Saturday, 14th December 2024

ಜವಾರಿ ತಳಿಯ ಹಸುಗಳಿಗಿಲ್ಲ ಉಳಿಗಾಲ

ಅಭಿಪ್ರಾಯ

ಡಾ.ಮಲ್ಲಿಕಾರ್ಜುನ ಗುಮ್ಮಗೋಳ

gumgolmn@gmail.com

ನಮ್ಮ ಊರು ಮಲೆನಾಡು ಎಂದು ಗೊತ್ತಾಗುತ್ತಿದ್ದಂತೆ ನನ್ನ ಪರಿಚಿತ ವ್ಯಕ್ತಿಯೊಬ್ಬ ನಿಮ್ಮ ಊರಲ್ಲಿ ಜವಾರಿ ತಳಿ ದನಗಳಿದ್ದರೆ ತಿಳಿಸಿ, ನಮಗೆ ಬೇಕಾಗಿವೆ ಎಂದ. ಸಾಕಷ್ಟು ಹಾಲು ಕೊಡುವ ಎಚ್.ಎಫ್., ಜರ್ಸಿ ತಳಿಗಳು ಬೇಕಾದಷ್ಟಿವೆ. ಕಡಿಮೆ ಹಾಲು ಕೊಡುವ ಜವಾರಿ ಹಸು ತೆಗೆದುಕೊಂಡು ಏನು ಮಾಡುತ್ತೀರಿ ಎಂದೆ. ಜವಾರಿ ದನಗಳ ಮಾಂಸ ತಿನ್ನಲು ಬಲು ರುಚಿ ಮತ್ತು ಪೌಷ್ಟಿಕ ಎಂದ. ಒಂದು ಕ್ಷಣ ನನಗೆ ಶಾಕ್ ಹೊಡದಂತಾಯಿತು.

ನಾವು ಸಣ್ಣವರಿದ್ದಾಗ ನಮ್ಮ ಊರಿಗೆ ವಾರಕ್ಕೊಮ್ಮೆ ಕಟುಕರು ಬಂದು ದನ ತುಂಬಿಸಿಕೊಂಡು ಹೋಗುತ್ತಿದ್ದರು. ಅವುಗಳನ್ನೆಲ್ಲ ಮಾಂಸಕ್ಕಾಗಿ ಕೊಲ್ಲುತ್ತಿದ್ದರು ಎಂಬುದು ಬಹಳ ವರ್ಷಗಳ ನಂತರ ನನಗೆ ತಿಳಿದಿತ್ತು. ಹೀಗೆ ಮಾಂಸಕ್ಕಾಗಿ ನಮ್ಮೂರಿನ ಜವಾರಿ ತಳಿ ದನಗಳು ನಿರಂತರ ಮಾರಾಟವಾಗಿ ಈಗ ಊರೇ ಬರಿದಾಗಿದೆ. ಅಳಿದುಳಿದ ದೇಶಿ ದನಗಳನ್ನೂ ಭಕ್ಷಕರು ಹುಡುಕುತ್ತಿದ್ದಾರೆ. ಅಲ್ಲೊಂದು ಇಲ್ಲೊಂದು ಕಂಡು ಬರುವ ಜವಾರಿ ದನಗಳಿಗೆ ಗರ್ಭಧಾರಣೆ ಮಾಡಲೂ ಸಹ ಜವಾರಿ ಬೀಜದ ಹೋರಿಗಳು ಸಿಗುತ್ತಿಲ್ಲ. ಎತ್ತುಗಳಿಂದ ಉಳುಮೆಯೇ ನಡೆಯುತ್ತಿಲ್ಲ ಎಂದಮೇಲೆ, ಹೋರಿಗಳನ್ನು ಯಾರು ಸಾಕುತ್ತಾರೆ? ಹೀಗಾಗಿ ಹೋರಿಕರುಗಳನ್ನು ಮಾರಿಬಿಡುತ್ತಾರೆ. ಪಶುಚಿಕಿತ್ಸಾಲಯಗಳಲ್ಲೂ ಕೃತಕ ಗರ್ಭಧಾರಣೆಗೆ ಜವಾರಿ ತಳಿ ವೀರ್ಯ ಲಭ್ಯವಿಲ್ಲ.

20 ವರ್ಷದ ಹಿಂದೆ ಊರಲ್ಲಿ ಜನಕ್ಕಿಂತ ದನಗಳ ಸಂಖ್ಯೆಯೇ ಹೆಚ್ಚಿತ್ತು. ಪ್ರತಿ ಮನೆಗೂ ಒಂದೊಂದು ದನದ ಕೊಟ್ಟಿಗೆ ಇರುತ್ತಿತ್ತು. ಮನೆಯಲ್ಲಿ ಎಂದಿಗೂ ಹಾಲು ಹೈನು ತಪ್ಪುತ್ತಿರಲಿಲ್ಲ. ಮಜ್ಜಿಗೆಗಿಂತ ನಮಗೆ ಬೆಣ್ಣೆ ಉಂಡೆಯ ಮೇಲೆ ಕಣ್ಣು ಇರುತ್ತಿತ್ತು. ಮಜ್ಜಿಗೆ ಮತ್ತು ಮೊಸರು ದೋಣಿ ಪಾಲಾಗುತ್ತಿತ್ತು. ದಿನಕ್ಕೆ ಎರಡು ಹೊತ್ತು ಜವಾರಿ ಹಾಲಿನ ಕ್ಯಾನ್‌ಗಳನ್ನು ತುಂಬಿಕೊಂಡ ಮಿನಿ ಟ್ರಕ್ ನಮ್ಮೂರಿಂದ ಶಹರಕ್ಕೆ ಹೋಗುತ್ತಿತ್ತು. ಈಗ ಶಹರದಿಂದ ಎಂಥೆಂಥದೋ ಬ್ರ್ಯಾಂಡ್‌ನ ಕಳಪೆ ಹಾಲಿನ ಪ್ಯಾಕೆಟ್‌ಗಳು ಊರಿಗೆ ಬರುತ್ತಿವೆ. ಈಗ ಒಂದು ಲೋಟ ಮಜ್ಜಿಗೆಗೆ ಹತ್ತು ರುಪಾಯಿ ಇದೆ!

ಪ್ರತಿ ಊರಿನ ಮಾತಿನ ರೀತಿ ರಿವಾಜು, ಸಂಸ್ಕೃತಿ ಆಚರಣೆ ಹೇಗೆ ಭಿನ್ನವಾಗಿರುತ್ತವೆಯೋ ಹಾಗೆಯೇ ಪ್ರತಿ ಪ್ರದೇಶದ ಮಣ್ಣು, ಬೆಳೆ, ಹವಾಮಾನ , ಮಳೆ ಪ್ರಮಾಣ ವಿಭಿನ್ನವಾಗಿರುತ್ತದೆ. ಜವಾರಿ ತಳಿ- ಧಾರವಾಡ ವಿಜಯಪುರಗಳಲ್ಲಿ, ಮಲೆನಾಡಗಿಡ್ಡ-ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡಗಳಲ್ಲಿ, ಹಳ್ಳಿಕಾರ ಮತ್ತು ಅಮೃತಮಹಲ್- ಮೈಸೂರು ಮತ್ತು ದಕ್ಷಿಣ ಕರ್ನಾಟಕದಲ್ಲಿ, ಕೃಷ್ಣ ಮತ್ತು ಕಿಲಾರಿ- ಉತ್ತರ ಕರ್ನಾಟಕ ಮತ್ತು ಮಹಾರಾಷ್ಟ್ರಗಳಲ್ಲಿ, ದೇವಣಿ- ಬೀದರ್ ಮತ್ತು
ಮಹಾರಾಷ್ಟ್ರಗಳಲ್ಲಿ, ಗಿರ್- ಗುಜರಾತ್‌ನಲ್ಲಿ ಕಂಡುಬರುತ್ತವೆ.

ದೇಶಿ ಹಸುಗಳ ಹಾಲಿನಲ್ಲಿ ಔಷಧಿಯ ಗುಣವಿದೆ. ವಿದೇಶಿ ತಳಿ ಹಸುಗಳಿಗಿಂತ ಅತ್ಯಂತ ಶ್ರೇಷ್ಠ ಹಾಲನ್ನು ನಮ್ಮ ಜವಾರಿ ಮತ್ತು ಮಲೆನಾಡ ಗಿಡ್ಡ ನೀಡುತ್ತವೆ. ಜವಾರಿ ಹಾಲಿನಲ್ಲಿ 249ರಷ್ಟು ಲ್ಯಾಕ್ಟೋಸ್ ಅಂಶವಿದ್ದರೆ, ವಿದೇಶಿ ತಳಿಯ ಹಸುಗಳ ಹಾಲಿನಲ್ಲಿ ಕೇವಲ 50ರಷ್ಟು ಲ್ಯಾಕ್ಟೋಸ್ ಇರುತ್ತದೆ. ಅಮೃತವನ್ನು ನೀಡುವ ದೇಸಿ ತಳಿಗಳನ್ನು ಅಳಿವಿನಂಚಿಗೆ ದೂಡಿದ್ದೇವೆ. ಮತ್ತೊಂದು ಕಡೆ ಹೆಚ್ಚಿನ ಪ್ರಮಾಣ ಹಾಲು ಕೊಡುತ್ತವೆ ಎಂಬ ದುರಾಸೆಯಿಂದ ಕಾಯಿಲೆ ತರುವ ವಿದೇಶಿ ಹಸುಗಳನ್ನು ಸಾಕುತ್ತಿದ್ದೇವೆ. ಜಗತ್ತಿನ ಅತಿ ಹೆಚ್ಚು ದನಗಳನ್ನು ಹಾಗೂ ಹಾಲು ಉತ್ಪಾದನೆಯನ್ನು ಭಾರತ ಹೊಂದಿದೆ.

2020ರಲ್ಲಿ 303 ದಶಲಕ್ಷ ದನಗಳನ್ನು ಭಾರತ ಹೊಂದಿದೆ. ಅದರಲ್ಲಿ ಒಂದು ಪ್ರತಿಶತದಷ್ಟೂ ದೇಶಿ ತಳಿಯ ಜಾನುವಾರಗಳಿಲ್ಲ! ಎಂಬುದು ತುಂಬ ಕಳವಳಕಾರಿ.