Friday, 13th December 2024

ನೀನು ನೀನೇನಾ ? ಎಂಬ ಪ್ರಶ್ನೆಗೆ ಉತ್ತರಿಸುವುದು ಸುಲಭವಿಲ್ಲ !

ತಿಳಿರು ತೋರಣ

srivathsajoshi@yahoo.com

ಅಸ್ಮಿತೆ ಎಂಬ ಪದ ಇತ್ತೀಚೆಗೆ ಹೆಚ್ಚು ಹೆಚ್ಚು ಬಳಕೆಯಾಗುತ್ತಿದೆ. ಶ್ರೀರಾಮನು ಭಾರತೀಯ ಸಂಸ್ಕೃತಿಯ ಅಸ್ಮಿತೆ. ಬಸವಣ್ಣ ಕನ್ನಡದ ಅಸ್ಮಿತೆ. ಡಾ. ರಾಜಕುಮಾರ್ ನಾಡು-ನುಡಿಯ ಅಸ್ಮಿತೆ. ಕನ್ನಡ ಭಾಷೆಯು ಈ ಮಣ್ಣಿನ ಅಸ್ಮಿತೆ. ಬಿಸಿಬೇಳೆಭಾತು ಬೆಂಗಳೂರಿನ ಅಸ್ಮಿತೆ. ಗೋಳಿಬಜೆ, ಬನ್ಸ್, ನೀರು ದೋಸೆಗಳು ಮಂಗಳೂರಿನ ಅಸ್ಮಿತೆ… ಇತ್ಯಾದಿ ಬೇಕಾದಷ್ಟು ಉದಾಹರಣೆಗಳನ್ನು ಕೊಡಬಹುದು. ಅಂದಹಾಗೆ ಇವ್ಯಾವುವೂ ನನ್ನ ಹೇಳಿಕೆಗಳಾಗಲೀ ಅಭಿಪ್ರಾಯಗಳಾಗಲೀ ಅಲ್ಲ, ನಾನು ಅಲ್ಲಿಇಲ್ಲಿ ಓದಿದ ವಾಕ್ಯಗಳಷ್ಟೇ.

ಗಮನಿಸಬೇಕಾದ್ದೇನೆಂದರೆ ಇಲ್ಲೆಲ್ಲ ಅಸ್ಮಿತೆ ಅಂದರೆ ಗುರುತು ಅಥವಾ ಇಂಗ್ಲಿಷ್‌ನ identity ಪದಕ್ಕೆ ಸಮಾನಾರ್ಥಕವಾಗಿ ಬಳಕೆಯಾಗಿರುವುದು. ಸಿನೆಮಾಗಳಲ್ಲಿ ಬೆಂಗಳೂರು ಅಂತ ತೋರಿಸಲಿಕ್ಕೆ ವಿಧಾನಸೌಧವನ್ನು, ನ್ಯೂಯಾರ್ಕ್‌ಗೆ ಸ್ಟಾಚ್ಯೂ ಆಫ್ ಲಿಬರ್ಟಿಯನ್ನು, ಕ್ಯಾಲಿಫೋರ್ನಿಯಾಗೆ ಗೋಲ್ಡನ್ ಗೇಟ್ ಸೇತುವೆಯನ್ನು ತೋರಿಸುವುದು, ರಾತ್ರಿ ಕಳೆದು ಬೆಳಕು ಹರಿಯಿತೆನ್ನುವುದಕ್ಕೆ ಎಂ.ಎಸ್.ಸುಬ್ಬುಲಕ್ಷ್ಮಿ ಧ್ವನಿಯಲ್ಲಿ ಸುಪ್ರಭಾತ ಪ್ಲೇ ಮಾಡುವುದು- ಇವು ಕೂಡ ಒಂದು ನಮೂನೆಯಲ್ಲಿ ಅಸ್ಮಿತೆಗಳೇ. ‘ಇದು ಅದೇ’ ಎಂದು ಅರಿಯುವುದಕ್ಕೆ ಗುರುತುಗಳು, ಪುರಾವೆಗಳು.

ಆದರೆ ಸಂಸ್ಕೃತ ಮೂಲದಲ್ಲಿ ಅಸ್ಮಿತಾ ಪದದ ಅರ್ಥ ಸ್ವಲ್ಪ ಬೇರೆ ರೀತಿಯದಿದೆ. ಅಲ್ಲಿ ಅಸ್ಮಿತಾ ಅಂದರೆ ನಾನು, ನನ್ನದು ಎಂಬ ಅಭಿಮಾನ, ಅಹಂಭಾವ. ಅದು ಅಸ್ಮಿ(ಇದ್ದೇನೆ/ ಆಗಿದ್ದೇನೆ)ಯಿಂದ ಬಂದದ್ದು. ಅಹಂ ಧನ್ಯೋಸ್ಮಿ ಅಂದರೆ ನಾನು ಧನ್ಯನಾಗಿದ್ದೇನೆ. ಅಹಂ ಬ್ರಹ್ಮಾಸ್ಮಿ ಅಂದರೆ ನಾನು ಬ್ರಹ್ಮ ಆಗಿದ್ದೇನೆ. ಈ ರೀತಿಯ ಅಸ್ಮಿ ಭಾವವೇ ಅಸ್ಮಿತೆ. ಸ್ವಂತಿಕೆ ಅಥವಾ ನನ್ನತನ. ಪ್ರತಿಯೊಬ್ಬನಿಗೂ ಇರಲೇಬೇಕಾದ್ದು, ಒಂದು ಆರೋಗ್ಯಕರ ಮಟ್ಟದಲ್ಲಿ ಮಾತ್ರ. ಅದಕ್ಕಿಂತ ಹೆಚ್ಚಾದರೆ ಅಹಂಕಾರ ಎನಿಸಿಕೊಳ್ಳುತ್ತದೆ. ಆದ್ದರಿಂದಲೇ ಸಾಂಖ್ಯದರ್ಶನದಂಥ ತತ್ತ್ವಶಾಸ್ತ್ರಗಳಲ್ಲಿ ಅಸ್ಮಿತೆಯನ್ನು ಪಂಚಕ್ಲೇಶಗಳಲ್ಲೊಂದು (ಅವಿದ್ಯೆ, ಅಸ್ಮಿತೆ, ರಾಗ, ದ್ವೇಷ, ಮತ್ತು ಆಗ್ರಹ ಹೀಗೆ ಒಟ್ಟು ಐದು) ಎಂದು ಗುರುತಿಸುತ್ತಾರೆ.

ಇನ್ನು, ಅಸ್ಮಿತಾ ಅಂದರೆ ಮಂದಹಾಸವಿಲ್ಲದವಳು ಎಂದು ಕೆಲವರು ಬೇರೆಯೇ ರೀತಿಯಲ್ಲಿ ಅರ್ಥೈಸುವುದೂ ಇದೆ. ಆದರೆ ಅದಕ್ಕೆ ಅಂಥದೇನೂ ಬಲವಿಲ್ಲ. ಮಂದಹಾಸವನ್ನೂ ಬೀರಲಾರದವಳ ಗೊಡವೆ ನಮಗೇಕೆ, ಅವಳನ್ನು ಅವಳ ಪಾಡಿಗೆ ಬಿಟ್ಟುಬಿಡೋಣ. ಮತ್ತೆ ನಮ್ಮ ನಿಮ್ಮ ಅಸ್ಮಿತೆ ಅಂದರೆ ಗುರುತಿನ ವಿಚಾರಕ್ಕೇ ಬರೋಣ. ನಮ್ಮ ಹೆಸರು ನಮಗೊಂದು ಅಸ್ಮಿತೆ. ನಮ್ಮದೇ ಹೆಸರು ಇನ್ನೊಬ್ಬರಿಗೂ ಇದೆಯಂತಾದರೆ ಆಗ ಇನಿಷಿಯಲ್ಸ್ ನೆರವಿಂದ ಅಸ್ಮಿತೆ. ಹುಟ್ಟಿದ ದಿನಾಂಕ, ಲಿಂಗ, ವಿಳಾಸ ಇತ್ಯಾದಿಗಳು ಸೇರಿ ನಮ್ಮನ್ನು ಅನನ್ಯವಾಗಿ ಗುರುತಿಸಲಿಕ್ಕಾಗುವಂತೆ ಭಾವಚಿತ್ರದಂಥ ಮತ್ತೊಂದಿಷ್ಟು ಅಸ್ಮಿತೆಗಳು.

ಭೌತಿಕವಾಗಿ ಗುರುತಿಸಬೇಕಿದ್ದರೆ- ‘ಗೋಧಿ ಬಣ್ಣ ಸಾಧಾರಣ ಮೈಕಟ್ಟು’ ಕೂಡ ಒಂದು ಅಸ್ಮಿತೆಯೇ. ಜನ್ಮದಾರಭ್ಯ ಮಚ್ಚೆ ಏನಾದರೂ ಇದ್ದರೆ ಅದು (ಶ್ರೀಮನ್ನಾರಾಯಣನಿಗೆ ಎದೆ ಮೇಲೊಂದು ಮಚ್ಚೆ, ಅದರ ಹೆಸರೇ ‘ಶ್ರೀವತ್ಸ’ ಎಂದು). ಹಾಗೆಯೇ ನಮ್ಮ ಹಸ್ತಾಕ್ಷರ, ಅದರಲ್ಲೂ ಸಹಿ. ತೆಲುಗಿನಲ್ಲಿ ಸಹಿಯನ್ನು ಸ್ವಂತಕಂ ಎನ್ನುತ್ತಾರೆ- ಸ್ವಂತದ್ದು ತನ್ನತನವನ್ನು ಪ್ರತಿಬಿಂಬಿಸುವಂಥದ್ದು ಎಂಬರ್ಥದಲ್ಲಿ. ಕನ್ನಡದಲ್ಲಿ ರುಜು ಎನ್ನುತ್ತೇವಾದರೆ ಅದರ
ಸಂಸ್ಕೃತ ಮೂಲ ಋಜು. ನಿಜವಾದುದು, ಸರಿಯಾದುದು, ನೇರವಾದುದು ಎಂಬಿತ್ಯಾದಿ ಅರ್ಥಗಳು.

ನಿಜ ಅಂದರೇನು? ಸ್ವಕೀಯ, ನಿಸರ್ಗಸಿದ್ಧ, ನಿತ್ಯವೂ ಸ್ಥಿರವೂ ಆಗಿರುವ ಎಂದು. ಇಷ್ಟೆಲ್ಲ ವ್ಯಾಖ್ಯಾನ ಮಾಡಿದ್ದೇಕೆಂದರೆ, ಒಮ್ಮೆ ನನಗೊಂದು ತುಸು ವಿಚಿತ್ರ ರೀತಿಯ ಇಮೇಲ್ ಬಂದಿತ್ತು. ನಾನು ಚಂದಾದಾರನಾಗಿದ್ದ ಇಲ್ಲಿನ ವಾಷಿಂಗ್ಟನ್ ಪೋಸ್ಟ್ ಪತ್ರಿಕೆಯ ಇ-ಸುದ್ದಿಪತ್ರ ವಿಭಾಗದವರು ಕಳಿಸಿದ ಮಿಂಚಂಚೆ ಅದು. ’Are you, you?’ಎಂದು ಅದರ ಸಬ್ಜೆಕ್ಟ್ ಲೈನ್. ನಾನು ನಾನೇ (ಅಂದರೆ ಅವರ ದೃಷ್ಟಿಕೋನದಿಂದಾದರೆ ನೀನು ನೀನೇ) ಹೌದೋ ಅಲ್ಲವೋ ಎಂದು ತಿಳಿದುಕೊಳ್ಳುವುದಕ್ಕಾಗಿ ಆ ಪ್ರಶ್ನೆ. ಹಾಗೆ ಕೇಳುತ್ತಿರುವುದಕ್ಕೆ ಕಾರಣವನ್ನೂ ಮಿಂಚಂಚೆಯಲ್ಲಿ ವಿವರಿಸಿದ್ದರು.

ಇ-ಸುದ್ದಿಪತ್ರ ಪಡೆಯಲು ಯಾರೆಲ್ಲ ಯಾಹೂ ಇಮೇಲ್ ವಿಳಾಸ ಬಳಸುತ್ತಾರೋ ಅವರಿಗೆಲ್ಲ ಆ ಪ್ರಶ್ನೆ ಕೇಳಿದ್ದರಂತೆ. ಬೇನಾಮಿ ಇಮೇಲ್ ಐಡಿಗಳ ನ್ನೆಲ್ಲ ಮುಟ್ಟುಗೋಲು ಹಾಕಿಕೊಳ್ಳುತ್ತೇವೆಂದು ಯಾಹೂ ಕಂಪನಿ ಪ್ರಕಟಣೆ ಹೊರಡಿಸಿದ್ದ ಹಿನ್ನೆಲೆಯಲ್ಲಿ ನಿಮ್ಮ ಯಾಹೂ ಐಡಿ ಬೇನಾಮಿ ಅಲ್ಲ ತಾನೆ? ನೀವು ಈಗಲೂ ಅದನ್ನು ಬಳಸುತ್ತೀರಿ ತಾನೆ? ಅದೇ ಯಾಹೂ ವಿಳಾಸಕ್ಕೆ ನಾವು ಕಳಿಸುವ ಇ-ಸುದ್ದಿಪತ್ರ ನಿಮಗೆ ನಿಯತವಾಗಿ ತಲುಪುತ್ತಿದೆ ತಾನೆ? ಎಂದು ಮುಂತಾದ ಉಭಯಕುಶಲೋಪರಿ ವಿಚಾರಣೆ ಅವರ ಉದ್ದೇಶ. ಅಷ್ಟೇಅಲ್ಲ, ನೀನು ನೀನೇ ಹೌದು ಅಂತಾದರೆ ಈ ಪ್ರಶ್ನೆಗೆ ಉತ್ತರಿಸುವ
ಅಗತ್ಯವಿಲ್ಲ ಎಂಬ ಒಕ್ಕಣೆಯೂ ಆ ಮಿಂಚಂಚೆಯಲ್ಲಿತ್ತು. ನನ್ನ ಯಾಹೂ ವಿಳಾಸ ಬೇನಾಮಿಯೇನಲ್ಲ. ನಾನದನ್ನು ದಿನಾ ಬಳಸುತ್ತೇನೆ.

ವಾಷಿಂಗ್ಟನ್ ಪೋಸ್ಟ್ ಇ-ಸುದ್ದಿಪತ್ರ ನನ್ನ ಯಾಹೂ ಡಬ್ಬಕ್ಕೆ ಪ್ರತಿದಿನವೂ ಸುಸೂತ್ರವಾಗಿ ಬಂದು ಬೀಳುತ್ತದೆ. ಹಾಗಾಗಿ ಆ ಮಿಂಚಂಚೆಯ ಬಗ್ಗೆ ನಾನು ತಲೆಕೆಡಿಸಿಕೊಳ್ಳಬೇಕಾ ದ್ದೇನಿರಲಿಲ್ಲ. ಆದರೆ ಆ ’Are you, you?’ಪ್ರಶ್ನೆ ಮಾತ್ರ ನನಗೆ ಮೊದಲೊಂಚೂರು ತಮಾಷೆಯಾಗಿ, ಆಮೇಲೆ ಸ್ವಲ್ಪ ಕೆಣಕು-
ತಿಣುಕಾಗಿ, ಮತ್ತೂ ಯೋಚಿಸಿದರೆ ಜಿಜ್ಞಾಸೆಯಾಗಿ, ಆಳಕ್ಕಿಳಿದಂತೆಲ್ಲ ತತ್ತ್ವಜ್ಞಾನದ ಸವಾಲಾಗಿ ಕಂಡುಬಂದಿತ್ತು. ಒಮ್ಮೆ ನೀವೂ ಯೋಚಿಸಿ: ‘ನೀನು ನೀನೇನಾ?’ ಎಂದು ನಿಮ್ಮನ್ನು ಯಾರಾದರೂ ಕೇಳಿದರೆ ನಿಮ್ಮ ತತ್‌ಕ್ಷಣದ ಉತ್ತರ? ಅಂತರಜಾಲದಲ್ಲಿ, ಕಂಪ್ಯೂಟರ್ ಬಳಕೆಯಲ್ಲಿ ‘ನೀನು ನೀನೇನಾ?’ ಎನ್ನುವ ಪ್ರಶ್ನೆ ಯಾವಾಗಲೂ ಪ್ರಸ್ತುತವೇ.

ಅದಕ್ಕೋಸ್ಕರವೇ ಪಾಸ್‌ವರ್ಡುಗಳು, ಕಂಪ್ಯೂಟರ್ ಬಳಕೆದಾರನ ಪರಿಚಯವನ್ನು ಸರಿಯಾಗಿ ತಿಳಿದುಕೊಳ್ಳಲು ಪರಿಪರಿಯ ಪರಿಕರಗಳು ವಿಧಾನ ಗಳೆಲ್ಲ ಇರುವುದು. ಕೆಲವು ಜಾಲತಾಣ ಗಳಲ್ಲಂತೂ ‘ನೀನೊಬ್ಬ ರೋಬಾಟ್ ಅಲ್ಲ, ಸಾಮಾನ್ಯ ಮನುಷ್ಯ ಎಂದು ದೃಢಪಡಿಸುವುದಕ್ಕೆ ಇಂಥದನ್ನು ಮಾಡಿತೋರಿಸು…’ ಎಂಬ ನಿರ್ದೇಶನವೂ ಇರುತ್ತದೆ! ಕಂಪ್ಯೂಟರ್ ವ್ಯವಸ್ಥೆಯನ್ನು ಅತ್ಯಂತ ಸುಭದ್ರಗೊಳಿಸಿದ್ದೇವೆ ಎಂದು ಯಾರು ಎಷ್ಟು ಹೆಮ್ಮೆ ಯಿಂದ ಹೇಳಿಕೊಂಡರೂ ರಂಗೋಲಿ ಕೆಳಗೆ ತೂರಬಲ್ಲ ಚೋರಚಾಣಾಕ್ಷರು ಇರುವುದರಿಂದ ಅವೆಲ್ಲ ಅನಿವಾರ್ಯವೂ ಹೌದು.

ಮತ್ತೆ, ವಾಷಿಂಗ್ಟನ್ ಪೋಸ್ಟ್ ಪತ್ರಿಕೆಯವರು ನನಗೆ ಮಿಂಚಂಚೆ ಬರೆದು ನೀನು ನೀನೇನಾ ಎಂದು ಕೇಳಿದ್ದಾದರೂ ಆ ದಿಸೆಯಲ್ಲೇ. ನನಗೆ ತಮಾಷೆ ಅನಿಸಿದ್ದೇನೆಂದರೆ ಒಂದು ವೇಳೆ ಆ ಪ್ರಶ್ನೆಗೆ ಕಡ್ಡಾಯವಾಗಿ (ಹೌದು ಅಂತಾದ್ರೂ, ಅಲ್ಲ ಅಂತಾದ್ರೂ) ಉತ್ತರಿಸಲೇಬೇಕು ಅಂತಿದ್ದಿದ್ದರೆ ಹೇಗೆ ಉತ್ತರಿಸು ವುದು? ಪುರಾವೆ ಹೇಗೆ ಒದಗಿಸುವುದು? ನೆನಪಿರಲಿ- ಅವರು ಕೇಳಿದ್ದು ‘ನೀನು ಶ್ರೀವತ್ಸ ಜೋಶಿನಾ?’ ಅಂತಲ್ಲ. ಹಾಗೊಂದು ವೇಳೆ ಕೇಳಿದ್ದಿದ್ದರೆ ನಾನೇ ಶ್ರೀವತ್ಸ ಜೋಶಿ ಎಂದು ಸಾರುವ ಯಾವುದಾದರೂ ಗುರುತುಪತ್ರವನ್ನು- ಡ್ರೈವಿಂಗ್ ಲೈಸೆನ್ಸ್‌ನದೋ ಪಾಸ್‌ಪೋರ್ಟ್‌ನದೋ ಡಿಜಿಟಲ್ ಚಿತ್ರ ಅಥವಾ ಇನ್ನೇನನ್ನಾದರೂ ತೋರಿಸಬಹುದಾಗಿತ್ತು.

ಭಾರತದಲ್ಲಾಗಿದ್ದರೆ ಆಧಾರ್ ಕಾರ್ಡನ್ನೇ ಆಧಾರವಾಗಿ ತೋರಿಸಬಹುದಾಗಿತ್ತು ಎನ್ನಿ. ಆದರೆ ಸಮಸ್ಯೆ ಇರೋದು ನಾನು ನಾನೇ ಎಂದು, ಅಥವಾ
ನಾನು ನಾನಲ್ಲ ಎಂದು ಉತ್ತರಿಸುವುದರಲ್ಲಿ! ವಿಷಯಾಂತರ ಅಂದ್ಕೊಳ್ಳಬೇಡಿ, ಆದರೆ ಒಂದೆರಡು ಹಾಸ್ಯಪ್ರಸಂಗಗಳು ಇಲ್ಲಿ ಪ್ರಸ್ತುತ. ನಾನು ಉಜಿರೆ ಕಾಲೇಜಿನಲ್ಲಿ ಪಿಯುಸಿ ಓದುತ್ತಿದ್ದಾಗ ನಮ್ಮ ತರಗತಿಯಲ್ಲಿ ನಂದಾ ಮತ್ತು ನೀನಾ ಎಂಬ ಹೆಸರಿನ ಇಬ್ಬರು ಹುಡುಗಿಯರಿದ್ದರು. ಹಾಜರಿ ಪಟ್ಟಿಯಲ್ಲಿ ಅವರಿಬ್ಬರ ಹೆಸರುಗಳು ಅನುಕ್ರಮದಲ್ಲಿದ್ದವು.

ನಮ್ಮ ಕೆಮೆಸ್ಟ್ರಿ ಪ್ರೊಫೆಸರರು ಬೇಕಂತಲೇ ‘ನಂದಾ ನೀನಾ?’ ಎಂದು ಪ್ರಶ್ನೆ ಕೇಳುವ ಧಾಟಿಯಲ್ಲಿ ಹಾಜರಿ ಕರೆಯುತ್ತಿದ್ದರು. ನಂದಾ ಮತ್ತು ನೀನಾ ಇಬ್ಬರೂ ಒಟ್ಟೊಟ್ಟಿಗೇ ಯಸ್ ಸಾರ್ ಎನ್ನುತ್ತಿದ್ದರು. ‘ನಾನು ಒಬ್ಬಳನ್ನೇ ಮಾತಾಡ್ಸಿದ್ದಮ್ಮಾ ಇಬ್ಬರೂ ಯಾಕೆ ಎದ್ದು ನಿಂತ್ರಿ?’ ಎಂದು ಪ್ರೊ-ಸರ್ ಪ್ರಶ್ನೆ. ಆಮೇಲೆ ನಂದಾಳನ್ನುದ್ದೇಶಿಸಿ ‘ನಿನ್ನ ಹೆಸರೇನಮ್ಮಾ?’ ಎಂದು ಕೇಳಿದರೆ ಆಕೆ ‘ನಂದಾ’ ಎಂದಾಗ ‘ಹೌದಮ್ಮ ನಿನ್ನದೇ ಹೆಸರು ಕೇಳಿದ್ದು’ ಎನ್ನುತ್ತಿದ್ದರು. ಅಂತೂ ಒಳ್ಳೇ ತಮಾಷೆ. ನಂದಾ-ನೀನಾಗಳಂತೆಯೇ ಹೆಸರುಗಳಲ್ಲೇ ತರ್ಕ ಹುಟ್ಟಿಸಬಹುದಾದ ಇನ್ನೊಂದು ಪ್ರಸಂಗವೆಂದರೆ (ಇದು ಕಾಲ್ಪನಿಕ)- ಹಿಂದಿ ಚಿತ್ರರಂಗದ ನಾನಾ ಪಾಟೇಕರ್ ಮತ್ತು ನೀನಾ ಗುಪ್ತಾ ಇವರಿಬ್ಬರೂ ಕನ್ನಡದಲ್ಲಿ, ಅದರಲ್ಲೂ ಪರಸ್ಪರ ಹೆಸರು ಕೂಗಿ ಮಾತಾಡಿದರೆ? ‘ನಾನಾ? ನೀನಾ?’ ಎಂಬ ಸಂದೇಹ ನಿವಾರಣೆಯಲ್ಲೇ ಕಾಲ ಕಳೆದುಹೋಗಬಹುದು.

ಅವರ ಜೊತೆಯಲ್ಲಿ ಮಾಧುರಿ ದೀಕ್ಷಿತ್ ‘ನೇನೇ’ ಕೂಡ ತೆಲುಗಿನಲ್ಲಿ ಮಾತನಾಡುತ್ತ ಸೇರಿಕೊಂಡರೆ ಕಥೆ ಮುಗೀತು. ಬೇಕಿದ್ದರೆ ಹಿನ್ನೆಲೆಯಲ್ಲಿ ಗಡಿಬಿಡಿ ಗಂಡ ಚಿತ್ರದ ಹಾಡು, ಅದೇ- ರವಿಚಂದ್ರನ್ ಮತ್ತು ತಾಯ್‌ನಾಗೇಶ್ ಪರಸ್ಪರ ಚಾಲೆಂಜ್ ಹಾಕಿಕೊಳ್ತಾರಲ್ಲ ‘ನೀನು ನೀನೇ ಇಲ್ಲಿ ನಾನು ನಾನೇ… ನೀನು
ಎಂಬುವನಿಲ್ಲಿ ನಾದವಾಗಿರುವಾಗ ನಾನೇನು ಹಾಡಲಯ್ಯ ದಾಸಾನುದಾಸ…’ ಕನ್ನಡ-ತೆಲುಗು ಅಷ್ಟೇಅಲ್ಲ. ಇಂಗ್ಲಿಷ್‌ನ ಮಜಾ ಕೇಳಿ.

ದಾವಣಗೆರೆಯಲ್ಲಿ ಎಂಜಿನಿಯರಿಂಗ್ ಓದುತ್ತಿದ್ದಾಗ ಯು. ಆರ್.ಸುಬ್ರಹ್ಮಣ್ಯ ಎಂಬ ಹೆಸರಿನ ಸಹಪಾಠಿಯೊಬ್ಬನಿದ್ದ. ಅವನನ್ನು ನಮ್ಮ ಲೆಕ್ಚರರ್ರು ‘ಆರ್ ಯೂ ಸುಬ್ರಹ್ಮಣ್ಯ?’ ಎಂದು ಕೇಳಿದಾಗಲೆಲ್ಲ ಅವನು ‘ಯೂ ಆರ್ ಸುಬ್ರಹ್ಮಣ್ಯ’ ಎಂದು ಉತ್ತರಿಸುತ್ತಿದ್ದ, ತನ್ನ ಇನಿಷಿಯಲ್ಸನ್ನು ಆಚೀಚೆ ಮಾಡಿ ಕೇಳಿದ್ದಕ್ಕೆ ಮುನಿಸಿಕೊಂಡು. ‘ನನ್ನ ಹೆಸರು ಸುಬ್ರಹ್ಮಣ್ಯ ಅಲ್ಲಪ್ಪಾ, ನೀನು ಸುಬ್ರಹ್ಮಣ್ಯನಾ?’ ಎಂದು ಕನ್ನಡದಲ್ಲಿ ಕೇಳಿ ಲೆಕ್ಚರರ್ ಗದರಿಸುತ್ತಿದ್ದರು ಹುಸಿಕೋಪದಿಂದ.

ಯು.ಆರ್ ಎಂಬ ಇನಿಷಿಯಲ್ಸ್ ಇದ್ದ ಡಾ. ಯು.ಆರ್. ಅನಂತಮೂರ್ತಿ, ಇಸ್ರೋದ ಮಾಜಿ ಅಧ್ಯಕ್ಷ ಯು.ಆರ್. ರಾವ್ ಅವರಿಗೆಲ್ಲ ಇಂಥದೇ ಸ್ವಾರಸ್ಯ ಕರ ಪೀಕಲಾಟಗಳು ಒಮ್ಮೆಯಾದರೂ ಎದುರಾಗಿರಬಹುದು. ಹೆಸರಿನಿಂದಲೇ ಹುಟ್ಟಿಕೊಳ್ಳುವ ಐಡೆಂಟಿಟಿ ಕ್ರೈಸಿಸ್ ಅದು! ಆದರೂ ನಮ್ಮ
ಐಡೆಂಟಿಟಿಗೆ ಮೊದಲನೆಯದಾಗಿ ಜೋಡಣೆಯಾಗುವುದು ನಮ್ಮ ಹೆಸರೇ. ಇಬ್ಬರು ವ್ಯಕ್ತಿಗಳಿಗೆ ಒಂದೇ ಹೆಸರಿದ್ದರೆ ಅಡ್ಡಹೆಸರು, ಊರಿನ ಹೆಸರು, ಇನಿಷಿಯಲ್ಸು ಇತ್ಯಾದಿ.

ನಾಮದ ಬಲವೊಂದೇ ಸಾಕಾಗದಿದ್ದರೆ ಭಾವಚಿತ್ರ. ಹಾಗಾಗಿಯೇ ‘ಯಾವುದಾದರೂ ಫೋಟೊ ಐಡಿ ತೋರಿಸಲೇಬೇಕು’ ಎನ್ನುವುದು ಜಾಗತಿಕವಾಗಿ ಒಂದು ರೂಢಿ ಎನ್ನುವುದಕ್ಕಿಂತಲೂ ನಿಯಮವೇ ಆಗಿಬಿಟ್ಟಿದೆ. ಭಾವಚಿತ್ರವೇ ಎಲ್ಲವನ್ನೂ ತಿಳಿಸಬಲ್ಲುದೇ? ನಿಮಗೆ ಒಂದು ಹಳೆಯ ಹಿಂದಿ ಸಿನೆಮಾಹಾಡು, ಕಿನಾರಾ ಚಿತ್ರದ್ದು, ನೆನಪಿರಬಹುದು- ‘ನಾಮ್ ಗುಮ್ ಜಾಯೇಗಾ… ಚೆಹರಾ ಯೇ ಬದಲ್ ಜಾಯೇಗಾ… ಮೇರೀ ಆವಾಜ್ ಹೀ
ಪೆಹಚಾನ್ ಹೈ ಗರ್ ಯಾದ್ ರಹೇ…’ ಅಂದರೆ, ಹೆಸರು ಮರೆತು ಹೋಗಬಹುದು; ಮುಖಚರ್ಯೆ ಬದಲಾಗಬಹುದು; ಆದರೆ ನನ್ನ ಧ್ವನಿಯನ್ನು ನೆನಪಿಟ್ಟುಕೊಂಡರೆ ಅದೇ ನನ್ನ ಪರಿಚಯದ ಗುರುತು ಎನ್ನುತ್ತಾಳೆ ಚಿತ್ರದ ನಾಯಕಿ! ನಿಮಗೆ ಆಶ್ಚರ್ಯವೆನಿಸಬಹುದು, ಅಮೆರಿಕದಲ್ಲಿ ವೆರೈಜನ್
ಎಂಬ ಮೊಬೈಲ್ ಫೋನ್ ಸರ್ವಿಸ್ ಪ್ರೊವೈಡರ್ ಕಂಪನಿಯು ತನ್ನ ಗ್ರಾಹಕರ ಧ್ವನಿಯನ್ನೇ ಗುರುತುಚೀಟಿಯಾಗಿ ಉಪಯೋಗಿಸುತ್ತದೆ.

ಕಂಪನಿಯ ಕಸ್ಟಮರ್ ಸರ್ವಿಸ್ ವಿಭಾಗಕ್ಕೆ ಕರೆ ಮಾಡಿದಾಗೆಲ್ಲ At Verizon my voice is my identity ಎಂದು ಮೊದಲಿಗೆ ನಮ್ಮಿಂದ ಫೋನ್‌ನಲ್ಲಿ ಹೇಳಿಸುತ್ತಾರೆ. ಅದು ಅವರ ಧ್ವನಿಭಂಡಾರದಲ್ಲಿರುವ ನಮ್ಮ ಧ್ವನಿಗೆ (ಮೊಬೈಲ್ ಸರ್ವೀಸ್ ಒಡಂಬಡಿಕೆ ಸಮಯದಲ್ಲಿ ರೆಕಾರ್ಡ್ ಮಾಡಿದ್ದಕ್ಕೆ) ಮ್ಯಾಚ್ ಆದರೆ ಮಾತುಕತೆ ಮುಂದುವರಿಯುತ್ತದೆ. ಮೇರೀ ಆವಾಜ್ ಹೀ ಪೆಹಚಾನ್ ಹೈ ಎಂಬ ಹಳೆಯ ಹಿಂದೀ ಚಿತ್ರಗೀತೆಯ ಸಾಲನ್ನೇ ಈ ಅಮೆರಿಕನ್ ಕಂಪನಿ ಅಳವಡಿಸಿಕೊಂಡಿರುವುದು ನನಗಂತೂ ಮಹದಾಶ್ಚರ್ಯ.

ಹೆಸರು, ಮುಖಚರ್ಯೆ, ಧ್ವನಿ ಎಲ್ಲ ಪರಿಚಯವಾಗಿದ್ದರೂ ಶಕುಂತಲೆಯನ್ನು ಗುರುತಿಸಲಾಗದವನಾದನಲ್ಲ ದುಷ್ಯಂತ ಮಹಾರಾಜ? ಅದಕ್ಕೇನ ನ್ನೋಣ? ಅವನು ಕೊಟ್ಟಿದ್ದ ಉಂಗುರವಾದರೂ ಪರಿಚಯಪ್ರಮಾಣ ಆಗಬಹುದೆಂದು ಆಕೆ ಬಗೆದರೆ ಅದೂ ಕಳೆದು ಹೋಗಬೇಕೇ! ವಿಧಿ ವಿಪರೀತ ವಿಧಿಯ ಆಟ. ಮತ್ತದೇ ಪ್ರಶ್ನೆ. ನೀನು ನೀನೇನಾ ಎಂದು ಕೇಳಿದರೆ ಉತ್ತರಿಸುವುದೆಂತು? ನಾನು ನಾನೇ ಎನ್ನಲು ಆಧಾರವೇನು? ಈ ಪ್ರಪಂಚದಲ್ಲಿ ಒಬ್ಬೊಬ್ಬ ವ್ಯಕ್ತಿಯ ಬೆರಳಚ್ಚು ವಿನ್ಯಾಸ(ಫಿಂಗರ್ ಪ್ರಿಂಟ್) ಅನನ್ಯವಾಗಿರುತ್ತವೆ ಎಂದು ವಿಜ್ಞಾನದಿಂದ ಕಂಡುಕೊಂಡಿದ್ದೇವೆ. ಅಕ್ಷರಸ್ಥರಾಗಿಯೂ ಹೆಬ್ಬೆಟ್ಟು ಒತ್ತುವ ಸಂದರ್ಭಗಳನ್ನು ನಿಯಮಗಳಿಗೋಸ್ಕರ ರೂಪಿಸಿಕೊಂಡಿದ್ದೇವೆ.

ವಿಮಾನನಿಲ್ದಾಣದಲ್ಲಿ ಇಳಿದೊಡನೆ ಊರಿನೊಳಗೆ ಪ್ರವೇಶಿಸುವ ಮೊದಲು ಫಿಂಗರ್‌ಪ್ರಿಂಟುಗಳ ತಪಾಸಣೆ ಆಗಲೇಬೇಕು. ಈಗ ಬೆರಳಚ್ಚುಗಳಷ್ಟೇ ಅಲ್ಲ, ಕಣ್ಣಿನ ಪಾಪೆ ಸಹ ಪ್ರತಿಯೊಬ್ಬ ವ್ಯಕ್ತಿಯದೂ ಅನನ್ಯ ವಿನ್ಯಾಸದ್ದಾಗಿರುತ್ತದೆಂದು ತಿಳಿದುಬಂದಿರುವುದರಿಂದ Iris identification ಅಂತಲೂ ಶುರುವಾಗಿದೆ. ಗುರುತಿನ ಅಗತ್ಯ ಮತ್ತಷ್ಟು ಗುರುತರವಾದರೆ ಡಿಎನ್‌ಎ ಟೆಸ್ಟಿಂಗ್ ಸಹ ಇದೆಯಲ್ಲ? ಆದರೆ ನನ್ನ ಜಿಜ್ಞಾಸೆಗೆ ಅದಾವುದೂ ಸಮರ್ಪಕವಾಗಿ ಉತ್ತರ ಕೊಡಲಾರದು. ಯಾಕೆ ಹೇಳಿ? ದೈಹಿಕ ಲಕ್ಷಣಗಳಿಂದ ನಾನು ನಾನೇ ಎಂದು ನಿರ್ಧರಿಸುವುದೇ ಆದಲ್ಲಿ ನನ್ನ ದೇಹದ ಒಂದೊಂದೇ ಅಂಗವನ್ನು ಬದಲಾಯಿಸುತ್ತಾ ಹೋದರೆ ನಾನು ನಾನಾಗಿಯೇ ಇರುತ್ತೇನೆಯೇ? ‘ಥೀಸಿಯಸ್‌ನ ಹಡಗಿನ ಕಥೆ’ಯನ್ನು ಈ ಅಂಕಣದಲ್ಲಿ ಹಿಂದೊಮ್ಮೆ ಉಲ್ಲೇಖಿಸಿದ್ದೆ.

ಥೀಸಿಯಸ್ ಎಂಬ ನಾವಿಕ ಹಡಗಿನಲ್ಲಿ ಹೊರಟವನು ದಾರಿಯುದ್ದಕ್ಕೂ ತನ್ನ ಹಡಗಿನ ಒಂದೊಂದೇ ಭಾಗವನ್ನು ಬದಲಾಯಿಸುತ್ತ ಹೋಗ ಬೇಕಾಗುತ್ತದೆ. ಗಮ್ಯಸ್ಥಾನ ತಲುಪುವಾಗ ಅವನ ಹಡಗಿನ ಪ್ರತಿಯೊಂದು ಭಾಗವೂ ಹೊಸತು ಜೋಡಿಸಿದ್ದಾಗಿರುತ್ತದೆ. ಆದರೂ ಜನ ಅದನ್ನು ಥೀಸಿಯಸ್‌ನ ಹಡಗು ಎಂದೇ ಗುರುತಿಸುತ್ತಾರೆ. ಥೀಸಿಯಸ್ ಬಿಸಾಡಿದ ಭಾಗಗಳನ್ನೆಲ್ಲ ಸೇರಿಸಿ ಇನ್ನೊಂದು ಹಡಗನ್ನು ಒಬ್ಬಾತ ನಿರ್ಮಿಸುತ್ತಾನೆ. ನಿಜವಾಗಿಯಾದರೆ ಅದೇ ಥೀಸಿಯಸ್‌ನ ಒರಿಜಿನಲ್ ಹಡಗು ಅಲ್ಲವೇ? ಅದೇರೀತಿ ಒಂದುವೇಳೆ ನನ್ನ ದೇಹದ ಅಂಗಗಳನ್ನು (ನನಗೆ ಹೊಸದನ್ನು ಜೋಡಿಸುವಾಗ ಬಿಸಾಡಿದ ಹಳೆಯವನ್ನು) ಜೋಡಿಸಿ ಹೊಸದೊಂದು ವ್ಯಕ್ತಿಯಾದರೆ ಅದೂ ನಾನೇ ಆಗಿರುತ್ತೇನೆಯೇ? ಇತ್ತೀಚೆಗೆ ‘ಹಯವದನ’ ನಾಟಕ ನೋಡುವಾಗಲೂ ಅದೇ ಪ್ರಶ್ನೆ ತಲೆ ತಿಂದಿತು.

ದೇವದತ್ತನ ರುಂಡಕ್ಕೆ ಕಪಿಲನ ಮುಂಡ, ಕಪಿಲನ ರುಂಡಕ್ಕೆ ದೇವದತ್ತನ ಮುಂಡ ಜೋಡಣೆ. ನನಗೊಂದು ವೇಳೆ ಹಾಗಾದರೆ ನಾನು ಯಾರು? ಕನಕದಾಸರು ‘ನಾನು ಹೋದರೆ ಸ್ವರ್ಗಕ್ಕೆ ಹೋದೇನು’ ಎಂದು ಹೇಳಿದಾಗಿನ ‘ನಾನು’ ನಾನೇ? ಲಾಂಗೂಲಾಚಾರ್ಯ (ದಿವಂಗತ ಪಾ.ವೆಂ.ಆಚಾರ್ಯ)
ಬರೆದ ‘ನಾನು ಯಾರು?’ ಎಂಬ ಶೀರ್ಷಿಕೆಯ ಒಂದು ಹರಟೆ ತುಂಬ ಚೆನ್ನಾಗಿದೆ. ಅದರಲ್ಲಿ ಅವರು ತನ್ನನ್ನು ಯಾರುಯಾರೋ ಬೇರೆಯೇ ವ್ಯಕ್ತಿ ಎಂದುಕೊಂಡು ಲೋಕದ ಜನರು ಬೇಸ್ತುಬಿದ್ದ, ತನ್ನನ್ನೂ ಪೇಚಿಗೆ ಸಿಲುಕಿಸಿದ ಪ್ರಸಂಗಗಳನ್ನು ರಸವತ್ತಾಗಿ ಬಣ್ಣಿಸಿದ್ದಾರೆ.

‘ನಾನು ನನ್ನ ತಂದೆಯ ನೊಣಪ್ರತಿ ಎಂಬುದನ್ನು ನಮ್ಮ ಅಜ್ಜಿಯಿಂದ ಕೇಳಿ ನಮ್ಮ ತಾಯಿಗೆ ಸಂತೋಷವಾದಷ್ಟು ನನಗೆ ಆಗಲಿಲ್ಲ. ನಾನು ನಾನೇ ಅಂತ ಗಟ್ಟಿಯಾಗಿ ನಂಬಿಕೊಂಡಿದ್ದ ನನಗೆ ಅದು ಪ್ರಥಮ ಶಾಕ್ ಆಗಿತ್ತು. ಆವೊತ್ತಿನಿಂದ ನಾನು ನನ್ನಪ್ಪನಾಗಿ ಮಾತ್ರವಲ್ಲ, ನನ್ನ ಉಭಯಕುಲ ಜ್ಞಾತಾಜ್ಞಾತ ಪೂರ್ವಜರಾಗಿ ಮಾತ್ರವಲ್ಲ, ಇನ್ನೂ ಯಾರ‍್ಯಾರಾಗಿಯೋ ಮಂದಿಗೆ ಕಾಣುತ್ತ ಬಂದಿದ್ದೇನೆ. ಹೀಗೆಯೇ ಒಮ್ಮೆ ಒಬ್ಬರಿಗೆ ರಂಗೇಗೌಡನ ಮಗನ ಹಾಗೆ, ಇನ್ನೊಬ್ಬರಿಗೆ ರೋಜಾರಿಯೋ ಫೆರ್ನಾಂಡಿಸನ ಹಾಗೆ, ಅಂತೂ ಒಬ್ಬೊಬ್ಬರಿಗೆ ಒಂದೊಂದು ರೀತಿಯಂತೆ ಅಸಂಖ್ಯ ನಾಮರೂಪಗಳಲ್ಲಿ ಕಾಣಿಸಿದ್ದೇನೆ.

ಮತ್ತೆ ನನಗೆ ಈ ಎಲ್ಲ ವ್ಯಕ್ತಿತ್ವಗಳನ್ನು ಆರೋಪಿಸಿದ ಎಲ್ಲ ಜನರಿಗೂ ನಾನು ಆ ವ್ಯಕ್ತಿಗಳಲ್ಲ ಎಂದು ಮನವರಿಕೆ ಮಾಡುವುದು ಸುಲಭವಾಗಿರಲಿಲ್ಲ. ಅವರಲ್ಲಿ ಕೆಲವರು ನಾನು ಸುಳ್ಳೇ ನಾನೆಂದು ನಟಿಸುತ್ತಿರುವುದಾಗಿ ಭಾವಿಸಿದ್ದಾರೆ. ಒಂದೊಂದು ಸಲ ನನ್ನ ಈ ಪೀಡಕರು ತಾವು ಗುರುತಿಸಿದ್ದರ
ಬಗ್ಗೆ ಎಷ್ಟು ನಿಸ್ಸಂಶಯರಾಗಿರುತ್ತಾರೆಂದರೆ ನನಗೇ ನಾನು ನಾನಲ್ಲ, ಅವರು ಹೇಳುವ ಮನುಷ್ಯನೇ ಇರಬೇಕು ಅನಿಸುತ್ತದೆ…’ ಎಂದು ಸಾಗುತ್ತದೆ ಲಾಂಗೂಲಾಚಾರ್ಯ ಲಹರಿ. ತರ್ಕ ಮಾಡುತ್ತ ಹೋದರೆ ಈ ಜಿಜ್ಞಾಸೆಯು ದೇಹ-ಆತ್ಮ, ಪ್ರಕೃತಿ-ಪುರುಷ, ದ್ವೈತ-ಅದ್ವೈತ ಸಿದ್ಧಾಂತಗಳನ್ನೆಲ್ಲ ದಾಟಿ
ಅಹಂ ಬ್ರಹ್ಮಾಸ್ಮಿ ಎಂದುಕೊಂಡು ಪರಬ್ರಹ್ಮನ ಪದತಲ ದವರೆಗೂ ಹೋಗಬಹುದು. ತತ್ತ್ವಮಸಿ(ತತ್ ತ್ವಮ್ ಅಸಿ = ಅದು ನೀನೇ ಆಗಿರುವಿ) ಎಂಬ ಛಾಂದೋಗ್ಯೋಪನಿಷತ್ತಿನ ಮಹಾವಾಕ್ಯವನ್ನೂ ತಲುಪಬಹುದು. ಅಣೋರಣೀಯನೂ ಮಹತೋಮಹೀಯನೂ ಅಪ್ರಮೇಯನೂ ನಿರಾಕಾರನೂ
ಸರ್ವಾಂತರ್ಯಾಮಿಯೂ ಆದ ಪರಬ್ರಹ್ಮನಿಗೇ ನಾವು ತತ್ತ್ವಮಸಿ ಎಂದು ಗುರುತುಪತ್ರ ಕೊಡಬಲ್ಲೆವು, ಆದರೆ ನನಗೆ ನಿಮಗೆ ಸರಿಯಾದ ಗುರುತಿಲ್ಲ ವೆಂದರೆ ಆ ಪರಬ್ರಹ್ಮನಿಗೂ ನಗು ಬಂದೀತು! ಈಗ ಹೇಳಿ, ‘ನೀನು ನೀನೇನಾ?’ ಎಂದು ನಿಮ್ಮನ್ನು ಯಾರಾದರೂ ಕೇಳಿದರೆ ನಿಮ್ಮ ಉತ್ತರ?