Saturday, 14th December 2024

ಬಿಸಿಸಿಐಗೆ ಐಪಿಎಲ್‌ ಅಷ್ಟೊಂದು ಅಗತ್ಯವೇ ?

ಪಿಚ್ ರಿಪೋರ್ಟ್

ಪೃಥ್ವಿರಾಜ್ ಕುಲಕರ್ಣಿ

ಭಾರತ ಕ್ರಿಕೆಟ್ ತಂಡವು ವಿಶ್ವಕಪ್ ಪಂದ್ಯಾವಳಿಯಲ್ಲಿ ಕಳಪೆ ಪ್ರದರ್ಶನ ನೀಡಿದರೆ ಅಥವಾ ಬೇರಾವುದೇ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಸರಣಿ ಸೋಲು ಅನುಭವಿಸಿದಾಗಲೆಲ್ಲ ಒಂದು ಕೂಗು ಕೇಳಿಬರುತ್ತದೆ. ಅದು ‘ಐಪಿಎಲ್ ಪಂದ್ಯಾವಳಿಯನ್ನು ಬ್ಯಾನ್ ಮಾಡಬೇಕು’ ಅಂತ. ೨೦೨೩ರ ವಿಶ್ವಕಪ್‌ ನಲ್ಲಿ ಭಾರತದ ಸೋಲಿನ ನಂತರವೂ ಐಪಿಎಲ್ ಅನ್ನು ಬ್ಯಾನ್ ಮಾಡಬೇಕು ಎಂಬ ದನಿ ಸಾಮಾಜಿಕ ಜಾಲತಾಣಗಳಲ್ಲಿ ಎದ್ದಿತ್ತು. ಭಾರತದ ಆಟಗಾ ರರು ಐಪಿಎಲ್‌ನಲ್ಲಿ ತೋರುವಂಥ ಪ್ರದರ್ಶನ ಅಥವಾ ಅದಕ್ಕೆ ನೀಡುವ ಮಹತ್ವವನ್ನು ದೇಶಕ್ಕೆ ನೀಡುವುದಿಲ್ಲ ಎಂದು ಆರೋಪಿಸಿ ಅಭಿಮಾನಿಗಳು ಹೀಗೆ ನಿಷೇಧದ ಆಗ್ರಹವನ್ನು ಹೊಮ್ಮಿಸಿದ್ದುಂಟು.

‘ಡೊಮೆಸ್ಟಿಕ್ ಕ್ರಿಕೆಟ್ ಅನ್ನು ನಿರ್ಲಕ್ಷಿಸಿದರೆ ಕ್ರಮ ಕೈಗೊಳ್ಳಲಾಗುವುದು’ ಎಂಬುದಾಗಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧ್ಯಕ್ಷ ಜಯ್ ಶಾ ಅವರು ಇತ್ತೀಚೆಗಷ್ಟೇ ಯುವ ಆಟಗಾರರಿಗೆ ಎಚ್ಚರಿಕೆ ನೀಡಿದ್ದುಂಟು. ಅದನ್ನು ಮೀರಿದ ಶ್ರೇಯಸ್ ಅಯ್ಯರ್ ಹಾಗೂ ಇಶಾನ್ ಕಿಶನ್, ಕುಂಟು ನೆಪವೊಡ್ಡಿ ರಣಜಿಯಿಂದ ಹೊರಗುಳಿದಿದ್ದರು. ಬಿಸಿಸಿಐ ಮಾತನ್ನು ನಿರ್ಲಕ್ಷಿಸಿದ್ದ ಈ ಇಬ್ಬರು ಆಟಗಾರಾರೂ ಸದ್ದಿಲ್ಲದೆ ಐಪಿಎಲ್‌ಗೆ ತಯಾರಿ ನಡೆಸಿದ್ದರು.

ಟೆಸ್ಟ್ ಪಂದ್ಯದಲ್ಲಿ ಸ್ಥಾನ ಪಡೆದಿದ್ದ ಶ್ರೇಯಸ್ ಅಯ್ಯರ್, ಬೆನ್ನುನೋವಿನ ನೆವ ಹೇಳಿ ಟೆಸ್ಟ್ ಅನ್ನು ತಪ್ಪಿಸಿಕೊಂಡರು. ಇದಕ್ಕೆ ಪ್ರತಿಯಾಗಿ ಬಿಸಿಸಿಐ ಇತ್ತೀಚೆಗೆ ಒಂದು ನಿಷ್ಠುರ ನಿರ್ಧಾರವನ್ನು ಕೈಗೊಂಡಿದೆ. ತಂಡದ ಬಲಿಷ್ಠ ಆಟಗಾರರಾಗಿದ್ದ ಇಶಾನ್ ಕಿಶನ್ ಹಾಗೂ ವಿಶ್ವಕಪ್‌ನಲ್ಲಿ ಮಿಂಚಿದ್ದ ಶ್ರೇಯಸ್ ಅಯ್ಯರ್ ಅವರನ್ನು ತನ್ನ ಒಪ್ಪಂದದಿಂದ ಹೊರಗಿಟ್ಟು ಚರ್ಚೆಗೆ ವೇದಿಕೆ ಕಲ್ಪಿಸಿದೆ.

ಈ ಇಬ್ಬರು ಆಟಗಾರರು ಭಾರತದ ಪರ ಉನ್ನತ ಪ್ರದರ್ಶನ ನೀಡದವರು. ಶ್ರೇಯಸ್ ಈ ಹಿಂದೆಯೂ ಗಾಯದಿಂದಾಗಿ ಕ್ರಿಕೆಟ್‌ನಿಂದ ದೂರವಾಗಿದ್ದರು; ಆದರೂ ಅವರಿಗೆ ವಿಶ್ವಕಪ್‌ನಲ್ಲಿ ಸ್ಥಾನ ದೊರಕಿತ್ತು. ಕಳೆದ ವರ್ಷದ ವಿಶ್ವಕಪ್ ಪಂದ್ಯಾವಳಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಅವರು ಶತಕವನ್ನೂ ಬಾರಿಸಿ ಗಮನ ಸೆಳೆದಿದ್ದುಂಟು. ಆದರೆ ತರುವಾಯದ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಅವರು ಮಿಂಚಿನ ಆಟವಾಡಲಿಲ್ಲ. ಸದ್ಯ ಬಿಸಿಸಿಐನ ಒಪ್ಪಂದದಿಂದ ಹೊರಬಿದ್ದು ರಣಜಿ ಆಡುತ್ತಿದ್ದಾರೆ. ಇನ್ನು, ಇಶಾನ್ ಕಿಶನ್ ವಿಶ್ವಕಪ್ ತಂಡದಲ್ಲಿದ್ದರೂ ಕಣಕ್ಕಿಳಿದಿದ್ದು ೨ ಪಂದ್ಯಗಳಲ್ಲಿ ಮಾತ್ರ. ಅದಾದ ಬಳಿಕ ಅವರು ತಂಡದಲ್ಲಿ ಹೆಚ್ಚಾಗಿ ಕಾಣಿಸಲಿಲ್ಲ.

ಬಿಸಿಸಿಐ ಅವರನ್ನು ಟೆಸ್ಟ್ ಆಡುವಂತೆ ಕೇಳಿದ್ದಕ್ಕೆ, ‘ಅದಕ್ಕೆ ಸಂಪೂರ್ಣ ತಯಾರಿಲ್ಲ, ಮಾನಸಿಕ ವಿರಾಮ ಬೇಕಿದೆ’ ಎಂದಿದ್ದರು ಕಿಶನ್. ಅಂತೆಯೇ ಟೆಸ್ಟ್‌ಗೆ ತಯಾರಿ ಮಾಡಿಕೊಳ್ಳುವ ಪ್ರಯತ್ನಕ್ಕೆ ಅವರು ಮುಂದಾಗಲಿಲ್ಲ. ಇದೀಗ ಐಪಿಎಲ್ ಸನಿಹ ಬಂದಿದ್ದೇ ತಡ, ಅಭ್ಯಾಸ ಶುರುಮಾಡಿಕೊಂಡಿದ್ದಾರೆ. ಬಿಸಿಸಿಐ ಹೇಳಿದ ಬಳಿಕ ರಣಜಿ ತ್ಯಜಿಸಿದ ಶ್ರೇಯಸ್, ಕೆಕೆಆರ್ ಕ್ಯಾಂಪ್‌ಗೆ ಭೇಟಿ ನೀಡಿದ್ದರು ಎಂದು ವರದಿಯಾಗಿತ್ತು. ಹಾಗೆ ನೋಡಿದರೆ, ಇವರಿಬ್ಬರನ್ನೂ ಒಪ್ಪಂದದಿಂದ ಹೊರಗಿಟ್ಟಿರುವುದು ಸರಿಯೇ ಎನ್ನಿಸುತ್ತದೆ. ಭಾರತದ ಕೆಲವು ಆಟಗಾರರು ಐಪಿಎಲ್ ಸಂದರ್ಭದಲ್ಲಿ ಮಾತ್ರ ಫಿಟ್ ಇರುತ್ತಾರೆ; ದೇಶದ ಪರವಾಗಿ ಆಡುವುದು ಎಂದರೆ ಅವರಿಗೆ ಗಾಯಗಳಾಗುವುದು ಸಾಮಾನ್ಯ ಎನಿಸುತ್ತದೆ, ಅಲ್ಲವೇ? ಐಪಿಎಲ್ ಅಂದರೆ ಸಾಕು, ಹಾಸಿಗೆ ಹಿಡಿದಿರುವ
ಆಟಗಾರರೂ ‘ಥಟ್’ ಅಂತ ಎದ್ದು ಬ್ಯಾಟ್ ಹಿಡಿದು ನಿಲ್ಲುತ್ತಾರೆ.

ಇದಕ್ಕೆ ಹಾರ್ದಿಕ್ ಪಾಂಡ್ಯಾ ಒಂದು ಒಳ್ಳೆಯ ಉದಾಹರಣೆ. ವಿಶ್ವಕಪ್ ಪಂದ್ಯ ಒಂದರಲ್ಲಿ ಹಾರ್ದಿಕ್ ಪಾಂಡ್ಯಾ ಬೌಲ್ ಮಾಡುವಾಗ ಎಡವಿದರೇನೋ ಸರಿ; ಆದರೆ ಮುಂದೆಲ್ಲೂ ಕಾಣಿಸಲೇ ಇಲ್ಲ. ಬದಲಿಗೆ ಸ್ಟ್ಯಾಂಡ್ ನಲ್ಲಿದ್ದುಕೊಂಡು ಎಳನೀರು ಕುಡಿಯುತ್ತ ಭಾರತದ ಪಂದ್ಯವನ್ನು ವೀಕ್ಷಿಸುತ್ತಿದ್ದರು. ವಾಸ್ತವವಾಗಿ ವಿಶ್ವಕಪ್ ಫೈನಲ್‌ನಲ್ಲಿ ಅವರ ಅವಶ್ಯಕತೆ ಇತ್ತು. ಆದರೆ ಆಸ್ಟ್ರೇಲಿಯಾ ತಂಡದ ಮ್ಯಾಕ್ಸ್‌ವೆಲ್ ಅವರಿಗೆ ಯಾವ ಪರಿ ಗಾಯವಾಗಿತ್ತು
ಎಂಬುದನ್ನು ನೋಡಿದ್ದೀರಿ; ಅಂಥ ನೋವಿನಲ್ಲೂ ಅವರು ತಂಡವನ್ನು ಗೆಲ್ಲಿಸಿದ್ದರು. ಅದೊಂದು ಬೇರೆ ವಿಷಯ ಬಿಡಿ.

ಒಟ್ಟಾರೆ ಹೇಳುವುದಾದರೆ, ಭಾರತದ ಕೆಲವು ಆಟಗಾರರು ಐಪಿಎಲ್‌ಗೆ ಕೊಡುವಷ್ಟು ಮಹತ್ವವನ್ನು ಅಂತಾರಾಷ್ಟ್ರೀಯ ಪಂದ್ಯಗಳಿಗೆ ನೀಡುವುದಿಲ್ಲ. ದೇಶೀಯ ಕ್ರಿಕೆಟ್ ಪಂದ್ಯಗಳನ್ನಂತೂ ‘ಇದ್ಯಾವ ಲೆಕ್ಕ’ ಎಂಬಂತೆ ನೋಡುತ್ತಾರೆ. ಬಹುತೇಕರ ವಿಷಯದಲ್ಲಿ ಇದು ಸತ್ಯವೆನ್ನಿಸುತ್ತದೆ. ಯುವ ಆಟಗಾರರೂ ಇದೇ ಚಾಳಿಯನ್ನು ಬೆಳೆಸಿಕೊಳ್ಳುತ್ತಿರುವುದು ವಿಷಾದನೀಯ. ಅವರು ಮೊದಮೊದಲು ಭಾರತ ತಂಡಕ್ಕೆ ಆಡಬೇಕೆಂದು ಆಸೆಯಿಟ್ಟು ಕೊಳ್ಳುತ್ತಿದ್ದರು; ಆದರೀಗ ಐಪಿಎಲ್‌ನಲ್ಲಿ ಆಡಿ ಸಾಕಷ್ಟು ಗಂಟುಮಾಡಿಕೊಂಡರೆ ಸಾಕು ಎಂದು ನೋಡುತ್ತಾರೆ!

ಐಪಿಎಲ್‌ನಲ್ಲಿ ಆಡಿದಷ್ಟು ಸರಳ ಕೆಲಸ ಅಲ್ಲವೇ ಅಲ್ಲ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಆಡುವುದು. ಐಪಿಎಲ್‌ನಲ್ಲಿನ ಭರ್ಜರಿ ಪ್ರದರ್ಶನವನ್ನು
ಪರಿಗಣಿಸಿ ಸೂರ್ಯಕುಮಾರ್ ಯಾದವ್ ಅವರನ್ನು ವಿಶ್ವಕಪ್ ತಂಡಕ್ಕೆ ಆಯ್ಕೆಮಾಡಿಕೊಳ್ಳಲಾಯಿತು. ಆದರೆ ಇದರ ಪರಿಣಾಮವನ್ನು ಫೈನಲ್ ಪಂದ್ಯದಲ್ಲಿ ನೋಡಿದ್ದೇವೆ. ಯಾವ ಷಾರ್ಟ್ ಬಾಲ್ ಅನ್ನು ಸಿಕ್ಸ್ ಹೊಡೆದೇ ತೀರಿಸಿಕೊಳ್ಳುತ್ತಿದ್ದರೋ, ಅದೇ ಷಾರ್ಟ್ ಬಾಲ್ ಫೈನಲ್ ನಲ್ಲಿ ಅವರ ಬೆವರಿಳಿಸಿದ್ದು ಗೊತ್ತಿರುವ ಸಂಗತಿಯೇ.

‘ದೇಶೀಯ ಕ್ರಿಕೆಟ್ ನಿರ್ಲಕ್ಷಿಸಿದರೆ ಹುಷಾರ್’ ಎಂದು ಎಚ್ಚರಿಸುವ ಅದೇ ಬಿಸಿಸಿಐ, ಫ್ರಾಂಚೈಸಿಗಳ ಮೊರೆಹೋಗಿ ಪ್ರತಿವರ್ಷ ಜಗತ್ತಿನ ಅತಿದೊಡ್ಡ ಟೂರ್ನಿಯನ್ನು ಆಯೋಜಿಸುತ್ತದೆ. ಐಪಿಎಲ್ ಬಂದರೆ ಸಾಕು, ಭಾರತದೆಲ್ಲೆಡೆ ಸಂಭ್ರಮ ಸೃಷ್ಟಿಯಾಗುತ್ತದೆ. ಇದೇ ವೇಳೆ ನಡೆಯುವ ‘ಫೈನ್‌ವಾರ್’ನಲ್ಲಿ ಭಾರತದ ಆಟಗಾರರಿಗೆ ಮಾಡುವ ಅವಮಾನದ ಬಗ್ಗೆ ನಿಮಗೆ ಹೇಳಬೇಕಿಲ್ಲ. ಭಾರತದಲ್ಲಿ ಅವರು ಆಡಿರುವ ಆಟ ಮತ್ತು ದೇಶಕ್ಕೆ ಅವರು ನೀಡಿರುವ
ಕೊಡುಗೆಯನ್ನು ಮರೆತು ಅವರನ್ನು ಟ್ರೋಲ್ ಮಾಡಲಾಗುತ್ತದೆ. ಅದೇ ರೀತಿ, ತಂಡ-ತಂಡಗಳ ನಡುವೆ, ಆಟಗಾರರ ಮಧ್ಯೆ ಪೈಪೋಟಿ ನಡೆಯುತ್ತದೆ.

ಉದಾಹರಣೆಗೆ, ಕಳೆದ ಐಪಿಎಲ್‌ನಲ್ಲಿ ಭಾರತದ ಮಾಜಿ ಆಟಗಾರ ಗೌತಮ್ ಗಂಭೀರ್ ಹಾಗೂ ವಿರಾಟ್ ಕೊಹ್ಲಿ ಅವರ ಮಧ್ಯೆ ನಡೆದ ಜಗಳವೊಂದು ಇಡೀ ಸಾಮಾಜಿಕ ಜಾಲತಾಣವನ್ನೇ ಅಲುಗಾಡಿಸಿತ್ತು. ಗಂಭೀರ್ ಮತ್ತು ಕೊಹ್ಲಿ ಅವರನ್ನು ಯಾವ ಪರಿಯಲ್ಲಿ ಟ್ರೋಲ್ ಮಾಡಲಾಗಿತ್ತೆಂದರೆ, ಅವರು
ಭಾರತೀಯರೇ ಅಲ್ಲ ಎಂಬಂತೆ ನೋಡಲಾಗಿತ್ತು. ಐಪಿಎಲ್ ಪಂದ್ಯಾವಳಿಯಲ್ಲಿ ಕ್ರಿಕೆಟ್‌ನ ಕಸುಬುಗಾರಿಕೆಯನ್ನು ಅಥವಾ ಕುಸುರಿ ಕಲೆಯನ್ನು
ಕಲಿಯಲು ಆಗುವುದಿಲ್ಲ ಎನ್ನಲಾಗದು. ಹಾಗಿದ್ದಲ್ಲಿ, ಐಪಿಎಲ್ ಅನ್ನು ಯಾಕೆ ಬ್ಯಾನ್ ಮಾಡಬೇಕು? ಎಂಬ ಪ್ರಶ್ನೆಗೆ ಉತ್ತರವೊಂದೇ- ಇಲ್ಲಿ ಆಟಗಾರರು ತಮ್ಮನ್ನು ಖರೀದಿ ಮಾಡುವ -ಂಚೈಸಿಗಾಗಿ ಆಡುತ್ತಾರೆ. ಇದೂ ಒಂದರ್ಥದಲ್ಲಿ ‘ಡೊಮೆಸ್ಟಿಕ್ ಕ್ರಿಕೆಟ್’ ಆದರೂ, ಆಟಗಾರರು ಇಲ್ಲಿ ತಮ್ಮ ರಾಜ್ಯದ ಪರವಾಗಿ ಆಡುವುದಿಲ್ಲ; ಆದರೆ ತಮ್ಮ ರಾಜ್ಯದ ಅಭಿಮಾನಿಗಳು ತಮ್ಮನ್ನು ಬೆಂಬಲಿಸಬೇಕೆಂದು ನಿರೀಕ್ಷೆ ಮಾಡುತ್ತಾರೆ.

ಐಪಿಎಲ್‌ನಲ್ಲಿ ತಮ್ಮನ್ನು ಖರೀದಿಸಿದ ಫ್ರಾಂಚೈಸಿಗೆ ಅವರು ನಿಷ್ಠರಾಗಿರುತ್ತಾರೆಯೇ ವಿನಾ, ಆಯಾ ರಾಜ್ಯಕ್ಕೆ ಅಲ್ಲ. ರಾಯಲ್ ಚಾಲೆಂಜರ‍್ಸ್ ಬೆಂಗಳೂರು ತಂಡದಲ್ಲಿ ಕರ್ನಾಟಕದ ಆಟಗಾರರೇ ಇಲ್ಲದಿರುವುದು ದುರದೃಷ್ಟಕರ. ಐಪಿಎಲ್‌ನಲ್ಲಿ ಆಟಗಾರರಿಗೆ ಸಾಕಷ್ಟು ದುಡ್ಡು ಕೊಡಲಾಗುತ್ತದೆ; ಹೀಗಾಗಿ ಅವರು ದೇಶದ ತಂಡಕ್ಕಾಗಲೀ ರಾಜ್ಯಕ್ಕಾಗಲೀ ಆಡಲು ಬಯಸುವುದಿಲ್ಲ. ಈ ಧೋರಣೆಯನ್ನು ಬಿಸಿಸಿಐ ಗಂಭೀರವಾಗಿ ಪರಿಗಣಿಸಬೇಕಿದೆ. ಜತೆಗೆ, ಐಪಿಎಲ್‌ನಲ್ಲಿ ಭಾರತೀಯ ಆಟಗಾರರಿಗಿಂತಲೂ ವಿದೇಶಿ ಆಟಗಾರರ ಪಾರಮ್ಯವೇ ಇರುತ್ತದೆ; ಹೀಗಾಗಿ ಐಪಿಎಲ್ ಆಡಿದ ಪ್ರತಿಯೊಬ್ಬ ವಿದೇಶಿ ಆಟಗಾರನಿಗೂ ಭಾರತದ ಪಿಚ್‌ಗಳ ಸ್ಥಿತಿಗತಿ ಗೊತ್ತಾಗಿಬಿಡುತ್ತದೆ. ಈ ಕಾರಣದಿಂದಲೇ ಇರಬೇಕು, ಭಾರತದಲ್ಲಿ ನಡೆಯುವ ವಿಶ್ವಕಪ್ ಅಥವಾ ಬೇರಾವುದೇ ಪಂದ್ಯಾವಳಿಯಲ್ಲಿ ವಿದೇಶಿ ಆಟಗಾರರು ಭಾರತ ತಂಡದ ವಿರುದ್ಧ ಆಕ್ರಮಣಕಾರಿಯಾಗಿ ಆಡುತ್ತಾರೆ. ಐಪಿಎಲ್‌ನಿಂದಾಗಿ ಎಷ್ಟೋ ಆಟಗಾರರ ಪ್ರತಿಭೆ ಹೊರಗೆ ಬಂದಿರುವುದು ನಿಜ; ಆದರೆ ಇಲ್ಲಿ ವಿದೇಶಿ ಆಟಗಾರರಿಗೇ ಹೆಚ್ಚಿನ ಲಾಭವಾಗುತ್ತಿದೆ.

ಇಷ್ಟೆಲ್ಲ ನಕಾರಾತ್ಮಕತೆ ಹೊಂದಿರುವ ಐಪಿಎಲ್, ಜಗತ್ತಿನ ಅತ್ಯಂತ ಶ್ರೀಮಂತ ಕ್ರಿಕೆಟ್ ಬೋರ್ಡ್ ಎನಿಸಿಕೊಂಡಿರುವ ಬಿಸಿಸಿಐಗೆ ಅಗತ್ಯವಿದೆಯೇ? ಎಂಬ ಪ್ರಶ್ನೆ ಕಾಡಿದರೆ ಅಚ್ಚರಿಯೇನಿಲ್ಲ, ಅಲ್ಲವೇ?

(ಲೇಖಕರು ಪತ್ರಕರ್ತರು)