ಅಭಿಮತ
ಪ್ರಕಾಶ್ ಶೇಷರಾಘಾವಾಚಾರ್
ಪ್ರಧಾನಿ ಮೋದಿಯವರು ‘ಜನೌಷಧಿ ಕೇಂದ್ರ’ ದಿನದಂದು ಮಾತನಾಡುತ್ತ ಜನತೆಯು ಕಡಿಮೆ ವೆಚ್ಚದಲ್ಲಿ ಔಷಧಿಗಳನ್ನು ಖರೀದಿಸಿ ಕಳೆದ ಎಂಟು ವರ್ಷದಲ್ಲಿ ೨೦,೦೦೦ ಕೋಟಿ ರುಪಾಯಿ ಹಣವನ್ನು ಉಳಿತಾಯ ಮಾಡಿದ್ದಾರೆ ಎಂಬ ಮಾಹಿತಿಯನ್ನು ಹಂಚಿಕೊಂಡರು. ಈ ಯೋಜನೆಯು ಅಕ್ಷರಶಃ
ಬಡವರಿಗೆ ವರವಾಗಿ ಪರಿಣಮಿಸಿದೆ.
ದೇಶಾದ್ಯಂತ ಇಂದು ೯ ಸಾವಿರಕ್ಕೂ ಅಧಿಕ ಜನೌಷಧಿ ಕೇಂದ್ರಗಳನ್ನು ತೆರೆಯಲಾಗಿದೆ. 1800 ಬಗೆಯ ಔಷಧಿಗಳನ್ನು ಮತ್ತು ೨೭೫ ಸರ್ಜಿಕಲ್ ಉಪಕರಣಗಳನ್ನು ಬ್ರಾಂಡೆಡ್ ಔಷಧಿಗಿಂತ ಶೇ. ೫೦ ರಷ್ಟು ಕಡಿಮೆ ದರದಲ್ಲಿ ಮಾರಾಟ ಮಾಡುತ್ತಿವೆ. ೨೦೦೮ರ ಯುಪಿಎ ಸರ್ಕಾರದ ಅವಧಿಯಲ್ಲಿ ‘ಜನೌಷಧಿ ಯೋಜನೆ’ ಹೆಸರಲ್ಲಿ ಕಡಿಮೆ ದರದಲ್ಲಿ ಎಲ್ಲರಿಗೂ ಕೈಗೆಟಕುವ ದರದಲ್ಲಿ ಔಷಧಿಗಳು ಲಭ್ಯವಾಗುವಂತೆ ಮಾಡಲು ಆರಂಭವಾಯಿತು. ದುರಾದೃಷ್ಟಕರ ಸಂಗತಿಯೆಂದರೆ ಮನಮೋಹನ ಸಿಂಗ್ ಅವರ ಸರ್ಕಾರದಲ್ಲಿ ಈ ಉತ್ತಮ ಯೋಜನೆ ಜಾರಿಗೆ ಬಂದಿದ್ದರೂ ಅವುಗಳನ್ನು ಜನರ ಬಳಿ ಕೊಂಡೊಯ್ಯುವುದರಲ್ಲಿ ಸರ್ಕಾರದ ತೋರಿದ ನಿರಾಸಕ್ತಿ ಯಿಂದ ೨೦೦೮ ರಿಂದ ೨೦೧೪ ರವರಗೆ ಕೇವಲ ೮೦ ‘ಜನೌಷಧಿ ಕೇಂದ್ರ’ಗಳು ಮಾತ್ರ ದೇಶದಲ್ಲಿ ತೆರೆಯಲಾಗಿತ್ತು.
ನಾಯಕತ್ವದಲ್ಲಿ ಗಟ್ಟಿತನ ಇಲ್ಲದಿದ್ದರೆ, ಯೋಜನೆಗಳ ಜಾರಿಯಲ್ಲಿ ಬದ್ಧತೆ ಕಾಣೆಯಾಗಿದ್ದರೆ ಹಾಗೂ ಯೋಜನೆ ಯನ್ನು ಕೊನೆಯ ವ್ಯಕ್ತಿಯವರಗೆ ಕೊಂಡ್ಯೊಯುವ ಛಲವಿಲ್ಲದಿದ್ದರೆ ಹೇಗೆ ಉತ್ತಮ ಯೋಜನೆಗಳು ಜನರನ್ನು ತಲುಪಲು ವಿಫಲವಾಗುತ್ತದೆ ಎಂಬುದಕ್ಕೆ ಹತ್ತು ವರ್ಷಗಳ ಯುಪಿಎ ಸರ್ಕಾರದಲ್ಲಿ ಹಲವಾರು ಯೋಜನೆಗಳು ಉದಾಹರಣೆಯಾಗಿವೆ. ಆಧಾರ್ ಕಾರ್ಡ್ ಜಾರಿಗೆ ತಂದಾಗ ಯುಪಿಎ ಸರ್ಕಾರ ಇದಕ್ಕೆ ಕಾನೂನಾತ್ಮಕ ಬಲ ನೀಡಲಿಲ್ಲ.
ಆದಕಾರಣ ಸರ್ಕಾರ ಯೋಜನೆಗಳ ಜಾರಿಗೆ ಗರಿಷ್ಠ ಪ್ರಮಾಣದಲ್ಲಿ ಅಳವಡಿಸಿಕೊಳ್ಳಲು ಸೋತಿತು. ಪಂಚಾಯತಿಗಳನ್ನು ಬ್ರಾಡ್ ಬ್ಯಾಂಡ್ ನೆಟ್ ವರ್ಕ್‌ನಲ್ಲಿ ಜೋಡಿಸುವ ಯೋಜನೆಯು ೨೦೧೨ ರಲ್ಲಿ ಆರಂಭವಾದರೂ ಎರಡು ವರ್ಷದಲ್ಲಿ ಕೇವಲ ೩೦ ರಿಂದ ೪೦ ಪಂಚಾಯತಿಗಳಿಗೆ ಬ್ರಾಡ್ ಬ್ಯಾಂಡ್ ಸಂಪರ್ಕ ಕೊಟ್ಟಿದ್ದರು. ಇದಕ್ಕೆ ವ್ಯತಿರಿಕ್ತವಾಗಿ ಕಳೆದ ಎಂಟು ವರ್ಷದ ಅವಧಿಯಲ್ಲಿ ೧,೫೦,೦೦೦ ಗ್ರಾಮ ಪಂಚಾಯ್ತಿಗಳಿಗೆ ಬ್ರಾಡ್ ಬ್ಯಾಂಡ್ ಸಂಪರ್ಕ ನೀಡಿದೆ.
ಮೋದಿ ಸರ್ಕಾರದಲ್ಲಿ ರಾಸಾಯನಿಕ ಮತ್ತು ರಸಗೊಬ್ಬರ ಖಾತೆಯ ಮಂತ್ರಿಯಾಗಿ ಅನಂತಕುಮಾರ್ ನಿಯುಕ್ತಿಯಾಗುತ್ತಾರೆ. ಅವರ ಕ್ರಿಯಾಶೀಲ ವ್ಯಕ್ತಿತ್ವದ ಕಾರಣ ಈ ಖಾತೆಯಲ್ಲಿ ಮಹತ್ತರ ಬದಲಾವಣೆಯನ್ನು ತಂದರು. ಹಲವಾರು ಉಪಯುಕ್ತ ಯೋಜನೆಗಳನ್ನು ಕೈಗೊಂಡು ಪ್ರಧಾನಿಗಳ ಆಶಯಕ್ಕೆ ಹೆಗಲಾಗಿ ಕರ್ತವ್ಯ ನಿರ್ವಹಿಸಿದ್ದು ಅವರ ಹೆಗ್ಗಳಿಕೆ. ಪ್ರಧಾನ ಮಂತ್ರಿ ಮೋದಿಯವರು ಬಡವರಿಗೆ ಮತ್ತು ಮಧ್ಯಮ ವರ್ಗದ ಜನರಿಗೆ ಕೈಗೆಟಕುವ ದರದಲ್ಲಿ ಔಷಧಿಗಳು ದೊರೆಯುವಂತೆ ಮಾಡಲು ಆಯ್ದುಕೊಂಡ ಮಾರ್ಗವೇ ‘ಜನೌಷಽ ಕೇಂದ್ರ’. ಯುಪಿಎ ಕಾಲದ ಹೆಸರು ಬದಲಾಗಿ ‘ಪ್ರಧಾನ ಮಂತ್ರಿ ಭಾರತೀಯ ಜನೌಷಽ ಪರಿಯೋಜನಾ’ ಎಂದು ಬದಲಾಯಿತು.
ಬೃಹತ್ ಫಾರ್ಮಾ ಕಂಪನಿಗಳು ನೂರಾರು ಕೋಟಿ ವೆಚ್ಚ ಮಾಡಿ ಅನೇಕ ಖಾಯಿಲೆಗಳಿಗೆ ಔಷಧವನ್ನು ಕಂಡು ಹಿಡಿಯುತ್ತಾರೆ. ಈ ಔಷಧಿಗಳಿಗೆ ಪೇಟೆಂಟ್ ಮಾಡುವ ಕಾರಣ ಬೇರಾರು ಕನಿಷ್ಠ ೧೫ ವರ್ಷ ಅದನ್ನು ಉತ್ಪಾದಿಸಲು ಸಾಧ್ಯವಿಲ್ಲ. ಒಮ್ಮೆ ಪೇಟೆಂಟ್ ಮಾಡಿದ ಅವಧಿಯು ಮುಗಿದ
ತರುವಾಯ ಇತರ ಕಂಪನಿಗಳು ಅದೇ ಔಷಧವನ್ನು ಬೇರೆ ಹೆಸರಲ್ಲಿ ಮಾರಾಟ ಮಾಡುತ್ತಾರೆ. ಇವುಗಳನ್ನು ಜೆನರಿಕ್ ಔಷಧಿಯ ಹೆಸರಲ್ಲಿ ಕರೆಲಾಗುತ್ತದೆ. ದೊಡ್ಡ ದೊಡ್ಡ ಬ್ರಾಂಡೆಡ್ ಕಂಪನಿಗಳು ಈ ಬಗೆಯ ಜೆನರಿಕ್ ಔಷಧಿಗಳನ್ನುಉತ್ಪಾದಿಸುತ್ತಾರೆ. ಉದಾಹರಣೆಗೆ ಪ್ಯಾರಸಿಟಮಾಲ್ ಮಾತ್ರೆಗಳು ಕ್ರೋಸಿನ್ ಮತ್ತು ಡೋಲೋ ಹೆಸರಲ್ಲಿ ಮಾರಾಟವಾಗುತ್ತಿದೆ. ಬ್ರಾಂಡೆಡ್ ಕಂಪನಿಗಳು ತಮ್ಮ ಔಷಧಿಗಳನ್ನು ಜನಪ್ರಿಯಗೊಳಿಸಲು ಕೋಟ್ಯಂತರ
ರುಪಾಯಿ ವೆಚ್ಚ ಮಾಡುವುದು ಸಾಮಾನ್ಯ. ಬೆಂಗಳೂರು ಮೂಲದ ಮೈಕ್ರೋಲ್ಯಾಬ್ಸ್ ತಾವು ಉತ್ಪಾದಿಸುವ ಜೆನರಿಕ್ ಔಷಧಿ ‘ಡೋಲೋ ೬೫೦’ ಜನಪ್ರಿಯಗೊಳಿಸಲು ಒಂದು ಸಾವಿರ ಕೋಟಿ ಉಡುಗೊರೆ ಕೊಟ್ಟ ಸಂಗತಿಯು ತನಿಖೆಯಲ್ಲಿ ಬಯಲಾಗಿದೆ.
ತಮ್ಮ ಮಾತ್ರೆಯನ್ನೇ ಬರೆಯಲು ವೈದ್ಯರಿಗೆ ಹಣ ಉಡುಗೊರೆಗಳನ್ನು ಧಾರಾಳವಾಗಿ ನೀಡುತ್ತಾರೆ. ಅದಲ್ಲದೆ ಔಷಽ ಮಾರುವ ಅಂಗಡಿಗಳಿಗೂ ತಮ್ಮ
ಪದಾರ್ಥವನ್ನು ದಾಸ್ತಾನು ಇಡಲು ಹೆಚ್ಚು ಹೆಚ್ಚು ರಿಯಾಂತಿಗಳನ್ನು ನೀಡುವ ಮೂಲಕ ಉತ್ತೇಜಿಸುತ್ತಾರೆ. ಇದರ ಎಲ್ಲಾ ವೆಚ್ಚವು ಇವರ ಮಾತ್ರೆಗಳನ್ನು ಖರೀದಿಸುವ ಬಡ ಪಾಯಿಗಳ ತಲೆಯ ಮೇಲೆ ಹಾಕುವುದರಿಂದ ಬ್ರಾಂಡೆಡ್ ಔಷಧಿಗಳು ದುಬಾರಿಯಾಗುತ್ತವೆ. ಔಷಧಿ ತಯಾರಿಸುವ ಕಂಪನಿ, ವೈದ್ಯರು ಹಾಗೂ ಔಷಧಿ ಮಾರುವ ಅಂಗಡಿಗಳ ನಡುವೆ ಇರುವ ಅಪವಿತ್ರ ಮೈತ್ರಿಯು ಬ್ರಾಂಡೆಡ್ ಔಷಽಗಳ ಮಾರುಕಟ್ಟೆಯಲ್ಲಿ ಇರುವುದರಿಂದ ಇವರ ಹಿಡಿತವನ್ನು ಭೇದಿಸುವುದು ಅಷ್ಟು ಸುಲಭದ ಕೆಲಸವಲ್ಲ. ಜನೌಷಧಿ ಕೇಂದ್ರದಲ್ಲಿ ಮಾರಾಟವಾಗುವ ಔಷಧಿಗಳು ಬ್ರಾಂಡೆಡ್ ಅಲ್ಲ, ಆದರೆ ಇದರ ಹೊರತು ಇನ್ನೆಲ್ಲಾ ಸಂಗತಿಗಳಲ್ಲಿ ಯಾವುದೇ ವ್ಯತ್ಯಾಸವಿರುವುದಿಲ್ಲ.
ಹೀಗಾಗಿ ಇವುಗಳ ದರವು ಕಡಿಮೆ ಇರುವುದು. ವೈದ್ಯರುಗಳಿಗೆ ಈ ಔಷಧಿ ಬರೆಯಲು ಯಾವುದೇ ಉತ್ತೇಜನವಿಲ್ಲದಿರುವುದರಿಂದ ಇದನ್ನು ಶಿಫಾರಸು ಮಾಡಿ ರೋಗಿಗಳಿಗೆ ಚೀಟಿಯನ್ನು ಬರೆಯಲ್ಲಾ ಎಂದು ಜನೌಷಧಿ ಮಳಿಗೆಯವರು ದೂರುತ್ತಾರೆ. ಜನೌಷಽ ಕೇಂದ್ರದಲ್ಲಿ ಮಾರಾಟ ಮಾಡುವ ಔಷಧಗಳ ಬೆಲೆಯು ಬ್ರಾಂಡೆಡ್ ಔಷಧಿಗಳಿಗಿಂತ ಕನಿಷ್ಠ ಶೇ. ೫೦ ರಿಂದ ೭೦ರಷ್ಟು ದರದಲ್ಲಿ ಕಡಿಮೆ ಇದೆ. ಗಮನಾರ್ಹವೆಂದರೆ ಬ್ರಾಂಡೆಡ್ ಔಷಽಗೂ
ಜನೌಷಧಿ ಕೇಂದ್ರದಲ್ಲಿ ದೊರೆಯುವ ಔಷಧಿಯ ಗುಣಮಟ್ಟಕ್ಕೆ ಯಾವುದೇ ವ್ಯತ್ಯಾಸವಿಲ್ಲ. ಕೇವಲ ಪ್ರತಿಷ್ಠಿತ ಬ್ರಾಂಡ್‌ನ ಹೆಸರು ಇಲ್ಲ ಎಂಬುದನ್ನು ಹೊರತು ಪಡಿಸಿ ಕೆಲವು ಸಾಮಾನ್ಯವಾಗಿ ಬಳಕೆಯಾಗುವ ಔಷಧಿಗಳ ಬೆಲೆಯನ್ನು ತುಲನೆ ಮಾಡಿದರೆ ಇದರ ವ್ಯತ್ಯಾಸ ಗೊತ್ತಾಗುತ್ತದೆ. ಜನೌಷಧಿ ಕೇಂದ್ರದಲ್ಲಿ ಪ್ಯಾರಾಸಿಟಮಾಲ್ ಹತ್ತು ಮಾತ್ರೆಯ ದರವು ರು. ೨೦ ಮಾತ್ರ. ಅದೇ ಡೋಲೊ ೬೫೦ ಖರೀದಿಸಿದರೆ ರು.೩೫ ಕೊಡಬೇಕಾಗುತ್ತದೆ.
ನೆಗಡಿಗೆ ಖರೀದಿಸುವ ಬ್ರಾಂಡೆಡ್ ಸಿಟ್ ಜಿನ್ ಹತ್ತು ಮಾತ್ರೆಗೆ ರು. ೪೫ ತೆರಬೇಕು ಅದೇ ಮಾತ್ರೆಯು ಜನೌಷಧಿ ಕೇಂದ್ರದಲ್ಲಿ ಹತ್ತು ಮಾತ್ರೆಗೆ ರು. ೫ ಮಾತ್ರ. ಮಹಿಳೆಯರಿಗೆ ಅತ್ಯಾವಶ್ಯಕವಾಗಿ ಬೇಕಾಗುವ ಸ್ಯಾನಿಟರಿ ಪ್ಯಾಡ್ ಜನೌಷಧಿ ಕೇಂದ್ರದಲ್ಲಿ ಒಂದು ರುಪಾಯಿಗೆ ದೊರೆಯುತ್ತದೆ. ಅದೇ ವಿಸ್ಪರ್ ಅಥವಾ ಸ್ಟೇ ಫ್ರೀ ಬ್ರಾಂಡೆಡ್ ನ್ಯಾಪ್ ಕಿನ್ ಖರೀದಿಸಿದರೆ ಎಂಟು ಪ್ಯಾಡ್‌ಗೆ ರು. ೪೦ ತೆರಬೇಕು. ರಕ್ತದಲ್ಲಿ ಸಕ್ಕರೆಯ ಅಂಶ ಪರೀಕ್ಷೆ ಮಾಡುವ ಉಪಕರಣ ಆಕ್ಯುಚೆಕ್ ಬೆಲೆಯು ರು. ೧,೦೦೦. ಆದರೆ ಅದೇ ಜನೌಷಧಿ ಕೇಂದ್ರದಲ್ಲಿ ಮಾರುವ ಉಪಕರಣ ಕೇವಲ ರು. ೫೩೦ಕ್ಕೆ ಲಭ್ಯವಿದೆ. ಸಕ್ಕರೆ ಕಾಯಿಲೆಯವರು ಖರೀದಿಸುವ ಗ್ಲೈಕೋಮೆಟ್ ಜಿಪಿ೨-೩೦ ಮಾತ್ರೆಯ ಬೆಲೆ ರು. ೧೭೮. ಅದರ ಸಮಾನವಾದ ಮಾತ್ರೆ ಜನೌಷಽ ಕೇಂದ್ರದಲ್ಲಿ ೩೦ ಮಾತ್ರೆಗೆ ರು. ೨೪ ಮಾತ್ರ. ಹಾಗೆಯೇ ಬಿಪಿ ಮಾತ್ರೆ ಟೆಲ್ಮ ೪೦ ದರವು ೩೦ ಮಾತ್ರೆಗೆ ರು. ೨೧೦. ಅದರ ಸಮಾನವಾದ ಮಾತ್ರೆಯು ಜನೌಷಧಿ ಕೇಂದ್ರದಲ್ಲಿ ಕೇವಲ ರು. ೩೬ಕ್ಕೆ ದೊರೆಯುತ್ತದೆ.
ಜನೌಷಧಿ ಕೇಂದ್ರದಲ್ಲಿ ತಮ್ಮ ದೈನಂದಿನ ಬಿಪಿ ಮತ್ತು ಸಕ್ಕರೆ ಖಾಯಿಲೆಗೆ ಔಷಧಿ ಖರೀದಿಸುತ್ತಿರುವ ಅನೇಕ ಕುಟುಂಬಗಳಿಗೆ ಆರೋಗ್ಯ ಕಾಪಾಡಿ ಕೊಳ್ಳಲು ಮಾಡುವ ವೆಚ್ಚದಲ್ಲಿ ಶೇ. ೬೦ ರಷ್ಟು ಉಳಿತಾಯವಾಗುತ್ತಿದೆ. ಮಹಾಲಕ್ಷ್ಮೀ ಲೇಔಟ್ ನ ರಂಗಸ್ವಾಮಿ ಮಾಸಿಕ ರು. ೩,೦೦೦ ಮಾತ್ರೆಗಳಿಗೆ ವೆಚ್ಚ ಮಾಡುತ್ತಿದ್ದರು. ಈಗ ಜನೌಷಽ ಕೇಂದ್ರದಲ್ಲಿ ಖರೀದಿಸುವುದರಿಂದ ಅವರಿಗೆ ಕೇವಲ ರು. ೮೦೦ ಮಾತ್ರ ಖರ್ಚಾಗುತ್ತಿದೆ ಎಂದು ಸಂತಸದಿಂದ ಹೇಳುತ್ತಾರೆ. ವಿಜಯನಗರದ ಸರೋಜಮ್ಮನವರ ಮನೆಯಲ್ಲಿ ಪ್ರತಿ ತಿಂಗಳು ಔಷಧಕ್ಕೆ ಮಾಡುತ್ತಿದ್ದ ವೆಚ್ಚ ರು. ೧೩ ಸಾವಿರ. ಆದರೆ ಈಗ ೪ ರಿಂದ ೫ ಸಾವಿರಕ್ಕೆ ಇಳಿದಿದೆ ಎಂದು ಜನೌಷಧಿ ಯೋಜನೆಯನ್ನು ಬಾಯಿ ತುಂಬಾ ಹೊಗಳುತ್ತಾರೆ.
ಭಾರತ ೨೦೨೧-೨೨ರಲ್ಲಿ ೯೦,೦೦೦ ಕೋಟಿ ಔಷಧಿ ಪದಾರ್ಥಗಳ ರ- ಮಾಡಿದೆ. ಕಳೆದ ಹತ್ತು ವರ್ಷದಲ್ಲಿ ಶೇ. ೧೩೮ ರಷ್ಟು ಬೆಳವಣಿಗೆ ರಫ್ತಿನಲ್ಲಿ ಉಂಟಾಗಿದೆ. ಪ್ರಪಂಚದ ಶೇ. ೬೦ ರಷ್ಟು ಲಸಿಕೆಗಳ ಉತ್ಪಾದನೆ ಭಾರತದಲ್ಲಿ ನಡೆಯುತ್ತಿದೆ. ಶೇ. ೨೦ ರಷ್ಟು ಜೆನರಿಕ್ ಔಷಧಿಯನ್ನು ರಫ್ತು ಮಾಡುತ್ತದೆ. ಇಂತಹ ಬಲಾಢ್ಯ ಉದ್ಯಮವನ್ನು ಎದುರಿಸಿ ಸರ್ಕಾರ ಜನೌಷಽ ಕೇಂದ್ರಗಳನ್ನು ಜನಪ್ರಿಯಗೊಳಿಸಬೇಕು ಮತ್ತು ಮಾರುಕಟ್ಟೆ ವಿಸ್ತರಿಸಬೇಕು. ಕಳೆದ ೮
ವರ್ಷದಲ್ಲಿ ಜನೌಷಧಿ ಕೇಂದ್ರಗಳು ೮೦ ರಿಂದ ೯,೧೭೭ ಸಂಖ್ಯೆಯನ್ನು ದಾಟಿದೆ.
೭೬೩ ಜಿಲ್ಲೆಗಳ ಪೈಕಿ ೭೪೩ ಜಿಲ್ಲೆಗಳಲ್ಲಿ ಜನೌಷಧಿ ಕೇಂದ್ರಗಳನ್ನು ತೆರೆಯಲಾಗಿದೆ. ಇವೆಲ್ಲದರ ಪರಿಣಾಮವಾಗಿ ಜನೌಷಧಿ ವಹಿವಾಟು ರು. ೬.೭೦ ಕೋಟಿಯಿಂದ ಈಗ ಸಾವಿರ ಕೋಟಿಗೆ ದಾಟಿದೆ. ಕರ್ನಾಟಕದಲ್ಲಿ ೧,೫೦೦ಕ್ಕೂ ಹೆಚ್ಚು ಜನೌಷಧಿ ಕೇಂದ್ರಗಳನ್ನು ತೆರೆಯಲಾಗಿದೆ. ಕಳೆದ ವರ್ಷ ರು. ೧೭೦ ಕೋಟಿ ವಹಿವಾಟು ಮಾಡಿವೆ. ಈ ಬಡವರಿಗಾಗಿ ಇರುವ ಯೋಜನೆಯು ಮತ್ತಷ್ಟು ಜನರ ತಲುಪಲು ಸರ್ಕಾರಗಳು ಜನೌಷಧಿ ಕೇಂದ್ರಗಳಲ್ಲಿ ದೊರೆಯುವ ಔಷಧಿಗಳ ಬಗ್ಗೆ ಸಾರ್ವಜನಿಕರಿಗೆ ವಿಶ್ವಾಸ ಮೂಡಿಸುವ ಕೆಲಸ ಮಾಡಬೇಕಾಗಿದೆ. ಕಡಿಮೆ ದರದಲ್ಲಿ ಲಭ್ಯವಾಗುವುದರಿಂದ ಕಳಪೆ ಗುಣಮಟ್ಟವಿರಬಹುದು ಎಂಬ ಜನರ ಅನುಮಾನವನ್ನು ನಿವಾರಿಸಬೇಕು. ಇದಕ್ಕಾಗಿ ನಿರಂತರವಾಗಿ ಗುಣಮಟ್ಚದ ಪರೀಕ್ಷೆ ನಡೆಸಲು ಸೂಕ್ತ ನಿಯಂತ್ರಣ ಪ್ರಾಧಿಕಾರ ಬೇಕಾಗಿದೆ ಎಂದು ಖ್ಯಾತ ವೈದ್ಯರೊಬ್ಬರು ಪ್ರತಿಪಾದಿಸುತ್ತಾರೆ.
ಬಹುಮುಖ್ಯ ಸಂಗತಿಯೆಂದರೆ ಜನೌಷಧಿ ಕೇಂದ್ರದಲ್ಲಿ ಕಡಿಮೆ ಬೆಲೆಗೆ ಮಾರಾಟವಾಗುವ ಔಷಧಿಗಳ ಬಗ್ಗೆ ವ್ಯಾಪಕವಾಗಿ ಪ್ರಚಾರಾಭಿಯಾನ ಕೈಗೊಳ್ಳಬೇಕಾದ ಅಗತ್ಯವಿದೆ. ಪ್ರಧಾನಿ ಮೋದಿಯವರು ಹಲವಾರು ಸಂದರ್ಭದಲ್ಲಿ ಜನೌಷಽ ಕೇಂದ್ರಗಳ ಫಲಾನುಭವಿಗಳೊಂದಿಗೆ ಸಂವಾದ
ಮಾಡಿ ಅವರ ಅನುಭವ ಸ್ವತ: ಪಡೆದುಕೊಂಡಿದ್ದಾರೆ. ಅವರ ಈ ಪ್ರಯತ್ನ ಜನೌಷಽ ಕೇಂದ್ರಗಳನ್ನು ಜನಪ್ರಿಯಗೊಳಿಸಲು ನಿಶ್ಚಿತವಾಗಿ ಸಹಕಾರಿಯಾಗಿದೆ.
ಕಳೆದ ೯ ವರ್ಷದ ಮೋದಿ ಸರ್ಕಾರದ ಬಹುದೊಡ್ಡ ಸಾಧನೆಯ ಪಟ್ಟಿಯಲ್ಲಿ ಜನೌಷಽ ಕೇಂದ್ರದ ವಿಸ್ತರಣೆ ಬಹು ಪ್ರಮುಖ ಸ್ಥಾನ ಪಡೆದಿದೆ ಮತ್ತು ಒಂದು ಯೋಜನೆ ಯನ್ನು ಕೊನೆಯ ವ್ಯಕ್ತಿಯವರಗೆ ಕೊಂಡೊಯ್ಯುವ ಸರ್ಕಾರದ ಬದ್ಧತೆಗೆ ಉತ್ತಮ ಉದಾಹರಣೆಯಾಗಿದೆ. ಖಾಸಗಿ ಫಾರ್ಮಾ ಪನಿಗಳು ಜನೌಷಧಿ ಯೋಜನೆ ಯನ್ನು ವಿಫಲಗೊಳಿಸಲು ಎಲ್ಲ ರೀತಿಯ ಕುಯುಕ್ತಿಗಳನ್ನು ಮಾಡಲು ಹೇಸುವುದಿಲ್ಲ. ಆದರೆ ಬಡವರಿಗೆ ಮತ್ತು ಮಧ್ಯಮ ವರ್ಗದವರಿಗೆ ಬಹುಪಯೋಗಿ ಮತ್ತು ಹಣ ಉಳಿತಾಯವಾಗುವ ಈ ಯೋಜನೆಯನ್ನು ಯಶಸ್ವಿಗೊಳಿಸಲು ಸರ್ಕಾರದೊಂದಿಗೆ ಪ್ರತಿಯೊಬ್ಬರು ಕೈಜೋಡಿಸಬೇಕಾಗಿದೆ.