ಮೂರ್ತಿಪೂಜೆ
ಮುಂದಿನ ಚುನಾವಣೆ ಹೇಗೆ ನಡೆಯಲಿದೆ ಅಂತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರಾಜ್ಯದ ಜನರಿಗೆ ಸ್ಪಷ್ಟ ಸಂದೇಶ ರವಾನಿಸಿದ್ದಾರೆ. ಸೆಪ್ಟೆಂಬರ್ 10ರ ಶನಿವಾರ ದೊಡ್ಡಬಳ್ಳಾಪುರದಲ್ಲಿ ನಡೆದ ಬಿಜೆಪಿಯ ಜನಸ್ಪಂದನ ಸಮಾವೇಶದ ಮೂಲಕ ಅವರು ಈ ಸಂದೇಶ ರವಾನಿಸಿದ್ದಾರೆ.
ಅಂದ ಹಾಗೆ, ಈ ಸಮಾವೇಶದ ಹಣೆಗೆ ‘ಬೊಮ್ಮಾಯಿ ಸರಕಾರಕ್ಕೆ ಒಂದು ವರ್ಷ-ಬಿಜೆಪಿ ಸರಕಾರಕ್ಕೆ ಮೂರು ವರ್ಷ’ ಎಂಬ ಟ್ಯಾಗ್‌ಲೈನು ಅಂಟಿಕೊಂಡಿದ್ದು ಸಹಜವೇ. ಆದರೆ ಇದನ್ನು ಬಳಸಿಕೊಂಡು ಸಿಎಂ ಬೊಮ್ಮಾಯಿ ಪ್ರತಿಪಕ್ಷ ಕಾಂಗ್ರೆಸ್ಸಿಗೆ ಎಚ್ಚರಿಕೆಯ ಸಂದೇಶ ರವಾನಿಸಿದ್ದು ಕುತೂಹಲಕಾರಿಯಾಗಿತ್ತು. ಅಂದ ಹಾಗೆ, ಅವರು ಹೇಳಿದ್ದೇನು? ‘ರಾಜ್ಯದ ಕಾಂಗ್ರೆಸ್ ನಾಯಕರು ಅಧಿಕಾರದಲ್ಲಿದ್ದ ಕಾಲದಲ್ಲಿ ಲೂಟಿ ಮಾಡಿ ಎಲ್ಲಿ ಹಣ ಇಟ್ಟಿzರೆ, ಹೇಗೆ ಬಳಕೆ ಮಾಡುತ್ತಿದ್ದಾರೆ ಎಂಬುದು ನಮಗೆ ಗೊತ್ತು. ಚುನಾವಣೆ ಹತ್ತಿರ ಬರಲಿ.
ಅದನ್ನೆಲ್ಲ ಬಹಿರಂಗಪಡಿಸುತ್ತೇವೆ. ಆಗ ಜನ ಇವರಿಗೆ ಥೂ, ಛೀ ಎನ್ನುತ್ತಾರೆ’ ಎಂಬುದು ಬೊಮ್ಮಾಯಿ ಮಾತು. ಅರ್ಥಾತ್, ಮುಂದಿನ ದಿನಗಳಲ್ಲಿ ಐ.ಟಿ., ಇ.ಡಿ.ಯಂತಹ ತನಿಖಾ ಸಂಸ್ಥೆಗಳು ಕರ್ನಾಟಕದಲ್ಲಿ ತುಂಬ ಚುರುಕಾ ಗಲಿವೆ ಮತ್ತು ಅವುಗಳ ಹಸ್ತ ಕಾಂಗ್ರೆಸ್ ಪಕ್ಷದ ಹಲ ನಾಯಕರ ಕೊರಳಪಟ್ಟಿ ಹಿಡಿದುಕೊಳ್ಳಲಿವೆ. ಹೀಗೆ ಅವು ಚುರುಕಾಗದೆ ಇದ್ದರೆ ಬಸವರಾಜ ಬೊಮ್ಮಾಯಿ ಹೇಳಿದ್ದು ನಿಜವಾಗುವುದು ಹೇಗೆ? ಹೀಗಾಗಿ ಅವರ ಮಾತು, ಮುಂದಿನ ವಿಧಾನಸಭಾ ಚುನಾವಣೆಗೂ ಮುನ್ನ
ಕರ್ನಾಟಕದಲ್ಲಿ ದೊಡ್ಡ ಮಟ್ಟದ ಹಣಕಾಸು ಸಂಘರ್ಷ ನಡೆಯುವುದು ನಿಶ್ಚಿತ ಎಂಬುದನ್ನು ಸಂಕೇತಿಸುತ್ತಿದೆ.
ಇದನ್ನೇ ಜನಸ್ಪಂದನ ಸಮಾವೇಶದಲ್ಲಿ ಬೊಮ್ಮಾಯಿ ಸೂಚ್ಯವಾಗಿ ಹೇಳಿದರು. ಅಂದರೆ? ಕರ್ನಾಟಕದಲ್ಲಿ ವೇಗವಾಗಿ ಓಡುತ್ತಿರುವ ಕಾಂಗ್ರೆಸ್‌ನ ಅಶ್ವಮೇಧದ ಕುದುರೆಯನ್ನು ಹೇಗೆ ತಡೆಯಬೇಕು ಎಂಬ ಬಗ್ಗೆ ಬಿಜೆಪಿಯ ಥಿಂಕ್‌ಟ್ಯಾಂಕ್ ಸುದೀರ್ಘ ವಾಗಿ ಚರ್ಚಿಸಿದೆ, ಒಂದು ನಿರ್ಧಾರಕ್ಕೆ ಬಂದಿದೆ. ಇದು ಗೊತ್ತಿರುವುದರಿಂದಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವೀರಾವೇಶ ಪ್ರದರ್ಶಿಸಿದ್ದಾರೆ.
ಹೀಗೆ ಫುಲ್ಲು ಆತ್ಮವಿಶ್ವಾಸ ಬರದೆ ಹೋಗಿದ್ದರೆ ಅವರು, ‘ತಾಕತ್ತಿದ್ರೆ, ಧಮ್ಮಿದ್ರೆ ನಮ್ಮನ್ನು ತಡೆಯಿರಿ’ ಅಂತ ಇದೇ ಸಮಾವೇಶ ದಲ್ಲಿ ಕಾಂಗ್ರೆಸ್ಸಿಗರಿಗೆ ಸವಾಲು ಎಸೆಯುತ್ತಿರಲಿಲ್ಲ.
***
ಅಂದ ಹಾಗೆ, ಕಾಂಗ್ರೆಸ್ಸಿಗರ ಹಣಕಾಸು ಪಾಳೇಪಟ್ಟುಗಳ ಮೇಲೆ ಕಣ್ಣಿಡುವ ಬಿಜೆಪಿಯ ಪ್ರಯತ್ನ ಹೊಸತೇನಲ್ಲ. 2018ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಇದೇ ತಂತ್ರಗಾರಿಕೆಯನ್ನು ಬಳಸಿ ಕಾಂಗ್ರೆಸ್ಸನ್ನು ಕಟ್ಟಿಹಾಕುವುದರಲ್ಲಿ ಬಿಜೆಪಿ ಯಶಸ್ವಿಯಾಗಿತ್ತು.
ಗಮನಿಸಬೇಕಾದ ಸಂಗತಿ ಎಂದರೆ 2018ರಲ್ಲಿ ಚುನಾವಣಾ ರಣಾಂಗಣಕ್ಕಿಳಿದ ಕಾಂಗ್ರೆಸ್ ಸೈನ್ಯದ ಮುಂದೆ ಸಿದ್ದರಾಮಯ್ಯ ಅವರ ಉಪಸ್ಥಿತಿ ಇತ್ತು. ಹಾಗೆ ನೋಡಿದರೆ, ಅವತ್ತು ರಾಜ್ಯದಲ್ಲಿ ಸಿದ್ದರಾಮಯ್ಯ ಸರಕಾರದ ವಿರುದ್ಧ ಜನವಿರೋಧಿ ಅಲೆ ಏನೂ ಇರಲಿಲ್ಲ. ಅನ್ನಭಾಗ್ಯದಿಂದ ಹಿಡಿದು ಹಲವು ಕಾರ್ಯಕ್ರಮಗಳು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಪಕ್ಷದ ಶಕ್ತಿಯನ್ನು ಉಳಿಸಿದ್ದವು.
ಅದೇ ರೀತಿ ಬಿಜೆಪಿಗೆ ಯಡಿಯೂರಪ್ಪ ಅವರ ಜಾತಿ ಆಧರಿತ ರಣತಂತ್ರವೇ ಮುಖ್ಯ ಆಸರೆಯಾಗಿತ್ತು. ಅಂದ ಹಾಗೆ, ನರೇಂದ್ರ ಮೋದಿ ಅಲೆ ರಾಷ್ಟ್ರಮಟ್ಟದಲ್ಲಿ ಪ್ರಭಾವ ಬೀರುತ್ತಿದ್ದುದು ನಿಜವಾದರೂ ವಿಧಾನಸಭಾ ಚುನಾವಣೆಗಳಲ್ಲಿ ಆ ಅಲೆ ಬಲೆಯಾಗಿ ಕೆಲಸ ಮಾಡುವುದಿಲ್ಲ ಅಂತ ಎಲ್ಲರಿಗೂ ಗೊತ್ತಿತ್ತು. ಇಂತಹ ಸಂದರ್ಭದಲ್ಲಿ ಸಿದ್ದರಾಮಯ್ಯ ಟೀಮಿನ ಹಲ ಫೈನಾನ್ಸ್ ಕಿಂಗುಗಳನ್ನು ಬಿಜೆಪಿ ಕಟ್ಟಿ ಹಾಕಿತು. ಪರಿಣಾಮ? ಚುನಾವಣೆಯ ಸಂದರ್ಭದಲ್ಲಿ ಹಲವು ಕ್ಷೇತ್ರಗಳಿಗೆ ತಾವು ಬಯಸಿದಂತೆ
ಹಣಕಾಸಿನ ನೆರವು ನೀಡಲು ಸಿದ್ದರಾಮಯ್ಯ ಅವರಿಗೆ ಸಾಧ್ಯವಾಗಲಿಲ್ಲ. ಹೀಗಾಗಿ ಸ್ವಲ್ಪೇ ಸ್ವಲ್ಪ ಶಕ್ತಿ ತುಂಬಿದರೂ ಗೆಲ್ಲಬಹುದಾಗಿದ್ದ ಹಲವು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮಕಾಡೆ ಮಲಗಿತು.
ಅಂದ ಹಾಗೆ, 2018ರ ಚುನಾವಣೆಯಲ್ಲಿ ಪಕ್ಷ ಮಿನಿಮಮ್ 120 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುತ್ತದೆ ಎಂಬ ಲೆಕ್ಕಾಚಾರ ಸಿದ್ದರಾಮಯ್ಯ ಅವರಿಗಿತ್ತು. ಆದರೆ ಅವರ ಲೆಕ್ಕಾಚಾರಕ್ಕೆ ಕೊನೆ ಗಳಿಗೆಯಲ್ಲಿ ಅವರ ಜತೆಗಿದ್ದ ಫೈನಾನ್ಸ್ ಕಿಂಗುಗಳು ಸ್ಪಂದಿಸಲಿಲ್ಲ. ಅವರು ಸ್ಪಂದಿಸದಂತೆ ಬಿಜೆಪಿ ವರಿಷ್ಠರು ನೋಡಿಕೊಂಡರು ಎಂಬುದು ರಹಸ್ಯದ ಸಂಗತಿಯಲ್ಲ. ಗಮನಿಸ ಬೇಕಾದ ಸಂಗತಿ ಎಂದರೆ, ಅವತ್ತು ಬಿಜೆಪಿ ಕೇಂದ್ರದ ಅಽಕಾರ ಸೂತ್ರ ಹಿಡಿದಿತ್ತು, ಆದರೆ ರಾಜ್ಯದಲ್ಲಿ ವಿರೋಧ ಪಕ್ಷವಾಗಿತ್ತು. ಆದರೆ ಈಗ ಕೇಂದ್ರ ಮತ್ತು ರಾಜ್ಯಗಳಲ್ಲಿ ಬಿಜೆಪಿ ಸರ್ಕಾರಗಳೇ ಇವೆ.
ಹೀಗಾಗಿ ಅವತ್ತು ಒಂದು ಕಡೆಯಿಂದ ಕಾಂಗ್ರೆಸ್ ವಿರುದ್ಧ ದಾಳಿ ನಡೆಯುತ್ತಿತ್ತು. ಆದರೆ ಇವತ್ತು ಎರಡೂ ಕಡೆಗಳಿಂದ ದಾಳಿ
ಮಾಡಬಹುದು. ಬಿಜೆಪಿ ಸೈನ್ಯಕ್ಕಿರುವ ಸದ್ಯದ ಅನುಕೂಲ ಇದು. ಅಂದರೆ? ಈಗ ಕೇಂದ್ರದ ಬಿಜೆಪಿ ವರಿಷ್ಠರು ರಾಜ್ಯ
ಕಾಂಗ್ರೆಸ್ಸಿನ ಹಣಕಾಸು ಮೂಲಗಳನ್ನು ಬಿಗಿ ಮಾಡುತ್ತಾರೆ. ಇದೇ ರೀತಿ, ರಾಜ್ಯದಲ್ಲಿರುವ ಬಿಜೆಪಿ ಸರಕಾರ ಸಿದ್ದರಾಮಯ್ಯ ಸರಕಾರದ ಅವಧಿಯಲ್ಲಿ ಕೇಳಿಬಂದ ಆರೋಪಗಳಿಗೆ ಜೀವ ಕೊಡಲು ಮುಂದಾಗುತ್ತದೆ. ಕೆಲ ದಿನಗಳ ಹಿಂದೆ ನಡೆದ ಬಿಜೆಪಿ ಪ್ರಮುಖರ ಸಭೆ ಇದನ್ನೇ ಅಸ್ತ್ರವಾಗಿ ಬಳಸಿಕೊಳ್ಳಲು ನಿರ್ಧರಿಸಿದ್ದು ಈಗ ಗುಟ್ಟಾಗಿ ಉಳಿದಿಲ್ಲ.
ಅದು ಅರ್ಕಾವತಿ ಬಡಾವಣೆಗೆ ಸಂಬಂಧಿಸಿದ ‘ರೀ ಡೂ’ ಇರಬಹುದು, ಸೋಲಾರ್ ಪವರ್ ಡೀಲ್ ಆರೋಪವೇ ಇರಬಹುದು, ಒಟ್ಟಿನಲ್ಲಿ ಸಿದ್ದರಾಮಯ್ಯ ಕಾಲದ ಹಲವು ಹಗರಣಗಳು ಸಮಾಧಿಯಿಂದ ಮೇಲೇಳಲಿವೆ. ಬೊಮ್ಮಾಯಿ ಸರಕಾರ ಎ.ಸಿ.ಬಿ ಯನ್ನು ರದ್ದುಗೊಳಿಸಿ ಲೋಕಾಯುಕ್ತವನ್ನು ಎಬ್ಬಿಸಿ ಕೂರಿಸಿರುವುದಕ್ಕೆ ಇಂತಹ ಲೆಕ್ಕಾಚಾರವೇ ಕಾರಣ. ಅಂದ ಹಾಗೆ, ಇಂತಹ ಕೆಲಸದ ಮೂಲಕ ಕಾಂಗ್ರೆಸ್ ನಾಯಕರನ್ನು ಮಾತ್ರವಲ್ಲ, ಅವರಿಗೆ ಶಕ್ತಿ ತುಂಬುವ ಮೂಲಗಳನ್ನೂ ಬಿಜೆಪಿ ದುರ್ಬಲ ಗೊಳಿಸುತ್ತದೆ ಎಂಬುದು ನಿಜ.
***
ಬಿಜೆಪಿ ನಾಯಕರ ರಣತಂತ್ರದ ನೇರ ಪರಿಣಾಮವನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮತ್ತು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಎದುರಿಸಲಿದ್ದಾರೆ. ಅಂದ ಹಾಗೆ, ಯಡಿಯೂರಪ್ಪ ಎಪಿಸೋಡಿನ ನಂತರ ಬಿಜೆಪಿ ವರಿಷ್ಠರಿಗೆ ಮನದಟ್ಟಾಗಿರುವ ಸಂಗತಿ ಎಂದರೆ ಪ್ರಬಲ ಲಿಂಗಾಯತ ಸಮುದಾಯ ತನಗೆ ಶಾಕ್ ನೀಡಲಿದೆ ಎಂಬುದು. ಯಡಿಯೂರಪ್ಪ ಅವರಿಗೆ ಕೇಂದ್ರ
ಸಂಸದೀಯ ಮಂಡಳಿಯಲ್ಲಿ ನಾವು ಜಾಗ ನೀಡಿರಬಹುದು ಅಥವಾ ಬೇರೆ ವಿಧಾನಗಳಿಂದ ಪಕ್ಷ ತೊರೆಯದಂತೆ ಕಟ್ಟಿ
ಹಾಕಿರಬಹುದು. ಅದರಿಂದ ಯಡಿಯೂರಪ್ಪ ಕೂಡಾ ಮೌನವಾಗಿರಬಹುದು.
ಆದರೆ ಲಿಂಗಾಯತ ಮತದಾರರು ಮೌನವಾಗಿರಬೇಕೆಂದಿಲ್ಲ ಎಂಬುದು ಬಿಜೆಪಿ ನಾಯಕರ ಯೋಚನೆ. ಪರಿಸ್ಥಿತಿ ಹೀಗಿದ್ದಾಗ ಆ ಮತಬ್ಯಾಂಕಿನ ಮೂಲಕ ಆಗುವ ಕೊರತೆಯನ್ನು ಬೇರೆ ಮೂಲಗಳಿಂದ ಭರ್ತಿ ಮಾಡಿಕೊಳ್ಳಬೇಕಲ್ಲ? ಇದಕ್ಕಾಗಿ ಬಿಜೆಪಿ ಥಿಂಕ್‌ಟ್ಯಾಂಕು ಒಕ್ಕಲಿಗ ಮತಬ್ಯಾಂಕಿನ ಮೇಲೆ ಹೆಚ್ಚು ಗಮನ ಹರಿಸಲು ನಿರ್ಧರಿಸಿದೆ.
ಅಂದ ಹಾಗೆ, ಒಕ್ಕಲಿಗ ಮತಬ್ಯಾಂಕಿನ ಮೇಜರ್ ಷೇರು ದೇವೇಗೌಡ-ಕುಮಾರಸ್ವಾಮಿ ನೇತೃತ್ವದ ಜೆಡಿಎಸ್ ಜತೆ
ಇರಬಹುದು. ಆದರೆ ಜೆಡಿಎಸ್ ಅನ್ನು ವಿರೋಧಿಸುವ ಒಂದು ಬಣ ಇದ್ದೇ ಇರುತ್ತದಲ್ಲ? ಅದು ಸದ್ಯಕ್ಕೆ ಡಿಕೆಶಿ ಬೆನ್ನಿಗೆ ನಿಂತಿದೆ. ಹೀಗೆ ನಿಂತ ಮತಬ್ಯಾಂಕನ್ನು ವಶಪಡಿಸಿಕೊಳ್ಳುವುದು ಬಿಜೆಪಿ ಲೆಕ್ಕಾಚಾರ. ಅದು ಸಾಧ್ಯವಾಗಬೇಕು ಎಂದರೆ ಡಿಕೆಶಿ ಚಕ್ರವ್ಯೂಹಕ್ಕೆ ಸಿಲುಕುವಂತೆ ನೋಡಿಕೊಳ್ಳಬೇಕು. ಹಾಗಾದಾಗ ಸಹಜವಾಗಿಯೇ ಡಿಕೆಶಿ ಬಲ ಕುಂದುತ್ತದೆ. ಹೀಗೆ ನಾಯಕನ ಬಲ ಕುಂದಿದರೆ ಅವರ ಬೆನ್ನಿಗಿರುವ ಸೈನ್ಯದ ಆತ್ಮವಿಶ್ವಾಸ ಕಡಿಮೆ ಆಗುತ್ತದೆ.
ಪರಿಣಾಮ? ಜೆಡಿಎಸ್ ವಿರುದ್ಧ ಪ್ರಬಲವಾಗಿ ನಿಲ್ಲಬಲ್ಲ ಮತ್ತೊಂದು ಶಕ್ತಿಯ ಕಡೆ ನಿಲ್ಲಲು ಅದು ಸಜ್ಜಾಗುತ್ತದೆ. ಆ ಸಂದರ್ಭದಲ್ಲಿ ಅದರ ಕಣ್ಣಿಗೆ ವಿಶ್ವಾಸದ ಕೇಂದ್ರವಾಗಿ ಕಾಣುವುದು ಬಿಜೆಪಿ ಎಂಬುದು ಈ ಲೆಕ್ಕಾಚಾರದ ಭಾಗ. ಇನ್ನು ಡಿಕೆಶಿಯನ್ನು ದುರ್ಬಲಗೊಳಿಸಿದಂತೆ ಸಿದ್ದರಾಮಯ್ಯ ಅವರನ್ನು ದುರ್ಬಲಗೊಳಿಸುವುದು ಕಷ್ಟವಾದರೂ ಅವರನ್ನು ವಿಸ್ಮಿತ ಸ್ಥಿತಿಯಲ್ಲಿಡು ವುದು ಕಷ್ಟವಲ್ಲ ಎಂಬುದು ಬಿಜೆಪಿ ನಾಯಕರ ಯೋಚನೆ. ಇವತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರಣೋತ್ಸಾಹ ತೋರಿಸುತ್ತಿರುವುದಕ್ಕೆ ಇಂತಹ ಲೆಕ್ಕಾಚಾರಗಳೇ ಕಾರಣ.
***
ಗಮನಿಸಬೇಕಾದ ಸಂಗತಿ ಎಂದರೆ ಜನಸ್ಪಂದನ ಸಮಾವೇಶದಲ್ಲಿ ಬಿಜೆಪಿ ನಾಯಕರು ಕಾಂಗ್ರೆಸ್ಸಿನ ವಿರುದ್ಧ ಮುಗಿಬಿದ್ದರೇ ಹೊರತು ಜೆಡಿಎಸ್ ಮೇಲಲ್ಲ. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಬಿಜೆಪಿ ಮತ್ತು ಸಂಘ ಪರಿವಾರವನ್ನು ಯಗಾ-ದಿಗಾ ಟೀಕಿಸುತ್ತಾರೆ. ಆದರೆ ಬಿಜೆಪಿ ಮಾತ್ರ ತಿರುಗಿ ಜೆಡಿಎಸ್ ವಿರುದ್ಧ ಧ್ವನಿ ಎತ್ತುತ್ತಿಲ್ಲ. ತೀರಾ ಎಂದರೆ ಸಣ್ಣ-ಪುಟ್ಟ ನಾಯಕರಿಂದ, ಪಕ್ಷದ ಸೋಷಿಯಲ್ ಮೀಡಿಯಾ ಮೂಲಕ ಪ್ರತಿಹೇಳಿಕೆ ಕೊಡಿಸಿ ಮೌನವಾಗುತ್ತದೆ. ಅದರ ಈ ಮೃದುಧೋರಣೆಗೂ ಒಂದು ಕಾರಣವಿದೆ.
ಅದೆಂದರೆ, ಕುಮಾರಸ್ವಾಮಿ ತಮ್ಮನ್ನು ಎಷ್ಟು ಟೀಕಿಸುತ್ತಾರೋ, ಕಾಂಗ್ರೆಸ್ಸಿಗೆ ಅಷ್ಟರ ಮಟ್ಟಿಗೆ ಹಾನಿಯಾಗುತ್ತದೆ; ಹೀಗಾಗಿ ಕುಮಾರಸ್ವಾಮಿ ತಮ್ಮನ್ನು ಎಷ್ಟು ಬೇಕಾದರೂ ಟೀಕಿಸಲಿ ಎಂಬುದು ಬಿಜೆಪಿ ನಾಯಕರ ಆಲೋಚನೆ. ಕುತೂಹಲದ ಸಂಗತಿ ಎಂದರೆ, ಜನಸ್ಪಂದನ ಸಮಾವೇಶದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಡಿದ ಮಾತು. ಅವರ ಪ್ರಕಾರ ೨೦೧೮ರಲ್ಲಿಯೇ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಬೇಕಿತ್ತು.
ಆದರೆ ಕಾಂಗ್ರೆಸ್ ಪಕ್ಷ ವಾಮಮಾರ್ಗದ ಮೂಲಕ ಜೆಡಿಎಸ್ ಜತೆ ಕೈಜೋಡಿಸಿ ಸರಕಾರ ರಚಿಸಿತಂತೆ. ಆದರೆ ಇದರಲ್ಲಿ ವಾಮಮಾರ್ಗದ ಪ್ರಶ್ನೆ ಏನಿದೆ? ಸಂವಿಧಾನ ಬದ್ಧವಾಗಿಯೇ ಅವತ್ತು ಕಾಂಗ್ರೆಸ್-ಜೆಡಿಎಸ್ ಕೈಜೋಡಿಸಿದವಲ್ಲ? ಅತ್ಯಂತ ದೊಡ್ಡ ಶಕ್ತಿಯಾಗಿತ್ತು ಎಂದ ಮಾತ್ರಕ್ಕೆ ಬಹುಮತವಿಲ್ಲದಿದ್ದರೂ ಬಿಜೆಪಿಗೆ ಅಧಿಕಾರ ನೀಡಬೇಕಿತ್ತು ಅಂತ ಇದರರ್ಥವೇ? ಅಥವಾ ಜೆಡಿಎಸ್ ಪಕ್ಷದ ಜತೆ ಕೈಜೋಡಿಸಬೇಕಿದ್ದುದು ಬಿಜೆಪಿಯೇ ಹೊರತು ಕಾಂಗ್ರೆಸ್ ಅಲ್ಲ ಅಂತಲೋ? ಈ ಮಾತನ್ನು ಆಳವಾಗಿ ಗಮನಿಸಿದರೆ, ಭವಿಷ್ಯದಲ್ಲಿ ಮಿತ್ರಪಕ್ಷಗಳಾಗುವುದಿದ್ದರೆ ಅದು ಬಿಜೆಪಿ-ಜೆಡಿಎಸ್ಸೇ ಹೊರತು ಕಾಂಗ್ರೆಸ್-ಜೆಡಿಎಸ್ ಅಲ್ಲ ಎಂಬುದು ಬಿಜೆಪಿಯ ಆಲೋಚನೆ ಇದ್ದಂತಿದೆ.
ಅರ್ಥಾತ್, ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಯಾವ್ಯಾವ ಮೂಲೆಗಳಿಂದ ಕಟ್ಟಿಹಾಕಬೇಕು ಎಂಬ ವಿಷಯದಲ್ಲಿ
ಬಿಜೆಪಿ ಖಚಿತ ತೀರ್ಮಾನಕ್ಕೆ ಬಂದಿದೆ. ಮೊನ್ನಿನ ಸಮಾವೇಶದ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇದೇ ಸಂದೇಶವನ್ನು ರವಾನಿಸಿದ್ದಾರೆ.