Saturday, 23rd November 2024

ಕಜಖಸ್ಥಾನದಲ್ಲಿ ಇಬ್ಬರಿದ್ದರೆ ಜಗಳವಾಗಬಹುದು, ಒಬ್ಬರೇ ತಿರುಗಾಡುವುದು ಸುರಕ್ಷಿತ

ಇದೇ ಅಂತರಂಗ ಸುದ್ದಿ

vbhat@me.com

ಯಾವುದೇ ದೇಶಕ್ಕೆ ಹೋಗಿ ಬಂದವರಿಗೆ ಕೆಲವು ಪ್ರಶ್ನೆಗಳನ್ನು ಸಹಜವಾಗಿ ಕೇಳುತ್ತಾರೆ. ನಾನೂ ಅಂಥ ಪ್ರಶ್ನೆಗಳನ್ನು ಕೇಳುತ್ತೇನೆ. ಅವುಗಳಿಗೆ ಉತ್ತರಗಳನ್ನು ಹೇಳಿದರೆ, ಆ ಪ್ರಶ್ನೆಗಳೇನು ಎಂಬುದು ನಿಮಗೆ ಸಹಜವಾಗಿ ಗೊತ್ತಾಗುತ್ತವೆ. ಅಂದ ಹಾಗೆ, ಕಳೆದ ವಾರ ನಾನು ಕಜಖಸ್ತಾನ ದಲ್ಲಿದ್ದೆ. ಭೂಪ್ರದೇಶಕ್ಕೆ ಹೋಲಿಸಿದರೆ ಕಜಖಸ್ತಾನ ಜಗತ್ತಿನಲ್ಲಿಯೇ ಒಂಬತ್ತನೇ ಅತಿದೊಡ್ಡ ರಾಷ್ಟ್ರ. ಇದು ವಿಶ್ವದ ಅತಿ ದೊಡ್ಡ landlocked (ಬೇರೆ ದೇಶಗಳ ಗಡಿಗಳೊಂದಿಗೆ ಆವೃತವಾದ) ದೇಶವೂ ಹೌದು.

ಇದನ್ನು transcontinental landlocked country ಎಂದೂ ಕರೆಯುತ್ತಾರೆ. ಕಾರಣ ಇಷ್ಟೇ, ಆ ದೇಶ ಮಧ್ಯ ಏಷ್ಯಾದಲ್ಲಿದ್ದರೂ, ಅದರ ಸ್ವಲ್ಪ ಭೂಭಾಗ ಪೂರ್ವ ಯೂರೋಪಿನ ತನಕ ವಿಸ್ತರಿಸಿದೆ. ಅಂದರೆ ಏಷ್ಯಾ ಮತ್ತು ಯುರೋಪಿನಲ್ಲಿ ಹರಡಿರುವ ಆ ದೇಶ ಅದೆಷ್ಟು ದೊಡ್ಡದಿರ ಬಹುದು ಎಂದು ಊಹಿಸಬಹುದು. ೧೯೯೧ ರವರೆಗೆ ಕಜಖಸ್ತಾನ, ಸಂಯುಕ್ತ ರಷ್ಯಾದ ಭಾಗವೇ ಆಗಿತ್ತು. ಸೋವಿಯತ್ ರಷ್ಯಾದಿಂದ ವಿಭಜಿತವಾದ ಹಲವು ದೇಶಗಳ ಪೈಕಿ ಕಜಖಸ್ತಾನ ಕೊನೆಯದು.

ರಷ್ಯಾದೊಂದಿಗೆ ವಿಭಜನೆಯಾದಾಗ, ಆ ಎರಡು ದೇಶಗಳ ನಡುವಿನ ಗಡಿಯೇ, ಜಗತ್ತಿನ ಅತಿ ಉದ್ದದ ಗಡಿ ಎಂದು ಕರೆಯಿಸಿಕೊಂಡಿತು.
ರಷ್ಯಾ-ಕಜಖಸ್ತಾನ ನಡುವೆ ವಿಶ್ವದಲ್ಲಿಯೇ ಎರಡನೇ ಅತಿ ಉದ್ದದ ಅಂದರೆ, ೭,೦೦೦ ಕಿಮಿ ಉದ್ದದ ಗಡಿಯಿರುವುದು ಗಮನಾರ್ಹ. (ಕೆನಡ-ಅಮೆರಿಕ ನಡುವಿನದು ಮೊದಲ ಅತಿ ದೊಡ್ಡ ಉದ್ದದ ಗಡಿ.) ಭೂಪ್ರದೇಶದಲ್ಲಿ ಭಾರತಕ್ಕಿಂತ ಶೇ.ಹತ್ತರಷ್ಟು ಕಡಿಮೆ ದೊಡ್ಡದಿರುವ ಕಜಖಸ್ತಾನದ ಜನಸಂಖ್ಯೆ ಕೇವಲ ಎರಡು ಕೋಟಿ. ಭಾರತದ (೧೪೦.೭೬) ಜನಸಂಖ್ಯೆಗೆ ಹೋಲಿಸಿದರೆ ಎಪ್ಪತ್ತು ಪಟ್ಟು ಕಮ್ಮಿ. ಭಾರತದಲ್ಲಿ ಒಂದು ಚದರ ಕಿಮೀಗೆ ೪೩೪ ಮಂದಿ ವಾಸಿಸಿದರೆ, ಕಜಖಸ್ತಾನದಲ್ಲಿ ಕೇವಲ ಆರು ಮಂದಿ ವಾಸಿಸುತ್ತಾರೆ.

ಒಂಥರಾ ಇಡೀ ದೇಶವೇ ಭಣಭಣ. ಅತಿ ಹೆಚ್ಚು ಭೂಪ್ರದೇಶ ಮತ್ತು ಅತಿ ಕಡಿಮೆ ಜನಸಂಖ್ಯೆ ಹೊಂದಿರುವ ದೇಶಗಳ ಪೈಕಿ ಕಜಖಸ್ತಾನಕ್ಕೆ ಅಗ್ರತಾಂಬೂಲ. ಕಜಖಸ್ತಾನ ಅತ್ಯಂತ ಸುರಕ್ಷಿತ ದೇಶವೂ ಹೌದು. ಅಪರಾಧ ಇಲ್ಲವೇ ಇಲ್ಲ ಎಂದಲ್ಲ, ಇದೆ. ಆದರೆ ಇಲ್ಲವೇ ಇಲ್ಲ ಎನ್ನುವಷ್ಟು
ಇದೆ. ಅಮೆರಿಕದ ಗೃಹ ಇಲಾಖೆಯ ಪ್ರಕಾರ, ಜರ್ಮನಿ ಮತ್ತು ಫ್ರಾನ್ಸಿಗಿಂತ ಕಜಖಸ್ತಾನ ಹೆಚ್ಚು ಸುರಕ್ಷಿತ. ಮಹಿಳೆಯರು ರಾತ್ರಿ ಹನ್ನೆರಡರ ನಂತರವೂ ನಿರ್ಭೀತರಾಗಿ ಸಂಚರಿಸಬಹುದು.

ಅಂದು ಆ ದೇಶಕ್ಕೆ ಬಂದಿಳಿದ ಮೊದಲ ದಿನ, ನಾವು ಮಾಲ್ ಒಂದರಲ್ಲಿ ಊಟ ಮುಗಿಸಿ, ಹೋಟೆಲ್ ರೂಮಿಗೆ ನಡೆದು ಹೊರಡಬೇಕು ಎಂದು ನಿರ್ಧರಿಸಿದಾಗ, ‘ಅಪರಿಚಿತ ದೇಶ, ಈ ಮಧ್ಯರಾತ್ರಿ ನಡೆದು ಹೋಗುವುದು ಎಷ್ಟು ಸುರಕ್ಷಿತ?’ ಎಂದು ಯೋಚಿಸುತ್ತಿರುವಾಗ, ನಮ್ಮ ಮುಂದೆಯೇ ಯುವತಿಯೊಬ್ಬಳು ಏಕಾಂಗಿಯಾಗಿ ನಡೆದುಹೋದಳು. ನಾವು ಧೈರ್ಯವಾಗಿ ಹೆಜ್ಜೆ ಹಾಕಿದೆವು.

ಅದಾಗಿ ಮಧ್ಯರಾತ್ರಿ ಸರಿದು ಎಷ್ಟೋ ಹೊತ್ತಿನವರೆಗೂ ಯುವತಿಯರು ಒಬ್ಬೊಬ್ಬರೇ ನಡೆದು ಹೋಗುತ್ತಿರುವುದು ಕಾಣಿಸುತ್ತಿತ್ತು. ಅಮೆರಿಕದ ಜನಪ್ರಿಯ ಪ್ರವಾಸಿ ಬರಹಗಾರ ಜಾನ್ ಮೋರಿಸ್ ತನ್ನ ಲೇಖನವೊಂದರಲ್ಲಿ, ‘ಕಜಖಸ್ತಾನದಲ್ಲಿ ಇಬ್ಬರು ಸ್ನೇಹಿತರಿದ್ದರೆ ಅವರ ನಡುವೆ ಜಗಳ ವಾಗಬಹುದು. ಹೀಗಾಗಿ ಒಬ್ಬರೇ ತಿರುಗಾಡುವುದೇ ಸುರಕ್ಷಿತ’ ಎಂದು ತಮಾಷೆಯಾಗಿ ಬರೆದಿzನೆ. ಯಾವ ದೇಶದಲ್ಲಿ ಜನಸಂಖ್ಯೆ ಕಮ್ಮಿ ಇರುವುದೋ, ಆ ದೇಶದಲ್ಲಿ ಅಪರಾಧವೂ ಕಮ್ಮಿಯಿರುತ್ತದೆ ಎಂದು ಹೊಸ ಥಿಯರಿ ಕಂಡುಹಿಡಿದವನಂತೆ ಮೋರಿಸ್ ಷರಾ ಗೀಚಿದ್ದಾನೆ.

ಕಜಖಸ್ತಾನ ನಿಸರ್ಗದ ಎಲ್ಲ ಸೊಬಗನ್ನು ಹೊಂದಿದ್ದರೂ, ಪ್ರವಾಸೋದ್ಯಮದ ದೃಷ್ಟಿಯಿಂದ ತೀರಾ ಹಿಂದುಳಿದ ದೇಶ. ಆ ದೇಶದಲ್ಲಿ ಸಂಚರಿಸುವಾಗ ನೂರಾರು ಕಿಮಿ ದೂರ ಹಿಮ ಆವೃತವಾದ ಪರ್ವತಗಳ ಸಾಲು ಕಣ್ಮನ ಸೆಳೆಯುತ್ತವೆ. ಪ್ರಕೃತಿಯ ಎಲ್ಲಾ ವೈಶಿಷ್ಟ್ಯಗಳೂ ದಂಡಿಯಾಗಿ ಬಿದ್ದಿರುವಂತೆ
ಭಾಸವಾಗುತ್ತದೆ. ಆದರೆ ಅವನ್ನು ಪ್ರವಾಸಿಗಳಿಗೆ ಶೋಕೇಸ್ ಮಾಡಲು ಆ ದೇಶ ಸೋತಿದೆ. ಆ ದೇಶದ ಜಿಡಿಪಿಗೆ ಪ್ರವಾಸೋದ್ಯಮದ ಕೊಡುಗೆ ಕೇವಲ ಶೇ.೦.೩ ರಷ್ಟು. ಕಜಖಸ್ತಾನದ ಹೆಸರನ್ನು ಅನೇಕರನ್ನು ಕೇಳಿರಬಹುದು. ಆದರೆ ನೋಡಿದವರು ಅಪರೂಪ.

ಹೆಚ್ಚಿನ ಜನ ಕಜಖಸ್ತಾನ ಅಂದ್ರೆ ಮರುಭೂಮಿಯಿಂದ ಆವೃತವಾದ, ಬಡತನದಿಂದ ಕಂಗೆಟ್ಟ ದರಿದ್ರ ದೇಶ ಎಂದೇ ತಿಳಿದಿದ್ದಾರೆ. ಸೋಜಿಗವೆಂದರೆ, ಅಲ್ಲಿ ಅವೆರಡೂ ಇಲ್ಲ. ಕಜಕ್ ಜನಾಂಗೀಯರೇ ಹೆಚ್ಚಿನ ಸಂಖ್ಯೆಯಲ್ಲಿರುವ ಕಜಖ ಸ್ತಾನದಲ್ಲಿ ನಂತರದ ಸ್ಥಾನ ರಷ್ಯನ್ನರಿಗೆ. ಉಜ್ಬೆಕ್‌ಗಳು, ಉಕ್ರೇನಿ
ಯನ್‌ರು, ಉರ್ಯ್ಘಗಳು, ಜರ್ಮನಿಯರು ಸಹ ಇದ್ದಾರೆ. ಆ ದೇಶದ ಶೇ.ಎಪ್ಪತ್ತರಷ್ಟು ಜನ ಮುಸಲ್ಮಾನರು ಹಾಗೂ ಶೇ.ಹದಿನೆಂಟರಷ್ಟು ಕ್ರಿಶ್ಚಿಯನ್ನರು. ಉಳಿದವರು ಆರು ಅನ್ಯಧರ್ಮಿಯರು.

ಆದರೆ ಇಡೀ ದೇಶದಲ್ಲಿ ಸಂಚರಿಸುವಾಗ ಎಲ್ಲೂ ಸಾಂಪ್ರದಾಯಕ ಮುಸ್ಲಿಂ ಉಡುಗೆ-ತೊಡುಗೆ ಧರಿಸಿದವರು ಕಾಣುವುದಿಲ್ಲ. ‘ಮುಸಲ್ಮಾನರು ಬಹುಸಂಖ್ಯಾತರಿರುವ ದೇಶ ಎಂದು ಹೇಳಿದರೂ ನಂಬಲಾಗದು. ಅಷ್ಟೊಂದು ಕಾಸ್ಮೋಪಾಲಿಟನ್. ಗ್ರಾಮೀಣ ಪ್ರದೇಶಗಳಲ್ಲೂ ಜನರ ಧಾರ್ಮಿಕ ಭಾವನೆ ಅಲ್ಲಿನ ಜನಜೀವನದೊಂದಿಗೆ ಮಿಳಿತವಾಗಿದೆ’ ಎಂಬ ಮೋರಿಸ್ ಮಾತು ಮೇಲ್ನೋಟಕ್ಕೆ ನಿಜವಿದ್ದಿರಬಹುದು ಎನಿಸುತ್ತದೆ.

ಕಜಖಸ್ತಾನ ದನ-ಕರುಗಳಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಕುದುರೆಗಳಿರುವ ಅಪರೂಪದ ದೇಶ. ಹೀಗಾಗಿ ಈ ದೇಶದಲ್ಲಿ ಕುದುರೆ ಹಾಲು, ಕುದುರೆ ಮಾಂಸ ಜನಪ್ರಿಯ. ಮೊದಲ ಬಾರಿಗೆ ಕುದುರೆಯನ್ನು ಸವಾರಿಗೆ ಪಳಗಿಸಿದವರೂ ಕಜಕ್‌ರೇ. ಅಲ್ಲಿ ಚಿಕ್ಕ ಮಕ್ಕಳೂ ಕುದುರೆ ಸವಾರರು. ಕುದುರೆ ಸವಾರಿಗೆ ಸಂಬಂಧಿಸಿದ ವಿವಿಧ ಸ್ಪರ್ಧೆಗಳು ಸಹ ಜನಪ್ರಿಯ. ಮಹಿಳೆಯರೂ ಈ ಸ್ಪರ್ಧೆಗಳಲ್ಲಿ ಭಾಗವಹಿಸುವುದು ಸಾಮಾನ್ಯ. ರಸ್ತೆಗಳ ಇಕ್ಕೆಲ
ಗಳಲ್ಲಿ ಕುದುರೆ ಮೇಯುವ ದೃಶ್ಯವನ್ನು ಎಡೆ ಕಾಣಬಹುದು.

ಕಜಖಸ್ತಾನ ವಿಶಾಲವಾಗಿರುವುದರಿಂದ, ಕೆಲವೆಡೆ ಸಾವಿರಾರು ಕಿಮಿ ಸಂಚರಿಸಿದರೂ ಜನವಸತಿ ಇಲ್ಲದಿರುವುದರಿಂದ, ಅವಿಭಜಿತ ಸೋವಿಯತ್ ರಷ್ಯಾ ಆ ಭೂಪ್ರದೇಶವನ್ನು ಅಣ್ವಸ್ತ್ರ ಪ್ರಯೋಗಶಾಲೆಯನ್ನಾಗಿ ಮಾಡಿಕೊಂಡಿತ್ತು. ೧೯೪೯ ರಿಂದ ೧೯೮೯ ರ ಅವಽಯಲ್ಲಿ ಐನೂರಕ್ಕೂ ಹೆಚ್ಚು ಅಣ್ವಸ್ತ್ರ ಪ್ರಯೋಗಗಳನ್ನು ಕಜಖಸ್ತಾನದ ‘ಅಘೋಷಿತ ಪ್ರದೇಶ’ಗಳಲ್ಲಿ ನಡೆಸಲಾಗಿತ್ತು ಎಂದು ಅಂದಾಜು ಮಾಡಲಾಗಿದೆ. ಕಜಖಸ್ತಾನದ ಬಗ್ಗೆ ಹೇಳುವುದು ಇನ್ನೂ ಬಹಳ ಇವೆ. ಮುಂದೆ ಹೇಳುವೆ.

ಯೋಜನಾ ಭವನ ಮತ್ತು ದೊಡ್ಡವರು

ಭಾರತ ಸರಕಾರದಲ್ಲಿ ಅನೇಕ ನಿಷ್ಪ್ರಯೋಜಕ, ನಿರರ್ಥಕ ಸಂಸ್ಥೆಗಳಿವೆ. ಆ ಪೈಕಿ ಯೋಜನಾ ಆಯೋಗ (ಈಗಿನ ನೀತಿ ಆಯೋಗ)ವೂ ಒಂದು. ಜೀವನವಿಡೀ ಸರಕಾರಿ ಸೇವೆಯಲ್ಲಿ ಮೆರೆದ ಅಧಿಕಾರಿಗಳು, ಅರ್ಥಶಾಸ್ತ್ರಜ್ಞರು, ಸರಕಾರದ ಪ್ರಚಾರಕರು, ರಾಜಕಾರಣಿಗಳ ಮೇಲ್ದರ್ಜೆಯ ಚೇಲಾಗಳಂತೆ ವರ್ತಿಸಿದವರು, ಹುಸಿ ಚಿಂತಕರು ಆ ಆಯೋಗದಲ್ಲಿ ಸದಸ್ಯರಾಗಿ ನೇಮಕಗೊಳ್ಳುತ್ತಾರೆ.

ಕೆಲವರಿಗೆ ಅದು ನಿರಾಶ್ರಿತರ ತಾಣ. ಇನ್ನು ಕೆಲವರಿಗೆ ಶಿಕ್ಷೆಯ ತಾಣ. ಸರಕಾರಕ್ಕೆ, ಪ್ರಧಾನಿಗಳಿಗೆ ತಲೆನೋವಾದ ಹಿರಿಯ ಐಎಎಸ್ ಅಧಿಕಾರಿ ಗಳನ್ನು ಅಲ್ಲಿಗೆ ಕಳಿಸಿದರೆ ಅದು ಪನಿಷಮೆಂಟ. ಅರವತ್ತೈದು-ಎಪ್ಪತ್ತು ವರ್ಷದವರನ್ನು ನೇಮಿಸಿದರೆ, ಅವರ ಪಾಲಿಗೆ ಅದು ನಿರಾಶ್ರಿತರ ತಾಣ. ಯೋಜನಾ ಆಯೋಗಕ್ಕೆ ಪ್ರಧಾನಿ ಅಧ್ಯಕ್ಷರು. ಆದರೆ ಅವರಿಗೆ ವರ್ಷದಲ್ಲಿ ಒಂದು ಸಲವೂ ಸಭೆಗೆ ಹಾಜರಾಗಲು ಸವುಡು ಸಿಗುವುದಿಲ್ಲ. ಹೀಗಾಗಿ ಉಪಾಧ್ಯಕ್ಷರದೇ ದರ್ಬಾರು. ಯೋಜನಾ ಆಯೋಗದ ಸದಸ್ಯ ಎಂದು ಹೇಳಿಕೊಳ್ಳಲು ಅದರ ಸದಸ್ಯರೆಲ್ಲರೂ ಇಷ್ಟಪಡುತ್ತಾರೆ. ತಮ್ಮ ಅಷ್ಟು ದಿನಗಳ ಸೇವೆಗೆ ಸಂದ ಗೌರವ ಎಂದು ಭಾವಿಸುತ್ತಾರೆ. ಆ ಹುದ್ದೆ ನೀಡುವ ಎಲ್ಲ ಸವಲತ್ತು-ಸೌಕರ್ಯಗಳನ್ನು ಪಡೆಯದೇ ಹೋಗುವುದಿಲ್ಲ.
ಆದರೆ ಯಾರೂ ಒಂದು ಸಭೆಗೂ ಹಾಜರಾಗುವುದಿಲ್ಲ. ಹಾಜರಾದರೂ ಸಮಯಕ್ಕೆ ಸರಿಯಾಗಿ ಬರುವುದಿಲ್ಲ. ಅಲ್ಲಿನ ಕೆಲಸದ ಗತಿ ಅತಿ ನಿಧಾನ. ನಿರ್ಧರಿತ ಸಮಯಕ್ಕೆ ಯಾವ ಮೀಟಿಂಗಿಗಳೂ ಆರಂಭವಾಗುವುದಿಲ್ಲ.

ಹೀಗೆಂದು ಟಿ.ಎನ್.ಶೇಷನ್ ತಮ್ಮ ಆತ್ಮಕಥೆ -Through The Broken Glass – ಕೃತಿಯಲ್ಲಿ ಬರೆದಿದ್ದಾರೆ. ಶೇಷನ್ ಅವರು ರಾಜೀವ ಗಾಂಧಿ ಪ್ರಧಾನಿಯಾಗಿದ್ದಾಗ ಕ್ಯಾಬಿನೆಟ್ ಸೆಕ್ರೆಟರಿ ಆಗಿದ್ದರು. ಅನಂತರ ಪ್ರಧಾನಿಯಾದ ವಿ.ಪಿ.ಸಿಂಗ್ ಅವರೊಂದಿಗೆ ಅವರ ಸಂಬಂಧ ಅಷ್ಟು ಮಧುರ ವಾಗಿರಲಿಲ್ಲ. ಹೀಗಾಗಿ ಸಿಂಗ್, ಶೇಷನ್ ಅವರನ್ನು ಯೋಜನಾ ಆಯೋಗದ ಸದಸ್ಯರನ್ನಾಗಿ ನೇಮಿಸಿದ್ದರು. ಸುಮಾರು ಒಂದು ವರ್ಷ ಕಾಲ
ಅವರು ಯೋಜನಾ ಆಯೋಗದ ಸದಸ್ಯರಾಗಿ, ಅಲ್ಲಿನ ಜಿಡ್ಡುಗಟ್ಟಿದ ವ್ಯವಸ್ಥೆ ನೋಡಿ, ಬೇಸರದಿಂದ ಬರೆದಿದ್ದರು.

ಪೂರ್ವ ನಿರ್ಧರಿತ ಸಮಯಕ್ಕೆ ಯಾವ ಸಭೆಯೂ ಆರಂಭವಾಗದಿರುವುದನ್ನು ಗಮನಿಸಿದ ಶೇಷನ್, ಯೋಜನಾ ಭವನದಲ್ಲಿದ್ದ ತಮ್ಮ ಕೋಣೆ ಯಲ್ಲಿರುವ ಗೋಡೆ ಗಡಿಯಾರವನ್ನು ತೆಗೆಸಿಬಿಟ್ಟರು. ಶೇಷನ್ ಅಷ್ಟಕ್ಕೇ ಸುಮ್ಮನಾಗದೇ, ಗೋಡೆ ಗಡಿಯಾರವನ್ನು ಹಿಂತಿರುಗಿಸುತ್ತಾ
ಆಯೋಗದ ಕಾರ್ಯದರ್ಶಿಗೆ ಒಂದು ಚೀಟಿ ಬರೆದು ಕಳಿಸಿದ್ದರು – ‘ಇಲ್ಲಿ ನಮಗೆ ಯಾವ ವಸ್ತುವಿನ ಅಗತ್ಯವಿಲ್ಲವೋ, ಅದನ್ನು ಯಾಕೆ ಇಟ್ಟುಕೊಳ್ಳ ಬೇಕು? ಹೇಗಿದ್ದರೂ ಹೊರಗೆ ನೋಡಿ ಸಮಯವನ್ನು ತಿಳಿದುಕೊಳ್ಳಬಹುದು. ಯೋಜನಾ ಆಯೋಗದಲ್ಲಿ ಗಡಿಯಾರದ ಬದಲು, ಕ್ಯಾಲೆಂಡರ್ ಉಪಯೋಗಕ್ಕೆ ಬರಬಹುದು.’

ಈ ಯಾವ ‘ವ್ಯಂಗ್ಯದ ಪ್ರತಿಭಟನೆ’ಯೂ ಪ್ರಯೋಜನ ಆಗಲಿಲ್ಲ. ಯೋಜನಾ ಆಯೋಗ ಶೇಷನ್ ಅವರಂಥ ಅವೆಷ್ಟು ಜನರನ್ನು ನೋಡಿದೆಯೋ ಏನೋ? ಅಲ್ಲಿ ಯಾರೂ ಯಾವುದಕ್ಕೂ ತಲೆ ಕೆಡಿಸಿಕೊಳ್ಳುವುದಿಲ್ಲ. ಶೇಷನ್ ಐಎಎಸ್ ಅಽಕಾರಿಯಾಗಿ, ಆಯೋಗವನ್ನು ಸೇರಿದವರು. ನ್ಯಾಯ ಯುತವಾಗಿ ಅವರು ಅದಕ್ಕೂ ಹಿಂದೆ ಎಷ್ಟು ಸಂಬಳ ಪಡೆಯುತ್ತಿದ್ದರೋ, ಅಷ್ಟು ಪಡೆಯಬೇಕಿತ್ತು. ಆದರೆ ಅವರಿಗೆ ಯೋಜನಾ ಆಯೋಗದ ಸದಸ್ಯರಿಗೆ ನೀಡುವಷ್ಟು (ಕಡಿಮೆ) ಸಂಬಳವನ್ನು ನೀಡಲಾಯಿತು. ಇದೊಂದು ರೀತಿಯಲ್ಲಿ ಡಿಮೋಷನ್. ಆದರೆ ಶೇಷನ್ ಬಿಡಲಿಲ. ಅದನ್ನು
ಪ್ರಶ್ನಿಸಿದರು. ಸರ್ವಿಸ್ ರೂಲ್ ಪ್ರಕಾರ, ಅವರ ಕೆಲಸದ ರೀತಿ-ನೀತಿ ಬದಲಾಗಿತ್ತು. ಆದರೆ ಅವರ ಕೆಲಸವಲ್ಲ.

ಕೊನೆಗೂ ತಮಗೆ ನ್ಯಾಯಯುತವಾಗಿ ಬರಬೇಕಾದ ಸಂಬಳವನ್ನು ಪಡೆಯುವಲ್ಲಿ ಯಶಸ್ವಿಯಾದರು. ಅವರ ಸಂಬಳಕ್ಕೆ ಕತ್ತರಿ ಹಾಕುವಂತೆ, ಯಾರೋ ‘ದೊಡ್ಡ’ವರು ಸೂಚಿಸಿದ್ದರು. ಅವರು ಯಾರು ಎಂಬುದನ್ನು ಊಹಿಸುವುದು ಕಷ್ಟವಲ್ಲ.

ಅಮೆರಿಕದ ಗ್ರಂಥಾಲಯದಲ್ಲಿ…
ಇತ್ತೀಚೆಗೆ ನಾನು ಅಮೆರಿಕಕ್ಕೆ ಹೋದಾಗ, ವಾಷಿಂಗ್ಟನ್ ಡಿಸಿಗೆ ಹೋಗಿದ್ದೆ. ನನಗೆ ಅಲ್ಲಿ ಯಾವ ಕಾರ್ಯಕ್ರಮವೂ ಇರಲಿಲ್ಲ. ನಮ್ಮ ಪತ್ರಿಕೆಯ ಅಂಕಣಕಾರ ಶ್ರೀವತ್ಸ ಜೋಶಿ ಅವರೊಂದಿಗೆ ಮೂರು ದಿನ ಸುತ್ತಾಡುವುದಷ್ಟೇ ನನ್ನ ಉದ್ದೇಶವಾಗಿತ್ತು. ಕಾರಣ ನಾನು ವಾಷಿಂಗ್ಟನ್ ಡಿಸಿಗೆ ಹೋಗದೆ ಸುಮಾರು ಹದಿನೈದು ವರ್ಷಗಳಾಗಿದ್ದವು. ಈ ಅವಧಿಯಲ್ಲಿ ಅಮೆರಿಕದ ರಾಜಧಾನಿಯಲ್ಲಿ ಏನೆಲ್ಲ ಬದಲಾವಣೆಗಳಾಗಿವೆ ಎಂಬುದನ್ನು
ನೋಡಬೇಕೆಂದಿತ್ತು. ಜೋಶಿಯವರು ಮೂರು ದಿನ ರಜಾ ಹಾಕಿ ನನ್ನನ್ನು ತಮ್ಮ ಕಾರಿನಲ್ಲಿ ಸುತ್ತಿಸಿದರು.

ಊಟದ ನೆಪದಲ್ಲಿ ಹಳೆ-ಹೊಸ ಸ್ನೇಹಿತರನ್ನೆಲ್ಲ ಸೇರಿಸಿದ್ದರು. ಇಷ್ಟೂ ಸಾಲದೆಂಬಂತೆ, ಮೇರಿಲ್ಯಾಂಡಿನ ಲ್ಹಾನ್ ಹ್ಯಾಮ್ ಪ್ರಾಂತದಲ್ಲಿರುವ ಶ್ರೀ ಶಿವ
ವಿಷ್ಣು ದೇವಾಲಯಕ್ಕೂ ಕರೆದುಕೊಂಡು ಹೋಗಿ, ಅಮೆರಿಕ ಪ್ರವಾಸದಲ್ಲಿ ತೀರ್ಥಕ್ಷೇತ್ರ ದರ್ಶನವನ್ನೂ ಮಾಡಿಸಿದ್ದರು. ದೈನಂದಿನ ಓಡಾಟದ ಮಧ್ಯೆ ನಮಗೆ ಕೆಲಹೊತ್ತು ಬಿಡುವಿತ್ತು. ಆಗ ಜೋಶಿಯವರು, ಪಕ್ಕದ ವರ್ಜಿನಿಯಾದ ರೆಸ್ಟನ್ ಪ್ರಾಂತದಲ್ಲಿರುವ ಲೈಬ್ರರಿಗೆ ಹೋಗಿ ಬರೋಣವಾ ಎಂದು ಕೇಳಿದರು.

ಯಾರಾದರೂ ಈ ಪ್ರಶ್ನೆ ಕೇಳಿದರೆ, The only thing that you absolutely have to know, is the location of the library ಎಂದು ಹೇಳಬೇಕಂತೆ. ಹೀಗೆಂದು ಹೇಳಿದವನು ಖ್ಯಾತ ವಿಜ್ಞಾನಿ ಅಲ್ಬರ್ಟ್ ಐನಸ್ಟೈನ್. ಹೀಗಾಗಿ ನಾನು ತಕ್ಷಣ ಆಗಬಹುದು ಎಂದೆ.
ಅಮೆರಿಕದ ಅಷ್ಟೇನೂ ದೊಡ್ಡದಲ್ಲದ, ಒಂದು ಸಾಮಾನ್ಯ ಗ್ರಂಥಾಲಯ ಹೇಗಿರುತ್ತದೆ ಎಂಬುದನ್ನು ನೋಡುವ ತವಕ ನನ್ನದಾಗಿತ್ತು. I have always imagined that Paradise will be a kind of a Library ಎಂದು ಅರ್ಜೆಂಟಿನಾ ಲೇಖಕ(ಜಾರ್ಜ್ ಲೂಯಿಸ್ ಬೋರ್ಗೆಸ್) ನೊಬ್ಬ ಹೇಳಿದ ಮಾತನ್ನು ನೆನಪಿಸಿಕೊಂಡಾಗಲೆಲ್ಲ ಲೈಬ್ರರಿಯನ್ನು ನೋಡದೇ ವಾಪಸ್ ಬರುವುದುಂಟೇ? ನಾವು ಅಲ್ಲಿನ ಗ್ರಂಥಾಲಯದೊಳಗೆ ಕಾಲಿಡುತ್ತಿದ್ದಂತೆ, ಅಪ್ಪಟ ಕರ್ನಾಟಕದ ಹೆಣ್ಣುಮಗಳೊಬ್ಬಳು ಜೋಶಿಯವರನ್ನು ಸ್ವಾಗತಿಸಿದಾಗ ನನಗೆ ಆಶ್ಚರ್ಯ. ‘ಇವರು ಪ್ರತಿಭಾ ಭಟ.

ಇಲ್ಲಿನ ಲೈಬ್ರರಿಯನ್. ಕನ್ನಡವರು, ಮಂಗಳೂರಿನವರು’ ಎಂದು ಜೋಶಿಯವರು ಪರಿಚಯಿಸಿದರು. ‘ನಾನು ನಿಮ್ಮ ಓದುಗಳು’ ಎಂದು ಪ್ರತಿಭಾ ಹೇಳಿದರು. ನಮ್ಮ ಮುಂದಿನ ಮಾತುಕತೆ ಹೇಗಿದ್ದಿರಬಹುದು ಎಂಬುದನ್ನು ನಿಮ್ಮ ಊಹೆಗೆ ಬಿಡುತ್ತೇನೆ. ನಾನು ಆ ಗ್ರಂಥಾಲಯದಲ್ಲಿ ಸುಮಾರು ಒಂದು ಗಂಟೆ ಕಾಲ ಇದ್ದಿರಬಹುದು. ಅಲ್ಲಿಂದ ನನಗೆ ಹೊರಬರಲು ಮನಸ್ಸೇ ಇರಲಿಲ್ಲ. ಅಲ್ಲಿ ಅಪರೂಪದ ಪುಸ್ತಕಗಳು, ನಿಯತಕಾಲಿಕಗಳು,
ಪತ್ರಿಕೆಗಳಿದ್ದವು. ಆಗ ತಾನೇ ಬಿಡುಗಡೆಯಾದ ಇಂಗ್ಲಿಷ್ ಪುಸ್ತಕಗಳಿದ್ದವು.

ಯಾವ ಪುಸ್ತಕವನ್ನಾದರೂ ಓದಲು ಅನುವಾಗುವ ಆನ್ ಲೈನ್ ಸೌಲಭ್ಯವಿತ್ತು. ವಯಸ್ಸಾದವರಿಗೆಂದೇ ದೊಡ್ಡಕ್ಷರಗಳಲ್ಲಿ ಮುದ್ರಿಸಿದ ಪುಸ್ತಕಗಳಿದ್ದವು. ವೈಫೈ ಸೌಲಭ್ಯವಿತ್ತು. ಪುಸ್ತಕಗಳನ್ನು ಕ್ಸೆರಾಕ್ಸ್ ಮಾಡಿಸಿಕೊಳ್ಳಬಹುದಿತ್ತು. ಪುಸ್ತಕಗಳನ್ನು ಒಯ್ಯಬಹುದಿತ್ತು. ಅಷ್ಟೇ ಮುಖ್ಯವಾಗಿ, ಅಲ್ಲಿ ಓದಲು ಆಪ್ತವಾಗುವ ಒಂದು ವಾತಾವರಣವನ್ನು ನಿರ್ಮಾಣ ಮಾಡಿದ್ದರು. ಅ ಇನ್ನೂ ಸ್ವಲ್ಪ ಹೊತ್ತು ಇದ್ದು ಬಿಡೋಣ ಅಂತ ಅನಿಸಿದ್ದು ಸುಳ್ಳಲ್ಲ.

ನಾವು ಅಲ್ಲಿಂದ ಬರುವಾಗ, ಪ್ರತಿಭಾ ಭಟ್ ಅವರು, ಒಂದು ಪುಸ್ತಕವನ್ನು ಕೊಟ್ಟರು. ಆ ಪುಸ್ತಕವನ್ನು ಜೋಶಿಯವರಾಗಲಿ, ನಾನಾಗಲಿ ಕೇಳಿರಲಿಲ್ಲ. ಆದರೂ ಪ್ರತಿಭಾ ಅದನ್ನು ನಮ್ಮ ಕೈಗಿತ್ತರು. ನೋಡಿದರೆ, ನನಗೆ ಇಷ್ಟವಾದ ಸಂಪಾದಕ, ಲಂಡನ್ ನ ‘ದಿ ಗಾರ್ಡಿಯನ್’ ಪತ್ರಿಕೆಯ ಮಾಜಿ ಸಂಪಾದಕ ಅಲನ್ ರಸ್ಬ್ರಿಜರ್ ಬರೆದ Breaking News : The Remaking of Journalism And Why It Matters Now ಎಂಬ ಕೃತಿ.

ನಾನು ಆ ಪುಸ್ತಕಕ್ಕಾಗಿ ತಡಕಾಡುತ್ತಿದ್ದೆ. ಕಾಡಿನಲ್ಲಿ ಹುಡುಕುತ್ತಿದ್ದ ಬಳ್ಳಿ ಕಾಲಿಗೆ ಸುತ್ತಿಕೊಂಡಂತಾಗಿತ್ತು. ಆ ಪುಸ್ತಕವನ್ನೇ ಕೊಡಬೇಕೆಂದು ಪ್ರತಿಭಾ ಅವರಿಗೆ ಯಾಕೆ ಅನಿಸಿತೋ, ಗೊತ್ತಿಲ್ಲ. ನಾನಾಗಲಿ, ಜೋಶಿಯವರಾಗಲಿ, ಆ ಪುಸ್ತಕವನ್ನು ಕೇಳಿರಲಿಲ್ಲ. ಹಲವು ದಿನಗಳಿಂದ ನಾನು ಆ
ಪುಸ್ತಕ ವನ್ನು ಓದಬೇಕೆಂದು ಅಂದುಕೊಂಡಿz. ಉತ್ತಮ ಗ್ರಂಥಾಪಾಲಕನಿಗೆ, ತಮ್ಮನ್ನು ಭೇಟಿ ಮಾಡಿದ ಓದುಗನಿಗೆ ಯಾವ ಪುಸ್ತಕ ಬೇಕು ಎಂಬುದು ಗೊತ್ತಾಗುತ್ತದಂತೆ. ಅವರು ಓದುವ ಮನಸ್ಸನ್ನು ಓದುವ ರೀಡರ್!

ಆ ಪುಸ್ತಕವನ್ನು ರೂಮಿಗೆ ತಂದು ಪ್ರಸ್ತಾವನೆ ಮತ್ತು ಮೊದಲ ಅಧ್ಯಾಯವನ್ನು ಓದಿ, ಜೋಶಿಯವರಿಗೆ ವಾಪಸ್ ಕೊಟ್ಟೆ. ಅಲ್ಲಿಂದಲೇ ಆ ಪುಸ್ತಕಕ್ಕಾಗಿ ಅಮೆಜಾನ್‌ನಲ್ಲಿ ಆರ್ಡರ್ ಮಾಡಿದೆ. ಒಂದು ವಾರದ ಬಳಿಕ, ಬೆಂಗಳೂರಿನ ಮನೆಗೆ ಬಂದಾಗ, ನನ್ನ ಟೇಬಲ್ ಮೇಲೆ ಆ ಪುಸ್ತಕ ಕುಳಿತಿತ್ತು.
Bad libraries build collections, good libraries build services, great libraries build communities ಎಂಬ ಮಾತು ಅಪ್ಪಟ ಸತ್ಯ.