ರಾಮರಥ
ಯಗಟಿ ರಘು ನಾಡಿಗ್
ರಾಷ್ಟ್ರಪ್ರೇಮ, ಅತ್ಮನಿರ್ಭರ ಭಾರತ, ಸ್ವಾಭಿಮಾನ, ಸ್ವಾವಲಂಬಿತನ ಇವೇ ಮೊದಲಾದ ಪರಿಕಲ್ಪನೆಗಳಿಗೆ ಕಳೆದ ೯ ವರ್ಷಗಳಿಂದ ಒಂದು ತೂಕ ಹೆಚ್ಚೇ ಮಹತ್ವ ಸಿಕ್ಕಿದೆ ಎಂದರೆ ಅತಿಶಯೋಕ್ತಿ ಆಗಲಾರದು. ಈ ಪೈಕಿ, ‘ರಾಷ್ಟ್ರಪ್ರೇಮ’ ಎಂಬ ಪರಿಕಲ್ಪನೆಯ ಕುರಿತು ಮತ್ತಷ್ಟು ಆಳವಾದ ಗ್ರಹಿಕೆ ದಕ್ಕಬೇಕಾದರೆ, ನಾವು ಮುಖಮಾಡಬೇಕಾದ್ದು ಸಾಕ್ಷಾತ್ ಶ್ರೀರಾಮನ ಕಡೆಗೇ. ಬನ್ನಿ, ಮತ್ತೊಮ್ಮೆ ತ್ರೇತಾಯುಗಕ್ಕೆ ತೆರಳೋಣ…
ತನ್ನ ಪತ್ನಿ ಸೀತೆಯನ್ನು ಕದ್ದೊಯ್ದು ಹಲವಾರು ಸಂಕಷ್ಟಗಳಿಗೆ ತನ್ನನ್ನು ಈಡುಮಾಡಿದ್ದ ರಾವಣನನ್ನು ಹಾಗೂ ಅವನ ರಾಕ್ಷಸ ಪಡೆಯನ್ನು, ಕಪಿಸೇನೆಯ
ಒತ್ತಾಸೆಯೊಂದಿಗೆ ನಿರ್ನಾಮ ಮಾಡಿದ ರಾಮ. ತನ್ನ ಅವತಾರದ ಹಿಂದಿದ್ದ ಉದ್ದೇಶಗಳ ಪೈಕಿ ಒಂದು ಈಡೇರುತ್ತಿದ್ದಂತೆ ಲಂಕೆಯಿಂದ ಹೊರಡಲು ಸನ್ನದ್ಧ ನಾಗುತ್ತಾನೆ ರಾಮ. ಆಗ ಆತನ ಸೋದರ ಲಕ್ಷಣ, ‘ಅಣ್ಣಾ, ಈ ಲಂಕಾಸಾಮ್ರಾಜ್ಯವೂ ಸಾಕಷ್ಟು ವಿಸ್ತಾರವಾಗಿದೆ; ಇಲ್ಲಿನ ಅರಮನೆಯೂ ಭವ್ಯವಾಗಿದೆ, ಸುಂದರವಾಗಿದೆ. ನಾವು ಅಯೋಧ್ಯೆಗೆ ಮರಳಿದ ನಂತರ ಅಲ್ಲಿ ನಡೆಸುವುದೂ ರಾಜ್ಯಾಡಳಿತವನ್ನೇ ತಾನೇ? ಹೇಗಿದ್ದರೂ ನಾವು ರಾವಣನನ್ನು ಮತ್ತು ಅವನ ಪಡೆಯನ್ನು ಸಂಹರಿಸಿರುವುದರಿಂದ, ಈ ಅರಮನೆಯನ್ನು ನಾವು ವಶಕ್ಕೆ ತೆಗೆದುಕೊಂಡು ಆಳ್ವಿಕೆ ಮಾಡಿದರೆ ನಮ್ಮನ್ನು ಯಾರೂ ಕೇಳುವುದಿಲ್ಲ. ಇಲ್ಲಿಯೇ ಇದ್ದುಬಿಡೋಣವೇ?’ ಎಂದು ಕೇಳುತ್ತಾನೆ.
ಆಗ ಶ್ರೀರಾಮನ ಮೊಗದಲ್ಲಿ ಅಪ್ರಯತ್ನ ವಾಗಿ ಮಂದಹಾಸ ಮೂಡುತ್ತದೆ, ಜತೆಯಲ್ಲಿ ವಿವೇಕದ ನುಡಿಯೂ ಹೊಮ್ಮುತ್ತದೆ. ಲಕ್ಷ್ಮಣನ ತಲೆಯನ್ನೊಮ್ಮೆ
ಆಪ್ಯಾಯಮಾನವಾಗಿ ನೇವರಿಸುತ್ತಾ ಶ್ರೀರಾಮ ಹೇಳುತ್ತಾನೆ: “ಸೋದರ ಲಕ್ಷ್ಮಣಾ, ನೀನು ಹೇಳಿದಂತೆ ಈ ಸಾಮ್ರಾಜ್ಯವು ಸಾಕಷ್ಟು ವಿಸ್ತಾರವಾಗಿದೆ; ಅರಮ
ನೆಯೂ ಭವ್ಯವಾಗಿದೆ-ಸುಂದರವಾಗಿದೆ. ಸಿರಿ-ಸಂಪತ್ತು ಗಳು ಇಲ್ಲಿ ತುಂಬಿ ತುಳುಕಾಡುತ್ತಿವೆ. ನಾವು ಧರ್ಮಸೂತ್ರ ಮತ್ತು ಯುದ್ಧದ ನಿಯಮಗಳಿಗೆ ಅನುಸಾರ ವಾಗಿಯೇ ಲಂಕೆಯನ್ನು ಗೆದ್ದಿರಬಹುದು. ಹೀಗಾಗಿ ಇಲ್ಲಿನ ಅರಮನೆ ಹಾಗೂ ಅದರ ಸಕಲೈಶ್ವರ್ಯಗಳನ್ನು ನಮ್ಮದಾಗಿಸಿಕೊಂಡು ಇಲ್ಲಿಯೇ ರಾಜ್ಯಭಾರ ಮಾಡಿದರೂ ನಮ್ಮನ್ನು ಯಾರೂ ಆಕ್ಷೇಪಿಸುವುದಿಲ್ಲ.
ಆದರೆ ಸೋದರಾ, ‘ಜನನೀ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸೀ’ ಎಂಬ ಶ್ರೇಷ್ಠಮಾತನ್ನು ಮರೆಯಬೇಡ; ಅಂದರೆ ತಾಯಿ ಮತ್ತು ತಾಯ್ನೆಲ ಇವೆರಡೂ ಸ್ವರ್ಗಕ್ಕಿಂತಲೂ ಮಿಗಿಲಾದಂಥವು. ರಾಜ-ಮಹಾರಾಜರು ಒಂದೊಮ್ಮೆ ಮತ್ತೊಂದು ರಾಜ್ಯವನ್ನು ಗೆದ್ದು ಸಾಮ್ರಾಜ್ಯವನ್ನು ವಿಸ್ತರಿಸಿದರೂ, ಸ್ವಂತ ರಾಜ್ಯಕ್ಕೆ ಹಿಂದಿರುಗುವುದು ಮತ್ತು ಅಲ್ಲಿಯೇ ವಾಸಿಸುವುದೇ ಶ್ರೇಷ್ಠ ಮತ್ತು ಶ್ರೇಯಸ್ಕರ; ಜನ್ಮಸ್ಥಳ ದಿಂದ ದೂರವಿರುವ ಭೂಮಿಯಲ್ಲಿ ವಾಸಿಸುವುದು ಸ್ವತಃ ದುಃಖದ ಮತ್ತೊಂದು ರೂಪವೇ ಅಗಿದೆ. ಹೀಗಾಗಿ ನಾವು ಅಯೋಧ್ಯೆಗೆ ಮರಳುವುದೇ ಲೇಸು”.
ಯುದ್ಧವನ್ನು ಗೆದ್ದ ಸಂಭ್ರಮದಲ್ಲಿ, ಅರೆಕ್ಷಣದಲ್ಲೇ ಅದೆಂಥಾ ಲೋಭಕ್ಕೆ ತಾನು ಒಳಗಾಗಿದ್ದೆ ಎಂಬ ನಾಚಿಕೆಯಲ್ಲಿ ಲಕ್ಷ್ಮಣ ತಲೆತಗ್ಗಿಸುತ್ತಾನೆ… ರಾಮನದು ಅದೆಂಥಾ ಧರ್ಮಪರಾಯಣತೆ, ಮಾನವೀಯತೆ ನೋಡಿದಿರಾ? ಲಕ್ಷ್ಮಣ ಹೇಳಿದಂತೆ, ರಾಮನ ಪಡೆ ಲಂಕೆಯಲ್ಲೇ ಉಳಿದು ರಾಜ್ಯಭಾರ ಮಾಡಬಹುದಿತ್ತು; ಆದರೆ ಆದರ್ಶಪುರುಷ ರಾಮನಲ್ಲಿ ಅಂಥ ಆಲೋಚನೆಯು ಲವಲೇಶದಷ್ಟೂ ಸುಳಿಯಲಿಲ್ಲ. ಕಾರಣ ರಾವಣನೊಂದಿಗೆ ರಾಮ ಯುದ್ಧಕ್ಕಿಳಿದಿದ್ದು, ಅವನ ವಶದಲ್ಲಿದ್ದ ತನ್ನ ಪತ್ನಿ ಸೀತೆಯನ್ನು ಬಿಡಿಸಿಕೊಳ್ಳಲಿಕ್ಕಾಗಿಯೇ ವಿನಾ ಸಾಮ್ರಾಜ್ಯದ ವಿಸ್ತರಣೆಗಲ್ಲ (ರಾವಣ ಸಂಹಾರವು ಆತನ ಅವತಾರದ ನಿಮಿತ್ತವೂ ಆಗಿತ್ತೆನ್ನಿ).
ರಾಮನು ಲಂಕೆಗೆ ಬಂದ ಕೆಲಸ ಮುಗಿದಿತ್ತು. ಹೀಗಾಗಿ, ರಾಕ್ಷಸ ಕುಲದಲ್ಲಿ ಹುಟ್ಟಿಯೂ ಸಾತ್ವಿಕತೆಯ ಪ್ರತಿರೂಪವೇ ಆಗಿದ್ದ ಮತ್ತು ಧರ್ಮಪರಾಯಣನೂ ಆಗಿದ್ದ
ರಾವಣನ ಸೋದರ ವಿಭೀಷಣನಿಗೆ ಲಂಕೆಯ ರಾಜನಾಗಿ ಪಟ್ಟಾಭಿಷೇಕ ಮಾಡಿ, ಸೀತೆ, ಲಕ್ಷ್ಮಣ ಹಾಗೂ ಮಿಕ್ಕ ಪರಿ ವಾರದ ಸಮೇತ ಅಯೋಧ್ಯೆಗೆ ಮರಳು ತ್ತಾನೆ ರಾಮ.
‘ರಾಮ’ ಮತ್ತು ‘ರಾಮಾಯಣ’, ತ್ರೇತಾಯುಗಕ್ಕಷ್ಟೇ ಸೀಮಿತವಲ್ಲ ಅಥವಾ ಈ ಎರಡು ಮಹಾನ್ ಪರಿಕಲ್ಪನೆಗಳಲ್ಲಿ ಕೆನೆಗಟ್ಟಿರುವ ಮೌಲ್ಯಗಳು ಗೊಡ್ಡು ಗ್ರಹಿಕೆಗಳಲ್ಲ. ಅವು ಸರ್ವಕಾಲಕ್ಕೂ ಸಲ್ಲುವಂಥವು. ಅವು ಧರ್ಮಾತೀತ, ವರ್ಗಾತೀತ, ಚಿರಂತನ ಮಾತ್ರವೇ ಅಲ್ಲ, ಈ ಜಗತ್ತಿನ ಯಾವುದೇ ಭೌಗೋಳಿಕ ನೆಲೆಗೆ ಅನ್ವಯವಾಗುವಂಥವು. ಹೀಗಾಗಿ, ಭಾರತ ಮಾತ್ರವಲ್ಲದೆ ಬರ್ಮಾ, ಇಂಡೋನೇಷ್ಯಾ, ಕಾಂಬೋಡಿಯಾ, ಲಾವೋಸ್, ಫಿಲಿಪ್ಪೀನ್ಸ್, ನೇಪಾಳ, ಶ್ರೀಲಂಕಾ, ಥಾಯ್ಲೆಂಡ್, ಮಲೇಷ್ಯಾ, ಜಪಾನ್, ಮಂಗೋಲಿಯಾ, ಚೀನಾ, ವಿಯೆಟ್ನಾಂ ಹೀಗೆ ಜಗತ್ತಿನ ವಿವಿಧ ದೇಶಗಳಲ್ಲಿ ‘ರಾಮ’ ಮತ್ತು ‘ರಾಮಾಯಣ’ಕ್ಕೆ ಕೆಂಪುಹಾಸಿನ ಸ್ವಾಗತವಿದೆ. ಯುಗಗಳು ಬದಲಾದರೂ ಈ ಎರಡು ಅಮೂಲ್ಯ ರತ್ನಗಳು ಪ್ರಸ್ತುತತೆಯನ್ನು ಕಳೆದುಕೊಳ್ಳುವುದಿಲ್ಲ ಎಂಬುದಕ್ಕೆ, ತ್ರೇತಾಯುಗ ಕಳೆದು, ದ್ವಾಪರ ಮುಗಿದು, ಈಗಿನ ಕಲಿಯುಗದ ಕಾಲ ಘಟ್ಟದಲ್ಲೂ ರಾಮ ರಾರಾಜಿಸುತ್ತಿದ್ದಾನೆ, ರಾಮಾಯಣ ಮಹಾಕಾವ್ಯವು ವಿದ್ವಜ್ಜನರಿಂದಲೂ ಅನಕ್ಷರ ಸ್ಥರಿಂದಲೂ ಏಕಪ್ರಕಾರವಾಗಿ ಆದರಿಸಲ್ಪಡುತ್ತಿದೆ, ಆರಾಽಸಲ್ಪ ಡುತ್ತಿದೆ.
ಉತ್ತರ ಪ್ರದೇಶ ರಾಜ್ಯದ ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಗೊಳ್ಳುತ್ತಿದೆ ಎಂಬ ಮಾಹಿತಿ ಕಿವಿಗೆ ಬೀಳುತ್ತಿದ್ದಂತೆ ಒಂದಿಡೀ ದೇಶದ ಆಬಾಲವೃದ್ಧ ರೆಲ್ಲರೂ ಸಂಭ್ರಮಿಸುತ್ತಿರುವುದೇ ಇದಕ್ಕೆ ಪ್ರತ್ಯಕ್ಷ ಸಾಕ್ಷಿ. ವಿದ್ಯಾಭ್ಯಾಸಕ್ಕಾಗಿಯೋ, ಉದ್ಯೋಗಕ್ಕಾಗಿಯೋ, ವ್ಯಾಪಾರ-ವ್ಯವಹಾರಕ್ಕಾಗಿಯೋ ಹುಟ್ಟೂರನ್ನು
ತೊರೆದು ಪಟ್ಟಣ-ನಗರಗಳನ್ನು ಸೇರಿದವರು ತಮ್ಮ ಉದ್ದೇಶ ಈಡೇರುತ್ತಿದ್ದಂತೆ, ಕಾರ್ಯಸಾಧನೆ ಸಾಕಾರಗೊಳ್ಳುತ್ತಿ ದ್ದಂತೆ, ‘ರೆಂಬೆ-ಕೊಂಬೆ’ಗಳ ವಿಸ್ತರಣೆಯ
ರೂಪದಲ್ಲಿ ಹಾಗೆ ದಕ್ಕಿದ ಯಶಸ್ಸಿನ ಗುಂಗಿನಲ್ಲಿ ತಮ್ಮ ‘ಬೇರುಗಳನ್ನು’ ಮರೆಯಬಾರದು. ಬದುಕಿನ ಅನಿವಾರ್ಯಕ್ಕಾಗಿ ಎಲ್ಲೇ ನೆಲೆಸಿರಲಿ, ಸಮಾಜದಲ್ಲಿ ಎಷ್ಟೇ
ಉನ್ನತ ಸ್ಥಾನದಲ್ಲಿರಲಿ ತಾವು ಹುಟ್ಟಿದ ಊರನ್ನು ಸದಾ ಸ್ಮರಿಸುತ್ತಿರಬೇಕು ಎಂಬ ಆಶಯ ರಾಮನ ಈ ನಡೆಯಲ್ಲಿ ಧ್ವನಿತವಾಗಿದೆ.
(ಲೇಖಕರು ಪತ್ರಕರ್ತರು)