Friday, 13th December 2024

K Leelavathy Column: ಜೀವನ ಮಾರ್ಗದರ್ಶಿ ಭಗವದ್ಗೀತಾ

ಗೀತಮಾಧುರ್ಯ

ಕೆ.ಲೀಲಾವತಿ

(ಇಂದು ಗೀತಾ ಜಯಂತಿ)

ಗೀತೆಯ ಎಲ್ಲ ಭಾಗವೂ ನಮಗೆ ಒಂದೇ ಸಮನಾಗಿ ಅರ್ಥವಾಗುವುದಿಲ್ಲ. ನಮ್ಮ ನಮ್ಮ ಶ್ರದ್ಧೆ, ನೈತಿಕತೆ, ಬುದ್ಧಿಶಕ್ತಿ ಯಾವ ಯಾವ ಮಟ್ಟದ್ದೋ ಹಾಗೇ ಗೀತೆ ಅರ್ಥವಾಗುತ್ತಾ ಹೋಗುತ್ತದೆ. ಅಂದರೆ ನಮ್ಮ ಬೆಳವಣಿಗೆಗೆ ತಕ್ಕಂತೆ ಗೀತೆ ಅರ್ಥವಾಗುತ್ತಾ ಹೋಗುತ್ತದೆ. ನಾವು ಪರಿಪಕ್ವಗೊಂಡಂತೆ ಭಗವಂತನ ಮಾತುಗಳು ನಮಗೆ ಅರ್ಥವಾಗುತ್ತದೆ.

ಪ್ರತಿಯೊಬ್ಬ ಮನುಷ್ಯನಿಗೂ ತಾನು ಚೆನ್ನಾಗಿ ಬದುಕಬೇಕು, ತಾನು ಸಂತೋಷವಾಗಿರಬೇಕು ಅಂತಿರುತ್ತದೆ. ಯಾರನ್ನು ನೋಡಿದರೂ ಸುಖದ ಹುಡುಕಾಟದಲ್ಲಿದ್ದಂತೆ ಕಾಣುತ್ತದೆ. ಹಾಗಾದರೆ ನಮ್ಮ ಬದುಕನ್ನು ಸುಖವಾಗಿ ಚಂದವಾಗಿ ಮಾಡುವುದು ಹೇಗೆ? ನಮಗೆ ಯಾವುದು ಸುಖ ಎಂದು ಹೇಳುವುದು ನಮಗೇ ಸುಲಭವಲ್ಲ. ಇಂದು ನಮಗೆ ಸುಖವೆನಿಸಿದ್ದು ನಾಳೆ ಬೇಸರ ತರಿಸಬಹುದು.

ನಮ್ಮಲ್ಲಿಯೇ ನಮಗೆ ಸ್ಪಷ್ಟವಾಗಿರದ ಸುಖದ ಕಲ್ಪನೆಯನ್ನು ಇಲ್ಲವಾಗಿಸಿ ‘ಇದು ಸುಖ’ ಎಂದು ಸ್ಪಷ್ಟವಾಗಿಸುವ
ಗ್ರಂಥವೇ ಭಗವದ್ಗೀತೆ. ನಮ್ಮ ನಿಜ ಸುಖ ಏನೆಂದು ತಿಳಿದುಕೊಳ್ಳಬೇಕಾದರೆ ಭಗವದ್ಗೀತೆಯನ್ನು ತಿಳಿಯಬೇಕು. ನಮ್ಮ ಸುಖದ ನೆಲೆಯನ್ನು ತಿಳಿಸುವುದೇ ಭಗವದ್ಗೀತೆಯ ಉದ್ದೇಶ. ಇಲ್ಲಿನ ತತ್ವಗಳನ್ನು ಚಿಂತನ ಮಾಡಿ, ಮನನ ಮಾಡಿದಷ್ಟೂ ಅದರ ಆಳ-ಅಗಲ ಅರಿವಾಗುತ್ತಾ ಹೋಗುತ್ತದೆ. ಆದ್ದರಿಂಲೇ ಭಗವದ್ಗೀತೆ ಬಗ್ಗೆ ಅಷ್ಟೊಂದು ವಿವರಣೆಗಳು, ವ್ಯಾಖ್ಯಾನಗಳು ಬಂದಿರುವುದು.

ನಾವು ಯಾವುದೋ, ಯಾರದ್ದೇ ವ್ಯಾಖ್ಯಾನ ಓದಿ ಅದರಂತೆ ಅಥವಾ ಅದಷ್ಟೇ ಭಗವದ್ಗೀತೆ ಎಂದು ತಿಳಿಯುವ ಅಗತ್ಯವಿಲ್ಲ. ಒಂದು ಮಟ್ಟಿಗೆ ಭಗವದ್ಗೀತೆಯನ್ನು ತಿಳಿಯಲು ಅವು ಸಹಾಯ ಮಾಡಬಹುದು. ಇದರಲ್ಲಿರುವ ಬರೀ ಏಳುನೂರು ಶ್ಲೋಕಗಳನ್ನಷ್ಟೇ ಓದಿ ಮತ್ತೆ ಮತ್ತೆ ಮನನ ಮಾಡಬೇಕು. ಇದೊಂದು ಧ್ಯಾನಯೋಗ್ಯ ಗ್ರಂಥ. ಧೇನಿಸಿದಷ್ಟೂ ಮತ್ತೆ ಮತ್ತೆ ಆನಂದವನ್ನೀಯುವ ಗ್ರಂಥ ಭಗವದ್ಗೀತೆ.

ಹಾಗೆಂದು ಭಗವದ್ಗೀತೆ ಓದಿಬಿಟ್ಟರೆ ನಮ್ಮೆ ಕಷ್ಟಗಳು ಇಲ್ಲವಾಗುತ್ತದೆ, ನಮಗೆ ಹಸಿವೇ ಆಗುವುದಿಲ್ಲ, ನೀರಡಿಕೆಯೇ ಆಗುವುದಿಲ್ಲ ಅಂತಲ್ಲ. ಇರೋ ದುಃಖ ಇರೋದೇ. ಕಷ್ಟ ಇರೋದೇ. ಆದರೆ ಆ ಎಲ್ಲಾ ಕಷ್ಟಗಳ ನಡುವೆಯೂ ನಮ್ಮ ಮನಸ್ಸನ್ನು ಸಮಸ್ಥಿತಿಯಲ್ಲಿ ಇಟ್ಟುಕೊಳ್ಳುವುದನ್ನು ತಿಳಿಯಬೇಕಾದರೆ ಭಗವದ್ಗೀತೆಯನ್ನು ಓದಬೇಕು. ಅದು ಮೋಕ್ಷಶಾಸವಷ್ಟೇ ಅಲ್ಲ, ಜೀವನಶಾಸ್ತ್ರವೂ ಹೌದು.

ಇದೊಂದು ಅನುಸಂಧಾನ ಗ್ರಂಥ. ನಮ್ಮ ವ್ಯಕ್ತಿತ್ವವನ್ನು ಗಟ್ಟಿಗೊಳಿಸುವ ಗ್ರಂಥ. ಇಲ್ಲಿ ಕುರುಕ್ಷೇತ್ರ ಸಾಂಕೇತಿಕ. ಕೃಷ್ಣನ ಮಾತುಗಳು ನಮಗೂ ಅನ್ವಯವಾಗುತ್ತವೆ. ಕೃಷ್ಣ ನಮ್ಮ ಆತ್ಮವಿಶ್ವಾಸದ ಸಂಕೇತ. ಭಗವದ್ಗೀತೆಯು ಒಂದು ಸಂವಾದ ಗ್ರಂಥ. ನಮ್ಮೆಲ್ಲರ ಪ್ರತಿರೂಪನಂತಿರುವ ನರಮಾನವನಾದ ಅರ್ಜುನ ಮತ್ತು ಕೃಷ್ಣ ಭಗವಂತನೊಡನೆ ನಡೆಸಿದ ಸಂವಾದ. ಅದೂ ಋಷ್ಯಾಶ್ರಮದಲ್ಲಿ ಅಲ್ಲ, ಕುರುಕ್ಷೇತ್ರದಲ್ಲಿ! ಅದರಲ್ಲೂ ಎರಡೂ ಕಡೆಯ ಸೈನ್ಯ ಯುದ್ಧ
ಸನ್ನದ್ಧವಾಗಿರುವಾಗ! ಇದಕ್ಕಿಂತ ಕಷ್ಟದ ಸನ್ನಿವೇಶ ಮತ್ತಾವುದಿದ್ದೀತು? ಅರ್ಜುನನ ರಥ ನಡೆಸಿದವನು ಶ್ರೀಕೃಷ್ಣ. ಹಾಗೆಯೇ ನಮ್ಮ ಜೀವನ ರಥವನ್ನು ನಡೆಸುವವನೂ ಅವನೇ.

ಅವನ ನಿರಂತರ ಸ್ಮರಣೆಯಿಂದ ನಮಗೆ ಜಯ ದೊರಕುವುದು. ಭಗವದ್ಗೀತೆ ಮಹಾಭಾರತದ ಒಂದು ಭಾಗ, ಆದರೂ ಅದೊಂದು ಸ್ವತಂತ್ರ ಕೃತಿಯೆಂದೇ ಹೇಳಬಹುದು. ಇಡೀ ಮಹಾಭಾರತದಲ್ಲಿ ಶ್ರೀಕೃಷ್ಣ ಬರುವ ಸನ್ನಿವೇಶಗಳನ್ನು ಹೇಳುವಾಗ ‘ಶ್ರೀ ಕೃಷ್ಣ ಉವಾಚ’ ಎಂದೇ ಹೇಳಲಾಗಿದೆ. ಆದರೆ ಭಗವದ್ಗೀತೆಯಲ್ಲಿ ಮಾತ್ರ ‘ಶ್ರೀ ಭಗವಾನುವಾಚ’ ಎಂದು ಹೇಳಲಾಗಿದೆ. ಇಲ್ಲಿ ಭಗವಂತನು ತನ್ನ ಮೂಲನೆಲೆಯಲ್ಲಿ ನಿಂತು ಹೇಳಿzನೆ. ಸಾಕ್ಷಾತ್ ಭಗವಂತನೇ ಹೇಳಿದ್ದರಿಂದ ಇದು ಭಗವದ್ಗೀತೆ. ಇದು ಈ ನೆಲದ ತತ್ವಗಳನ್ನು, ದಾರ್ಶನಿಕತೆಯನ್ನು ಹೇಳುವ ಪ್ರಮಾಣ ಗ್ರಂಥ ವಾಗಿದೆ. ಇಲ್ಲಿ ಹೇಳುವ ಯಜ್ಞವ್ಯವಸ್ಥೆಯು ವೇದ ಗಳಲ್ಲಿ ಕಂಡುಬರುವ ಕರ್ಮಕಾಂಡದ ನೆಲೆಯದಲ್ಲ. ಇಲ್ಲಿಯ ಪ್ರಕಾರ ಜೀವನವೇ ಒಂದು ಯಜ್ಞ. ಇಲ್ಲಿ ಯಾವ ಪಂಥದ ಪಂಗಡದ ಧೋರಣೆಗಳಿಲ್ಲ. ಇಲ್ಲಿ ವೈದಿಕ
ಸಂಪ್ರದಾಯವನ್ನು ಸಮರ್ಥಿಸುವುದಾಗಲೀ, ಅವೈದಿಕ ಸಂಪ್ರದಾಯವನ್ನು ನಿಂದಿಸುವುದಾಗಲೀ ಇಲ್ಲ.

ಇಲ್ಲಿ ಯಾವುದೇ ದೇವತಾ ಪೂಜೆ, ದೇವಸ್ಥಾನಗಳು, ತೀರ್ಥಯಾತ್ರೆಗಳು, ವ್ರತಗಳ ಬಗ್ಗೆಯಾಗಲೀ ಬರುವುದಿಲ್ಲ.
ಇಲ್ಲಿ ಬರುವುದು ಕೇವಲ ಆತ್ಮಚಿಂತನೆ ಮಾತ್ರ. ಇಲ್ಲಿ ಹೇಳಿದ್ದು ಶ್ರೀಕೃಷ್ಣನೇ ಆದರೂ ತಾನು ಹೇಳಿದ್ದೇ ಸರಿ, ಹೀಗೇ ನಡೆದುಕೊಳ್ಳಬೇಕೆಂದು ಬಲವಂತ ಮಾಡುವುದಿಲ್ಲ. ಭಗವದ್ಗೀತೆ ಮುಗಿಯುವುದು ಈ ಶ್ಲೋಕದಿಂದ- “ಇತಿ ತೇ eನಮಾಖ್ಯಾತಂ ಗುಹ್ಯಾದ್ಗುಹ್ಯತರಂ ಮಯಾ, ವಿಮೃಶ್ಯೆ ತದಶೇಷೇಣ, ಯಥೇಚ್ಛಸಿ ತಥಾ ಕುರು” (18.63)- “ಹೀಗೆ ರಹಸ್ಯಕ್ಕಿಂತಲೂ ರಹಸ್ಯವಾದ ಜ್ಞಾನವನ್ನು ಹೇಳಿದ್ದೇನೆ.

ನಾನು ಹೇಳಿದ್ದನ್ನೆಲ್ಲ ಚೆನ್ನಾಗಿ ವಿಚಾರ ಮಾಡಿ, ನಿನಗೆ ಯಾವುದು ಸರಿಯೋ ಹಾಗೆ ನಡೆದುಕೋ” ಎನ್ನುತ್ತಾನೆ. ಇದಕ್ಕಿಂತ ಸ್ವಾತಂತ್ರ್ಯ ಮತ್ತೆಲ್ಲಿ ಸಿಕ್ಕೀತು? ಕೊನೆಗೆ ಭಗವಂತನ ಉಪದೇಶವನ್ನು ಕೇಳಿದ ನಂತರ ಅರ್ಜುನ ಹೇಳಿದ್ದು- “ನಷ್ಟೋ ಮೋಹಃ ಸ್ಮೃತಿರ್ಲ ಬ್ಧಾ, ತ್ವತ್ಪ್ರಸಾದಾನ್ಮಯಾಚ್ಯುತ, ಸ್ಥಿತೋಧಿಸ್ಮಿ ಗತಸಂ ದೇಹಃ ಕರಿಷ್ಯೇ ವಚನಂತವ” (18.73)- “ಎಲೈ ಅಚ್ಯುತನೇ, ನಿನ್ನ ಕೃಪೆಯಿಂದ ನನ್ನ ಮೋಹ ನಾಶವಾಯಿತು, ನನಗೆ ಜ್ಞಾನೋ ದಯವಾಗಿದೆ, ಯಾವುದೇ ಸಂದೇಹವಿಲ್ಲದವನಾಗಿದ್ದೇನೆ. ನಿನ್ನ ಆಜ್ಞೆಯನ್ನು ಪರಿಪಾಲಿಸುತ್ತೇನೆ”.

ಭಯದಿಂದ, ಮೋಹದಿಂದ ಗಾಂಡೀವವನ್ನು ಬೀಳಿಸಿಕೊಂಡಿದ್ದ ಅರ್ಜುನ ಅದನ್ನು ಎತ್ತಿ ಹಿಡಿದ. ಇದನ್ನು ನೋಡಿದ ಮೇಲೆ ನಮಗೆ ಗೊತ್ತಾಗುತ್ತದೆ, ಭಗವದ್ಗೀತೆ ಮುಪ್ಪಡರಿದ ಮೇಲೆ ಅಲ್ಲ, ಈಗಲೇ ಈ ಕ್ಷಣಕ್ಕೇ ಚಂದದ ಬದುಕು ಬೇಕು ಅನ್ನುವವರಿಗಿರೋದು ಅಂತ. ಬದುಕಿನ ಕಷ್ಟ ಕಾರ್ಪಣ್ಯಗಳ ನಡುವೆಯೂ ಸಮಾಧಾನ ಪಡೆಯಲು ಗೀತೆ ಸಹಕಾರಿ. ಯಾವುದೇ ಕರ್ತವ್ಯವಾ ದರೂ ಸರಿ ಓಡಿಹೋಗಬಾರದು.

ಲೋಕಸಂಗ್ರಹಕ್ಕಾಗಿ ಮತ್ತು ನಮ್ಮದೇ ಏಳಿಗಾಗಿ ನಮ್ಮ ಪಾಲಿನ ಕೆಲಸವನ್ನು ನಾವು ಮಾಡಲೇಬೇಕು. ಇಲ್ಲಿ ಅರ್ಜುನನ್ನು ನಿಮಿತ್ತವಾಗಿರಿಸಿ ಸಮಸ್ತ ಮನುಕುಲಕ್ಕೇ ಹೇಳಿದ ಉಪದೇಶವಿದು. ಇದನ್ನು ಹತ್ತಾರು ಬಾರಿ ಓದಿದರೂ, ವಿಮರ್ಶೆ ಮಾಡಿದರೂ ಮತ್ತೆ ಮತ್ತೆ ಹೊಸತನ್ನು ಕೊಡುತ್ತಿರುತ್ತದೆ. ಆದ್ದರಿಂದಲೇ ಭಗವದ್ಗೀತೆಯ ಬಗ್ಗೆ ಅಷ್ಟೊಂದು ವ್ಯಾಖ್ಯಾನಗಳು, ವಿಮರ್ಶೆಗಳು.

ಗೀತೆಯ ಎಲ್ಲ ಭಾಗವೂ ನಮಗೆ ಒಂದೇ ಸಮನಾಗಿ ಅರ್ಥವಾಗುವುದಿಲ್ಲ. ನಮ್ಮ ನಮ್ಮ ಶ್ರದ್ಧೆ, ನೈತಿಕತೆ, ಬುದ್ಧಿಶಕ್ತಿ ಯಾವ ಯಾವ ಮಟ್ಟದ್ದೋ ಹಾಗೇ ಗೀತೆ ಅರ್ಥವಾಗುತ್ತಾ ಹೋಗುತ್ತದೆ. ಅಂದರೆ ನಮ್ಮ ಬೆಳವಣಿ ಗೆಗೆ ತಕ್ಕಂತೆ ಗೀತೆ ಅರ್ಥವಾಗುತ್ತಾ ಹೋಗುತ್ತದೆ. ನಾವು ಪರಿಪಕ್ವಗೊಂಡಂತೆ ಭಗವಂತನ ಮಾತುಗಳು ನಮಗೆ ಅರ್ಥವಾಗುತ್ತದೆ. ಅರ್ಥವಾಗಲಿಲ್ಲವೆಂದು ಬದಿಗಿರಿಸಿದರೆ ಅದು ನಮಗೆ ನಾವೇ ಮಾಡಿಕೊಳ್ಳುವ ನಷ್ಟ.

ಸದ್ಯಕ್ಕೆ ಅರ್ಥವಾದಷ್ಟು ಗ್ರಹಿಸಿ ಮನನ ಮಾಡುತ್ತಿದ್ದರೆ ಕ್ರಮೇಣ ಅದರ ಆಳ ಹಾಗೂ ಹರಹು ಅರಿವಾಗುತ್ತಾ
ಹೋಗುತ್ತದೆ. ಬದುಕು ಸುಂದರವಾಗುತ್ತಾ ಹೋಗುತ್ತದೆ. ಆದ್ದರಿಂದ ಗೀತೆ ನಮ್ಮ ನಿತ್ಯಪಠಣ ಗ್ರಂಥವಾಗಲಿ.

(ಲೇಖಕಿ ಹವ್ಯಾಸಿ ಬರಹಗಾರ್ತಿ)

ಇದನ್ನೂ ಓದಿ: PatitaPavana Das Column: ಬಾಂಗ್ಲಾ ಗಲಭೆ ಮತ್ತು ಕೃಷ್ಣ ಪ್ರಜ್ಞೆಯ ಪ್ರಚಾರ