Saturday, 14th December 2024

ಯಾರಿಗೂ ಸಿಗದ ’ಸ್ಕೂಪ್’ ಸಿಕ್ಕರೂ ಪ್ರಕಟಿಸಲಾಗದ ಪತ್ರಕರ್ತರ ದ್ವಂದ್ವ !

ಇದೇ ಅಂತರಂಗ ಸುದ್ದಿ

ವಿಶ್ವೇಶ್ವರ ಭಟ್

vbhat@me.com

ಕೆ .ಎನ್.ಮಲ್ಲಿಕ್ ಅವರು ಬಹಳ ವರ್ಷಗಳ ಕಾಲ ’ದಿ ಟೈಮ್ಸ್ ಆಫ್ ಇಂಡಿಯಾ’ ಪತ್ರಿಕೆಯಲ್ಲಿ ದಿಲ್ಲಿಯಲ್ಲಿ ರಾಜಕೀಯ ವರದಿಗಾರರಾಗಿದ್ದರು. ಏಳು ವರ್ಷಗಳ
ಕಾಲ ಅವರು ಲಂಡನ್ ಕೇಂದ್ರವಾಗಿ, ಪತ್ರಿಕೆಯ ಯುರೋಪಿಯನ್ ಕರೆಸ್ಪಾಂಡೆಂಟ್ ಆಗಿಯೂ ಕೆಲಸ ಮಾಡಿದವರು. ಇತ್ತೀಚೆಗೆ ಅವರು ತಮ್ಮ ಆತ್ಮಕಥೆ
(K.N.Mallik : An Autobiography) ಯನ್ನು ಬರೆದಿದ್ದಾರೆ.

ಸಾಮಾನ್ಯವಾಗಿ ದಿಲ್ಲಿಯಲ್ಲಿ ರಾಜಕೀಯ ವರದಿಗಾರರಾಗಿ ಬಹಳ ವರ್ಷಗಳ ಕಾಲ ಕೆಲಸ ಮಾಡಿ, ನಂತರ ವಿದೇಶಗಳಿಂದಲೂ ವರದಿಗಾರಿಕೆ ಮಾಡಿದ ಹಿರಿಯ ಪತ್ರಕರ್ತರ ಬದುಕು ವರ್ಣರಂಜಿತವಾಗಿರುತ್ತದೆ. ಅವರಲ್ಲಿ ಹೇಳಲು ಅನೇಕ ಪ್ರಸಂಗಗಳು, ದೃಷ್ಟಾಂತಗಳು, ರೋಚಕ ಕಥೆಗಳಿರುತ್ತವೆ. ಈ ಕುತೂಹಲದಿಂದಲೇ ಮಲ್ಲಿಕ್ ಅವರ ಆತ್ಮಕಥೆಯನ್ನು ಓದಿದರೆ, ನನಗೆ ಖಂಡಿತ ನಿರಾಸೆಯಾಗಲಿಲ್ಲ. ಮಲ್ಲಿಕ್ ಪ್ರಸ್ತಾಪಿಸಿದ ಒಂದು ಘಟನೆ ಯನ್ನು ನಿಮಗೆ ಹೇಳಬೇಕು.

ಸಾಮಾನ್ಯವಾಗಿ ಎಲ್ಲಾ ಪತ್ರಕರ್ತರೂ ತಮ್ಮ ವೃತ್ತಿ ಜೀವನದಲ್ಲಿ ಎದುರಿಸುವ ದ್ವಂದ್ವವಿದು. ಇಂಥ ಸಂದರ್ಭದಲ್ಲಿ ಹೇಗೆ ವರ್ತಿಸಬೇಕು ಎಂಬುದಕ್ಕೆ ನಿರ್ದಿಷ್ಟ ವಾದ ಉತ್ತರವಿರಲು ಸಾಧ್ಯವಿಲ್ಲ. ಮೊದಲು ಆ ಘಟನೆಯೇನು ಎಂಬುದನ್ನು ಹೇಳುತ್ತೇನೆ. ಒಂದು ದಿನ ಮಾಮೂಲು ಭೇಟಿಯಂತೆ, ಮಲ್ಲಿಕ್ ಅವರು ಪಿಐಬಿ (ಪ್ರೆಸ್ ಇನಾ ರ್ಮೇಶನ್ ಬ್ಯುರೋ) ಡೆಪ್ಯುಟಿ ಪ್ರಿನ್ಸಿಪಾಲ್ ಇನಾರ್ಮೇಶನ್ ಅಧಿಕಾರಿ ಅವರ ಕಚೇರಿಗೆ ಹೋಗಿದ್ದರು. ಅವರ ಟೇಬಲ್ ಮೇಲೆ, ಅಂದಿನ ಕೇಂದ್ರ ಗೃಹ ಸಚಿವ ಗ್ಯಾನಿ ಜೈಲ್ ಸಿಂಗ್ ಅವರ ಸಾವಿರಾರು ಫೋಟೋಗಳು ಹರಡಿಕೊಂಡಿದ್ದವು. ಅದಕ್ಕಿಂತ ಒಂದು ದಿನ ಮೊದಲು, ಅಖಿಲ ಭಾರತ ರಾಷ್ಟ್ರೀಯ ಕಾಂಗ್ರೆಸ್ಸಿನ ಕಾರ್ಯಕಾರಿ ಸಮಿತಿ ಮಹತ್ವದ ಸಭೆ ಸೇರಿತ್ತು.

ಅಷ್ಟೆಲ್ಲ ಫೋಟೋಗಳು ಒಬ್ಬ ಅಧಿಕಾರಿಯ ಟೇಬಲ್ ಮೇಲೆ ಹರಡಿಕೊಂಡಿರುವುದನ್ನು ನೋಡಿದ ತಕ್ಷಣ, ಪ್ರಾಯಶಃ ಮುಂದಿನ ರಾಷ್ಟ್ರಪತಿಯ ಹೆಸರು ಅಂತಿಮ ವಾಗಿ ನಿರ್ಧಾರವಾಗಿರಬೇಕು ಮತ್ತು ಆ ಅದೃಷಶಾಲಿ ಜೈಲ್ ಸಿಂಗ್ ಅವರೇ ಆಗಿರಬೇಕು ಎಂದು ಮಲ್ಲಿಕ್ ಗೆ ಅನಿಸಿತು. ತಕ್ಷಣ ಅವರು ಪಿಐಬಿ ಕಚೇರಿಯಿಂದ ಅವಸರವಸರದಲ್ಲಿ ನಿರ್ಗಮಿಸಿ, ನೇರವಾಗಿ ಗೃಹ ಸಚಿವರ ಕಾರ್ಯಾಲಯಕ್ಕೆ ತೆರಳಿದರು. ಆಗ ಮಧ್ಯಾಹ್ನದ ಭೋಜನದ ಸಮಯ. ಅದಕ್ಕಿಂತ ಮೂರ್ನಾಲ್ಕು ತಿಂಗಳುಗಳ ಮುನ್ನ, ಜೈಲ್ ಸಿಂಗ್ ಅವರಿಗೆ ಹೃದಯ ಚಿಕಿತ್ಸೆ ಆಗಿತ್ತು. ಸಚಿವರು ಅವರ ರೂಮಿನಲ್ಲಿದ್ದರು. ಅವರಿಗೆ ಊಟವಾದ ನಂತರ ಲಘುವಿಶ್ರಾಂತಿ ತೆಗೆದುಕೊಳ್ಳುವ ಅಭ್ಯಾಸವಿತ್ತು. ಆದರೂ ಮಲ್ಲಿಕ್ ಅವರ ಕೋಣೆಯೊಳಗೆ ಮೆಲ್ಲಗೆ ನುಸುಳಿದರು. ‘ಬನ್ನಿ, ಬನ್ನಿ, ಮಲ್ಲಿಕ್ ಜೀ..’ ಎಂದು ಜೈಲ್ ಸಿಂಗ್ ಹೇಳಿದರು.

ಮಲ್ಲಿಕ್ ಆಗಮಿಸುತ್ತಿದ್ದಂತೆ, ಅವರ ಹಿಂದೆಯೇ ಅವರ ಸಚಿವಾಲಯದ ಕೆಲವು ಹಿರಿಯ ಅಧಿಕಾರಿಗಳು ಸಹ ಅವರ ಕೋಣೆಗೆ ಆಗಮಿಸಿದರು. ಒಬ್ಬೊಬ್ಬರಾಗಿ ಜೈಲ್ ಸಿಂಗ್ ಅವರನ್ನು ಭೇಟಿಯಾಗಲು ಬರುತ್ತಿರುವುದು ಸಹಜವಾಗಿರಲಿಲ್ಲ. ಅವರೆ ತಮ್ಮ ಬಾಸ್ ಮುಂದಿನ ರಾಷ್ಟ್ರಪತಿಯಾಗಲಿದ್ದಾರೆ ಎನ್ನುವ ಸುದ್ದಿಯನ್ನು ಖಾತ್ರಿಪಡಿಸಿಕೊಳ್ಳಲು ಬಂದಂತಿತ್ತು. ಆಗ ಮಲ್ಲಿಕ್ ಅವರಿಗೆ ತಮಗೆ ಸಿಕ್ಕ ಸುದ್ದಿ ಸಣ್ಣದಲ್ಲ, ಅದು ದೊಡ್ಡ ಸ್ಕೂಪ್ ಆಗಲಿದೆ ಎಂದು ಬಲವಾಗಿ ಅನಿಸಿತು. ಅವರ
ಕೋಣೆಯಲ್ಲಿ ಸೇರಿದ್ದವರೆಲ್ಲ ಜೈಲ್ ಸಿಂಗ್ ಬಾಯಿಂದ ಏನು ಬರಲಿದೆ ಎಂದು ಕಾತರದಿಂದ ಕಾಯುತ್ತಿದ್ದರು. ‘ನೀವು ಕೇಳಿದ ಸುದ್ದಿ ನಿಜ’ ಎಂದು ಜೈಲ್ ಸಿಂಗ್ ಹೇಳಿದರು. ಆಗ ಅಲ್ಲಿದ್ದವರೆಲ್ಲ ಅವರಿಗೆ ಶುಭಾಶಯಗಳನ್ನು ಹೇಳಲು ಮುಗಿಬಿದ್ದರು.

ಅನಂತರ ಜೈಲ್ ಸಿಂಗ್ ಮಲ್ಲಿಕ್ ಅವರ ಕಡೆ ನೋಡುತ್ತಾ, ‘ಮಲ್ಲಿಕ್ ಜೀ, ನೀವು ಈ ಸುದ್ದಿಯನ್ನು ನಾಳೆಯೇ ಬರೆದರೆ, ಪ್ರಧಾನಿಯವರಿಗೆ ಅದು ಇಷ್ಟವಾಗ ಲಿಕ್ಕಿಲ್ಲ. ಅದೊಂದೇ ಕಾರಣಕ್ಕೆ ನನ್ನ ಹೆಸರನ್ನು ಕೈಬಿಡಬಹುದು. ನಿಮ್ಮ ಸ್ನೇಹಿತ ಮುಂದಿನ ರಾಷ್ಟ್ರಪತಿ ಆಗುವುದು ನಿಮಗೆ ಇಷ್ಟವಿಲ್ಲವಾ?’ ಎಂದು ಕೇಳಿದರು. ಅದು ಮಲ್ಲಿಕ್ ಗೆ ತೀರಾ ವಿಪರ್ಯಾಸವಾಗಿ ಕಾಣಿಸಿತು.

‘ನಿಮ್ಮ ಮಾತು ಕೇಳಿ ನನಗೆ ಆಶ್ಚರ್ಯವಾಗುತ್ತಿದೆ. ಕಾರಣ ಕೆಲವು ತಿಂಗಳ ಹಿಂದೆ, ನೀವು ನನ್ನನ್ನು ಕೆಲಸದಿಂದ ಕಿತ್ತು ಹಾಕಬೇಕು ಎಂದು ಟೈಮ್ಸ್ ಆಫ್  ಇಂಡಿಯಾ ಆಡಳಿತ ಮಂಡಳಿಯ ಮುಖ್ಯಸ್ಥರ ಮೇಲೆ ಪ್ರಭಾವ ಬೀರಿದ್ದಿರಿ ಎಂಬುದು ನನಗೆ ಗೊತ್ತಿಲ್ಲವಾ?’ ಎಂದು ಮಲ್ಲಿಕ್ ಕೇಳಿದರು. ತಕ್ಷಣ ಜೈಲ್ ಸಿಂಗ್ ಮುಖದ ಸ್ನಾಯುಗಳು ಹುಯ್ದಾಡಿದವು. ಆದರೆ ಅದನ್ನು ತೋರಗೊಡದಂತೆ ಸಾವರಿಸಿಕೊಂಡರು. ’ನಿಮ್ಮನ್ನು ಕೆಲಸದಿಂದ ಕಿತ್ತು ಹಾಕಿಸಲು ನಾನು ಪ್ರಯತ್ನಿ ಸಿದ್ದು ನಿಜ. ನಿಮ್ಮ ಸ್ಕೂಪ್ ವರದಿಗಾರಿಕೆಯ ಬಗ್ಗೆ ಅನೇಕ ಸಚಿವ ಸಹೋದ್ಯೋಗಿಗಳಿಗೆ ತೀವ್ರ ಮುಜುಗರವಾಗಿರುವ ಸಂಗತಿ ನಿಮಗೆ ಗೊತ್ತಾ? ನಾವೆ ನಿಮ್ಮ ವಿರುದ್ಧ ಬೇಸರಿಸಿಕೊಂಡಿದ್ದೆವು.

ನಿಮ್ಮನ್ನು ಕೆಲಸದಿಂದ ವಜಾಗೊಳಿಸುವಂತೆ ನಾವೆ ಪ್ರಯತ್ನಿಸಿದ್ದು ನಿಜ. ಆದರೆ ನಿಮ್ಮ ಸಂಪಾದಕರು ಮತ್ತು ಮಾಲೀಕರು ಯಾಕೋ ನಾವು ಎಷ್ಟೇ ಹೇಳಿದರೂ ಸೊಪ್ಪು ಹಾಕಲಿಲ್ಲ. ನಿಮ್ಮ ಜತೆ ಕಾದಾಡುವ ಬದಲು, ವೈರತ್ವ ಸಾಽಸುವ ಬದಲು, ಸ್ನೇಹದಿಂದ ಇರೋಣ ಎಂದು ನಿರ್ಧರಿಸಿದ್ದೇನೆ’ ಎಂದು ಖುಲ್ಲಂಖು ಹೇಳಿದರು. ಅಂದಿನ ಸಂಪಾದಕರಾದ ಗಿರಿಲಾಲ್ ಜೈನ್ ಅವರಿಗೆ ಮಲ್ಲಿಕ್ ವಿರುದ್ಧ ಕ್ರಮ ಕೈಗೊಳ್ಳಲು ಧೈರ್ಯವಿರಲಿಲ್ಲ ಅಂತಲ್ಲ. ಆದರೆ ಸಚಿವರು ವರದಿಗಾರರ ವಿರುದ್ಧ ಚಾಡಿ ಹೇಳಿದರೆ ಅಥವಾ ಕೆಲಸದಿಂದ ಕಿತ್ತು ಹಾಕುವಂತೆ ಒತ್ತಡ ಹೇರಿದರೆ ಅವರು ಅದನ್ನು ಸಹಿಸಿಕೊಳ್ಳುತ್ತಿರಲಿಲ್ಲ.

‘ಸರಿ, ನಾನು ಈ ಸ್ಟೋರಿಯನ್ನು ಪ್ರಕಟಿಸದೇ ತಡೆ ಹಿಡಿದರೆ, ಅದರಿಂದ ನನಗೇನು ಪ್ರಯೋಜನ?’ ಎಂದು ಮಲ್ಲಿಕ್ ಕೇಳಿದರು. ‘ಇನ್ನು ಮುಂದೆ ಪ್ರಮುಖ ಸುದ್ದಿ ನಿಮಗೇ ಮೊದಲು ಸಿಗಲಿದೆ, ಅದೂ ನೇರವಾಗಿ ರಾಷ್ಟ್ರಪತಿ ಅವರಿಂದ’ ಎಂದು ಜೈಲ್ ಸಿಂಗ್ ಆಸೆ ತೋರಿಸಿದರು. ಮಲ್ಲಿಕ್ ಅವರಿಗೆ ಏನು ಮಾಡಬೇಕು ಎಂಬ ತಾಕಲಾಟ ಶುರುವಾಯಿತು. ಕೈಗೆ ಸಿಕ್ಕಿದ ಈ ಸ್ಟೋರಿಯನ್ನು ಬಿಡುವುದಾ? ಅಥವಾ ಇದೊಂದು ಸ್ಟೋರಿಗಾಗಿ, ಇನ್ನು ಮುಂದೆ ಸಿಗಬಹುದಾದ ಸ್ಕೂಪ್ ಗಳನ್ನು ಬಿಡುವುದಾ? ಮುಂದಿನ ರಾಷ್ಟ್ರಪತಿಗಳ ಜತೆಗಿನ ಉತ್ತಮ ಸಂಬಂಧವನ್ನು ಈ ಒಂದು ಸ್ಟೋರಿಗಾಗಿ ಹಾಳು ಮಾಡಿಕೊಳ್ಳುವುದಾ? ಒಂದು ವೇಳೆ ಈ
ಸ್ಟೋರಿಯನ್ನು ಬಿಟ್ಟರೆ, ವೃತ್ತಿಯ ಸೊಬಗಿಗೆ ಧಕ್ಕೆಯುಂಟಾಗುವುದಿಲ್ಲವೇ? ಸರಿ, ಸ್ಟೋರಿಯನ್ನು ಪ್ರಕಟಿಸಿದರೆ, ಭಾವಿ ರಾಷ್ಟ್ರಪತಿಯವರ ಸ್ನೇಹವನ್ನು
ಕಳೆದುಕೊಂಡಂತಾಗುವುದಿಲ್ಲವೇ? ಅದರಿಂದ ಇನ್ನೂ ಉತ್ತಮ ಸ್ಟೋರಿಗಳನ್ನು ಕಳೆದುಕೊಂಡಂತಾಗುವುದಿಲ್ಲವೇ? ತಮ್ಮ ಜೀವನದಲ್ಲಿ ಇಂಥ ಹಲವು ಪ್ರಸಂಗಗಳನ್ನು ಎದುರಿಸಿದ್ದಾಗಿ ಮಲ್ಲಿಕ್ ತಮ್ಮ ಆತ್ಮಕಥೆಯಲ್ಲಿ ಹೇಳಿಕೊಂಡಿದ್ದಾರೆ.

‘ಜೈಲ್ ಸಿಂಗ್ ಜೀ, ಪತ್ರಕರ್ತರ ಜತೆ ಯಾವತ್ತೂ ಒಳ್ಳೆಯ ಸ್ನೇಹ ಮತ್ತು ಹಗೆತನ ಶಾಶ್ವತವಾಗಿ ಇರಲು ಸಾಧ್ಯವಿಲ್ಲ. ಇವೆರಡೂ ಕಾಲಕಾಲಕ್ಕೆ ಬದಲಾಗುತ್ತಿರುತ್ತದೆ. ನೀವು ರಾಷ್ಟ್ರಪತಿಯಾಗಲಿದ್ದೀರಿ ಎಂದು ನಾನು ನಾಳಿನ ಪತ್ರಿಕೆಯಲ್ಲಿ ಬರೆದರೆ ನಿಜಕ್ಕೂ ಅದೊಂದು ದೊಡ್ಡ ಸ್ಕೂಪ್. ನಿಮ್ಮ ಮಾತನ್ನು
ಕೇಳಿ ಈ ಸ್ಟೋರಿಯನ್ನು ಕೈಬಿಟ್ಟರೆ, ನೀವು ಹೇಳಿದಂತೆ, ನನಗೆ ನಿಮ್ಮಿಂದ ಮುಂದೆ ಉತ್ತಮ ಸುದ್ದಿ ಸಿಗಬಹುದು. ಆದರೆ ನಿಮಗೆ ಗೊತ್ತಿರಲಿ, ನಾನು ಸದ್ಯದಲ್ಲಿಯೇ ಯಾವುದೋ ಊರಿಗೆ ವರ್ಗವಾಗಬಹುದು’ ಎಂದು ಮಲ್ಲಿಕ್ ಹೇಳಿದರು.

‘ನೀವು ದಿಲ್ಲಿಗೆ ಬಂದಾಗಲೆಲ್ಲ ನನ್ನನ್ನು ಭೇಟಿ ಮಾಡಿ. ನೀವು ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿಗಳ ವಿಶೇಷ ಅತಿಥಿಯಾಗಲಿದ್ದೀರಿ’ ಎಂದು ಜೈಲ್ ಸಿಂಗ್ ಹೇಳಿದರು. ಒಂದು ರೀತಿಯ ಜೈಲ್ ಸಿಂಗ್ ಮಲ್ಲಿಕ್ ಗೆ ಆಮಿಷವೊಡ್ಡಿದ್ದರು. ಹೇಗಾದರೂ ಮಾಡಿ ಆ ಸುದ್ದಿ ಪತ್ರಿಕೆಯಲ್ಲಿ ಪ್ರಕಟ ಮಾಡಕೂಡದು ಎಂಬುದು ಅವರ ಇಂಗಿತವಾಗಿತ್ತು. ಇಂಥ ಸನ್ನಿವೇಶದಲ್ಲಿ ಯಾವ ನಿರ್ಧಾರ ತೆಗೆದುಕೊಳ್ಳಬೇಕು ಎಂದು ತೀರ್ಮಾನಿಸುವುದು ತುಸು ಕಷ್ಟವೇ. ಒಂದು ಸುದ್ದಿಗಾಗಿ, ಮುಂದಿನ ಹಲವು ಸ್ಟೋರಿಗಳನ್ನು ಕಳೆದುಕೊಳ್ಳುವುದು ಖಂಡಿತವಾಗಿ ಬುದ್ಧಿವಂತ ನಡೆಯಲ್ಲ.

ಹಾಗೆಂದು ಕೈಯಲ್ಲಿರುವ ಸ್ಟೋರಿಯನ್ನು ಕಳೆದುಕೊಳ್ಳುವುದೂ. ಅದಕ್ಕಿಂತ ಹೆಚ್ಚಾಗಿ, ಒಂದು ವೇಳೆ ಸದರಿ ಸ್ಟೋರಿಯನ್ನು ಪ್ರಕಟಿಸಿದರೆ, ಇಂದಿರಾ ಗಾಂಧಿ ಯವರು ಜೈಲ್ ಸಿಂಗ್ ಮೇಲೆ ಸಿಟ್ಟು ಮಾಡಿಕೊಂಡು, ಅವರನ್ನು ಕೈಬಿಡಬಹುದು. ಹಾಗೇನಾದರೂ ಆದರೆ, ಜೈಲ್ ಸಿಂಗ್ ಅವರಿಗೆ ಅನ್ಯಾಯ ಮಾಡಿದಂತೆ.
ಇಂಥ ಸಂದರ್ಭದಲ್ಲಿ, ಸಂಪಾದಕರ ಜತೆ ಚರ್ಚಿಸುವುದು ಒಳಿತು, ಅವರ ವಿವೇಚನೆಗೆ ಬಿಡೋಣ, ಅವರು ಏನು ಹೇಳುತ್ತಾರೋ ಹಾಗೆ ಮಾಡೋಣ ಎಂದು ಮಲ್ಲಿಕ್ ತೀರ್ಮಾನಿಸಿದರು. ಅಂದು ಅಲ್ಲಿಂದ ನೇರವಾಗಿ ಸಂಪಾದಕ ಗಿರಿಲಾಲ್ ಜೈನ್ ಅವರ ಕೋಣೆಗೆ ಹೋಗಿ ಎಲ್ಲವನ್ನೂ ವಿವರಿಸಿದರು.

ಮಲ್ಲಿಕ್ ಹೇಳಿದ್ದೆಲ್ಲವನ್ನೂ ಕೇಳಿದ ಜೈನ್, ಕೆಲವು ಕ್ಷಣ ಸುಮ್ಮನಾದರು. ಒಂದು ಸಲ ತಮ್ಮ ಆಸನದಿಂದ ಎದ್ದು, ಕಿಟಕಿಯತ್ತ ಹೋಗಿ, ಏನೋ ಯೋಚಿಸಿದರು. ನಂತರ ಸಮಾಧಾನದಿಂದ ’ಬೇಡ, ಈ ಸುದ್ದಿಯನ್ನು ಪ್ರಕಟಿಸುವುದು ಬೇಡ’ ಎಂದುಬಿಟ್ಟರು. ಮಲ್ಲಿಕ್ ಏನೂ ಹೇಳಲಿಲ್ಲ. ಎಷ್ಟೆಂದರೂ ಸಂಪಾದಕರ ವಿವೇಚನೆ. ಅದನ್ನು ಪ್ರಶ್ನಿಸುವುದುಂಟಾ? ಮರುದಿನ ಬೆಳಗ್ಗೆ ಜೈಲ್ ಸಿಂಗ್ ಪತ್ರಿಕೆಗಳನ್ನೆ ತಿರುವಿ ಹಾಕಿರಬೇಕು. ತಾವು ರಾಷ್ಟ್ರಪತಿ ಆಗಲಿರುವ ಸುದ್ದಿ ‘ಟೈಮ್ಸ್ ಆಫ್ ಇಂಡಿಯಾ’ ಸೇರಿದಂತೆ ಬೇರೆ ಯಾವ ಪತ್ರಿಕೆಗಳಲ್ಲೂ ವರದಿಯಾಗದಿರುವುದನ್ನು ಗಮನಿಸಿ, ನಿಟ್ಟುಸಿರು ಬಿಟ್ಟಿರಬೇಕು.

ಮಲ್ಲಿಕ್ ಅವರಿಗೆ ಫೋನ್ ಮಾಡಿ, ಮರುದಿನ ಉಪಾಹಾರಕ್ಕೆ ಬರುವಂತೆ ಆಹ್ವಾನಿಸಿದರು. ಮಲ್ಲಿಕ್ ಅವರು ಜೈಲ್ ಸಿಂಗ್ ನಿವಾಸಕ್ಕೆ ಹೋದಾಗ, ಅವರು ಕಾಯುತ್ತಿದ್ದರು. ಇಬ್ಬರು ಹುಲ್ಲು ಹಾಸಿನ ಮೇಲೆ ಕೆಲ ಹೊತ್ತು ನಡೆದಾಡಿದರು. ಉಪಾಹಾರ ಸೇವಿಸಿದ ಬಳಿಕ, ಜೈಲ್ ಸಿಂಗ್ ಅರ್ಧ ದಿನ ಎರಡು-ಮೂರು
ಕಾರ್ಯಕ್ರಮಗಳಿಗೆ ತಮ್ಮ ವಾಹನದಲ್ಲಿ ಮಲ್ಲಿಕ್ ಅವರನ್ನು ಕುಳ್ಳಿರಿಸಿಕೊಂಡು ಕರೆದುಕೊಂಡು ಹೋದರು. ತಮ್ಮಿಬ್ಬರ ಮಧ್ಯೆ ಹೊಸ ಸ್ನೇಹ ಚಿಗುರೊಡೆಯುತ್ತಿದೆ ಎಂದು ಮಲ್ಲಿಕ್ ಅವರಿಗೆ ಅನಿಸಿತು. ಅದಾಗಿ ಕೆಲವು ದಿನಗಳಲ್ಲಿ ಮಲ್ಲಿಕ್ ಗೆ ಒಂದು ಆಶ್ಚರ್ಯ ಕಾದಿತ್ತು.

ಪತ್ರಿಕೆಯ ಅಧ್ಯಕ್ಷರಾದ ಅಶೋಕ್ ಜೈನ್ ಕರೆದು, ಮಲ್ಲಿಕ್ ಅವರನ್ನು ಲಂಡನ್ ಗೆ ವರ್ಗ ಮಾಡಿzಗಿ ತಿಳಿಸಿದರು. ಇದು ಮಲ್ಲಿಕ್ ಅವರ ಅತ್ಯುತ್ತಮ ವರದಿಗಾರಿಕೆಗೆ ನೀಡಿದ ಬಡ್ತಿ ಎಂದು ಅಶೋಕ್ ಜೈನ್ ಎಲ್ಲರೆದುರು ಬಣ್ಣಿಸಿ, ಅವರಿಗಾಗಿ ಒಂದು ಬೀಳ್ಕೊಡುಗೆ ಪಾರ್ಟಿಯನ್ನು ಏರ್ಪಡಿಸಿದರು. ಆದರೆ ಎಂಥವರಿಗಾದರೂ ಅದು ಅರ್ಥವಾಗುವಂಥದ್ದು, ಅದು ಶಿಕ್ಷೆಯೋ, ಬಡ್ತಿಯೋ ಎಂದು.

ಅಮ್ಮನ ಸೆರಗು

ಮೊನ್ನೆ ಹೈಕೋರ್ಟಿನ ನ್ಯಾಯಮೂರ್ತಿಯೊಬ್ಬರು ವಾಟ್ಸಾಪ್ ನಲ್ಲಿ ಒಂದು ಸಂದೇಶ ಕಳಿಸಿದ್ದರು. ಅದು ನಿಮಗೂ ಗೊತ್ತಿರಲೆಂದು ಈ ಮೂಲಕ ಫಾರ್ವರ್ಡ್ ಮಾಡುತ್ತಿದ್ದೇನೆ. ಅಮ್ಮನ ಸೆರಗಿನ ಬಗ್ಗೆ ಅತ್ಯಂತ ಮಾರ್ಮಿಕವಾದ ಬರಹವಿದು. ಇಂದಿನ ಮಕ್ಕಳಿಗೆ ಸೆರಗು ಎಂದರೇನು ಅಂತಲೇ ಗೊತ್ತಿಲ್ಲ. ಏಕೆಂದರೆ ಅಮ್ಮ ಸೀರೆ ಉಡುವುದೇ ಅಪರೂಪ. ಅಂದು ಮಗು ಅತ್ತರೆ ಕಂಬನಿ ಒರೆಸಲು ಅಮ್ಮನ ಸೆರಗೇ ಟವೆಲ್.

ಅಂದು ಆಟವಾಡಿ ಬಂದಾಗ ಬೆವೆತ ಮುಖ ಒರೆಸಲು ಅಮ್ಮನ ಸೆರಗೇ ಕರವಸ್ತ್ರ. ಅಂದು ಮಗು ಅಮ್ಮನ ತೊಡೆಯ ಮೇಲೆ ಮಲಗಿ ನಿದ್ದೆ ಮಾಡಿದರೆ ಆ ಸೆರಗೇ ಬೀಸಣಿಗೆ,ಚಳಿಯಾದರೆ ಹೊದಿಕೆ. ಅಂದು ಯಾರಾದರೂ ಹೊಸಬರು ಮನೆಗೆ ಬಂದರೆ ನಾಚುವ ಮಗುವಿಗೆ ಅಮ್ಮನ ಸೆರಗೇ ಬಚ್ಚಿಟ್ಟುಕೊಳ್ಳಲು ಆಸರೆ.
ಸೆರಗು ಮರೆಯಿಂದಲೇ ಕದ್ದು ನೋಡಬಹುದಾಗಿತ್ತು. ಅಮ್ಮನ ಸೆರಗು ಹಿಡಿದುಬಿಟ್ಟರೆ ಅಮ್ಮನ ಹಿಂದೆ ನಡೆದುಕೊಂಡು ಜಗವನ್ನೇ ಸುತ್ತಿದ ಅನುಭವವಾಗುತ್ತಿತ್ತು.
ಮಳೆ ಬಂದರೆ ನೆನೆಯುವ ಸ್ಥಿತಿ ಬಂದು ತಾನು ನೆಂದರೂ ಪರವಾಗಿಲ್ಲ, ಮಗುವಿಗೆ ಸೆರಗಿನ ಆಸರೆ ಅಂತೂ ಖಂಡಿತ.

ಹಣೆಯ ಬೆವರು, ನೆಂದ ಒದ್ದೆ ತಲೆ ಒರೆಸಲು ಅಮ್ಮನ ಸೆರಗು ಸದಾ ಸಿದ್ದ.
ಬಚ್ಚಿಟ್ಟ ತಿಂಡಿಗಳನ್ನು ಮುಚ್ಚಿಟ್ಟು ಕೊಡಲು ಅಮ್ಮನ ಸೆರಗು ಯೋಗ್ಯ ಜಾಗ.
ತರಕಾರಿ ತರಲು ಚೀಲ ಮರೆತಾಗ ಸೆರಗೇ ಚೀಲ.
ಗಿಡದಿಂದ ಬಿಡಿಸುವ ಹೂವುಗಳಿಗೆ ಒಮ್ಮೊಮ್ಮೆ ಸೆರಗೇ ಹೂ ಬುಟ್ಟಿ.
ಮನೆಗೆ ಯಾರಾದರೂ ಒಮ್ಮೆಲೇ ಬಂದಾಗ ಕುಳಿತು ಕೊಳ್ಳುವ ಆಸನ ಒರೆಸಲು ಸೆರಗೇ ಸಾಧನ.
ಅಡುಗೆ ಮನೆಯಲ್ಲಿ ತಕ್ಷಣ ಮಸಿ ಅರಿವೆ ಸಿಗದಿದ್ದರೆ ಒಲೆ ಮೇಲೆ ಉಕ್ಕುವ ಹಾಲಿನ ಬಿಸಿ ಪಾತ್ರೆ ಇಳಿಸಲಿಕ್ಕೂಅಮ್ಮನ ಸೆರಗೇ ಬೇಕು.
ಅಂದು ಅಮ್ಮ ತಲೆಯ ಮೇಲೆ ಕಟ್ಟಿಗೆಯ , ಹುಲ್ಲಿನ ಹೊರೆ ಹೊರಲು ಅಮ್ಮನ ಸೆರಗೇ ಬಳಸುತ್ತಿದ್ದಳು.
ಅಮ್ಮ ಮಂಗಳ ಕಾರ್ಯಗಳಲ್ಲಿ ಕೊಡುವ ಉಡಿಯಕ್ಕಿ, ಬಾಗಿಣ ಇತ್ಯಾದಿ ಸ್ವೀಕರಿಸಲು, ದೇವಸ್ಥಾನದಲ್ಲಿ ಕೊಡುವ ಪ್ರಸಾದ ಸ್ವೀಕರಿಸಲು ಅಮ್ಮ ಸೆರಗು ಬಳಸುತ್ತಿದ್ದಳು. ಸಿಟ್ಟು ಬಂದರೆ ಏನಾದರೂ ಮಾಡಲೇ ಬೇಕೆನ್ನುವ ಛಲ ಬಂತೋ ಅಮ್ಮ ಸೆರಗು ಎಳೆದು ಸೊಂಟಕ್ಕೆ ಎಳೆದು ಕಟ್ಟಿದಳೆಂದರೆ ಕೆಲಸ ಆದಂತೆಯೇ.

ಕಣ್ಣು ಬಿಟ್ಟು ಸೆರಗು ಸೊಂಟಕ್ಕೆ ಕಟ್ಟಿದಳೆಂದರೆ ಅಪ್ಪನೇ ಒಮ್ಮೊಮ್ಮೆ ಹೆದರುತ್ತಿದ್ದ.

ಹಬ್ಬ-ಹರಿದಿನಗಳಲ್ಲಿ ಅಮ್ಮ ಸೊಂಟಕ್ಕೆ ಸೆರಗು ಕಟ್ಟಿದಳೆಂದರೆ ಮನೆ ಸ್ವಚ್ಛಗೊಳಿಸಲು ಮುಗಿಸಿದಾಗಲೇ ಸೊಂಟದಿಂದ ಸೆರಗಿಗೆ ಮುಕ್ತಿ.
ಅಂದು ಮಗುವಿಗೆ ಏನಾದರೂ ನೆಗಡಿಯಾಗಿ ಮೂಗಿನಲ್ಲಿ ಸಿಂಬಳ ಸೋರಲು ಸುರುವಾಯಿತೋ ಅಮ್ಮನ ಸೆರಗೇ ಕರವಸ್ತ್ರ.
ಅಮ್ಮನೇನಾದರೂ ಸೆರಗೊಡ್ಡಿ ಬೇಡಿದಳೆಂದರೆ ಎಂತಹ ಕಲ್ಲು ಮನಸ್ಸು ಸಹ ಕರಗುತ್ತದೆ.

ಸದಾ ಹೆಂಡತಿಯ ಸೆರಗನ್ನು ಹಿಡಿದು ಹಿಂದೆ ಓಡಾಡುತ್ತಿದ್ದ ಅಂದಿನ ಅಮ್ಮಾವ್ರ ಗಂಡಂದಿರೂ ಈಗೀಗ ಕಾಣುತ್ತಲೇ ಇಲ್ಲ.
ಅಮ್ಮ ಮತ್ತು ಅವಳ ಸೀರೆಯ ಸೆರಗಿನ ಸೊಬಗನ್ನು ಎಷ್ಟು ವರ್ಣಿಸಿದರೂ ಸಾಲದು. ಇಂತಹ ಮಹಿಮೆ ಉಳ್ಳ ಸೆರಗು ಈಗ ಎಲ್ಲಿ ಮಾಯವಾಯಿತೋ ?
ಈಗೀಗ ಸೀರೆ ಉಡುವವರು ಕಡಿಮೆಯಾಗಿ ಸೆರಗೇ ಇಲ್ಲದಿದ್ದ ಮೇಲೆ ಇನ್ನು ಅದನ್ನು ಹಿಡಿದು ಸಂಭ್ರಮಿಸುವ ಮಗುವೆಲ್ಲಿ.? ಗಂಡನೆಲ್ಲಿ?