Saturday, 14th December 2024

ಇಸ್ರೋ ಕೀರ್ತಿ ಮುಗಿಲು ಮುಟ್ಟಲಿ

ಡಾ.ಜಗದೀಶ್ ಮಾನೆ

ಅಮೆರಿಕ, ರಷ್ಯಾ ಮತ್ತು ಚೀನಾ ದೇಶಗಳು ಚಂದ್ರನ ಉತ್ತರ ಧ್ರುವವನ್ನು ಗುರಿಯಾಗಿಸಿಕೊಂಡು ಮಾತ್ರವೇ ಸಂಶೋ ಧನೆಗಳನ್ನು ನಡೆಸಿವೆ. ಆದರೆ, ಭಾರತ ಕಣ್ಣಿಟ್ಟಿರುವುದು ಚಂದ್ರನ ದಕ್ಷಿಣ ಧ್ರುವದ ಮೇಲೆ. ಈ ಕಾರ್ಯಾಚರಣೆ ಯಶಸ್ವಿಯಾದರೆ, ಮತ್ತಷ್ಟು ಅನ್ವೇಷಣೆಗಳಿಗೆ ಭಾರತಕ್ಕೆ ಹುರುಪು ಸಿಕ್ಕಂತಾಗುತ್ತದೆ.

ಭೂಮಿಯ ಉಪಗ್ರಹವಾಗಿರುವ ಚಂದ್ರ, ಪುಟ್ಟ ಮಕ್ಕಳ ಪಾಲಿಗೆ ಪ್ರೀತಿಯ ಚಂದಮಾಮ, ವಿಜ್ಞಾನಿಗಳ ಪಾಲಿಗೆ ಕೌತುಕಗಳ ಮೂಟೆ. ಈ ಕಾರಣಕ್ಕೇ ಇರಬೇಕು, ಚಂದಿರನ ಅಂಗಳಕ್ಕೆ ಕಾಲಿಡುವ ಯತ್ನಗಳು ಬಹಳ ಕಾಲದಿಂದ ನಡೆಯುತ್ತಲೇ ಇವೆ.

ಅದು ೨೦೧೯ರ ಸೆಪ್ಟೆಂಬರ್ ೨ರ ರಾತ್ರಿ. ಬಹುತೇಕ ಭಾರತೀಯರು ನಿದ್ರಿಸದೆ ಕೌತುಕದ ಕ್ಷಣಗಳನ್ನು ಕಣ್ತುಂಬಿಕೊಳ್ಳಲು ತವಕಿಸುತ್ತಿದ್ದ ರಾತ್ರಿಯದು. ಭಾರತದ ಐತಿಹಾಸಿಕ ಸಾಧನೆಗೆ ಕೆಲವೇ ಹೆಜ್ಜೆಗಳು ಬಾಕಿಯಿದ್ದವು, ಕಾರಣ ಇಸ್ರೋದ ‘ವಿಕ್ರಂ’ ಲ್ಯಾಂಡರ್ ನೌಕೆ ಚಂದ್ರನ ಅಂಗಳದಲ್ಲಿ ಕಾಲಿರಿಸಬೇಕಿದ್ದ ಕ್ಷಣವದು.

ಅಷ್ಟರಲ್ಲಿ ಇಸ್ರೋದ ಕೇಂದ್ರದಲ್ಲಿ ಕುಳಿತಿದ್ದ ವಿಜ್ಞಾನಿಗಳೆಲ್ಲರ ಮುಖದ ಮಂದಹಾಸ ಮಾಯವಾಯಿತು. ಕಾರಣ, ಲ್ಯಾಂಡರ್‌ನ ಸಂಪರ್ಕ ಇದ್ದಕ್ಕಿದ್ದ ಹಾಗೆ ಕಡಿತವಾಗಿ ಮಹತ್ವಾಕಾಂಕ್ಷಿ ಚಂದ್ರಯಾನ-೨ ಯೋಜನೆ ವಿಫಲವಾಗಿತ್ತು. ಈ ಯೋಜನೆಯ ನೇತೃತ್ವ ವಹಿಸಿಕೊಂಡಿದ್ದ ಇಸ್ರೋ ಮುಖ್ಯಸ್ಥ ಕೆ.ಶಿವನ್ ಅವರಂತೂ ಪುಟ್ಟಮಗುವಿನಂತೆ ಕಣ್ಣೀರಾ ದರು. ಆಗ ಸ್ಥಳದಲ್ಲಿ ಹಾಜರಿದ್ದ ಪ್ರಧಾನಿ ಮೋದಿಯವರು ಅವರನ್ನು ತಬ್ಬಿ ಸಂತೈಸಿ ಮತ್ತಷ್ಟು ಧೈರ್ಯ ತುಂಬಿದ ದೃಶ್ಯವನ್ನು ದೇಶವಿನ್ನೂ ಮರೆತಿಲ್ಲ.

ಅಂತೆಯೇ, ಕಳೆದ ಬಾರಿಯ ಒಂದಷ್ಟು ತಪ್ಪುಗಳನ್ನು ಸರಿಪಡಿಸಿಕೊಂಡ ಇಸ್ರೋ, ಛಲಬಿಡದ ತ್ರಿವಿಕ್ರಮನಂತೆ ಪಟ್ಟುಹಿಡಿದು ತೊಡಗಿಸಿಕೊಂಡ ಪರಿಣಾಮ, ಚಂದ್ರಯಾನ-೩ ಯೋಜನೆಯ ಉಡಾವಣೆ ಯಶಸ್ವಿಯಾಗಿದೆ. ಇದು ನಿರೀಕ್ಷಿತ ಗುರಿ ತಲುಪಿ, ಉದ್ದೇಶಿತ ಚಟುವಟಿಕೆಗಳನ್ನು ನೆರವೇರಿಸು ವಂತಾಗಲೆಂಬುದು ಸಹೃದಯಿಗಳ ಹಾರೈಕೆ. ಈಗಾಗಲೇ ಬಹುತೇಕರಿಗೆ ತಿಳಿದಿರು ವಂತೆ, ಅಮೆರಿಕ, ರಷ್ಯಾ ಮತ್ತು ಚೀನಾ ದೇಶಗಳು ಚಂದ್ರನ ಮೇಲೆ ಲ್ಯಾಂಡರ್ ನೌಕೆಗಳನ್ನು ಇಳಿಸಿದ್ದು, ಇವೆಲ್ಲವೂ ಚಂದ್ರನ ಉತ್ತರ ಧ್ರುವವನ್ನು ಗುರಿಯಾಗಿಸಿಕೊಂಡು ಮಾತ್ರವೇ ಸಂಶೋಧನೆಗಳನ್ನು ನಡೆಸಿವೆ.

ಆದರೆ, ಭಾರತ ಕಣ್ಣಿಟ್ಟಿರುವುದು ಚಂದ್ರನ ದಕ್ಷಿಣ ಧ್ರುವದ ಮೇಲೆ. ಈ ಕಾರ್ಯಾಚರಣೆ ಅಂದುಕೊಂಡಂತೆ ಯಶಸ್ವಿಯಾದರೆ,
ಮುಂದಿನ ಮತ್ತಷ್ಟು ಅನ್ವೇಷಣಾ ಕಾರ್ಯಗಳಿಗೆ ಭಾರತಕ್ಕೆ ಹುರುಪು ಸಿಕ್ಕಂತಾಗುತ್ತದೆ ಹಾಗೂ ಜಾಗತಿಕ ಮಟ್ಟದ ಹೆಚ್ಚಿನ ಸಂಶೋಧನೆಗಳಿಗೆ ಭಾರತವು ಮಹತ್ವದ ಕೊಡುಗೆಯನ್ನು ಕೊಟ್ಟಂತಾಗುತ್ತದೆ. ಹೀಗಾಗಿ ಚಂದ್ರಯಾನ-೩ ಯಶಸ್ಸಿನ ದಡವನ್ನು ಮುಟ್ಟಲೇಬೇಕಿದೆ. ಇದು ಸಮಸ್ತ ಭಾರತೀಯರ ನಿರೀಕ್ಷೆಯೂ ಹೌದು, ಹಾರೈಕೆಯೂ ಹೌದು.

ಚಂದ್ರನಲ್ಲಿರುವ ಕಲ್ಲು-ಮಣ್ಣಿನ ಗುಣಲಕ್ಷಣಗಳು, ಅವುಗಳ ರಾಸಾಯನಿಕ ಸಂಯೋಜನೆ, ಖನಿಜಾಂಶಗಳ ಇರುವಿಕೆ, ಚಂದ್ರ ನಲ್ಲಿನ ವಾಸಯೋಗ್ಯ ಪರಿಸ್ಥಿತಿಯ ಅಧ್ಯಯನ, ಉಷ್ಣತೆಯ ವಾಹಕತ್ವದ ಸ್ಥಿತಿಗತಿ, ಸಾಮರ್ಥ್ಯ ಹಾಗೂ ವರ್ತನೆ ಇತ್ಯಾದಿ ಮಾಹಿತಿಗಳ ಸಂಗ್ರಹ ಹೀಗೆ ಪ್ರಸ್ತುತ ಉಡಾಯಿಸಲಾಗಿರುವ ಗಗನನೌಕೆಯು ವೈವಿಧ್ಯಮಯ ಚಟುವಟಿಕೆಗಳನ್ನು ಕೈಗೊಳ್ಳಲಿದೆ ಎಂಬುದು ಲಭ್ಯವಾಗಿರುವ ಮಾಹಿತಿ. ಈ ಎಲ್ಲಾ ಕಾರ್ಯಾಚರಣೆಗಳು ಇಸ್ರೋ ಅಂದುಕೊಂಡಂತೆಯೇ ಸಾಧ್ಯವಾಗಿಬಿಟ್ಟರೆ, ಚಂದ್ರನ ಬಗ್ಗೆ ಮಿಕ್ಕ ರಾಷ್ಟ್ರಗಳಿಗೆ ಗೊತ್ತಿರುವುದಕ್ಕಿಂತ ಹೆಚ್ಚಿನ ಮತ್ತು ವಿಶಿಷ್ಟ ಮಾಹಿತಿಗಳು ಭಾರತಕ್ಕೆ ದಕ್ಕಲಿವೆ.

ಇದರಿಂದಾಗಿ ಭಾರತೀಯ ವಿಜ್ಞಾನಿಗಳಲ್ಲಿ ಹುಮ್ಮಸ್ಸು ಹಾಗೂ ಆತ್ಮವಿಶ್ವಾಸ ದುಪ್ಪಟ್ಟಾಗುವುದರ ಜತೆಜತೆಗೆ, ಭಾರತದ ಮುಂದಿನ ಬಾಹ್ಯಾಕಾಶ ಕಾರ್ಯಕ್ರಮಗಳ ಕುರಿತಾಗಿ ಒಂದಿಡೀ ವಿಶ್ವವೇ ಕುತೂಹಲದಿಂದ ನೋಡುವಂತಾಗುತ್ತದೆ. ಅನ್ಯದೇಶ ಗಳ ಉಪಗ್ರಹಗಳ ಉಡಾವಣೆ ಸೇರಿದಂತೆ ಬಾಹ್ಯಾಕಾಶ ವಲಯ ಸಂಬಂಧಿತ ಹತ್ತು ಹಲವು ಹೊರಗುತ್ತಿಗೆ ಚಟುವಟಿಕೆಗಳನ್ನು ಭಾರತ ಪಡೆದುಕೊಳ್ಳುವುದಕ್ಕೂ ಇದು ನೆರವಾಗಿ, ಆರ್ಥಿಕ ತಳಹದಿ ಮತ್ತಷ್ಟು ಗಟ್ಟಿಯಾಗುತ್ತದೆ ಎಂಬುದು ಗಮನಿಸಬೇಕಾದ ಸಂಗತಿ. ಈ ಎಲ್ಲ ಅಂಶಗಳ ಹಿನ್ನೆಲೆಯಲ್ಲಿ ಚಂದ್ರಯಾನ-೩ ಯೋಜನೆಗೆ ಇನ್ನಿಲ್ಲದ ಮಹತ್ವ ಸಿಕ್ಕಿದೆ, ಕುತೂಹಲ ಹೆಚ್ಚಿದೆ.

ಈಗಾಗಲೇ ಬಹುತೇಕರಿಗೆ ತಿಳಿದಿರುವಂತೆ, ೨೦೨೫ರ ವರ್ಷದ ವೇಳೆಗೆ ಬಾಹ್ಯಾಕಾಶಕ್ಕೆ ಗಗನಯಾತ್ರಿಗಳನ್ನು ಕಳಿಸಲು ಭಾರತ
ಸಂಕಲ್ಪಿಸಿದ್ದು ಈ ನಿಟ್ಟಿನಲ್ಲಿ ಸಾಕಷ್ಟು ಸಿದ್ಧತೆಗಳಾಗಿವೆ ಮತ್ತು ಸಂಭಾವ್ಯ ಗಗನಯಾತ್ರಿಗಳಿಗೆ ತರಬೇತಿಯನ್ನೂ ನೀಡಲಾಗು ತ್ತಿದೆ. ಇದು ಭಾರತ ಸ್ವತಂತ್ರವಾಗಿ ಕೈಗೊಳ್ಳುತ್ತಿರುವ ಕಾರ್ಯಕ್ರಮವಾಗಿರುವುದರಿಂದ ಸಾಕಷ್ಟು ನಿರೀಕ್ಷೆಗಳೂ ಕೆನೆಗಟ್ಟಿವೆ. ಚಂದ್ರಯಾನ-೩ ಯೋಜನೆ ಯಶಸ್ವಿಯಾದರೆ, ಈ ಕನಸಿಗೂ ಸಾಕಷ್ಟು ಬಲ ಬರುತ್ತದೆ ಮತ್ತು ಜಾಗತಿಕ ಮಟ್ಟದಲ್ಲಿ ಇಸ್ರೋದ ಘನತೆ-ಗೌರವಗಳು ಮತ್ತಷ್ಟು ಹೆಚ್ಚುತ್ತವೆ ಎಂಬುದರಲ್ಲಿ ಸಂಶಯವಿಲ್ಲ. ಆದ್ದರಿಂದ ಚಂದ್ರಯಾನ-೩ ಯೋಜನೆ ಯಶಸ್ವಿ ಯಾಗಲಿ ಎಂದು ಹಾರೈಸೋಣ.