Friday, 20th September 2024

ಇಸ್ರೇಲಿಗೆ ಸರಿ-ತಪ್ಪಿಗಿಂತ ಅಳಿವು-ಉಳಿವಿನ ಪ್ರಶ್ನೆಯೇ ಮುಖ್ಯ !

ನೂರೆಂಟು ವಿಶ್ವ

ಇಸ್ರೇಲ್‌ನ ಮಣ್ಣು ನೀರನ್ನು ಕುಡಿದಿರುವುದಕ್ಕಿಂತ ಹೆಚ್ಚಾಗಿ ರಕ್ತವನ್ನೇ ಕುಡಿದಿದೆ. ಅಲ್ಲಿ ಕಾಲಿಟ್ಟಲ್ಲೆಲ್ಲ ರಕ್ತದ ಹೆಪ್ಪು ಕಾಲಿಗೆ ಅಂಟಿ ಕೊಳ್ಳುತ್ತವೆ! ಯಾವುದೇ ದೇಶ ಶತ್ರುರಾಷ್ಟ್ರಗಳ ಗಡಿಭಾಗಗಳಲ್ಲಿ ಕಟ್ಟೆಚ್ಚರ ವಹಿಸುವುದು ಸಾಮಾನ್ಯ ಬಿಡಿ. ಆದರೆ ಇಸ್ರೇಲಿಗರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಶತ್ರುರಾಷ್ಟ್ರದೊಳಗೇ ಅಡಗಿ ಕುಳಿತು ಆ ಕಡೆಯಿಂದಲೇ ತಮ್ಮ ದೇಶವನ್ನು ಕಾಯುತ್ತಾರೆ.

ಇಸ್ರೇಲಿಗೆ ತಾಗಿಕೊಂಡ ಬಾಲಂಗೋಚಿಯಂತಿರುವ ಗಾಜಾದಲ್ಲಿ ನೆಲೆಸಿರುವ ಹಮಾಸ್ ಉಗ್ರರು ಇಸ್ರೇಲಿನ ಮೇಲೆ ಹಠಾತ್ ದಾಳಿ ನಡೆಸಿದಾಗ ನಾನು ಲಂಡನ್ ನಗರದಲ್ಲಿದ್ದೆ. ಬಿಬಿಸಿಯಲ್ಲಿ ನಿರಂತರವಾಗಿ ಆ ಸುದ್ದಿ ಬಿತ್ತರವಾಗುತ್ತಿತ್ತು. ‘ಇಸ್ರೇಲ್ ಅಂಡರ್ ಅಟ್ಯಾಕ್’ ಎಂಬ ಶೀರ್ಷಿಕೆ ಟಿವಿ ಪರದೆ ಮೇಲೆ ದಪ್ಪಕ್ಷರಗಳಲ್ಲಿ ಅಪ್ಪಳಿಸುತ್ತಿತ್ತು. ಆ ಸುದ್ದಿಯನ್ನು ಓದಿದ ನನ್ನ ಸ್ನೇಹಿತರು ಆತಂಕಕ್ಕೊಳ ಗಾದವರಂತೆ ಬಡಬಡಿಸುತ್ತಿದ್ದರು. ಆದರೆ ಆ ಸುದ್ದಿಯಿಂದ ನಾನು ಆತಂಕಕ್ಕೊಳಗಾಗಲಿಲ್ಲ. ನನ್ನಲ್ಲಿ ಯಾವ ಉದ್ವಿಗ್ನ ಭಾವವೂ ಸರಿದಾಡಲಿಲ್ಲ.

ನನಗೆ ಆ ಕ್ಷಣಕ್ಕೆ ನೆನಪಾದವರು ಅರಬ್-ಇಸ್ರೇಲಿ ಸಂಘರ್ಷಗಳನ್ನು ಹಲವು ದಶಕಗಳಿಂದ ವರದಿ ಮಾಡುತ್ತಿರುವ, ಅಂತಾರಾಷ್ಟ್ರೀಯ ಗಡಿ ವಿವಾದ ಮತ್ತು ಮಧ್ಯಪ್ರಾಚ್ಯ ರಾಜಕಾರಣದ ವಿಶ್ಲೇಷಕ ಹಾಗೂ ಹಿರಿಯ ಸ್ನೇಹಿತರಾದ ಆಶರ್ ಕೌ-ನ್. ಆ ಮನುಷ್ಯ ಏನೂ ಆಗಿಯೇ ಇಲ್ಲವೇನೋ ಎಂಬಂತೆ ತೀರಾ ನೀರಸವಾಗಿ ಪ್ರತಿಕ್ರಿಯಿಸಿದರು. ‘ಇದು ಮತ್ತೊಂದು ಸಂಘರ್ಷವಷ್ಟೇ. ಇಸ್ರೇಲಿನಲ್ಲಿ ದೀರ್ಘಕಾಲ ಶಾಂತಿ ನೆಲೆಸುವುದಿಲ್ಲ. ಅಲ್ಲಿ ಎರಡು ಯುದ್ಧ ಗಳ ನಡುವಿನ ಅಲ್ಪಕಾಲವನ್ನು ಶಾಂತಿ ಎಂದು ಕರೆಯುತ್ತಾರೆ. ಒಂದು ಯುದ್ಧ ಮುಗಿದು ಮತ್ತೊಂದಕ್ಕೆ ಸಿದ್ಧತೆ ನಡೆಯುವಾಗ ತೆಗೆದುಕೊಳ್ಳುವ ಕಾಲಕ್ಕೂ ಶಾಂತಿ ಎನ್ನುತ್ತಾರೆ.

ಈಗ ಆ ಶಾಂತಿಗೆ ಭಂಗವಾಗಿದೆ ಅಷ್ಟೇ’ ಎಂದು ತಣ್ಣಗೆ ಪ್ರತಿಕ್ರಿಯಿಸಿದರು. ಕಳೆದ ಹತ್ತು ವರ್ಷಗಳ ಅವಽಯಲ್ಲಿ ಇಸ್ರೇಲಿಗೆ ಒಂಬತ್ತು ಸಲ ಮತ್ತು ಅದರ ನೆರೆಯ ಲೆಬನಾನ್, ಜೋರ್ಡನ್, ಸೌದಿ ಅರೇಬಿಯಾ, ಈಜಿಪ್ಟ್, ಪ್ಯಾಲೆಸ್ತೀನ್ ಮತ್ತು ಗಾಜಾಕ್ಕೆ ಭೇಟಿ ನೀಡಿದ ನನಗೂ ಅವರ ಈ ಪ್ರತಿಕ್ರಿಯೆ ಅಚ್ಚರಿ ಯನ್ನು ಉಂಟುಮಾಡಲಿಲ್ಲ. ಕಾರಣ ಇಸ್ರೇಲ್ ಸೇನೆ ಮತ್ತು ಹಮಾಸ್ ಉಗ್ರರ ಮಧ್ಯೆ ಹಾಗೂ ಇಸ್ರೇಲ್-ಪ್ಯಾಲೆಸ್ತೀನ್ ನಡುವೆ ಆಗಾಗ ಸಂಘರ್ಷ, ಚಕಮಕಿ, ತಾರಾಮಾರಿ, ಕ್ಷಿಪಣಿ ದಾಳಿ ನಡೆಯುತ್ತಲೇ ಇರುತ್ತವೆ. ನಾನು ಮೊದಲ ಬಾರಿಗೆ ಇಸ್ರೇಲ್ ಗೆ ಹೋದಾಗ ಉಳಿದುಕೊಂಡಿದ್ದ ಜೆರುಸಲೇಂ ಹೋಟೆಲ್ ನಿಂದ ೪೦ ಕಿ.ಮೀ. ದೂರದಲ್ಲಿ ಕ್ಷಿಪಣಿ ದಾಳಿಯಾಗಿತ್ತು.

ನಾನು ಉಳಿದುಕೊಂಡಿದ್ದ ಪ್ರತಿಷ್ಠಿತ, ಐತಿಹಾಸಿಕ ‘ಕಿಂಗ್ ಡೇವಿಡ್ ಹೋಟೆಲ್’ ಎರಡನೇ ಮಹಾಯುದ್ಧದ ಕಾಲದಲ್ಲಿ ಭಾಗಶಃ ಧ್ವಂಸವಾಗಿತ್ತು. ಐದು ವರ್ಷಗಳ ಹಿಂದೆ, ನಾನು ಅಲ್ಲಿಗೆ ಹೋದಾಗಲೂ ಪ್ಯಾಲೆಸ್ತೀನ್‌ನ ಆಡಳಿತಾತ್ಮಕ ರಾಜಧಾನಿ ರಮಲ್ಲಾ ಮೇಲೆ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಕೆಲವರು ಸತ್ತಿದ್ದರು. ಆರಂಭದ ಭೇಟಿಗಳಲ್ಲಿ ನನಗೆ ತುಸು ಗಾಬರಿಯಾಗುತ್ತಿತ್ತು; ಕೊನೆ ಕೊನೆಗೆ ಇಂಥ ಘಟನೆಗಳು ನನ್ನಲ್ಲಿ ಯಾವ ಆತಂಕವನ್ನೂ ಹುಟ್ಟಿಸುತ್ತಿರಲಿಲ್ಲ. ಇಸ್ರೇಲ್‌ನ ಮಣ್ಣು ನೀರನ್ನು ಕುಡಿದಿರುವುದಕ್ಕಿಂತ ಹೆಚ್ಚಾಗಿ ರಕ್ತವನ್ನೇ ಕುಡಿದಿದೆ. ಅಲ್ಲಿ ಕಾಲಿಟ್ಟಲ್ಲೆಲ್ಲ ರಕ್ತದ ಹೆಪ್ಪು ಕಾಲಿಗೆ
ಅಂಟಿಕೊಳ್ಳುತ್ತವೆ! ಯಾವುದೇ ದೇಶ ಶತ್ರುರಾಷ್ಟ್ರಗಳ ಗಡಿಭಾಗಗಳಲ್ಲಿ ಕಟ್ಟೆಚ್ಚರ ವಹಿಸುವುದು ಸಾಮಾನ್ಯ ಬಿಡಿ.

ಆದರೆ ಇಸ್ರೇಲಿಗರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಶತ್ರು ರಾಷ್ಟ್ರದೊಳಗೇ ಅಡಗಿ ಕುಳಿತು ಆ ಕಡೆಯಿಂದಲೇ ತಮ್ಮ ದೇಶವನ್ನು ಕಾಯುತ್ತಾರೆ. ಇದು ಅತಿಶಯೋಕ್ತಿಯಲ್ಲ. ಇಸ್ರೇಲಿಗರು ಸದಾ ಭಯ, ಆತಂಕ, ದುಗುಡದಲ್ಲಿ ಬಾಳುವುದನ್ನು ರೂಢಿಸಿಕೊಂಡವರು. ಈ ಆತಂಕದಲ್ಲಿಯೇ ನಗುವು ದನ್ನೂ ಕಲಿತವರು. ಅದಕ್ಕಾಗಿ ಯಾವನೋ ಕವಿ ಇಸ್ರೇಲಿಗರ ಬಗ್ಗೆ In Israel, waves of anger and fear circulate all the time, but so do jokes and gossip ಎಂದು ಬರೆದಿರುವುದು.

ಒಮ್ಮೆ ನಾನು ಜೆರುಸಲೇಂನಲ್ಲಿದ್ದಾಗ, ಇಸ್ರೇಲ್ ಸೈನಿಕರು ಸಮುದ್ರ ತೀರದಲ್ಲಿ ಕಾಣಿಸಿಕೊಂಡ ಬೃಹತ್ ಗಾತ್ರದ ತಿಮಿಂಗಿಲವನ್ನು ಸಾಯಿಸಿದ್ದರು. ಅದು ಅಂದಿನ ಪತ್ರಿಕೆಯಲ್ಲಿ ಸಹಜ ಸುದ್ದಿಯಾಗಿ ಮುಖಪುಟದಲ್ಲಿ ಪ್ರಕಟವಾಗಿತ್ತು. ಮರುದಿನ ಪತ್ರಿಕೆಯನ್ನು ಓದುವಾಗ ಅಚ್ಚರಿ ಕಾದಿತ್ತು. ಆ ತಿಮಿಂಗಿಲದ ದೇಹದಲ್ಲಿ ಶತ್ರುರಾಷ್ಟ್ರಗಳು ಸ್ಫೋಟಕ ಅಥವಾ ರಹಸ್ಯ ಕೆಮರಗಳನ್ನು ಹುದುಗಿಸಿ ಕಳುಹಿಸಿರಬಹುದು ಎಂಬ ಸಂದೇಹದ ಒಂದು ಸೆಳಕು ಆ ಸಾಗರ ದೈತ್ಯನ ಜೀವಕ್ಕೆ ಕಂಟಕವಾಗಿ ಪರಿಣಮಿಸಿತ್ತು.

ಇನ್ನೊಂದು ಸಂದರ್ಭದಲ್ಲಿ, ಇಸ್ರೇಲ್-ಪ್ಯಾಲೆಸ್ತೀನ್ ಗಡಿ ಗುಂಟ ಆಗಸದಲ್ಲಿ ತಮ್ಮ ಪಾಡಿಗೆ ಸ್ವಚ್ಛಂದವಾಗಿ ಹಾರಾಡುತ್ತಿದ್ದ ಇನ್ನೂರಕ್ಕೂ ಹೆಚ್ಚು ರಣಹದ್ದುಗಳನ್ನು ಇಸ್ರೇಲ್ ಸೈನಿಕರು ಗುಂಡಿಕ್ಕಿ ಸಾಯಿಸಿದ್ದರು. ಆ ರಣಹದ್ದು ಗಳನ್ನು ಬೇಹುಗಾರಿಕೆ ಗಾಗಿ ಕಳುಹಿಸಿರಬಹುದು ಎಂಬ ಸಣ್ಣ ಗುಮಾನಿ ಆ ಪಕ್ಷಿಗಳ ಜೀವಕ್ಕೆ ಎರವಾಗಿತ್ತು. ಇಸ್ರೇಲಿನ ಗಡಿಗುಂಟ ತರಗೆಲೆಗಳು ಸರಿದಾಡಿದರೂ ಇಸ್ರೇಲಿ ಸೈನಿಕರು ಪ್ರತಿಸ್ಪಂದಿಸದೇ ಹೋಗುವುದಿಲ್ಲ. ಭದ್ರತೆ ಮತ್ತು ಸುರಕ್ಷತೆಯ ವಿಷಯದಲ್ಲಿ ಹೆತ್ತ ತಾಯಿಯನ್ನೂ ಅವರು ನಂಬುವುದಿಲ್ಲ. ಅವಳನ್ನೂ ಸಂದೇಹದಿಂದಲೇ ತಪಾಸಣೆಗೆ ಗುರಿಪಡಿಸುತ್ತಾರೆ. ಅದು ಇಸ್ರೇಲಿಗಳ ರಕ್ತಗುಣ. If you want to win, you show some skin ಎಂಬ ಮಾತು ಅವರ ರಕ್ತದಲ್ಲಿ ಮಿಳಿತ ವಾಗಿದೆ.

ಒಮ್ಮೆ ನಾನು ಅಂದಿನ ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣ ಅವರ ಜತೆ ಇಸ್ರೇಲಿಗೆ ಭೇಟಿ ನೀಡಿದ್ದೆ. ನಿಯೋಗದಲ್ಲಿ ಐದಾರು ಪತ್ರಕರ್ತರಿದ್ದರು. ಆ ಸಂದರ್ಭದಲ್ಲಿ ಅವರು ಇಸ್ರೇಲಿನ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮತ್ತು ಅಧ್ಯಕ್ಷ ಸಿಮೋನ್ ಪೆರೇಸ್ ಅವರನ್ನು ಭೇಟಿ ಮಾಡಿದ್ದರು. ಪ್ರಧಾನಿ ಮತ್ತು ಅಧ್ಯಕ್ಷರ ಭೇಟಿಗೆ ಹೋಗುವ ಸಂದರ್ಭದಲ್ಲಿ ಭದ್ರತೆ ಅದೆಷ್ಟು ಬಿಗಿಯಾಗಿತ್ತೆಂದರೆ, ನಮ್ಮನ್ನು ಅಕ್ಷರಶಃ ವಿವಸ ಗೊಳಿಸಿ ತಪಾಸಣೆ ಮಾಡಿದ್ದರು. ಆ ಪರಿಯ ಭದ್ರತಾ ಪರೀಕ್ಷೆಯನ್ನು ಎದುರಿಸಿದ್ದು ಅದೇ ಮೊದಲು, ಅದೇ ಕೊನೆ.

ಇಸ್ರೇಲಿನ ಪ್ರಧಾನಿ ಮತ್ತು ಅಧ್ಯಕ್ಷರ ನಿವಾಸಗಳ ಮೇಲೆ ದಾಳಿಗಳಾದರೆ, ಅವರು ಸುರಕ್ಷಿತ ಬಂಕರ್‌ನಲ್ಲಿ ಅಡಗಿ ಕುಳಿತುಕೊಳ್ಳಬಹುದು ಅಥವಾ ಸುರಂಗ ಮಾರ್ಗದಿಂದ ಪರಾರಿಯಾಗಬಹುದು ಎಂದು ಕೇಳಿದ್ದು ಅಲ್ಲಿಯೇ. ಭದ್ರತೆ ಅಂದರೆ ಏನು ಎಂಬುದನ್ನು ಅನೇಕರು ವಿಮಾನ ನಿಲ್ದಾಣದಲ್ಲಿ ನೋಡಿ ತಿಳಿದುಕೊಂಡಿರುತ್ತಾರೆ. ಆದರೆ ಅದು ಏನೇನೂ ಅಲ್ಲ. ಹೆಜ್ಜೆಹೆಜ್ಜೆಗೂ ಕಣ್ಣಲ್ಲಿ ಕಣ್ಣಿಟ್ಟು ಕಾಯುವ, ಸಣ್ಣ ಎಡವಟ್ಟನ್ನೂ ಸಹಿಸದ, ಇಸ್ರೇಲಿನ ಲೋಪರಹಿತ ಭದ್ರತಾ ವ್ಯವಸ್ಥೆ ಬೆರಗು ಹುಟ್ಟಿಸುವಂಥದ್ದು. ಇಸ್ರೇಲಿಗರ ಭದ್ರತೆ ಅಂದರೆ ಏನು ಎಂಬುದನ್ನು ತಿಳಿಯಲು ಇಸ್ರೇಲಿನ ಪ್ರಧಾನಿ ಕಚೇರಿಗೋ, ಅಧ್ಯಕ್ಷರ ನಿವಾಸಕ್ಕೋ ಹೋಗಬೇಕಿಲ್ಲ. ದಿಲ್ಲಿಯಲ್ಲಿರುವ ಇಸ್ರೇಲ್ ರಾಯಭಾರ ಕಚೇರಿಗೆ ಹೋದರೂ ಗೊತ್ತಾದೀತು. ಅದೂ ಆಗದಿದ್ದರೆ, ಬೆಂಗಳೂರಿನಲ್ಲಿರುವ ಇಸ್ರೇಲ್ ಕಾನ್ಸುಲೇಟ್ ಜನರಲ್ ಕಚೇರಿಗೆ ಹೋದರೂ ತಿಳಿದೀತು.

ಮುಖ್ಯಮಂತ್ರಿ ಮತ್ತು ರಾಜ್ಯಪಾಲರಿಗೆ ಇಲ್ಲದ ಭದ್ರತೆ ಅಲ್ಲಿನ ಪುಟ್ಟ ಕಚೇರಿಯಲ್ಲಿ ಕಾಣಬಹುದು. ಇಸ್ರೇಲಿಗರ ಸೈಕಾಲಜಿ ಗೊತ್ತಿದ್ದ ಯಾರೂ ಅವರನ್ನು
ಕೆಣಕಲು ಹೋಗುವುದಿಲ್ಲ. ಇಸ್ರೇಲಿನ ಪ್ರಧಾನಿಯಾಗಿದ್ದ ಗೋಲ್ಡಾ ಮೀರ್ ಅರಬ್ ದೇಶಗಳಿಗೆ ಒಂದು ಎಚ್ಚರಿಕೆಯ ಮಾತನ್ನು ಹೇಳಿದ್ದರು. ‘ನಮ್ಮನ್ನು ಮುಗಿಸಲು ನಮ್ಮ ನೆರೆಯ ದೇಶಗಳೆಲ್ಲ ಹೊಂಚುಹಾಕಿ ಕುಳಿತಿವೆ. ಆದರೆ ಅದು ಕನಸಿನ ಮಾತು. ಈ ಭೂಮಿ ಇರುವ ತನಕ ಇಸ್ರೇಲ್ ಇದ್ದೇ ಇರುತ್ತದೆ.
ಇಸ್ರೇಲನ್ನು ನಾಶಪಡಿಸಲು ಸಾಧ್ಯವೇ ಇಲ್ಲ. ಅಂಥ ಪರಿಸ್ಥಿತಿ (ನಾಶವಾಗುವ) ಬಂದರೆ ನಾವು ನಮ್ಮ ಶತ್ರುರಾಷ್ಟ್ರಗಳನ್ನು ಬಲಿ ತೆಗೆದುಕೊಳ್ಳದೇ ಹೋಗುವುದಿಲ್ಲ. ನಮ್ಮ ನಾಶವನ್ನು ನೋಡಲು ಅವರೂ ಇರುವುದಿಲ್ಲ’ ಎಂಬ ಅವರ ಮಾತು ಅಮರವಾಣಿಯಂತೆ ಕೇಳಿಸುತ್ತದೆ. ಗುಂಡಿನ ಮೊರೆತ ಕೇಳದ, ಸುಟ್ಟ ಕಮಟುವಾಸನೆ ಆಗಸದಿಂದ ಸೂಸದ ದಿನಗಳನ್ನು ಇಸ್ರೇಲಿನಲ್ಲಿ ಅನುಭವಿಸಲು ಸಾಧ್ಯವೇ ಇಲ್ಲ.

ದಿನದ ಎಲ್ಲ ಹೊತ್ತಿನಲ್ಲೂ ಸೈನಿಕರ ತೋರುಬೆರಳು ತುಪಾಕಿಯ ಕುದುರೆಯನ್ನು ಜಗ್ಗಲು ಕೈಹಾಕಿರುತ್ತದೆ. ದೇಶ ಕಾಯುವ ಸೈನಿಕರು ಗಡಿಗುಂಟ ಬರಿ ನೆಲವನ್ನು ನೋಡುತ್ತಾ ಕುಳಿತಿರುವುದಿಲ್ಲ. ಆಕಾಶದಿಂದ ಯಾವ ಕ್ಷಣದಲ್ಲಾದರೂ ದಾಳಿಯಾಗಬಹುದು. ಗಡಿಯಿಂದ ಕೇವಲ ನಲವತ್ತು ಕಿ.ಮೀ. ದೂರದಲ್ಲಿ ಜೆರುಸಲೇಂ. ಎತ್ತ ಹೊರಳಿದರೂ ವೈರಿಗಳು. ಯಾರೂ ನಮ್ಮವರಲ್ಲ ಎಂಬ ಭಯಭೀತ ಸ್ಥಿತಿಯಲ್ಲಿ ಇಸ್ರೇಲಿಗರು ಜೀವವನ್ನು ಪುಚ್ಚೆ ಮಾಡಿಕೊಂಡು ಜೀವಿಸುತ್ತಿದ್ದಾರೆ. ಇಸ್ರೇಲ್ ಇತಿಹಾಸ ಒಂದೆಡೆಯಿರಲಿ. ನಕಾಶೆಯನ್ನು ಹರಡಿಕೊಂಡು ನೋಡಿದರೂ ಸಾಕು, ಆ ದೇಶ ಅದೆಂಥ ಆಯಕಟ್ಟಿನ ಮತ್ತು ಭಯಕಟ್ಟಿನ ಜಾಗದಲ್ಲಿದೆ ಎಂಬುದು ವೇದ್ಯವಾಗುತ್ತದೆ.

ಹಾಗೆ ನೋಡಿದರೆ ಇಂದಿಗೂ ಇಸ್ರೇಲ್ ಒಂದು ದೇಶವಾಗಿ ಬಚಾವ್ ಆಗಿ ಉಳಿದಿರುವುದೇ ಆಶ್ಚರ್ಯ. ಭೌಗೋಳಿಕವಾಗಿ ಇಸ್ರೇಲ್ ಇರುವ ಜಾಗವನ್ನು
ನೋಡಿದರೆ ಅದು ಎಪ್ಪತ್ತೈದು ವರ್ಷಗಳ ಹಿಂದೆಯೇ, ಸ್ವಾತಂತ್ರ್ಯ ಪಡೆದ ಮರುದಿನವೇ ಸರ್ವನಾಶವಾಗಿ ಬಿಡಬೇಕಿತ್ತು. ಅದಾದ ಬಳಿಕ ಇಸ್ರೇಲ್ ಅವೆಷ್ಟು ಸಣ್ಣ-ದೊಡ್ಡ ಸಂಘರ್ಷಗಳನ್ನು ಎದುರಿಸಿದೆಯೋ, ಲೆಕ್ಕವಿಟ್ಟವರಾರು? ನಿರಂತರ ಕಾದಾಟ ಇಸ್ರೇಲಿಗರ ಕರ್ಮ. ಕಳೆದ ಮುಕ್ಕಾಲು
ಶತಮಾನದ ಅವಧಿಯಲ್ಲಿ ಇಸ್ರೇಲ್ ಒಂದು ದಿನವೂ ನಿಶ್ಚಿಂತೆಯಿಂದ ಮಲಗಿದ್ದಿಲ್ಲ.

ಉತ್ತರಕ್ಕೆ ಲೆಬನಾನ್. ಅದರ ರಾಜಧಾನಿ ಬೈರೂತ್‌ನಿಂದ ಇಸ್ರೇಲಿನ ಹೈ-ಕ್ಕೆ ಕೇವಲ ಮುನ್ನೂರು ಕಿ.ಮೀ. ಮೂರು ಗಂಟೆ ಅವಧಿಯಲ್ಲಿ ಬರಬಹುದು. ಅದರ ಪಕ್ಕಕ್ಕೆ ಸಿರಿಯಾ. ಅದರ ರಾಜಧಾನಿ ದಮಾಸ್ಕಸ್, ಇಸ್ರೇಲಿಗೆ ಇನ್ನೂ ಹತ್ತಿರ. ಸ್ವಲ್ಪ ಕೆಳಕ್ಕೆ ಪೂರ್ವಕ್ಕೆ ಬಂದರೆ ಜೋರ್ಡನ್. ಅದರ ರಾಜಧಾನಿ
ಅಮ್ಮಾನ್‌ನಿಂದ ಜೆರುಸಲೇಂಗೆ ಕೇವಲ ಎರಡು ಗಂಟೆ ಹಾದಿ. ಇಸ್ರೇಲಿನ ಆಗ್ನೇಯ ಪ್ರದೇಶ ಸೌದಿ ಅರೇಬಿಯಾದ ಗಡಿಗೆ ಹತ್ತಿಕೊಂಡಿದೆ. ದಕ್ಷಿಣಕ್ಕೆ ಕಿರಿದಾದ ಕೆಂಪು ಸಮುದ್ರ ಮತ್ತು ಈಜಿಪ್ಟ್. ಇಸ್ರೇಲಿನ ಪಶ್ಚಿಮಕ್ಕೆ ವಿಸ್ತರಿಸಿದ ಈಜಿಪ್ಟ್ ಭೂಭಾಗ. ಸಿರಿಯಾಕ್ಕೆ ತಾಕಿಕೊಂಡು ಟರ್ಕಿ. ಜೋರ್ಡನ್‌ಗೆ ತಾಕಿಕೊಂಡು ಇರಾಕ್ ಮತ್ತು ಅದಕ್ಕೆ ಲಗತ್ತಾಗಿ ಇರಾನ್. ವಾಯವ್ಯದಲ್ಲಿ ಮೆಡಿಟರೇನಿಯನ್ ಸಮುದ್ರ. ಇಷ್ಟೂ ಸಾಲದೆಂಬಂತೆ ಇಸ್ರೇಲಿನ ಹೊಟ್ಟೆ ಯೊಳಗೆ ಪ್ಯಾಲೆಸ್ತೀನ್. ಕಂಕುಳ ಭಾಗದಲ್ಲಿ ಗಾಜಾಪಟ್ಟಿ. ಪ್ಯಾಲೆಸ್ತೀನ್ ಮತ್ತು ಗಾಜಾಪಟ್ಟಿ ಅಂದ್ರೆ ಬೆಂಗಳೂರು ನಗರದಲ್ಲಿ ಶಿವಾಜಿನಗರ ಮತ್ತು ಗೋರಿಪಾಳ್ಯ ಅಥವಾ ಕೆ.ಜೆ.ಹಳ್ಳಿ ಇದ್ದಂತೆ.

ಮಗ್ಗುಲಲ್ಲಿ ಪಾಕಿಸ್ತಾನ ಎಂಬ ದೇಶವನ್ನು ಕಟ್ಟಿಕೊಂಡು ಭಾರತ ಕಳೆದ ಏಳೂವರೆ ದಶಕಗಳಲ್ಲಿ ಅದೆಷ್ಟು ಹೈರಾಣಾಯಿತು ಎಂಬುದು ಗೊತ್ತಿದೆ. ಊಹಿಸಿಕೊಳ್ಳಿ, ಭಾರತದ ಮಧ್ಯಪ್ರದೇಶ ಅಥವಾ ಛತ್ತೀಸಗಢ ಇದೆ ಯಲ್ಲ, ಅಲ್ಲಿ ಪಾಕಿಸ್ತಾನ ಇದ್ದಿದ್ದರೆ ಹೇಗಿರುತ್ತಿತ್ತು? ಆ ರೀತಿ ಇಸ್ರೇಲ್ ಪಾಲಿಗೆ ಪ್ಯಾಲೆಸ್ತೀನ್ ಇದೆ. ಇದನ್ನೇ ಬೆನ್ ಗುರಿಯನ್, ‘ಇಸ್ರೇಲಿನಲ್ಲಿ ನೀವು ಪವಾಡ ಗಳನ್ನು ನಂಬದಿದ್ದರೆ ವಾಸ್ತವವಾದಿಯೇ ಅಲ್ಲ’ (In the Land of Israel, anyone who doesn’t believe in miracles is not a realist) ಎಂದು ಹೇಳಿದ್ದರು. ಬಗಲಲ್ಲಿ ಮುಸ್ಲಿಂ ದೇಶಗಳನ್ನು ಕಟ್ಟಿಕೊಂಡು, ವೈರಿಗಳ ನೆರಳು ಸೋಂಕುವ ಸನಿಹದಲ್ಲಿ ಬೀಡುಬಿಟ್ಟುಕೊಂಡು ಇಸ್ರೇಲ್ ಒಂದು ರಾಷ್ಟ್ರವಾಗಿ ಗಟ್ಟಿಯಾಗಿ ನಿಂತಿರುವುದೇ ಒಂದು ಪವಾಡ, ವಿಸ್ಮಯ.

ಇಸ್ರೇಲ್ ವಿರುದ್ಧ ಪಕ್ಕದ ಯಾವ ದೇಶ ಯುದ್ಧ ಮಾಡಿಲ್ಲ? ಇಸ್ರೇಲನ್ನು ಮುಗಿಸಲು ಅವೆಷ್ಟು ಅರಬ್ ದೇಶಗಳು ತೊಡೆ ತಟ್ಟಿಲ್ಲ? ಈ ಜಗತ್ತಿನ ಭೂಪಟ ದಿಂದ ಇಸ್ರೇಲನ್ನು ಹೊಸಕಿ ಹಾಕುವುದೇ ನಮ್ಮ ವೀರಸಂಕಲ್ಪ ಎಂದು ಅವೆಷ್ಟು ಅರಬ್ ದೇಶಗಳು ಶಪಥಗೈದಿಲ್ಲ? ‘ಇಸ್ರೇಲ್ ಇಲ್ಲದ ಜಗತ್ತನ್ನು ಕಟ್ಟು ವುದು ಮತ್ತು ಅದನ್ನು ನನ್ನ ಜೀವಿತಾವಧಿಯಲ್ಲಿ ನೋಡುವುದೇ ನನ್ನ ಕನಸು’ ಎಂದು ಅವೆಷ್ಟು ಅರಬ್ ನಾಯಕರು ಬೊಬ್ಬಿರಿದಿಲ್ಲ? ‘ಇಸ್ರೇಲನ್ನು ಸಂಪೂರ್ಣವಾಗಿ ನಾಶಪಡಿಸಿದ ದಿನವೇ ನಮಗೆ ಶಾಂತಿ, ನಾವು ಇಸ್ರೇಲನ್ನು ಮುಗಿಸುವ ತನಕ ವಿರಮಿಸುವುದಿಲ್ಲ, ನನ್ನ ನಂತರ ಮುಂದಿನ
ಜನಾಂಗವೂ ನನ್ನ ಕನಸನ್ನು ನನಸಾಗಿಸುವುದೆಂಬ ಭರವಸೆ ಯಿದೆ, ನಾವು ಇಸ್ರೇಲನ್ನು ಕಿತ್ತೊಗೆಯದೇ ಬಿಡುವುದಿಲ್ಲ’ ಎಂದು ಪ್ಯಾಲೆಸ್ತೀನ್ ನಾಯಕ ಯಾಸಿರ್ ಅರಾಫತ್ ಅದೆಷ್ಟು ಸಲ ಅಟ್ಟಹಾಸಗೈದಿಲ್ಲ? ಆದರೆ ಇಲ್ಲಿಯ ತನಕ ಶತ್ರುರಾಷ್ಟ್ರಗಳಿಗೆ ಇಸ್ರೇಲಿನ ಕೂದಲು ಕೀಳಲೂ ಸಾಧ್ಯವಾಗಿಲ್ಲ.

ಇಸ್ರೇಲ್‌ನ ದಿವಂಗತ ಪ್ರಧಾನಿ ಗೋಲ್ಡಾ ಮೀರ್ ಹೇಳಿದ ಮಾತುಗಳನ್ನು ನಾನು ಯಾವತ್ತೂ ನೆನಪಿಸಿಕೊಳ್ಳುತ್ತೇನೆ. ಶತ್ರುಗಳ ದಾಳಿಯನ್ನು ಸಮರ್ಥ ವಾಗಿ ಎದುರಿಸಿದ ಬಳಿಕ ಆಕೆ ಹೇಳಿದ್ದಳು- ‘ನಾವು ಇಸ್ರೇಲಿಗಳಿದ್ದೇವಲ್ಲ ಉಳಿದವರಂತಲ್ಲ, ಸ್ವಲ್ಪ ವಿಚಿತ್ರ. ಶತ್ರುದೇಶಗಳ ವಿರುದ್ಧ ಹೋರಾಡಿ ಗೆದ್ದಾಗ
ಕುಣಿದು ಕುಪ್ಪಳಿಸುವುದಿಲ್ಲ. ಅದನ್ನೇ ದೊಡ್ಡ ಸಂಭ್ರಮವೆಂದು ಆಚರಿಸುವುದಿಲ್ಲ. ನಾವು ಹೊಸತಳಿಯ ಹತ್ತಿ, ಗೋಧಿಯನ್ನು ಬೆಳೆದಾಗ, ಹೊಸ ನಮೂನೆಯ ಸ್ಟ್ರಾಬೆರಿಯನ್ನು ಕಂಡಾಗ ಸಂಭ್ರಮಿಸುತ್ತೇವೆ. ಅದು ನಮ್ಮ ಸಾಧನೆಯೆಂದು ಬೀಗುತ್ತೇವೆ’. ಈ ಸಂಗತಿ ಇಸ್ರೇಲ್ ವಿರುದ್ಧ  ತಲತಲಾಂತರ ಗಳಿಂದ ಯುದ್ಧ ಮಾಡುತ್ತಿರುವ ನೆರೆಯ ದೇಶಗಳಿಗೆ ಅರ್ಥವಾಗಿಲ್ಲ.

ಹೀಗಾಗಿ ಅವು ಇನ್ನೂ ಯುದ್ಧಪಿಪಾಸುಗಳಾಗಿವೆ. ಆದರೆ ಇಸ್ರೇಲ್ ನೀರು, ಕೃಷಿ, ರಕ್ಷಣೆ, ತಂತ್ರಜ್ಞಾನದಲ್ಲಿ ಜಗತ್ತಿನ ಮುಂಚೂಣಿ ದೇಶಗಳ ಸಾಲಿನಲ್ಲಿದೆ, ಇರಲಿ. ಇಸ್ರೇಲಿಗರಿಗೆ ಯುದ್ಧ ಮಾಡುವುದು ತೀಟೆಯಲ್ಲ, ಅವರು ಕದನಕಾಮನೆ ಯುಳ್ಳವರಲ್ಲ. ಆದರೆ ತಮ್ಮ ಅಸ್ತಿತ್ವದ ಪ್ರಶ್ನೆ ಬಂದಾಗ ಪ್ರತಿ ಯೊಬ್ಬರೂ ಯೋಧರಾಗಿ ಹೋರಾಡಲು ಸಿದ್ಧ, ಸನ್ನದ್ಧ. ಹಮಾಸ್ ಉಗ್ರರು ನಡೆಸಿದ ಹಠಾತ್ ದಾಳಿ ಮೊದಲನೆಯದೂ ಅಲ್ಲ, ಕೊನೆಯದೂ ಅಲ್ಲ. ಇಸ್ರೇಲನ್ನು ಮುಗಿಸುವ ಅರಬ್ ರಾಷ್ಟ್ರಗಳ ಹವಣಿಕೆಗೂ ಕೊನೆಯಿಲ್ಲ. ಈ ಹೋರಾಟ ಸದಾ ಮುಂದುವರಿಯುತ್ತಲೇ ಇರುತ್ತದೆ. ಇಲ್ಲಿ ಯಾರು ಸರಿ,
ಯಾರು ತಪ್ಪು ಎಂಬ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಇಲ್ಲಿ ಯಾರು ಉಳಿಯುತ್ತಾರೆ, ಯಾರು ಅಳಿಯುತ್ತಾರೆ ಎಂಬುದಷ್ಟೇ ಮುಖ್ಯ. ಅಳಿವು-ಉಳಿವಿನ ಪ್ರಶ್ನೆ ಬಂದಾಗ ಎಲ್ಲವೂ ಸರಿಯೇ. ಆದರೆ ಒಂದಂತೂ ನಿಜ, ತನ್ನನ್ನು ಕೆಣಕಿದ ಆ ಹರಾಮಕೋರ ಹಮಾಸ್ ಉಗ್ರರಿಗೆ ಒಂದು ಗತಿ ಕಾಣಿಸದೇ ಇಸ್ರೇಲ್ ವಿರಮಿಸುವುದಿಲ್ಲ, ನೋಡ್ತಾ ಇರಿ…