Saturday, 23rd November 2024

ಗುಜರಾತ್ ಮಾಡೆಲ್‌ಗೆ ಮತ್ತೊಮ್ಮೆ ಜೈ !

ವೀಕೆಂಡ್ ವಿತ್ ಮೋಹನ್

camohanbn@gmail.com

ಜನವರಿ 26, 2001 ಗುಜರಾತಿನ ಭುಜ್ ಮತ್ತು ಕಛ್ ಪ್ರದೇಶಗಳಲ್ಲಿ ಹಿಂದೆಂದೂ ಕಂಡರಿಯದ ಭೂಕಂಪನವಾಗಿತ್ತು. ಸುಮಾರು 20ಸಾವಿರ ಮಂದಿ ಅಸುನೀಗಿ, 12 ಲಕ್ಷ ಜನ ತಮ್ಮ ಮನೆ-ಮಠ ಕಳೆದುಕೊಂಡಿದ್ದರು. ಇಡೀ ದೇಶವೇ ದುಃಖ ದಲ್ಲಿ ಮುಳುಗಿತ್ತು.

ಗುಜರಾತ್ ರಾಜ್ಯದಾದ್ಯಂತ ನೀರವ ಆವರಿಸಿತ್ತು. ಗುಜರಾತಿನ ಒಬ್ಬ ವ್ಯಕ್ತಿ ಇತರರ ಜತೆಗೆ ಸಾಮಾನ್ಯ ಸ್ವಯಂಸೇವಕನಾಗಿ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದರು. ತದನಂತರ ರಾಜ್ಯ ಸರಕಾರ ಹಾನಿಗೊಳಗಾಗಿದ್ದ ಪ್ರದೇಶಗಳ ಮರು ನಿರ್ಮಾಣದತ್ತ ಚಿತ್ತ ಹರಿಸಿತ್ತು. ಅಕ್ಟೋಬರ್ 2001 ರಲ್ಲಿ ಉಂಟಾದ ಪ್ರಮುಖ ರಾಜಕೀಯ ಬೆಳವಣಿಗೆಯಲ್ಲಿ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದ ಆ ಸ್ವಯಂಸೇವಕ ಗುಜರಾತಿನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು.

ಅವರು ನರೇಂದ್ರ ಮೋದಿ. ಆ ಸನ್ನಿವೇಶದಲ್ಲಿ ಬೆಟ್ಟದಷ್ಟು ಸವಾಲು ಅವರ ಎದುರಿಗಿತ್ತು. ಹಾನಿಗೊಳಗಾದ ಪ್ರದೇಶಗಳನ್ನು ಒಂದು ವರ್ಷದಲ್ಲಿ ಸಂಪೂರ್ಣ ಮರು ನಿರ್ಮಾಣ ಮಾಡುವ ಗುರಿಯನ್ನು ರಾಜ್ಯ ಸರಕಾರದ ಆಡಳಿತ ಯಂತ್ರಕ್ಕೆ ನೀಡಿದ್ದರು. ರಾಜ್ಯ ಸರಕಾರದ ಸಂಪೂರ್ಣ ಆಡಳಿತ ಯಂತ್ರ ಪ್ರತಿನಿತ್ಯ ಭುಜ್ ಮತ್ತು ಕಛ್ ಪ್ರಾಂತ್ಯದಲ್ಲಿ ಠಿಕಾಣಿ ಹೂಡಿ ಶರವೇಗದಲ್ಲಿ ನಗರದ ಮರುನಿರ್ಮಾಣ ಕೆಲಸಕ್ಕೆ ಕೈಹಾಕಿತ್ತು. ಸುಮಾರು 4 ಸಾವಿರ ಮೇಸಿಗಳು, 27 ಸಾವಿರ ಇಂಜಿನಿಯರ್‌ಗಳನ್ನು ಬಳಸಿಕೊಂಡು ನಗರ ಮರುನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿತ್ತು.

ಕೇವಲ ಒಂದು ವರ್ಷದಲ್ಲಿ ಹಾನಿಗೊಳಗಾಗಿದ್ದಂತಹ ಸುಮಾರು ಎಂಟು ಲಕ್ಷ ಮನೆಗಳನ್ನು ಕಟ್ಟುವಲ್ಲಿ ನರೇಂದ್ರ ಮೋದಿ ಸರಕಾರ ಯಶಸ್ವಿಯಾಗಿತ್ತು. 1995 ರಲ್ಲಿ ಜಪಾನಿನ ‘ಕೋಬೆ’ ನಗರದಲ್ಲಿ ಉಂಟಾದ ಭೂಕಂಪನದಲ್ಲಿ 1,34,000 ಮನೆಗಳು ಹಾನಿಗೊಳ ಗಾಗಿದ್ದವು. ಹಾನಿಗೊಳಗಾಗಿದ್ದ ಮನೆಗಳನ್ನು ಪುನರ್ ನಿರ್ಮಾಣ ಮಾಡಲು ಜಪಾನ್ ದೇಶ ನಾಲ್ಕು ವರ್ಷಗಳ ಸಮಯ ತೆಗೆದುಕೊಂಡಿತ್ತು. ಜಪಾನಿಗರಿಗಿಂತಲೂ ವೇಗವಾಗಿ ನರೇಂದ್ರ ಮೋದಿ ಸರಕಾರ ಗುಜರಾತಿನ ಜನರಿಗೆ ಆಶ್ರಯ ಕಲ್ಪಿಸುವಲ್ಲಿ ಯಶಸ್ವಿಯಾಗಿತ್ತು.

ಲೊಡ್ಡೆಗಳು ಹಾಗು ಕಾಂಗ್ರೆಸಿಗರು ‘ಗುಜರಾತ್ ಮಾಡೆಲ್’ ಬಗ್ಗೆ ಟೀಕೆ ಮಾಡುತ್ತಿರುತ್ತಾರೆ. ಅವರ ಟೀಕೆಗಳಿಗೆ ಗುಜರಾತಿಗರು ಚುನಾವಣೆಗಳ ಮೂಲಕ ಸಮರ್ಪಕವಾಗಿಯೇ ಉತ್ತರಿಸುತ್ತ ಬಂದಿದ್ದಾರೆ. ಮೋದಿಯವರು ಪಿಎಂ ಆದ ಮೇಲೆ ದೇಶದಲ್ಲಿ ಜಾರಿಗೆ ತಂದಿರುವ ಹಲವು ಯೋಜನೆಗಳ ಮೂಲವೇ ಗುಜರಾತ್. ತಂತ್ರಜ್ಞಾನದಲ್ಲಿ ಅತ್ಯಂತ ವೇಗವಾಗಿ ಹಲವು ಯೋಜನೆಗಳನ್ನು ಜಾರಿಗೆ ತಂದ ಮೋದಿಯವರ ಮೂಲ ಅಡಿಪಾಯ ಶುರುವಾದದ್ದೇ ಗುಜರಾತಿನಿಂದ.

2003ರಲ್ಲಿ ’SWAGATH’ ಯೋಜನೆಯ ಮೂಲಕ ತಂತ್ರಜ್ಞಾನವನ್ನು ಬಳಸಿಕೊಂಡು 2009ರ ವೇಳೆಗೆ ಸರಕಾರಿ ಸೇವೆಗಳನ್ನು ಗ್ರಾಮ ಪಂಚಾಯಿತಿ ಮಟ್ಟಕ್ಕೆ ವಿಸ್ತರಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. 2010ರ ಹೊತ್ತಿಗೆ ಗುಜರಾತಿನ ಸುಮಾರು 18 ಸಾವಿರ ಗ್ರಾಮಗಳಲ್ಲಿ ಇಂಟರ್ನೆಟ್ ಬ್ರಾಡ್ ಬ್ಯಾಂಡ್ ಸೇವೆಯನ್ನು ವಿಸ್ತರಿಸಲಾಗಿತ್ತು. ‘ಆಧಾರ್’ ಯೋಜನೆಯ ಜನಕ ನಂದನ್ ನೀಲೇಕಣಿ ಯವರು ಗುಜರಾತಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಸಿಎಂ ಆಗಿದ್ದ ನರೇಂದ್ರ ಮೋದಿಯವರು ತಮ್ಮ ಸಂಸ್ಥೆಯ ತಂತ್ರಜ್ಞಾನಗಳ ಬಗ್ಗೆ ತೋರಿಸಿದ ಆಸಕ್ತಿಯನ್ನು ಇಂದಿಗೂ ನೆನೆಯುತ್ತಾರೆ.

ತಮಗೆ ಅರ್ಧ ಘಂಟೆ ನೀಡಿದ್ದ ಅವಧಿಯನ್ನು ಎರಡು ಘಂಟೆಗಳ ಕಾಲ ವಿಸ್ತರಿಸಿದ್ದ ಮೋದಿಯವರ ಕಾರ್ಯವೈಖರಿಯನ್ನು ನಂದನ್ ನೀಲೇಕಣಿ ಮರೆತಿಲ್ಲ. ಗುಜರಾತ್‌ಗೆ ಬಂಡವಾಳವನ್ನು ಆಕರ್ಷಿಸಿ ಉದ್ಯೋಗ ಸೃಷ್ಟಿಸಲು ಮೋದಿಯವರು ಮೊಟ್ಟ ಮೊದಲ ಬಾರಿಗೆ ‘ವೈಬ್ರಾಂಟ್ ಗುಜರಾತ್’ ಸಮ್ಮೇಳನ ನಡೆಸಿದ್ದರು. ಮೋದಿ ಯವರು ಅಂದು ಆಯೋಜಿಸಿದ್ದ ಸಮ್ಮೇಳನದ ಮಾದರಿ ಯನ್ನು ದೇಶದ ನಾನಾ ರಾಜ್ಯಗಳು ಆಯೋಜಿಸಿ ತಮ್ಮ ರಾಜ್ಯಕ್ಕೆ ಬಂಡವಾಳ ಹರಿದು ಬರುವಂತೆ ಮಾಡಿವೆ. ಸ್ವತಃ
ಕಾಂಗ್ರೆಸ್ ಸರಕಾರ ‘ಬಂಡವಾಳ ಹೂಡಿಕೆದಾರರ ಸಮಾವೇಶ’ಗಳನ್ನು ಮಾಡಿದೆ.

ಅವರ ‘ಮಾಡೆಲ’ ಅನ್ನೇ ಕಾಪಿ ಮಾಡಿ ‘ಗುಜರಾತ್ ಮಾಡೆಲ್ ಎಂದರೇನು?’ ಎಂದು ಕೇಳುವ ವಿರೋಧಿಗಳನ್ನು ಯಾವ ಆಸ್ಪತ್ರೆಗೆ ಸೇರಿಸಬೇಕು ? ‘ಗುಜರಾತ್ ಮಾಡೆಲ’ನ ಮತ್ತೊಂದು ಪ್ರಮುಖ ಯೋಜನೆಯೆಂದರೆ ೨೦೦೩ ರ ‘ಕನ್ಯಾ ಕಲವಾನಿ’, ಈ ಯೋಜನೆಯಡಿಯಲ್ಲಿ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿತ್ತು. ಶಾಲೆಗಳಲ್ಲಿನ ಹಾಜರಾತಿ  ಯನ್ನು ಹೆಚ್ಚಿಸುವ ಸಲುವಾಗಿ ಹಳ್ಳಿಗಳಿಗೆ ತೆರಳಿ ಪೋಷಕರಲ್ಲಿ ಮಕ್ಕಳಿಗೆ ಶಿಕ್ಷಣದ ಅಗತ್ಯವನ್ನು ಮನವರಿಕೆ ಮಾಡಲಾಗು ತ್ತಿತ್ತು. ಬೇಸಿಗೆ ರಜೆಯ ಸಂದರ್ಭದಲ್ಲಿ ರಾಜ್ಯದ ಶಿಕ್ಷಣ ಇಲಾಖೆಯ ಅಧಿಕಾರಿಗಳು ಹಳ್ಳಿಗಳಿಗೆ ತೆರಳಿ ಹೆಣ್ಣುಮಕ್ಕಳ ಶಿಕ್ಷಣದ ಬಗ್ಗೆ ಜಾಗೃತಿ ಮೂಡಿಸುತ್ತಿದ್ದರು.

ಸರಕಾರದ ಪ್ರಯತ್ನ ಫಲ ನೀಡಿತ್ತು, ಹಲವು ಶಾಲೆಗಳಲ್ಲಿ ಹಾಜರಾತಿಯ ಪ್ರಮಾಣ ಶೇ.100ನ್ನು ತಲುಪಿತ್ತು. ಹತ್ತು ಸರಕಾರೀ ಶಾಲೆಗಳನ್ನು ಅಭಿವೃದ್ಧಿಪಡಿಸಿ ತಾವೇನೋ ಬಹುದೊಡ್ಡ ಘನಕಾರ್ಯ ಮಾಡಿದ್ದೇವೆಂದು ಪ್ರಚಾರ ಮಾಡುವ ಆಮ್ ಆದ್ಮಿ ಪಕ್ಷ ಅಸ್ತಿತ್ವಕ್ಕೆ ಬರುವ ೧೦ ವರ್ಷಗಳ ಹಿಂದೆಯೇ ಮೋದಿ ಗುಜರಾತಿನಲ್ಲಿ ಸಾಕ್ಷರತೆಯ ಪ್ರಮಾಣವನ್ನು ಹೆಚ್ಚಿಸುವಲ್ಲಿ ಯಶಸ್ವಿಯಾಗಿದ್ದರು.

ನೀರಾವರಿಯ ವಿಷಯದಲ್ಲಿ ‘ಗುಜರಾತ್ ಮಾಡೆಲ್’ ಹೊಸದೊಂದು ಟ್ರೆಂಡ್ ಸೆಟ್ ಮಾಡಿತ್ತು. ಮೊಟ್ಟಮೊದಲ ಬಾರಿಗೆ ‘GIS’ ಆಧಾರಿತ ತಂತ್ರಜ್ಞಾನವನ್ನು ಬಳಸಿಕೊಂಡು ಸ್ಯಾಟಲೈಟ್ ಮೂಲಕ ನೀರಿಲ್ಲದ ಪ್ರದೇಶಗಳನ್ನು ಗುರುತಿಸಿ, ರೈತರಿಗೆ ನರ್ಮದಾ ನದಿಯ ಮೂಲಕ ನೀರಾವರಿ ವ್ಯವಸ್ಥೆ ಕಲ್ಪಿಸುವ ಯೋಜನೆಯನ್ನು ಜಾರಿಗೆ ತರಲಾಯಿತು. ಈ ಯೋಜನೆಯಿಂದ ಸುಮಾರು 250000 ರೈತ ಕುಟುಂಬಗಳಿಗೆ ಅನುಕೂಲವಾಗಿತ್ತು ಹಾಗೂ ಸುಮಾರು 708000 ಹೆಕ್ಟೇರ್ ಕೃಷಿ ಭೂಮಿಗೆ ನೀರಾವರಿಯನ್ನು ಕಲ್ಪಿಸಲಾಗಿತ್ತು. ನರ್ಮದಾ ನದಿಗೆ ಅಡ್ಡಲಾಗಿ ಆಣೆಕಟ್ಟು ನಿರ್ಮಾಣ ಮಾಡಿ ರೈತರಿಗೆ ಉಪಯೋಗ ವಾಗುವ ಯೋಜನೆಗೆ ಅಡ್ಡಿ ಪಡಿಸಿದ್ದವರ ಜತೆಗೆ ರಾಹುಲ್ ಗಾಂಧೀ ಹೆಜ್ಜೆ ಹಾಕುವ ಮೂಲಕ ಗುಜರಾತ್ ಮಾಡೆಲ ಬಗ್ಗೆ ಪ್ರಶ್ನಿಸಿದ್ದರು.

ಪರಿಸರದ ನೆಪದಲ್ಲಿ ಬಹುದೊಡ್ಡ ನೀರಾವರಿ ಯೋಜನೆಯೊಂದಕ್ಕೆ ಕಲ್ಲು ಹಾಕುವ ಕೆಲಸ ಮಾಡಿದವರನ್ನು ಗುಜರಾತಿನ
ರೈತರು ಹೇಗೆ ತಾನೇ ಕ್ಷಮಿಸುತ್ತಾರೆ? ಗುಜರಾತಿಗಳೆಂದರೆ ಕೇವಲ ವ್ಯವಹಾರಸ್ಥರೆಂಬ ಒಂದು ಕಲ್ಪನೆಯಿದೆ, ಆದರೆ ವ್ಯವಹಾರದ ಜತೆಗೆ ಗುಜರಾತಿನ ಜನ ಕ್ರೀಡೆಯಲ್ಲಿಯೂ ಮಿಂಚುವಂತೆ ಮಾಡಿದ್ದು ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿಯವರು. ತಮ್ಮ ಅಧಿಕಾರಾವಧಿಯಲ್ಲಿ ‘ಖೇಲೋ ಕುಂಭಮೇಳ’ಗಳನ್ನು ಆಯೋಜಿಸಿ ಗುಜರಾತಿನಾದ್ಯಂತ ಸಾವಿರಾರು ಕ್ರೀಡಾಪಟುಗಳನ್ನು ಮುಖ್ಯವಾಹಿನಿಗೆ ತರುವಲ್ಲಿ ಯಶಸ್ವಿಯಾಗಿದ್ದರು.

ತಾವು ಪ್ರಧಾನಮಂತ್ರಿಯಾದ ನಂತರ ದೇಶದಾದ್ಯಂತ ಇದೇ ಮಾದರಿಯನ್ನು ಜಾರಿಗೆ ತಂದಿದ್ದರ ಪರಿಣಾಮವನ್ನು ಒಲಿಂಪಿಕ್, ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಕಣ್ಣಾರೆ ಕಂಡಿದ್ದೇವೆ. ತನ್ನ ಗುಜರಾತ್ ಮಾಡೆಲನಲ್ಲಿ ಕ್ರೀಡೆಯನ್ನೂ ಸೇರಿಸಿದ ಮೋದಿ ಯವರ ದೂರದೃಷ್ಟಿ ಸ್ಪಷ್ಟವಾಗಿತ್ತು. 2013ರಲ್ಲಿ ನರೇಂದ್ರ ಮೋದಿಯವರು ಗುಜರಾತಿನ ಮುಖ್ಯಮಂತ್ರಿಯಾಗಿದ್ದ
ಸಂದರ್ಭದಲ್ಲಿ ತೈವಾನ್ ದೇಶಕ್ಕೆ ಭೇಟಿ ನೀಡಿದ್ದರು. ತೈವಾನ್ ದೇಶದ ಪ್ರಮುಖ ನಾಯಕರೊಬ್ಬರ ಜತೆ ಮಾತನಾಡುತ್ತಿ
ರುವಾಗ, ಆ ನಾಯಕರು ಮೋದಿಯವರನ್ನು ಭಾರತದ ಜನ ಇಂದಿಗೂ ‘ಹಾವು’ಗಳನ್ನು ಚೆನ್ನಾಗಿ ಆಡಿಸುವುದರಲ್ಲಿಯೇ
ಪ್ರವೀಣರಾಗಿದ್ದರಾ ಅಥವಾ ಬದಲಾಗಿದ್ದಾರಾ? ಎಂಬ ಕೊಂಕಿನ ಪ್ರಶ್ನೆಯನ್ನು ಕೇಳುತ್ತಾನೆ.

ಆಗ ನರೇಂದ್ರ ಮೋದಿ ಯವರು ಭಾರತೀಯ ಯುವಜನತೆ ಈಗ ‘ಹಾವು’ಗಳನ್ನು ಆಡಿಸುವುದನ್ನು ಬಿಟ್ಟಿದ್ದಾರೆ, ಆದರೆ ’ಇಲಿ’ ಆಡಿಸುವುದನ್ನು ಕಲಿತ್ತಿದ್ದಾರೆಂದು ಹೇಳುತ್ತಾರೆ. ಮೋದಿಯವರ ಈ ಒಗಟ್ಟಿನ ಮಾತು ಆ ನಾಯಕನಿಗೆ ಅರ್ಥವಾಗುವುದಿಲ್ಲ, ಆಗ ಮತ್ತೊಮ್ಮೆ ತಮ್ಮ ಮಾತನ್ನು ವಿವರಿಸಿ ಎಂದು ಕೇಳಿಕೊಂಡಾಗ ಮೋದಿ ಹೇಳಿದ ಮಾತುಗಳಿವು, ’ಭಾರತೀಯ ಯುವಜನರು ತಮ್ಮ ಕೈಗಳಲ್ಲಿ ‘ಕಂಪ್ಯೂಟರ್ ಇಲಿ’ಗಳನ್ನು ಹಿಡಿದು ತಂತ್ರಜ್ಞಾನ ಕ್ಷೇತ್ರದಲ್ಲಿ ಇಡೀ ಜಗತ್ತನ್ನೇ ಅಳುತ್ತಿದ್ದರೆಂದು
ಹೇಳುತ್ತಾರೆ’.

ಭಾರತವೆಂದರೆ ‘ಹಾವಾಡಿಗ’ರ ದೇಶವೆಂದು ಇಡೀ ಜಗತ್ತಿಗೆ ತೋರಿಸಿದ ನೆಹರು ವಂಶಸ್ಥರು, ಮೋದಿಯವರ ’ಗುಜರಾತ್ ಮಾಡೆಲ’ಬಗ್ಗೆ ಮಾತನಾಡುತ್ತಾರೆ. ಪ.ಬಂಗಾಳ ಸರಕಾರ ಟಾಟಾ ಸಂಸ್ಥೆಯ ‘ನ್ಯಾನೋ’ ಕಾರ್ ಉತ್ಪಾದನೆಗೆ ಹೆಚ್ಚು ಸ್ಪಂದಿಸದ ಕಾರಣ ಗುಜರಾತ್‌ಗೆ ತನ್ನ ಉತ್ಪಾದನಾ ಘಟಕವನ್ನು ವರ್ಗಾಯಿಸಿತ್ತು. ಜಗತ್ತಿನಲ್ಲಿ ಬೇಡಿಕೆಯಿರುವ ಸೆಮಿ ಕಂಡಕ್ಟರ್ ಚಿಪ್‌ಗಳ ಉತ್ಪಾದನಾ ಘಟಕವನ್ನು ವೇದಾಂತ ಸಂಸ್ಥೆಯು ಗುಜರಾತಿನಲ್ಲಿ ಆರಂಭಿಸಲು ಮುಂದಾಗಿದೆ. ಅದಾನಿ ಸಮೂಹ ಸಂಸ್ಥೆಯ ನೂರಾರು ಕಂಪನಿಗಳು ಗುಜರಾತಿನಲ್ಲಿ ಲಕ್ಷಾಂತರ ಜನರಿಗೆ ಉದ್ಯೋಗ ನೀಡುವಲ್ಲಿ ಯಶಸ್ವಿಯಾಗಿದೆ. ಅತ್ತ ರಿಲಾಯನ್ಸ್ ಸಮೂಹ ಸಂಸ್ಥೆಯ ಹತ್ತಾರು ಕಂಪನಿಗಳು ಗುಜರಾತಿನಲ್ಲಿ ಲಕ್ಷಾಂತರ ಜನರಿಗೆ ಉದ್ಯೋಗ ನೀಡಿವೆ.

ಅಂಬಾನಿ ಹಾಗೂ ಅದಾನಿಯನ್ನು ಕೇವಲ ತಮ್ಮ ರಾಜಕೀಯಕ್ಕಾಗಿ ಉಪಯೋಗಿಸಿಕೊಳ್ಳುವ ಮೋದಿ ವಿರೋಧಿಗಳಿಗೆ ವಾಸ್ತವದ ಅರಿವೇ ಇಲ್ಲ. ಪ್ರಧಾನಿಯಾದ ನಂತರ ಭಾರತದ ಇತಿಹಾಸದಲ್ಲಿ ಮುಚ್ಚಿಟ್ಟಲ್ಪಟ್ಟ ಹಲವು ಸ್ವಾತಂತ್ರ್ಯ ಹೋರಾಟ ಗಾರರಿಗೆ ನ್ಯಾಯ ಒದಗಿಸಿಕೊಡುತ್ತಿರುವ ನರೇಂದ್ರ ಮೋದಿಯವರ ಕಾರ್ಯ ಗುಜರಾತಿನಿಂದಲೇ ಶುರುವಾಗಿತ್ತು. ಗುಜರಾತಿನ ಪ್ರಮುಖ ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ಶ್ಯಾಮ್ ಜಿ ವರ್ಮ, 1930ರ ದಶಕದಲ್ಲಿ ಲಂಡನ್ನಿಗೆ ಬರುವ ಭಾರತೀಯ ಹೋರಾಟಗಾರರಿಗೆ ಆಶ್ರಯ ನೀಡುತ್ತಿದ್ದರು.

ನೂರಾರು ಹೋರಾಟಗಾರಿಗೆ ಬೇಕಾದಂತಹ ಆರ್ಥಿಕ ಸಹಾಯವನ್ನು ಮಾಡುತ್ತಿದ್ದರು. ಬ್ರಿಟಿಷರ ವಿರುದ್ಧ ಸೆಟೆದು ನಿಂತ ಯುವ ಪಡೆಯ ಆಶ್ರಯದಾತರಾಗಿದ್ದ ಶ್ಯಾಮ್ ಜಿ ವರ್ಮ, ತಾವು ಮರಣರಾದ ನಂತರ, ತಮ್ಮ ಅಸ್ತಿಯನ್ನು ಭಾರತದಲ್ಲಿಯೇ
ಬಿಡಬೇಕೆಂದು ಹೇಳಿ ನಿಧನ ಹೊಂದಿದ್ದರು. ಅವರು ನಿಧನರಾದ ನಂತರ ಅವರ ಅಸ್ತಿಯನ್ನು ಗುಜರಾತಿಗೆ ತರಿಸುವ
ಕೆಲಸವನ್ನು ಕಾಂಗ್ರೆಸ್ ಪಕ್ಷ ಮಾಡಿರಲಿಲ್ಲ.

ಆದರೆ ನರೇಂದ್ರ ಮೋದಿಯವರು ಗುಜರಾತಿನ ಮುಖ್ಯಮಂತ್ರಿಯಾದ ನಂತರ ಅವರ ಅಸ್ತಿಯನ್ನು ತರಿಸಿ ಗುಜರಾತಿ ನಾದ್ಯಂತ ಯಾತ್ರೆಯ ಮೂಲಕ ಸಂಚರಿಸುವಂತೆ ಮಾಡಿದ್ದರು. ಸುಮಾರು 2029 ಕಿಲೋಮೀಟರುಗಳ ದೂರ ಶ್ಯಾಮ್ ಜಿ
ವರ್ಮರ ಆಸ್ತಿಯನ್ನು ಯಾತ್ರೆಯ ಮೂಲಕ ಗುಜರಾತಿನ ಜನತೆಗೆ ಮುಟ್ಟಿಸುವಲ್ಲಿ ಮೋದಿಯವರು ಯಶಸ್ವಿಯಾಗಿದ್ದರು. ಭಾರತವನ್ನು ಒಗ್ಗೂಡಿಸಿದ ಸರ್ದಾರ್ ವಲ್ಲಭಾಯಿ ಪಟೇಲ್‌ರ ‘ಏಕತೆಯ ಪ್ರತಿಮೆ’ಯನ್ನು ಗುಜರಾತಿನಲ್ಲಿ ನಿರ್ಮಿಸಲು ದೇಶದಾದ್ಯಂತ ಕಬ್ಬಿಣದ ಸಂಗ್ರಹದ ಅಭಿಯಾನವನ್ನು ನರೇಂದ್ರ ಮೋದಿಯವರು ಗುಜರಾತಿನಿಂದಲೇ ಪ್ರಾರಂಭಿಸಿದ್ದರು.

ವಿರೋಧಿಗಳು ಮುಚ್ಚಿಹಾಕಿದ್ದ ನೂರಾರು ಸ್ವಾತಂತ್ರ್ಯ ಹೋರಾಟಗಾರರ ಇತಿಹಾಸವನ್ನು ಪ್ರತಿಮೆಗಳ ಮೂಲಕ ದೇಶದಾ ದ್ಯಂತ ವಿಸ್ತರಿಸುವ ಅಡಿಪಾಯಕೆ ಮೂಲ ಮತ್ತದೇ ‘ಗುಜರಾತ್ ಮಾಡೆಲ್’. ನರೇಂದ್ರ ಮೋದಿಯವರ ಗುಜರಾತ್ ಮಾಡೆಲ ಅನ್ನು ಮುಚ್ಚಿ ಹಾಕಲು ಕಾಂಗ್ರೆಸಿನ ಅಹ್ಮದ್ ಪಟೇಲ್ ಹಾಗೂ ಅಂಟೋನಿಯೋ ಮೈನೋ ಮಾಡಿದ ಕೆಲಸಗಳು ಒಂದೆರಡಲ್ಲ.

ಗೋಧ್ರಾ ಹತ್ಯಾಕಾಂಡವನ್ನು ಸಂಪೂರ್ಣವಾಗಿ ಮೋದಿಯವರ ತಲೆಗೆ ಕಟ್ಟುವ ದೊಡ್ಡ ಹುನ್ನಾರವೇ ತೀಸ್ತಾ ಸೆಟಲ್ ವಾಡಳ ಮೂಲಕ ನಡೆಯಿತು. ಲೊಡ್ಡೆಗಳ ಪಟಾಲಂ ಜಗತ್ತಿಗೆ ಮೋದಿಯವರನ್ನು ‘ನರಹಂತಕ’ರನೆಂಬಂತೆ ಬಿಂಬಿಸುವ ಪ್ರಯತ್ನ ಮಾಡಿತ್ತು. ಇಶ್ರತ್ ಜಹಾನ್ ಎನ್‌ಕೌಂಟರ್ ವಿಷಯದಲ್ಲಿ ಸುಳ್ಳು ಆರೋಪಗಳ ಸರಮಾಲೆಯನ್ನೇ ಮಾಡಿ ಮತ್ತೊಂದು ಸುತ್ತಿನ ಮಸಿ ಬಳಿಯುವ ಕೆಲಸವನ್ನು ಮಾಡಲಾಯಿತು.

ಅಂದು ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್, ಸರಕಾರಿ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡು ಮೋದಿ ಹಾಗೂ ಅಮಿತ್ ಶಾರ ಮೇಲೆ ಎರಗಿತ್ತು. ವಿರೋಧಿಗಳು ಎಸೆದ ಕಲ್ಲುಗಳನ್ನೇ ಬಳಸಿಕೊಂಡು ನರೇಂದ್ರ ಮೋದಿ ವಿಶ್ವನಾಯಕ ನಾಗಿ ಬೆಳೆದರು. ಸುಳ್ಳುಗಳ ಸರಮಾಲೆಗಳಿಂದಲೇ ರಾಜಕೀಯ ನಡೆಸಿದ ಕಾಂಗ್ರೆಸ್ ಇಂದು ಗುಜರಾತಿನಲ್ಲಿ ಹೀನಾಯವಾಗಿ ಸೋತಿದೆ. ಅರವಿಂದ್ ಕೇಜ್ರಿವಾಲರ ಬಿಟ್ಟಿ ಸವಲತ್ತುಗಳ ಭರವಸೆಯನ್ನು ಗುಜರಾತಿನ ಜನ ’ಗುಜರಿ’ಗೆ ಹಾಕುವ ಮೂಲಕ ತಕ್ಕ ಪಾಠ ಕಲಿಸಿದ್ದಾರೆ.

ಮೂರು ದಶಕಗಳ ಆಡಳಿತದ ನಂತರವೂ ಗುಜರಾತಿನ ಜನ ಮೋದಿಯವರ ‘ಗುಜರಾತ್ ಮಾಡೆಲ್’ ಮರೆಯದೇ
ಭಾರತೀಯ ಜನತಾ ಪಕ್ಷಕ್ಕೆ ಮತ್ತೊಮ್ಮೆ ಅಧಿಕಾರ ನೀಡಿದ್ದಾರೆ.