ತಿಳಿರು ತೋರಣ
ಶ್ರೀವತ್ಸ ಜೋಶಿ
srivathsajoshi@yahoo.com
ಕನ್ನಡದ ಮಟ್ಟಿಗೆ ಹೊಚ್ಚಹೊಸದು ಮತ್ತು ಪ್ರಪ್ರಥಮ ಎನ್ನಬಹುದಾದ ಬೃಹತ್ ಗ್ರಂಥವೊಂದು ಈ ವಾರಾಂತ್ಯ ಅಮೆರಿಕದಲ್ಲಿ ಬಿಡುಗಡೆ ಯಾಗುತ್ತಿದೆ. ಇದರ ಹೆಸರು ‘ಅಮೆರಿಕನ್ ಜಾನಪದ: ಕನ್ನಡ ಕಂಗಳಿಗೆ ಕಂಡಂತೆ’. ಅಕ್ಷರಪ್ರೇಮಿ ಅಮೆರಿಕನ್ನಡಿಗರು ದಕ್ಷಿಣೋತ್ತರ ಅಮೆರಿಕ ಖಂಡಗಳ ಜಾನಪದ ಲೋಕವನ್ನು, ಮೂಲನಿವಾಸಿಗಳ ಜೀವನವೈವಿಧ್ಯವನ್ನು ಅಭ್ಯಸಿಸಿ, ಅಕ್ಷರರೂಪಕ್ಕಿಳಿಸಿ, ಒಂದು ಮಾಹಿತಿ ಕೋಶದಂತೆ ವಿಶ್ವಕನ್ನಡಿಗರಿಗೆ ಅರ್ಪಿಸುತ್ತಿರುವ ಸುಂದರ ಕಲಾಕೃತಿ.
ಅ ಮೆರಿಗೊ ವೆಸ್ಪುಚಿ ಹೆಸರಿನ ಇಟಾಲಿಯನ್ ನಾವಿಕ ಸಂಶೋಧಕ ಕ್ರಿ.ಶ ೧೫೦೦ರ ಆಸುಪಾಸಿನಲ್ಲಿ ಈಗಿನ ದಕ್ಷಿಣೋತ್ತರ ಅಮೆರಿಕ ಭೂಭಾಗಕ್ಕೆ ತಲುಪಿದನಷ್ಟೇ ಅಲ್ಲದೆ ಅದರ ನಕ್ಷೆಯ ಕಲ್ಪನೆ ಸಹ ಮಾಡಿದ್ದರಿಂದ ಆ ಖಂಡಗಳಿಗೆ ‘ಅಮೆರಿಕಾ’ ಎಂದು ಹೆಸರಾಯಿತು. ವೆಸ್ಪುಚಿಗಿಂತಲೂ ಮೊದಲೇ ಕ್ರಿಸ್ಟೋಫರ್ ಕೊಲಂಬಸ್ ಎಂಬ ಇನ್ನೊಬ್ಬ ಇಟಾಲಿಯನ್ ನಾವಿಕನು ಯುರೋಪ್‌ನಿಂದ ಹೊರಟು ಅಟ್ಲಾಂಟಿಕ್ ಸಾಗರವನ್ನು ದಾಟಿ ಇದೇ ಭೂಭಾಗವನ್ನು ಪತ್ತೆ ಹಚ್ಚಿದ್ದನು.
ಈ ನಾವಿಕರದು ಮೂಲತಃ ಇಂಡಿಯಾ(ಭಾರತ) ವನ್ನು ತಲುಪುವ ಉದ್ದೇಶ ವಿತ್ತಾದ್ದರಿಂದ, ತಾವು ತಲುಪಿದ ಭೂಪ್ರದೇಶವೇ ಇಂಡಿಯಾ ಎಂದು ಭಾವಿಸಿ ಇಲ್ಲಿನ ನಿವಾಸಿಗಳನ್ನು ಅವರು ‘ಇಂಡಿಯನ್ಸ್’ ಎಂದು ಕರೆದರು. ಬಹುಶಃ ಈ ಮೂರು ಅಂಶಗಳನ್ನು ನಾವೆಲ್ಲರೂ ಏಳನೆಯ ತರಗತಿಯಲ್ಲಿ ಚರಿತ್ರೆ/ಭೂಗೋಳ ಪಠ್ಯದಲ್ಲಿ ಓದಿ ತಿಳಿದುಕೊಂಡಿದ್ದೇವೆ; ಪರೀಕ್ಷೆಯಲ್ಲಿ ಒಂದು ಅಂಕದ ಪ್ರಶ್ನೆಗೆ ಉತ್ತರವಾಗಿ ಗಟ್ಟು ಹೊಡೆದಿದ್ದೇವೆ ಕೂಡ. ಆಮೇಲೆ ಹಿಸ್ಟರಿ ಎಂಎ ಮಾಡಿದ ಕೆಲವರಷ್ಟೇ ವರ್ಲ್ಡ್ ಹಿಸ್ಟರಿ ಓದುತ್ತ ಅಮೆರಿಕಾ ಖಂಡಗಳ ಬಗ್ಗೆ ಅಲ್ಲಿನ ಮೂಲನಿವಾಸಿಗಳ ಬಗ್ಗೆ ಮತ್ತೊಂದಿಷ್ಟು ವಿವರಗಳನ್ನು ಓದಿರುವ ಸಾಧ್ಯತೆಯಿದೆ.
ಉಳಿದಂತೆ ಎಲ್ಲರಿಗೂ ಅಮೆರಿಗೊ ವೆಸ್ಪುಚಿ, ಕ್ರಿಸ್ಟೋಫರ್ ಕೊಲಂಬಸ್, ರೆಡ್ ಇಂಡಿಯನ್ಸ್- ಈ ಮೂರು ಪಾಯಿಂಟುಗಳು ಮಾತ್ರ ಅಮೆರಿಕದ ಬಗೆಗಿನ ಪ್ರಾಥಮಿಕ ಜ್ಞಾನ. ಆ ಕಾಲದಲ್ಲಿ ಅದು ಧಾರಾಳವಾಗಿ ಸಾಕಾಗುತ್ತಿತ್ತು. ಆಧುನಿಕ ಕಾಲಮಾನದ ವಿಚಾರ ಬಿಡಿ ‘ತಿಣುಕಿದನು ಫಣಿರಾಯ ಅಮೆರಿಕಾ ಪ್ರವಾಸಕಥನಗಳ ಭಾರದಲಿ’ ಎನ್ನುವಷ್ಟು ಅಮೆರಿಕವನ್ನು ಬಣ್ಣಿಸಿರುವ ಪ್ರವಾಸಸಾಹಿತ್ಯ ರಚನೆ ಯಾಗಿದೆ. ನಯಾಗರಾ ಫಾಲ್ಸ್, ಸ್ಟಾಚ್ಯೂ ಆಫ್ ಲಿಬರ್ಟಿ, ಗ್ರ್ಯಾಂಡ್ ಕಾನ್ಯನ್, ಡಿಸ್ನಿ ವರ್ಲ್ಡ್, ಹಾಲಿವುಡ್, ಲಾಸ್‌ವೇಗಾಸ್ ಮತ್ತಿತರ ಥಳಕು ಬಳುಕುಗಳು ಕಣ್ಣಿಗೆಕಟ್ಟುವಂತೆ ವರ್ಣನೆಯಾಗಿವೆ. ಸಾಹಿತ್ಯ ದಲ್ಲಿ, ಸಿನಿಮಾಗಳಲ್ಲಿ, ಈಗಂತೂ ಇಂಟರ್‌ನೆಟ್ ಜಮಾನಾದ ‘ವಿಶ್ವಗ್ರಾಮ’ ಕಲ್ಪನೆಯಲ್ಲಿ ಅಮೆರಿಕ ಅಂದರೆ ಪಕ್ಕದ್ಮನೆ ಎನ್ನುವಷ್ಟು ಹತ್ತಿರವಾಗಿದೆ.
ಇದನ್ನೇಕೆ ಈಗ ಹೇಳುತ್ತಿದ್ದೇನೆಂದರೆ, ಮೇಲೆ ವಿವರಿಸಿದ್ದಕ್ಕೆ ಭಿನ್ನವಾಗಿ ಕನ್ನಡದ ಮಟ್ಟಿಗೆ ಹೊಚ್ಚಹೊಸದು ಮತ್ತು ಪ್ರಪ್ರಥಮ ಎನ್ನಬಹು ದಾದ ಬೃಹತ್ ಗ್ರಂಥವೊಂದು ಈ ವಾರಾಂತ್ಯದಲ್ಲಿ ಇಲ್ಲಿ ಅಮೆರಿಕದಲ್ಲಿ ಬಿಡುಗಡೆಯಾಗುತ್ತಿದೆ. ಇದರ ಹೆಸರು ‘ಅಮೆರಿಕನ್ ಜಾನಪದ: ಕನ್ನಡ ಕಂಗಳಿಗೆ ಕಂಡಂತೆ’. ಅಕ್ಷರ ಪ್ರೇಮಿ ಅಮೆರಿಕನ್ನಡಿಗರು ದಕ್ಷಿಣೋತ್ತರ ಅಮೆರಿಕ ಖಂಡಗಳ ಜಾನಪದ ಲೋಕವನ್ನು, ಇಲ್ಲಿಯ ಮೂಲನಿವಾಸಿಗಳ ಜೀವನವೈವಿಧ್ಯವನ್ನು ಅಭ್ಯಸಿಸಿ, ತಾವು ತಿಳಿದುಕೊಂಡಿದ್ದನ್ನು ಅಕ್ಷರರೂಪಕ್ಕಿಳಿಸಿ, ಒಂದು ಮಾಹಿತಿ ಕೋಶದಂತೆ ವಿಶ್ವಕನ್ನಡಿಗರಿಗೆ ಅರ್ಪಿಸುತ್ತಿರುವ ಸುಂದರ ಕಲಾಕೃತಿ.
ಇಲ್ಲ, ಇದನ್ನು ಮಾಹಿತಿ ಕೋಶ ಅಥವಾ ಎನ್‌ಸೈಕ್ಲೊಪಿಡಿಯಾ ಎನ್ನುವುದಕ್ಕಿಂತ ‘ಕೆಲೈಡೊಸ್ಕೋಪ್’ಗೆ ಹೋಲಿಸುವುದು ಒಳ್ಳೆಯದು. ಏಕೆಂದರೆ ಇದು ಎನ್‌ಸೈಕ್ಲೊಪಿಡಿಯಾದಂತೆ ಸಮಗ್ರವೇನಲ್ಲ; ಎನ್‌ಸೈಕ್ಲೊಪಿಡಿ ಯಾದಂತೆ ಬರೀ ಶುಷ್ಕವೂ ಅಲ್ಲ. ನಿಮಗೆ ಕೆಲೈಡೊ ಸ್ಕೋಪ್ ಗೊತ್ತಲ್ಲ, ಅದೇ- ಉದ್ದದ ಟೊಳ್ಳು ನಳಿಗೆಯ ಒಂದು ತುದಿಯಲ್ಲಿ ಬಣ್ಣಬಣ್ಣದ ಗಾಜಿನ ಚೂರುಗಳು, ಇನ್ನೊಂದು ತುದಿ
ಯಲ್ಲಿ ಮಸೂರ, ನಳಿಗೆಯನ್ನು ತಿರುಗಿಸುತ್ತ ನೋಡುತ್ತಿದ್ದರೆ ವಿಧವಿಧದ ವರ್ಣಮಯ ವಿನ್ಯಾಸಗಳು, ಕಣ್ಮನ ತಣಿಸುವ ಚಿತ್ತಾರಗಳು. ಈ ಗ್ರಂಥದ ಪುಟಗಳನ್ನು ತಿರುವಿದಾಗಲೂ ಅದೇ ಅನುಭವ.
‘ಲೇಖನ ಸಂಗ್ರಹವನ್ನು ಮೊದಲಿಂದ ಕೊನೆಯತನಕ ಓದಿದಾಗ ಒಂದು ರಮ್ಯಾತಿರಮ್ಯಲೋಕಕ್ಕೆ ಹೋಗಿ ವಿಹರಿಸಿ ಬಂದ ಅನುಭವ ವಾಯಿತು…’ ಎಂದು ಡಾ.ಗುರುಪ್ರಸಾದ್ ಕಾಗಿನೆಲೆ ಈ ಗ್ರಂಥದ ಬಗೆಗಿನ ಸಹಸ್ಪಂದನದಲ್ಲಿ, ಗ್ರಂಥದಲ್ಲೇ ಅನುಬಂಧವಾಗಿ ಅಳವಡಿಸಿಕೊಳ್ಳಲಾಗಿರುವ ಲೇಖನದಲ್ಲಿ, ಹೇಳಿದ್ದೂ ಅದನ್ನೇ. ಅಕ್ಷರಗಳಿಂದಲೇ (ತೀರ ಅಗತ್ಯವಿರುವಲ್ಲಿ ಮಾತ್ರ ಒಂದಿಷ್ಟು ಚಿತ್ರಗಳು) ಅಂತಹ ರಮ್ಯಾತಿರಮ್ಯ ಲೋಕದ ಸೃಷ್ಟಿಗೆ ಕಾರಣರಾದ ಅನಿವಾಸಿ ಕನ್ನಡಿಗ ಬರಹಗಾರರು, ಅವರೆಲ್ಲರ ಬರಹಗಳೆಂಬ ವರ್ಣಮಯ ಗಾಜಿನ ಚೂರುಗಳನ್ನು ಅಂಟಿಸಿ ಪುಸ್ತಕವೆಂಬ ಕೆಲೈಡೊಸ್ಕೋಪ್ ರಚಿಸಿದ ಡಾ.ಮೈ.ಶ್ರೀ.ನಟರಾಜ ಮತ್ತು ಜ್ಯೋತಿ ವೆಂಕಟಸುಬ್ರಹ್ಮಣ್ಯ ನೇತೃತ್ವದ ಸಂಪಾದಕ ಮಂಡಲಿ ಅಭಿನಂದನಾರ್ಹರು.
ಇದು ಕನ್ನಡ ಸಾರಸ್ವತ ಲೋಕಕ್ಕೆ ಅಮೆರಿಕದ ‘ಕನ್ನಡ ಸಾಹಿತ್ಯ ರಂಗ (ಕಸಾರಂ)’ದ ಹೊಸ ಕೊಡುಗೆ. ಕಸಾರಂ ಬಗ್ಗೆ ಈ ಹಿಂದೆಯೂ ಒಂದೆರಡು ಸಲ ಇದೇ ಅಂಕಣದಲ್ಲಿ ಬರೆದಿದ್ದೇನೆ. ಅಮೆರಿಕನ್ನಡಿಗರಿಗೆ ಸಂಬಂಽಸಿದಂತೆ ನಿಮಗೆ ‘ಅಕ್ಕ’, ‘ನಾವಿಕ’ ಸಂಘಟನೆಗಳ ಹೆಸರು ಹೆಚ್ಚು ಪರಿಚಿತವಿರುವ, ‘ಕಸಾರಂ’ ಅಷ್ಟೇನೂ ಗೊತ್ತಿಲ್ಲದಿರುವ ಸಾಧ್ಯತೆಯೇ ಹೆಚ್ಚು. ಅದು ಸಹಜ ಕೂಡ. ಹೇಳಿಕೇಳಿ ಇದು ಸಾಹಿತ್ಯಪ್ರೇಮಿ ಮೃದುಮನಸಿಗರ ಪುಟ್ಟ ಬಳಗ. ಹೃದಯದೊಳಗೆ ಕನ್ನಡ ನುಡಿಪ್ರೇಮವನ್ನು ಬೆಚ್ಚಗೆ ಇಟ್ಟುಕೊಂಡಿರುವ, ಹಲವಾರು ವರ್ಷಗಳಿಂದ ಅಮೆರಿಕದಲ್ಲಿ ನೆಲೆಸಿದ್ದರೂ, ಪ್ರತಿದಿನವೂ ಒಂದಿಷ್ಟಾದರೂ ಕನ್ನಡ ಅಕ್ಷರಗಳ ಓದು-ಬರಹವನ್ನು ನಿತ್ಯಕೈಂಕರ್ಯದಂತೆ ಮಾಡಿಕೊಂಡು ಬಂದಿರುವ, ಸಮಾನಾಭಿರುಚಿಯ ಅಮೆರಿಕನ್ನಡಿಗರ ವೇದಿಕೆ.
ಎಚ್.ವೈ.ರಾಜಗೋಪಾಲ್ (ಈಗ ನಮ್ಮೊಂದಿಗಿಲ್ಲ) ಅವರ ಕಲ್ಪನೆಯ ಕೂಸು. ನಾಗ ಐತಾಳ, ಮೈ.ಶ್ರೀ.ನಟರಾಜ, ನಳಿನಿ ಮೈಯ ಮುಂತಾದ ಹಿರಿತಲೆಮಾರಿನ ಅಮೆರಿಕನ್ನಡಿಗರು ನೀರುಣಿಸಿ ಬೆಳೆಸಿದ, ಈಗ ಹೊಸಬರನೇಕರೂ ಸೇರಿ ಮುನ್ನಡೆಸುತ್ತಿರುವ ಸಂಘಟನೆ. ಅಮೆರಿಕನ್ನಡಿಗರ ಸಾಹಿತ್ಯಾಸಕ್ತಿಯನ್ನು ಪೋಷಿಸುವುದು, ಬೆಳೆಸುವುದು, ಅವರನ್ನು ತಮ್ಮ ಜ್ಞಾನಾನುಭವಗಳ ಬಗ್ಗೆ ಸೃಜನಾತ್ಮಕವಾಗಿ ಬರೆಯಲು ಪ್ರೋತ್ಸಾಹಿಸುವುದು, ಅವರ ಬರವಣಿಗೆಗಳನ್ನು ಪ್ರಕಟಿಸುವುದು, ಅದನ್ನು ಕರ್ನಾಟಕದಲ್ಲಿ ಮತ್ತು ಸಾಧ್ಯವಾದಷ್ಟು ಮಟ್ಟಿಗೆ ಜಗತ್ತಿನೆಲ್ಲೆಡೆಯ ಕನ್ನಡಿಗರ ಗಮನಕ್ಕೆ ತರುವುದು ಈ ಸಂಘಟನೆಯ ಮುಖ್ಯ ಧ್ಯೇಯೋದ್ದೇಶ.
ಇಲ್ಲಿ ಹಾರ-ತುರಾಯಿ ಸನ್ಮಾನಗಳ ಅಬ್ಬರವಿಲ್ಲ. ಅಧ್ಯಕ್ಷರನ್ನು ಪಲ್ಲಕ್ಕಿಯಲ್ಲಿ ಹೊತ್ತು ಮೆರವಣಿಗೆಗಳ ಡೌಲು ಇಲ್ಲ. ವ್ಯಕ್ತಿಕೇಂದ್ರಿತ ಹೊಗಳಿಕೆ ತೆಗಳಿಕೆಗಳ ಉಪಟಳವೂ ಇಲ್ಲ. ಒಳ್ಳೆಯ ಕೆಲಸವನ್ನಷ್ಟೇ ಮಾಡುವುದರಿಂದ ಇದೊಂಥರ ವನಸುಮ ಇದ್ದಂತೆ. ಹತ್ತಿಪ್ಪತ್ತು ವರ್ಷಗಳ ಅಸ್ತಿತ್ವದಲ್ಲಿ ಇನ್ನೂ ಅನೇಕರಿಗೆ ಗೊತ್ತೇ ಇಲ್ಲದಂತಿದೆ. ರಾಜಕಾರಣಿಗಳನ್ನು ನುಸುಳಲು ಬಿಡುತ್ತಿದ್ದರೆ, ರಾಜಕೀಯ ಮೇಲಾಟ ಗಳನ್ನು ಮಾಡುತ್ತಿದ್ದರೆ ಇಷ್ಟೊತ್ತಿಗೆ ಕೆಟ್ಟ ಕಾರಣಗಳಿಗಾಗಿ ಜಗದ್ವಿಖ್ಯಾತ ಆಗಿರುತ್ತಿತ್ತೋ ಏನೋ.
ಪುಣ್ಯಕ್ಕೆ ಹಾಗೆ ಆಗಿಲ್ಲ, ಆಗುವುದೂ ಬೇಡವೆನ್ನಿ. ಇಂತಿರುವ ಕಸಾರಂ ಪ್ರತಿ ಎರಡು ವರ್ಷಗಳಿಗೊಮ್ಮೆ ಅಮೆರಿಕದ ಯಾವುದಾದರೂ ಒಂದು ನಗರದಲ್ಲಿ ಸರಿಸುಮಾರು ಏಪ್ರಿಲ್/ಮೇ ತಿಂಗಳ ವಾರಾಂತ್ಯವೊಂದರಲ್ಲಿ ‘ವಸಂತ ಸಾಹಿತ್ಯೋತ್ಸವ’ವನ್ನು ಏರ್ಪಡಿಸುತ್ತದೆ. ಇದುವರೆಗೆ ಫಿಲಡೆಲಿಯಾ, ಲಾಸ್ ಏಂಜಲೀಸ್, ಶಿಕಾಗೊ, ವಾಷಿಂಗ್ಟನ್ ಡಿಸಿ, ಸಾನ್ ಫ್ರಾನ್ಸಿಸ್ಕೊ, ಹ್ಯೂಸ್ಟನ್, ಸೈಂಟ್ ಲೂಯಿಸ್, ಬಾಸ್ಟನ್ ಮತ್ತು ನ್ಯೂಜೆರ್ಸಿ- ಹೀಗೆ ಒಂಬತ್ತು ಕಡೆಗಳಲ್ಲಿ ಇಂತಹ ಉತ್ಸವಗಳು ನಡೆದಿವೆ. ಈ ಬಾರಿ ಹತ್ತನೆಯದು ಅಮೆರಿಕದ ಅತಿ ದೊಡ್ಡ ಸಂಸ್ಥಾನವಾದ ಟೆಕ್ಸಸ್‌ನ ಡಲ್ಲಾಸ್ ನಗರದಲ್ಲಿ. ಅಲ್ಲಿ ಸಾಕಷ್ಟು ಸಂಖ್ಯೆಯ ಕನ್ನಡಿಗರೂ ಇದ್ದು ‘ಮಲ್ಲಿಗೆ’ ಎಂಬ ಕನ್ನಡ ಕೂಟವನ್ನು ಕಟ್ಟಿಕೊಂಡಿದ್ದಾರೆ.
ಕಸಾರಂ ತನ್ನ ವಸಂತ ಸಾಹಿತ್ಯೋತ್ಸವಗಳಿಗೆ ಆಯಾ ನಗರಗಳ ಕನ್ನಡ ಕೂಟದ ಆಶ್ರಯ ಪಡೆಯುವುದು ಇದುವರೆಗೂ ನಡೆದು ಕೊಂಡು ಬಂದಿರುವ ಸತ್ಸಂಪ್ರದಾಯ. ಅದರಂತೆ ಈ ಸಲದ ಸಾಹಿತ್ಯೋತ್ಸವವುಮಲ್ಲಿಗೆ ಕನ್ನಡಕೂಟದ ಆಶ್ರಯದಲ್ಲಿ, ಈ ವಾರಾಂತ್ಯ ದಲ್ಲಿ, ಅಂದರೆ ಶುಕ್ರವಾರ ಏಪ್ರಿಲ್ ೧೫ರಿಂದ ಭಾನುವಾರ ಏಪ್ರಿಲ್ ೧೭ರವರೆಗೆ, ಡಲ್ಲಾಸ್‌ನ ಗ್ರೇಪ್‌ವೈನ್ ಸಭಾಂಗಣದಲ್ಲಿ
ನಡೆಯು ತ್ತಿದೆ. ಅಕ್ಷರಪ್ರೇಮಿ ಅಮೆರಿಕನ್ನಡಿಗರು ವಿವಿಧೆಡೆಗಳಿಂದ ಬಂದು ಇಲ್ಲಿ ಸೇರಿದ್ದಾರೆ.
ಆಪ್ತತೆ-ಆತ್ಮೀಯತೆಗಳ ತಂಗಾಳಿಯಲ್ಲಿ ಕನ್ನಡದ ಕಂಪು ಸೂಸುತ್ತಿದೆ. ‘ನಾವೂ ಒಮ್ಮೆ ಸಾಹಿತ್ಯೋತ್ಸವದ ಆತಿಥೇಯರಾಗಬೇಕು’ ಎಂಬ ನಿಸ್ಪೃಹ ಮಹತ್ವಾಕಾಂಕ್ಷೆಯನ್ನು ಕಳೆದೆರಡು ವರ್ಷಗಳಿಂದ ಪೋಷಿಸಿಕೊಂಡು ಬಂದು, ಕೋವಿಡ್ ಕಷ್ಟಕಾರ್ಪಣ್ಯಗಳ ನಡುವೆಯೂ
ಉತ್ಸಾಹ ಕಳೆದುಕೊಳ್ಳದೆ ದುಡಿದ ಡಲ್ಲಾಸ್‌ನ ಪೂರ್ಣಿಮಾ ಸುಬ್ರಹ್ಮಣ್ಯ ಮತ್ತು ಅವರ ಮಿತ್ರವರ್ಗದವರೆಲ್ಲರೂ, ಅರ್ಥಾತ್ ‘ಮಲ್ಲಿಗೆ’ಯ ಒಂದೊಂದು ದಳವೂ, ಇದನ್ನು ಅಚ್ಚುಕಟ್ಟಾಗಿ ನೆರವೇರಿಸಲು ಪಣತೊಟ್ಟಿರುವುದು ಗೊತ್ತಾಗುತ್ತಿದೆ.
ಕಸಾರಂ ಸಾಹಿತ್ಯೋತ್ಸವಗಳ ಒಂದು ವೈಶಿಷ್ಟ್ಯವೆಂದರೆ ಪ್ರತಿ ಸಲದ ಉತ್ಸವಕ್ಕೂ ಒಂದು ನಿರ್ದಿಷ್ಟ ವಿಷಯ ಅಥವಾ ಥೀಮ್ ಇರುತ್ತದೆ. ಮೊತ್ತಮೊದಲ ಉತ್ಸವವು ಕುವೆಂಪು ಜನ್ಮಶತಾಬ್ದಿ ವರ್ಷದಲ್ಲಿ (೨೦೦೪) ಆಗಿದ್ದರಿಂದ ಕುವೆಂಪು ಸಾಹಿತ್ಯ ಸಮೀಕ್ಷೆಯೇ ಆ ಸಲದ ಥೀಮ್ ಆಗಿತ್ತು. ಆಮೇಲಿನ ಉತ್ಸವಗಳಲ್ಲಿ ಅನುಕ್ರಮವಾಗಿ ಕನ್ನಡ ಕಥಾಸಾಹಿತ್ಯ, ಹಾಸ್ಯಸಾಹಿತ್ಯ, ಕನ್ನಡ ಕಾದಂಬರಿ ಲೋಕ, ಪ್ರಬಂಧ ಸಾಹಿತ್ಯ, ಅಮೆರಿಕಕ್ಕೆ ವಲಸೆ ಬಂದು ಜೀವನ ಕಟ್ಟಿಕೊಂಡವರ ಅನುಭವಕಥನ, ಅನುವಾದ ಸಾಹಿತ್ಯ, ಭಕ್ತಿಸಾಹಿತ್ಯ ಮುಂತಾದುವು ಮುಖ್ಯ ವಿಷಯಗಳಾದುವು.
ಪ್ರತಿ ಉತ್ಸವದಲ್ಲೂ ಮುಖ್ಯ ವಿಷಯವನ್ನು ಕುರಿತು ಅಮೆರಿಕನ್ನಡಿಗ ಬರಹಗಾರರಿಂದ ಲೇಖನಗಳನ್ನು ಬರೆಸಿ ಸಂಪಾದಿಸಿದ ಒಂದು ಗ್ರಂಥ ಬಿಡುಗಡೆಯಾಗುತ್ತದೆ. ವಿಷಯಕ್ಕೆ ಸೂಕ್ತವಾಗುವ ರೀತಿಯಲ್ಲಿ ಕರ್ನಾಟಕದಿಂದ ಒಬ್ಬರು ಅಥವಾ ಇಬ್ಬರು ಪ್ರಸಿದ್ಧ ಸಾಹಿತಿಗಳನ್ನು ಮುಖ್ಯ ಅತಿಥಿಗಳಾಗಿ ಆಹ್ವಾನಿಸಿ ಅಧ್ಯಕ್ಷತೆಯ ಗೌರವ ನೀಡಲಾಗುತ್ತದೆ. ಈ ಬಾರಿಯ ಉತ್ಸವದ ಥೀಮ್ ‘ಜಾನಪದ ಸಾಹಿತ್ಯ’. ತದಂಗವಾಗಿಯೇ ಈ ‘ಅಮೆರಿಕನ್ ಜಾನಪದ: ಕನ್ನಡ ಕಂಗಳಿಗೆ ಕಂಡಂತೆ’ ಗ್ರಂಥದ ಲೋಕಾರ್ಪಣೆ.
ಉತ್ಸವದ ಅಧ್ಯಕ್ಷತೆಯ ಗೌರವ ಪಡೆಯುತ್ತಿರುವವರು ಕನ್ನಡದ ಹಿರಿಯ ಸಾಹಿತಿ, ಪ್ರಾಧ್ಯಾಪಕ, ಜಾನಪದ ವಿದ್ವಾಂಸ ಡಾ.ಕೃಷ್ಣಮೂರ್ತಿ ಹನೂರು. ಅವರ ಆಶಯಭಾಷಣದ ಸಾರಾಂಶವನ್ನು ‘ಕನ್ನಡ ಜಾನಪದ’ ಶೀರ್ಷಿಕೆಯ ಸುದೀರ್ಘ ಲೇಖನವಾಗಿ ಇದೇ ಗ್ರಂಥದಲ್ಲಿ ಪ್ರಕಟಿಸಿರುವುದೂ ಒಂದು ವೈಶಿಷ್ಟ್ಯವೇ. ಕನ್ನಡದ ಹಿರಿಯ ವಿಮರ್ಶಕ ಸಿ.ಎನ್.ರಾಮಚಂದ್ರನ್ ಅವರು ಗ್ರಂಥಕ್ಕೆ ಬೆನ್ನುಡಿ ಬರೆದು ಹರಸಿದ್ದಾರೆ.
‘ಅಮೆರಿಕಾ, ಕೆನಡಾ, ಬ್ರೆಝಿಲ್, ಆಸ್ಟ್ರೇಲಿಯಾ ಮುಂತಾದ ದೇಶಗಳಲ್ಲಿ ಇರುವ ಮೂಲನಿವಾಸಿಗಳು, ಕಪ್ಪು ಜನಾಂಗ, ಭಿನ್ನ ಕಾಲಘಟ್ಟ ಗಳಲ್ಲಿ ಅಮೆರಿಕಕ್ಕೆ ವಲಸೆ ಹೋದ ಯುರೋಪಿಯನ್ನರು- ಇವರುಗಳ ಚರಿತ್ರೆ, ಪುರಾಣ, ನಂಬಿಕೆಗಳು, ಕಥೆ- ಹಾಡು, ಸಂಗೀತ, ವೈದ್ಯ ವಿದ್ಯೆ ಇತ್ಯಾದಿ ಅನೇಕ ಜಾನಪದೀಯ ಪ್ರಭೇದಗಳನ್ನು ಇಲ್ಲಿರುವ ಸಂಶೋಧನಾತ್ಮಕ ಲೇಖನಗಳು ಪರಿಚಯಿಸುತ್ತವೆ.
ಇದೊಂದು ರೋಚಕ ಹಾಗೂ ಸಂಗ್ರಹಯೋಗ್ಯ ಸಂಕಲನ. ಕನ್ನಡಕ್ಕೊಂದು ಮಹತ್ತ್ವಪೂರ್ಣ ಕೊಡುಗೆ…’ ಎಂದು ಕಸಾರಂನ ಬೆನ್ನು ತಟ್ಟಿದ್ದಾರೆ. ಪರಿವಿಡಿಯ ಮೇಲೆ ಹೀಗೇ ಒಮ್ಮೆ ಕಣ್ಣುಹಾಯಿಸಿದರೆ ಈ ಗ್ರಂಥದ ಅಂತಃಸತ್ತ್ವ ವೇದ್ಯವಾಗುತ್ತದೆ: ‘ನಯಾಗರಾ ಜಲ
ಪಾತದ ಮೈಡ್ ಆಫ್ ದ ಮಿಸ್ಟ್ ಮೇಲಿನ ಒಂದು ಐತಿಹ್ಯ ಕಥೆ’, ‘ಐರೋಪ್ಯ ವಲಸೆಗಾರರ ಬರ್ಬರತೆಗೀಡಾದ ಅಮೆರಿಕದ ಮೂಲ ನಿವಾಸಿಗಳ ನೈಜ ಇತಿಹಾಸ’, ‘ಎಸ್ಕಿಮೊ ಅಲ್ಲ! ಇವರು ಇನ್ಯುಯಿಟ್ಸ್’, ‘ಆಮಿಶ್ ಸಮುದಾಯದ ಇತಿಹಾಸ ಮತ್ತು ಪರಂಪರೆ’, ‘ಜೀವನ, ಮರಣ ಮತ್ತು ಮರಣೋತ್ತರ ಜೀವನ: ಅಮೆರಿಕೆಯ ಮೂಲನಿವಾಸಿಗಳ ನಂಬಿಕೆ ಮತ್ತು ಸಂಪ್ರದಾಯಗಳು’, ‘ವೂಡೂ ಎಂಬ ಜಾನಪದ ಧಾರ್ಮಿಕ ಸಂಸ್ಕೃತಿ’, ‘ಅಮೆರಿಕೆಯ ಜಾನಪದ ಕಥೆಗಳಲ್ಲಿ ಭೂತ- ಪ್ರೇತಗಳು’, ‘ಮೌಂಟ್ ಶಾಸ್ತಾ- ದಂತಕಥೆಗಳ ಬೆಳ್ಳಿಶಿಖರ’, ‘ಜನಪದ ವೈದ್ಯ- ಕೆಲವು ಸೌತ್ ಇಂಡಿಯನ್ ಮತ್ತು ರೆಡ್ ಇಂಡಿಯನ್ ಮನೆಮದ್ದುಗಳು’, ‘ಮಾರ್ಮನ್ನರ ಜಾನಪದ ಮತ್ತು ಜೀವನ ಶೈಲಿ’ ಇತ್ಯಾದಿ.
ಅಂತೆಯೇ ಸಂಪಾದಕೀಯದ ಈ ಮಾತುಗಳಲ್ಲೂ: ‘ನಾವ್ಯಾರೂ ಅಮೆರಿಕನ್ ಫೋಕ್‌ಲೋರ್ ಅಧ್ಯಯನ ಮಾಡಿದವರಲ್ಲ. ಒಂದಿಷ್ಟು ಓದಿ ಅಮೆರಿಕದ ಜನಪದದಲ್ಲಿ ಪ್ರಚಲಿತವಿರುವ ಕಥೆ, ಕವಿತೆ ಮುಂತಾದವುಗಳನ್ನು ಶೇಖರಿಸಿ, ಅನುವಾದಿಸಿ ಅಥವಾ ನಮ್ಮದೇ ಮಾತುಗಳಲ್ಲಿ ಪುನಃ ರಚಿಸಿ ಬರೆದರೂ ಕನ್ನಡಕ್ಕೆ ಅವು ಹೊಸತೇ ಆಗುವುವು ಎಂಬ ದೃಷ್ಟಿಯಿಂದ ಈ ಕೆಲಸ ಮಾಡಿದ್ದೇವೆ. ಅಮೆರಿಕ ಒಂದು ಬಹುವಿಸ್ತಾರವಾದ ದೇಶ; ಸಹಸ್ರಾರು ವರ್ಷಗಳಿಂದ ಮೂಲ ನಿವಾಸಿಗಳ ಬೀಡಾಗಿದ್ದ ದೇಶ.
ಐರೋಪ್ಯ ವಲಸೆಗಾರರು ಇಲ್ಲಿಗೆ ಬರುವ ಮುನ್ನ ಮೂಲನಿವಾಸಿಗಳ ನೂರಾರು ಬುಡಕಟ್ಟುಗಳು ಅಮೆರಿಕ ಖಂಡದಲ್ಲಿ ಹರಡಿ ಹಂಚಿಹೋಗಿದ್ದರು. ತಮ್ಮದೇ ಸಂಸ್ಕೃತಿ ಮತ್ತು ಭಾಷೆಗಳನ್ನೂ ಜೀವನ ಪದ್ಧತಿಯನ್ನೂ ಬೆಳೆಸಿಕೊಂಡಿದ್ದರು. ಅವರ ಚರಿತ್ರೆ ಏನು, ಅವರು ಹೇಗಿದ್ದರು, ಈಗ ಹೇಗಾಗಿದ್ದಾರೆ ಮುಂತಾದ ವಿಷಯಗಳ ಕುರಿತು ನಂತರ ಬಂದ ಹೊರಗಿವರು ಬರೆದಿಟ್ಟಿದ್ದಾರೆ. ಹಾಗೆ ಬಂದವರು
ಮೂಲನಿವಾಸಿಗಳನ್ನು ಅವರ ತವರಿನಿಂದ ಹೊರದಬ್ಬಿ ಇಡೀ ಖಂಡವನ್ನು ತಮ್ಮದಾಗಿಸಿಕೊಂಡು ಅವರನ್ನೇ ಪರದೇಸಿಗಳನ್ನಾಗಿಸಿದ್ದು ಇದೀಗ ಇತಿಹಾಸ. ಇಂಥವರು ಬರೆದ ಚರಿತ್ರೆಯ ಸತ್ಯಾಸತ್ಯತೆಯನ್ನು ಚರ್ಚಿಸುವ ಗೊಡವೆಗೆ ನಾವು ಕೈಹಾಕಬೇಕೇ? ಅಥವಾ ನಮ್ಮ ಉದ್ದೇಶವನ್ನು ‘ಅಮೆರಿಕದ ಜನಪದವೆಂದು ಏನನ್ನು ಇಂದಿನ ಸಾಧಾರಣ ಪ್ರಜೆಗಳು ನಂಬಿದ್ದಾರೋ’ ಅದನ್ನು ಕನ್ನಡದಲ್ಲಿ ಹೇಳಲು ಸೀಮಿತಗೊಳಿಸಿಕೊಂಡರೆ ಸಾಲದೇ? ಈ ಎಲ್ಲ ಪ್ರಶ್ನೆಗಳನ್ನೂ ಕೇಳಿಕೊಂಡೆವು.
ಮೂಲ ನಿವಾಸಿಗಳೇ ಅಲ್ಲದೇ, ಆಮೇಲೆ ಬಂದು, ಇತ್ತೀಚಿನ ಅಮೆರಿಕದ ಚರಿತ್ರೆಯಲ್ಲಿ ಈ ದೇಶದ ಬಣ್ಣವನ್ನೇ ಬದಲಾಯಿಸುತ್ತಿರುವ,
ಕರಗಿಸುವ ಕಡಾಯಿಯಲ್ಲಿ ಬಿದ್ದು ಕರಗಿದವರ, ಕೊರಗಿದವರ ಜನಪದವೂ ನಮ್ಮ ಈ ಗ್ರಂಥದ ಮೂಲವಸ್ತುವಿನ ಒಂದು ಭಾಗವಾಗಿರಲಿ ಎಂಬುದನ್ನೂ ನಿರ್ಧರಿಸಿದೆವು. ಹಾಗಾಗಿ, ಮೂಲನಿವಾಸಿಗಳೇ ಅಲ್ಲದೆ, ಆಮೇಲಿನ ವಲಸೆಗಾರರು ಮತ್ತು ಬಿಳಿಯರು ಬಲಾತ್ಕಾರವಾಗಿ ಹಿಡಿದು ತಂದ ಕರಿಜನರ ಕಥೆಗಳೂ ಹಾಡುಗಳೂ ನಮ್ಮ ಮೂಲವಸ್ತುವಿನಡಿಯಲ್ಲಿ ವಿವಿಧ ರೀತಿ ಗಳಲ್ಲಿ ಬೆರೆತುಕೊಂಡವು. ಒಟ್ಟಿನಲ್ಲಿ ಅಮೆರಿಕನ್ನಡಿಗರು ಭಾವಿಸಿದ, ಊಹಿಸಿದ, ಓದಿದ, ಚರಿತ್ರೆ ಮತ್ತು ಕಥನಗಳು, ಕನ್ನಡ ಮಸೂರದ ಮೂಲಕ ಕಂಡ ‘ಅಮೆರಿಕದ ಜಾನಪದ ಮೇಲೋಗರವಾಗಿ’ ನಮ್ಮ ಕೈಸೇರಿತು. ನಾವದನ್ನು ವಿಂಗಡಿಸುವ ಗೋಜಿಗೆ ಹೋಗಲಿಲ್ಲ.
ಜನಪದವೆಂಬುದು ಜಗದಗಲ ಹಾಗೂ ಮೂಲರೂಪದಲ್ಲಿ ಸಾಕಷ್ಟು ಸಾಮ್ಯಗಳಿಂದ ಕೂಡಿದ್ದು ಎಂಬ ಸತ್ಯದ ಅರಿವೂ ನಮಗಾಯಿತು. ಹೀಗೆ ನಾವು ಆಯ್ದು ಪೋಣಿಸಿದ ಹೂವುಗಳು ವಿವಿಧ ಬಣ್ಣ ಮತ್ತು ಸುಗಂಧಗಳಿಂದ ಕೂಡಿ, ವೈಚಾರಿಕತೆ ಮತ್ತು ರಂಜಕತೆಯ ಜೊತೆಗೆ ಮಾಹಿತಿಪೂರ್ಣವೂ ಆದ ಒಂದು ಸುಂದರ ಹಾರವಾಗಿದೆಯೆಂದು ನಂಬಿದ್ದೇವೆ.’ ಅಂದಹಾಗೆ ‘ಅಮೆರಿಕನ್ ಜಾನಪದ: ಕನ್ನಡ ಕಂಗಳಿಗೆ
ಕಂಡಂತೆ’ ಗ್ರಂಥವನ್ನು ಪ್ರಕಾಶನಗೊಳಿಸಿದವರು ಕಸಾರಂ ಜೊತೆಗೆ ನಿಡುಗಾಲದ ಬಾಂಧವ್ಯ ಹೊಂದಿರುವ ಬೆಂಗಳೂರಿನ ಅಭಿನವ ಪ್ರಕಾಶನ (ಮೊಬೈಲ್: ಎನ್. ರವಿಕುಮಾರ್ ೯೪೪೮೮೦೪೯೦೫). ಕರ್ನಾಟಕದ ಪ್ರಮುಖ ಪುಸ್ತಕದಂಗಡಿಗಳಲ್ಲಿ ಈ ಗ್ರಂಥ ಲಭ್ಯವಾಗ ಲಿದೆ.
ಮೂರು ದಿನಗಳ ಉತ್ಸವದಲ್ಲಿ ಬೇರೆ ಆಕರ್ಷಣೆಗಳೂ ಬೇಕಾದಷ್ಟಿವೆ. ‘ಗಂಧವೀಳ್ಯ’ ಎಂಬ ಹೆಸರಿನ ಸ್ಮರಣಸಂಚಿಕೆಯೊಂದು ಪ್ರಕಟ ವಾಗುತ್ತಿದೆ. ಅಮೆರಿಕನ್ನಡಿಗ ಬರಹಗಾರರ ಪ್ರತಿಭಾಪ್ರದರ್ಶನಕ್ಕಾಗಿ ‘ಬರೆದಿದ್ದಾ ತನ್ನಿ… ಓದಾನಾ ಬನ್ನಿ’ ಎಂಬ ಶೀರ್ಷಿಕೆಯಡಿ ಸ್ವರಚಿತ ಕವನ, ಪ್ರಬಂಧ, ಹಾಸ್ಯಲೇಖನ, ಚುಟುಕುಗಳ ವಾಚನ ಇದೆ. ಡಾ. ಕ್ರಿಸ್ಟಿನಾ ಡೌನ್ಸ್ ಎಂಬ ಅಮೆರಿಕನ್ ಮಹಿಳೆಯಿಂದ ಅಮೆರಿಕನ್ ಫೋಕ್‌ಲೋರ್ ಬಗೆಗೆ ವಿಶೇಷ ಆಹ್ವಾನಿತ ಉಪನ್ಯಾಸ ಇದೆ. ಸಮ್ಮೇಳನಾಧ್ಯಕ್ಷರೊಂದಿಗೆ ಸಂವಾದ ಇದೆ. ಅಷ್ಟೇಅಲ್ಲದೆ ಜಾನಪದ ನೃತ್ಯ, ಸ್ಯಪ್ರಹಸನ, ಯಕ್ಷಗಾನ, ಅಮೆರಿಕನ್ನಡಿಗ ಬರಹಗಾರರ ಹೊಸ ಪುಸ್ತಕಗಳ ಪರಿಚಯ, ಪ್ರದರ್ಶನ, ಪುಸ್ತಕಸಂತೆ,
ವಿಚಾರಕಮ್ಮಟಗಳು, ಸಾಹಿತ್ಯಗೋಷ್ಠಿಗಳು, ಚಿತ್ರಕಾವ್ಯ ಪ್ರದರ್ಶನ, ಗಮಕವಾಚನ, ಗೀತರಸಧಾರೆ, ನೃತ್ಯರೂಪಕ, ನಾಟಕ… ಇತ್ಯಾದಿ. ಇವೆಲ್ಲ ಅಮೆರಿಕಕ್ಕೆ ವಲಸೆಬಂದ ಮೊದಲ ತಲೆಮಾರಿನವರದಷ್ಟೇ ಪ್ರಸ್ತುತಿಗಳು ಎಂದುಕೊಂಡಿರಾದರೆ ತಪ್ಪಿದಿರಿ.
ಮುಂದಿನ ತಲೆಮಾರಿಗೆ ಕನ್ನಡ ಕಲಿಸಿ ಅವರಿಂದಲೂ ಅಚ್ಚಕನ್ನಡದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸುವ ಉತ್ಸಾಹಿ ಸಮೂಹ ಇಲ್ಲಿದೊಡ್ಡದಿದೆ. ಅದಲ್ಲದೇ ಈ ಬಾರಿ ಸಾಹಿತ್ಯೋತ್ಸವದಲ್ಲಿ ಭಾಗವಹಿಸುತ್ತಿರುವವರೆಲ್ಲರ ಉತ್ಸಾಹ ಇಮ್ಮಡಿಯಾಗಿರಲಿಕ್ಕೂ ಕಾರಣವಿದೆ. ಕೋವಿಡ್ ಮಹಾಮಾರಿಯಿಂದಾಗಿ ಕಳೆದೆರಡು ವರ್ಷಗಳಲ್ಲಿ ಈ ರೀತಿಯ ಸ್ನೇಹಸಮ್ಮಿಲನದ ಅವಕಾಶಗಳ್ಯಾವುವೂ ಇರಲೇ ಇಲ್ಲ. ಈಗ ಜಗತ್ತು ಯಥಾಸ್ಥಿತಿಗೆ ನಿಧಾನವಾಗಿ ಮರಳುತ್ತಿರುವ ವೇಳೆಯಲ್ಲಿ ಸಾಹಿತ್ಯಸುಗ್ಗಿಯ ನೆಪದಲ್ಲಿ ಒಂದಿಷ್ಟು ಉಭಯ ಕುಶಲೋಪರಿ, ಎಲ್ಲರೂ ಒಟ್ಟಿಗೇ ಕುಳಿತು ರುಚಿರುಚಿಯಾದ ಊಟ ತಿಂಡಿ, ಎರಡು ವರ್ಷಗಳ ಸುದೀರ್ಘ ಅವಽಯಲ್ಲಿ ವಾರ್‌ಡ್ರೋಬು ಗಳಲ್ಲಿ ಅನಿವಾರ್ಯ ನಿಶ್ಚೇಷ್ಟತೆಯನ್ನು ಅನುಭವಿಸಿದ ರೇಷ್ಮೆಸೀರೆ ಕುರ್ತಾಪೈಜಾಮಾ ಷೇರವಾನಿಗಳಿಗೂ ಒಮ್ಮೆ ಬಿಡುಗಡೆಯ ಭಾಗ್ಯ. ಕನ್ನಡ ನಮಗೆ ಭಾಷೆಯೊಂದೇ ಅಲ್ಲ. ಕನ್ನಡತನ ನಮ್ಮ ಅಸ್ಮಿತೆ ಅನಿಸುವುದು ಇಂತಹ ಉತ್ಸವಗಳ ಸಡಗರದಲ್ಲೇ.