Wednesday, 11th December 2024

ಮಹಿಳೆಯರು ಮಾನವ ಕುಲದವರಲ್ಲವೇ ?

ಪ್ರಚಲಿತ

ಮಿರ್ಲೆ ಚಂದ್ರಶೇಖರ

ಪ್ರತಿಷ್ಟಿತ ಕುಟುಂಬದಿಂದ ಬಂದವರೆ, ಸರಕಾರದ ಆಡಳಿತದಲ್ಲಿ ಪ್ರಮುಖ ಸ್ಥಾನದಲ್ಲಿ ಇರುವವರೆ, ಸರ್ವವನ್ನೂ ತ್ಯಜಿಸಿ ಲಕ್ಷಾಂತರ ಭಕ್ತಾದಿ ಗಳನ್ನು ಹೊಂದಿರುವ ಮಠಕ್ಕೆ ಪೀಠಾಧಿಪತಿಗಳಾಗಿರುವ ಗುರುಗಳೆ, ಹೆಚ್ಚು ಕಲಿತು ಮಕ್ಕಳಿಗೆ ಬೋಧಿಸುವ ಗುರುಗಳೆ ಹೀನ ಕೃತ್ಯಗಳ ಕರ್ತೃಗಳಾಗಿರುವಾಗ(ಕಾಮ ಪೀಡಕರು) ರಕ್ಷಣೆಗೆ ಸಂತ್ರಸ್ಥೆಯಾದವಳು ಯಾರ ಬಳಿ ಹೋಗಬೇಕು?

ಮಾಧ್ಯಮಗಳು ಹಾಗೂ ಪತ್ರಿಕೆಗಳಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯದ ಸುದ್ದಿಗಳು ಇಲ್ಲದ ದಿನಗಳಿಲ್ಲ, ಅದರಲ್ಲೂ ಲೈಂಗಿಕವಾಗಿ ಶೋಷಣೆಗೆ ಒಳಗಾಗಿರುವ ಮಹಿಳೆಯರ ಬಗ್ಗೆಯೇ ಹೆಚ್ಚು ಕಾಣುತ್ತೇವೆ. ಅನಾದಿಕಾಲದಿಂದಲೂ ನಡೆದುಕೊಂಡು ಬರುತ್ತಿರುವ ಅನಾಗರಿಕ ಕೃತ್ಯವಿದು. ನಾಗರೀಕತೆ ಬೆಳೆದಂತೆ ಕಡಿಮೆಯಾಗುವ ಬದಲು ಏರುಗತಿಯಲ್ಲಿರುವುದು ದುರ್ದೈವ. ವಿದ್ಯೆಯನ್ನು ಕಲಿತವರು ಹಾಗೂ ಅಧಿಕಾರದಲ್ಲಿ ಇರುವವರೇ ಹೆಣ್ಣಿನ ಶೋಷಣೆಗೆ ಮುಂಚೂಣಿಯಲ್ಲಿ ಕಂಡುಬರುವುದು ಒಂದು ಕಡೆಯಾದರೆ ನಾಲ್ಕಾರು ಮಂದಿ ಒಂದು ಹೆಣ್ಣನ್ನು ಹೊತ್ತೊಯ್ದು ಸಾಮೂಹಿಕ ಹತ್ಯಾಚಾರ ಮಾಡುವ ವಿಕೃತ ಮನಸ್ಸಿನ ರಾಕ್ಷಸರು ಮತ್ತೊಂದು ವರ್ಗ.

ಸೃಷ್ಟಿಯಲ್ಲಿ ಗಂಡು ಮತ್ತು ಹೆಣ್ಣುಗಳೆಂದು ವರ್ಗೀಕರಿಸಿ ವಿಭಿನ್ನವಾದ ಅಂಗಾಂಗಳನ್ನು ಇಟ್ಟು ಆಕರ್ಷಣೆಯ ಮನಸ್ಸು ಕೊಟ್ಟ ಭಗವಂತ ಭೂಮಿಗೆ
ಬಂದರೂ ಹೆಣ್ಣಿನ ಮೇಲೆ ಆಗುತ್ತಿರುವ ಕಾಮದ ಅಟ್ಟಹಾಸವನ್ನು ತಡೆಯಲಾರನು. ಆ ಮಟ್ಟಕ್ಕೆ ಸಮಾಜದಲ್ಲಿ ವಿಕೃತರ ಸಂತತಿ ಬೆಳೆದು ನಿಂತಿದೆ.
ನೋಡಲು ಸಭ್ಯರೇ, ಪ್ರತಿಷ್ಟಿತ ಕುಟುಂಬದಿಂದ ಬಂದವರೆ, ಸರಕಾರದ ಆಡಳಿತದಲ್ಲಿ ಪ್ರಮುಖ ಸ್ಥಾನದಲ್ಲಿ ಇರುವವರೆ, ಸರ್ವವನ್ನೂ ತ್ಯಜಿಸಿ
ಲಕ್ಷಾಂತರ ಭಕ್ತಾದಿಗಳನ್ನು ಹೊಂದಿರುವ ಮಠಕ್ಕೆ ಪೀಠಾಧಿಪತಿಗಳಾಗಿರುವ ಗುರುಗಳೆ, ಹೆಚ್ಚು ಕಲಿತು ಮಕ್ಕಳಿಗೆ ಬೋಧಿಸುವ ಗುರುಗಳೆ ಹೀನ ಕೃತ್ಯಗಳ
ಕರ್ತೃಗಳಾಗಿರುವಾಗ(ಕಾಮ ಪೀಡಕರು) ರಕ್ಷಣೆಗೆ ಸಂತ್ರಸ್ಥೆಯಾದವಳು ಯಾರ ಬಳಿ ಹೋಗಬೇಕು?.

ಸಂಬಂಧದಲ್ಲಿ ಮಗಳಾಗಲಿ, ಸಹೋದರಿಯಾಗಲಿ, ತಾಯಿಯ ವಯಸ್ಸಿನವರಾದರೂ ಬಿಡುವುದಿಲ್ಲ ಕಾಮುಕರು. ಹೆಣ್ಣು-ಗಂಡುಗಳ ಸೃಷ್ಟಿಯಲ್ಲಿ
ಆಕರ್ಷಣೆಯನ್ನಿಟ್ಟ ಭಗ ವಂತ, ನಿಯಂತ್ರಿಸುವ ಶಕ್ತಿಯನ್ನೂ ಕೊಟ್ಟಿರುತ್ತಾನೆ. ಉಪಯೋಗಿಸಿಕೊಳ್ಳುವ ನಡುವಳಿಕೆಯನ್ನು ಕಲಿಸಿಕೊಡುವಲ್ಲಿ ಎಡವಿದ್ದರ ಫಲವಿದು. ರಾಜಮಹಾರಾಜರ ಕಾಲದಿಂದ ಇಂದಿನ ಪ್ರಜಾಪ್ರಭುತ್ವದ ಮಂತ್ರಿಗಳ ಆಡಳಿತದವರೆಗೂ ಹೆಣ್ಣಿನ ಮೇಲೆ ಕ್ರೌರ್ಯ
ನಿರಂತರವಾಗಿ ನಡೆಯುತ್ತಲೇ ಬಂದಿದೆ.

ಶೇಕಡಾವಾರು ಪ್ರಮಾಣದಲ್ಲಿ ಇಂದು ಜಾಸ್ತಿ ಇರಬಹುದು ಅಥವಾ ತಂತ್ರಜ್ಞಾನದ ಆವಿಷ್ಕಾರಗಳಾದ ಹಿಡನ್ ಕ್ಯಾಮರಾ, ಪೆನ್‌ಡ್ರೈವ್, ಮೊಬೈಲ್
ಗಳಂತಹ ಉಪಕರಣಗಳಿಂದಲೂ ಹೆಚ್ಚು ಬಯಲಾಗಿ ಬೆತ್ತಲಾಗುತ್ತಿರವ ಕಾರಣವೂ ಇರಬಹುದು. ಅನುಮಾನವೇ ಇಲ್ಲ ಜೀವಿಗಳಲ್ಲಿ ಪ್ರಾಣಿ ವರ್ಗವೂ ಒಳಗೊಂಡಂತೆ ಹೆಣ್ಣು-ಗಂಡುಗಳಿಬ್ಬರೂ ಕಾಮುಕರೆ, ಇಲ್ಲದಿದ್ದರೆ ಸಂತತಿ ಮುಂದುವರಿಯಬೇಕಲ್ಲ. ವಿಕೃತರಾದವರು ಮಾತ್ರ ಅನೈತಿಕ ವ್ಯವಹಾರಗಳಿಗೆ ತೊಡಗಿಸಿಕೊಳ್ಳುವುದು, ಇದರಲ್ಲಿ ವಿಶ್ವದಾಖಲೆ ಬರೆಯವಷ್ಟು ಸಾಧನೆ ಮಾಡಿರುವ ದುಷ್ಟರು ಸಜ್ಜನಿಕೆಯ ಸೋಗಿನಲ್ಲಿ ನಮ್ಮ ನಡುವೆ ಇದ್ದಾರೆ!. ಈ ವಿಷಯದಲ್ಲಿ ಯಾರೂ ಯಾರನ್ನೂ ನಂಬುವುದಕ್ಕೆ ಬರುವುದಿಲ್ಲ.

ಜೀವನಶೈಲಿಯ ಬದಲಾವಣೆಯಿಂದಲೂ ಸಮಾಜದ ಸ್ವಾಸ್ಥ್ಯ ಕೆಡುತ್ತಿದೆ, ಭ್ರೂಣಹತ್ಯೆ, ಜೂಜು, ತಂಬಾಕು, ಕುಡಿತಗಳಂತ ದುರಭ್ಯಾಸಗಳು, ಉದ್ರೇಕಿಸುವ ದೃಶ್ಯ ಮಾಧ್ಯಮಗಳು, ಬೆಳೆದ ವಾತಾವರಣ ಇತ್ಯಾದಿಗಳು ಮನುಷ್ಯನ ಗುಣವನ್ನು ಕಟ್ಟಿಕೊಡುತ್ತವೆ. ಹಾಗಾಗಿ ಬಾಲ್ಯದಲ್ಲೇ ಪೂರಕ ವಾತಾವರಣ ಒದಗಿಸಿಕೊಡುವುದು ಪೋಷಕರ ಬಹುಮುಖ್ಯ ದ್ಯೇಯವಾಗಬೇಕು. ಬೆಳವಣಿಗೆಯ ಹಂತದಲ್ಲಿನ ಸಸಿಗೆ ನೀರು ಗೊಬ್ಬರ ಹಾಕಿದರಷ್ಟೇ ಸಾಲದು ನೀಟಾಗಿ ನಮಗಿಷ್ಟವಾಗುವಂತೆ ಬೆಳೆಯಬೇಕೆಂದರೆ ಅನಾವಶ್ಯಕ ರೆಕ್ಕೆಗಳನ್ನು ಕಡಿದು ನೇರವಾಗಿ ಬೆಳೆಯುವ ಹಾಗೆ ಸಪೋರ್ಟ್ ಆಗಿ ಕೋಲನ್ನು ನೆಡುವುದು ಮುಖ್ಯವಾಗುತ್ತದೆ.

ಇತ್ತೀಚಿನ ದಿನಗಳಲ್ಲಿ ಮದುವೆ ಆಗಲು ಗಂಡಿಗೆ ಹೆಣ್ಣುಗಳೇ ಸಿಗದೇ ಇರುವುದು ತುಂಬಾ ಕಳವಳಕಾರಿ. ಒಂದು ಹೆಣ್ಣಿಗೊಂದು ಗಂಡು, ಹೇಗೋ ಸೇರಿ ಹೊಂದಿಕೊಂಡು ನಡೆಯುವುದೇ ಜೀವನ, ಆದರೆ ಹಾಗೆ ಆಗುತ್ತಿಲ್ಲವಲ್ಲ. ಮದುವೆಗಳು ವಿಳಂಬವಾಗುತ್ತಿವೆ. ವಿದ್ಯಾವಂತ ಹೆಣ್ಣು ಮಕ್ಕಳು ಮದುವೆ ಯಾಗಲು ನಿಬಂಧನೆಗಳನ್ನು ಹಾಕುತ್ತಿದ್ದಾರೆ. ಮುರಿದುಬಿದ್ದ ಸಂಬಂಧಗಳು ಮತ್ತೊಂದು ಮದುವೆ ಆಗಬೇಕೇ? ಬೇಡವೇ? ಎಂಬ ಸಂದಿಗ್ಧತೆಯಲ್ಲಿ ಇವೆ. ಮದುವೆ ಆದವರ ಕಥೆ ಹೀಗಾದರೆ ವಯಸ್ಸು ಮೀರಿದರೂ ಮದುವೆಯನ್ನೇ ಆಗದ ಯುವಕ-ಯುವತಿಯರ ಸಂಖ್ಯೆ ಏರುತ್ತಲೇ ಇದೆ.

ಲಿಂಗಾನುಪಾತ ೨೦೧೭-೧೯ರಲ್ಲಿ ೧೦೦೦ ಪುರುಷರಿಗೆ ೯೦೪ ಮಹಿಳೆಯರು ಇದ್ದದ್ದು ೨೦೩೬ರ ಹೊತ್ತಿಗೆ ೯೫೨ ಆಗಬಹುದೆಂಬ ಅಂದಾಜಿದೆ. ನ್ಯಾಷನಲ್ ಫ್ಯಾಮಿಲಿ ಹೆಲ್ತ್ ಸರ್ವೆ ಪ್ರಕಾರ ೨೦೨೪ಕ್ಕೆ ೧೦೦೦ ಪುರುಷರಿಗೆ ೧೦೨೦ ಮಹಿಳೆಯರೆಂದು ತಿಳಿಸಿರುತ್ತಾರೆ. ಏರುಪೇರಾಗುವ ಅಂಕಿಅಂಶಗಳು ಏನೇ ಇರಲಿ ಗಂಡಿಗೊಂದು ಹೆಣ್ಣು ಸಿಗುತ್ತಿಲ್ಲ ಹಾಗೂ ಆಗಬೇಕಾದ ಕಾಲಕ್ಕೆ ಮದುವೆಗಳ ಆಗುತ್ತಿಲ್ಲವೆಂಬದು ಇಂದಿನ ವಾಸ್ತವ. ವಯಸ್ಸು ಮೀರಿದ ಅವಿವಾಹಿತರು ಹರಕೆ ಹೊತ್ತು ಸಂಘ ಕಟ್ಟಿಕೊಂಡು ತಂಡೋಪತಂಡವಾಗಿ ದೇವಾಲಯಗಳಿಗೆ ಕಾಲುನಡಿಗೆ ಹೋಗುವುದು ಸಾಮಾನ್ಯ ಸಂಗತಿಯಾಗಿದೆ.

ಮದುವೆಗಾಗಿ ಸ್ವಯಂವರ ಏರ್ಪಡಿಸಿದರೆ ಭಾಗವಹಿಸುವ ಕನ್ಯೆಯರು ಎಷ್ಟು?, ಮೂರು ಮತ್ತೊಂದಾಗಿದೆ!. ಮದುವೆಗಳು ಸೂಕ್ತ ವಯಸ್ಸಿಗೆ ಗಂಡು ಮಕ್ಕಳಿಗೆ ಆಗದಿರುವುದು ಬಹುಶಃ ಲೈಂಗಿಕ ದೌರ್ಜನ್ಯಕ್ಕೆ ಕಾರಣ ಇರಬಹುದೆ?! ಆದರೆ ಮದುವೆ ಆಗಿ ಸುಂದರ ಪತ್ನಿಯನ್ನು ಹೊಂದಿರುವ ನಡುವ
ಯಸ್ಸಿನ ಪುರುಷರು ಈ ಕೃತ್ಯಕ್ಕೆ ಇಳಿಯುವರಲ್ಲ ಅವರಿಗೆ ಏನಾಗಿದೆ?, ಯಾವ ದೊಡ್ಡರೋಗ ಬಡಿದಿರುತ್ತದೆ?. ಗಂಡಿನಷ್ಟೇ ಸರಿಸಮನಾಗಿ ನಿಲ್ಲಬೇಕೆಂಬ ತವಕದಲ್ಲಿ ಇರುವ ನಮ್ಮ ಹೆಣ್ಣು ಮಕ್ಕಳು ಶೋಷಣೆಗೆ ಒಳಗಾಗುತ್ತಿರುವುದು ಸುಳ್ಳೇನಲ್ಲ, ವಿದ್ಯೆ ಕಲಿಯಲು ಸಮೀಪದ ನಗರಕ್ಕೆ ಹೋಗಿ ಬರುವುದಿರಲಿ ಅದೇ ಊರಿನ ಕಾಲೇಜಿಗೆ ಹೋಗುವುದಕ್ಕೂ ಹೆದರುತ್ತಿದ್ದ ಹೆಣ್ಣು ಮಕ್ಕಳು ಇಂದು ನಿರಾಯಾಸವಾಗಿ ವಿದೇಶಗಳಲ್ಲಿ ಉನ್ನತ ವ್ಯಾಸಂಗ ಮಾಡಿ ಅಲ್ಲೇ ನೌಕರಿ ಮಾಡುವ ಸಾಮಾರ್ಥ್ಯ ಹೊಂದಿದ್ದಾರೆ.

ಎಲ್ಲಾ ಕ್ಷೇತ್ರಗಳಲ್ಲೂ ಗಂಡಿಗಿಂತಲೂ ಹೆಚ್ಚು ಸಾಧನೆ ಮಾಡಿರುವ ಮಹಿಳೆಯರು ಕಾಮುಕರಿಂದ ರಕ್ಷಿಸಿಕೊಳ್ಳುವ ಜಾಣ್ಮೆ ಬೆಳೆಸಿಕೊಳ್ಳುವುದನ್ನು ಮೈಗೂಡಿಸಿಕೊಳ್ಳಬೇಕಾಗಿದೆ. ಲೈಂಗಿಕ ದೌರ್ಜನ್ಯಗಳನ್ನು ವಿಶ್ಲೇಷಿದರೆ ವಿಕೃತಕಾಮಕ್ಕೆ ತೊಡಗಿಸಿಕೊಳ್ಳುವವರಲ್ಲಿ ಶೇ.೯೦ರಷ್ಟು ಯಾರೆಂದರೆ ಆರ್ಥಿಕವಾಗಿ ಸದೃಢ ಆಗಿರುವವರು, ಅಧಿಕಾರದಲ್ಲಿ ಇರುವ ಅಧಿಕಾರಿಗಳು ಮತ್ತು ಜನಪ್ರತಿನಿದಿಗಳು, ಉನ್ನತ ವ್ಯಾಸಂಗ ಮಾಡಿದವರು, ಅಗತ್ಯಕ್ಕಿಂತ ಹೆಚ್ಚು ಪೌಷ್ಟಿಕ ಹಾಗೂ ಮೃಷ್ಟಾನ್ನ ತಿನ್ನುವವರು, ಮಠಾಧಿಪತಿಗಳು, ನಗರ ವಾಸಿಗಳು, ಗ್ಲಾಮರ್ ಕ್ಷೇತ್ರದಲ್ಲಿ ಇರುವವರೇ ಆಗಿರುತ್ತಾರೆ.

ಮಹಿಳೆಯರು ಅನ್ಯ ಗ್ರಹದಿಂದ ಬಂದವರೇ? ಅಥವಾ ಇವರೇನು ಮಾನವ ಕುಲದವರಲ್ಲವೇ? ಎಂಬ ಅನುಮಾನ ಮಾಧ್ಯಮಗಳಲ್ಲಿ ತೋರಿಸುವ
ದೌರ್ಜನ್ಯದ ದೃಶ್ಯಗಳನ್ನು ನೋಡಿದಾಗಲೆಲ್ಲ ಅನಿಸುವುದುಂಟು. ಒಬ್ಬನೇ ಪೀಡಕ ಅಟ್ಟಹಾಸಗೈದ ಮಹಿಳೆಯರ ಸಂಖ್ಯೆಯನ್ನು ನೋಡಿದಾಗ ಇದು
ಸಾಧ್ಯವೇ? ಎಂಬ ಸಂಶಯವು ಬರದೆ ಇರದು. ಲೆಕ್ಕಾಚಾರ ಮಾಡಿ ತಾಳೆ ಹಾಕಿದರೆ ಖಂಡಿತ ಅಸಾಧ್ಯವಾದ ಕಾರ್ಯವಿದು.

ಸಮಾಜವು ಪುರುಷ ಪ್ರಧಾನದಿಂದ ಹೊರ ಬಂದು ಮಹಿಳೆಯರಿಗೂ ಪ್ರಾಶಸ್ತ್ಯ ಕೊಡುತ್ತಿರುವುದು ಮೇಲ್ನೋ ಟಕ್ಕೆ ಕಂಡು ಬಂದರೂ ವಾಸ್ತವವಾಗಿ ಮಹಿಳೆಯರು ಇನ್ನೂ ಪುರುಷರಿಂದ ಹಿಂಸೆಗೆ ಒಳಗಾಗುತ್ತಿದ್ದಾರೆ. ಕೆಲವೊಮ್ಮೆ ಮಹಿಳೆಯರ ಮೇಲೆ ಆಗುತ್ತಿರುವ ದೌರ್ಜನ್ಯಕ್ಕೆ ಕಾರಣ ಏನೆಂಬ ಸತ್ಯಾಂಶವನ್ನು ಹೇಳಿದರೆ, ಹೇಳಿದವನನ್ನೇ ಜಗ್ಗಾಡಿ ನಿಂದಿಸುವರು. ಬೆಕ್ಕಿಗೆ ಗಂಟೆ ಕಟ್ಟುವವರು ಯಾರೆಂಬುದನ್ನು ಪತ್ರಿಕೆಗಳ ಸುದ್ದಿಗಳಲ್ಲಿ ನೋಡು ತ್ತಿದ್ದೇವೆ, ಆಗೊಮ್ಮೆ ದೈರ್ಯ ಮಾಡಿ ಅಂತಹ ಕಾಮುಕ ಬೆಕ್ಕುಗಳಿಗೆ ಗಂಟೆ ಕಟ್ಟಿದ್ದೇ ಆದಲ್ಲಿ ದೌರ್ಜನ್ಯದ ಸಮಯದಲ್ಲಿ ಸೌಂಡ್ ಬರದೆ ಇರುತ್ತದೆಯೇ. ಅದಕ್ಕಾಗಿಯೇ ಗಂಟೆ ಕಟ್ಟಲು ಯಾರೂ ಹೋಗುವುದಿಲ್ಲ, ಮುಂದೊಂದು ದಿನ ಕಟ್ಟುವವನು ಕಟ್ಟಿಸಿ ಕೊಳ್ಳಬೇಕಾಗುತ್ತದಲ್ಲ ಎಂಬ ಭಯವೂ ಇರಬಹುದು!.

ಹೆಣ್ಣನ್ನು ಭೂಮಿಗೆ ಹೋಲಿಸುತ್ತೇವೆ ಏಕೆಂದರೆ ಎರಡರ ಮೇಲೂ ಮನುಷ್ಯ ನಿರಂತರವಾಗಿ ಕ್ರೌರ್ಯ ತೋರಿ ಸಂಕಷ್ಟಕ್ಕೆ ದೂಡುತ್ತಿದ್ದಾನಲ್ಲ.
ಎಲ್ಲಿಯವರೆಗೆ ಭೂಮಿ ಮತ್ತು ಹೆಣ್ಣನ್ನು ಗೌರವಿಸುವುದಿಲ್ಲವೋ ಅಲ್ಲಿಯವರೆಗೆ ಗಂಡಿಗೆ ನೆಮ್ಮದಿ ಇರದು. ಗಾದೆಯಂತೆ ಯಾರು ಹೆಣ್ಣು, ಹೊನ್ನು ಮತ್ತು ಮಣ್ಣಿನ ಹಿಂದೆ ಹೋಗುತ್ತಾನೋ ಅವನಿಗೆ ಎಂದಿಗೂ ಸಂಕಷ್ಟ ತಪ್ಪಿದ್ದಲ್ಲ ಎಂಬುದು ನೂರಕ್ಕೆ ನೂರು ಸತ್ಯ!. ನೆನಪಿರಲಿ ಅವಳೊಂದು ಹೆಣ್ಣು, ಸೃಷ್ಟಿಗವಳೇ ಕಣ್ಣು, ತಿದ್ದುವಳು ಸಂಸಾರದ ಹುಣ್ಣು, ನೀಗುವಳು ಹಸಿವು, ಗರ್ಭದಲ್ಲಿಟ್ಟು ಕಾಯುವಳು ವಂಶದ ಕುಡಿಗಳನ್ನು, ಇನ್ನಾದರೂ ಉಳಿಸಿ ಬೆಳೆಸಿರವಳ ಸಂಕುಲವನ್ನು ಮರೆಯದಿರಿ ನಮ್ಮ ಜನ್ಮದಾತೆಯೂ ಒಂದು ಹೆಣ್ಣು ಎಂಬುದನ್ನು.

(ಲೇಖಕರು : ನಿವೃತ್ತ ಸಹಾಯಕ
ಕಾರ್ಯಪಾಲಕ ಎಂಜಿನಿಯರ್, ಲೇಖಕರು)