ಮೂರ್ತಿ ಪೂಜೆ
ಆರ್.ಟಿ.ವಿಠ್ಠಲಮೂರ್ತಿ
ಜನತಾ ಪರಿವಾರ ಒಡೆಯುತ್ತಾ ಹೋದಂತೆ ಅಲ್ಲಿನ ಮತಗಳು ಬಿಜೆಪಿ ಕಡೆ ವರ್ಗಾವಣೆಯಾಗುತ್ತಾ ಬಂದವು. ಮತ್ತದರ ಪರಿಣಾಮವಾಗಿ ಬಿಜೆಪಿ ರಾಜ್ಯದಲ್ಲಿ ಅಧಿಕಾರ ಹಿಡಿಯುವ ಹಂತಕ್ಕೆ ತಲುಪಿತು.
ರಾಜ್ಯದ ಎರಡು ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯ ಫಲಿತಾಂಶ ಜೆಡಿಎಸ್ ಶಕ್ತಿ ಕುಸಿಯುವಂತೆ ಮಾಡಿದೆ. ಅಂದ ಹಾಗೆ ಹಾನಗಲ್ ಮತ್ತು ಸಿಂದಗಿ ಕ್ಷೇತ್ರಗಳ ಉಪಚುನಾವಣೆಯಲ್ಲಿ ಜೆಡಿಎಸ್ ಗೆಲುವಿನ ಕುದುರೆ ಅಲ್ಲದಿದ್ದರೂ, ಕನಿಷ್ಠ ಪಕ್ಷ ಕಾಂಗ್ರೆಸ್‌ಗೆ ಲಗಾಮು ಹಾಕುತ್ತದೆ ಎಂಬ ಲೆಕ್ಕಾಚಾರವಿತ್ತು. ಸ್ವತಃ ಎಚ್.ಡಿ.ಕುಮಾರಸ್ವಾಮಿ ಅವರಿಗೂ ಕಾಂಗ್ರೆಸ್ ಪಕ್ಷಕ್ಕೆ ಕಡಿವಾಣ ಹಾಕಿದರೆ ಸಾಕು ಎಂಬ ಉದ್ದೇಶವಿತ್ತು.
ಹೀಗೆ ಕಾಂಗ್ರೆಸ್ ಪಕ್ಷಕ್ಕೆ ಕಡಿವಾಣ ಹಾಕಿದರೆ, ಅದರ ವೇಗವನ್ನು ಕುಗ್ಗಿಸಿದರೆ ತನಗೆ ಗೆಲುವು ಸಿಗದಿರಬಹುದು. ಆದರೆ ಬಿಜೆಪಿಗಾದರೂ ಗೆಲುವು ದಕ್ಕುತ್ತದೆ. ಆ ಮೂಲಕ ಕಾಂಗ್ರೆಸ್ ತಮ್ಮ ವಿಷಯದಲ್ಲಿ ಎಚ್ಚರಿಕೆಯಿಂದ ನಡೆದುಕೊಳ್ಳುವ ಅನಿವಾರ್ಯತೆ ಸೃಷ್ಟಿಯಾಗುತ್ತದೆ ಎಂಬುದು ಈ ಲೆಕ್ಕಾಚಾರದ ಭಾಗವಾಗಿತ್ತು. ಇದೇ ಕಾರಣಕ್ಕಾಗಿ ಕುಮಾರಸ್ವಾಮಿ ಒಂದು ಅಪಾಯಕಾರಿ ನಿರ್ಧಾರವನ್ನು ಕೈಗೊಂಡರು.
ಸಿಂದಗಿ ಕ್ಷೇತ್ರದಲ್ಲಿ ಪಕ್ಷದ ಶಕ್ತಿ ಏನು ಅನ್ನುವುದನ್ನು ಅರ್ಥ ಮಾಡಿಕೊಳ್ಳುವ ಬದಲು ಕಾಂಗ್ರೆಸ್ ಜತೆ ಇರುವ ಮುಸ್ಲಿಂ ಮತ ಬ್ಯಾಂಕ್ ಅನ್ನು ಒಡೆಯಲು ಅದೇ ಸಮುದಾಯದವರಿಗೆ ಅವರು ಟಿಕೆಟ್ ಕೊಟ್ಟರು. ಹೀಗೆ ಮುಸ್ಲಿಂ ಮತಗಳನ್ನು ಚದುರಿಸಿದರೆ ಕಾಂಗ್ರೆಸ್‌ಗೆ ಹಾನಿಯಾಗುತ್ತದೆ. ಆ ಮೂಲಕ ಬಿಜೆಪಿ ಗೆಲುವಿನ ದಡ ಸೇರುತ್ತದೆ ಎಂದವರು ಭಾವಿಸಿದರು.
ಹಾನಗಲ್ ಕ್ಷೇತ್ರದಲ್ಲೂ ಇದೇ ರೀತಿಯ ಲೆಕ್ಕಾಚಾರ ಜಾರಿಯಾಗಿ ಅಲ್ಲೂ ಜೆಡಿಎಸ್ ವತಿಯಿಂದ ಮುಸ್ಲಿಂ ಅಭ್ಯರ್ಥಿ ಕಣಕ್ಕಿಳಿದರು. ಹೀಗೆ ಎರಡೂ ಕಡೆ ಪಕ್ಷದ ವತಿಯಿಂದ ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ತೀರ್ಮಾನಿಸಿದ ನಂತರ ಇದ್ದಕ್ಕಿದ್ದಂತೆ ಆರೆಸ್ಸೆಸ್ ವಿರುದ್ಧ ದಾಳಿ ಆರಂಭಿಸಿದರು. ಹೀಗೆ ಆರೆಸ್ಸೆಸ್ ವಿರುದ್ಧ ಮುಗಿಬಿದ್ದರೆ ಮುಸ್ಲಿಮರು ಸಂಪ್ರೀತರಾಗುತ್ತಾರೆ, ಆ ಮೂಲಕ ಜೆಡಿಎಸ್ ಬೆನ್ನಿಗೆ ನಿಲ್ಲುತ್ತಾರೆ ಎಂಬುದು ಕುಮಾರಸ್ವಾಮಿ ಅವರ ಭಾವನೆ. ಆದರೆ ಹದಿನೈದು ವರ್ಷಗಳ ಹಿಂದೆ ಅದೇ ಆರೆಸ್ಸೆಸ್ ನ ಕೊಂಡಿಯಾದ ಬಿಜೆಪಿ ಜತೆ ಸೇರಿ ಸರಕಾರ ಮಾಡಿದವರು, ಆರೆಸ್ಸೆಸ್ ಬಗ್ಗೆ ಅಪಸ್ವರ ಎತ್ತಿದರೆ ಮುಸ್ಲಿಮರು ನಂಬುತ್ತಾರೆಯೇ? ಎಂಬ ಪ್ರಶ್ನೆಯೂ ಅವರಲ್ಲಿ ಮೊಳಕೆಯೊಡೆಯಲಿಲ್ಲ.
ಎಲ್ಲಕ್ಕಿಂತ ಮುಖ್ಯವಾಗಿ ರಾಷ್ಟ್ರ ರಾಜಕಾರಣದಲ್ಲಿ ಬಿಜೆಪಿಯ ವಿರುದ್ಧ ದೊಡ್ಡಮಟ್ಟದಲ್ಲಿ ತಿರುಗಿ ಬಿದ್ದಿರುವ ಒಂದು ಮತ ಬ್ಯಾಂಕ್, ಅದೇ ಬಿಜೆಪಿಯ ಜತೆ ಒಳ ಒಪ್ಪಂದ ಮಾಡಿಕೊಂಡಿರುವ ಜೆಡಿಎಸ್ ಪಕ್ಷವನ್ನು ನಂಬುವುದು ಸುಲಭವಲ್ಲ. ಯಾಕೆಂದರೆ 2023 ರ ವಿದಾನಸಭಾ ಚುನಾವಣೆಯ ನಂತರ ಬಿಜೆಪಿ ಜತೆ ಸೇರಿ ಸರಕಾರ ರಚಿಸುವುದೇ ಜೆಡಿಎಸ್‌ನ ಒನ್ ಲೈನ್ ಅಜೆಂಡಾ. ಇದೇ ಕಾರಣಕ್ಕಾಗಿ ಯಡಿಯೂರಪ್ಪ ಪತನದ ನಂತರ ಚದುರಿರುವ ಲಿಂಗಾಯತ ಮತಬ್ಯಾಂಕ್ ನ ಹೊಡೆತದಿಂದ ಬಿಜೆಪಿಗೆ ತೊಂದರೆ ಆಗಬಾರದು ಎಂದು ಜೆಡಿಎಸ್ ಬಯಸುತ್ತಿದೆ. ಅರ್ಥಾತ್, ಲಿಂಗಾಯತ ಮತಗಳ ಕೊರತೆಗೆ ಪ್ರತಿಯಾಗಿ, ಒಕ್ಕಲಿಗ ಮತ ಗಳು ಹಲವು ಕ್ಷೇತ್ರಗಳಲ್ಲಿ ಬಿಜೆಪಿಗೆ ದಕ್ಕುವಂತಾಗಬೇಕು.
ಒಕ್ಕಲಿಗ ಮತಗಳ ಪ್ರಾಬಲ್ಯವಿಲ್ಲದ ಕಡೆಗಳಲ್ಲಿ ತಾನೇ ಮುಂದೆ ನಿಂತು ಮುಸ್ಲಿಂ ಮತಗಳನ್ನು ಸೆಳೆಯುವ ಮೂಲಕ ಕಾಂಗ್ರೆಸ್ ಗೆ ಹೊಡೆಯಬೇಕು, ಬಿಜೆಪಿಗೆ ಅನುಕೂಲ ಮಾಡಿಕೊಡಬೇಕು ಎಂಬುದು ಅದರ ಮಾಸ್ಟರ್ ಪ್ಲಾನು. ಅದರ ದೂರಗಾಮಿ ಲೆಕ್ಕಾಚಾರದ ವಿವರ ಈಗ ರಹಸ್ಯದ ಸಂಗತಿ ಏನಲ್ಲವಲ್ಲ? ಹೀಗಾಗಿ ಮುಸ್ಲಿಂ ಮತ ಬ್ಯಾಂಕು ಉಪಚುನಾವಣೆಯಕಣದಲ್ಲಿ ಜೆಡಿಎಸ್ ಜತೆ ನಿಲ್ಲಲಿಲ್ಲ. ಆದರೆ ಬಿಜೆಪಿಗಾಗಿ ಸಿಂದಗಿ ಕ್ಷೇತ್ರದಲ್ಲಿ ಜೆಡಿಎಸ್ ಮಾಡಿದ್ದು ಅಕ್ಷರಶಃ ಬಲಿದಾನ. ಯಾಕೆಂದರೆ ಅಲ್ಲಿ ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ಕೊಟ್ಟ ಪರಿಣಾಮ ವಾಗಿ ಜೆಡಿಎಸ್ ಜತೆಗಿದ್ದ ಮುಸ್ಲಿಮೇತರ ಮತಗಳು ಒಡೆದು ಹೋದವು. ಇದರಲ್ಲಿ ಬಹುಪಾಲು ಮತಗಳು ಬಿಜೆಪಿಯ ಕಡೆ ವಲಸೆ ಹೋದವು.
ಪರಿಣಾಮವಾಗಿ ಬಿಜೆಪಿ ಗೆಲುವು ಸಾಽಸಿ ಜೆಡಿಎಸ್ ಹೀನಾಯ ಸೋಲು ಅನುಭವಿಸಿತು. ಅರ್ಥಾತ್, ಭವಿಷ್ಯ ದಲ್ಲಿ ಬಿಜೆಪಿಯ ಜತೆಗಿನ ಸಖ್ಯಕ್ಕಾಗಿ ಜೆಡಿಎಸ್ ಮಾಡಿದ ತಂತ್ರ ಬಲಿದಾನವಾದಂತಾಯಿತೇ ಹೊರತು, ಉದ್ದೇಶ ಈಡೇರಲಿಲ್ಲ. ಅಂದ ಹಾಗೆ ಉಪಚುನಾವಣೆಯ ಫಲಿತಾಂಶದ ಮೂಲಕ ಬಿಜೆಪಿಗೂ ಒಂದು ಮಹತ್ವದ ಸಂದೇಶ ರವಾನೆಯಾಗಿದೆ. ಅದೆಂದರೆ, ಭವಿಷ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಎದುರಿಸಲು ತಾನು ಜೆಡಿಎಸ್ ಪಕ್ಷವನ್ನು ನುಂಗುವುದು ಅನಿವಾರ್ಯ ಎಂಬುದು ಈ ಸಂದೇಶ. ದೇವೇಗೌಡ ಮತ್ತು ಕುಮಾರಸ್ವಾಮಿ ಅವರೇನೋ ಸಖ್ಯವಿರಲಿ, ಆದರೆ ಬಹಿರಂಗ ಹೊಂದಾಣಿಕೆ ಬೇಡ ಎಂಬ ಧೋರಣೆಯಲ್ಲಿದ್ದಾರೆ. ಆದರೆ ಜೆಡಿಎಸ್‌ಗೆ ಹೋಗುವ ಕಾಂಗ್ರೆಸ್ ವಿರೋಧಿ ಮತಗಳಿಗೆ ಸ್ಪಷ್ಟ ಸೂಚನೆ ಇಲ್ಲದಿದ್ದರೆ ಅವು ಒಡೆದು ಹೋಗುತ್ತವೆ. ಹಾಗಾಗಬಾರದು ಎಂದರೆ ಇಷ್ಟವೋ, ಕಷ್ಟವೋ ಜೆಡಿಎಸ್ ಅನ್ನು ನುಂಗುವುದೇ ಅದಕ್ಕಿರುವ ದಾರಿ.
ವಸ್ತುಸ್ಥಿತಿ ಎಂದರೆ, ರಾಜ್ಯದಲ್ಲಿ ಬಿಜೆಪಿ ಬೆಳೆಯಲು ಜನತಾಪರಿವಾರದ ಮತಗಳೇ ಬಹುಮುಖ್ಯ ಕಾರಣ. ಜನತಾ ಪರಿವಾರ ಒಡೆಯುತ್ತಾ ಹೋದಂತೆ ಅಲ್ಲಿನ
ಮತಗಳು ಬಿಜೆಪಿ ಕಡೆ ವರ್ಗಾವಣೆಯಾಗುತ್ತಾ ಬಂದವು. ಮತ್ತದರ ಪರಿಣಾಮವಾಗಿ ಬಿಜೆಪಿ ರಾಜ್ಯದಲ್ಲಿ ಅಧಿಕಾರ ಹಿಡಿಯುವ ಹಂತಕ್ಕೆ ತಲುಪಿತು. ಈಗ ಯಡಿಯೂರಪ್ಪ ಅವರ ಪದಚ್ಯುತಿಯ ನಂತರ ಜನತಾಪರಿವಾರದಿಂದ ಬಂದ ಮತಗಳು ಪಲ್ಲಟಗೊಳ್ಳುವ ಸೂಚನೆ ಸ್ಪಷ್ಟವಾಗಿದೆ. ಹೀಗಾಗಿ ಅದೇ ಜನತಾ ಪರಿವಾರದಲ್ಲಿ ಉಳಿದಿರುವ ಮತ ಬ್ಯಾಂಕ್ ಅನ್ನು ವಶಪಡಿಸಿಕೊಳ್ಳದೆ ಬಿಜೆಪಿಯ ಮುಂದೆ ಬೇರೆ ದಾರಿ ಇಲ್ಲ.
ಅಂದ ಹಾಗೆ ಜಾತ್ಯತೀತ ಜನತಾದಳದ ಒಂದು ಗುಂಪು ಈಗಾಗಲೇ ಕಾಂಗ್ರೆಸ್ ಕಡೆ ಮುಖ ಮಾಡಿದೆ. ಕಾರಣ? ಕುಮಾರಸ್ವಾಮಿ ಅವರಿಗಿರುವ ಬಿಜೆಪಿ ಪರ ಒಲವು. ಒಂದು ವೇಳೆ ಕುಮಾರಸ್ವಾಮಿ ಅವರು ಬಯಸಿದಂತೆ ಬಿಜೆಪಿಯ ಜತೆ ಹೋಗುವುದು ಅನಿವಾರ್ಯವಾದರೆ ತಮಗೆ ಭವಿಷ್ಯವಿಲ್ಲ ಎಂಬುದು ಈ ಗುಂಪಿನ ಯೋಚನೆ. ಇದೇ ಕಾರಣಕ್ಕಾಗಿ ಗುಬ್ಬಿ ಶ್ರೀನಿವಾಸ್ ಅವರಿಂದ ಹಿಡಿದು ಹಲವರು ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರ ಮೂಲಕ ಕೈ ಪಾಳೆಯ ಸೇರಲು ತಯಾರಾಗಿದ್ದಾರೆ. ಪಕ್ಷಾಂತರ ನಿಷೇಧ ಕಾಯಿದೆಯ ಹೊಡೆತ ಬೀಳದಿರಲಿ ಎಂಬ ಕಾರಣಕ್ಕಾಗಿ ಅವರು ಕೆಲ ಕಾಲ ಕಾಯಬಹುದು. ಆದರೆ ಅದೇನೇ ಇದ್ದರೂ ಆಗಲಿರುವ ಈ ಬೆಳವಣಿಗೆಯನ್ನು ತಡೆಗಟ್ಟುವುದು ಕಷ್ಟ. ಹಾಗೆ ಜಾತ್ಯತೀತ ದಳದ ಒಂದು ಗುಂಪು ಕಾಂಗ್ರೆಸ್ ಸೇರುವ ಮುಹೂರ್ತ ನಿಗದಿಯಾಯಿತು ಎಂದರೆ, ತಕ್ಷಣವೇ ಜೆಡಿಎಸ್ ತೊರೆದು ಬಿಜೆಪಿ ಹೊಸ್ತಿಲು ತುಳಿಯಲು ಇನ್ನಷ್ಟು ಶಾಸಕರ ಗುಂಪು ಅಣಿಯಾಗುತ್ತದೆ.
ಹಾಗೇನಾದರೂ ಆದರೆ ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ದೊಡ್ಡ ಮಟ್ಟದ ಯಶಸ್ಸು ಕಾಣಲು ಸಾಧ್ಯವೇ ಇಲ್ಲ. ಇದನ್ನು ಮನಸ್ಸಿನಲ್ಲಿಟ್ಟುಕೊಳ್ಳುವುದೇ ಆದರೆ ಜೆಡಿಎಸ್ ತನ್ನ ಕಾರ್ಯತಂತ್ರವನ್ನು ಬದಲಿಸುವುದು ಅನಿವಾರ್ಯ. ಕಾಂಗ್ರೆಸ್ ಮೇಲಿನ ಸಿಟ್ಟಿಗಾಗಿ ಕಾರ್ಯತಂತ್ರ ರೂಪಿಸುವಾಗ ನಮಗಲ್ಲದಿದ್ದರೂ ಬಿಜೆಪಿಗೆ ಲಾಭವಾಗಲಿ ಎಂದು ಅದು ಬಯಸುವುದೇ ತಪ್ಪು. ಹೀಗಾಗಿ ಕಾಂಗ್ರೆಸ್ ಮತ್ತು ಬಿಜೆಪಿಯಿಂದ ಸಮಾನ ಅಂತರ ಕಾಪಾಡಿಕೊಂಡು ಹೋರಾಡುವುದೇ ಅದರ
ಭವಿಷ್ಯದ ದೃಷ್ಟಿಯಿಂದ ಸೂಕ್ತ.
ಎಲ್ಲಕ್ಕಿಂತ ಮುಖ್ಯವಾಗಿ ಬಿಜೆಪಿ ಈಗ ನಡುಗುತ್ತಿರುವ ಹಡಗು. ಯಡಿಯೂರಪ್ಪ ಪದಚ್ಯುತಿಯ ನಂತರ ಒಂದಷ್ಟು ಕುಸಿದಿರುವ ಆ ಹಡಗಿಗೆ ಶಕ್ತಿ ತುಂಬಲು ಹೋದರೆ ಹಾನಿ ಜೆಡಿಎಸ್ ಪಕ್ಷಕ್ಕೇ ಹೊರತು, ಕಾಂಗ್ರೆಸ್ ಪಕ್ಷಕ್ಕಲ್ಲ. ಇದನ್ನು ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ಅರಿಯುವುದು ಕುಮಾರಸ್ವಾಮಿ ಅವರಿಗೂ ಒಳ್ಳೆಯದು. ಜೆಡಿಎಸ್ ಗೂ ಒಳ್ಳೆಯದು.