ಸ್ಮರಣೆ
ಸುರೇಶ್ ಕುಮಾರ್
ಕರ್ನಾಟಕ ರಾಜ್ಯದ ಮುಖ್ಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದ ಹಾಗೂ ಮಾಜಿ ಮುಖ್ಯಮಂತ್ರಿ ದಿ. ದೇವರಾಜ ಅರಸು ಅವರಿಗೆ ಕಾರ್ಯದರ್ಶಿಗಳಾಗಿ ಕಾರ್ಯನಿರ್ವಹಿಸಿದ್ದ ಜೆಸಿ ಲಿನ್ ಅವರು ಗುರುವಾರ ಕೊನೆಯುಸಿರು ಎಳೆದಿದ್ದಾರೆ.
ಕರ್ನಾಟಕದಲ್ಲಿ ನಾನು ಕಂಡಂತೆ ಕೆಲವೇ ಕೆಲವು ಅತ್ಯುತ್ತಮ ಮುಖ್ಯಕಾರ್ಯದರ್ಶಿಗಳಲ್ಲಿ ಜೆಸಿ ಲಿನ್ ಒಬ್ಬರು. ತಾವು ಸರಕಾರದ ಸೇವೆಗೆ ಏಕೆ ಬಂದಿದ್ದೇವೆ ಎಂಬ ಸ್ಪಷ್ಟ ಕಲ್ಪನೆ ಅವರಿಗಿತ್ತು. ಯುವ ಅಧಿಕಾರಿಗಳಿಗೆ ಅತ್ಯುತ್ತಮ ಮೇಲ್ಪಂಕ್ತಿಯಾಗಿ ಇವರು ಕಾರ್ಯ ಮಾಡಿದ್ದರು. ತನ್ನ ದಕ್ಷತೆ, ಜನಪರ ಮನಸ್ಥಿತಿ ಹಾಗೂ ಕಾರ್ಯಕ್ಷಮತೆಗೆ ಹೆಸರಾಗಿದ್ದರು ಲಿನ್. ಅವರ ಕಾರ್ಯದಕ್ಷತೆ ಹಾಗೂ ನೇರ ನುಡಿಗೆ ಒಂದು ಉದಾಹರಣೆ ನೀಡಲು ಬಯಸುವೆ. ದಿವಂಗತ ಅರಸುರವರು ಮುಖ್ಯಮಂತ್ರಿಗಳಾಗಿದ್ದಾಗ ಯಾವುದೋ ಒಂದು ಸಂಸ್ಥೆಗೆ ೫೦೦೦ ರು. ಅನುದಾನ ನೀಡಲು ಆದೇಶಿಸಿದರು.
(ಆ ಕಾಲದಲ್ಲಿ ? ೫೦೦೦ ಬಹಳ ದೊಡ್ಡ ಮೊತ್ತ) ಆ ಕಡತ ಲಿನ್ ಅವರ ಬಳಿಗೆ ಬಂದಾಗ, ಅವರು ಅದನ್ನು ತಿರಸ್ಕರಿಸಿದರು. ಆಗ ಆ ಸಂಸ್ಥೆಯವರು ಅರಸು ಅವರನ್ನು ಭೇಟಿ ಮಾಡಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಮುಖ್ಯಮಂತ್ರಿಗಳಿಗಿಂತ ಈ ಐಎಎಸ್ ಅಧಿಕಾರಿ ದೊಡ್ಡವನೇ? ನಿಮ್ಮ ಆದೇಶವನ್ನು ಉಲ್ಲಂಘಿಸುವ ಉದ್ಧಟತನ ಈ ಅಧಿಕಾರಿಯದು. ಇವನ ಮೇಲೆ ನೀವು ಕ್ರಮ ಕೈಗೊಳ್ಳಬೇಕು ಎಂದು ತಮ್ಮ ಸಿಟ್ಟನ್ನು ತೋರಿಸಿದರು. ಆಗ ಅರಸುರವರು ಆ ಕಡತವನ್ನು ತರಿಸಿಕೊಂಡು ನೋಡಿದಾಗ ಈ ಸಂಸ್ಥೆ ನೊಂದಾಯಿತ ಸಂಸ್ಥೆ (Registered) ಅಲ್ಲದ ಕಾರಣ ಅನುದಾನ ಕೊಡಲು ಬರುವುದಿಲ್ಲ ಎಂದು ಲಿನ್‌ರವರು ಸ್ಪಷ್ಟ ವಾಗಿ ಬರೆದಿರುವುದು ಕಂಡಿತು.
ಆಗ ಅರಸು ಅವರು ಸಂಸ್ಥೆಯ ಪದಾಧಿಕಾರಿಗಳಿಗೆ ಸಮಾಧಾನ ಮಾಡಿ ತಮ್ಮ ಅಧಿಕಾರಿ ಬರೆದಿರುವುದು ಸಮಂಜಸವೆಂದು ಆ ಸಂಸ್ಥೆಗೆ ಬೇರೆ ರೀತಿ ಸಹಾಯ ಮಾಡುವುದಕ್ಕೆ ಕ್ರಮ ಕೈಗೊಂಡರು. ಈ ಘಟನೆಯನ್ನು ನನಗೆ ಆ ಕಾಲದಲ್ಲಿ ಅತ್ಯಂತ ಸಕ್ರಿಯ ರಾಗಿದ್ದ ಓರ್ವ ಹಿರಿಯ ಪತ್ರಕರ್ತರು ಬಹಳ ಹಿಂದೆ ತಿಳಿಸಿದ್ದರು. ನಮ್ಮ ರಾಜ್ಯ ಇಂತಹ ಅನೇಕ ಅಧಿಕಾರಿಗಳನ್ನು ಪಡೆದಿದ್ದ ಉದಾಹರಣೆಗಳಿವೆ. ಹೆಮ್ಮೆಯೂ ಇದೆ. ಇಂತಹ ದಕ್ಷ, ವೃತ್ತಿಪರ ಅಧಿಕಾರಿಯಾಗಿದ್ದ ಜೆಸಿ ಲಿನ್ ಅವರ ಆತ್ಮಕ್ಕೆ ಸದ್ಗತಿ ದೊರಕಲಿ ಎಂದು ಪ್ರಾರ್ಥಿಸುತ್ತೇನೆ.
ಇನ್ನು ಲಿನ್ ಅವರನ್ನು ನೆನೆಪು ಮಾಡಿಕೊಂಡು ಫೇಸ್‌ಬುಕ್‌ನಲ್ಲಿ ಬರೆದ ಬಳಿಕ ಆ ಹಿರಿಯ ಪತ್ರಕರ್ತರು ಮತ್ತೊಂದು ವಿಚಾರ ವನ್ನು ತಿಳಿಸಿದರು. ನಿವೃತ್ತರಾದ ನಂತರ ಲಿನ್ ಅವರು ರೆಸಿಡೆನ್ಸಿ ರಸ್ತೆಯಲ್ಲಿ ಅನೇಕ ಬಾರಿ ಎರಡು ಕೈಯಲ್ಲೂ ತರಕಾರಿ ಹಣ್ಣು-ಹಂಪಲು ತುಂಬಿರುವ ಚೀಲಗಳನ್ನು ಹಿಡಿದು ನಡೆದು ಹೋಗುತ್ತಿದ್ದದ್ದನ್ನು ನನ್ನ ಗೆಳೆಯರು ಅನೇಕ ಬಾರಿ ನೋಡಿದ್ದಾರೆ. ಅವರಿಗೆ ನಮಸ್ಕಾರ ಮಾಡಿದಾಗ ಎರಡೂ ಕೈಯಲ್ಲಿ ತುಂಬಾ ಭಾರವಿದೆ, ಹೇಗೆ ನಮಸ್ಕಾರ ಮಾಡಲಿ ಎಂದು ಹೇಳುತ್ತಾ ತಲೆಯಾಡಿಸಿ ನಗುತ್ತಾ ಪ್ರತಿ ನಮಸ್ಕಾರ ಮಾಡುತ್ತಿದ್ದರಂತೆ ಲಿನ್.
(ಕರ್ನಾಟಕ ಮುಖ್ಯಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದ ಜೆಸಿ ಲಿನ್ ಅವರ ನಿಧನದ ಸಮಯದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ತಮ್ಮ ಫೇಸ್ ಬುಕ್‌ನಲ್ಲಿ ಹಂಚಿಕೊಂಡಿದ್ದ ಲೇಖನ)