Tuesday, 17th September 2024

ಜ್ಞಾನಪೀಠಿಗೆ ಜೈ ಹೋ

ಗೌರವ ನಮನ

ಸಿಹಿಜೀವಿ ವೆಂಕಟೇಶ್ವರ

‘ಸಂಪೂರಣ್ ಸಿಂಗ್ ಕಾಲ್ರಾ’ ಎಂದರೆ ಬಹಳಷ್ಟು ಜನರಿಗೆ ಬೇಗ ಅರ್ಥವಾಗದಿರಬಹುದು. ಆದರೆ, ‘ಜೈ ಹೋ’ ಹಾಡಿನ ರಚನೆಕಾರ ಅಂದಾಕ್ಷಣ ‘ಗುಲ್ಜಾರ್’ ಎಂಬ ಹೆಸರು ಥಟ್ಟನೆ ನೆನಪಾಗುತ್ತದೆ. ಕವಿಯಾಗಿ, ಚಿತ್ರ ನಿರ್ದೇಶಕರಾಗಿ, ಚಲನಚಿತ್ರ ಗೀತರಚನಕಾರರಾಗಿ ಪ್ರಸಿದ್ಧಿ ಪಡೆದಿರುವ ಗುಲ್ಜಾರ್ ಅವರಿಗೆ ಹಿಂದಿ, ಉರ್ದು, ಪಂಜಾಬಿ ಭಾಷೆಗಳಲ್ಲದೆ ಬ್ರಜ್, ಖಾರಿಬೋಲಿ, ಹರ್ಯಾಣ್ವಿ, ಮರ್ವಾರಿಯಂಥ ಉಪಭಾಷೆಗಳಲ್ಲೂ ಅಪ್ರತಿಮ ಪ್ರಭುತ್ವವಿದೆ.

ಇವರು ಈ ವರ್ಷ, ಭಾರತದ ಸಾಹಿತ್ಯ ಕ್ಷೇತ್ರದ ಅತ್ಯುನ್ನತ ಪುರಸ್ಕಾರವಾದ ‘ಜ್ಞಾನಪೀಠ ಪ್ರಶಸ್ತಿ’ಯ ಇಬ್ಬರು ವಿಜೇತರಲ್ಲಿ ಒಬ್ಬರೆನಿಸಿಕೊಂಡಿರುವುದು ಹೆಮ್ಮೆಯ ಮತ್ತು ಸಂತಸದ ಸಂಗತಿ. ಈಗಿನ ಪಾಕಿಸ್ತಾನದ ಭಾಗವಾಗಿರುವ ದಿನಾ ಝೇಲಂ ಎಂಬ ಊರಿನಲ್ಲಿ ಸಿಖ್ ಮನೆತನವೊಂದರಲ್ಲಿ ೧೯೩೬ರ ಆಗಸ್ಟ್ ೧೮ರಂದು ಜನಿಸಿದ ಗುಲ್ಜಾರರು ಕವಿಯಾಗುವುದಕ್ಕೂ ಮುಂಚೆ ದೆಹಲಿಯ ಗ್ಯಾರೇಜ್ ಒಂದರಲ್ಲಿ ಕಾರ್ ಮೆಕ್ಯಾನಿಕ್ ಆಗಿದ್ದರು. ಸಿನಿಮಾ ಸಾಹಿತಿ
ಯಾಗಿ ಅವರು ಮೊದಲಿಗೆ ಕಾರ್ಯನಿರ್ವಹಿಸಲು ಆರಂಭಿಸಿದ್ದು ಬಿಮಲ್ ರಾಯ್ ಮತ್ತು ಹೃಷಿಕೇಶ್ ಮುಖರ್ಜಿ ಅವರೊಂದಿಗೆ.

ಗುಲ್ಜಾರರು ಗೀತರಚನಕಾರರಾಗಿ ಪ್ರವೇಶ ಪಡೆದದ್ದು ೧೯೬೩ರಲ್ಲಿ, ಸಚಿನ್ ದೇವ್ ಬರ್ಮನ್ ಸಂಗೀತ ನೀಡಿದ ‘ಬಂಧಿನಿ’ ಚಿತ್ರದ ಮೂಲಕ. ಈ ಚಿತ್ರದ ಎಲ್ಲ ಹಾಡುಗಳನ್ನು ಬರೆದ ಶೈಲೇಂದ್ರರು ‘ಮೋರಾ ಗೋರ ಆಂಗ್ ಲಾಯ್ಲೆ’ ಗೀತೆಯನ್ನು ಬರೆಯವುದಕ್ಕೆ ಗುಲ್ಜಾರರಿಗೆ ಅವಕಾಶ ಕಲ್ಪಿಸಿಕೊಟ್ಟರು. ಈ ಹಾಡಿಗೆ ಅಭಿನಯಿಸಿದ ಕಲಾವಿದೆ ನೂತನ್. ಗುಲ್ಜಾರರ ಚಿತ್ರಗೀತೆಗಳು ಸಚಿನ್ ದೇವ್ ಬರ್ಮನ್ ಮತ್ತು ರಾಹುಲ್ ದೇವ್ ಬರ್ಮನ್ ನಿರ್ದೇಶನದಲ್ಲಿ ಹೆಚ್ಚು ಪ್ರಸಿದ್ಧಿ ಪಡೆದವು.

ಹೀಗಾಗಿ ಇವರಿಬ್ಬರನ್ನು ತಮ್ಮ ಚಿತ್ರ ಜೀವನಕ್ಕೆ ಇಂಬುಕೊಟ್ಟವರು ಎಂದೇ ಗುಲ್ಜಾರ್ ಕೃತಜ್ಞತೆಯಿಂದ ಸ್ಮರಿಸುತ್ತಾರೆ. ಸಲೀಲ್ ಚೌಧರಿ ಸಂಗೀತ
ನಿರ್ದೇಶನದ ‘ಆನಂದ್’, ‘ಮೇರೆ ಅಪ್ನೆ’ ಮುಂತಾದ ಚಿತ್ರಗಳಲ್ಲಿನ ಗುಲ್ಜಾರರ ಗೀತೆಗಳು ಪ್ರಶಸ್ತಿ ಪಡೆದವು. ಮದನ್ ಮೋಹನ್ (‘ಮೌಸಮ್’), ವಿಶಾಲ್
ಭಾರಧ್ವಾಜ್ (‘ಮಾಚಿಸ್’, ‘ಓಂಕಾರ’), ಎ.ಆರ್.ರೆಹಮಾನ್ (‘ದಿಲ್ ಸೇ’, ‘ಗುರು’, ‘ಸ್ಲಮ್ ಡಾಗ್ ಮಿಲಿಯನೇರ್’), ಶಂಕರ್ -ಎಹಸಾನ್-ಲಾಯ್ (‘ಬಂಟಿ ಔರ್ ಬಬ್ಲಿ’) ಹೀಗೆ ಎಲ್ಲ ತಲೆಮಾರುಗಳ ಸಂಗೀತ ನಿರ್ದೇಶಕರ ಜತೆಯಲ್ಲಿ ಸಾಹಿತ್ಯ ರಚಿಸಿದ ಹೆಗ್ಗಳಿಕೆ ಗುಲ್ಜಾರ್ ಅವರದ್ದು.

ಮಿಕ್ಕಂತೆ ಶಂಕರ್-ಜೈಕಿಶನ್, ಹೇಮಂತ್ ಕುಮಾರ್, ಲಕ್ಷ್ಮೀಕಾಂತ್-ಪ್ಯಾರೇಲಾಲ್, ಮದನ್ ಮೋಹನ್, ರಾಜೇಶ್ ರೋಷನ್, ಅನು ಮಲಿಕ್ ಮುಂತಾದ
ಸಂಗೀತ ನಿರ್ದೇಶಕರ ಸಂಯೋಜನೆಗಳಲ್ಲೂ ಗುಲ್ಜಾರರ ಗೀತೆಗಳು ಅರಳಿವೆ, ನಳನಳಿಸಿವೆ. ಗೀತರಚನೆ ಮಾತ್ರವಲ್ಲದೆ ‘ಆಶೀರ್ವಾದ್’, ‘ಆನಂದ್’,
‘ಖಾಮೋಷಿ’ ಮುಂತಾದ ಹಲವಾರು ಪ್ರಸಿದ್ಧ ಚಿತ್ರಗಳಿಗೆ ಚಿತ್ರಕಥೆ- ಸಂಭಾಷಣೆಯನ್ನು ಒದಗಿಸಿದ ಹೆಗ್ಗಳಿಕೆ ಗುಲ್ಜಾರ್ ಅವರದ್ದು. ಇದರ ಮುಂದು ವರಿದ ಹೆಜ್ಜೆಯಾಗಿ ೧೯೭೧ರಲ್ಲಿ ‘ಮೇರೆ ಅಪ್ನೆ’ ಚಿತ್ರದ ಮೂಲಕ ಚಲನಚಿತ್ರ ನಿರ್ದೇಶನಕ್ಕೂ ಅಡಿಯಿಟ್ಟರು ಗುಲ್ಜಾರ್.

ತಪನ್ ಸಿನ್ಹಾ ಅವರ ‘ಅಪರಿಜನ್’ ಬಂಗಾಳಿ ಚಿತ್ರದ ಹಿಂದಿ ಅವತರಣಿಕೆಯಾದ ಈ ಚಿತ್ರದಲ್ಲಿ ಮೀನಾಕುಮಾರಿ ಪ್ರಮುಖ ಪಾತ್ರ ವನ್ನು ನಿರ್ವಹಿಸಿದ್ದರು. ಈ ಚಿತ್ರದ ಸಾಧಾರಣ ಯಶಸ್ಸಿನ ನಂತರದಲ್ಲಿ ಗುಲ್ಜಾರರು ‘ಪರಿಚಯ್’ ಮತ್ತು ‘ಕೋಶಿಶ್’ ಚಿತ್ರಗಳನ್ನು ನಿರ್ದೇಶಿಸಿದರು. ಬಂಗಾಳಿ ಭಾಷೆಯ ‘ರಂಗೀನ್ ಉತ್ತರಾಯನ್’ ಚಿತ್ರದ ಕಥೆಯನ್ನು ಆಧರಿಸಿದ್ದ ಮತ್ತು ಇಂಗ್ಲಿಷ್‌ನ ‘ದಿ ಸೌಂಡ್ ಆಫ್ ಮ್ಯೂಸಿಕ್’ ಚಿತ್ರದಿಂದ ಪ್ರೇರಣೆ ಪಡೆದಿದ್ದ ‘ಪರಿಚಯ್’ ಚಿತ್ರವು
ಜನಮೆಚ್ಚುಗೆ ಪಡೆಯಿತು. ಕಿವುಡು-ಮೂಗ ದಂಪತಿಯ ಕಥಾ ಹಂದರವನ್ನು ಒಳಗೊಂಡಿದ್ದ ‘ಕೋಶಿಶ್’ ಚಿತ್ರ ಜಯಾ ಬಾಧುರಿ ಮತ್ತು ಸಂಜೀವ್ ಕುಮಾರ್ ಅವರ ಅಪ್ರತಿಮ ಅಭಿನಯಕ್ಕೆ ವೇದಿಕೆ ಕಲ್ಪಿಸಿತ್ತು ಮತ್ತು ಈ ಚಿತ್ರದಲ್ಲಿನ ಪಾರ್ತನಿರ್ವಹಣೆಗಾಗಿ ಸಂಜೀವ್ ಕುಮಾರ್‌ರಿಗೆ ಶ್ರೇಷ್ಠ ನಟ ಪುರಸ್ಕಾರವೂ ದಕ್ಕಿತು.

೧೯೭೩ರಲ್ಲಿ ತೆರೆ ಕಂಡ ‘ಅಚಾನಕ್’ ಚಿತ್ರವು ಗುಲ್ಜಾರರ ಮತ್ತೊಂದು ಶ್ರೇಷ್ಠ ಕಲಾಕೃತಿಯಾಗಿ ಹೊರಹೊಮ್ಮಿ ಜನಪ್ರಿಯತೆಯ ಜತೆಗೆ ಪ್ರಶಸ್ತಿಗಳನ್ನೂ ದಕ್ಕಿಸಿಕೊಂಡಿತು. ಕಮಲೇಶ್ವರ್ ಅವರ ‘ಕಾಲಿ ಆಂಧಿ’ ಎಂಬ ಕಥೆಯನ್ನು ಆಧರಿಸಿದ್ದ ‘ಆಂಧಿ’ ಕೂಡ ಗುಲ್ಜಾರರ ಮತ್ತೊಂದು ಶ್ರೇಷ್ಠ ಚಿತ್ರ. ಈ ಚಿತ್ರದ ಕಥೆಯು ತಾರಕೇಶ್ವರ ಸಿನ್ಹಾ ಅವರ ಜೀವನವನ್ನು ಆಧರಿಸಿತ್ತು. ರಾಷ್ಟ್ರೀಯ ಪ್ರಶಸ್ತಿಗೆ ಪಾತ್ರವಾದ ಗುಲ್ಜಾರರ ‘ಮೌಸಮ್’ ಚಿತ್ರದಲ್ಲಿ ಶರ್ಮಿಳಾ ಟ್ಯಾಗೋರ್ ಮತ್ತು ಸಂಜೀವ್ ಕುಮಾರರ ಅಭಿನಯ ಶ್ರೇಷ್ಠಮಟ್ಟದ್ದಾಗಿತ್ತು; ಶರ್ಮಿಳಾರಿಗೆ ಶ್ರೇಷ್ಠ ನಟಿ ಪ್ರಶಸ್ತಿಯನ್ನೂ ಈ ಚಿತ್ರ ದಕ್ಕಿಸಿಕೊಟ್ಟಿತು.

ಗುಲ್ಜಾರರ ‘ಅಂಗೂರ್’ ಚಿತ್ರವಂತೂ ಲಘುಹಾಸ್ಯದ ಚಿತ್ರಗಳ ಪರಂಪರೆಯಲ್ಲಿ ಎದ್ದುಕಾಣುವಂಥದ್ದು. ಸಂಜೀವ್ ಕುಮಾರ್ ಮತ್ತು ದೇವನ್ ವರ್ಮಾ ಇಬ್ಬರೂ ದ್ವಿಪಾತ್ರದಲ್ಲಿ ನಟಿಸಿದ್ದ ಈ ಚಿತ್ರವು ವಿಲಿಯಂ ಷೇಕ್ಸ್‌ಪಿಯರ್‌ನ ‘ದಿ ಕಾಮಿಡಿ ಆ- ಎರರ‍್ಸ್’ ನಾಟಕದಿಂದ ಪ್ರೇರಣೆ ಪಡೆದಿತ್ತು (ಕಲಾವಿದರಾದ ರಮೇಶ್ ಅರವಿಂದ್ ಮತ್ತು ಸಂಕೇತ್ ಕಾಶಿ ಇಬ್ಬರೂ ದ್ವಿಪಾತ್ರದಲ್ಲಿ ಅಭಿನಯಿಸಿರುವ, ಎನ್.ಎಸ್.ಶಂಕರ್ ಅವರ ನಿರ್ದೇಶನದ ‘ಉಲ್ಟಾ ಪಲ್ಟಾ’ ಕನ್ನಡ ಚಿತ್ರವೂ ಷೇಕ್ಸ್ ಪಿಯರ್‌ನ ಈ ನಾಟಕದಿಂದ ಪ್ರೇರಿತವಾಗಿರುವಂಥದ್ದೇ).

ಸಾಮಾಜಿಕ ಸಮಸ್ಯೆಗಳಲ್ಲಿ ಸಿಲುಕಿಕೊಂಡ ಮಾನವ ಸಂಬಂಧದ ಕಥೆ ಗಳನ್ನು ಹೇಳುವಲ್ಲಿ ಗುಲ್ಜಾರ್ ಪರಿಣತರು. ಅವರ ನಿರ್ದೇಶನದ ‘ಲಿಬಾಸ್’ ಎಂಬ ಚಿತ್ರವು ನಗರವಾಸಿ ದಂಪತಿಗಳ ವಿವಾಹೇತರ ಸಂಬಂಧದ ಕುರಿತಾದ ಕಥೆಯನ್ನು ಒಳಗೊಂಡಿದೆ; ಆಕ್ಷೇಪಾರ್ಹ ವಿಷಯವನ್ನು ಒಳಗೊಂಡಿದೆ ಎಂಬ ಕಾರಣಕ್ಕಾಗಿ ಈ ಚಿತ್ರವು ಭಾರತದಲ್ಲಿ ಬಿಡುಗಡೆಯಾಗಲಿಲ್ಲ. ಅವರ ಇನ್ನಿತರ ಚಿತ್ರಗಳಾದ ‘ಇಜಾಜ಼ತ್’, ‘ಮಾಚಿಸ್’, ‘ಹು ತು ತು’ ಮುಂತಾದವು ಕೂಡ
ವಿದ್ವಜ್ಜನರ ಮತ್ತು ಶ್ರೀಸಾಮಾನ್ಯರ ಮೆಚ್ಚುಗೆ ಪಡೆದವು.

ದೂರದರ್ಶನದಲ್ಲಿ ಗುಲ್ಜಾರರು ‘ಮಿರ್ಜಾ ಗಾಲಿಬ್’, ‘ತೆಹರೀರ್ ಮುನ್ಷಿ ಪ್ರೇಮ್ ಚಂದ್ ಕಿ’ ಮುಂತಾದ ಧಾರಾವಾಹಿಗಳನ್ನೂ ಸೃಷ್ಟಿಸಿದ್ದಾರೆ. ‘ಮಿರ್ಜಾ ಗಾಲಿಬ್’ ಸರಣಿಯಲ್ಲಿ ನಾಸಿರುದ್ದೀನ್ ಷಾ ಅಭಿನ ಯಿಸಿದ್ದರು. ‘ಹಲೋ ಜಿಂದಗಿ’, ‘ಪೊಟ್ಲಿ ಬಾಬಾ ಕಿ’, ‘ಜಂಗಲ್ ಬುಕ್’ ಮುಂತಾದ ದೂರದರ್ಶನ ದೃಶ್ಯಾವಳಿಗಳಿಗೂ ಗುಲ್ಜಾರ್ ಗೀತೆರಚನೆ ಮಾಡಿದ್ದಾರೆ. ಗುಲ್ಜಾರರ ಅನುಪಮ ಗೀತೆಗಳ ಕುರಿತಾಗಿ ಬರೆಯುತ್ತಾ ಹೋದರೆ ಅದಕ್ಕೆ ಪುಟಗಳು ಸಾಲವು. ‘ಪರಿಚಯ್’ ಚಿತ್ರದ ‘ಮುಸಾಫಿರ್ ಹೂಂ ಯಾರೋ’, ‘ಆಂಧಿ’ಯ ‘ತೇರೆ ಬಿನಾ ಜಿಂದಗಿ ಸೆ ಕೋಯಿ’, ‘ಮಾಸೂಮ್’ ಚಿತ್ರದ ‘ತುಝ್‌ಸೆ ನಾರಾಜ್ ನಹಿ ಜಿಂದಗಿ’ ಮುಂತಾದ ಗೀತೆಗಳು ಬೆಂಬಿಡದೆ ಕಾಡುವ ಗುಂಗಿ ನಂಥ ಗೀತೆಗಳಾಗಿವೆ ಎಂದರೆ ಅತಿಶಯೋಕ್ತಿಯಲ್ಲ.

ತಮ್ಮ ನಿರ್ದೇಶನದ ಚಿತ್ರಗಳ ಹೊರತಾದ ಇತರರ ಚಿತ್ರಗಳಲ್ಲೂ ಅವರು ನೀಡಿರುವ ಹಾಡುಗಳು ಇಂದಿನವರೆಗೂ ಜನಮನವನ್ನು ಸೂರೆಗೊಳ್ಳು ತ್ತಿರುವುದು ನಿಬ್ಬೆರಗಾಗಿಸುವ ಸಂಗತಿ. ಕವಿಯಾಗಿ ಗುಲ್ಜಾರ್ ಅವರ ಕಾವ್ಯದ ಸಾಲುಗಳು ‘ಚಾಂದ್ ಪುಕ್ ರಾಜ್ ಕಾ’, ‘ರಾತ್ ಪಷ್ಮಿನೇ ಕಿ’, ‘ಪಂದ್ರಹ್ ಪಾಂಚ್ ಪಚ್ಹತ್ತರ್’ ಮುಂತಾದ ಸಂಕಲನಗಳಲ್ಲಿ ದಾಖಲಾಗಿವೆ. ‘ಪದ್ಮಭೂಷಣ’ (೨೦೦೮), ಕೇಂದ್ರ ಸಾಹಿತ್ಯ ಅಕಾಡೆಮಿ ಗೌರವ (೨೦೦೨) ಮಾತ್ರ
ವಲ್ಲದೆ, ‘ಸ್ಲಂ ಡಾಗ್ ಮಿಲಿಯನೇರ್’ ಚಿತ್ರದ ‘ಜೈ ಹೋ’ ಗೀತೆಗಾಗಿ ಸಂದ ಅಕಾಡೆಮಿ ಪ್ರಶಸ್ತಿ, ಗ್ರಾಮಿ ಪುರಸ್ಕಾರ ಮುಂತಾದವು ಜನಪ್ರಿಯ ಸಾಹಿತ್ಯ ಮತ್ತು ವಿದ್ವಪೂರ್ಣ ಕಾವ್ಯಪ್ರಪಂಚ ಎರಡ ರಲ್ಲೂ ಗುಲ್ಜಾರರು ಹೊಂದಿರುವ ಅಪ್ರತಿಮ ಅಭಿವ್ಯಕ್ತಿಗೆ, ಸಾಧನೆ ಗಳಿಗೆ ದ್ಯೋತಕವಾಗಿವೆ.

೨೦೧೪ರಲ್ಲಿ ಪ್ರತಿಷ್ಠಿತ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯಿಂದ ಪುರಸ್ಕೃತರಾದ ಗುಲ್ಜಾರ್ ಅವರಿಗೆ ಪ್ರಸ್ತುತ ‘ಜ್ಞಾನಪೀಠ’ ಪ್ರಶಸ್ತಿ ದಕ್ಕಿರುವುದು ಅವರ ಅಭಿಮಾನಿಗಳೆಲ್ಲರಿಗೂ ಪುಳಕ ತಂದಿದೆ. ಅಭಿನಂದನೆಗಳು ಗುಲ್ಜಾರ್‌ಜೀ…

(ಲೇಖಕರು ಹವ್ಯಾಸಿ ಬರಹಗಾರರು)

Leave a Reply

Your email address will not be published. Required fields are marked *