ಪ್ರತಿಸ್ಪಂದನ
ಶಂಕರನಾರಾಯಣ ಭಟ್
‘ನೂರೆಂಟು ವಿಶ್ವ’ ಅಂಕಣದಲ್ಲಿ ಪ್ರಕಟವಾದ ‘ಒಂದು ಕುಟುಂಬದಂತೆ ಸಂಸ್ಥೆ ಕೆಲಸ ಮಾಡುವುದು ಎಂದರೇನು?’ ಶೀರ್ಷಿಕೆಯ ಬರಹ (ವಿಶ್ವವಾಣಿ ಫೆ.೨೨) ನೂರೆಂಟು ಪ್ರಶ್ನೆಗಳಿಗೆ ಗ್ರಾಸವಾದಂತಿದೆ. ‘ಒಂದು ಸಂಸ್ಥೆ ಎಂದರೆ ಸರಪಣಿಯಿ ದ್ದಂತೆ, ಒಂದು ಕೊಂಡಿ ದುರ್ಬಲವಾದರೂ ಇಡೀ ಸರಪಣಿಯೇ
ತುಂಡಾಗುವ ಅಪಾಯವಿರುತ್ತದೆ; ಒಂದು ಕುಟುಂಬದಂತೆ ಕೆಲಸ ಮಾಡದಿದ್ದರೆ ಯಾವ ಸಂಸ್ಥೆಯೂ ಉದ್ಧಾರವಾಗದು’ ಎಂದೆಲ್ಲಾ ಹೇಳಿದ್ದಾರೆ ಅಂಕಣಕಾರರು.
ತಮ್ಮ ಅಭಿಪ್ರಾಯವನ್ನು ಸಮರ್ಥಿಸಲು ಅವರು ನೀಡಿರುವ ‘ರಿಚ್ ಫೀಲ್’ ಸಂಸ್ಥೆಯ ಉದಾಹರಣೆ ಆಕರ್ಷಕವೆನಿಸಿತು. ಕಂಪನಿಯ ಆದಾಯ ಕುಗ್ಗಿದರೆ ಸಿಬ್ಬಂದಿಯನ್ನು ಮನೆಗೆ ಕಳಿಸುವ ಬದಲು, ‘ಎಲ್ಲ ಸಿಬ್ಬಂದಿಯೂ ಮುಖ್ಯ’ ಎಂಬ ನಿಲುವಿಗೆ ಅಂಟಿಕೊಳ್ಳುವ ಕಂಪನಿಯ ಮುಖ್ಯಸ್ಥರ ನಿಲುವೂ
ಶ್ಲಾಘನೀ ಯವೇ. ಆದರೆ ಬರಹದಲ್ಲಿ ಉಲ್ಲೇ ಖಿಸಿರುವಂತೆ ನಡೆದುಕೊಳ್ಳುವವರ ಸಂಖ್ಯೆ ಎಷ್ಟಿರಬಹುದು? ಅದು ತೀರಾ ವಿರಳ. ಏಕೆಂದರೆ, ಬಹಳಷ್ಟು
ಕಂಪನಿಗಳಲ್ಲಿ, ವಹಿವಾಟು ಅಥವಾ ಆದಾಯ ಕುಸಿಯುತ್ತಿದೆ ಎಂದಾಕ್ಷಣ ಮೊದಲು ಮಾಡುವ ಕೆಲಸವೇ ನೌಕರರಿಗೆ ಅರ್ಧಚಂದ್ರ ಪ್ರಯೋಗ! ಇಂಥ ಸಂದರ್ಭಗಳಲ್ಲಿ ಕೆಲಸ ಮಾಡುವುದು ಮಿದುಳೇ ವಿನಾ ಹೃದಯವಲ್ಲ. ಹೇಗಾದರೂ ಮಾಡಿ ತಮ್ಮ ಲಾಭಾಂಶಕ್ಕೆ ಸಂಚಕಾರ ಬರದಂತೆ ನೋಡಿಕೊಳ್ಳು ವುದೇ ಇಲ್ಲಿ ಮುಖ್ಯವಾಗಿರುತ್ತದೆ.
ಅದಿಲ್ಲವಾದರೆ, ಬಡ್ತಿಯನ್ನಾಗಲೀ ವೇತನದಲ್ಲಿ ಹೆಚ್ಚಳವನ್ನಾಗಲೀ ನೀಡದೆ ಉದ್ಯೋಗಿಯು ತಾನೇ ಕೆಲಸ ಬಿಟ್ಟುಹೋಗುವಂಥ ಸನ್ನಿ ವೇಶವನ್ನು ತಂದೊಡ್ಡುತ್ತಾರೆ. ಇಲ್ಲಿ ಮಾನವೀಯತೆಗೆ ಅವಕಾಶವೇ ಇರದು. ಎಲ್ಲಿಯ ತನಕ ಉದ್ಯೋಗಿಯಿಂದ ಸಂಸ್ಥೆಗೆ ಉಪಯೋಗ ಅನಿಸುತ್ತದೋ ಅಲ್ಲಿಯವರೆಗೆ ಕೆಲಸದಲ್ಲಿ ಇಟ್ಟುಕೊಳ್ಳುವುದು; ನಂತರ, ಊಟವಾದ ಮೇಲೆ ಬಾಳೆಲೆಯಂತೆ ಒಗೆದುಬಿಡುವುದು! ಹೀಗಾಗಿ, ‘ಒಂದು ಕುಟುಂಬದಂತೆ’ ಎಂಬುದು ಕೇವಲ ಅಲಂಕಾರಿಕ ಪದವಾಗಿ ಉಳಿದೀತೇ ಹೊರತು, ಅದಕ್ಕೆ ಬೇರಾವ ಅರ್ಥವೂ ಇರದು.
ಈಗಿತ್ತಲಾಗಿ, ಒಂದೇ ಸಂಸ್ಥೆಯಲ್ಲಿ ಒಂದು ಅಥವಾ ಎರಡು ವರ್ಷಗಳಿಗಿಂತ ಹೆಚ್ಚು ಕಾಲ ಕೆಲಸ ಮಾಡುತ್ತಿರುವವರನ್ನು ಹುಡುಕುವುದೂ ಕಷ್ಟ ಎಂಬಂತಾಗಿದೆ. ಆರು ತಿಂಗಳಿಗೊಮ್ಮೆ ಕೆಲಸ ಬದಲಾಯಿಸುವವರೂ ಇದ್ದಾರೆ. ಇಂಥವರಿಗೆ ಎಲ್ಲಿಯ ಕುಟುಂಬ, ಎಲ್ಲಿಯ ಸಂಬಂಧ? ವೇತನದಲ್ಲಿ ಸಣ್ಣ ಮಟ್ಟದ ಹೆಚ್ಚಳ ಸಿಗುತ್ತದೆಂದರೂ ಸಾಕು, ಸ್ವಲ್ಪವೂ ಅಳುಕು, ಬೇಸರ, ಮುಜುಗರ ಇರದೇ ಕೆಲಸವನ್ನೇ ಬಿಟ್ಟುಹೋಗುತ್ತಾರೆ. ಇಲ್ಲಿ ಏಳುವ ಪ್ರಶ್ನೆ ಯೆಂದರೆ, ಆ ಸಂಸ್ಥೆಯ ಮಾಲೀಕರು ತಮ್ಮ ನೌಕರರನ್ನು ನಿಜವಾಗಿಯೂ ಕುಟುಂಬದ ಸದಸ್ಯರಂತೆ ಕಾಣುತ್ತಿದ್ದಾರೋ ಅಥವಾ ಅವರೆಲ್ಲ ಕೆಲಸ ದವರು, ಅದಕ್ಕೆ ಅವರಿಗೆ ಸಂಬಳ ಸಿಗುತ್ತದೆ ಎಂಬ ಭಾವನೆಯೋ? ಅಥವಾ ಇಂಥ ಸಿಬ್ಬಂದಿಗೂ ಯಾವುದೇ ರೀತಿಯ ಕುಟುಂಬದ ಕಲ್ಪನೆ ಬಾರದಿರು ವುದೋ? ಇದಕ್ಕೆಲ್ಲ ಮೂಲಕಾರಣ ಇಂದಿನ ಪೀಳಿಗೆಯವರಲ್ಲಿ ‘ಕುಟುಂಬ’ ಎಂಬುದರ ಕಲ್ಪನೆಯೇ ಭಿನ್ನವಾಗಿರುವುದು, ಅದು ಸಂಕುಚಿತತೆ ಯಿಂದ ಕೂಡಿರುವುದು.
ಹೀಗಿರುವಾಗ, ಕೆಲಸ ಮಾಡುತ್ತಿರುವ ನೂರಾರು ಜನರನ್ನೆಲ್ಲ ತನ್ನ ಕುಟುಂಬದ ಸದಸ್ಯರೆಂದುಕೊಳ್ಳುವುದೂ ಕಷ್ಟದ ಕೆಲಸವೇ. ಇಲ್ಲಿ ಒಂದಿಡೀ ಸರಪಣಿಯೇ ಶಿಥಿಲವಾಗಿರುವಾಗ, ಒಂದು ಕೊಂಡಿ ಕಳಚಿದರೂ ಅಷ್ಟೇನೂ ವ್ಯತ್ಯಾಸವಾಗದು. ಇನ್ನು, ಇಂದು ‘ಒಂದು ಕುಟುಂಬ’ ಎಂಬ ಪರಿಕಲ್ಪನೆಗೇ ಹೊಸ ವ್ಯಾಖ್ಯಾನ ಬಂದಿರುವಾಗ, ಸಂಸ್ಥೆಯ ಸದಸ್ಯರುಗಳೆಲ್ಲ ಒಂದೇ ಕುಟುಂಬದಂತೆ ಅಂತ ಗ್ರಹಿಸುವುದೂ ಅಪರೂಪವೇ. ನಮ್ಮ ಇಡೀ ವ್ಯವಸ್ಥೆ ಯಲ್ಲಿ ಕೆಲವೇ ಕಂಪನಿಗಳು ಒಂದು ಕುಟುಂಬದಂತೆ ಕೆಲಸ ಮಾಡುತ್ತಿರಬಹುದು.
ನಿಜ ಹೇಳಬೇಕೆಂದರೆ, ಒಂದು ಕುಟುಂಬ ದಲ್ಲೇ ಇಂದು ಪರಸ್ಪರ ಗೌರವ, ಹೊಂದಾಣಿಕೆ, ಪ್ರೀತ್ಯಾದರ, ವಿಶ್ವಾಸಗಳ ಕೊರತೆ ಇರುವಾಗ, ಎಲ್ಲೆಲ್ಲಿಂದಲೋ ಬಂದವರು ಯಾವ್ಯಾವುದೋ ಭಾಷೆ, ಸಂಸ್ಕೃತಿ, ಆಚಾರ-ವಿಚಾರಗಳನ್ನು ಹೊಂದಿರುವವರು, ಭಿನ್ನ ಆಲೋಚನೆಯವರು ತಾವೆಲ್ಲ ಒಂದೇ ಕುಟುಂಬದ ಸದಸ್ಯರು ಅಂತ ಹೇಳಿಕೊಳ್ಳುವುದೂ ಸುಲಭದ ಮಾತಲ್ಲ. ಕುಟುಂಬ ವ್ಯವಸ್ಥೆಯ ಪರಿಕಲ್ಪನೆಯೇ ಬೇರೆ ಆಗಿರುವಾಗ, ‘ನಾವೆಲ್ಲ ಒಂದು ಕುಟುಂಬ’
ಎಂಬುದು ಬೂಟಾಟಿಕೆಯ ಮಾತೇ ಆದೀತು!
(ಲೇಖಕರು ಹವ್ಯಾಸಿ ಬರಹಗಾರರು)