Wednesday, 11th December 2024

ಶೆಟ್ಟರ್‌ಗೆ ಕೈಹತ್ತೀತೇ ಹೊಸ ಅಂಗಡಿ ?

ಅಶ್ವತ್ಥಕಟ್ಟೆ

ranjith.hoskere@gmail.com

ಕಾಂಗ್ರೆಸ್‌ಗೆ ಹೋಗುವ ಬದಲು ಪಕ್ಷೇತರವಾಗಿ ಸ್ಪರ್ಧಿಸಿದ್ದರೂ, ಶೆಟ್ಟರ್ ಅವರನ್ನು ಅನೇಕರು ಬೆಂಬಲಿಸುತ್ತಿದ್ದರು. ಆದರೆ ಕಾಂಗ್ರೆಸ್ಸನ್ನು ವಿರೋಧಿಸಿ ಕೊಂಡು ಬಂದು, ಇದೀಗ ಅದೇ ಪಕ್ಷವನ್ನು ಅಪ್ಪಿಕೊಂಡಿರುವುದರಿಂದ ಸಿದ್ಧಾಂತಕ್ಕಿಂತ ಹೆಚ್ಚಾಗಿ ಅಽಕಾರವೇ ಮುಖ್ಯವಾಗಿದೆ ಎನ್ನುವ ಮಾತನ್ನು ಹೇಳುತ್ತಿದ್ದಾರೆ.

ರಾಜಕಾರಣವೆನ್ನುವುದು ಭಾರತದಂಥ ದೇಶದಲ್ಲಿ ‘ನಿತ್ಯ ನೂತನ’ ಕ್ಷೇತ್ರ. ಇಲ್ಲಿ ಇಂದಿರು ವುದು ನಾಳೆ ಇರಬೇಕು ಎನ್ನುವ ನಿಯಮವಿಲ್ಲ. ಇಂದು ಒಂದು ಪಕ್ಷದಲ್ಲಿದ್ದವರು ನಾಳೆ ಮತ್ತೊಂದು ಪಕ್ಷದತ್ತ ಹೋದರೆ ಅಚ್ಚರಿ ಪಡೆಬೇಕಿಲ್ಲ. ಅದರಲ್ಲಿಯೂ ಚುನಾವಣಾ ಸಮಯದಲ್ಲಿ ಈ ರೀತಿಯ ಜಪ್ಪಿಂಗ್‌ಗಳು ಹೊಸದಲ್ಲ. ‘ಜಪ್ಪಿಂಗ್ ಸ್ಟಾರ್’ಗಳು ರಾಜ್ಯ, ದೇಶದ ಜನರಿಗೆ ಹೊಸನಲ್ಲ.

ಸಾಮಾನ್ಯವಾಗಿ ಪಕ್ಷಾಂತರವನ್ನು ಯಾರೇ ಮಾಡಿದರೂ, ಅದರ ಹಿಂದಿನ ಉದ್ದೇಶ ಅಽಕಾರವಲ್ಲದೇ ಮತ್ತೇನು ಆಗಿರುವು ದಿಲ್ಲ. ಈ ಪಕ್ಷದಲ್ಲಿದ್ದ ವ್ಯಕ್ತಿಗೆ ಇನ್ನೊಂದು ಪಕ್ಷ ಶಾಸಕ ಸ್ಥಾನ ಕೊಟ್ಟರೆ ಅಲ್ಲಿಗೆ ಹೋಗುವುದು ಸಾಮಾನ್ಯ. ಎಲ್ಲ ನಾಯಕರೂ ಈ ಮಾಡುವುದಿಲ್ಲವಾದರೂ, ಬಹುತೇಕರು ರಾಜಕೀಯಕ್ಕೆ ಬರುವಾಗಲೇ ಈ ರೀತಿಯ ‘ಮನಸ್ಥಿತಿ’ಯನ್ನು ಹೊಂದಿರುತ್ತಾರೆ. ಆದರೆ ದಶಕಗಳಿಂದ ಒಂದೇ ಪಕ್ಷದಲ್ಲಿದ್ದುಕೊಂಡು, ಸಕಲ ಸವಲತ್ತನ್ನು ಅನುಭವಿಸಿದ ಬಳಿಕ ಯಾವುದೋ ಒಂದು ಕಾರಣಕ್ಕೆ ಆ ಪಕ್ಷ ತೊರೆದು ಮತ್ತೊಂದು ಪಕ್ಷಕ್ಕೆ ಹೋದಾಗ ಆಗುವ ಒಂದು ಸಂಚಲನ, ಆ ನಾಯಕನಿಗೆ ಲಾಭವೂ ಆಗಬಹುದು.

ನಷ್ಟವೂ ಆಗಬಹುದು. ಆದರೆ ದಶಕಗಳಿಂದ ಒಂದೇ ಪಕ್ಷದಲ್ಲಿದ್ದು, ಇಳಿವಯಸ್ಸಿನಲ್ಲಿ ಮತ್ತೊಂದು ಪಕ್ಷಕ್ಕೆ ಹೋದ ಬಹುತೇಕ ರಿಗೆ ಲಾಭಕ್ಕಿಂತ ‘ನಷ್ಟವೇ’ ಹೆಚ್ಚಾಗಿದೆ ಎನ್ನುವುದು ಸ್ಪಷ್ಟ. ಕರ್ನಾಟಕದ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಜಂಪಿಂಗ್ ಸ್ಟಾರ್‌ಗಳಿಗೇನು ಕಡಿಮೆಯಿಲ್ಲ. ನೂರಾರು ಮಂದಿ ಆ ಕಡೆಯಿಂದ ಈ ಕಡೆಗೆ. ಈ ಕಡೆಯಿಂದ ಮತ್ತೊಂದು ಕಡೆಗೆ ಹಾರಿದ್ದಾರೆ. ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್‌ನ ಹಲವು ಹಾಲಿ ಶಾಸಕರೂ ಇದಕ್ಕೆ ಹೊರತಾಗಿಲ್ಲ. ಆದರೆ ಈ ರೀತಿ ಪಕ್ಷಾಂತರ ಮಾಡಿದ ಅನೇಕರಲ್ಲಿ ಕೆಲವ ಪಕ್ಷಾಂತರ ಇಡೀ ರಾಜ್ಯ ರಾಜಕೀಯದಲ್ಲಿ ಭಾರಿ ಚರ್ಚೆಗೆ ವೇದಿಕೆಯನ್ನು ಕಲ್ಪಿಸಿತ್ತು.

ಅದರಲ್ಲಿ ಬಿಜೆಪಿಯ ರಾಜ್ಯಾಧ್ಯಕ್ಷರಾಗಿ, ವಿಧಾನಸಭಾ ಪ್ರತಿಪಕ್ಷ ನಾಯಕರಾಗಿ, ಮುಖ್ಯಮಂತ್ರಿಯಾಗಿ ಹಾಗೂ ಆರು ಬಾರಿ
ಸತತವಾಗಿ ಶಾಸಕರಾಗಿ ಆಯ್ಕೆಯಾಗಿದ್ದ ಜಗದೀಶ್ ಶೆಟ್ಟರ್ ಅವರಿಗೆ ಏಳನೇ ಬಾರಿ ಟಿಕೆಟ್ ನೀಡಲಿಲ್ಲ ಎನ್ನುವ ಕಾರಣಕ್ಕೆ
ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದು ಹಾಗೂ 2018ರ ಚುನಾವಣೆಯಲ್ಲಿ ಸೋತಿದ್ದರೂ ವಿಧಾನಪರಿಷತ್ ಸದಸ್ಯರನ್ನಾಗಿ ಮಾಜಿ ಉಪಮುಖ್ಯಮಂತ್ರಿ ಸ್ಥಾನ ಪಡೆದಿದ್ದ ಲಕ್ಷ್ಮಣ ಸವದಿ ಅವರಿಗೆ ಟಿಕೆಟ್ ನಿರಾಕರಿಸಲಾಯಿತು ಎನ್ನುವ ಕಾರಣಕ್ಕೆ ಕಾಂಗ್ರೆಸ್ ಸೇರಿದ್ದು ಹಲವು ಆಯಾಮದಲ್ಲಿ ಚರ್ಚೆಗೆ ಕಾರಣವಾಗಿದೆ.

ಈ ಇಬ್ಬರ ಪಕ್ಷಾಂತರದ ಬಗ್ಗೆ ಮಾತನಾಡುವ ಮೊದಲು, ಈ ಹಿಂದೆ ಈ ರೀತಿ ಪಕ್ಷಾಂತರ ಮಾಡಿದ ನಾಯಕರು ಕೊನೆಯಲ್ಲಿ ಎಷ್ಟು ಮಂದಿ ಯಶಸ್ವಿಯಾದರೂ ಎನ್ನುವುದನ್ನು ನೋಡಬೇಕಿದೆ. ಅನೇಕರು ಒಂದು ಪಕ್ಷದಿಂದ ಮತ್ತೊಂದು ಪಕ್ಷಕ್ಕೆ ದಂಡಯಾತ್ರೆ ಮಾಡಿರುವುದು ಹೊಸದಲ್ಲ. ವಿರೇಂದ್ರ ಪಾಟೀಲ್, ಈಗಿನ ಹಾಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೆಲ್ಲ ಪಕ್ಷಾಂತರ ಮಾಡಿದ ಬಳಿಕವೇ ಮುಖ್ಯಮಂತ್ರಿ ಹುದ್ದೆಗೆ ಏರಿದ್ದು. ಇನ್ನು ಅನೇಕರು ಆಪರೇಷಲ್ ಕಮಲ, ಆಪರೇಷನ್ ಹಸ್ತ ಮೂಲಕ ಒಂದು ಪಕ್ಷದಿಂದ ಮತ್ತೊಂದು ಪಕ್ಷಕ್ಕೆ ಹೋಗಿದ್ದಾರೆ.

ಈ ರೀತಿ ಪಕ್ಷಾಂತರ ಮಾಡುವ ಸಮಯದಲ್ಲಿ ಅನೇಕರು ಮೊದಲ ಬಾರಿಗೆ ಅಥವಾ ಎರಡನೇ ಬಾರಿಗೆ ಶಾಸಕರಾಗಿದ್ದರು. ಆದರೆ ದಶಕಗಳ ಒಂದು ಪಕ್ಷದಲ್ಲಿ ಅಽಕಾರವನ್ನು ಅನುಭವಿಸಿ ಬಳಿಕ ಪಕ್ಷಾಂತರ ಮಾಡಿದ ಬಹುತೇಕರು, ಮತ್ತೊಂದು ಪಕ್ಷಕ್ಕೆ
ಹೋದ ಸಮಯದಲ್ಲಿ ಹಿರಿಯ ನಾಯಕನೆಂಬ ಬಿರುದು ಹೊರತುಪಡಿಸಿ ಇನ್ಯಾವ ಸ್ಥಾನಗಳು ಸಿಗುವುದಿಲ್ಲ.

ಸಿಕ್ಕಿದ್ದರೂ, ಆ ಪಕ್ಷದ ಸಿದ್ಧಾಂತಕ್ಕೆ ಹೊಂದಾಣಿಕೆಯಾಗದೇ ‘ಔಟ್ ಆಫ್ ದಿ ಬಾಕ್ಸ್’ ಆಗಿರುವ ಉದಾಹರಣೆಗಳು ಅನೇಕವಿದೆ. ಉದಾಹರಣೆಗೆ ರಾಮಕೃಷ್ಣ ಹೆಗಡೆ, ಎಸ್.ಬಂಗಾರಪ್ಪ, ಎಸ್.ಎಂ ಕೃಷ್ಣ, ಎಚ್. ವಿಶ್ವನಾಥ್, ಶ್ರೀನಿವಾಸ್ ಪ್ರಸಾದ್ ಹೀಗೆ ಕರ್ನಾಟಕದಲ್ಲಿಯೇ ಅನೇಕರನ್ನು ನಾವು ಗಮನಿಸಬಹುದು. ಎಸ್. ಬಂಗಾರಪ್ಪ ಅವರು ಮೂಲತಃ ಸಮಾಜವಾದಿ ಹಿನ್ನೆಲೆ ಯಿಂದ ಬಂದು ಕಾಂಗ್ರೆಸ್ ಸೇರ್ಪಡೆಯಾಗಿ ಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಬಳಿಕ ಕರ್ನಾಟಕ ಕ್ರಾಂತಿ ರಂಗ, ಜನತಾ ಪಕ್ಷ, ಕರ್ನಾಟಕ ಕಾಂಗ್ರೆಸ್ ಪಕ್ಷ ಹಾಗೂ ಬಿಜೆಪಿಗೆ ಸೇರಿದರು.

ಈ ರೀತಿ ಪಕ್ಷದಿಂದ ಪಕ್ಷಕ್ಕೆ ಹಾರುವ ಮೂಲಕ ರಾಜಕೀಯದಲ್ಲಿ ಅವರಿದ್ದ ಉತ್ತಮ ಅವಕಾಶವನ್ನು ಕಳೆದುಕೊಂಡರು. ಇದೇ ರೀತಿ ಎಚ್. ವಿಶ್ವನಾಥ್ ಸಹ ಕಾಂಗ್ರೆಸ್‌ನಿಂದ ಜೆಡಿಎಸ್‌ಗೆ ಹೋಗಿ, ಅಲ್ಲಿ ರಾಜ್ಯಾಧ್ಯಕ್ಷರಾಗಿದ್ದಾಗಲೇ ಬಿಜೆಪಿ ಸೇರ್ಪಡೆ ಯಾದರು. ಇದೀಗ ಪುನಃ ಬಿಜೆಪಿಯಿಂದ ಕಾಂಗ್ರೆಸ್ ಸೇರಲು ಸಜ್ಜಾಗಿದ್ದಾರೆ. ಇನ್ನು ಎಸ್.ಎಂ ಕೃಷ್ಣ ಅವರು ದಶಕಗಳ ಕಾಲ ಕಾಂಗ್ರೆಸ್‌ನಲ್ಲಿ, ಸೋನಿಯಾ ಗಾಂಧಿ ಅವರ ಆಪ್ತ ವಲಯದಲ್ಲಿ ಕಾಣಿಸಿಕೊಂಡು ಬಳಿಕ ರಾಹುಲ್ ಗಾಂಧಿ ಜತೆಗಿನ ಹೊಂದಾಣಿಕೆ ಸಮಸ್ಯೆಯಿಂದ ಬಿಜೆಪಿ ಸೇರಿದರು.

ಆದರೆ ಈ ರೀತಿ ಬಿಜೆಪಿ ಸೇರಿದ ಬಳಿಕ ‘ಮೂಲೆಗುಂಪು’ ಆದರೂ ಎಂದರೆ ತಪ್ಪಾಗುವುದಿಲ್ಲ. ಇದೀಗ ಜಗದೀಶ್ ಶೆಟ್ಟರ್ ಅವರು ಆರು ಬಾರಿ ಬಿಜೆಪಿಯಿಂದ ಆಯ್ಕೆಯಾಗಿ ಇದೀಗ ಕಾಂಗ್ರೆಸ್‌ಗೆ ಹೋಗಿ ಅಲ್ಲಿಂದ ಟಿಕೆಟ್ ಪಡೆದಿದ್ದಾರೆ. ರಾಜಕೀಯ ವಾಗಿ ಈ ನಡೆಯನ್ನು ಅನೇಕರು ‘ನಷ್ಟ’ದ ಲೆಕ್ಕಾಚಾರವೆಂದೇ ವಿಶ್ಲೇಷಿಸುತ್ತಿದ್ದಾರೆ. ಕಾಂಗ್ರೆಸ್‌ಗೆ ಹೋಗುವ ಬದಲು ಪಕ್ಷೇತರವಾಗಿ ಸ್ಪರ್ಧಿಸಿದ್ದರೂ, ಶೆಟ್ಟರ್ ಅವರನ್ನು ಅನೇಕರು ಬೆಂಬಲಿಸುತ್ತಿದ್ದರು. ಆದರೆ ದಶಕಗಳ ಕಾಂಗ್ರೆಸ್ಸನ್ನು ವಿರೋಧಿಸಿಕೊಂಡು ಬಂದು, ಇದೀಗ ಏಕಾಏಕಿ ಅದೇ ಪಕ್ಷವನ್ನು ಅಪ್ಪಿಕೊಂಡಿರುವುದರಿಂದ ಅನೇಕರು, ಸಿದ್ಧಾಂತಕ್ಕಿಂತ ಹೆಚ್ಚಾಗಿ ಅಧಿಕಾರವೇ ಮುಖ್ಯವಾಗಿದೆ ಎನ್ನುವ ಮಾತನ್ನು ಹೇಳುತ್ತಿದ್ದಾರೆ.

ಇದೇ ರೀತಿ ಪಕ್ಷಾಂತರ ಮಾಡಿ ಟಿಕೆಟ್ ಪಡೆದಿರುವ ಲಕ್ಷ್ಮಣ ಸವದಿ ಅವರು ಈ ಹಿಂದೆಯೂ ಪಕ್ಷಾಂತರದ ಮೂಲಕವೇ
ಬಿಜೆಪಿಗೆ ಬಂದಿದ್ದರಿಂದ ಹೆಚ್ಚು ಸಮಸ್ಯೆಯಾಗುವುದಿಲ್ಲ. ಅದಕ್ಕೂ ಮುಖ್ಯವಾಗಿ, ಅವರಿಗೆ ಕಳೆದುಕೊಳ್ಳಬೇಕಾಗಿರುವುದು ಏನು ಇರಲಿಲ್ಲ. ಆದರೆ ಶೆಟ್ಟರ್ ವಿಷಯದಲ್ಲಿ ಈ ರೀತಿಯಾಗುವುದಿಲ್ಲ. ಒಮ್ಮೆ ಅವರು ಕಾಂಗ್ರೆಸ್‌ನಿಂದ ಗೆದ್ದರೂ, ಅವರು
ಶಾಸಕರಾಗಿಯೇ ಉಳಿಯಬೇಕು. ಅದಕ್ಕೂ ಹೆಚ್ಚಾಗಿ ಬಿಜೆಪಿಯಲ್ಲಿದ್ದಾಗ ಅವರ ಮಾತಿಗೆ ಸಿಗುತ್ತಿದ್ದ ‘ಕಿಮ್ಮತ್ತು’ ಕಾಂಗ್ರೆಸ್ ಸಿಗುವುದು ಅನುಮಾನ ಎನ್ನುವುದು ಬಹುತೇಕ ಅಭಿಪ್ರಾಯ.

ಅಧಿಕಾರವನ್ನು ಮೀರಿ ಯೋಚಿಸಿದಾಗ ಜಗದೀಶ್ ಶೆಟ್ಟರ್ ಅವರು ಈಶ್ವರಪ್ಪ ರೀತಿಯಲ್ಲಿ ಪ್ರಖರ ಹಿಂದುತ್ವವಾದಿ ಎನಿಸಿಕೊಳ್ಳ ದಿದ್ದರೂ, ದಶಕಗಳಿಂದ ಸಂಘ ಪರಿವಾರದ ವಾತಾವರಣದಲ್ಲಿಯೇ ಬೆಳೆದವರು. ಆದರೆ ಇನ್ನು ಮುಂದೆ ಇಷ್ಟು ತಾವು ನಂಬಿದ್ದ ಸಿದ್ಧಾಂತವನ್ನು ವಿರೋಧಿಸಲೇಬೇಕಾದ ಅನಿವಾರ್ಯ ಅವರಿಗೆ ಎದುರಾಗುತ್ತದೆ. ಇಷ್ಟು ದಿನ ಯಾವ ಹೈಕಮಾಂಡ್ ವಿರುದ್ಧ ಕಿಡಿಕಾರಿದ್ದರೋ ಅದೇ ನಾಯಕರ ಮುಂದೆ ನಿಲ್ಲಬೇಕಾಗುತ್ತದೆ. ಈ ಎಲ್ಲಕ್ಕೂ ಮಿಗಿಲಾಗಿ, ಇಷ್ಟು ಯಾವುದು ಸತ್ಯವೆಂದು ತಿಳಿದುಕೊಂಡಿದ್ದರೋ ಅದನ್ನು ಅಸತ್ಯ ಎನ್ನಲೇಬೇಕಾದ ಸ್ಥಿತಿಗೆ ತಲುಪಿದ್ದಾರೆ.

ಜನತಾದಳದಲ್ಲಿರುವ ನಾಯಕರೊಬ್ಬರು ಕಾಂಗ್ರೆಸ್ ಹೋದರೆ, ಅವರ ಕಾಂಗ್ರೆಸ್‌ನಿಂದ ಜೆಡಿಎಸ್‌ಗೆ ಹೋದರೆ ಹೆಚ್ಚು ಸೈದ್ಧಾಂತಿಕ ಭಿನ್ನತೆಗಳು ಇರುವುದಿಲ್ಲ. ಆದರೆ ಈ ರೀತಿ ಬಿಜೆಪಿಯಿಂದ ಕಾಂಗ್ರೆಸ್‌ಗೆ ಹೋಗುವವರಿಗೆ ಈ ರೀತಿಯ ಸಮಸ್ಯೆ ಹೆಚ್ಚಾಗಿ ಕಾಡುತ್ತದೆ. ಹಾಗೇ ನೋಡಿದರೆ, ಆಪರೇಷನ್ ಕಮಲದ ಮೂಲಕ ಬಿಜೆಪಿಗೆ ಬಹುತೇಕ ಕಾಂಗ್ರೆಸಿಗರು ಹೆಸರಿಗೆ ಬಿಜೆಪಿಯ ಶಾಸಕರಾಗಿದ್ದರೂ ಅವರಲ್ಲಿನ ಅನೇಕರು ಈಗಲೂ ಬಿಜೆಪಿಗೆ ಪೂರ್ಣ ಪ್ರಮಾಣದಲ್ಲಿ ಒಗ್ಗಿಕೊಂಡಿಲ್ಲ.

ಇನ್ನು ಸುಮಾರು ನಾಲ್ಕೈದು ದಶಕಗಳ ಕಾಲ ಬಿಜೆಪಿಯಲ್ಲಿದ್ದ ಶೆಟ್ಟರ್, ಕಾಂಗ್ರೆಸ್‌ಗೆ ಹೊಂದಿಕೊಳ್ಳುವರೇ ಎನ್ನುವುದೇ
ಈಗಿರುವ ಪ್ರಶ್ನೆ. ದಶಕಗಳ ಕಾಲ ಅಧಿಕಾರವನ್ನು ಅನುಭವಿಸಿರುವ ಯಾವುದೇ ನಾಯಕರು, ತಮ್ಮ ಕೊನೆಯ ತನಕ ನಾವೇ
ಅಧಿಕಾರದಲ್ಲಿರಬೇಕು ಎನ್ನುವ ಮನಸ್ಥಿತಿಯಿಂದ ಹೊರಬೇಕಾಗಿರುವುದು ಇಂದಿನ ಅಗತ್ಯವಾಗಿದೆ. ಬಹುತೇಕ ಯುವ ಮತದಾರರೂ, ಇದೇ ರೀತಿಯ ನಿರೀಕ್ಷೆಯಲ್ಲಿದ್ದಾರೆ. ಈ ‘ಮೂಡ್’ ಅನ್ನು ಅರಿತುಕೊಂಡೇ ಬಿಜೆಪಿ ವರಿಷ್ಠರು, ಗುಜರಾತ್‌ನಲ್ಲಿ ಹಲವು ಹಾಲಿ ಶಾಸಕರು, ಸಚಿವರಿಗೆ ಟಿಕೆಟ್ ತಪ್ಪಿಸಿ ಹೊಸ ಮುಖಗಳಿಗೆ ಅವಕಾಶ ನೀಡಿತ್ತು. ಗುಜರಾತ್‌ನಲ್ಲಿ ತಗೆದುಕೊಂಡ
ರೀತಿಯಲ್ಲಿಯೇ ‘ಗಟ್ಟಿ’ ತೀರ್ಮಾನವನ್ನು ಪೂರ್ಣ ಪ್ರಮಾಣದಲ್ಲಿ ತಗೆದುಕೊಂಡಿಲ್ಲವಾದರೂ, ಕೆಲವೊಂದು ಕ್ಷೇತ್ರದಲ್ಲಿ ಭಾರಿ ಬಂಡಾಯದ ಹೊರತಾಗಿಯೂ ಹೊಸ ಮುಖಗಳಿಗೆ ಅವಕಾಶ ನೀಡುವ ಕೆಲಸವನ್ನು ಬಿಜೆಪಿ ಮಾಡಿದೆ.

ಆದರೆ ಅದನ್ನು ಕರ್ನಾಟಕದ ಜನ ಒಪ್ಪುವರೇ ಅಥವಾ ಪಕ್ಷದ ಮೇಲಿರುವ ಆಡಳಿತ ವಿರೋಧಿ ಆಕ್ರೋಶವನ್ನು ಮತದಾನದ ವೇಳೆ ಹೊರಹಾಕುವರೇ ಎನ್ನುವುದನ್ನು ಕಾದು ನೋಡಬೇಕಿದೆ. ಇದರೊಂದಿಗೆ ದಶಕಗಳಿಂದ ಆಯಕಟ್ಟಿನ ಹುದ್ದೆಯಲ್ಲಿರುವ
ನಾಯಕರೂ, ಪಕ್ಷದ ಸೂಚನೆಗೆ ಕಾಯದೇ, ತಾವಾಗಿಯೇ ‘ರಿಟೈರ್‌ಮೆಂಟ್’ ಘೋಷಿಸುವ ಮೂಲಕ ಮಾದರಿಯಾಗಿ ನಿಲ್ಲುವುದು ಇಂದಿನ ಅಗತ್ಯವಾಗಿದೆ.