Friday, 13th December 2024

ನುಡಿದರೆ ಜನ ಮೆಚ್ಚಿ ಅಹುದಹುದು ಎನಬೇಕು

ಮಾತು-ಮಾಣಿಕ್ಯ

ವಿನಾಯಕ ವೆಂ. ಭಟ್ಟ

ಒಂದು ಕಾಲವಿತ್ತು. ಇಂದಿರಾ ಗಾಂಧಿ, ಅಟಲ್ ಬಿಹಾರಿ ವಾಜಪೇಯಿ, ಜಗನ್ನಾಥ ಜೋಶಿ, ರಾಮಕೃಷ್ಣ ಹೆಗಡೆಯವರಂಥ ನಾಯಕರು ಮಾತನಾಡುತ್ತಾರೆಂದರೆ ಪಕ್ಷಭೇದ ಮರೆತು ಜನರು ಆಸ್ವಾದಿಸುತ್ತಿದ್ದರು. ಅವರು ಯಾರನ್ನಾದರೂ ಟೀಕಿಸುವಾಗಲೂ ಎಚ್ಚರಿಕೆಯಿಂದ ಶಬ್ದಗಳನ್ನು ಬಳಸುತ್ತಿದ್ದರು. ಈ ಕಾರಣಕ್ಕಾಗಿಯೇ ಜನರು ಅವರ ಮಾತನ್ನು ಕೇವಲ ಮಾತಾಗಿ ಕೇಳದೆ, ಅದರಲ್ಲಿರುವ ತಥ್ಯವನ್ನು ಪರಿಗ್ರಹಿಸುತ್ತಿದ್ದರು.

‘ಪ್ರಿಯವಾಕ್ಯ ಪ್ರದಾನೇನ ಸರ್ವೇ ತುಷ್ಯಂತಿ ಜಂತವಃ, ತಸ್ಮಾತ್ ತದೇವ ವಕ್ತವ್ಯಂ ವಚನೇ ಕಾ ದರಿದ್ರತಾ’ ಎಂಬುದೊಂದು ಸುಭಾಷಿತ ವಿದೆ. ‘ನಾಲ್ಕು ಒಳ್ಳೆಯ ಮಾತಾಡುವುದರಿಂದ ಎಲ್ಲರಿಗೂ ಹಿತವೆನಿಸುತ್ತದೆ; ಹಾಗಿರುವಾಗ, ಶುಭವನ್ನೇ ನುಡಿಯ ಬೇಕು. ಅಂಥ ಮಾತಿಗೇನು ದಾರಿದ್ರ್ಯ ನಿಮಗೆ’
ಎಂಬುದು ಈ ಸುಭಾಷಿತದ ಸರಳಾರ್ಥ. ಲೋಕಸಭಾ ಚುನಾವಣೆಯ ಹೊಸ್ತಿಲಲ್ಲಿ ನಾವಿದ್ದೇವೆ. ಈ ಸಮಯದಲ್ಲಿ ವಿವಿಧ ರಾಜಕೀಯ ಪಕ್ಷಗಳ ನಾಯಕರ ನಡುವೆ ಯದ್ವಾತದ್ವಾ ಮಾತುಗಳ ವಿನಿಮಯವಾಗುವುದು ಸಾಮಾನ್ಯ. ಭಾರತವಾಸಿಗಳಿಗೆ ಇದು ಹೊಸದೇನಲ್ಲ.

ವಾರ್ತೆಗಳನ್ನು ಓದುವ ಮತ್ತು ನೋಡುವ ಸಾಮಾನ್ಯ ಜನರಿಗೆ ಇದು ಅತೀವ ಮನರಂಜನೆಯ ಘಟ್ಟವಾಗಿರುತ್ತದೆ ಎನ್ನಬಹುದು. ಆದರೆ ಇಂದಿನ ಮಾಧ್ಯಮ ಯುಗದಲ್ಲಿ, ಪ್ರತಿಯೊಬ್ಬರ ಪ್ರತಿ ಮಾತನ್ನೂ ಜನರು ಇದ್ದಕ್ಕಿದ್ದ ಹಾಗೆ ಸ್ವೀಕರಿಸುವುದಿಲ್ಲ; ಅದಕ್ಕೂ ಮುಂಚೆ ಅಳೆದು ತೂಗಿ ವಿಶ್ಲೇಷಣೆ ಮಾಡುತ್ತಾರೆ ಎನ್ನುವ ಎಚ್ಚರಿಕೆ ಎಲ್ಲ ಮಾತು ಗಾರರಿಗೂ ಇರಬೇಕಾಗುತ್ತದೆ. ‘ನಾನಾಡುವ ಮಾತು ನನ್ನ ಮನೆಯನ್ನೇ ಕೆಡಿಸಬಹುದು’ ಎಂಬ ಸಾಮಾನ್ಯ ಪ್ರಜ್ಞೆ ನಾಯಕರಿಗೆ ಇರಬೇಕಾಗುತ್ತದೆ. ‘ನನ್ನ ಒಂದೊಂದು ಮಾತು ಕೂಡ, ನನ್ನದೇ ವ್ಯಕ್ತಿತ್ವ ಹಾಗೂ ನಾನು ಪ್ರತಿನಿಧಿ ಸುವ ಪಕ್ಷದ ವಿಚಾರಧಾರೆಯ ಕುರಿತು ಜನರು ಒಂದುಅಭಿಪ್ರಾಯಕ್ಕೆ ಬರುವಂತೆ ಮಾಡಿಬಿಡುತ್ತದೆ’ ಎಂಬ ಸೂಕ್ಷ್ಮದ ಅರಿವು ಅವರಿಗೆ ಇರಬೇಕಾಗುತ್ತದೆ.

ಹಾಗಾಗಿಯೇ, ಸಾಂಪ್ರದಾಯಿಕವಾಗಿ ಎಲ್ಲ ಪಕ್ಷದಲ್ಲೂ ಅಽಕೃತ ವಕ್ತಾರರು ಇರುತ್ತಿದ್ದರು ಮತ್ತು ಅವರು ಮಾತ್ರ ಪಕ್ಷದ ಪರವಾಗಿ ಮಾತಾಡುತ್ತಿದ್ದರು. ಈಗ ಹಾಗಲ್ಲ; ಯಾರು ಬೇಕಾದರೂ, ಏನು ಬೇಕಾದರೂ (ಅಧ್ಯಯನರಹಿತ ವಾದ) ಮಾತಾಡಬಹುದು ಎಂಬಂತಾಗಿಬಿಟ್ಟಿದೆ. ಹಾಗೆ ಬೇಕಾಬಿಟ್ಟಿಯಾಗಿ ಆಡಿದ ಮಾತುಗಳಿಂದ ಅವರು ವೈಯಕ್ತಿಕ್ತವಾಗಿ ಮತ್ತು ಸಂಘಟನಾತ್ಮಕವಾಗಿ ಬಹಳ ಗಂಭೀರವಾದ ಹಾಗೂ ನಕಾರಾತ್ಮಕವಾದ ಪರಿಣಾಮವನ್ನು
ಎದುರಿಸಿದ ಉದಾಹರಣೆಯೂ ನಮ್ಮ ಮುಂದೆ ಬೇಕಾದಷ್ಟಿದೆ.

ಬಿಹಾರದ ಲಾಲು ಪ್ರಸಾದ್ ಯಾದವ್ ಅವರು ಇತ್ತೀಚೆಗೆ, ‘ಯಾವಾಗಲೂ ಪರಿವಾರವಾದದ ಬಗ್ಗೆ ಮಾತನಾಡುವ ಮೋದಿಗೆ ಕುಟುಂಬವೇ ಇಲ್ಲ; ತಾಯಿ ಮರಣಿಸಿದಾಗ ಕೇಶಮುಂಡನ ಮಾಡಿಸಿಕೊಳ್ಳದ ಮೋದಿಯವರು ಹಿಂದುವೇ ಅಲ್ಲ’ ಎಂದು ನಾಲಿಗೆ ಹರಿಬಿಟ್ಟಿದ್ದರು. ಇದಕ್ಕುತ್ತರವಾಗಿ ಮೋದಿಯವರು, ‘ಭಾರತದ ೧೪೦ ಕೋಟಿ ಜನರೂ ನನ್ನ ಪರಿವಾರವೇ’ ಎಂದರು. ಪರಿಣಾಮ, ದೇಶಾದ್ಯಂತ ‘ಮೋದಿ ಕಾ ಪರಿವಾರ್’ ಅಲೆ ಶುರುವಾಗಿ ಹೋಯಿತು. ಇದರಿಂದಾಗಿ ಲಾಭ ಯಾರಿಗಾದಂತಾಯಿತು, ಮೋದಿಯವರಿಗೆ ತಾನೇ? ‘ಮನೆಯಲ್ಲಿ ಟಿವಿ ಹಚ್ಚಿದ ಕೂಡಲೇ ಮೋದಿ ಮುಖ ಬರುತ್ತದೆ.

ಬೆಳಗ್ಗೆ ಯಾರ‍್ಯಾರ ಮನೆಯಲ್ಲಿ ದೂರದರ್ಶನದಲ್ಲಿ ಮೋದಿಯವರ ಮುಖವನ್ನು ನೋಡುತ್ತಾರೋ, ಅವರ ಮನೆಗೆ ದಾರಿದ್ರ್ಯ ಬರುವುದು ಗ್ಯಾರಂಟಿ’ ಎಂದುಬಿಟ್ಟರು ಹಿರಿಯ ಕಾಂಗ್ರೆಸಿಗರೊಬ್ಬರು. ಇದರಿಂದ ವೈಯಕ್ತಿಕವಾಗಿ ಅವರಿಗೆ ಅಥವಾ ಒಟ್ಟಾರೆಯಾಗಿ ಪಕ್ಷಕ್ಕೆ ಯಾವ ರೀತಿಯಲ್ಲಿ ಲಾಭ
ವಾಯಿತೋ ತಿಳಿಯದು. ಒಂದು ಕಾಲವಿತ್ತು. ಇಂದಿರಾ ಗಾಂಧಿ, ಅಟಲ್ ಬಿಹಾರಿ ವಾಜಪೇಯಿ, ಜಗನ್ನಾಥ ಜೋಶಿ ಮತ್ತು ನಮ್ಮವರೇ ಆದ ರಾಮಕೃಷ್ಣ ಹೆಗಡೆಯವರಂಥ ನಾಯಕರು ಮಾತನಾಡುತ್ತಾರೆಂದರೆ ಪಕ್ಷಭೇದ ಮರೆತು ಜನರು ಆಸ್ವಾದಿಸುತ್ತಿದ್ದರು.

ಅವರ ಮಾತುಗಳಲ್ಲಿ ಉತ್ತಮ ಭಾಷಾ ಪ್ರಯೋಗ, ಸತ್ವ ತುಂಬಿರುತ್ತಿತ್ತು, ದೂರದರ್ಶಿತ್ವ ಇರುತ್ತಿತ್ತು. ಅವರು ಯಾರನ್ನಾದರೂ ಟೀಕಿಸುವಾಗಲೂ
ಎಚ್ಚರಿಕೆಯಿಂದ ಶಬ್ದಗಳನ್ನು ಬಳಸಿ ಮಾತಾಡುತ್ತಿದ್ದರು. ಈ ಕಾರಣಕ್ಕಾಗಿಯೇ ಜನರು ಅವರ ಮಾತನ್ನು ಕೇವಲ ಮಾತಾಗಿ ಕೇಳದೆ, ಅದರಲ್ಲಿರುವ ತಥ್ಯವನ್ನು ಪರಿಗ್ರಹಿಸುತ್ತಿದ್ದರು. ಆದರೆ, ಇತ್ತೀಚಿನ ತಥಾಕಥಿತ ನಾಯಕರ ಕೆಲ ವೊಂದು ಭಾಷಣಗಳನ್ನು ಮತ್ತು ಹೇಳಿಕೆಗಳನ್ನು ನೋಡಿದಾಗ, ಈ ಪರಿಜ್ಞಾನ ಅವರಲ್ಲಿಲ್ಲ ಎನಿಸುತ್ತದೆ. ತಮ್ಮ ಮಾತಿನಿಂದಾಗುವ ಪರಿಣಾಮದ ಕಲ್ಪನೆ ಇವರ‍್ಯಾರಿಗೂ ಇದ್ದಹಾಗಿಲ್ಲ ಎಂದು ಬೇಸರದಿಂದಲೇ ಹೇಳಬೇಕಾ ಗಿದೆ.

ತಮಿಳುನಾಡಿನ ಎ.ರಾಜಾ ಮತ್ತು ಉದಯನಿಧಿ ಸ್ಟಾಲಿನ್ ಅವರು ಇತ್ತೀಚೆಗೆ ಉದುರಿಸಿದ ಆಣಿಮುತ್ತುಗಳನ್ನು ನೀವು ಈಗಾಗಲೇ ಕೇಳಿಸಿಕೊಂಡಿದ್ದೀರಿ. ಭಾರತದ ಗುರುವಾಗಿರುವ ಸನಾತನ ಸಂಸ್ಕೃತಿಯು ಕರೋನಾ ಮತ್ತು ಡೆಂಘಿ ರೋಗಕ್ಕೆ ಸಮಾನ ಎಂದು ಒಬ್ಬರೆಂದರೆ, ‘ಭಾರತ ಒಂದು ದೇಶವೇ ಅಲ್ಲ’ ಎಂದ ಮತ್ತೊಬ್ಬರು ಶ್ರೀರಾಮ ಎನ್ನುವ ಭಾರತೀಯರ ಅಸ್ಮಿತೆಗೆ ಸಾರ್ವಜನಿಕರೆದುರು ‘ಛೀ, ಥೂ’ ಎಂದರು. ‘ಮನುಷ್ಯನ ಮಾತು ಅವನ ಮನಸ್ಸಿನ ಕೈಗನ್ನಡಿಯಾಗಿರುತ್ತದೆ’ ಎನ್ನುತ್ತಾರೆ ಬಲ್ಲವರು. ಇದಕ್ಕಿಂತ ಹೆಚ್ಚಿಗೆ ಏನು ಹೇಳೋದು ಇಂಥವರಿಗೆ?! ಇವರುಗಳ ಮಾತಿನ ಮೂಲೋದ್ದೇಶ ಸಮಾಜದ
ಯಾವುದೋ ಒಂದು ವರ್ಗವನ್ನು ನೋಯಿಸುವುದಾಗಿ ರುತ್ತದೆಯೇ ವಿನಾ, ಅದರ ಹಿಂದೆ ಇನ್ನಾವುದೇ ಮಹದುದ್ದೇಶ ಇರುವುದಿಲ್ಲ.

ತಮ್ಮ ನಟನಾ ಸಾಮರ್ಥ್ಯದಿಂದ ಕರ್ನಾಟಕದ ಹೆಮ್ಮೆ ಆಗಬಹುದಾಗಿದ್ದ ಪ್ರಕಾಶ್ ರೈ/ರಾಜ್ ಅವರ ಇತ್ತೀಚಿನ ಭಾಷಣಗಳನ್ನು ಕೇಳಿದರೆ ಯಾರಿಗಾ
ದರೂ ಅಸಹ್ಯ ಅನ್ನಿಸುತ್ತದೆ. ಕಾರಣ, ಭಾಷಣದುದ್ದಕ್ಕೂ ದೇಶದ ಪ್ರಧಾನ ಮಂತ್ರಿಗಳ ಕುರಿತು ಏಕವಚನವನ್ನೇ ಪ್ರಯೋಗಿಸಿದ್ದಾರೆ ಪ್ರಕಾಶ್. ‘ದೇಶ ವನ್ನು ಮಂಗ ಮಾಡ್ತಾ ಇದ್ದಾನೆ; ಈ ಚುನಾವಣೆಗೆ ಈತ ನೀರಿನೊಳಗೆ ಹೋದ, ಮುಂದಿನ ಚುನಾವಣೆಗೆ ಚಂದ್ರನ ಮೇಲೆ ನಿಂತು ಫೋಟೋ ಕ್ಲಿಕ್ಕಿಸಿ ಕೊಳ್ಳುತ್ತಾನೆ; ಇವನು (ಪ್ರಧಾನಮಂತ್ರಿ) ರಾಮಮಂದಿರದ ಉದ್ಘಾಟನೆಯ ಕಾರಣದಿಂದ ೧೧ ದಿನ ಉಪವಾಸವಿದ್ದು ದೇಶ ಸುತ್ತುತ್ತಿದ್ದ, ಆ ೧೧ ದಿನ ಪ್ರಧಾನಮಂತ್ರಿ ಇಲ್ಲದೆಯೇ ದೇಶ ನಡೆಯುವ ಹಾಗಾಯಿತು; ಕರ್ಕಶವಾಗಿ ಮಾತಾಡ್ತಾನೆ; ರೈಲು ನಿಲ್ದಾಣದ ಸ್ಟೇಷನ್ ಮಾಸ್ಟರ್‌ಗಿಂತ ಹೆಚ್ಚು ಟ್ರೈನ್‌ ಗಳಿಗೆ ಬಾವುಟ ತೋರಿಸುತ್ತಾನೆ’ ಇವೆಲ್ಲಾ ಪ್ರಕಾಶರ ಕೀಳುಮಟ್ಟದ ಮಾತು ಗಳ ಒಂದಷ್ಟು ಸ್ಯಾಂಪಲ್‌ಗಳು.

ಹೀಗೆ ಮಾತಾಡಿದಾಗ ಎದುರಿಗಿರುವ ನಾಲ್ಕಾರು ಜನರು ಅನಿವಾರ್ಯವಾಗಿ ಚಪ್ಪಾಳೆ ತಟ್ಟಬಹುದು; ಆದರೆ ಈ ಮಾತಿನ ತುಣುಕು ಗಳನ್ನೆಲ್ಲಾ ಸಾಮಾ ಜಿಕ ಜಾಲತಾಣಗಳಲ್ಲಿ ಸಾವಧಾನವಾಗಿ ವೀಕ್ಷಿಸುವವರು ಇಂಥವರ ಬಗ್ಗೆ ಅಭಿಮಾನಪಟ್ಟು ಕೊಳ್ಳಲಾರರು. ಉಪವಾಸ ಇದ್ದಾಗಲೂ ಇಲ್ಲದಿರುವಾ ಗಲೂ, ಪ್ರಯಾಣದಲ್ಲಿರುವಾಗಲೂ ತಮ್ಮ ಕೆಲಸವನ್ನು ಕಡೆಗಣಿಸದ ನಮ್ಮ ಪ್ರಧಾನಮಂತ್ರಿಯವರ ಕುರಿತು ಜನರಿಗೆ ಸಾಕಷ್ಟು ತಿಳಿದಿದೆ. ಅವರು ಇಂಥ ‘ಮಾತು ಗಾರರನ್ನು’ ನೋಡಿ ಹಾಸ್ಯ ಮಾಡುತ್ತಾರಷ್ಟೇ! ಇದೊಂದು ಕೆಟ್ಟ ಪ್ರವೃತ್ತಿ ಶುರುವಾಗಿಬಿಟ್ಟಿದೆ- ದೇಶದ ಗೌರವಾನ್ವಿತ ರಾಷ್ಟ್ರಪತಿಯವರು ಸೇರಿದಂತೆ ದೊಡ್ಡವರನ್ನೆಲ್ಲಾ ಏಕವಚನ ದಲ್ಲಿ ಸಂಬೋಧಿಸುವುದು.

ನಾನು ಅವರಿಗಿಂತ ದೊಡ್ಡ ವನು ಎಂಬ ಭ್ರಮೆ ಮತ್ತು ಅಹಂಭಾವ ಇವರಿಗೆ, ಅಷ್ಟೇ! ಈ ಎಲ್ಲ ಅಪಸವ್ಯದ ಹೇಳಿಕೆಗಳು, ಭಾಷಣಗಳ ಮಧ್ಯದಲ್ಲಿ ತೆಲಂಗಾಣದ ಮುಖ್ಯಮಂತ್ರಿ ರೇವಂತ ರೆಡ್ಡಿಯವರ ಇತ್ತೀಚಿನ ಸಂಸ್ಕಾರಭರಿತ ಮತ್ತು ವಿಚಕ್ಷಣಾಪೂರ್ಣ ಭಾಷಣವೊಂದು, ಕಾರ್ಮೋಡದಂಚಿನ ಬೆಳ್ಳಿಗೆರೆಯಂತೆ ಕಂಡಿತು. ತೆಲಂಗಾಣದ ಭೇಟಿಗೆ ತೆರಳಿದ್ದ ಪ್ರಧಾನಿಯ ವರು ಮುಖ್ಯಮಂತ್ರಿ ರೇವಂತರ ಜತೆ ಪ್ರಥಮ ಬಾರಿಗೆ ವೇದಿಕೆ ಹಂಚಿಕೊಂಡಿ ದ್ದರು. ದೇಶದ ನಾಯಕನ ಮುಂದೆ ತನ್ನ ರಾಜ್ಯದ ಪರವಾಗಿ, ಹಿಂದಿ ಮತ್ತು ಆಂಗ್ಲಭಾಷೆಗಳನ್ನು ಸರಳವಾಗಿ ಬಳಸಿ ಅವರು ಭಾಷಣವನ್ನು ಪ್ರಸ್ತುತ ಪಡಿಸಿದ ಪರಿ ಅನನ್ಯವಾಗಿತ್ತು. ‘ನನ್ನ ದೃಷ್ಟಿಯಲ್ಲಿ, ದೇಶವನ್ನು ಆಳುವ ಪ್ರಧಾನ ಮಂತ್ರಿಯೆಂದರೆ ರಾಜ್ಯಗಳ ಪಾಲಿಗೆ ಮನೆಯಲ್ಲಿನ ದೊಡ್ಡಣ್ಣ ನಿದ್ದಂತೆ.

ರಾಜ್ಯಗಳು ಕಿರಿಯ ಸಹೋದರರಿದ್ದಂತೆ. ಅಣ್ಣನ ಸಹಾಯವಿಲ್ಲದೆ ತಮ್ಮ ಬೆಳೆಯಲು ಸಾಧ್ಯವೇ ಇಲ್ಲ’ ಎಂದು ತಮ್ಮ ಮಾತನ್ನು ಪ್ರಾರಂಭಿಸಿದ ರೇವಂತ್, ‘ನೀವು ಗುಜರಾತ್ ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ಏನೆಲ್ಲಾ ಕನಸುಗಳನ್ನು ಕಂಡು, ಅಲ್ಲಿ ಸಾಧಿಸಿ ತೋರಿಸಿದ್ದೀರೋ ಹಾಗೆಯೇ
ನನಗೂ ತೆಲಂಗಾಣವನ್ನು ಗುಜರಾತಿನ ಮಾದರಿಯಲ್ಲಿ ಅಭಿವೃದ್ಧಿಪಡಿಸುವ ಕನಸಿದೆ. ಅದಕ್ಕೆ ನಿಮ್ಮ ಸಹಾಯ ಮತ್ತು ಆಶೀರ್ವಾದ ಬೇಕು’ ಎಂದರು. ಮಾತು ಮುಂದುವರಿಸಿದ ರೇವಂತ್, ‘ಮೋದಿಯವರೇ, ನೀವು ನಮ್ಮ ರಾಜ್ಯದ ಅಭಿವೃದ್ಧಿಗೆ ಸಹಕರಿಸಿದಾಗ ಮಾತ್ರ ನಿಮ್ಮ ಐದು ಟ್ರಿಲಿಯನ್ ಆರ್ಥಿ  ಕತೆಯ ವಿಚಾರಧಾರೆಗೆ ನಾವು ಕೂಡ ದೊಡ್ಡ ಮಟ್ಟದಲ್ಲಿ ಕೊಡುಗೆ ನೀಡಲು ಸಾಧ್ಯವಾಗುತ್ತದೆ’ ಎಂದರು. ಮಧ್ಯದಲ್ಲಿ ಕೇಂದ್ರ ಸರಕಾರದಿಂದ ಬಾಕಿ ಯಿರುವ ರಾಜ್ಯದ ಎಲ್ಲ ಯೋಜನೆಗಳನ್ನು ಒಂದೊಂದಾಗಿ ಅರ್ಥಪೂರ್ಣವಾಗಿ ವಿವರಿಸಿದರು.

ಕೊನೆಯಲ್ಲಿ, ‘ಕೇಂದ್ರ ಸರಕಾರದ ಜತೆ ಜಗಳವಾಡಲು ನಾವು ಇಷ್ಟಪಡುವುದಿಲ್ಲ. ಕೇವಲ ರಾಜಕೀಯಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ಕಿತ್ತಾಡಿಕೊಳ್ಳುತ್ತಿದ್ದರೆ ನಷ್ಟ ವಾಗುವುದು ರಾಜ್ಯಕ್ಕೆ ಮತ್ತು ರಾಜ್ಯದ ಜನರಿಗೆ. ಹಾಗಾಗಿ, ನನ್ನ ರಾಜ್ಯವನ್ನು ಅಭಿವೃದ್ಧಿಪಡಿಸಲು ತೆಲಂಗಾಣದ ಜನರ
ಪರವಾಗಿ ನಿಮ್ಮ ಸಹಾಯಕ್ಕಾಗಿ ಕೋರಿಕೆ ಸಲ್ಲಿಸುತ್ತಿದ್ದೇನೆ’ ಎಂದರು.

ಪ್ರಥಮ ಬಾರಿಗೆ ಮುಖ್ಯಮಂತ್ರಿಯಾಗಿರುವ ರೇವಂತರ ಮಾತಿನ ಶೈಲಿಗೆ ‘ಫಿದಾ’ ಆದಂತೆ ಕಂಡ ಪ್ರಧಾನಿ ಮೋದಿಯವರು ಅವರನ್ನು ಹಾಗೇ ಅವಾಕ್ಕಾಗಿ
ನೋಡುತ್ತ ಕುಳಿತುಬಿಟ್ಟರು. ರೇವಂತ ರೆಡ್ಡಿಯವರು ಕರ್ನಾಟಕದ ಸಂಸದ ಡಿ.ಕೆ.ಸುರೇಶರು ಹೇಳಿದ್ದನ್ನೇ ಹೇಳಿದ್ದಾರೆ; ಆದರೆ ಹೇಳಿದ ರೀತಿಯು ಎಲ್ಲ ರಾಜಕಾರಣಿ ಗಳಿಗೂ ಅನುಸರಣೀಯ ಮತ್ತು ಅನುಕರಣೀಯ ವಾಗಿತ್ತು. ಅದು ಒಕ್ಕೂಟ ವ್ಯವಸ್ಥೆಯಲ್ಲಿ ಜನರಿಗೆ ಭರವಸೆ ಹುಟ್ಟಿಸುವಂತಿತ್ತು. ಪ್ರಸ್ತುತ ರಾಜಕಾರಣದಲ್ಲಿರುವ, ಅಸಂಬದ್ಧ ಮಾತಾಡುವ ಎಲ್ಲ ರಾಜಕಾರಣಿಗಳೂ ಈ ಭಾಷಣವನ್ನು ಮುದ್ದಾಂ ಒಮ್ಮೆ ಕೇಳಿಸಿಕೊಳ್ಳಬೇಕು.

ತಾವು ಹಿರಿಯರು, ಅನುಭವಿಗಳು ಎಂದು ತಿಳಿದುಕೊಂಡಿರು ವವರು, ಅತ್ಯಂತ ಕಿರಿಯರೂ ಪ್ರಥಮ ಬಾರಿಗೆ ರಾಜ್ಯವೊಂದರ ಮುಖ್ಯಮಂತ್ರಿಯೂ ಆಗಿರುವ ರೇವಂತರಿಂದ ಕಲಿಯಬೇಕಾದ ಪಾಠ ಸಾಕಷ್ಟಿದೆ.

(ಲೇಖಕರು ಪ್ರಚಲಿತ ವಿದ್ಯಮಾನಗಳ ವಿಶ್ಲೇಷಕರು)