Wednesday, 18th September 2024

ಮಳೆಯಪ್ಪ ಮಳೆರಾಯ ಕರೆಯುತಾರೋ ನಿನ್ನ..

ಶಶಾಂಕಣ

shashidhara.halady@gmail.com

ಬಯಲುಸೀಮೆಯ ಹಳ್ಳಿಗಳಲ್ಲಿ ಜನರದ್ದು ಅಕ್ಷರಶಃ ನೀರಿಗಾಗಿ ಹಾಹಾಕಾರ. ಮಲೆನಾಡು, ಕರಾವಳಿಗಳಲ್ಲಿ ಬೇರೆಯದೇ ರೀತಿಯ ಸಮಸ್ಯೆ. ಆದರೆ ಒಂದಂತೂ ನಿಜ. ಚಿತ್ರದುರ್ಗ, ಬಳ್ಳಾರಿ, ಹಾವೇರಿ ಮೊದಲಾದೆಡೆ ಇರುವಂಥ ಸಮಸ್ಯೆ ಕರಾವಳಿ, ಮಲೆನಾಡಿನಲ್ಲಿಲ್ಲ. ಅಷ್ಟರ ಮಟ್ಟಿಗೆ ಇಲ್ಲಿನ ಜನ ಅದೃಷ್ಟವಂತರು.

ಕುಡಿಯಲು, ಸ್ನಾನ ಮಾಡಲು, ಬೆಳಗಿನ ಮೊದಲಿನ ಆ ಕೆಲಸಕ್ಕೆ ನೀರು ಇಲ್ಲದೇ ಇದ್ದರೆ, ಯಾವ ರೀತಿಯ ತೊಂದರೆ, ಸಂಕಷ್ಟ, ರೇಜಿಗೆ, ಬೇಸರ ಆಗುತ್ತ ದೆಂದು ‘ಬೆಂಗಳೂರಿನ ಜನರಿಗೆ’ ಈ ವರ್ಷ ಚೆನ್ನಾಗಿ ಅರ್ಥವಾಯಿತು. ಹಳ್ಳಿಯ ಜನರಿಗೆ, ಸಣ್ಣ-ದೊಡ್ಡ ಪಟ್ಟಣಗಳ ಜನರಿಗೆ, ಇಂಥದೊಂದು ತೊಂದರೆ ಬಹಳ ಕಾಲದಿಂದಲೂ ಗೊತ್ತಿತ್ತು; ಆದರೆ ಬೆಂಗಳೂರಿನಲ್ಲಿ ವಾಸಿಸುವ ಹೆಚ್ಚಿನವರಿಗೆ, ೨೦೨೪ರ ತನಕ ನೀರಿನ ತೀವ್ರ ಕೊರತೆ ಕಾಡಿರಲಿಲ್ಲ. ಈ
ನಗರದ ತುಂಬಾ ಹರಡಿದ್ದ ಪುರಾತನ ಕೆರೆಗಳಿಂದಾಗಿ, ಇಲ್ಲಿನ ಅಂತರ್ಜಲ ಕುಸಿದುಹೋಗಿರಲಿಲ್ಲ.

ಮೈಸೂರಿನ ಮಹಾರಾಜರು ಕಟ್ಟಿಸಿದ ಕೆ.ಆರ್. ಎಸ್. ಅಣೆಕಟ್ಟಿನಿಂದ ನಿರಂತರವಾಗಿ ನೀರು ಹರಿಸಿಕೊಂಡು, ಆ ಸಿಹಿನೀರನ್ನು ಕುಡಿಯಲು, ಪಾತ್ರೆ ತೊಳೆಯಲು, ಕಾರು ತೊಳೆಯಲು, ರಸ್ತೆ ತೊಳೆಯಲು ಉಪಯೋಗಿಸುತ್ತಿದ್ದ ಬೆಂಗಳೂರಿನ ಜನರು ಹೆಮ್ಮೆಯಿಂದ ತಮ್ಮನ್ನು ತಾವು ಹೊಗಳಿ ಕೊಳ್ಳುತ್ತಿದ್ದರು- ‘ಕಾವೇರಿ ನದಿಯ ನೀರನ್ನು ಕುಡಿಯುವ ಜನರು ನಾವು’ ಎಂದು. ಆ ಹೆಮ್ಮೆಯ ಗುಳ್ಳೆಯನ್ನು ಈ ವರ್ಷದ ಬರಗಾಲವು ಸೂಜಿ ಚುಚ್ಚಿ, ಟುಸ್ ಮಾಡಿತು. ಬೆಂಗಳೂರಿನ ಹಲವು ಅಪಾರ್ಟ್‌ಮೆಂಟ್‌ಗಳಲ್ಲಿ ವಾಸಿಸುವ, ಹಲವು ಬಡಾವಣೆಗಳಲ್ಲಿ ವಾಸಿಸುವ ಲಕ್ಷಾಂತರ ಜನರಿಗೆ, ಈ ವರ್ಷ ನೀರಿನ ಅಭಾವ ಎಂದರೇನು ಎಂಬ ಸಂಕಷ್ಟ ಸರಿಯಾಗಿ ಅರ್ಥವಾಯಿತು.

ಒಂದಕ್ಕೆ ನಾಲ್ಕು ಪಟ್ಟು ಬೆಲೆ ನೀಡಿ ಟ್ಯಾಂಕರ್ ನೀರನ್ನು ತರಿಸಿಕೊಳ್ಳಬೇಕಾಯಿತು; ಒಮ್ಮೊಮ್ಮೆ ಅದೂ ಸಿಕ್ಕದಂಥ ಕೃತಕ ಅಭಾವ. ಬೆಂಗಳೂರಿನಲ್ಲಿದ್ದ ಸಾವಿರಾರು ಬೋರ್‌ವೆಲ್‌ಗಳು ಈ ವರ್ಷ ಮೊದಲ ಬಾರಿಗೆ ಬತ್ತಿ ಹೋದವು; ಅಳಿದುಳಿದ ಹಲವು ಕೆರೆಗಳು ಈ ವರ್ಷ ಸಂಪೂರ್ಣ ಒಣಗಿಹೋದವು; ಇನ್ನೊಂದಿಷ್ಟು ಕೆರೆಗಳನ್ನು ಇಲ್ಲಿನ ಜನರೇ ಬತ್ತಿಸಿರುವುದೂ ನಡೆದಿದೆ. ಒಂದು ಮಾತು ಮಾತ್ರ ಖಚಿತ- ಬೆಂಗಳೂರಿನಲ್ಲೇ ಹಲವು ವರ್ಷಗಳಿಂದ ವಾಸಿಸುತ್ತಿರುವ ನಾಗರಿಕರಿಗೆ, ನಮ್ಮ ನಾಡಿನ ಕೆಲವು ಹಳ್ಳಿಗಳ, ಪಟ್ಟಣಗಳ ಸ್ಥಿತಿ ನಿಜಕ್ಕೂ ಪೂರ್ಣವಾಗಿ ಅರಿವಿಲ್ಲ; ಹಳ್ಳಿ ಜೀವನದ ವಿಚಾರ ಕೇಳಿ ಹೆಚ್ಚಿನವರು ಸಹಾನುಭೂತಿ ವ್ಯಕ್ತಪಡಿಸಿರಬಹುದು.

ಆದರೆ, ಸಾಕಷ್ಟು ನೀರಿಲ್ಲದೇ ಬದುಕು ನಡೆಸುವ ಕಷ್ಟದ ಅನುಭವ ಈ ನಗರದ ಹಲವರಿಗೆ ಇಲ್ಲ (ಈ ವರ್ಷ ಬೆಂಗಳೂರಿನ ಕೆಲವರಿಗೆ ಮೊದಲ ಬಾರಿ ಅಂಥ ದೊಂದು ಕಷ್ಟ ಚೆನ್ನಾಗಿ ಅರ್ಥವಾಯಿತು). ೨೦೦೧-೨೦೦೪ರ ಅವಽಯಲ್ಲಿ ನಾನು ಹುಬ್ಬಳ್ಳಿ ನಗರದಲ್ಲಿ ವಾಸವಾಗಿದ್ದೆ; ಆಗ ಹದಿನೈದು ದಿನಗಳಿಗೊಮ್ಮೆ ನಲ್ಲಿಯಲ್ಲಿ ನೀರು ಬರುತ್ತಿತ್ತು. ಉಳಿದಂತೆ ಲಾರಿಗಳಲ್ಲಿ ನೀರು ತರಿಸಿ, ತುಂಬಿಸಿಟ್ಟುಕೊಳ್ಳಬೇಕಿತ್ತು. ಹುಬ್ಬಳ್ಳಿಯ ವಾಸಕ್ಕಿಂತಲೂ ಮುಂಚೆ, ಅರಸೀಕೆರೆಯ ಬದುಕನ್ನು ಹತ್ತಿರದಿಂದ ಕಂಡಿದ್ದೆ. ಅಲ್ಲೂ ಆರೆಂಟು ದಿನಗಳಿಗೊಮ್ಮೆ ನಲ್ಲಿಯಲ್ಲಿ ನೀರು ಬಿಡುತ್ತಿದ್ದರು. ದುಡ್ಡುಕೊಟ್ಟು ಖರೀದಿಸೋಣ ಎಂದರೆ, ಅದು ಸಹ ಅಲ್ಲಿ ಸುಲಭವಾಗಿ ಸಿಗುತ್ತಿರಲಿಲ್ಲ.

ಸಿಹಿನೀರು ಬೇಕಾದರೆ, ಒಂದು ಕೊಡಕ್ಕೆ ಇಂತಿಷ್ಟು ಎಂದು ಖರೀದಿಸಬೇಕಿತ್ತು. ಸವಳು ನೀರನ್ನು ಕುಡಿಯಲು ಆಗುತ್ತಿರಲಿಲ್ಲ. ಈಗಲೂ, ಬೆಂಗಳೂರಿನ ಕೆಲವರಿಗಾದರೂ ‘ಸಿಹಿ ನೀರು’ ‘ಸವಳು ನೀರು’ ಇವುಗಳ ವ್ಯತ್ಯಾಸ ಗೊತ್ತಿಲ್ಲ ಬಿಡಿ! ೧೯೮೦ರ ದಶಕದಲ್ಲಿ ಅರಸೀಕೆರೆ ತಾಲೂಕಿನ ಒಂದು ಹಳ್ಳಿಯಲ್ಲಿ ಹಲವು ವರ್ಷಗಳ ಕಾಲ ವಾಸವಿದ್ದೆ; ಅಲ್ಲಂತೂ ನೀರಿನ ಬವಣೆ ಇನ್ನಷ್ಟು ಕಷ್ಟ, ಭೀಕರ (ಅದಕ್ಕೆಂದೇ, ಆ ಹಳ್ಳಿಯ ಹೆಸರನ್ನು ಇಲ್ಲಿ ಹೇಳಿಲ್ಲ). ಅಲ್ಲೊಂದು ವಿಶಾಲವಾದ ಕೆರೆ ಇದೆ. ಇಡೀ ಹಳ್ಳಿಯ ಆರ್ಥಿಕತೆ ಮತ್ತು ಸಾಮಾಜಿಕ ಬದುಕು ಆ ಕೆರೆಯ ಮೇಲೆ ಬಹುಮಟ್ಟಿಗೆ ಅವಲಂಬಿತವಾದ ಕಾಲವೊಂದಿತ್ತು. ಬೆಳಗಿನ ಮೊದಲ ಕೆಲಸಕ್ಕೂ ಆ ಕೆರೆಯ ನೀರು, ಕೆರೆಯ ಏರಿ, ಆ ಏರಿಯುದ್ದಕ್ಕೂ ಬೆಳೆದಿದ್ದ ಕುರುಚಲು ಗಿಡಗಳ ಪೊದೆಗಳು ಅಗತ್ಯವಿತ್ತು. ಆದರೆ, ಆ ಕೆರೆಯಲ್ಲಿ ಪ್ರತಿ ಮಳೆಗಾಲದಲ್ಲಿ ನೀರು ತುಂಬುತ್ತಿದ್ದುದೇ ಕಡಿಮೆ.

ಮಳೆ ಚೆನ್ನಾಗಿ ಬಿದ್ದು, ನೀರು ತುಂಬಿದರೆ ಒಂದೆರಡು ವರ್ಷ ಪರವಾಗಿರಲಿಲ್ಲ; ಬತ್ತ ಸಹ ಬೆಳೆಯುತ್ತಿದ್ದರು. ಬಾವಿಗಳಲ್ಲೂ ಸಿಹಿನೀರು ತುಂಬಿ ಬರುತ್ತಿತ್ತು. ಆದರೆ, ಆ ಕೆರೆಯು ಒಂದು ದಶಕದ ಅವಧಿಯಲ್ಲಿ ಸರಾಸರಿ ಎರಡು ಬಾರಿ ಮಾತ್ರ ತುಂಬುತ್ತಿತ್ತು. ಆ ಕೆರೆಗೆ ನೀರನ್ನು ಉಣಿಸುವ, ಹಿರೇಕಲ್ಲು ಗುಡ್ಡದಿಂದ ಹರಿದುಬರುತ್ತಿದ್ದ ಹಳ್ಳಕ್ಕೆ ಅಡ್ಡಲಾಗಿ, ಹೊಸದೊಂದು ಕೆರೆಯನ್ನು ಕಟ್ಟಿಸಿದ ನಂತರ, ಇಲ್ಲಿಗೆ ನೀರು ಬರುವುದು ಇನ್ನೂ ದುರ್ಲಭ ವಾಯಿತು. ಆದ್ದರಿಂದ, ಮಳೆ ಬಂದಾಗಲೂ ಆ ಕೆರೆಯಲ್ಲಿ ಒಂದು ಅಥವಾ ಎರಡು ಅಡಿ ನೀರು ಇರುವುದೇ ಜಾಸ್ತಿ (ಈಗ ಪರಿಸ್ಥಿತಿ ಸುಧಾರಿಸಿದೆ. ಹೇಮಾವತಿ ಯಿಂದ ಅಲ್ಲಿಗೆ ನೀರನ್ನು ಹರಿಸುತ್ತಿದ್ದಾರೆ). ನಾನು ಆ ಹಳ್ಳಿಯಲ್ಲಿದ್ದಾಗ, ಒಂದು ವರ್ಷವಂತೂ ನೀರಿಗೆ ಪೂರ್ತಿ ತೊಂದರೆ.

ಅಲ್ಲಿನ ವಿಶಾಲವಾದ ಕೆರೆ ಒಣಗಿ ಹೋಗಿದ್ದರಿಂದ, ಬಾವಿಗಳೂ ಬತ್ತಿದ್ದವು. ಗ್ರಾಮ ಪಂಚಾಯತಿಯವರು ಓವರ್‌ಹೆಡ್ ಟ್ಯಾಂಕ್‌ನಲ್ಲಿ ನೀರು ತುಂಬಿಸಿ, ನಲ್ಲಿಯ ಮೂಲಕ ಪ್ರತಿ ದಿನವೂ ಒಂದು ಗಂಟೆ ನೀರು ಬಿಡುತ್ತಿದ್ದರು. ಆದರೆ ಬಿರುಬೇಸಗೆಯಿಂದಾಗಿ, ಆ ದೊಡ್ಡ ಸಿಮೆಂಟ್ ಟ್ಯಾಂಕ್‌ಗೆ ನೀರು ತುಂಬಿಸು ತ್ತಿದ್ದ ಬೋರ್‌ವೆಲ್ ಬಹುಮಟ್ಟಿಗೆ ಬತ್ತಿಹೋಯಿತು; ವಿದ್ಯುತ್ ಕೊರತೆ, ವೋಲ್ಟೇಜ್ ಕೊರತೆಯಿಂದಾಗಿ ಹಗಲಿನಲ್ಲಿ ವಿದ್ಯುತ್ ಇದ್ದರೂ, ಬೋರ್‌ವೆಲ್ ತಳದ ನೀರು ಆ ಟ್ಯಾಂಕ್‌ಗೆ ಹತ್ತುತ್ತಿರಲಿಲ್ಲ!

ಕೊನೆಗೆ, ಆ ಬೋರ್ ವೆಲ್ ಬತ್ತಿಹೋಯಿತು. ನಾವು ಬಾಡಿಗೆಗೆ ಇದ್ದ ಮನೆಯ ಹತ್ತಿರ ಒಂದು ಬೋರ್‌ವೆಲ್ ಇತ್ತು. ಅದು ಹಳೆಯ ಕಾಲದ ಬೋರ್‌ವೆಲ್. ಅಂದರೆ, ಕೈ ಪಂಪ್ ಅನ್ನು ಹತ್ತಾರು ಬಾರಿ ಒತ್ತಿದರೆ ಒಂದಷ್ಟು ನೀರು ಬರುತ್ತಿತ್ತು. ಆ ನೀರನ್ನು ಹಿಡಿಯಲು ಬೆಳಗಿನ ಜಾವ ನಾಲ್ಕು ಗಂಟೆಗೇ ಹೋಗ ಬೇಕು. ಹೊತ್ತು ಮೀರಿದರೆ, ಆ ಸುತ್ತ ಮುತ್ತಲಿನವರೆಲ್ಲಾ ಅದೇ ಬೋರ್‌ವೆಲ್‌ಗೆ ಬಂದು, ಪಂಪ್ ಒತ್ತಿ, ಒತ್ತಿ ನೀರು ಸಂಗ್ರಹಿಸುವುದರಿಂದಾಗಿ, ನೀರು ಖಾಲಿಯಾಗಿಬಿಡುತ್ತಿತ್ತು! ಆ ಒಂದು ಬೋರ್‌ವೆಲ್ ನಿಂದ ನೀರೆತ್ತಲು ಬೆಳಗಿನ ಜಾವವೇ ಕ್ಯೂ! ಅಲ್ಲಿಗೆ ಹೋಗಿ ದಿನಾ ನಾಲ್ಕಾರು ಕೊಡ ನೀರು ತರುವುದೇ ದೊಡ್ಡ ಸಾಹಸ.

ಆದರೆ, ಆ ಬೋರ್‌ವೆಲ್ ಸಹ ಒಂದು ದಿನ ಬತ್ತಿಹೋಯಿತು. ಊರಿನ ಹೊರಭಾಗದಲ್ಲಿ, ಕೆರೆಯ ಕೋಡಿ ಹರಿಯುವ ಹಳ್ಳದಲ್ಲಿ, ಒಂದು ಪುರಾತನ ಬಾವಿ ಇತ್ತು. ಅದರಲ್ಲಿ ಸಾಕಷ್ಟು ನೀರು ಇದೆ, ಇಡೀ ಊರಿನಲ್ಲಿ ಬೇರೆಲ್ಲೂ ನೀರಿಲ್ಲ ಎಂಬ ಸುದ್ದಿ ಹರಡಿತು. ಸೈಕಲ್ಲಿಗೆ ನಾಲ್ಕು ಪ್ಲಾಸ್ಟಿಕ್ ಬಿಂದಿಗೆ ಸಿಕ್ಕಿಸಿ ಕೊಂಡು ಒಂದು ಸಂಜೆ ಆ ಬಾವಿಯತ್ತ ಸಾಗಿದೆ. ಮುಳ್ಳುಗಿಡಗಳ ನಡುವೆ ಸಾಗುವ ದಾರಿ; ಆ ಹಳ್ಳಿಗೆ ನಲ್ಲಿ ನೀರಿನ ಸೌಕರ್ಯ ಬಂದ ನಂತರ, ಊರಿನ ವರು ಆ ಬಾವಿಯನ್ನು ಮರೆತೇಬಿಟ್ಟಿದ್ದರು; ಈಗ ನೆನಪಾಗಿತ್ತು! ಸೈಕಲ್ ತಳ್ಳಿಕೊಂಡು ಅಲ್ಲಿಗೆ ಹೋಗಿ ನೋಡಿದರೆ, ಅಲ್ಲೂ ಜನ!

ಹಳ್ಳಿಯವರೆಲ್ಲಾ ಕೊಡ ಹಿಡಿದು ಅದೇ ಬಾವಿಯ ನೀರಿಗಾಗಿ ಬಂದಿದ್ದರು. ಅದು ರಾಟೆಯ ಬಾವಿ. ಸರದಿಯ ಪ್ರಕಾರ ನೀರು ಸೇದಿ, ನಾಲ್ಕು ಕೊಡಗಳನ್ನು
ತುಂಬಿಸಿಕೊಂಡು, ಸೈಕಲ್ ತಳ್ಳಿಕೊಂಡು ಬರುವುದೆಂದರೆ, ನಿಜಕ್ಕೂ ಒಂದು ಸಾಹಸ! ಒಂದೆರಡು ದಿನಗಳಲ್ಲಿ, ಗ್ರಾಮ ಪಂಚಾಯತಿಯವರು ಅಲ್ಲೇ
ಸನಿಹದಲ್ಲಿ ಹೊಸದೊಂದು ಬೋರ್‌ವೆಲ್ ತೋಡಿಸಿದರು; ಅದರಲ್ಲಿ ಕಡಿಮೆ ಆಳದಲ್ಲಿ ನೀರು ಸಿಕ್ಕಿತು, ಆದ್ದರಿಂದ ಕಡಿಮೆ ವೋಲ್ಟೇಜ್ ವಿದ್ಯುತ್
ಇದ್ದಾಗಲೂ ಅದರ ನೀರು ಓವರ್‌ಹೆಡ್ ಟ್ಯಾಂಕ್‌ಗೆ ತುಂಬಿಸಲು ಸಾಧ್ಯವಾದ್ದರಿಂದ, ನಲ್ಲಿಯಲ್ಲಿ ನೀರು ಬರಲು ಆರಂಭವಾಯಿತು.

ಆದರೆ, ಅದನ್ನು ಹಿಡಿದಿಟ್ಟುಕೊಳ್ಳಲು ರಾತ್ರಿಯ ತನಕ ಕಾಯಬೇಕು- ಹಗಲಿನಲ್ಲಿ ವಿದ್ಯುತ್ ಕಡಿತ. ಇಂಥ ಸಂಕಷ್ಟವನ್ನು ಒಂದೆರಡು ತಿಂಗಳು ಅನುಭವಿಸಿದ ನಂತರ, ಅಲ್ಲಲ್ಲಿ ಮಳೆಯಾಯಿತು; ಮುಖ್ಯವಾಗಿ ಲಿಂಗನಮಕ್ಕಿ ಕ್ಯಾಚ್‌ಮೆಂಟ್ ಪ್ರದೇಶದಲ್ಲಿ ಸಾಕಷ್ಟು ಮಳೆಯಾಗಿ, ವಿದ್ಯುತ್ ಉತ್ಪಾದನೆ ಸರಾಗವಾಗಿ ನಡೆದದ್ದರಿಂದ, ವಿದ್ಯುತ್ ಸಮಸ್ಯೆ ಕಡಿಮೆಯಾಯಿತು. ಆ ಹಳ್ಳಿಯಲ್ಲಿನ ಬೋರ್‌ವೆಲ್‌ನ ನೀರನ್ನು ಓವರ್‌ಹೆಡ್ ಟ್ಯಾಂಕ್‌ಗೆ ತುಂಬಲು ಸಾಧ್ಯವಾಯಿತು. ನಲ್ಲಿಯಲ್ಲಿ ನೀರು ಬಂತು.

ನಂತರದ ದಿನಗಳಲ್ಲಿ, ಚಿತ್ರದುರ್ಗ ಜಿಲ್ಲೆಯ ಒಂದು ಪುಟ್ಟ ಹಳ್ಳಿಯಲ್ಲಿ ಎರಡು ವರ್ಷ ವಾಸವಿದ್ದೆ. ಆ ಗ್ರಾಮದಲ್ಲಿರುವ ಹೆಚ್ಚಿನವರು ನಕ್ಕರೆ, ಹಲ್ಲುಗಳ
ಮೇಲೆ ಹಳದಿ ಮಿಶ್ರಿತ ಕಲೆಗಳು ಕಾಣುತ್ತಿದ್ದವು! ಅಲ್ಲಿನ ನೀರಿನಲ್ಲಿ ಅದೇನೋ ಫ್ಲೋರೈಡ್ ಸಮಸ್ಯೆಯಂತೆ. ವರ್ಷಗಟ್ಟಲೆ ಅಲ್ಲಿ ದೊರೆಯುವ ಸವಳು ನೀರನ್ನು ಕುಡಿದು, ಆ ನೀರಿನಲ್ಲಿ ಬೆರೆತ ಅದ್ಯಾವುದೋ ಲವಣಾಂಶದಿಂದಾಗಿ, ಅವರ ಹಲ್ಲುಗಳ ಬಣ್ಣವೇ ಬದಲಾಗಿತ್ತು. ನಾನೂ ಎರಡು ವರ್ಷ ಅಲ್ಲಿನ ಬೋರ್‌ವೆಲ್ ನೀರನ್ನು ಕುಡಿದಿದ್ದೆ. ಮಳೆ ಚೆನ್ನಾಗಿ ಆದ ವರ್ಷಗಳಲ್ಲಿ ಅಲ್ಲಿನ ನೀರಿನ ಗುಣಮಟ್ಟ ಸ್ವಲ್ಪಮಟ್ಟಿಗೆ ಪರವಾಗಿಲ್ಲ ಎಂದು ಅಲ್ಲಿನವರು ಹೇಳಿದರು. ಸದ್ಯ ನನ್ನ ಹಲ್ಲುಗಳ ಬಣ್ಣಗೆಡಲಿಲ್ಲ. ಆದರೆ, ಅಲ್ಲಿನ ನೀರನ್ನು ಕುಡಿದು ಹಲ್ಲುಗಳ ಒಳಗೆ ಏನಾದರೂ ಬದಲಾವಣೆ ಆಗಿರಬಹುದು ಎಂಬ ಗುಮಾನಿ ನನ್ನಲ್ಲಿ ಇಂದಿಗೂ ಇದೆ!

ಆ ಸುತ್ತಲಿನ ಒಂದೊಂದು ಹಳ್ಳಿಯಲ್ಲಿ ಒಂದೊಂದು ರೀತಿಯ ನೀರಿನ ಸಮಸ್ಯೆ. ಈಗ ಹಲವು ಊರುಗಳಲ್ಲಿ ಸರಕಾರದ ಮೂಲಕ ಆರ್ .ಒ. ನೀರಿನ ಘಟಕಗಳ ವ್ಯವಸ್ಥೆಯಾಗಿರುವುದರಿಂದ, ಪರಿಸ್ಥಿತಿ ಸ್ವಲ್ಪ ಮಟ್ಟಿಗೆ ಸುಧಾರಿಸಿದೆ ಎನ್ನಬಹುದು. ಇದನ್ನು ಇಷ್ಟು ವಿವರವಾಗಿ ಏಕೆ ಬರೆದೆನೆಂದರೆ,
ಬೆಂಗಳೂರು, ಮೈಸೂರುಗಳಂಥ ನಗರಗಳಲ್ಲಿ, ಶಿವಮೊಗ್ಗದಂಥ ಪಟ್ಟಣಗಳಲ್ಲಿರುವವರಿಗೆ ಇಂಥದೊಂದು ಸಮಸ್ಯೆ ಸ್ವಲ್ಪವಾದರೂ ಗೊತ್ತಾಗಲಿ
ಎಂದು. ನಿಮ್ಮಲ್ಲಿ ಕೆಲವರಾದರೂ ಇಂಥ ಸಮಸ್ಯೆ ಇರುವ ಹಳ್ಳಿಗಳನ್ನು, ಪಟ್ಟಣಗಳನ್ನು ನೋಡಿಯೇ ಇರುತ್ತೀರಿ. ಬಯಲುಸೀಮೆಯ, ಮಳೆ ಕಡಿಮೆ
ಇರುವ, ನೀರಾವರಿ ಕಾಲುವೆಗಳ ವ್ಯವಸ್ಥೆ ಇಲ್ಲದೇ ಇರುವ ಹಳ್ಳಿಗಳ ಕಥೆ ಈ ರೀತಿಯಾಗಿದ್ದರೆ, ಮಲೆನಾಡು ಮತ್ತು ಕರಾವಳಿಗಳಲ್ಲಿ ಬೇರೆಯದೇ
ರೀತಿಯ ಸಮಸ್ಯೆ. ಆದರೆ ಒಂದಂತೂ ನಿಜ.

ಚಿತ್ರದುರ್ಗ, ಬಳ್ಳಾರಿ, ಹಾವೇರಿ ಮೊದಲಾದ ಕಡೆ ಇರುವಂಥ ನೀರಿನ ಸಮಸ್ಯೆ ಕರಾವಳಿ, ಮಲೆನಾಡಿನಲ್ಲಿಲ್ಲ. ಅಷ್ಟರ ಮಟ್ಟಿಗೆ ಇಲ್ಲಿನ ಜನ ಅದೃಷ್ಟ ವಂತರು. ಆದರೂ, ಬಿರುಬೇಸಗೆಯಲ್ಲಿ ಅಲ್ಲೂ ನೀರಿನ ಸಮಸ್ಯೆ ಇದೆ. ಅದಕ್ಕೆ ಮುಖ್ಯ ಕಾರಣವೆಂದರೆ, ಸೂಕ್ತ ಎನಿಸುವ ಸೌಲಭ್ಯಗಳನ್ನು ರೂಪಿಸಿಕೊಳ್ಳುವಲ್ಲಿನ ದೂರದೃಷ್ಟಿಯ ಕೊರತೆ. ನಾನು ಬಾಲ್ಯ ಕಳೆದ ಊರಿನಲ್ಲಿ ಮನೆಗೊಂದು ಬಾವಿ. ಅಲ್ಲಲ್ಲಿ ಹರಿಯುವ ತೋಡುಗಳು. ಕೆಲವು
ಕಡೆ ನೀರು ತುಂಬಿದ ಗುಮ್ಮಿ, ಹೊಂಡ, ಕಲ್ಯಾಣಿಗಳು. ನಮ್ಮ ಮನೆ ಎದುರೇ ಬಗ್ಗು ಬಾವಿ ಇತ್ತು. ಆದರೆ ಒರಟು ಕಲ್ಲುಗಳನ್ನು ಸುತ್ತಲೂ ಕಟ್ಟಿ
ನಿರ್ಮಿಸಿದ ಸರಳ ಬಾವಿ ಅದು. ಆಳ ಕೇವಲ ಇಪ್ಪತ್ತು ಅಡಿ. ಎಪ್ರಿಲ್‌ನಲ್ಲಿ ನೀರು ತಳಕ್ಕೆ ಹೋಗಿ, ಸೇಡಿ ಮಿಶ್ರಿತ ಕಳಕು ನೀರು ಮಾತ್ರ ಸಿಗುತ್ತಿತ್ತು.

ಆದ್ದರಿಂದ, ಕುಡಿಯಲು ಬೇಕಾದ ಶುದ್ಧನೀರನ್ನು ತರಲು ಬೇರೆಯವರ ಮನೆಯ ಬಾವಿಗೆ ಹೋಗಬೇಕಿತ್ತು. ಈಗ ಕಾಲ ಬದಲಾಗಿದೆ. ಅಲ್ಲೆಲ್ಲಾ ಆಳವಾದ ಬಾವಿಗಳನ್ನು ತೋಡಿಕೊಂಡು, ಕುಡಿಯುವ ನೀರಿನ ತೊಂದರೆ ಇಲ್ಲದಂತೆ ಮಾಡಿಕೊಂಡಿದ್ದಾರೆ. ಜತೆಗೆ, ವಾರಾಹಿ ಏತನೀರಾವರಿಯಿಂದಾಗಿ ಕಾಲುವೆ ಗಳಲ್ಲಿ ಹರಿಯುವ ನೀರು, ಅಲ್ಲಿನ ಅಂತರ್ಜಲ ಮಟ್ಟವನ್ನು ಉತ್ತಮಪಡಿಸಿದೆ. ಮಲೆನಾಡಿನಲ್ಲಿ ಈಗ ಬೋರ್‌ವೆಲ್ ತೋಡುವ ಪದ್ಧತಿ ಬಂದಿದೆ. ಆದರೆ, ಆಳವಾದ ಬೋರ್‌ವೆಲ್ ತೋಡಿದಾಗ, ಆ ಸುತ್ತಲಿನ ಹಳೆಯ ಕಾಲದ ಬಾವಿಗಳು ಬತ್ತಿ ಹೋಗುತ್ತವೆ. ಆಗ ಇನ್ನೂ ಆಳದ ಇನ್ನೊಂದು ಬೋರ್‌ವೆಲ್ ತೋಡುವ ಅನಿವಾರ್ಯತೆ!

ಈ ರೀತಿ ಪೈಪೋಟಿಗೆ ಬಿದ್ದವರಂತೆ ಬೋರ್‌ವೆಲ್‌ಗಳನ್ನು ತೋಡಿಸುತ್ತಾ ಹೋಗುವುದರಿಂದ, ಇಡೀ ಪ್ರದೇಶದ ಅಂತರ್ಜಲವೇ ಕುಸಿಯುತ್ತಿದೆ. ಇದು ಮತ್ತೊಂದೇ ಆಯಾಮದ ಸಮಸ್ಯೆ. ನಮ್ಮ ರಾಜ್ಯವು ಈಗ ಹಿಂದೆಂದೂ ಕಾಣದಂಥ ಬೇಸಗೆಯನ್ನು ಎದುರಿಸುತ್ತಿದೆ. ‘ಎಲ್ ನೀನೋ’ ಪರಿಣಾಮ ದಿಂದಲೋ, ಕಾಡುಗಳನ್ನು, ಮರಗಳನ್ನು ಕಡಿದದ್ದರಿಂದಲೋ, ಒಟ್ಟಿನಲ್ಲಿ ಬಿಸಿಲ ತಾಪ ಎಲ್ಲರನ್ನೂ ಕಾಡುತ್ತಿದೆ. ಬೆಂಗಳೂರಿನಂಥ, ಎತ್ತರವಾದ ತಂಪು ಪ್ರದೇಶವು ಈ ವಾರ ಹತ್ತಿರ ಹತ್ತಿರ ೪೦ ಡಿಗ್ರಿ ಸೆಲ್ಸಿಯಸ್ ಸೆಕೆಯನ್ನು ಕಂಡಿತು.

ಇದು ಕನಸಿನಲ್ಲೂ ಊಹಿಸದೇ ಇದ್ದ ವಿದ್ಯಮಾನ. ಬೆಂಗಳೂರಿನ ಜನ ಸೆಕೆ ತಡೆಯಲಾರದೇ ಬಸವಳಿದಿದ್ದಾರೆ. ಉತ್ತರ ಕರ್ನಾಟಕದವರ ಸ್ಥಿತಿ ಇನ್ನೂ ಕಠಿಣ. ಈ ಸಂಕಷ್ಟಕ್ಕೆ ಒಂದೇ ಉತ್ತರವೆಂದರೆ, ಮುಂಗಾರು ಮಳೆ. ಎಪ್ರಿಲ್, ಮೇ ಸಮಯದಲ್ಲಿ ಸುರಿಯಬೇಕಿದ್ದ ಮುಂಗಾರು ಮಳೆ ಇದುವರೆಗೂ ಸರಿಯಾಗಿ ಬಂದಿಲ್ಲ; ಮುಂದಿನ ನಾಲ್ಕಾರು ದಿನಗಳಲ್ಲಾದರು ಮಳೆ ಬರಲೇ ಬೇಕು. ಬರಲಿ ಎಂದು ಆಶಿಸೋಣ.

Leave a Reply

Your email address will not be published. Required fields are marked *