Wednesday, 11th December 2024

ಚೆನ್ನವೀರ ಕಣವಿ: ಸಂಭಾವಿತ ಕಾವ್ಯ ಪರಂಪರೆಯ ಅಗ್ರಗಣ್ಯ ಪ್ರತಿನಿಧಿ

ಇದೇ ಅಂತರಂಗ ಸುದ್ದಿ

ವಿಶ್ವೇಶ್ವರ ಭಟ್

vbhat@me.com

ಒಮ್ಮೆ ಆಪ್ತತೆ ಆವರಿಸಿಕೊಂಡ ಬಳಿಕ, ನೆಲೆಸಿದ ಬಳಿಕ ಮುಕ್ತವಾಗಿ ಮಾತಾಡುತ್ತಿದ್ದರು. ಈ ಮುಕ್ತತೆಯಲ್ಲೂ ಅವರು ತಮ್ಮ ಸಜ್ಜನಿಕೆ ಯನ್ನು ಮೀರುತ್ತಿರಲಿಲ್ಲ. ತಮ್ಮನ್ನು ಟೀಕಿಸಿದಾಗಲೂ ಅವರು ನಕ್ಕು ಸುಮ್ಮನಾದರೇ ಹೊರತು, ಮನಸ್ಸಲ್ಲಿ ನಂಜು ತುಂಬಿಕೊಳ್ಳಲಿಲ್ಲ. ಕಣವಿಯವರ ಕಾವ್ಯ ಮತ್ತು ಬದುಕು- ಇವೆರಡನ್ನೂ ಪ್ರತ್ಯೇಕಿಸಿ ನೋಡಲು ಸಾಧ್ಯವಿಲ್ಲ. ಅವರ ಕಾವ್ಯಗಳಲ್ಲಿ ಅವರು ಸಾಂದ್ರಗೊಂಡಿ ದ್ದಾರೆ.

ನಾನು ಧಾರವಾಡದಲ್ಲಿ ವಿದ್ಯಾರ್ಥಿಯಾಗಿದ್ದಾಗಿ ನಿಂದಲೂ ನನಗೆ ನಾಡೋಜ ಚೆನ್ನವೀರ ಕಣವಿ ಅವರ ಜತೆಗೆ ಆಪ್ತ ಒಡನಾಟ. ಅವರಂಥ ಸಜ್ಜನಿಕೆಯ ವ್ಯಕ್ತಿ ಅಪರೂಪವೇ. ಅವರು ಯಾವುದೇ ವಿವಾದಕ್ಕೆ, ಉಸಾಬರಿಗೆ ತುತ್ತಾದವರಲ್ಲ. ಸಾಹಿತಿಗಳ ಸಹಜ ಭಾನಗಡಿ ಸ್ವಭಾವವೂ ಅವರಲ್ಲಿ ಇರಲಿಲ್ಲ. ತೀರಾ ಮುಜುಗರದ ಪ್ರಶ್ನೆ ಅಥವಾ ಪ್ರಸಂಗ ಎದುರಿಸುವ ಸನ್ನಿವೇಶದಲ್ಲೂ ಅವರು ವಿವಾದದ ಲೇಪ ಮೈಗೆ ತಟ್ಟದಂತೆ ನೋಡಿಕೊಂಡವರು.

ಹಾಗೆಂದು ತಮ್ಮ ಧೋರಣೆಯಗಲಿ, ನಿಲುವಿನಗಲಿ ರಾಜಿ ಮಾಡಿಕೊಂಡವರಲ್ಲ. ವಿವಾದದ ಸಂದರ್ಭದಲ್ಲೂ ಅವರ ಪ್ರತಿಕ್ರಿಯೆ ಬಯಸಿದಾಗ, ಒಂದೋ ಅವರು ಪ್ರತಿಕ್ರಿಯಿಸುತ್ತಿರಲಿಲ್ಲ. ಒಂದು ವೇಳೆ ಪ್ರತಿಕ್ರಿಯಿಸಿದರೂ, ಅದರಲ್ಲಿ ಸುದ್ದಿ ಅಥವಾ ವಿವಾದದ ಘಮಲು ಇರುತ್ತಿರಲಿಲ್ಲ. ಇದನ್ನೇ ಚಂಪಾ ಅವರು, ‘ನಮ್ಮ ಕಣವಿ ಹೇಳಿಕೆ ಹೇಗೆ ಅಂದ್ರ ಹಾವೂ ಸಾಯಬಾರ್ದು, ಕೋಲೂ ಮುರೀಬಾರ್ದು, ಕಣವಿಯವರ ಕೈ ನೋಯಬಾರ್ದು’ ಎಂದು ಹೇಳುತ್ತಿದ್ದರು. ‘ಕಣವಿ ಅವರ ಬಹುತೇಕ ಪ್ರತಿಕ್ರಿಯೆಗಳು ನಗೆಯಲ್ಲಿ ತೇಲಿ ಹೋಗುತ್ತಿದ್ದವು. ಆ ನಗೆಯಲ್ಲಿ ಹಲವು ಅರ್ಥಗಳು ಇರುತ್ತಿದ್ದವು ಅಥವಾ ಯಾವ ಅರ್ಥವೂ ಇರುತ್ತಿರಲಿಲ್ಲ’ ಎಂದು ಹೇಳುತ್ತಿದ್ದವರೂ ಚಂಪಾ ಅವರೇ.
ಧಾರವಾಡದ ಕವಿ, ಸಾಹಿತಿಗಳ ಮಧ್ಯೆ ಅತ್ಯಂತ ಕ್ರಿಯಾಶೀಲರಾಗಿದ್ದರೂ, ಅಲ್ಲಿನ ಯಾವ ರಾಜಕೀಯ, ಹಾಕ್ಯಾಟಗಳಲ್ಲಿ ಅವರು ಸಿಕ್ಕಿ ಬೀಳಲಿಲ್ಲ. ತೀರಾ ಅವರ ಬಗ್ಗೆ ಪೂರಕವಲ್ಲದ ವಿಮರ್ಶೆ ಅಥವಾ ಟೀಕೆಗಳು ಬಂದಾಗಲೂ ಅವರು ಬಹಳ ತಲೆ ಕೆಡಿಸಿಕೊಂಡವರಲ್ಲ. ಒಬ್ಬ ಕವಿಯ ವೈಯಕ್ತಿಕ ಬದುಕು, ಚಿಂತನೆ, ಒಡನಾಟ ಹೇಗಿರ ಬೇಕು ಎಂಬುದಕ್ಕೆ ಕಣವಿಯವರು ಅನ್ವರ್ಥವಾಗಿದ್ದರು.

ಕಣವಿಯವರು ಕಾವ್ಯ ರಚನೆಯ ಗಂಭೀರ ಕಾಯಕ ಬಿಟ್ಟು, ಮತ್ತಾವುದೋ ಗೋಟಾವಳಿಗೆ ಹೋಗಲಿಲ್ಲ. ಈ ಕಾರಣದಿಂದ ಅವರಿಂದ ಹದಿನಾರು ಕವನ ಸಂಕಲನಗಳು ಬಂದವು. ಕಣವಿಯವರ ಹಾಗೆ ವಿವಾದಗಳಿಂದ ದೂರವಾಗಿ, ಬಾಳಿಕೆ ಬರುವುದು, ಯಾವತ್ತೂ
ಪ್ರಸ್ತುತವಾಗಿರುವುದು ಮತ್ತು ತಮ್ಮ ಮಹತ್ವವನ್ನು ಕಾಪಾಡಿಕೊಳ್ಳುವುದು ಸುಲಭವಲ್ಲ. ಅವರು ಒಳ್ಳೆಯ ಕಾರಣಗಳಿಂದ ಮಾತ್ರ ಮುನ್ನೆಲೆಗೆ ಬರುತ್ತಿದ್ದರು. ಇನ್ನುಳಿದಂತೆ ಅವರು ಬಿಲ ಸೇರಿಕೊಂಡು ಬಿಡುತ್ತಿದ್ದರು. ತನಗೆ ಸಂಬಂಧವಿರದ ವಿಷಯಗಳಲ್ಲಿ ಅವರು ಮೂಗು ತೂರಿಸಿದವರಲ್ಲ.

ಹೀಗಾಗಿ ಕಣವಿಯವರು ಏನೇ ಹೇಳಿದರೂ ಅದಕ್ಕೊಂದು ವಜನು ಇರುತ್ತಿತ್ತು. ಹಾಗಂತ ಅದರ ಹಿಂದೆ ಯಾವ ಅಜೆಂಡಾಇರುತ್ತಿರಲಿಲ್ಲ. ಧಾರವಾಡದಂಥ ಭಿನ್ನ ಸಾಹಿತ್ಯ ವಲಯದಲ್ಲಿದ್ದೂ ಎಲ್ಲರೊಂದಿಗೆ ಸಾಮರಸ್ಯ ಮತ್ತು ಸಮನ್ವಯ ಸಾಧಿಸುವುದು ಸಣ್ಣ ಮಾತಲ್ಲ. ಕಾಲ ಉರುಳಿದಂತೆ ಅವರು ಈ ಸಮನ್ವಯತೆಯ ಆಶಯಗಳನ್ನು ಮತ್ತಷ್ಟು ಗಟ್ಟಿಗೂಡಿಸಿಕೊಂಡರು. ಅವರ ಈ ನಂಬಿಕೆ ಎಂದೂ ಶಿಥಿಲ ವಾಗಲಿಲ್ಲ. ಕಣವಿಯವರ ‘ಕಾಲ ನಿಲ್ಲುವುದಿಲ್ಲ’ ಕವನ ಓದಿದವರಿಗೆ ಅವರು ಬದುಕನ್ನು ನೋಡಿದ ಸಮಚಿತ್ತಭಾವ ಮತ್ತು ಕಾಲದೊಂದಿಗೆ ಹೆಜ್ಜೆ ಹಾಕುವ ಮನುಷ್ಯನ ಗತಿಶೀಲವಾದ ಬದುಕಿನ ಸಂಘರ್ಷ ಮತ್ತು ಸೋಪಜ್ಞತೆಯ ಅಭಿವ್ಯಕ್ತಿಯ ಕೆನೆಪದರವನ್ನು ಕಾಣಬಹುದು.

ಆ ಕವನದಲ್ಲಿ ಕಣವಿಯವರು ಬರೆಯುತ್ತಾರೆ: ಮಾಡಿ ಉಂಡಿದ್ದೇವೆ ನಮ ನಮಗೆ ಸೇರಿದ ಅಡುಗೆ ಇದ್ದ ಶಕ್ತಿಯಲ್ಲಿ ತುಸುದೂರ ನಡೆದಿದ್ದೇವೆ ರೂಢಿಯಾಗಿದೆ ಒಬ್ಬೊಬ್ಬರಿಗೂ ಒಂದೊಂದು ಬಗೆಯ ನಡಿಗೆ ಮುಖ್ಯ ಬೇಕಾದದ್ದು ಜೀವಂತ ಗತಿ, ಹೊಸ ನೆತ್ತರಿನ ಕೊಡುಗೆ
ನಾನು ಅವರೊಂದಿಗೆ ಅನೇಕ ಸಾಹಿತ್ಯ ಕಾರ್ಯಕ್ರಮಗಳಲ್ಲಿ ವೇದಿಕೆ ಹಂಚಿಕೊಂಡಿದ್ದೇನೆ. ತಾವು ಹೇಳಬೇಕಾದ ವಿಚಾರಗಳನ್ನು
ನಿಷ್ಠೆಯಿಂದ ಟಿಪ್ಪಣಿ ಮಾಡಿಕೊಂಡು ಬರುತ್ತಿದ್ದ ಕಣವಿಯವರು, ವಿಷಯಗಳನ್ನು ಮಂಡಿಸುತ್ತಿದ್ದ ಪರಿ ವಿಶೇಷವಾಗಿತ್ತು. ಅವರು ತಮ್ಮ ಮೆಲುದನಿಯಲ್ಲಿ ಎಂಥಾ ತಾರಕವೇರುವ ವಿಷಯವನ್ನಾದರೂ ನಿವೇದಿಸುತ್ತಿದ್ದರು.

ಆದರೆ ಸಜ್ಜನಿಕೆ, ಸಂಭಾವಿತತನ, ಸೌಜನ್ಯದ ಎಲ್ಲೆ ಮೀರುತ್ತಿರಲಿಲ್ಲ. ಹಾಗಂತ ಅವರು ಸಾಹಿತಿಗಳ ಉಳಿದ ಚಟುವಟಿಕೆಗಳನ್ನು ಅರ್ಥ
ಮಾಡಿಕೊಳ್ಳದಷ್ಟು ಅಮಾಯಕರೇನೂ ಆಗಿರಲಿಲ್ಲ. ಆದರೆ, ಅವರಿಗೆ ಅದರಲ್ಲಿ ತಲ್ಲೀನವಾಗುವಷ್ಟು ವ್ಯವಧಾನ ಮತ್ತು ಆಸಕ್ತಿ ಇರದಿದ್ದುದು ನಿಜ. ನಮ್ಮ ತೆವಲುಗಳಿಗೆ ಅವರನ್ನು ಎಳೆ ತಂದು, ವಿವಾದಕ್ಕೆಳೆಯುವುದು ಸಾಧ್ಯವಿರಲಿಲ್ಲ.

ಕಣವಿಯವರದು ನವಿರು ಭಾವ. ಅವರ ಕವಿತೆಗಳಲ್ಲಿ ಈ ಮನಸ್ಸು ಜೇನು ಕಟ್ಟಿದೆ. ಆರು ದಶಕಗಳ ಕಾಲ, ಅವರು ನಿರಂತರವಾಗಿ ಕಾವ್ಯ ರಚಿಸಿದರೂ, ನಿತ್ಯ ಕಾಡುವ ವಿಷಯಗಳಲ್ಲಿ ವಿಭಿನ್ನ ನೋಟ, ಸೂಕ್ಷ್ಮ ಸಂವೇದನೆ, ಆರ್ದ್ರತೆ, ಅಂತಃಕರಣದಿಂದ ಬರೆದರೂ. ಬರೆದಂತೆ, ಬದುಕಿದಂತೆ ಅವರ ಭಾಷೆ ಮಾನವಂತಿಕೆಯ ಎತ್ತರದ ಮಜಲನ್ನು ಏರುತ್ತಿದ್ದುದನ್ನು ಗುರುತಿಸಬಹುದು. ಅವರು ಅಲ್ಲಿಂದ ಎಂದೂ ಕೆಳಕ್ಕಿಳಿಯಲೇ ಇಲ್ಲ. ತಮ್ಮ ಕವನಗಳಂತೆ ವ್ಯಕ್ತಿತ್ವದ ಘನತೆಯನ್ನೂ ಕಾಪಾಡಿಕೊಂಡರು.

ಧಾರವಾಡದಲ್ಲಿ ನಡೆದ ಸಾಹಿತ್ಯ ಸಮ್ಮೇಳನದಲ್ಲಿ ನಾನು ಕಣವಿ ಅವರ ಜತೆ ಕೆಲ ಸಮಯ ಕಳೆಯುವ ಅವಕಾಶ ಸಿಕ್ಕಿತ್ತು. ಆಗ
ಅವರು ಹೇಳಿದ ಒಂದು ಸಂಗತಿ ಕೇಳಿ ನನಗೆ ತುಸು ಆಶ್ಚರ್ಯವಾಗಿತ್ತು. ‘ಭಟ್ರೇ, ನಿಮ್ಮ ಪತ್ರಿಕೆಯಲ್ಲಿ ಕುಡಿಯೋಣು  ಬಾರಾ ಎಂಬ ಒಂದು ಅಂಕಣ ಪ್ರಕಟವಾಗುತ್ತಿತ್ತಲ್ಲ, ಅದನ್ನು ಗುಂಡಾ ಭಟ್ಟ ಎಂಬುವವರು ಬರೆಯುತ್ತಿದ್ದಾರಲ್ಲ, ಅದನ್ನು ತಪ್ಪದೇ ನಾನು ಓದುತ್ತಿದ್ದೆ. ನನಗೆ ಅದು ಪ್ರಿಯವಾದ ಅಂಕಣವಾಗಿತ್ತು. ಅದು ಯಾಕೋ ಇತ್ತೀಚೆಗೆ ಪ್ರಕಟವಾಗುತ್ತಿಲ್ಲ.

ದಯವಿಟ್ಟು ನಿಮ್ಮ ಗುಂಡಾ ಭಟ್ಟ ಅವರ ಹತ್ತಿರ ಅಂಕಣ ಮುಂದುವರಿಸಲು ಹೇಳಿ, ನಾನು ಅಂಕಣವನ್ನು ಬಹಳ ಮಿಸ್ ಮಾಡಿ ಕೊಳ್ಳುತ್ತಿದ್ದೇನೆ’ ಎಂದಿದ್ದರು. ಚೆನ್ನವೀರ ಕಣವಿ ಅವರೂ ಆ ಅಂಕಣ ಓದಬಹುದು ಮತ್ತು ಆ ಅಂಕಣವನ್ನು ಮಿಸ್ ಮಾಡಿಕೊಳ್ಳಬಹುದು ಎಂದು ನಾನು ಅಂದುಕೊಂಡಿರಲಿಲ್ಲ. ‘ಸಾರ್, ನೀವು ಮತ್ತೆ…? ಮತ್ತೆ …? ನೀವೂ ಗುಂಡು ಹಾಕ್ತೀರಾ?’ ಎಂದು ಮೆಲ್ಲಗೆ ಕೇಳಿದಾಗ,
‘ಗುಂಡು ಹಾಕುವವರು ಮಾತ್ರ ಅದನ್ನು ಓದಬೇಕೇನು? ಗುಂಡು ಹಾಕುವವರು ಮಾತ್ರ ಅಲ್ಲ, ಗುಂಡಿನ ಬಗ್ಗೆ ತಿಳಿದುಕೊಳ್ಳಬೇಕು ಎನ್ನುವವರೂ ಆ ಅಂಕಣವನ್ನು ಬಹಳ ಎಂಜಾಯ್ ಮಾಡುತ್ತಾರೆ’ ಎಂದಿದ್ದರು. ಅದೇಕೋ ಅವರು ಆ ಅಂಕಣವನ್ನು ಇಷ್ಟಪಟ್ಟಿದ್ದು ನನಗೆ ಅಚ್ಚರಿಯಾಗಿತ್ತು.

ಸಾಹಿತಿ ಅಥವಾ ಕವಿಯಾದವರಿಗೆ ಸೃಜನಶೀಲತೆಯ ಧಾತುವಿನ ಜತೆ, ಸಜ್ಜನಿಕೆಯ ಘನವಂತಿಕೆ, ಸಾರಸ್ವತಲೋಕದ ಪಾವಿತ್ರ್ಯ,
ಮರ್ಯಾದೆ, ಕಾವ್ಯದ ನವಿರು ಪ್ರಜ್ಞೆ, ಸಮಕಾಲೀನ ಬದುಕಿನ ಜತೆ ಸದಾ ಮುಖಾಮುಖಿಯಾಗುವ ಹೊಣೆಗಾರಿಕೆಯನ್ನು ಚೆನ್ನವೀರ ಕಣವಿಯವರು ಅಯಾಚಿತವಾಗಿ ಒಲಿಸಿಕೊಂಡಿದ್ದರು. ತಿಂಗಳಿಗೊಮ್ಮೆಯಾದರೂ ಕಣವಿ ಅವರು ಫೋನ್ ಮಾಡುತ್ತಿದ್ದರು. ಪತ್ರಿಕೆಯಲ್ಲಿ ಉತ್ತಮವಾದ ಲೇಖನವನ್ನು ಓದಿ, ತಮಗೆ ಇಷ್ಟವಾದ ಶೀರ್ಷಿಕೆಯನ್ನು ಓದಿ ಕಣವಿಯವರು ತಮ್ಮ ಪ್ರಶಂಸೆಗಳನ್ನು ತಿಳಿಸುತ್ತಿದ್ದರು. ಇಷ್ಟವಾಗದ ಶೀರ್ಷಿಕೆ, ತಪ್ಪು ಪದ ಪ್ರಯೋಗದ ಬಗ್ಗೆ ಅತ್ಯಂತ ನಾಜೂಕಿನಿಂದ ತಮ್ಮ ಅಭಿಪ್ರಾಯವನ್ನು ತಿಳಿಸುತ್ತಿದ್ದರು.

ಕಣವಿ ಅವರು ಸಲೀಸಾಗಿ ಮಾತುಕತೆಗೆ ತುಸು ಸಲುಗೆಯನ್ನು ಬಯಸುತ್ತಿದ್ದರು. ಒಮ್ಮೆ ಆಪ್ತತೆ ಆವರಿಸಿಕೊಂಡ ಬಳಿಕ, ನೆಲೆಸಿದ ಬಳಿಕ ಮುಕ್ತವಾಗಿ ಮಾತಾಡುತ್ತಿದ್ದರು. ಈ ಮುಕ್ತತೆಯಲ್ಲೂ ಅವರು ತಮ್ಮ ಸಜ್ಜನಿಕೆಯನ್ನು ಮೀರು ತ್ತಿರಲಿಲ್ಲ. ತಮ್ಮನ್ನು ಟೀಕಿಸಿದಾಗಲೂ ಅವರು ನಕ್ಕು ಸುಮ್ಮನಾದರೇ ಹೊರತು, ಮನಸ್ಸಲ್ಲಿ ನಂಜು ತುಂಬಿಕೊಳ್ಳಲಿಲ್ಲ. ಕಣವಿಯವರ ಕಾವ್ಯ ಮತ್ತು ಬದುಕು- ಇವೆರಡನ್ನೂ ಪ್ರತ್ಯೇಕಿಸಿ ನೋಡಲು ಸಾಧ್ಯವಿಲ್ಲ. ಅವರ ಕಾವ್ಯಗಳಲ್ಲಿ ಅವರು ಸಾಂದ್ರಗೊಂಡಿದ್ದಾರೆ. ಕಣವಿಯವರು ನಮ್ಮ ಸಂಭಾವಿತ ಕಾವ್ಯ ಪರಂಪರೆಯ ಅಗ್ರಗಣ್ಯ ಪ್ರತಿನಿಽಯಂತೆ ಕಾಣುತ್ತಾರೆ!

ಸಿಲಬ್ರಿಟಿಗಳ ನಡೆವಳಿಕೆ
ಇತ್ತೀಚೆಗೆ ನಾನು ಎನ್.ರಘುರಾಮನ್ ಅಂಕಣದಲ್ಲಿ ಓದಿದ್ದು. ಹಿಂದಿ ಸಿನಿಮಾ ನಟರಾದ ಅಮಿತಾಭ್ ಬಚ್ಚನ್, ಅಕ್ಷಯಕುಮಾರ್, ಸುನೀಲ್ ಶೆಟ್ಟಿ ತಮ್ಮ ಸ್ಥಾನಮಾನ ಪರಿಗಣಿಸದೇ ಸಾಮಾನ್ಯರಿಗೂ ಸಹಾಯ ಮಾಡುತ್ತಾರಂತೆ. ಒಮ್ಮೆ ರಘುರಾಮನ್ ಅವರ ಕಾರು ಪೋರ್ಟಿಕೋದಲ್ಲಿ ನಿಂತಿತ್ತು, ಅವರು ಅದರಲ್ಲಿ ಕೆಲ ವಸ್ತುಗಳನ್ನು ಇಟ್ಟಿದ್ದರಂತೆ.

ರಘುರಾಮನ್ ಕಾರು ಹೊರ ತೆಗೆದು ಚಲಾಯಿಸುತ್ತಿದ್ದಾಗ ಅವರ ಹಿಂದೆ ಅಮಿತಾಭ್ ಬಚ್ಚನ್ ಸ್ವತಃ ಕಾರು ಚಲಾಯಿಸುತ್ತ ಬರುತ್ತಿ
ರುವುದನ್ನು ಗಮನಿಸಿದರಂತೆ. ಕಾರಿಗೆ ಇನ್ನೊಂದಷ್ಟು ವಸ್ತು ತುಂಬುವುದಿತ್ತಂತೆ. ರಘುರಾಮನ್ ಕಾರನ್ನು ಬದಿಗೆ ಸರಿಸಿ ಅಮಿತಾಬ್‌ಗೆ ಹೋಗಲು ಅನುವು ಮಾಡಲು ಮುಂದಾದರಂತೆ. ಆಗ ಅಮಿತಾಭ್, ‘ದಯವಿಟ್ಟು ಬೇಡ, ನಿಮ್ಮ ಕೆಲಸ ನೀವು ಮಾಡಿ, ನಾನು ವೇಟ್ ಮಾಡುತ್ತೇನೆ’ ಎಂದು ಹೇಳಿ ಹಾರ್ನ್ ಕೂಡ ಮಾಡದೇ ಶಾಂತವಾಗಿ ಕಾದರಂತೆ.

ಇನ್ನೊಂದು ಬಾರಿ ಲಂಡನ್ ವಿಮಾನ ನಿಲ್ದಾಣದಲ್ಲಿ ಸುನೀಲ್ ಶೆಟ್ಟಿ, ರಘುರಾಮನ್ ಅವರ ಪತ್ನಿ ಭಾರೀ ತೂಕದ ಬ್ಯಾಗನ್ನು ಎತ್ತಿಕೊಂಡು ನಡೆಯುವುದನ್ನು ನೋಡಿ, ಓಡೋಡಿ ಬಂದು ಸಹಕರಿಸಿದ್ದರಂತೆ. ರಘುರಾಮನ್ ಪ್ರಕಾರ, ಸಿಲಬ್ರಿಟಿಗಳ ಪೈಕಿ ಅಕ್ಷಯ ಕುಮಾರ ಅತ್ಯಂತ ವಿನಮ್ರ ವ್ಯಕ್ತಿಯಂತೆ. ಅಮಿತಾಭ್ ಗಿಂತಲೂ ಒಂದು ಕೈಮೇಲು. ಅವರು ಸಾರ್ವಜನಿಕ ಸ್ಥಳದಲ್ಲೂ ಸಹ ಅಪರಿಚಿತರಿಗೆ ಸಹಕಾರ ನೀಡಲು ಸದಾ ಮುಂದಿರುತ್ತಾರೆ.

ವೈಎನ್ಕೆ ಮತ್ತು ಅನುವಾದ
‘ಪ್ರಜಾವಾಣಿ’ ಮತ್ತು ‘ಕನ್ನಡ ಪ್ರಭ’ ಸಂಪಾದಕರಾಗಿದ್ದ ವೈಎನ್ಕೆ ಅವರಿಗೆ ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳ ಮೇಲೆ ಹಿಡಿತವಿತ್ತು. ಅವರು ತಮ್ಮ ಅಂಕಣಗಳಲ್ಲಿ ಇಂಗ್ಲಿಷ್ ಸಾಲುಗಳನ್ನು ಬರೆದರೆ, ಅದರ ಅರ್ಥವನ್ನು ತಪ್ಪದೇ ಕನ್ನಡದಲ್ಲಿ ಕೊಡುತ್ತಿದ್ದರು. ಆ ಸಾಲುಗಳನ್ನು ಗಮನಿಸಿದರೆ, ಅವರಿಗೆ ಅನುವಾದ ಕಲೆ ಸಿದ್ಧಿಸಿದ್ದು ಗೊತ್ತಾಗುತ್ತದೆ.

‘ಅನುವಾದ ಯಾವತ್ತೂ ಮೂಲಕ್ಕೆ ಧಕ್ಕೆಯನ್ನುಂಟು ಮಾಡಬಾರದು ಮತ್ತು ಅದನ್ನು ಓದುವಾಗ ಅನುವಾದ ಎಂದು ಅನಿಸಬಾರದು’ ಎಂದು ಹೇಳುತ್ತಿದ್ದರು. Ants in the pants ಎಂಬ ಪದಪುಂಜವನ್ನು ಅವರು ‘ಚಲ್ಲಣದಲ್ಲಿ ತಲ್ಲಣ’ ಎಂದು ಅನುವಾದಿಸಿದ್ದರು. ಇದು ಮೂಲದ ಪ್ರಾಸ ಮತ್ತು ಅರ್ಥವನ್ನು ಅತ್ಯಂತ ಪರಿಣಾಮಕಾರಿಯಾಗಿ ಧ್ವನಿಸುವಂಥದ್ದು. ಆದರೂ ವೈಎನ್ಕೆ ಒಂದು ಮಾತು ಹೇಳುತ್ತಿದ್ದರು – ಏನೇ ಬರೆದರೂ, ಏನೇ ಸೃಷ್ಟಿಸಿದರೂ ಅದು ಮೂಲಕ್ಕೆ ಸಮನಾಗುವುದಿಲ್ಲ. ಎರಡು ಒರಿಜಿನಲ್ ಹೇಗೆ ಸಾಧ್ಯ? ಎಂಥ ಗುಲಾಬಿ
ಚಿತ್ರಿಸಿದರೂ ನಿಜವಾದ ಹೂವಿಗೆ ಸಮನಾಗದು. ಹುಲಿವೇಷ ದವರ ಮುಂದೆ ನಿಜವಾದ ಹುಲಿ ಬಂದರೆ? ಪ್ರಕೃತಿ ನಿರಾಭರಣೆಯಾಗಿ ನುಗ್ಗಿದಾಗ ಅದರ ಮುಂದೆ ಚಿತ್ರ, ಗದ್ಯ, ಪದ್ಯ ಎಲ್ಲವೂ ಸೋಲುತ್ತದೆ.’

ವಿಲಿಯಮ್ಸ ಷೇಕ್ಸ್‌ಪಿಯರ್ ೩೭೫ ನೇ ಜನ್ಮ ದಿನದ ಸಂದರ್ಭದಲ್ಲಿ ಖ್ಯಾತ ಕವಿ ಜಾರ್ಜ್ ಬಾರ್ಕರ್ ಅವರು ಬರೆದ ಎರಡು ವಾಕ್ಯಗಳನ್ನು ವೈಎನ್ಕೆ ಕನ್ನಡಕ್ಕೆ ಅನುವಾದಿಸಿದ್ದರು. ಇದನ್ನು ನಾನು ಯಾವತ್ತಿಗೂ ಉತ್ತಮ ಅನುವಾದಕ್ಕೆ ಉದಾಹರಣೆಯನ್ನಾಗಿ ನೀಡುತ್ತೇನೆ. ಈ ಅನುವಾದ ಒರಿಜಿನಲ್ ಗಿಂತ ಚೆಂದವಾಗಿದೆ. ಬಾರ್ಕರ್ ಬರೆದ ಸಾಲುಗಳನ್ನು ವೈಎನ್ಕೆ ಕವನ ರೂಪದಲ್ಲಿ ಅನುವಾದಿಸಿದ್ದು ಸಹ ವಿಶೇಷವೇ.

ಬಾರ್ಕರ್ ಬರೆದಿದ್ದು – When Shakespeare met English language she was a virgin. When he left her she was the mother of half the Universe.

ಇದನ್ನು ವೈಎನ್ಕೆ ಅನುವಾದಿಸಿದ್ದು ಹೀಗೆ : ವಿಲಿಯಂ ಷೇಕ್ಸ್‌ಪಿಯರ್ ಮಹಾ ಅಲೆಮಾರಿ ತಿರುಗಾಟದಲ್ಲಿ ಎದುರಾದಳು ಇಂಗ್ಲಿಷ್,
ಆಗ ಇನ್ನೂ ಕುಮಾರಿ. ಆಟ – ಕಾಟ
ಬೇಟ – ಕೂಟ
ಮುಗಿದ ಮೇಲೆ
ಅವಳಾದಳು
ಅರ್ಧವಿಶ್ವದ ಮಾತೆ
ಆಮೇಲೆ ಎಲ್ಲೂ
ಅವಳ ಮಾತೇ,
ಅವಳ ಮಾತೇ!

ಸಂಶೋಧನೆಗಳ ಬಗ್ಗೆ ಸಂಶೋಧನೆ
ಜಗತ್ತಿನಾದ್ಯಂತ ಸಂಶೋಧನೆಗಳು ನಡೆಯುತ್ತಲೇ ಇರುತ್ತವೆ. ಈ ಸಂಶೋಧನೆಗಳ ಫಲಶ್ರುತಿಗಳನ್ನು ನೋಡಿದರೆ ಯಾರಿಗಾದರೂ ತಲೆಕೆಟ್ಟು ಹೋಗುತ್ತದೆ. ಕೆಲವೊಮ್ಮೆ ಈ ಸಂಶೋಧನೆಗಳನ್ನು ಯಾಕಾದರೂ ಮಾಡುತ್ತಾರೋ ಎಂದು ಅನಿಸುವುದುಂಟು. ಇತ್ತೀಚೆಗೆ ನಾನು ಪತ್ರಿಕೆಯೊಂದರಲ್ಲಿ ಬಂದ ಒಂದು ವರದಿಯನ್ನು ಓದುತ್ತಿದ್ದೆ. ಪ್ರತಿನಿತ್ಯ ಬಿಸಿನೀರು ಸ್ನಾನ ಮಾಡುವುದರಿಂದ ಅಥವಾ ಕನಿಷ್ಠ ವಾರದಲ್ಲಿ ಎರಡು ದಿನ ಬಿಸಿನೀರು ಸ್ನಾನ ಮಾಡುವುದರಿಂದ ದೀರ್ಘಾವಧಿ ಬದುಕುವುದು ಸಾಧ್ಯ ಎಂದು ಒಂದು ಸಂಶೋಧನೆ ಹೇಳಿದೆ.
ಏಕೆಂದರೆ ಅದರಿಂದ ಹೃದ್ರೋಗವನ್ನು ತಡೆಯುವ ಕ್ಷಮತೆ ಶೇ.26-28ರಷ್ಟು ಅಧಿಕವಂತೆ.

ಇನ್ನೊಂದು ಸಂಸ್ಥೆ ಹೊರಡಿಸಿದ ಸಂಶೋಧನಾ ಲೇಖನದ ಪ್ರಕಾರ ರಾತ್ರಿ 7 ಗಂಟೆಗಳ ಕಾಲ ಸುಖ ನಿದ್ರೆ ಮಾಡುವವರು ದೀರ್ಘಾವಧಿ ಬದುಕುತ್ತಾರಂತೆ. ಅದರಲ್ಲಿರುವ ಇನ್ನೊಂದು ಸಂಗತಿಯೆಂದರೆ, ದಿನವಹಿ 8 ಗಂಟೆಗಿಂತ ಹೆಚ್ಚು ಕಾಲ ನಿದ್ರೆ ಮಾಡುವವರು ಮರೆಗುಳಿ ತನದಂಥ ಕಾಯಿಲೆಗೆ ತುತ್ತಾಗುವ ಸಾಧ್ಯತೆಯೂ ಇದೆಯಂತೆ.

ಲಂಡನ್ನಿನ ಕ್ವೀನ್ ಮೇರಿ ಯುನಿವರ್ಸಿಟಿಯವರು ಹಂಗೇರಿಯ ಬುಡಾಪೆಸ್ಟ್ ನಗರದಲ್ಲಿ ನಡೆಸಿದ ಅಧ್ಯಯನದ ಪ್ರಕಾರ, ದಿನವಹಿ ಮೂರು ಕಪ್ ಕಾಫೀ ಕುಡಿಯುವವರಿಗೆ ಹೃದಯರೋಗ ಬರುವ ಸಾಧ್ಯತೆ ಶೇ.17 ಕಡಿಮೆಯಾಗುತ್ತದೆಯಂತೆ ಮತ್ತು ಪಾರ್ಶ್ವವಾಯು ಸಮಸ್ಯೆ
ಶೇ.21ರಷ್ಟು ಕಡಿಮೆಯಾಗುವುದಂತೆ. ಲಂಡನ್ನಿನ ಇಂಪೀರಿಯಲ್ ಕಾಲೇಜು ಮತ್ತು ನ್ಯಾಶನಲ್ ಲಂಗ್ ಎಂಡ್ ಹಾರ್ಟ್ ಸಂಸ್ಥೆ ಜಂಟಿ ಯಾಗಿ ನಡೆಸಿದ ಇನ್ನೊಂದು ಪ್ರಯೋಗದ ಪ್ರಕಾರ, ಚಳಿಜ್ವರದಿಂದ ದೇಹದಲ್ಲಿ ಉತ್ಪನ್ನವಾಗುವ ಶಾಖದ ನೆರವಿನಿಂದ, ಕೋವಿಡ್‌ ನಿಂದ ಸುರಕ್ಷಿತವಾಗಿ ಪಾರಾಗಬಹುದಂತೆ.

ಅಣಬೆ ತಿನ್ನುವವರು 9 ರಿಂದ 20 ವರ್ಷ ಹೆಚ್ಚು ಕಾಲ ಬದುಕುತ್ತಾರಂತೆ. ಇನ್ನೊಂದು ಅಧ್ಯಯನದ ಪ್ರಕಾರ, 80 ವರ್ಷ ಮೇಲ್ಪಟ್ಟ ವಯೋಮಾನದ ವ್ಯಕ್ತಿಗಳು ತಮ್ಮ ಆಹಾರಾಭ್ಯಾಸದಲ್ಲಿ ಸೂಕ್ತ ವ್ಯತ್ಯಾಸಗಳನ್ನು ಮಾಡಿಕೊಂಡದ್ದೇ ಆದರೆ ಅವರು ತಮ್ಮ ಆಯುಸ್ಸಿನಲ್ಲಿ 3-4 ವರ್ಷಗಳ ಹೆಚ್ಚುವರಿ ಬೋನಸ್ ಪಡೆಯುವುದಕ್ಕೆ ಶಕ್ತರಾಗುತ್ತಾರೆ. ಇದರಿಂದ ನಿಮಗೇನಾದರೂ ಅರ್ಥವಾಯಿತಾ? ಇದರಿಂದ
ಯಾರಿಗಾದರೂ ಪ್ರಯೋಜನವಿದೆಯಾ? ಇದಾಗಿ ಕೆಲ ದಿನಗಳಲ್ಲಿ, ಈ ಸಂಶೋಧನೆಗಳೆಲ್ಲವೂ ಸುಳ್ಳು ಎಂದು ಇನ್ನು ಯಾರೋ ಸಂಶೋಧನೆ ಮಾಡುತ್ತಾರೆ. ಆದರೆ ಸಂಶೋಧನೆ ಮಾತ್ರ ನಡೆಯುತ್ತಿರುತ್ತದೆ, ನಡೆಯುತ್ತಿರಲೇಬೇಕು.

ಹೊಸ ಹೊಸ ಸಂಗತಿಗಳು ಬೆಳಕು ಕಾಣಲು ಇದು ಅನಿವಾರ್ಯ. ಇಂದು ನಾವು ಅನುಭವಿಸುವ ಎಲ್ಲವೂ ಸಂಶೋಧನೆಗಳ ಫಲವೇ. ಈ ಸಂಶೋಧನೆಗಳ ಬಗ್ಗೆಯೇ ಯಾರಾದರೂ ಸಂಶೋಧನೆ ಮಾಡಬೇಕು, ಅದು ಮಜಾ ಆಗಿರುತ್ತದೆ. ಬಿಸಾಡದ ಒಂದು ವಸ್ತುವಿದ್ದರೆ ಅದು..
ಪ್ರತಿ ಫೋಟೋವೂ ಒಂದು ಕತೆ ಹೇಳುತ್ತದೆ. ಒಳ್ಳೆಯ ಫೋಟೋಗಳಿರಬಹುದು, ಆದರೆ ಕೆಟ್ಟ ಫೋಟೋ ಎಂಬುದು ಇಲ್ಲವಂತೆ. ಹೀಗಾಗಿ ಯಾವ ಕಾರಣಕ್ಕೂ ಯಾವ ಫೋಟೋವನ್ನು ಬಿಸಾಡಬಾರದಂತೆ.

ಹಳೆಯ ಫೋಟೋ, ಹಳೆಯ ವೈನಿದ್ದಂತೆ. ವರ್ಷಗಳು ಉರುಳಿದಂತೆ ಅದಕ್ಕೆ ಬೇಡಿಕೆ ಜಾಸ್ತಿ. ಇಂದು ತೆಗೆದ ನಿಮ್ಮ ಫೋಟೋವನ್ನು, ಇನ್ನು ಐವತ್ತು ವರ್ಷಗಳ ನಂತರ, ನೀವು ಎಷ್ಟು ಬೆಲೆಗಾದರೂ ಖರೀದಿಸುತ್ತೀರಿ. ಕಾರಣ ಅದರ ಮಹತ್ವವೇನು ಎಂಬುದು ನಿಮಗೆ ಮಾತ್ರ ಗೊತ್ತು. ಯಾವುದೇ ಫೋಟೋವಿರಲಿ, ಅದು ಇತಿಹಾಸದ ಸಾಕ್ಷ್ಯಚಿತ್ರವೂ ಹೌದು. ಹೀಗಾಗಿ ಏನನ್ನಾದರೂ ಬಿಸಾಡಬಹುದು, ಆದರೆ ಫೋಟೋವನ್ನಲ್ಲ. ಅದು ನಿಮ್ಮ ಸಂಗ್ರಹದಲ್ಲಿ, ಅದೆಷ್ಟೇ ಬೇಡವಾದ, ಪ್ರಯೋಜನಕ್ಕಿಲ್ಲದ ಫೋಟೋ ಎಂದು ಪರಿಗಣಿಸಿ ಕಸದ ಬುಟ್ಟಿಗೆ ಹಾಕಲು ನಿರ್ಧರಿಸಿದ ನಂತರವೂ, ಮತ್ತೊಮ್ಮೆ ಯೋಚಿಸಿ, ಎತ್ತಿಟ್ಟುಕೊಳ್ಳಬಹುದಾದದದ್ದೆಂದರೆ, ಫೋಟೋ ಮಾತ್ರ ! ನನ್ನ ಸಂಗ್ರಹವನ್ನು ಆರು ತಿಂಗಳಿಗೊಮ್ಮೆ ಕಡತಯಜ್ಞಕ್ಕೆ ಒಳಪಡಿಸುತ್ತೇನೆ.

ಪ್ರಯೋಜನಕ್ಕೆ ಬರಲಿಕ್ಕಿಲ್ಲವೆಂದು ಕೆಲವು ಫೋಟೋಗಳನ್ನಾದರೂ ಬಿಸಾಡಬೇಕೆಂದು ನಿರ್ಧರಿಸಿ ಪುನಃ ಎತ್ತಿಟ್ಟುಕೊಳ್ಳುತ್ತೇನೆ. ಏನೇ ಆದರೂ ಅವನ್ನು ಬಿಸಾಡಲು ಮನಸ್ಸು ಬರುವುದಿಲ್ಲ. ಕತ್ತು ಹಿಚುಕಿ ಸಾಯಿಸುತ್ತಿದ್ದಾನಾ ಎಂಬ ಅಪರಾಧಪ್ರಜ್ಞೆ ಕಾಡತೊಡಗುತ್ತದೆ. ಕಾರಣ ಪ್ರತಿ ಫೊಟೋಕ್ಕೂ ಜೀವವಿದೆ. ಅದರಲ್ಲಿರುವ ವ್ಯಕ್ತಿಗಳು ಸತ್ತಿರಬಹುದು. ಆದರೆ ಅವರು ಫೋಟೋದಲ್ಲಿ ಜೀವಂತವಾಗಿರುತ್ತಾರೆ, ಏನೋ ಒಂದು ಕತೆ ಹೇಳುತ್ತಿರುತ್ತಾರೆ. ನಾವು ever young ಆಗಿರುವುದು ಅಲ್ಲಿ ಮಾತ್ರ. ಗತಿಸಿಹೋದ ದಿನಗಳಿಗೆ ರಿವರ್ಸ್
ಗಿಯರಿ ನಲ್ಲಿ ವಾಪಸ್ ಹೋಗುವುದು ಸಾಧ್ಯವಿದ್ದರೆ, ಅದು ಫೋಟೋದಲ್ಲಿ ಮಾತ್ರ.