ಚರ್ಚಾ ವೇದಿಕೆ
ಗಣೇಶ್ ಭಟ್, ವಾರಣಾಸಿ
ಸಾಧ್ಯವಿರುವೆಡೆಯೆಲ್ಲಾ ನ್ಯಾಯಾಂಗವು ಕಾರ್ಯಾಂಗದಲ್ಲಿ ಹಸ್ತಕ್ಷೇಪ ಮಾಡುತ್ತಿದೆ; ಆದರೆ ನ್ಯಾಯಾಂಗದ ನೇಮಕ ಪ್ರಕ್ರಿಯೆ ಯಲ್ಲಿ ಶಾಸಕಾಂಗ ಮತ್ತು ಕಾರ್ಯಾಂಗದ ಪಾಲ್ಗೊಳ್ಳುವಿಕೆಗೆ ಸುಪ್ರೀಂ ಕೋರ್ಟ್ ಅವಕಾಶ ಕೊಡುತ್ತಿಲ್ಲ. ಮಾತ್ರವಲ್ಲ, ಸುಪ್ರೀಂ ಮತ್ತು ಹೈಕೋರ್ಟ್‌ಗಳ ನ್ಯಾಯಾಧೀಶರ ಹುದ್ದೆಗಳ ನೇಮಕದ ಕುರಿತಾಗಿ ಯಾವುದೇ ಜಾಹೀ ರಾತು ನೀಡದೆ, ಸ್ಪರ್ಧಾತ್ಮಕ ಪರೀಕ್ಷೆ ಗಳನ್ನು ನಡೆಸದೆ ಗುಟ್ಟಾಗಿ ಆಯ್ಕೆಮಾಡುತ್ತಿದೆ. ಕೊಲಿಜಿಯಂ ವ್ಯವಸ್ಥೆಯಿಂದಾಗಿ ನ್ಯಾಯಾಂಗ ನೇಮಕ ಪ್ರಕ್ರಿಯೆಯಲ್ಲಿ ಸ್ವಜನ ಪಕ್ಷಪಾತ ಹೆಚ್ಚಾಗಿದೆ ಎಂಬ ಮಾತೂ ಕೇಳಿ ಬರುತ್ತಿದೆ.
೨೦೦೨ರ ಗುಜರಾತ್ ದಂಗೆಗಳ ವಿಚಾರವಾಗಿ ನರೇಂದ್ರ ಮೋದಿ ಹಾಗೂ ಇತರ ವ್ಯಕ್ತಿಗಳ ಮೇಲೆ ಕೃತ್ರಿಮ ಸಾಕ್ಷ್ಯಗಳನ್ನು ಸೃಷ್ಟಿಸಿದ ಆರೋಪದ ಮೇಲೆ ಗುಜರಾತ್ ಹೈಕೋರ್ಟ್ ಜುಲೈ ೧ರಂದು ತೀಸ್ತಾ ಸೆಟಲ್ವಾಡ್‌ರ ಜಾಮೀನು ಅರ್ಜಿಯನ್ನು ತಿರಸ್ಕರಿಸಿ ಕೂಡಲೇ
ನ್ಯಾಯಾಲಯಕ್ಕೆ ಶರಣಾಗುವಂತೆ ಸೂಚಿಸಿತು.
ಬಂಧನದಿಂದ ಬಚಾವಾಗಲು ಆಕೆ ಸುಪ್ರೀಂ ಕೋರ್ಟ್ ಮೊರೆಹೋದೊಡನೆ, ಅದೇ ದಿನ ವಿಚಾರಣೆ ನಡೆಸಲು ಒಪ್ಪಿ ಇಬ್ಬರು ನ್ಯಾಯಮೂರ್ತಿಗಳ ಪೀಠವನ್ನು ರೂಪಿಸಿ ರಾತ್ರಿ ೭ ಗಂಟೆಗೆ ವಿಚಾರಣೆ ಯನ್ನು ನಡೆಸಲಾಯಿತು. ಆಕೆಗೆ ಮಧ್ಯಂತರ ಜಾಮೀನು ನೀಡುವ ವಿಚಾರದಲ್ಲಿ ಒಬ್ಬ ನ್ಯಾಯಾಧೀಶರು ಪರವಾಗಿ, ಇನ್ನೊಬ್ಬರು ವಿರೋಧವಾಗಿ ವಿಭಜಿತ ತೀರ್ಪನ್ನು ಕೊಟ್ಟರು. ಕೂಡಲೇ ಸುಪ್ರೀಂ ಕೋರ್ಟ್ ಮೂರು ನ್ಯಾಯಾಧೀಶರನ್ನೊಳಗೊಂಡ ಪೀಠವನ್ನು ರೂಪಿಸಿ ಅದೇ ದಿನ ರಾತ್ರಿ ೯.೧೫ಕ್ಕೆ ವಿಚಾರಣೆ ಆರಂಭಿಸಿ, ಗುಜರಾತ್ ಹೈಕೋರ್ಟ್ ನೀಡಿದ್ದ ಬಂಧನದ ತೀರ್ಪಿಗೆ ರಾತ್ರಿ ೧೦ ಗಂಟೆಗೆ ತಡೆಯಾಜ್ಞೆ ನೀಡಿ ತೀಸ್ತಾಗೆ ಒಂದು ವಾರದ ಕಾಲಾವಕಾಶ ನೀಡಿತು.
ಆರಂಭದಲ್ಲಿ ದ್ವಿಸದಸ್ಯ ಪೀಠ, ನಂತರ ತ್ರಿಸದಸ್ಯ ಪೀಠದ ರಚನೆಯಲ್ಲಿ ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಾಧೀಶರಾದ (ಸಿಜೆಐ) ಜಸ್ಟೀಸ್ ಚಂದ್ರಚೂಡ್ ಸ್ವತಃ ಬಹಳ ಆಸ್ಥೆ ವಹಿಸಿದ್ದರು ಎನ್ನುತ್ತವೆ ಕೆಲವು ಮಾಧ್ಯಮ ವರದಿಗಳು. ಮತ್ತೆ ಕೆಲವು
ವರದಿಗಳ ಪ್ರಕಾರ, ದ್ವಿಸದಸ್ಯ ಪೀಠವು ವಿಚಾರಣೆ ನಡೆಸಿ ತೀರ್ಪು ಕೊಡುವ ಸಂದರ್ಭದಲ್ಲಿ ಮುಖ್ಯ ನ್ಯಾಯಾಧೀಶರು ತಮ್ಮ ಸಹೋದ್ಯೋಗಿ ನ್ಯಾಯಾಧೀಶರ ಮಗಳ ಭರತನಾಟ್ಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು; ದ್ವಿಸದಸ್ಯ ಪೀಠದಿಂದ ಭಿನ್ನತೀರ್ಪು ಬಂದ ವಿಚಾರವನ್ನು ಮುಖ್ಯ ನ್ಯಾಯಾಧೀಶರಿಗೆ ತಿಳಿಸಿದ ನಂತರ, ಆ ಕಾರ್ಯಕ್ರಮದ ನಡುವೆ ೨-೩ ಬಾರಿ ಎದ್ದು ಹೊರಹೋದ ಸಿಜೆಐ ಚಂದ್ರಚೂಡ್ ಅವರು ರಜೆಯಲ್ಲಿದ್ದ ಬೇರೆ ನ್ಯಾಯಾಧೀಶರನ್ನು ಕರೆಸಿ ತ್ರಿಸದಸ್ಯ ಪೀಠವನ್ನು ರಚಿಸಿದ್ದರು.
Read E-Paper click here
ತೀಸ್ತಾ ಸೆಟಲ್ವಾಡ್ ಪ್ರಕರಣದ ವಿಚಾರದಲ್ಲಿ ಇಷ್ಟೊಂದು ಆಸ್ಥೆ ವಹಿಸಿ, ಒಂದೇ ದಿನದಲ್ಲಿ, ಅದೂ ಕೋರ್ಟ್ ರಜಾವಧಿಯಲ್ಲಿ
ಎರಡೆರಡು ಪೀಠಗಳನ್ನು ರಚಿಸಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟಿನ ಈ ನಡೆ ಸಾರ್ವಜನಿಕರಲ್ಲಿ ಭಾರಿ ಚರ್ಚೆಯನ್ನು ಹುಟ್ಟುಹಾಕಿದೆ. ಸಂವಿಧಾನದ ೧೪ನೇ ವಿಧಿಯ ಪ್ರಕಾರ ದೇಶದ ಎಲ್ಲ ನಾಗರಿಕರೂ ಕಾನೂನಿನ ಮುಂದೆ ಸರಿಸಮಾನರು ಎಂದಿದ್ದರೂ, ಮೇಲಿನ ಕೋರ್ಟ್ ಗಳು ದೇಶದ ಆಯ್ದ ವ್ಯಕ್ತಿಗಳಿಗೆ ಪ್ರಾಶಸ್ತ್ಯ ನೀಡುತ್ತಿರುವುದನ್ನು ಕಾಣುತ್ತಿದ್ದೇವೆ.
೬೯ ಸಾವಿರಕ್ಕೂ ಹೆಚ್ಚು ಕೇಸುಗಳನ್ನು ರಾಶಿ ಹಾಕಿಕೊಂಡಿರುವ ಸುಪ್ರೀಂ ಕೋರ್ಟು ೨೦೨೨ರಲ್ಲಿ ೧,೬೬೩ ತೀರ್ಪುಗಳನ್ನು ಕೊಟ್ಟಿದೆ. ಇದೇ ವೇಗದಲ್ಲಿ ಸಾಗಿದರೆ ಬಾಕಿಯಿರುವ ೬೯ ಸಾವಿರ ಕೇಸುಗಳಿಗೆ ತೀರ್ಪು ಕೊಡಲು ಸುಮಾರು ೫೫ ವರ್ಷಗಳೇ ಬೇಕಾದೀತು. ಇನ್ನು ದೇಶದ ಹೈಕೋರ್ಟ್‌ಗಳಲ್ಲಿ ೫೯ ಲಕ್ಷಕ್ಕಿಂತಲೂ ಹೆಚ್ಚು ಕೇಸುಗಳು, ಜಿಲ್ಲಾ ಮತ್ತು ಕೆಳಹಂತದ ನ್ಯಾಯಾ ಲಯಗಳಲ್ಲಿ ೪.೩ ಕೋಟಿ ಕೇಸುಗಳು ಬಾಕಿಯಿವೆ. ಜನಸಾಮಾನ್ಯರು ಸಲ್ಲಿಸಿರುವ ಅರ್ಜಿಗಳನ್ನು ವಿಚಾರಣೆಗೆ ಕೈಗೆತ್ತಿಕೊಳ್ಳಲು ಸುದೀರ್ಘಕಾಲತೆಗೆದುಕೊಳ್ಳುವ ಕೋರ್ಟ್‌ಗಳು, ರಾಜಕಾರಣಿಗಳ ಮತ್ತು ವಿಐಪಿಗಳ ಕೇಸುಗಳನ್ನು ತಕ್ಷಣ ವಿಲೇವಾರಿ ಮಾಡು ತ್ತವೆ.
ಗ್ಯಾರಂಟಿ ಸರಕಾರ ತಟಾಯಿಸಿಕೊಳ್ಳಲಿದೆ !…click this link
http://vishwavani.news/ankanagalu/guaranteescheme_karnatakagovernment/
ಹೀಗೆ ಗಣ್ಯರೆನಿಸಿಕೊಂಡವರಿಗೆ ಮಾತ್ರ ಆದ್ಯತೆ ಸಿಗುತ್ತಾ ಹೋದಲ್ಲಿ ಜನಸಾಮಾನ್ಯರಿಗೆ ನ್ಯಾಯವು ಮರೀಚಿಕೆಯಾಗಿ ಉಳಿಯುವು ದರಲ್ಲಿ ಸಂಶಯವಿಲ್ಲ. ಏಕೆಂದರೆ, ‘ವಿಳಂಬಿಸಲ್ಪಟ್ಟ ನ್ಯಾಯದಾನವು ನ್ಯಾಯನಿರಾಕರಣೆಗೆ ಸಮನಾಗಿದೆ’ ಎಂಬ ಮಾತೇ ಇದೆಯಲ್ಲಾ!
ಕೊಲಿಜಿಯಂ ವಿಚಾರವಾಗಿ ಕಳೆದ ಕೆಲ ವರ್ಷಗಳಿಂದ ಕೇಂದ್ರ ಸರಕಾರ ಮತ್ತು ಸುಪ್ರೀಂ ಕೋರ್ಟ್ ನಡುವೆ ಸಂಘರ್ಷ ನಡೆಯು ತ್ತಿದೆ. ಕಳೆದ ೩ ದಶಕಗಳಿಂದ, ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್‌ಗಳ ನ್ಯಾಯಾಧೀಶರ ನೇಮಕವು ಕೊಲಿಜಿಯಂ ಪದ್ಧತಿಯ ಮೂಲಕ ನಡೆಯುತ್ತಿದೆ. ೧೯೯೩ರಲ್ಲಿ ಜಾರಿಗೆ ಬಂದ ಈ ಆಯ್ಕೆ ವ್ಯವಸ್ಥೆಯು ಪ್ರಜಾಪ್ರಭುತ್ವ ತತ್ತ್ವಕ್ಕೆ ವಿರುದ್ಧವಾಗಿದೆ.
ಕೊಲಿಜಿಯಂ ವ್ಯವಸ್ಥೆಯ ಮೊದಲು, ರಾಷ್ಟ್ರಪತಿಗಳು ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಾಧೀಶರು ಹಾಗೂ ಇಬ್ಬರು ಹಿರಿಯ ನ್ಯಾಯಾಧೀಶರೊಂದಿಗೆ ಸಮಾಲೋಚನೆ ನಡೆಸಿ ಈ ಕೋರ್ಟ್‌ಗಳಿಗೆ ನ್ಯಾಯಾಧೀಶರನ್ನು ನೇಮಿಸುತ್ತಿದ್ದರು. ಆದರೆ ಬದಲಾಗಿ
ಜಾರಿಗೆ ಬಂದ ಕೊಲಿಜಿಯಂ ವ್ಯವಸ್ಥೆಯಲ್ಲಿ ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಾಧೀಶರು ಇತರ ಐದು ಮಂದಿ ಹಿರಿಯ ಸಹೋ
ದ್ಯೋಗಿಗಳೊಂದಿಗೆ ಸೇರಿ ಸುಪ್ರೀಂ ಕೋರ್ಟಿಗೆ ನ್ಯಾಯಾಧೀಶರನ್ನು ಆಯ್ಕೆ ಮಾಡಿ ಶಿಫಾರಸು ಮಾಡುತ್ತಾರೆ.
ಇದೇ ರೀತಿಯಲ್ಲಿ, ಅವರು ಇಬ್ಬರು ಹಿರಿಯ ಸಹೋದ್ಯೋಗಿಗಳೊಂದಿಗೆ ಸೇರಿ ಹೈಕೋರ್ಟಿನ ನ್ಯಾಯಾಧೀಶರನ್ನು ಆಯ್ಕೆ ಮಾಡಿ ರಾಷ್ಟ್ರಪತಿಗಳಿಗೆ ಶಿಫಾರಸು ಮಾಡುತ್ತಾರೆ. ಆದರೆ ಈ ಪ್ರಕ್ರಿಯೆಯಲ್ಲಿ ಜನರಿಂದಲೇ ಆಯ್ಕೆಗೊಳಗಾದ ಶಾಸಕಾಂಗಕ್ಕೆ ಯಾವುದೇ
ಪ್ರತಿನಿಧಿತ್ವ ಇಲ್ಲ. ಕೇಂದ್ರ ಸರಕಾರವು ಶಿಫಾರಸನ್ನು ಅನುಮೋದಿಸಬಹುದು ಅಥವಾ ಶಿಫಾರಸು ಮಾಡಿದ ಪಟ್ಟಿಯನ್ನು ಆಕ್ಷೇಪಿಸಿ ಮರುಪರಿಶೀಲನೆಗೆ ಹಿಂದಿರುಗಿಸಬಹುದು.
ಆದರೆ ಮೊದಲು ಕಳುಹಿಸಿದ ಹೆಸರುಗಳನ್ನೇ ಪುನಃ ಶಿಫಾರಸು ಮಾಡುವ ಹಕ್ಕು ಕೊಲಿಜಿಯಂಗೆ ಇದೆ. ಇಂಥ ಸಂದರ್ಭದಲ್ಲಿ
ಕೇಂದ್ರವು ಕೊಲಿಜಿಯಂ ಪುನಃ ಸಲ್ಲಿಸಿದ ಪಟ್ಟಿಯನ್ನು ಅಂಗೀಕರಿಸಲೇಬೇಕಾಗುತ್ತದೆ. ಕೊಲಿಜಿಯಂಗೆ ಯಾವುದೇ ಸಾಂವಿಧಾನಿಕ
ಆಧಾರವಿಲ್ಲ. ಕೊಲಿಜಿಯಂ ಬಗ್ಗೆ ಸಂವಿಧಾನದಲ್ಲಿ ಉಲ್ಲೇಖವೇ ಇಲ್ಲ. ಈ ವ್ಯವಸ್ಥೆಯನ್ನು ಸ್ವತಃ ಸುಪ್ರೀಂ ಕೋರ್ಟೇ ಜಾರಿಗೆ ತಂದಿದ್ದು. ಮೂವರು ನ್ಯಾಯಾಧೀಶರ ಪ್ರಕರಣಗಳ (ಥ್ರೀ ಜಡ್ಜಸ್ ಕೇಸ್) ಆಧಾರದಲ್ಲಿ ಸುಪ್ರೀಂ ಕೋರ್ಟ್ ಈ ವ್ಯವಸ್ಥೆಯನ್ನು
ಜಾರಿಗೊಳಿಸಿ, ಸುಪ್ರೀಂ ಮತ್ತು ಹೈಕೋರ್ಟ್‌ಗಳ ನ್ಯಾಯಾಧೀಶರ ಆಯ್ಕೆ ಪ್ರಕ್ರಿಯೆಯಲ್ಲಿ ಸರಕಾರವನ್ನು ಹೊರಗಿಟ್ಟು ತಾನೇ ನ್ಯಾಯಾಧೀಶರ ನೇಮಕವನ್ನು ಆರಂಭಿಸಿತು.
ಆದರೆ ಕೊಲಿಜಿಯಂ ವ್ಯವಸ್ಥೆಯಲ್ಲಿ ಯಾವುದೇ ಪಾರದರ್ಶಕತೆ ಮತ್ತು ಹೊಣೆಗಾರಿಕೆಯಿಲ್ಲ ಎಂಬುದನ್ನು ಮನಗಂಡ ಕೇಂದ್ರ ಸರಕಾರವು, ರಾಜ್ಯಸಭೆ ಮತ್ತು ಲೋಕಸಭೆಗಳ ಅನುಮೋದನೆಯೊಂದಿಗೆ ೨೦೧೪ರಲ್ಲಿ ಸಂವಿಧಾನಕ್ಕೆ ತಿದ್ದುಪಡಿ ತಂದು, ‘ನ್ಯಾಷನಲ್ ಜ್ಯುಡಿಷಿಯಲ್ ಅಪಾಯಿಂಟ್‌ಮೆಂಟ್ಸ್ ಕಮಿಷನ್ ಆಕ್ಟ್’ (ಎನ್‌ಜೆಎಸಿ) ಅನ್ನು ಜಾರಿಗೊಳಿಸಿತು. ಇದರ ಪ್ರಕಾರ, ನ್ಯಾಯಾಧೀಶರ ನೇಮಕಾತಿ ಆಯೋಗವು ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಾಧೀಶರು ಮತ್ತು ಇಬ್ಬರು ಹಿರಿಯ ನ್ಯಾಯಾ ಧೀಶರು, ಕೇಂದ್ರ ಸರಕಾರದ ಕಾನೂನು ಸಚಿವರು ಹಾಗೂ ಆಯ್ಕೆ ಸಮಿತಿಯಿಂದ ಆರಿಸಲ್ಪಟ್ಟ ಇಬ್ಬರು ಯೋಗ್ಯವ್ಯಕ್ತಿಗಳನ್ನು ಒಳಗೊಂಡ ಒಟ್ಟು ೬ ಜನರನ್ನು ಹೊಂದಿರುತ್ತದೆ. ಆದರೆ ಸದರಿ ಎನ್ ಜೆಎಸಿಯು ನ್ಯಾಯಾಂಗದ ಸ್ವಾತಂತ್ರ್ಯಕ್ಕೆ ಭಂಗ ತರುತ್ತದೆ ಮತ್ತು ತನ್ಮೂಲಕ ನ್ಯಾಯಾಂಗದಲ್ಲಿ ಶಾಸಕಾಂಗದ ಹಸ್ತಕ್ಷೇಪವಾಗುತ್ತದೆ ಎಂದು ೨೦೧೫ರಲ್ಲಿ ಆಕ್ಷೇಪಿಸಿದ ಸುಪ್ರೀಂ ಕೋರ್ಟ್ ಎನ್ ಜೆಎಸಿ ಕಾನೂನನ್ನು ರದ್ದುಗೊಳಿಸಿತು.
ಇದರೊಂದಿಗೆ ನ್ಯಾಯಾಂಗದಲ್ಲಿ ಪಾರದರ್ಶಕತೆ ತರುವ ಪ್ರಯತ್ನವು ವಿಫಲವಾಯಿತು. ಶಾಸಕಾಂಗದ ಅಂಗವಾಗಿರುವ ಜನಪ್ರತಿನಿಧಿಗಳು ಚುನಾವಣೆಯ ಮೂಲಕ ಜನರಿಂದ ನೇರವಾಗಿ ಆಯ್ಕೆಯಾದರೆ, ಕಾರ್ಯಾಂಗದ ಅಧಿಕಾರಿಗಳು ಸ್ಪರ್ಧಾತ್ಮಕ ಪರೀಕ್ಷೆ ಮತ್ತು ಸಂದರ್ಶನಗಳ ಮೂಲಕ ಆಯ್ಕೆಯಾಗುತ್ತಾರೆ. ಶಾಸಕಾಂಗ-ಕಾರ್ಯಾಂಗಗಳ ಆಯ್ಕೆ ಪ್ರಕ್ರಿಯೆಗಳು ಹೀಗೆ ಪಾರದರ್ಶಕ ರೀತಿಯಿಂದ ನಡೆಯುತ್ತವೆ. ಆದರೆ ನ್ಯಾಯಾಂಗಕ್ಕೆ ಅಗತ್ಯವಿರುವ ನ್ಯಾಯಾಧೀಶರನ್ನು ಸುಪ್ರೀಂನ ಮುಖ್ಯ ನ್ಯಾಯಾಧೀಶರು ಮತ್ತು ಹಿರಿಯ ನ್ಯಾಯಾಧೀಶರ ತಂಡವೇ ನೇಮಕ ಮಾಡುತ್ತಿರುವ ಭಾರತದ ಕೊಲಿಜಿಯಂನಂಥ ವ್ಯವಸ್ಥೆ ಜಗತ್ತಿನ ಬೇರಾವ ದೇಶದಲ್ಲೂ ಇಲ್ಲ.
ಅಮೆರಿಕದಲ್ಲಿ ಅಲ್ಲಿನ ಅಧ್ಯಕ್ಷರು ಸೆನೆಟ್‌ನ ಸಲಹೆ ಹಾಗೂ ಒಪ್ಪಿಗೆ ಪಡೆದುಕೊಂಡೇ ಫೆಡರಲ್ ಕೋರ್ಟ್‌ಗಳಿಗೆ ನ್ಯಾಯಾಧೀಶ ರನ್ನು ನೇಮಿಸುತ್ತಾರೆ. ಅದಕ್ಕೂ ಮೊದಲು ಅಮೆರಿಕನ್ ಬಾರ್ ಅಸೋಸಿಯೇಷನ್‌ನ ಸಮಿತಿಯು ಅಭ್ಯರ್ಥಿಗಳ ಮೌಲ್ಯಮಾಪನ ನಡೆಸಿ, ನಂತರ ಸೆನೆಟ್‌ನ ನ್ಯಾಯಾಂಗ ಸಮಿತಿಯು ಅಭ್ಯರ್ಥಿಗಳ ಪಟ್ಟಿಯನ್ನು ಮರುಪರಿಶೀಲಿಸಿರುತ್ತದೆ. ಬ್ರೆಜಿಲ್, ಮೆಕ್ಸಿಕೊ ಮೊದಲಾದ ಲ್ಯಾಟಿನ್ ಅಮೆರಿಕ ದೇಶಗಳಲ್ಲೂ ಇದೇ ಮಾದರಿಯನ್ನು ಅನುಸರಿಸಲಾಗುತ್ತಿದೆ.
ಇಂಗ್ಲೆಂಡ್‌ನಲ್ಲಿ ಸ್ವತಂತ್ರ ಜ್ಯುಡಿಷಿಯಲ್ ಅಪಾಯಿಂಟ್‌ಮೆಂಟ್ಸ್ ಕಮಿಷನ್ ನ್ಯಾಯಾಧೀಶರ ನೇಮಕ ಮಾಡುತ್ತದೆ. ೧೫ ಸದಸ್ಯರ ಈ ಸಮಿತಿಯಲ್ಲಿ ಇಬ್ಬರು ಮಾತ್ರ ನ್ಯಾಯಾಧೀಶರಿದ್ದು, ಮಿಕ್ಕ ೧೩ ಮಂದಿ ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ
ಆಯ್ಕೆಯಾದವರಾಗಿರುತ್ತಾರೆ. ಫ್ರಾನ್ಸ್ ನಲ್ಲಿ ಉನ್ನತ ನ್ಯಾಯಾಂಗ ಮಂಡಳಿಯ ಸಲಹೆಯ ಮೇರೆಗೆ ರಾಷ್ಟ್ರಾಧ್ಯಕ್ಷರು ನ್ಯಾಯಾ ಧೀಶರನ್ನು ನೇಮಿಸಿದರೆ, ದಕ್ಷಿಣ ಆಫ್ರಿಕಾದಲ್ಲಿ ೨೩ ಸದಸ್ಯರಿರುವ ನ್ಯಾಯಾಂಗ ಸೇವಾ ಆಯೋಗವು ಇಂಥ ನೇಮಕವನ್ನು ಕೈಗೊಳ್ಳುತ್ತದೆ.
ಭಾರತದ ನ್ಯಾಯಾಂಗ ನೇಮಕಾತಿಗಳಲ್ಲಿ ರಕ್ತಸಂಬಂಧಿಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂಬ ಆರೋಪವಿದೆ. ೨೦೧೫ರಲ್ಲಿ ಮ್ಯಾಥ್ಯೂಸ್ ಜೆ. ನೆಡುಂಪಾರ ಎಂಬ ನ್ಯಾಯವಾದಿಯೊಬ್ಬರು ನಡೆಸಿದ ಅಧ್ಯಯನವು, ‘ಹೈಕೋರ್ಟ್‌ಗಳಲ್ಲಿರುವ
ಶೇ. ೫೦ರಷ್ಟು ಮತ್ತು ಸುಪ್ರೀಂ ಕೋರ್ಟ್‌ನಲ್ಲಿರುವ ಶೇ. ೩೦ರಷ್ಟು ನ್ಯಾಯಾಧೀಶರು, ಈ ಹಿಂದೆ ನ್ಯಾಯಾಂಗದಲ್ಲಿ ಉನ್ನತ ಹುದ್ದೆಯಲ್ಲಿ ಸೇವೆ ಸಲ್ಲಿಸಿದ್ದವರ ಸಮೀಪ ಬಂಧುಗಳಾಗಿದ್ದಾರೆ’ ಎಂದು ಹೇಳಿದೆ. ಸುಪ್ರೀಂ ಕೋರ್ಟ್‌ನ ಈಗಿನ ಮುಖ್ಯ
ನ್ಯಾಯಾಧೀಶರಾಗಿರುವ ಡಿ.ವೈ. ಚಂದ್ರಚೂಡ್ ಅವರ ತಂದೆ ಯಶ್ವಂತ್ ವಿಷ್ಣು ಚಂದ್ರಚೂಡ್ ಅವರು ಹಿಂದೆ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಾಧೀಶರಾಗಿದ್ದರು. ಇತ್ತೀಚೆಗೆ ಸುಪ್ರೀಂ ಕೋರ್ಟಿನ ನ್ಯಾಯಾಧೀಶರಾಗಿ ನಿವೃತ್ತರಾದ ಕೆ.ಎಂ.
ಜೋಸೆಫ್ (ತಂದೆ ಕೆ.ಕೆ. ಮ್ಯಾಥ್ಯೂ), ಪ್ರಸ್ತುತ ಸುಪ್ರೀಂ ಕೋರ್ಟ್ ನಾಯಾಧೀಶರಾಗಿರುವ ಸಂಜೀವ್ ಖನ್ನಾ (ತಂದೆ ದೇವರಾಜ್ ಖನ್ನಾ), ಜಸ್ಟೀಸ್ ಬಿ.ವಿ. ನಾಗರತ್ನ (ತಂದೆ ಇ.ಎಸ್. ವೆಂಕಟರಾಮಯ್ಯ), ಪಮಿದಿಘಂಟ ಶ್ರೀನರಸಿಂಹ (ತಂದೆ ಕೊಂಡದ ರಾಮಯ್ಯ), ಸುಧಾಂಶು ಧುಲಿಯಾ (ತಂದೆ ಕೆ.ಸಿ. ಧುಲಿಯಾ), ಸಂಜಯ್ ಕಿಶನ್ ಕೌಲ್ (ಸೋದರ ನೀರಜ್ ಕಿಶನ್ ಕೌಲ್),
ದೀಪಂಕರ್ ದತ್ತಾ (ಸೋದರ ಅಮಿತಾವ್ ರಾಯ್) ಮೊದಲಾದವರದ್ದು ಈ ವಿಷಯದಲ್ಲಿ ಮತ್ತಷ್ಟು ಉದಾಹರಣೆಗಳಾಗಿವೆ.
ಸಿಬಿಐ ನಿರ್ದೇಶಕರ ನೇಮಕದ ಸಮಿತಿಯಲ್ಲಿ ಪ್ರಧಾನಮಂತ್ರಿ ಹಾಗೂ ವಿಪಕ್ಷ ನಾಯಕರ ಜತೆಗೆ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಾಧೀಶರು ಇದ್ದಾರೆ. ಲೋಕಪಾಲರ ನೇಮಕದ ಸಮಿತಿಯಲ್ಲಿ ಪ್ರಧಾನಮಂತ್ರಿ, ಲೋಕಸಭಾ ಸ್ಪೀಕರ್ ಜತೆಗೂ ಸಿಜೆಐ ಇದ್ದಾರೆ. ಮುಖ್ಯ ಚುನಾವಣಾ ಆಯುಕ್ತರು ಮತ್ತು ಚುನಾವಣಾ ಆಯುಕ್ತರ ನೇಮಕದ ಸಮಿತಿಯಲ್ಲೂ ಸಿಜೆಐ ಅವರನ್ನು ಸೇರಿಸಬೇಕೆಂದು ಸುಪ್ರೀಂ ಕೋರ್ಟ್‌ನ ಐವರು ನ್ಯಾಯಧೀಶರ ಪೀಠವು ಇತ್ತೀಚೆಗೆ ತೀರ್ಪು ನೀಡಿದೆ.
ಹೀಗೆ ಸಾಧ್ಯವಿರುವೆಡೆಯೆಲ್ಲಾ ನ್ಯಾಯಾಂಗವು ಕಾರ್ಯಾಂಗದಲ್ಲಿ ಹಸ್ತಕ್ಷೇಪ ಮಾಡುತ್ತಿದೆ; ಆದರೆ ನ್ಯಾಯಾಂಗದ ನೇಮಕ ಪ್ರಕ್ರಿಯೆಯಲ್ಲಿ ಶಾಸಕಾಂಗ ಮತ್ತು ಕಾರ್ಯಾಂಗದ ಪಾಲ್ಗೊಳ್ಳುವಿಕೆಗೆ ಸುಪ್ರೀಂ ಕೋರ್ಟ್ ಅವಕಾಶ ಕೊಡುತ್ತಿಲ್ಲ. ಮಾತ್ರವಲ್ಲ,
ಸುಪ್ರೀಂ ಮತ್ತು ಹೈಕೋರ್ಟ್‌ಗಳ ನ್ಯಾಯಾಧೀಶರ ಹುದ್ದೆಗಳ ನೇಮಕದ ಕುರಿತಾಗಿ ಯಾವುದೇ ಜಾಹೀರಾತು ನೀಡದೆ, ಸ್ಪರ್ಧಾ ತ್ಮಕ ಪರೀಕ್ಷೆಗಳನ್ನು ನಡೆಸದೆ ಗುಟ್ಟಾಗಿ ಆಯ್ಕೆಮಾಡುತ್ತಿದೆ. ಕೊಲಿಜಿಯಂ ವ್ಯವಸ್ಥೆಯಿಂದಾಗಿ ನ್ಯಾಯಾಂಗ ನೇಮಕ
ಪ್ರಕ್ರಿಯೆ ಯಲ್ಲಿ ಸ್ವಜನ ಪಕ್ಷಪಾತ ಹೆಚ್ಚಾಗಿದೆ ಎಂದು ನ್ಯಾಯವಾದಿ ಮ್ಯಾಥ್ಯೂಸ್ ಜೆ. ನೆಡುಂಪಾರ ಪ್ರತಿಪಾದಿಸಿದ್ದಾರೆ. ಪ್ರಸ್ತುತ, ಸುಪ್ರೀಂ ಕೋರ್ಟಿನ ಭಾರಿ ಪ್ರತಿರೋಧದ ನಡುವೆಯೂ ಕೇಂದ್ರ ಸರಕಾರವು ಕೊಲಿಜಿಯಂ ವ್ಯವಸ್ಥೆಯನ್ನು ಬದಲಾಯಿಸಲು ಪ್ರಯತ್ನಿಸುತ್ತಿದೆ.
ಕೊಲಿಜಿಯಂ ವ್ಯವಸ್ಥೆ ಅಳಿಯದೆ ನ್ಯಾಯಾಂಗ ನೇಮಕ ಪ್ರಕ್ರಿಯೆಯಲ್ಲಿ ಸ್ವಜನ ಪಕ್ಷಪಾತ ನಿಲ್ಲದು, ಸ್ವಜನ ಪಕ್ಷಪಾತ ನಿಲ್ಲದೆ ನ್ಯಾಯಾಂಗದ ಭ್ರಷ್ಟತೆ ನಿಲ್ಲದು ಎಂಬುದು ಬಲ್ಲವರ ಅಭಿಮತ.