Friday, 13th December 2024

ಗಾಂಚಾಲಿ ಗಾಜಾಗಳಿಗೆ ಇಕ್ಕಿದ ಇಸ್ರೇಲ್‌ !

ನೂರೆಂಟು ವಿಶ್ವ

ವಿಶ್ವೇಶ್ವರ ಭಟ್‌

ಇವೆಲ್ಲಾ ಬೇಕಿತ್ತಾ? ಸುಮ್ಮನೆ ಮಲಗಿದ್ದ ಸಿಂಹವನ್ನು ಕೆಣಕಲು ಹೋಗಿ ಸಿಂಗಳೀಕ ಅಂಡಿಗೆ ಒದೆಸಿಕೊಂಡಿದೆ. ಇಸ್ರೇಲಿಗಳ ಕೈ ಯಲ್ಲಿ ಮತಾಂಧ ಪ್ಯಾಲಸ್ತೀನಿಗಳು ಮುಕಳಿ ಹರಿಯೋ ರೀತಿ ಹೊಡೆತ ತಿನ್ನುತ್ತಿದ್ದಾರೆ. ಗಾಜಾ ಪಟ್ಟಿ ಪ್ರದೇಶ ಇಸ್ರೇಲಿಗಳ ರಾಕೆಟ್ ದಾಳಿಗೆ ಮಟ್ಟಸವಾಗಿದೆ.

ಇನ್ನು ಹತ್ತು ದಿನ ಇಸ್ರೇಲಿ ಪಡೆಗಳೇನಾದರೂ, ರಾಕೆಟ್ ದಾಳಿಯನ್ನು ಮುಂದುವರಿಸಿದರೆ, ಲಕ್ಕೇ ಶಾನುಭಾಗರ ತುಂಡು ಪುಟ ಗೋಸಿಯಂತಿರುವ ಗಾಜಾ ಪಟ್ಟಿಯನ್ನು ಭೂಪಟದಲ್ಲಿ ಎಲ್ಲಿದೆಯೆಂದು ಹುಡುಕಬೇಕು. ಆ ರೀತಿ ಗಾಜಾವನ್ನು ಹುಟ್ಟಡ ಗಿಸಲು ಇಸ್ರೇಲ್ ಟೊಂಕ ಕಟ್ಟಿ ನಿಂತಿದೆ. ಕಳೆದ ಒಂದು ವಾರದಿಂದ ಇಸ್ರೇಲ್ ನಡೆಸುತ್ತಿರುವ ಬಾಂಬ್, ರಾಕೆಟ್ ಮತ್ತು ಕ್ಷಿಪಣಿ ದಾಳಿಯ ಅಬ್ಬರದಲ್ಲಿ ವಿಶ್ವಸಂಸ್ಥೆ, ಅಮೆರಿಕ ಸೇರಿದಂತೆ ಜಗತ್ತಿನ ಬಲಿಷ್ಠ ರಾಷ್ಟ್ರಗಳು, ಅರಬ್ ದೇಶಗಳ ಒಕ್ಕೂಟಗಳು ಪರಿಪರಿ ಯಾಗಿ ಮಾಡಿಕೊಂಡ ಮನವಿ ಕೇಳದಂತಾಗಿದೆ.

‘ಮುಟ್ಟಿದರೆ ತಟ್ಟಿ ಬಿಡ್ತೀನಿ’ ಎಂಬ ಮಾತನ್ನು ತನ್ನ ಘೋಷವಾಕ್ಯವಾಗಿ ಮಾಡಿಕೊಂಡಿರುವ ಇಸ್ರೇಲಿಗಳು, ಗಾಜಾದಲ್ಲಿರುವ ಹಮಾಸ್ ಉಗ್ರರನ್ನು ಖಸ್ ಮಾಡುತ್ತಿದ್ದಾರೆ. ಮಧ್ಯಪ್ರಾಚ್ಯ ತತ್ತರಿಸಿದೆ. ಅಕ್ಷರಶಃ ಗಾಜಾ ಹೊತ್ತಿ ಉರಿಯುತ್ತಿದೆ. ಹಿಂದೆಂದೂ ಕಾಣದ ಇಸ್ರೇಲ್ ವೈಮಾನಿಕ ದಾಳಿಯಿಂದ ಗಾಜಾ ಭಾಗಶಃ ನೆಲಸಮವಾಗಿದೆ. ಹಮಾಸ್ ಉಗ್ರರಿಗೆ ಮತ್ತು ಮತಾಂಧ ಪ್ಯಾಲಸ್ತೀನಿ ಯರಿಗೆ ಒಂದು ಗತಿ ಕಾಣಸಲೇಬೇಕು ಎಂದು ಇಸ್ರೇಲ್ ಈ ಸಲ ತೀರ್ಮಾನಿಸಿದಂತಿದೆ.

ಒಂದೆಡೆ ಜಾಗತಿಕ ನಾಯಕರು ಇಸ್ರೇಲಿಗೆ ದಾಳಿಯನ್ನು ನಿಲ್ಲಿಸಿ ಎಂದು ಬಿನ್ನವಿಸಿಕೊಳ್ಳುತ್ತಿದ್ದರೆ, ತಮ್ಮ ಸೈನಿಕರು ಎಲ್ಲಿವರೆಗೂ
ನುಗ್ಗುತ್ತಾರೋ ಅಲ್ಲಿ ತನಕ ನಮ್ಮ ಗಡಿ. ಕದನ ವಿರಾಮಕ್ಕೆ ನನ್ನ ಮೇಲೆ ಒತ್ತಡ ಬರುತ್ತಿದೆ, ಆದರೆ ಈ ಸಲ ನಮ್ಮ ಗುರಿಯನ್ನು ಈಡೇರಿಸಿದ ನಂತರವೇ ವಿರಾಮ ತೆಗೆದುಕೊಳ್ಳುತ್ತೇವೆ, ಅಲ್ಲಿ ತನಕ ನಮ್ಮ ದಾಳಿ ಮುಂದುವರಿಯಲಿದೆ’ ಎಂದು ಇಸ್ರೇಲ್ ಪ್ರಧಾನಿ ಹೇಳಿದ್ದಾರೆ. ಈ ಸಲ ಏನಾದರೂ ಒಂದು ನಿರ್ಣಯವಾಗಲಿ, ನೋಡಿಯೇ ಬಿಡೋಣ ಎಂಬ ಮನಸ್ಥಿತಿಯಲ್ಲಿ ಇಸ್ರೇಲ್
ಇದ್ದಂತಿದೆ. ತನ್ನ ಪಾಡಿಗೆ ತಾನಿದ್ದರೂ, ಕಾಲು ಕೆದರಿ ಜಗಳಕ್ಕೆ ಬಂದ ಹಮಾಸ್ ಉಗ್ರರನ್ನು ಇಸ್ರೇಲ್ ಹೆಡೆಮುರಿ ಕಟ್ಟುತ್ತಿದೆ.

ಇಪ್ಪತ್ತಕ್ಕಿಂತ ಹೆಚ್ಚು ಹಮಾಸ್ ಉಗ್ರ ನಾಯಕರುಗಳ ದೇಹ ಗುರುತಿಸಲಾಗದಷ್ಟು ಛಿದ್ರವಾಗಿ ಹೋಗಿವೆ. ಇಷ್ಟಾದರೂ ಇಸ್ರೇಲ್ ಸುಮ್ಮನಾಗಿಲ್ಲ. ದಾಳಿಯನ್ನು ಅವ್ಯಾಹತವಾಗಿ ಮುಂದುವರಿಸಿದೆ. ಅಷ್ಟಕ್ಕೂ ಈ ಭೀಕರ ಕದನಕ್ಕೆ ಕಾರಣಗಳೇನು? ಮೊದಲು
ಯಾರು ಕ್ಯಾತೆ ತೆಗೆದಿದ್ದು? ಈ ಹೊಡ್ಪಡೆಗೆ ಕುಮ್ಮಕ್ಕೇನು? ನೋಡೋಣ. ತನ್ನ ದೇಶದ ಸರಹದ್ದಿಗೆ, ಪ್ಯಾಲಸ್ತೀನ್ ಮತ್ತು ಗಾಜಾ ಪಟ್ಟಿ ಪ್ರದೇಶವನ್ನು ಕಟ್ಟಿಕೊಂಡಿರುವ ಇಸ್ರೇಲ್, ಸ್ವಾತಂತ್ರ್ಯ ಬಂದಾಗಿನಿಂದ (1948) ಒಂದು ದಿನ ಸಹ ನಿಶ್ಚಿಂತೆ ಯಿಂದ ನಿದ್ದೆ ಮಾಡಿದ್ದಿಲ್ಲ. ಇಷ್ಟೂ ಸಾಲದೆಂಬಂತೆ, ಸುತ್ತಲೂ ಅರಬ್ ರಾಷ್ಟ್ರಗಳಾದ ಸಿರಿಯಾ, ಲೆಬನಾನ್, ಜೋರ್ಡನ್, ಸೌದಿ ಅರೇಬಿಯಾ, ಇರಾನ್, ಇರಾಕ್ ಮತ್ತು ಈಜಿಪ್ಟ್.

ಸಿರಿಯಾದ ಉಗ್ರರಂತೂ ಜಗತ್ತಿನ ಪ್ರಮುಖ ದೇಶಗಳ ವಿಧ್ವಂಸಕ ಕೃತ್ಯಗಳನ್ನು ನಡೆಸಿದರೂ, ಪಕ್ಕದಲ್ಲಿಯೇ ಇರುವ ಇಸ್ರೇಲಿಗಳ ಮೇಲೆ ಇನ್ನೂ ಕೈಹಾಕಿಲ್ಲ. ಆ ಬಗ್ಗೆ ಇನ್ನೂ ಧೈರ್ಯ ಮಾಡಿಲ್ಲ. ಯಾವ ಅರಬ್ ದೇಶಗಳಿಗೂ ಇಸ್ರೇಲ್ ಕಂಡರೆ ಆಗಿಬರಲ್ಲ. ಇವು ಲೆಬನಾನಿನ ಹಿಜಬುಗಳು, ಇರಾನಿನ ರೆವಲೂಷನರಿ ಗಾರ್ಡ್ಸ್, ಸಿರಿಯಾದ ಐಸಿಸ್ ಉಗ್ರರು ಮತ್ತು ಗಾಜಾದ ಹಮಾಸ್ ಉಗ್ರರನ್ನು ಎತ್ತಿಕಟ್ಟಿ ಸದಾ ತರಲೆ – ತಂಟೆ ಮಾಡಿಸುತ್ತಲೇ ಇರುತ್ತವೆ. ಪ್ಯಾಲಸ್ತೀನಿ ಉಗ್ರರರಿಗೆ ಜಗತ್ತಿನ ಎಲ್ಲಾ ಮುಸ್ಲಿಂ ದೇಶಗಳಿಂದ ಶಸಾಸ, ಕ್ಷಿಪಣಿ, ಬಾಂಬ್ ಮತ್ತು ಹಣ ಸರಬರಾಜಾಗುತ್ತವೆ.

ಇದನ್ನು ಪ್ಯಾಲಸ್ತೀನಿ ಉಗ್ರರು, ಈಜಿಪ್ಟ್ ಮೂಲಕ ಗಾಜಾದಲ್ಲಿರುವ ಹಮಾಸ್ ಉಗ್ರರಿಗೆ ರವಾನಿಸುತ್ತಾರೆ. ಇಲ್ಲದಿದ್ದರೆ, ತಿನ್ನಲು ಗತಿ – ಗೋತ್ರವಿಲ್ಲದ ಆ ಗಾಜಾ ಜನರ ಕೈಯಲ್ಲಿ ಆಧುನಿಕ ಬಂದೂಕು, ಕ್ಷಿಪಣಿ, ಬಾಂಬುಗಳು ಹೇಗೆ ಬರಲು ಸಾಧ್ಯ? ಅಷ್ಟಕ್ಕೂ ಆ ಗಾಜಾ ಎನ್ನುವುದು ಭೂಮಿ ಮೇಲಿನ ನರಕ. ಅದು ವಾಸಕ್ಕೆ ಯೋಗ್ಯವಲ್ಲದ, ಅತ್ಯಂತ ಅಪಾಯಕಾರಿ ಪ್ರದೇಶ ಎಂದು ಹಲವು
ಅಂತಾರಾಷ್ಟ್ರೀಯ ಸಂಸ್ಥೆಗಳೇ ಘೋಷಿಸಿವೆ. ಜಗತ್ತಿನ ಅತ್ಯಂತ ಜನನಿಬಿಡ ಪ್ರದೇಶಗಳಲ್ಲಿ ಮೂರನೇ ಸ್ಥಾನದಲ್ಲಿರುವ ಗಾಜಾ ಪಟ್ಟಿ ಪ್ರದೇಶದಲ್ಲಿ ಇಪ್ಪತ್ತು ಲಕ್ಷ ಜನ ವಾಸಿಸುತ್ತಿದ್ದಾರೆ.

ಆ ಪೈಕಿ ಹದಿಮೂರು ಲಕ್ಷ ಮಂದಿ, ಮೂವತ್ತು ವರ್ಷಕ್ಕಿಂತ ಕಡಿಮೆ ವಯಸ್ಸಿನವರು. ಸುಮಾರು ಹನ್ನೆರಡು ಲಕ್ಷ ಮಂದಿ
ನಿರುದ್ಯೋಗಿಗಳು. ಅಲ್ಲಿ ದಿನದಲ್ಲಿ ನಾಲ್ಕು ತಾಸು ಸಹ ಕರೆಂಟ್ ಇರುವುದಿಲ್ಲ. ಅಲ್ಲಿನ ನೀರು ಕುಡಿಯಲು ಯೋಗ್ಯವಾಗಿಲ್ಲ. ಅದೊಂದು ದರಿದ್ರ ಕೊಂಪೆ!

ಆದರೆ ಆ ಗಾಜಾ ಎಂಬ ನುಜ್ಜುಗುಜ್ಜಾಗಿರುವ ಪ್ರದೇಶದಲ್ಲಿ ಸುಮಾರು ಐದು ಲಕ್ಷ ಮಂದಿ ಅಕ್ರಮ ಮತ್ತು ಹಿಂಸಾತ್ಮಕ ಚಟುವಟಿಕೆಗಳಲ್ಲಿ ತೊಡಗಿದ್ದಾರೆ! ಅವರಲ್ಲಿ ಅನೇಕರು ಮತಾಂಧರು. ಬಿಡಿಗಾಸಿಗಾಗಿ ಯಾವ ಹೇಯ ಕೃತ್ಯವೆಸಗಲೂ ಹಿಂದೆ – ಮುಂದೆ ನೋಡದವರು. ಇಂಥ ಪುಂಡ – ಪೋಲಿಗಳ ಕೈಗೆ ಬಂದೂಕು ಕೊಟ್ಟು, ಇಸ್ರೇಲನ್ನು ಗುರಿಯಾಗಿಸಿ, ಆಗಾಗ ಅಕ್ಕ – ಪಕ್ಕದ ದೇಶಗಳು ಚೆಂದ ನೋಡಿ, ಮಜಾ ತೆಗೆದುಕೊಳ್ಳುತ್ತವೆ. ಇಂಥವರ ಹುಚ್ಚಾಟಗಳಿಗೆ ಇಸ್ರೇಲ್ ನಲುಗಿ ಹೋಗಬೇಕಿತ್ತು.

ಕಾರಣ ಇದು ಒಂದೆರಡು ದಿನಗಳ ಉಪಟಳವಲ್ಲ. ಪ್ರತಿ ದಿನವೂ ಒಂದಿಂದು ಚೇಷ್ಟೆ ಇದ್ದಿದ್ದೇ. ಅದರಲ್ಲೂ ಹದಿನೈದು ವರ್ಷಗಳ ಹಿಂದೆ, ಗಾಜಾವನ್ನು ಹಮಾಸ್ ಉಗ್ರರು ವಶಪಡಿಸಿಕೊಂಡು ತಮ್ಮ ಪ್ರಭುತ್ವವನ್ನು ಸ್ಥಾಪಿಸಿಕೊಂಡ ಬಳಿಕ, ಇಸ್ರೇಲಿಗೆ ಮಗ್ಗುಲ ಮುಳ್ಳಾಗಿ ಕಾಡುತ್ತಿದ್ದಾರೆ. ಗಾಜಾದ ಕಿತ್ತು ತಿನ್ನುವ ಬಡತನ, ಅನಕ್ಷರತೆ, ಅನಾರೋಗ್ಯ, ಹಿಂಸಾಚಾರಗಳೆ ಒಂದಿಂದು ರೀತಿಯಲ್ಲಿ ಇಸ್ರೇಲಿನ ಮೇಲೆ ಪ್ರತಿ-ಲನವಾಗುತ್ತವೆ. ಬಗಲಲ್ಲಿ ಒಂದು ಗಾಜಾ, ಮತ್ತೊಂದು ಪ್ಯಾಲಸ್ತೀನ್‌ನ್ನು ಇಸ್ರೇಲಿಗೆ ಸಿಕ್ಕಿಸಿ, ಅರಬ್ ದೇಶ ಗಳು ಯಹೂದಿಯರ ನೆಮ್ಮದಿಯನ್ನು ಹರಿದು ಮುಕ್ಕಲು ಪ್ರಯತ್ನಿಸಿದಷ್ಟೂ, ಇಸ್ರೇಲ್ ಅಷ್ಟೇ ತೀವ್ರವಾಗಿ ತಿರುಗೇಟು ಕೊಡು ತ್ತಿರುವುದು ಮತಾಂಧರಿಗೆ ನುಂಗಲಾರದ ಬಿಸಿ ತುಪ್ಪವಾಗಿದೆ.

ಹೀಗಾಗಿ ಅವು ಒಂದಿಂದು ರೀತಿಯಲ್ಲಿ ಇಸ್ರೇಲ್ ವಿರುದ್ಧ ಗಾಂಚಾಲಿಯನ್ನು ಜಾರಿಯಲ್ಲಿಡಲು ಪ್ರಯತ್ನಿಸುತ್ತಲೇ ಇರುತ್ತವೆ. ಈ ಸಂಗತಿಗಳು ತಿಳಿಯದೇ, ಈಗ ನಡೆಯುತ್ತಿರುವ ಕದನವನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ. ಸರಿ, ಮುಂದೆ ನಾನು ಹೇಳುವ ವಿಷಯ ಚಿಕ್ಕದು.

ಆದರೂ ಮೊನ್ನೆ ಏನಾಯಿತು ನೋಡಿ… ಇಸ್ರೇಲ್ ರಾಜಧಾನಿ ಜೆರುಸಲೇಮ್‌ನ ಪೂರ್ವದಲ್ಲಿ ಶೇಕ್ ಜರ್ರಹ್ ಎಂಬ ಪ್ರದೇಶವಿದೆ. ಇಲ್ಲಿ ಅರಬ್ಬರೇ ಹೆಚ್ಚಿನ ಸಂಖ್ಯೆಯಲ್ಲಿ ವಾಸವಿzರೆ. ಈ ಪ್ರದೇಶದಲ್ಲಿ ಇಸ್ರೇಲಿ ಯಹೂದಿಗಳ ಟ್ರಸ್ಟ್‌ಗೆ ಸೇರಿದ ಆರು ಮನೆಗಳಲ್ಲಿ ,
ಪ್ಯಾಲಸ್ತೀನಿ ನಿರಾಶ್ರಿತರು 1948ರಿಂದ ವಾಸವಾಗಿದ್ದಾರೆ. ಅವರಿಗೆ ಮನೆ ಖಾಲಿ ಮಾಡುವಂತೆ, ಟ್ರಸ್ಟ್ ಎಷ್ಟೇ ಸಲ ಹೇಳಿದರೂ ಅವರು ಮನೆ ಖಾಲಿ ಮಾಡಲಿಲ್ಲ. ಈ ವಿಷಯವಾಗಿ ಅನೇಕ ಸಲ ವಾದ-ವಿವಾದಗಳು ನಡೆದವು.

ಮನೆ ಖಾಲಿ ಮಾಡುವಂತೆ ಟ್ರಸ್ಟ ಹೇಳಿದಾಗಲೆ, ಟ್ರಸ್ಟಿಗಳ ಮನೆಗಳ ಮೇಲೆ ದಾಳಿ ನಡೆಯುತ್ತಿದ್ದವು. ಅವರ ಹೆಂಡತಿ-ಮಕ್ಕಳ ಮೇಲೆ ಹಗಳಾಗುತ್ತಿದ್ದವು. ಇದನ್ನು ಯಹೂದಿ ಟ್ರಸ್ಟ್ ಸಹಿಸಿಕೊಂಡು ಬಂದಿತು. ಈ ಮನೆಗಳನ್ನು ಖಾಲಿ ಮಾಡಿ ಎಂದು ಹೇಳಿದಾ ಗಲೆ, ಅಲ್ಲಿನ ನಿರಾಶ್ರಿತರು, ‘ನಮ್ಮ ಮೇಲೆ ದಬ್ಬಾಳಿಕೆ ಡೆಯುತ್ತಿದೆ. ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ, ನಮ್ಮನ್ನು ನಿರ್ನಾಮ ಮಾಡಲು ಇಸ್ರೇಲ್ ಸಂಚು ರೂಪಿಸುತ್ತಿದೆ’ ಎಂದು ಈ ನಿರಾಶ್ರಿತರು, ಇಡೀ ವಿವಾದಕ್ಕೆ ಅಂತಾರಾಷ್ಟ್ರೀಯ ಮಹತ್ವ ಕೊಡಲು ಆರಂಭಿಸಿದರು. ಆ ವಿವಾದ ಪ್ರಸ್ತಾಪವಾದಾಗಲೆಲ್ಲ, ಆ ಆರು ಮನೆಗಳಲ್ಲಿ ವಾಸವಿದ್ದ ಕುಟುಂಬಗಳಿಗೆ ಪ್ಯಾಲಸ್ತೀನ್ ಕುಮ್ಮಕ್ಕು ನೀಡಲಾರಂಭಿಸಿತು.

ಅಷ್ಟೇ ಅಲ್ಲ, ಯಾವ ಕಾರಣಕ್ಕೂ ಮನೆಗಳನ್ನು ಖಾಲಿ ಮಾಡಬೇಡಿ, ಏನಾಗುತ್ತದೋ ಆಗಲಿ, ನೋಡಿಯೇ ಬಿಡೋಣ, ನಾವು ನಿಮ್ಮ ಬೆಂಬಲಕ್ಕೆ ಇದ್ದೇವೆ ಎಂದು ಬಹಿರಂಗವಾಗಿ ಹೇಳಲಾರಂಭಿಸಿತು. ಇದರಿಂದ ಸ್ಥಳೀಯ ನಿರಾಶ್ರಿತರಿಗೆ ಇನ್ನಿಲ್ಲದ ಬಲ ಬಂದಂತಾಯಿತು. ಮನೆ ಖಾಲಿ ಮಾಡಿ ಎಂದು ಯಹೂದಿಗಳ ಟ್ರಸ್ಟ್ ಹೇಳಿದಾಗಲೆಲ್ಲ, ಯಾವ ಕಾರಣಕ್ಕೂ ನಾವು ಖಾಲಿ
ಮಾಡುವುದಿಲ್ಲ, ನೀವೇನು ಮಾಡುತ್ತೀರಿ ಎಂದು ಆ ನಿರಾಶ್ರಿತರು ರಾಜಾರೋಷವಾಗಿ ರೋಪು ಹಾಕಲು ಆರಂಭಿಸಿದರು.

ಈ ವಿವಾದ ಅಂತಾರಾಷ್ಟ್ರೀಯ ಸಮಸ್ಯೆಯಾಗಿ ಪರಿವರ್ತಿತವಾದಾಗ, ಬೇರೆ ದಾರಿ ಕಾಣದೇ, ಯಹೂದಿ ಟ್ರಸ್ಟ್ ಇಸ್ರೇಲಿನ ಸುಪ್ರೀಂ ಕೋರ್ಟ್ ಮೊರೆ ಹೋಯಿತು. ಈ ಪ್ರಕರಣದ ವಾದ-ಪ್ರತಿವಾದಗಳ ನಂತರ, ಸುಪ್ರೀಂ ಕೋರ್ಟ್ ಸುದೀರ್ಘ ವಿಚಾರಣೆ ನಡೆಸಿ, ಯಹೂದಿ ಟ್ರಸ್ಟ್ ಪರವಾಗಿ ತೀರ್ಪು ನೀಡಿತು. ಅಂದರೆ ಆ ಮನೆಗಳಲ್ಲಿ ವಾಸವಾಗಿರುವವರು, ಟ್ರಸ್ಟ್‌ಗೆ ಆ ಕಟ್ಟಡಗಳನ್ನು ಬಿಟ್ಟು ಕೊಡಬೇಕೆಂದು ಹೇಳಿತು. ಅಷ್ಟೇ ಸಾಕಾಯಿತು.

ಕೆಲವು ಮತಾಂಧರು, ಕೋರ್ಟ್ ತೀರ್ಪು ನೀಡಿದರೆ ನೀಡಲಿ, ಯಾವ ಕಾರಣಕ್ಕೂ ಮನೆ ಖಾಲಿ ಮಾಡಬೇಡಿ ಎಂದು ಹೇಳಲಾ ರಂಭಿಸಿದರು. ಇಸ್ರೇಲಿ ಪೊಲೀಸರು ಮನೆ ಖಾಲಿ ಮಾಡಿಸಲು ಬರುತ್ತಿದ್ದಾರೆ ಎಂಬ ಸೂಚನೆ ಸಿಗುತ್ತಿದ್ದಂತೆ, ರಸ್ತೆಯಲ್ಲಿ ಕಲ್ಲು ತೂರಾಟಕ್ಕೆ ತೊಡಗಿದರು, ದೊಂಬಿಗಿಳಿದರು. ಶೇಕ್ ಜರ್ರಹ್ ಪ್ರದೇಶದಲ್ಲಿ ಹಿಂಸಾಚಾರಕ್ಕಿಳಿದರು. ಇಸ್ರೇಲಿಗಳ ವಿರುದ್ಧ ಘೋಷಣೆ ಕೂಗಲಾರಂಭಿಸಿದರು. ಪೋಲೀಸರಿಗೆ ಕಂಡ ಕಂಡಲ್ಲಿ ಕಸೆಯಲಾರಂಭಿಸಿದರು. ಇಷ್ಟಾದರೂ ಇಸ್ರೇಲಿ ಪೊಲೀಸರು ಅವುಡುಗಚ್ಚಿಕೊಂಡು ಸುಮ್ಮನಿದ್ದರು. ಅವರಿಗೆ ಇವೆಲ್ಲ ಹೊಸತೇನಲ್ಲ. ಆದರೂ ಆ ಮತಾಂಧರ ಅಟ್ಟಹಾಸ ಅತಿರೇಕಕ್ಕೆ ಹೋಗುವ ತನಕ ಸಂಯಮದಿಂದ ಇದ್ದರು.

ಅದಕ್ಕೆ ಕಾರಣವೂ ಇತ್ತು. ಕಾರಣ, ಮೊನ್ನೆ ಮೇ 10 ಜರುಸಲೆಮ್ ದಿನ ಆಚರಣೆ. ಆ ದಿನ ದೇಶದೆಡೆಗಳಿಂದ ಯಹೂದಿಯರು ‘ಪವಿತ್ರ ಭೂಮಿ’ಯೆಂದೇ ಹೆಸರಾದ ಜರುಸಲೆಮ್ ಗೆ ಹೆಚ್ಚಿನ ಸಂಖ್ಯೆಯಲ್ಲಿ ಬರುವವರಿದ್ದರು. ಆ ಸಂದರ್ಭದಲ್ಲಿ ಹಿಂಸಾಚಾರ ಬೇಡವೆಂದು ಇಸ್ರೇಲಿ ಪಡೆ ಸಂಯಮದಿಂದ ಇತ್ತು. ಆದರೆ ಇದೇ ಸದವಕಾಶವೆಂದು, ಆ ಕಿಡಿಗೇಡಿ ಪ್ಯಾಲಸ್ತೀನಿಯರು ಮಸೀದಿ ಯೊಳಗಿಂದ ಕಲ್ಲು ತೂರಲಾರಂಭಿಸಿದರು. ಇದರಿಂದ ನೂರಾರು ಯಹೂದಿಯರು ಗಾಯಗೊಂಡರು. ಈಗ ಸುಮ್ಮನಿದ್ದರೆ
ಕೆಲಸ ಕೆಡುವುದೆಂದು ನಿರ್ಧರಿಸಿದ ಇಸ್ರೇಲಿ ಪಡೆ, ಮಸೀದಿಯೊಳಗಿದ್ದ ಈ ಕಿಡಿಗೇಡಿಗಳನ್ನು ಎಳೆದು ತಂದು, ರಿಪೇರಿ ಮಾಡಿದರು. ಈ ಜಟಾಪಟಿಯಲ್ಲಿ ಸುಮಾರು ಮುನ್ನೂರು ಪ್ಯಾಲಸ್ತೀನಿಯರ ರಿವೀಟು ಎತ್ತಿದರು.

ಇಷ್ಟಕ್ಕೆ ಎಲ್ಲವೂ ಕೊನೆಗೊಳ್ಳಬೇಕಿತ್ತು. ಆದರೆ ಪ್ಯಾಲಸ್ತೀನ್ ಸುಮ್ಮನಾಗಲಿಲ್ಲ. ಇಸ್ರೇಲ್ ವಿರುದ್ಧ ಹೋರಾಟಕ್ಕೆ ಕರೆ ನೀಡಿತು. ಅದೇ ರಾತ್ರಿ, ಹಮಾಸ್ ಉಗ್ರರು ಹಠಾತ್ತನೆ ಇಸ್ರೇಲ್ ಮೇಲೆ ಸುಮಾರು ಇನ್ನೂರು ರಾಕೆಟುಗಳನ್ನು ಹಾರಿಸಿ, ಯುದ್ಧಕ್ಕೆ ಆಹ್ವಾನ ನೀಡಿದರು. ಆಗ ಇಸ್ರೇಲ್ ಕೈಕಟ್ಟಿ ಕುಳಿತುಕೊಳ್ಳುವ ಪ್ರಶ್ನೆಯೇ ಇರಲಿಲ್ಲ. ಮರುದಿನ ಮೇ 11. ಹಮಾಸ್ ರಾಕೆಟ್ ದಾಳಿಗೆ
ಪ್ರತಿಯಾಗಿ ಇಸ್ರೇಲ್ ಕೂಡ ಕ್ಷಿಪಣಿ ದಾಳಿ ನಡೆಸಿತು.

ಮೊದಲೆರಡು ದಿನ ಇಸ್ರೇಲ್ ದಾಳಿಯನ್ನು ತೀವ್ರಗೊಳಿಸಲಿಲ್ಲ. ಹಮಾಸ್ ಉಗ್ರರ ದಾಳಿಯನ್ನು ವಿಫಲಗೊಳಿಸುವುದರತ್ತ ಗಮನ ಹರಿಸಿತು. ಇಸ್ರೇಲಿನ ಐರನ್ ಡೋಮ್ ಗಳು ಗಾಜಾದಿಂದ ಹಾರಿ ಬರುವ ಕ್ಷಿಪಣಿಗಳನ್ನು ಆಗಸದ ಹೊಡೆದುರುಳಿಸಿದವು.
ಹಮಾಸ್ ಉಗ್ರರ ಪುಂಗಿ ನಿಧಾನವಾಗಿ ಕ್ಷೀಣಿಸುತ್ತಿದ್ದಂತೆ, ಇಸ್ರೇಲ್ ತನ್ನ ದಾಳಿಯನ್ನು ಏಕ್ದಂ ತೀವ್ರಗೊಳಿಸಿತು. ಹಮಾಸ್ ಉಗ್ರರ ನೆಲೆಗಳ ಮೇಲೆ ದಾಳಿಯಿಟ್ಟಿತು. ಗಾಜಾದ ಜನವಸತಿ ಪ್ರದೇಶಗಳಲ್ಲಿದ್ದ ಬಹುಮಹಡಿ ಕಟ್ಟಡಗಳನ್ನು ಗುರಿಯಾಗಿಸಿ ನೆಲಸಮ ಮಾಡಿತು.

ನೋಡನೋಡುತ್ತಿದ್ದಂತೆ, ಗಾಜಾದ ಕಟ್ಟಡ ಅವಶೇಷಗಳ ರಾಶಿ ರಾಶಿ. ಉಗ್ರರು ಅಡಗಿಕೊಂಡಿದ್ದ ಕಟ್ಟಡಗಳೊಳಗೆ ನುಗ್ಗಿ ಅವರನ್ನು ಇಸ್ರೇಲಿ ಪಡೆ ಸಾಯಿಸಿತು. ಈಗ ಪ್ಯಾಲಸ್ತೀನ್ ಹಿಂಬಾಗಿಲ ಚೀರಾಟ ಶುರುವಾಯಿತು. ಅರಬ್ ದೇಶಗಳ ನಾಯಕರ ಮೂಲಕ, ಕದನ ವಿರಾಮ ರಾಗ ಹಾಡುವಂತೆ ಒತ್ತಾಯಿಸಲಾರಂಭಿಸಿತು. ಆದರೆ ಇಸ್ರೇಲ್ ಈ ಯಾವ ರಾಗಗಳನ್ನು ಕೇಳುವ ಸ್ಥಿತಿಯಲ್ಲಿ ಇರಲಿಲ್ಲ. ತನ್ನ ತಾಳಕ್ಕೆ ತನ್ನದೇ ಮೇಳ! ಹಮಾಸ್ ಉಗ್ರರ ಸದೆಬಡಿಯುವ ಕೆಲಸವನ್ನು ಮುಂದುವರಿಸಿತು. ಶಾಂತಿ ಮಂತ್ರ ಉಪದೇಶಿಸಲು ಬಂದ ಯಾರ ಮಾತುಗಳಿಗೂ ಸೊಪ್ಪು ಹಾಕದ ಇಸ್ರೇಲ, ಹಿಂದೆಂದೂ ಕಂಡು – ಕೇಳರಿಯದ ರೀತಿಯಲ್ಲಿ ಈಗ ಗಾಜಾ ಮೇಲೆ ಆಕ್ರಮಣ ಮಾಡುತ್ತಲೇ ಇದೆ.

ಗಾಜಾದ ಆಗಸದಲ್ಲಿ ಹಕ್ಕಿಗಳು ಹಾರಾಡಿದರೂ ಗುಂಡು ಹೊಡೆದು ಸಾಯಿಸುತ್ತಿದೆ. ಹಿಂಸೆಗೆ ಕುಮ್ಮಕ್ಕು ನೀಡುತ್ತಿದ್ದ ಗೂಂಡಾ  ಗಳನ್ನು ಅಟ್ಟಾಡಿಸಿಕೊಂಡು ಹೋಗಿ, ಗುಂಡು ಹಾಕಿ ಸುಡುತ್ತಿದೆ. ಈ ಕಾರ್ಯಾಚರಣೆಗೆ ಇಸ್ರೇಲ್ ಇಟ್ಟ ರೋಮಾಂಚಕ ಹೆಸರು -Operation Guardian of the Walls ! ಯಹೂದಿಯರಿಗೆ ಗೋಡೆ (Western Wall) ಅಂದರೆ ಪರಮ ಪವಿತ್ರ. ಅವರು ಜರುಸಲೆಮ್ ನಲ್ಲಿರುವ ವೆಸ್ಟರ್ನ್ ವಾಲ್‌ಗೆ ಹೋಗಿ ಹಣೆಹಣೆ ಹಚ್ಚಿ ಪ್ರಾರ್ಥಿಸಿ, ನಮಿಸುವುದು ಅವರ ಆಚರಣೆ, ಸಂಪ್ರದಾಯ. ಅಂಥ ಪವಿತ್ರ ಸ್ವರೂಪಿ ಗೋಡೆಯ ರಕ್ಷಣೆಗಾಗಿ ನಡೆಸುವ ಕಾರ್ಯಾಚರಣೆ ಅಂದರೆ ಇಸ್ರೇಲಿಗಳು ಜೀವದ ಹಂಗು ತೊರೆದು ಹೋರಾಡಬಲ್ಲರು! ಈಗ ಇಸ್ರೇಲಿಗಳನ್ನು ಸಮಾಧಾನಪಡಿಸದಿದ್ದರೆ, ಗಾಜಾಕ್ಕೊಂದು ಗತಿ ಕಾಣಿಸದೇ ಬಿಡಲಿಕ್ಕಿಲ್ಲ.

ಅಷ್ಟಕ್ಕೂ ಇವೆಲ್ಲ ಬೇಕಿತ್ತಾ?!