Tuesday, 15th October 2024

ಟಿಪ್ಸ್’ಗೆ ಕೈಯೊಡ್ಡಿ ಬದುಕಿನ ಟಿಪ್ಸ್ ಹೇಳಿ ಕೊಡುವ ಕೈರೋ

ನೂರೆಂಟು ವಿಶ್ವ

ವಿಶ್ವೇಶ್ವರ ಭಟ್

vbhat@me.com

ಇಷ್ಟಾಗಿಯೂ ನಾನು ಕೈರೋವನ್ನು ಬಹಳ ಇಷ್ಟಪಟ್ಟೆ. ಒಂದು ನಗರ ಎರಡು ಕೋಟಿ ಜನರಿಗೆ ಆಶ್ರಯ ನೀಡಿದೆ, ಅಲ್ಲಿರುವರು ತಮ್ಮದೇ ಆದ ಬದುಕನ್ನು ಕಟ್ಟಿಕೊಂಡಿದ್ದಾರೆ, ಅಲ್ಲಿ ನೆಮ್ಮದಿ ಕಾಣಲು ಪ್ರಯತ್ನಿಸುತ್ತಿದ್ದಾರೆ, ಅಷ್ಟೊಂದು ಜೀವಗಳಿಗೆ ಆ ನಗರ ನಿತ್ಯವೂ ಭರವಸೆಯ ಬೆಳಕನ್ನು ತೋರಿಸುತ್ತಿದೆ. ಅಂಥ ನಗರದ ಅಂತಃಶಕ್ತಿ ಸಾಮಾನ್ಯವಾದುದಲ್ಲ.

ಸಾಮಾನ್ಯವಾಗಿ ವಿದೇಶಗಳಿಂದ ವಾಪಸ್ ಬರುತ್ತಿದ್ದಂತೆ ಕೇಳುವ ಪ್ರಶ್ನೆಯೆಂದರೆ, ‘ಹೇಗಿತ್ತು ವಿದೇಶ ಪ್ರಯಾಣ?’ ಈ ಪ್ರಶ್ನೆಗೆ ಒಂದು ಸಾಲಿನ ಉತ್ತರ ಕೊಡುವುದು ಕಷ್ಟ. ಯಾಕೆಂದರೆ ವಿದೇಶ ಪ್ರಯಾಣದಲ್ಲಿ ನೋಡಿದ್ದೆ ಲ್ಲವೂ ಹೊಸತು. ಹೀಗಿರುವಾಗ ಒಂದು ವಾರ – ಹತ್ತು ದಿನ ನೋಡಿದ ದೃಶ್ಯ, ಆದ ಅನುಭವಗಳನ್ನು ಚುಟುಕಾಗಿ ಹೇಳುವುದು ಸಾಧ್ಯವೇ ಇಲ್ಲ. ಆದರೂ ಒಂದೇ ಮಾತಿನಲ್ಲಿ ಆ ಪ್ರಶ್ನೆಗೆ ಉತ್ತರಿ ಸುವ ಪ್ರಯತ್ನ ಮಾಡುತ್ತೇವೆ – ‘ಬಹಳ ಚೆನ್ನಾಗಿತ್ತು’ ಅಂತ ಹೇಳುತ್ತೇವೆ.

ಮೊದಲ ಸಲ ಈಜಿಪ್ಟ್‌ಗೆ ಹೋದ ಬಹಳ ಪ್ರವಾಸಿಗರಿಗೆ ಕಲ್ಚರ್ ಶಾಕ್ (culture shock) ಆಗುತ್ತದೆ. ನಾನೇಕೆ ಇಲ್ಲಿಗೆ ಬಂದೆ, ನಾನು ಅಂದುಕೊಂಡಿದ್ದಕ್ಕಿಂತ ಈ ದೇಶ ಭಿನ್ನವಾಗಿದೆಯಲ್ಲ, ಈ ದೇಶದಲ್ಲಿ (ಒಂದು ವಾರವಾದರೂ) ಹೇಗೆ ಬದುಕುವುದು ಎಂಬ ಪ್ರಶ್ನೆ ಸಹಜ ವಾಗಿ ಅನೇಕರನ್ನು ಕಾಡುವುದುಂಟು. ಕೈರೋಕ್ಕೆ ಬಂದ ಕೆಲವರು ಈ ಆಘಾತ ದಿಂದ ನಿಗದಿತ ಅವಧಿಗಿಂತ ಮುನ್ನ ವಾಪಸ್ ಹೋಗುವು ದುಂಟು. ದೇಶ, ಭಾಷೆ ಗೊತ್ತಿಲ್ಲದ ನಗರದಲ್ಲಿ ದಿನ ದೂಡು ವುದ ಕಷ್ಟ. ಈಜಿಪ್ಟ್‌ನ ರಾಜಧಾನಿ ಕೈರೋದಲ್ಲಿ ಇಳಿದ ಕೆಲವರಿಗೆ ಈ ಅನುಭವವಾಗುತ್ತದೆಯೆಂದು ನಾನು ಕೇಳಿದ್ದೇನೆ.

ಈ ಕಲ್ಚರ್ ಶಾಕ್ ಎಂಬುದು ಬಹಳ ವಿಚಿತ್ರ ಮನಃಸ್ಥಿತಿ. ಕೆಲವು ವರ್ಷಗಳ ಹಿಂದೆ ಕೀನ್ಯಾ ರಾಜಧಾನಿ ನೈರೋಬಿ ಮಾರ್ಗವಾಗಿ ರವಾಂಡಕ್ಕೆ ಹೋದಾಗ, ನನ್ನ ಜತೆಯಿದ್ದ ಸ್ನೇಹಿತರೊಬ್ಬರು ಈ ಕಲ್ಚರ್ ಶಾಕ್‌ನಿಂದ ಚಡಪಡಿಸಿದ್ದನ್ನು ನಾನು ಕಣ್ಣಾರೆ ನೋಡಿದ್ದೇನೆ. ನೈರೋಬಿ ವಿಮಾನ ನಿಲ್ದಾಣದಲ್ಲಿ ಕಾಲಿಡುತ್ತಿದ್ದಂತೆ, ಅಲ್ಲಿನ ವ್ಯವಸ್ಥೆ ಮತ್ತು ಜನರನ್ನು ನೋಡಿ ಅವರು ಆಘಾತಕ್ಕೊಳಗಾಗಿದ್ದರು. ಅದಾಗಿ ಕೆಲವು ಗಂಟೆಗಳ ನಂತರ, ರವಾಂಡದ ರಾಜಧಾನಿ ಕಿಗಾಲಿಯಲ್ಲಿ ಇಳಿದಾಗ, ಅವರು ಮತ್ತಷ್ಟು ಆಘಾತಕ್ಕೊಳಗಾದರು.

ವಿಮಾನ ನಿಲ್ದಾಣದಿಂದ ಹೋಟೆಲ್ ರೂಮಿಗೆ ಹೋಗುತ್ತಿದ್ದಂತೆ, ಅವರು ಬೆಂಗಳೂರಿನಲ್ಲಿರುವ ಟೂರ್ ಆಪರೇಟರನ್ನು ಸಂಪರ್ಕಿಸಿ, ತಕ್ಷಣವೇ ವಾಪಸ್ ಹೋಗಲು ಟಿಕೆಟ್ ಬುಕ್ ಮಾಡಿದ್ದರು. ಅವರ ಮನಃಪರಿವರ್ತನೆಗೆ ನಾನು ಬಹಳ ಪ್ರಯತ್ನಿಸಿದೆ. ನಾವಿಬ್ಬರೂ ಆ ದೇಶದಲ್ಲಿ ಹದಿನಾಲ್ಕು ದಿನಗಳ ಕಾಲ ಇರಬೇಕಿತ್ತು. ಆದರೆ ಅವರಿಗೆ ಒಂದು ದಿನವೂ ರವಾಂಡದಲ್ಲಿ ಇರಲು ಸಾಧ್ಯವಾಗಲಿಲ್ಲ. ಕ್ಷಣ ಕ್ಷಣಕ್ಕೂ ತಮ್ಮ ಬದುಕು ಅಸಹನೀಯವಾಗುತ್ತಿದೆ ಎಂದು ಅವರಿಗೆ ಬಲವಾಗಿ ಅನಿಸಲಾರಂಭಿಸಿತ್ತು. ಇಪ್ಪತ್ತು ಗಂಟೆಗಿಂತ ಮುನ್ನವೇ ಅವರು ವಾಪಸ್ ಬೆಂಗಳೂರಿಗೆ ಹೊರಟಿದ್ದರು.

ಕೊನೆ ಕ್ಷಣದವರೆಗೂ ನಾನು ಅವರನ್ನು ಅಲ್ಲಿಯೇ ಹಿಡಿದಿಟ್ಟುಕೊಳ್ಳಲು ನಡೆಸಿದ ಪ್ರಯತ್ನಗಳೆಲ್ಲ ವಿಫಲವಾದವು. ಕೊನೆಗೂ ನಾನೇ ಕೈಚೆಲ್ಲಿದೆ. ಹೋಟೆಲ್ ಬುಕಿಂಗ್, ಓಡಾಟ, ಪ್ರೇಕ್ಷಣೀಯ ತಾಣಗಳಿಗೆ ಭೇಟಿ, ಗೊರಿ ಟ್ರೆಕಿಂಗ್ .. ಹೀಗೆ ಅಲ್ಲಿನ ಪ್ರವಾಸಕ್ಕಾಗಿ ಲಕ್ಷಾಂತರ ರುಪಾಯಿ ಕೊಟ್ಟು ಪ್ರವಾಸ ನಿಗದಿಪಡಿಸಿದ್ದರೂ, ಅವೆಲ್ಲವನ್ನೂ ನಿರ್ಲಕ್ಷಿಸಿ, ತಮ್ಮ ಪ್ರವಾಸವನ್ನು ಮೊಟಕುಗೊಳಿಸಿ ಅವರು ಹೊರಟು ನಿಂತಿದ್ದರು. ಇದು ಕಲ್ಚರ್ ಶಾಕ್ ನೀಡುವ ಆವಾಂತರ.

ಈಜಿಪ್ಟ್‌ಗೆ ಹೋಗುವವರಿಗೂ ಹೀಗೆ ಆಗುತ್ತದೆ ಎಂದು ಕೇಳಿದ್ದೇನೆ. ಆಫ್ರಿಕಾ ಖಂಡದಲ್ಲಿರುವ, ಶೇ. ತೊಂಬತ್ತರಷ್ಟು ಸುನ್ನಿ ಮುಸ್ಲಿಮರೇ ಆವರಿಸಿರುವ, ಶೇ.ಎಂಟರಷ್ಟು ಕ್ರಿಶ್ಚಿಯನ್ನರು ಮತ್ತು ಉಳಿದಂತೆ ವಲಸಿಗರು ತುಂಬಿರುವ ಈ ದೇಶದಲ್ಲಿ ಕಲ್ಚರ್ ಶಾಕ್ ಆಗುವುದು ಸಹಜವೇ. ಏಕಸಂಸ್ಕೃತಿ ಯಿದ್ದರೂ ಈಜಿಪ್ಟ್‌ನಲ್ಲಿ ಈ ಆಘಾತವನ್ನು ಹೆಚ್ಚು ಅನುಭವಿಸುವವರೆಂದರೇ ಯುರೋಪಿಯನ್ನರು ಮತ್ತು
ಅಮೆರಿಕನ್ನರು. ವಿಮಾನ ಕೈರೋ ನಗರಕ್ಕೆ ಇಳಿಯುವಾಗಲೇ, ಸಹಸ್ರ ಸಹಸ್ರ ಬೆಂಕಿ ಪೊಟ್ಟಣಗಳನ್ನು ಜೋಡಿಸಿಟ್ಟಂತೆ ಕಾಣುವ ಅಪಾರ್ಟ್‌ಮೆಂಟ್ ಬ್ಲಾಕ್‌ಗಳು, ಅಲ್ಲಿ ಜನ ಹೇಗೆ ವಾಸಿಸುತ್ತಾರಪ್ಪ ಎಂಬ ನೂರಾರು ಪ್ರಶ್ನೆಗಳು ಯಾರದರೂ ಪುಟ್ಟ ಆಘಾತವನ್ನು ಮೂಡಿಸದೆ ಹೋಗುವುದಿಲ್ಲ.

ಇದೇ ಕಾರಣಕ್ಕೆ ಪಾಶ್ಚಿಮಾತ್ಯರಿಗೆ ಮುಂಬಯಿ ವಿಮಾನ ನಿಲ್ದಾಣದಲ್ಲಿ ಇಳಿಯುವಾಗಲೂ ಆಗುತ್ತದೆಂಬುದನ್ನು ಕೇಳಿದ್ದೇನೆ. ಕೈರೋ ವಿಮಾನ ನಿಲ್ದಾಣದಲ್ಲಿ ಇಳಿದು, ಬ್ಯಾಗ್ ಕಲೆಕ್ಟ್ ಮಾಡಿಕೊಳ್ಳಲು ಹೋಗುವಾಗ, ಬ್ಯಾಗನ್ನು ಎತ್ತಲು ಸಹಕರಿಸುವ ಪೋರ್ಟರ್ ನಿಮ್ಮ ಕಿವಿಯೊಳಗೆ, ‘ಟಿಪ್ಸ್ ಕೊಡುವುದಿಲ್ಲವಾ?’ ಎಂದು ಕೇಳುತ್ತಾನೆ. ಇದು ಮೊದಲ ಆಘಾತ. ನಿಮ್ಮ ಹತ್ತಿರ ಚೇಂಜ್ (ಚಿಲ್ಲರೆ ಕಾಸು) ಇಲ್ಲದಿದ್ದರೆ, ನೀವು ಕೊಟ್ಟಷ್ಟೂ ಹಣವನ್ನು ಆತ ಜೇಬಿಗೆ ಇಳಿಸಿ ನಿಮ್ಮನ್ನು ನೋಡದೆಯೂ ತನ್ನ ಕೆಲಸದಲ್ಲಿ ಮಗ್ನನಾಗುತ್ತ, ಮುಂದಿನ
ಪ್ರಯಾಣಿಕನ ಮುಂದೆ ಕೈಯೊಡ್ಡಿರುತ್ತಾನೆ.

ಹೀಗೆ ಆರಂಭವಾಗುವ ಟಿಪ್ಸ್ ಸಂಸ್ಕೃತಿ ಹತ್ತಾರು ಕಡೆಗಳಲ್ಲಿ ಮುಂದುವರಿದು, ಕೊನೆಯಲ್ಲಿ ವಿಮಾನ ನಿಲ್ದಾಣದಲ್ಲಿ ಬ್ಯಾಗ್ ಎತ್ತಿಡುವವನ ಕೈಗೆ ಹಣ ಇಡುವುದರಲ್ಲಿ ಪರ್ಯವಸಾನವಾಗುತ್ತದೆ. ನಾನು ಪಿರಮಿಡ್ ಮುಂದೆ ಅದನ್ನೇ ತದೇಕಚಿತ್ತದಿಂದ ಬಹಳ ಹೊತ್ತಿನ ತನಕ ದಿಟ್ಟಿಸುತ್ತಿದ್ದೆ. ನನ್ನೊಂದಿಗಿದ್ದ ಗೈಡ್ ಫೋನ್ ಕರೆಯಲ್ಲಿ ಮಗ್ನನಾಗಿದ್ದ. ಅಲ್ಲಿಗೆ ಬಂದವನೊಬ್ಬ ತನ್ನ ಮೊಬೈಲಿನಲ್ಲಿ ನನ್ನ ಫೋಟೋ ತೆಗೆದು, ‘ಏರ್ ಡ್ರಾಪ್ ಮೂಲಕ ಎಲ್ಲ ಫೋಟೋಗಳನ್ನು ಟ್ರಾನ್ಸಫರ್ ಮಾಡುತ್ತೇನೆ, ನೂರು (ಈಜಿಪ್ಟ್) ಪೌಂಡ್ (ಸಾವಿರ ರುಪಾಯಿ) ಕೊಡಿ’ ಎಂದ.

ನಾನು ಅವನ ಹತ್ತಿರ ವಾದ ಮಾಡೋಣ ಅಂದ್ರೆ ಆತನಿಗೆ ಅರೇಬಿಕ್ ಹೊರತಾಗಿ ಬೇರೆ ಭಾಷೆಗಳು ಬರುತ್ತಿರಲಿಲ್ಲ. ನಾನು ಹೇಳಿದ್ದು ಅವನಿಗೆ ಅರ್ಥವಾಗುವುದಿಲ್ಲ. ಆದರೆ ಆತ ಹಣಕ್ಕಾಗಿ ಪೀಡಿಸುತ್ತಿದ್ದುದು ಮಾತ್ರ ನನಗೆ ಗೊತ್ತಾಗುತ್ತಿತ್ತು. ಅದಾಗಿ ಸ್ವಲ್ಪ ಹೊತ್ತಿನ ನಂತರ ಇನ್ನೂ ಮೂರ್ನಾಲ್ಕು ಜನ ನನ್ನ ಸನಿಹ ಬಂದು, ತಾವೂ ನಿಮ್ಮ ಫೋಟೋ ತೆಗೆದಿದ್ದೇವೆ, ಟ್ರಾನ್ಸಫರ್ ಮಾಡಲಾ ಎಂದು ಕೇಳಿದರು. ನೀವು ಬೇಡ ಅನ್ನುವಂತಿಲ್ಲ, ಬೇಕು ಅಂದ್ರೆ ಹಣ ಪೀಕಬೇಕು. ಆದರೂ ನನ್ನೊಂದಿಗಿದ್ದ ಗೈಡ್ ಸುಮ್ಮನಿದ್ದ.

ಪ್ರಾಯಶಃ ಆತನೂ ಬಲವಂತವಾಗಿ ಫೋಟೋ ತೆಗೆಯುವ ಈ ಕೂಟದ ಭಾಗವಾಗಿರಬೇಕು, ಇಲ್ಲವೇ ಅವರನ್ನು ವಿರೋಧಿಸುವ ದನಿ ಕಳೆದುಕೊಂಡವನಾಗಿರಬೇಕು, ಇಲ್ಲವೇ ತನ್ನ ಹಾಗೆ ಅವರೂ ನಾಲ್ಕು ಕಾಸು ಮಾಡಿಕೊಳ್ಳಲಿ ಎಂದು ಅಂದುಕೊಂಡಿರಬೇಕು. ಪಿರಮಿಡ್ಡಿನ ಮುಂದೆ ನಿಂತು ನನಗೆ ಫೋಟೋ ತೆಗೆಸಿಕೊಳ್ಳಬೇಕು ಎಂದು ಅನಿಸಿತು. ಗೈಡ್ ನನಗಿಂತ ತುಸು ದೂರದಲ್ಲಿದ್ದ. ಪಕ್ಕದಲ್ಲಿಯೇ ಇದ್ದ ನನ್ನ ಹಾಗೆ ಪ್ರವಾಸಿಗನಂತೆ ತೋರುವ ವ್ಯಕ್ತಿಗೆ ನನ್ನ ಕ್ಯಾಮೆರಾ ಕೊಟ್ಟು, ಫೋಟೋ ತೆಗೆಯುವಂತೆ ಹೇಳಿದೆ.

ಆತ ವಿನೀತನಾಗಿ ಹತ್ತಾರು ಫೋಟೋಗಳನ್ನು ಕ್ಲಿಕ್ಕಿಸಿದ. ನಾನು ಅವನಿಗೆ ‘ಥ್ಯಾಂಕ್ಸ್’ ಎಂದು ಹೇಳಿ ಮುಂದಡಿಯಿಟ್ಟರೆ, ಆತ ತಕ್ಷಣ ನನ್ನ ಮುಂದೆ ಕೈಯೊಡ್ಡಿದ. ನಾನು ಅವನಿಗೆ ಐದು ಪೌಂಡ್ (ಐವತ್ತು ರುಪಾಯಿ) ಕೊಟ್ಟೆ. ಅದಕ್ಕೆ ಆತ ಸ್ವಾಟೆ ತಿವಿದು ‘ನೂರು ಪೌಂಡ್ ಕೊಡಿ’ ಎಂದ. ನಾನು ಇಷ್ಟೆಲ್ಲ ದೇಶ ತಿರುಗಿದರೂ, ಮೊಬೈಲ್ ಅಥವಾ ಕ್ಯಾಮೆರಾ ಕೊಟ್ಟು ನಾಲ್ಕು ಫೋಟೋ ತೆಗೆಯಿರಿ ಎಂದು ಹೇಳಿದಾಗ, ಹಣವನ್ನು  ಅಪೇಕ್ಷಿಸಿದ ಒಬ್ಬೇ ಒಬ್ಬ ವ್ಯಕ್ತಿಯನ್ನೂ ನೋಡಿರಲಿಲ್ಲ. ಅಂಥ ಜಾಗದಲ್ಲಿ ಚೌಕಾಶಿ ಮಾಡುವುದಾಗಲಿ, ವಾದ ಮಾಡುವು
ದಾಗಲಿ ಒಳ್ಳೆಯ ನಡತೆ ಅಲ್ಲ. ಅದು ಅವರಿಗೂ ಗೊತ್ತಿರುತ್ತದೆ.

ಹೀಗಾಗಿ ಪ್ರವಾಸಿಗರ ಅಸಹಾಯಕತೆಯನ್ನು ಬಳಸಿಕೊಳ್ಳುತ್ತಾರೆ. ನಂತರ ಗೊತ್ತಾಗಿದ್ದೇನೆಂದರೆ, ಕೈರೋದಲ್ಲಿ ಸಣ್ಣ ಪುಟ್ಟ ಕೆಲಸಗಳಿಗೂ ಭಕ್ಷೀಸ್ ಅಥವಾ ಟಿಪ್ಸ್ ಅಪೇಕ್ಷಿಸುತ್ತಾರೆ ಎಂಬುದು. ನೈಲ್ ನದಿಗುಂಟ ಕಾಲ್ನಡಿಗೆಯಲ್ಲಿ ಪ್ರವಾಸ ಮಾಡಿ ‘Walking The Nile’ ಎಂಬ ಪುಸ್ತಕ ಬರೆದ ಲೆವಿಸನ್ ವುಡ್, ಒಮ್ಮೆ ಕೈರೋದ ಬೀದಿಯಲ್ಲಿ ನಡೆದು ಹೋಗುವಾಗ, ತಾವು ಹೋಗಲು ಬಯಸಿದ ತಾಣಕ್ಕೆ ಹೋಗು ವುದು ಹೇಗೆ ಎಂದು ದಾರಿ ಕೇಳಿದರಂತೆ. ಅದಕ್ಕೆ ಸ್ಥಳೀಯನೊಬ್ಬ ಅವರಿಗೆ ದಾರಿ ಹೇಳಿದನಂತೆ. ಅದಕ್ಕೆ ಲೆವಿಸನ್ ಅವನಿಗೆ ‘ಥ್ಯಾಂಕ್ಸ್’ ಹೇಳಿ ಮುಂದಕ್ಕೆ ಹೆಜ್ಜೆಯಿಟ್ಟರೆ, ಆತ ಅವರ ಮುಂದೆ ಕೈಯೊಡ್ಡಿದ್ದನಂತೆ.

‘ಕೈರೋದಲ್ಲಿ ದಾರಿಯಲ್ಲಿ ನಡೆದು ಹೋಗುವಾಗ, ನಿಮಗೆ ಸಮಯ ತಿಳಿದುಕೊಳ್ಳಲೇಬೇಕು ಎಂದೆನಿಸಿದರೆ ಮಾತ್ರ ದಾರಿಹೋಕರ
ಬಳಿ ಟೈಮ್ ಕೇಳಿ ಅಥವಾ ಹಣ ಕೊಡಲು ಸಿದ್ಧರಾಗಿದ್ದರೆ ಮಾತ್ರ ಟೈಮ್ ಕೇಳಿ’ ಎಂದು ಅವರು ಬರೆದಿದ್ದನ್ನು ನಾನು ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಸಾಮಾನ್ಯವಾಗಿ ಯಾವುದೇ ಧಾರ್ಮಿಕ ತಾಣಗಳಿಗೆ ಹೋದಾಗ, ಅಲ್ಲಿ ಚಪ್ಪಲಿ, ಬೂಟುಗಳನ್ನು ಕಾಯಲು
ಒಂದು ಕೌಂಟರ್ ಇರುತ್ತದೆ ಅಥವಾ ಅವುಗಳನ್ನು ನೋಡಿಕೊಳ್ಳಲು ಒಬ್ಬರಿರುತ್ತಾರೆ. ಅವರಿಗೆ ನಾವು ಬರುವಾಗ ಐದು, ಹತ್ತು ರೂಪಾಯಿ ಕೊಟ್ಟು ಬರುತ್ತೇವೆ, ಫೋನ್. ನಾನು ಕೈರೋದಲ್ಲಿ ಪುರಾತನ ಮತ್ತು ವಾಸ್ತುಶಾಸ್ತ್ರವಿಸ್ಮಯಗಳಂದಾದ ಮಹಮದ್ ಅಲಿ ಮಸೀದಿ ಯನ್ನು ನೋಡಲು ಹೋಗಿದ್ದೆ.

ಬೂಟು ಹೊರಗಿಟ್ಟು ಹೋಗುವುದು ಸಂಪ್ರದಾಯ. ನಾನು ಬಾಗಿಲ ಇದ್ದವ ಬಳಿ ಬೂಟು ಬಿಟ್ಟು ಒಳ ಹೋದೆ. ಬರುವಾಗ ಆತನಿಗೆ ಐದು ಪೌಂಡ್ ಕೊಟ್ಟರೆ ಸಮಾಧಾನವಾಗಲಿಲ್ಲ. ಆತ ಅದಕ್ಕಾಗಿ ಇಪ್ಪತ್ತು ಪೌಂಡ್ (ಇನ್ನೂರು ರುಪಾಯಿ) ಅಪೇಕ್ಷಿಸಿದ್ದ. ಚಪ್ಪಲಿ ಕಾಯುವುದು ಸಹ ಅಲ್ಲಿ well paid job ಎಂದು ಅನಿಸಿತು. ಇದು ಕೇವಲ ಪ್ರವಾಸಿಗರನ್ನು ಶೋಷಿಸುವ ವ್ಯವಸ್ಥೆ ಅಲ್ಲ. ಇದೊಂದು ಮನಃಸ್ಥಿತಿ. ಸಣ್ಣ ಪುಟ್ಟ ಕೆಲಸಗಳಿಗೂ ಟಿಪ್ಸ್ ಅಪೇಕ್ಷಿಸುವುದು ಒಂಥರದ ವ್ಯಸನ, ಚಟ. ಕೇವಲ ಕೆಳವರ್ಗ ದವರು ಅಥವಾ ಬಡವರು ಅಥವಾ ಸಣ್ಣಪುಟ್ಟ ಕೆಲಸ ಮಾಡುವವರು ಮಾತ್ರ ಹೀಗೆ ವರ್ತಿಸುತ್ತಾರೆ ಎಂದು ಭಾವಿಸಬೇಕಿಲ್ಲ.

ಅದಕ್ಕಿಂತ ದೊಡ್ಡ ಕೆಲಸ ಮಾಡುವವರೂ ಟಿಪ್ಸ್ ಬಯಸುತ್ತಾರೆ, ಆದರೆ ಅವರಿಗೆ ಇನ್ನೂ ಹೆಚ್ಚಿನ ಟಿಪ್ಸ್ ಕೊಡಬೇಕಷ್ಟೆ. ನಾನು ಕೈರೋದ ಒಂದು ವೈಭವೋಪೇತ ಪಂಚತಾರಾ ಹೊಟೇಲ್ ರೆಸ್ಟ್ ರೂಮ್‌ಗೆ ಹೋಗುತ್ತಿದ್ದಂತೆ, ನಲ್ಲಿಯನ್ನು ತಿರುಗಿಸಿ, ನೀರು ಹನಿಸಲು ಒಬ್ಬ ಮುಂದಾದ. ನಾನು ಕೈ ತೊಳೆಯುವಾಗ ಆತ ಟವೆಲ್ ಹಿಡಿದು ನಿಂತಿದ್ದ. ನನಗೆ ಅದರ ಅವಶ್ಯಕತೆ ಇರಲಿಲ್ಲ. ಅದು ಅವನ ಸೌಜನ್ಯ ಎಂದು ಭಾವಿಸಿದೆ. ಆದರೆ ನಾನು ಅಲ್ಲಿಂದ ಕದಲುವಾಗ ನಾನೇನಾದರೂ ಟಿಪ್ಸ್ ಕೊಡಲಿ ಎಂಬುದು ಮುಖಭಾವದಲ್ಲಿತ್ತು. ಈ ಸಂಸ್ಕೃತಿ ಕೇವಲ ರಸ್ತೆಯಲ್ಲಿ, ಬೀದಿಯಲ್ಲಿ ಹೋಗುವವರದ್ದೊಂದೇ ಅಲ್ಲ.

ಅದು ಸರ್ವವ್ಯಾಪಿ. ಕೆಲವು ಹೋಟೆಲುಗಳಲ್ಲಿ ಟಿಶ್ಯೂ ಪೇಪರ್ ಕೇಳಿದರೂ, ಪ್ರತ್ಯೇಕ ಹಣ ಪೀಕುತ್ತಾರೆಂದು ಟ್ರಿಪ್ ಅಡ್ವೈಸರ್‌ನಲ್ಲಿ ಪ್ರವಾಸಿಗರೊಬ್ಬರು ಬರೆದಿದ್ದರು. ಇನ್ನು ಕೈರೋದ ಟ್ರಾಫಿಕ್ ಬಗ್ಗೆ ಒಂದು ಪುಸ್ತಕವನ್ನೇ ಬರೆಯಬಹುದು. ಕೈರೋದಲ್ಲಿ ಡ್ರೈವ್ ಮಾಡಿದ ವರು ಜಗತ್ತಿನಲ್ಲಿ ಎಲ್ಲಿ ಬೇಕಾದರೂ ಡ್ರೈವ್ ಮಾಡಬಲ್ಲ. ಅಷ್ಟೇ ಅಲ್ಲ, ಕೈರೋದಲ್ಲಿ ಟ್ಯಾಕ್ಸಿಯಲ್ಲಿ ಕುಳಿತವರು ಇಂಥದೇ ದಿಗಿಲಿನ ಕ್ಷಣ ಗಳನ್ನಾದರೂ ಎದುರಿಸಬಲ್ಲರು. ಅಂಗೈಯಲ್ಲಿ ಜೇವ ಹಿಡಿದು ಪ್ರಯಾಣಿಸುವುದು ಅಂದ್ರೆ ಏನು ಅನ್ನೋದು ಕೈರೋದಲ್ಲಿ ಅನುಭವಕ್ಕೆ ಬರುತ್ತದೆ. ಹಿಂದೆ ಅಥವಾ ಮುಂದೆ, ಅಕ್ಕ ಅಥವಾ ಪಕ್ಕ ಇಲ್ಲಿ ಒಂದು ವಾಹನದಿಂದ ಮತ್ತೊಂದು ವಾಹನಕ್ಕೆ ಇರುವ ಅಂತರ ಕೆಲವೇ ಕೆಲವು ಮಿಲಿಮೀಟರುಗಳು.

ಇರುವೆಯನ್ನೂ ನಾಚಿಸುವ ರೀತಿಯಲ್ಲಿ ವಾಹನಗಳು ಒಂದಕ್ಕೊಂದು ಮೈತಾಕಿಸಿಕೊಂಡು ಚಲಿಸುತ್ತವೆ. ಗುದ್ದಿಸಿಕೊಳ್ಳದ ವಾಹನಗಳು ಈ ನಗರದಲ್ಲಿ ಹುಡುಕಿದರೂ ಸಿಗಲಿಕ್ಕಿಲ್ಲ. ಇಷ್ಟಾಗಿಯೂ ನಾನು ಕೈರೋವನ್ನು ಬಹಳ ಇಷ್ಟಪಟ್ಟೆ. ಒಂದು ನಗರ ಎರಡು ಕೋಟಿ ಜನರಿಗೆ ಆಶ್ರಯ ನೀಡಿದೆ, ಅಲ್ಲಿರುವರು ತಮ್ಮದೇ ಆದ ಬದುಕನ್ನು ಕಟ್ಟಿಕೊಂಡಿದ್ದಾರೆ, ಅಲ್ಲಿ ನೆಮ್ಮದಿ ಕಾಣಲು ಪ್ರಯತ್ನಿಸುತ್ತಿzರೆ, ಅಷ್ಟೊಂದು
ಜೀವಗಳಿಗೆ ಆ ನಗರ ನಿತ್ಯವೂ ಭರವಸೆಯ ಬೆಳಕನ್ನು ತೋರಿಸುತ್ತಿದೆ. ಅಂಥ ನಗರದ ಅಂತಃಶಕ್ತಿ ಸಾಮಾನ್ಯವಾದುದಲ್ಲ. ಬಡತನ ಮತ್ತು ಅದು ಹೊತ್ತು ತರುವ ನೂರಾರು ಅಪಸವ್ಯಗಳ ನಡುವೆಯೂ ಬದುಕಿನ ಬಗ್ಗೆ ವಿಶ್ವಾಸ ಇಟ್ಟುಕೊಂಡು, ಪುರಾತನ ನಾಗರಿಕತೆ
ಹೊಂದಿರುವ ಆ ದೇಶ ನನ್ನಂಥ ಪ್ರವಾಸಿಗರಿಗೆ ಬದುಕಿನ ಟಿಪ್ಸ್ ಅನ್ನೂ ನೀಡುತ್ತದೆ. ಮತ್ತೊಮ್ಮೆ ಕೈರೋಕ್ಕೆ ಹೋಗಬೇಕು!