀರಿದ್ದರೂ ಯಾವುದೋ ಕಾಲೇಜು ವಿಶ್ವವಿದ್ಯಾಲಯದಲ್ಲಿನ ವಿದ್ಯಾರ್ಥಿ ಹಾಗೂ ವಾತಾವರಣ ಹಾಳು ಮಾಡುತ್ತಿರುವ ಕೆಲವರು ಆಗಾಗ ಸೇರಿ ದೇಶವನ್ನು ಮುರಿಯುವುದರ ಬಗ್ಗೆ ಮಾತನಾಡು
ತ್ತಿದ್ದರು.

ಅಂಥಲ್ಲೆಲ್ಲ ಹೋಗಿ ದೇಶ ಮುರಿಯುವುದರ ಬಗ್ಗೆ, ನಕ್ಸಲರು ಪೊಲೀಸರ ಕೊಂದಿದ್ದನ್ನು ಸಮರ್ಥಿಸಿಕೊಂಡು, ಭಯೋತ್ಪಾದಕರನ್ನು ಸಮರ್ಥಿಸಿಕೊಂಡು,
ಮಾತನಾಡುತ್ತಿದ್ದಳು. ಅವರು ಮೊದಲೇ ಮಾತಾಡುವುದು ದೇಶ ಮುರಿಯುತ್ತಿದ್ದರ ಬಗ್ಗೆ ಆದ್ದರಿಂದ ಅದು ಆಗಾಗ ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿತ್ತು. ಈಗ ಮತ್ತೆ ಅವರು ಸುದ್ದಿಯಲ್ಲಿದ್ದುದ್ದು ಪೆನ್ ಪಿಂಟರ್ ಪ್ರಶಸ್ತಿಗೆ ಭಾಜನಳಾಗಿದ್ದಕ್ಕಲ್ಲ! ಬದಲಿಗೆ ೨೦೧೦ರಲ್ಲಿ ಅವರು ಮಾಡಿದ್ದ ಒಂದು ಕರ್ಮಕಾಂಡಕ್ಕೆ. ಏನಾಗಿತ್ತು ಎಂದರೆ, ಇವರು ಹೀಗೆ ದೇಶದ ಜನರ ಮುಂದೆ ತನ್ನ ಹಳಸು ಭಾಷಣ, ವಿಚಾರವನ್ನು ಜನರ ಮುಂದೆ ಬಿಚ್ಚಿಡುತ್ತಾ ದಿನಗಳನ್ನು ನಡೆಸುತ್ತಿದ್ದ ಸಮಯದಲ್ಲಿ, ದೆಹಲಿಯಲ್ಲಿ ನಡೆದ ‘ಅಜಾದಿ ಆನ್ ದಿ ವೇ’ ಎಂಬ ಕಾರ್ಯಕ್ರಮದಲ್ಲಿ ಇವರು ಮಾಡಿದ್ದ ಭಾಷಣ. ಅದು ಸಣ್ಣ ಪುಟ್ಟ ಭಾಷಣ ಏನಲ್ಲ. ಆ ದಿನ ‘ಕೆಲವು ಜನ’ ಕಾಶ್ಮೀರವನ್ನು ಭಾರತದಿಂದ ಮುಕ್ತಿ ಪಡಿಸುವಂತೆ ಒಂದು ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಆ ಕಾರ್ಯಕ್ರಮದಲ್ಲಿ ಇವಳೂ ಭಾಗ ವಹಿಸಿದ್ದರು, ಆ
ಕಾರ್ಯಕ್ರಮವೇನು ದೇಶ ಭಕ್ತರ ಕಾರ್ಯ ಕ್ರಮವಲ್ಲ.

ಬದಲಿಗೆ ಅಲ್ಲಿ ಇದ್ದಿದ್ದು ದೇಶವನ್ನು ತುಂಡು ಮಾಡುವವರು ಸೇರಿದ್ದ ಕೂಟ. ಅಲ್ಲಿ ಆಡುವ ಮಾತುಗಳೂ ಅಷ್ಟೇ! ದೇಶವನ್ನು ತುಂಡು ಮಾಡೋದು ಹೇಗೆ? ಇಲ್ಲಿನ ಜನರಲ್ಲಿ ಅಶಾಂತಿಯನ್ನು ಬೆಳೆಸುವುದು ಹೇಗೆ? ಅಷ್ಟಕ್ಕೂ ಅರುಂಧತಿ ರಾಯ್ ಏನು ಮೇಲಿಂದ ಬಂದವರೇ? ಕಳೆದ ಒಂದು ತಿಂಗಳಿಂದ ಕೆಲವು ಪತ್ರಿಕೆಗಳಲ್ಲಿ
ಅವಳ ಬಗ್ಗೆ ಪುಂಖಾನುಪುಂಖವಾಗಿ ಜನರು ಬರೆಯುತ್ತಲೇ ಬಂದಿದ್ದಾರೆ. ಕಾಂಗ್ರೆಸ್ಸಿನ ಶಶಿ ತರೂರ್ ಅಂತೂ ಎರಡು ಮೂರು ಪತ್ರಿಕೆಗಳಿಗೆ ಉದ್ದುದ್ದ ಅಂಕಣಗಳನ್ನೂ ಬರೆಯುತ್ತಿದ್ದಾರೆ. ಹಾಗೇ ಇನ್ನಿತರ ಕಡೆಗಳಲ್ಲಿ, ಕೆಲ ಜನ ಅವರನ್ನು ಜೈಲಿಗೆ ಹಾಕಬಾರದೆಂದು, ಸ್ವಲ್ಪ ಸಮಯ ಹೋರಾಟ(?!) ಮಾಡಿ, ಮೀಡಿಯಾದವರು ಬರುವವರೆಗೂ ನಿಂತು, ಫೋಟೋ ಸೆಸ್ಸನ್‌ಗೆ ಪೋಸ್ ಕೊಟ್ಟು ಮನೆಗೆ ಹೋದವರೆಲ್ಲ ಸೇರಿ ಇವಳ ಉಪಾದ್ವ್ಯಾಪ ತನಕ್ಕೆ ಕೇಂದ್ರ ಸರಕಾರವನ್ನು ದೂರುತ್ತಿದ್ದಾರೆ.

ಸರಿ, ಅವರ ಮಾತನ್ನು ಎಲ್ಲರೂ ಒಪ್ಪುವಂಥದ್ದೇ! ಏಕೆಂದರೆ ಅವರ ಈ ಶಿಕ್ಷೆಯನ್ನು ೧೪ ವರ್ಷಗಳ ನಂತರ ಮೇಲೆ ಕೊಡುವುದನ್ನು ಬಿಟ್ಟು, ಅವಳು ಭಾರತ ಮತ್ತು ಕಾಶ್ಮೀರಕ್ಕೆ ಯಾವುದೇ ಸಂಬಂಧ ಇಲ್ಲ, ಕಾಶ್ಮೀರ ಬೇರೇಯದ್ದೇ ದೇಶವಾಗಿ ಉಳಿಯಬೇಕು ಎಂದಾಗಲೇ ಪೊಲೀಸರ ಅವಳಿಗೆ ಲಾಠಿಯ ರುಚಿ ತೋರಿಸಬೇಕಾಗಿತ್ತು. ಆದರೆ, ಆಗಿನ ಸರಕಾರದ ವಿಳಂಬ ಧೋರಣೆಯಿಂದ ಇತ್ತೀಚೆಗೆ ಅವರಿಗೆ ಶಿಕ್ಷೆ ದೊರಕುತ್ತಿದೆ. ಅದು ಮೊದಲೇ ಆಗ ಬೇಕಾಗಿತ್ತು. ಅವರು
ಪುಸ್ತಕಗಳನ್ನು ಬರೆದು ಸ್ವಲ್ಪ ಹೆಸರು ಮಾಡಿದ ಮಾತ್ರಕ್ಕೆ ಅವಳಿಗೆ ಭಾರತ ರತ್ನ ಪ್ರಶಸ್ತಿ ಕೊಟ್ಟು ಸನ್ಮಾನಿಸಬೇಕಿತ್ತೇ? ನಮ್ಮ ದೇಶದ ಕಾನೂನಿನ ಮುಂದೆ ಯಾರು ದೊಡ್ಡವರು? ಇಂದಿರಾ ಗಾಂಧಿ ಚುನಾವಣೆಯಲ್ಲಿ ಅಧಿಕಾರವನ್ನು ಬಳಸಿ ಗೆದ್ದಿದ್ದರ ಪರಿಣಾಮ ಅವರನ್ನು ಸುಪ್ರೀಂ ಕೋರ್ಟ್ ೬ ವರ್ಷ ಸಂಸತ್ ಸದಸ್ಯ ಸ್ಥಾನದಿಂದ ವಜಾ ಮಾಡುವಂತಹ ತೀರ್ಪು ನೀಡಿತ್ತು. ಹಾಗೇ, ನರೇಂದ್ರ ಮೋದಿ ಅವರು ಮೊದಮೊದಲಿಗೆ ಗುಜರಾತ್ ಮುಖ್ಯಮಂತ್ರಿ ಆದಂತಹ ಸಮಯದಲ್ಲಿ ನಡೆದ ಗೋಧ್ರಾ ಹತ್ಯಾಕಾಂಡದ ವಿರುದ್ಧ ಅವರು ಪ್ರಧಾನ ಮಂತ್ರಿ ಆದಮೇಲೂ ಅವರ ಮೇಲೆ ಪ್ರಕರಣಗಳೂ ಇದ್ದೇ ಇದ್ದವು.

ಈ ದೇಶದಲ್ಲಿ ಯಾರು ಕಾನೂನಿಗಿಂತ ಮೇಲಿದ್ದಾರೆ? ನಮ್ಮ ದೇಶದ ಮೊದಲ ಪ್ರಧಾನಿ ಜವಾಹರ್‌ಲಾಲ್ ನೆಹರೂನಿಂದ ಎಷ್ಟೋ ಜನರಾಷ್ಟ್ರೀಯ ನಾಯಕರು, ಪ್ರಥಃಸ್ಮರಣೀಯರು ಜೈಲಿಗೆ ಹೋಗಿ ಬಂದವರೇ, ಅವರ ಮುಂದೆ ಅರುಂಧತಿ ದೊಡ್ಡವಳಾದರೇ? ಹಾಗಾದರೆ, ಮ್ಯಾನ್ಮಾರ್‌ನ ನಾಯಕಿ ಆಂಗ್ ಸಾನ್ ಸೂಕಿ ೩೩ ವರ್ಷಗಳಿಗಿಂತಲೂ ಹೆಚ್ಚು ವರ್ಷ ಜೈಲು ವಾಸ ಮಾಡಿದರು, ಅವರು ಮಾಡಿದ ತಪ್ಪೇನು? ಅವರ ದೇಶದ ಪರವಾಗಿ, ಅವರ ಜನರ ಪರವಾಗಿ ಹೋರಾಡಿದ್ದು.

ಅವರಿಗೆ ನೊಬೆಲ್ ಪ್ರಶಸ್ತಿ ಸಹ ಬಂತು. ಆದರೆ, ಅರುಂಧತಿ ಹೋರಾಡಿದ್ದು ಯಾರ ಪರವಾಗಿ? ಪೊಲೀಸರನ್ನು, ನಾಗರಿಕರನ್ನು ಕೊಲ್ಲುತ್ತಿದ್ದ ನಕ್ಸಲರ ಪರವಾಗಿ, ಭಾರತದ ನಾಗರಿಕರನ್ನು ಕೊಲ್ಲುವ ಭಯೋತ್ಪಾದಕರ ಪರವಾಗಿ. ಕಾಶ್ಮೀರದ ಪಂಡಿತರನ್ನು ರಾತ್ರೋ ರಾತ್ರಿ ತಮ್ಮದೇ ಮನೆಯಿಂದ ಓಡಿಸಿದ ಭಯೋತ್ಪಾದಕರ ಪರವಾಗಿ, ಭಾರತದ ಏರ್ ಫೋರ್ಸಿನ ಹಲವು ಸೈನಿಕರನ್ನು ಕೊಂದ ಯಾಸೀನ್ ಮಲಿಕ್ ಪರವಾಗಿ, ೨೦೦೧ರ ಪಾರ್ಲಿಮೆಂಟ್ ಮೇಲೆ ದಾಳಿ ಮಾಡಿ
೯ಕ್ಕೂ ಹೆಚ್ಚು ಜನರ ಮಾರಣಹೋಮಕ್ಕೆ ಕಾರಣವಾಗಿದ್ದ ಅಫ್ಜಲ್ ಗುರು ಪರವಾಗಿ. ನಾಳೆ ನಮ್ಮ-ನಿಮ್ಮ ಮನೆಯವರನ್ನೋ, ಸ್ನೇಹಿತರನ್ನೋ ಭಯೋತ್ಪಾದಕ ರನ್ನು ಕೊಂದರೆ, ಆ ಭಯೋತ್ಪಾದಕರ ಪರ ನಿಲ್ಲುವ ಮಾನಸಿಕತೆ ಹೊಂದಿದ ಅರುಂಧತಿ ರಾಯ್‌ರನ್ನು ಸುಮ್ಮನೆ ಬಿಡುವುದು ಏತಕ್ಕೆ? ಅಷ್ಟಕ್ಕೂ ಅರುಂಧತಿಗೆ ದೊರಕಿದ ಪ್ರಶಸ್ತಿಗಳಿಂದ ಅವರನ್ನು ಶಿಕ್ಷೆಗೆ ಗುರಿಪಡಿಸಬಾರದೆಂದರೆ, ಅಡಾಲ್ಫ್ ಹಿಟ್ಲರ್ ಸಹ ನೋಬೆಲ್ ಶಾಂತಿ ಪುರಸ್ಕಾರಕ್ಕೆ ನಾಮನಿರ್ದೇಶಿತಗೊಂಡಿ
ದ್ದರು. ಹಾಗೆಂದ ಮಾತ್ರಕ್ಕೆ ಅವರು ಮಾಡಿದ್ದೆಲ್ಲ ಒಳ್ಳೆಯದೇ? ಹಿಟ್ಲರ್‌ನಿಂದ ಸತ್ತಂತಹ ಎರಡೂವರೆ ಲಕ್ಷ ನಾಜಿಗಳ ಮಾರಣ ಹೋಮವು ನಡೆದಿದ್ದು ಇಡೀ ಪ್ರಪಂಚಕ್ಕೆ ಒಳ್ಳೆಯದೇ? ಅದರ ಜತೆಗೆ ಸ್ಟಾಲಿನ್ ಸಹ ಎಷ್ಟೋ ಬಾರಿ ನೊಬೆಲ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದ, ಹಾಗೆಂದ ಮಾತ್ರಕ್ಕೆ ಅವನು ಸಾಚಾನೇ, ಸಾಧುನೇ? ಯಾವುದೇ ಒಂದು ಪ್ರಶಸ್ತಿಯನ್ನು ಪಡೆದ ಮಾತ್ರಕ್ಕೆ ಅವರು ಒಂದು ದೇಶದ ಸಮಗ್ರತೆ, ಭದ್ರತೆಗಿಂತ ಅವಳೇ ಹೆಚ್ಚಾದರೇ? ಯಾವುದೇ ಒಂದು ಪ್ರಶಸ್ತಿ ಬಂತು ಎಂದ ಮಾತ್ರಕ್ಕೆ ಅವರು ಹೇಗೆ ಒಂದು ದೇಶಕ್ಕಿಂತ ಹೆಚ್ಚಾಗುತ್ತಾರೆ? ಎಲ್ಲದರ ಜತೆಗೆ ವಿಶ್ವಸಂಸ್ಥೆಯ ಮಾನವ ಹಕ್ಕು ಕಚೇರಿಯಿಂದಲೂ ಅವರಿಗೆ
ಬೆಂಬಲ ನೀಡುತ್ತಿದ್ದಾರೆ.

ವಿಶ್ವಸಂಸ್ಥೆಗೆ ಈ ಉಸಾಬರಿ ಏಕೆ ಬೇಕಾಗಿತ್ತು? ಕಾಶ್ಮೀರದಿಂದ ಅಲ್ಲಿನ ಜನರನ್ನು ಓಡಿಸುವಾಗ, ಭಯೋತ್ಪಾದಕರು ಎಷ್ಟೋ ದೇಶಗಳ ಜನರನ್ನು ಅಮಾನುಷ ವಾಗಿ ಕೊಲ್ಲುತ್ತಿದ್ದಾಗ, ಜಿಹಾದ್‌ನ ಹೆಸರಿನಲ್ಲಿ ಕೋಟ್ಯಾಂತರ ಜನರನ್ನು ಭಯೋತ್ಪಾದಕರು ಕೊಲ್ಲುವಾಗ, ಮಲಗಿದ್ದ ವಿಶ್ವಸಂಸ್ಥೆಗೆ ಇದೆಲ್ಲ ಏಕೆ ಬೇಕಾಗಿತ್ತು? ಸರಿ, ಕಾಶ್ಮೀರದಿಂದ ಓಡಿಸಿದ ಪಂಡಿತರ ನೆರವಿಗೆ ವಿಶ್ವಸಂಸ್ಥೆ ಎಂದಾದರೂ ನೆರವಿಗೆ ಬಂತೆ? ಊಹೂ ಇಲ್ಲ. ಕಾಶ್ಮೀರ ಪಂಡಿತರ ನರಮೇಧವಾದಾಗ, ಪಶ್ಚಿಮ ಬಂಗಾಳದಲ್ಲಿ ಹಿಂದೂಗಳ ನರಮೇಧ ವಾಗುತ್ತಿರುವಾಗ ಎಂದು ಬಾರದ ಸ್ವಯಂಘೋಷಿತ ಪ್ರಗತಿ ಪರ ಚಿಂತಕರನ್ನು ಕಾನೂನಿಗಿಂತ ಹೆಚ್ಚಿನ ಸವಲತ್ತನ್ನು ಏಕೆ
ಕೊಡಬೇಕು? ಯಾರೋ ಕೆಲವು ಜನರ ಮಾತನ್ನು ಕೇಳಿ ಸರಕಾರ ಅವಳಿಗೆ ಶಿಕ್ಷೆ ವಿಧಿಸದಿದ್ದರೆ, ಅದು ಕಾನೂನಿಗೆ ಮಾಡಿದ ಬಹುದೊಡ್ಡ ಅಪಮಾನ.

ಹಾಗೇ, ಪ್ರಶಸ್ತಿಗಳನ್ನು ಪಡೆದ ಮಾತ್ರಕ್ಕೆ ಯಾರೂ ದೇಶದ ಮುಂದೆ ದೊಡ್ಡವರಾಗುವುದಿಲ್ಲ. ಹಾಗೇ ಪ್ರಶಸ್ತಿ ಪಡೆದರಿಗೆಲ್ಲ ಶಿಕ್ಷೆಯಿಂದ ಪಾರುಮಾಡಬೇಕಾಗಿ ಬರುವುದಾದರೆ, ಕಾನೂನಿಗೂ ಮಹತ್ವ ಬರುವುದಿಲ್ಲ. ಅಲ್ಲವೇ?