ದಾಸ್ ಕ್ಯಾಪಿಟಲ್
ಟಿ.ದೇವಿದಾಸ್
dascapital1205@gmail.com
ಕೇವಲ ಇಂಗ್ಲಿಷಿನ ಹೊಡೆತ ಮಾತ್ರವಲ್ಲ, ನಮ್ಮಲ್ಲಿರುವ ಭಾಷಾ ತಿರಸ್ಕಾರ, ನಿರ್ಲಕ್ಷ್ಯ ಮನೋಭಾವದಿಂದಲೂ ಕನ್ನಡಕ್ಕೆ ಹೊಡೆತ ಬಿದ್ದು ಕ್ಷೀಣಿಸಿದೆ. ಇಂಗ್ಲಿಷನ್ನು ಕಲಿಸಲು ವಹಿಸುವ ಎಚ್ಚರದಷ್ಟೇ ಎಚ್ಚರದಿಂದ ಕನ್ನಡವನ್ನು ಕಲಿಸಿದರೆ ಈಗಲೂ ಕನ್ನಡ ಸಶಕ್ತವಾಗುತ್ತದೆಂಬುದು ಯಾರಿಗೆ ಗೊತ್ತಿಲ್ಲ ಹೇಳಿ?
ಎಲ್ಲೂ ಇಂಗ್ಲಿಷಿನ ಹುಚ್ಚು ಹೆಚ್ಚಾಗಿ ಆಂಗ್ಲ ಮಾಧ್ಯಮ ಶಾಲೆಗಳು ಊರು ಊರಿಗೆ ಹುಟ್ಟಿಕೊಂಡು ವರ್ಷಗಳೇ ಸಂದಿವೆ. ಹಾಗಂತ ತೀರಾ ಇತ್ತೀಚಿನ ವರ್ಷದ ವರೆಗೂ ಇಂಥ ವಾತಾವರಣ ಇರಲಿಲ್ಲ. ಆದರೆ, ಯಾವಾಗ ಶಿಕ್ಷಣದಲ್ಲಿ ಕಾರ್ಪೋರೇಟ್ ಪ್ರಪಂಚ ಕಾಲಿಟ್ಟಿತೋ, ಎಂದು ಶಿಕ್ಷಣ ವ್ಯಾಪಾರದ ಸರಕಾಯಿತೋ ಅಂದಿನಿಂದ ದೇಶೀ ಭಾಷೆಗಳು ಅಸ್ತಿತ್ವವನ್ನು ಕಳೆದುಕೊಳ್ಳಲು ಆರಂಭಿಸಿದವು.
ಸುಲಲಿತವಾಗಿ, ಸುಲಭವಾಗಿ, ನಿರರ್ಗಳವಾಗಿ ಮಾತೃಭಾಷೆಯನ್ನು ಆಡುವ ನಾಲಗೆಯಲ್ಲಿ ಇಂಗ್ಲಿಷನ್ನು ಮಾತ ನಾಡಲು ಆರಂಭಿಸಿದೆವು. ಇದೊಂದು ಹುನ್ನಾರ ವೆಂಬುದು ಇನ್ನೂ ಅರ್ಥವಾಗಲೇ ಇಲ್ಲ. ಇದು ಕಾಲೋನಿಯಲ್ ಮೈಂಡ್ ಸೆಟ್ಟಿಗೆ ನಮ್ಮನ್ನು ಅಣಿಗೊಳಿಸುತ್ತದೆ. Of course ಇಂಗ್ಲಿಷ್ ಮಾಧ್ಯಮದಲ್ಲಿ ಕಲಿತವರೆಲ್ಲರೂ ಕಾಲೋನಿಯಲ್ ಮೈಂಡ್ ಸೆಟ್ಟಿನವರು ಎಂದಲ್ಲ. ಹಿಂದೆ ಅನೇಕರು ಆಂಗ್ಲ ಮಾಧ್ಯಮದಲ್ಲಿ ಓದಿದವರಿದ್ದಾರೆ. ಆದರೆ ಅವರಾರೂ ಮಾತೃಭಾಷೆ ಯನ್ನಾಗಲೀ, ಸಂಸ್ಕೃತಿ-ಸಂಸ್ಕಾರವನ್ನಾಗಲೀ ಬಿಡಲಿಲ್ಲ.
ಕಾರಣ ಆ ಕಾಲ ಹಾಗಿತ್ತು. ಇಂಗ್ಲಿಷನ್ನು ನಿತ್ಯದ ಬದುಕಿನೊಳಗೆ ಬಿಟ್ಟುಕೊಟ್ಟಿರದ ಕಾಲದಲ್ಲಿ ಆಂಗ್ಲ ಮಾಧ್ಯಮದಲ್ಲಿ ಓದಿದವರೆಲ್ಲರೂ ಕನ್ನಡವನ್ನು ಚೆನ್ನಾಗಿ ಬಲ್ಲವರಾಗಿದ್ದರು. ಕನ್ನಡ ಸಾಹಿತ್ಯವನ್ನು ಓದಿದವರಾಗಿದ್ದರು. ಕನ್ನಡ ಅವರ ಬದುಕಾಗಿತ್ತು. ವ್ಯವಹಾರಕ್ಕಾಗಿ ಮಾತ್ರ ಬಳಸಿದ್ದರಿಂದ ಇಂಗ್ಲಿಷ್ ಯಾವ ಪರಿ ಣಾಮವನ್ನೂ ಬೀರಲಿಲ್ಲ. ಅಂಥವರು ಈಗಲೂ ಇಂಗ್ಲಿಷನ್ನು ಎಷ್ಟು ಬೇಕೋ ಅಷ್ಟು ಮಾತ್ರಕ್ಕೆ ಆತುಕೊಂಡೇ ಬದುಕು ತ್ತಿದ್ದಾರೆ. ಅವರಲ್ಲಿ ಎಡಪಂಥೀಯರೂ, ಬಲಪಂಥೀಯರೂ ಇದ್ದಾರೆ. ದೇಶೀಯತೆ ಅವರಲ್ಲಿ ಸಾಯಲಿಲ್ಲ. ಅಥವಾ ಸಾಯಗೊಡದಂತೆ ಅವರು ಜತನವಾಗಿದ್ದಾರೆ.
ಗ್ರಹಿಸಬೇಕಾದ ಸಂಗತಿಯೊಂದಿದೆ: ಅವರಲ್ಲಿ ಹೆಚ್ಚಿನವರ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಮಾತೃಭಾಷೆಯ ನಡೆದಿದೆಯೆಂಬುದು! ಮುಖ್ಯವಾಗಿ ಮಾಧ್ಯಮ, ಸಾಹಿತ್ಯ, ಸಂಗೀತ, ವಿಜ್ಞಾನ, ರಾಜಕೀಯ ಕ್ಷೇತ್ರಗಳಲ್ಲಿ ಅಂಥವರು ಜನಪ್ರಸಿದ್ಧರಾಗಿದ್ದಾರೆ. ಹಿರಿಯರು ನಡೆಸಿದ ನಿತ್ಯದ ಬದುಕಿನ ಹಾದಿಯ ಅವರೂ
ಚಾಚೂ ತಪ್ಪದೇ ನಿತ್ಯದ ಬದುಕನ್ನು ಪರಂಪರೆಯಲ್ಲಿ ಕ್ರಮಿಸಿದ್ದರಿಂದ ಆಂಗ್ಲ ಭಾಷೆ ತನ್ನ ಯಾವ ಪ್ರಭಾವವನ್ನೂ ಅವರ ಮೇಲೆ ಬೀರಲಿಲ್ಲ. ಆದರೆ ಈಗ ಕಾಲ ಬದಲಾಗಿದೆ. ನಮ್ಮ ಹಿರಿಯರ ಕಾಲದಲ್ಲಿ ನಾವು ಬದುಕಿದಂತೆ ನಮ್ಮ ಹಿರಿತನದಲ್ಲಿ ನಮ್ಮ ಮಕ್ಕಳು ಬದುಕುತ್ತಿಲ್ಲ. ನಾವು ಬದುಕಗೊಡುತ್ತಿಲ್ಲ.
ಮುಖ್ಯವಾಗಿ, ಕಲಿಕಾ ಮಾಧ್ಯಮದ ಆಯ್ಕೆಯ ವಿಚಾರದಲ್ಲಿ ಕಣ್ಮುಚ್ಚಿ ಆಂಗ್ಲ ಮಾಧ್ಯಮಕ್ಕೆ ಸೇರಿಸಿ ಬಿಡುವ ನಾವು ನಮ್ಮ ಮಕ್ಕಳನ್ನು ಬಾಲ್ಯದಿಂದಲೇ ಭಾಷಾ ವೈಕಲ್ಯರಾಗಿಸುತ್ತಿದ್ದೇವೆ. ಸಂಸ್ಕಾರ, ಪರಂಪರೆ, ಸಂಸ್ಕೃತಿಯಿಂದ ದೂರಗೊಳಿಸುತ್ತಿದ್ದೇವೆ. ಹೊರಗಿಂದ ನೋಡಲು ಚೆನ್ನಾಗಿ ಕಾಣುವ ಆಂಗ್ಲ ಮಾಧ್ಯಮದ ಶಾಲೆಗಳನ್ನು ಹುಡುಕಿಕೊಂಡು ಹೋಗಿ ಎಷ್ಟೇ ದುಬಾರಿಯ ಫೀಸಿದ್ದರೂ ಸೇರಿಸುವ ಪೋಷಕರಿಗೆ ಕೇವಲ ಇಂಗ್ಲಿಷನ್ನೇ ಕಲಿತರೆ ಸಾಕೆಂಬ ಮನಸ್ಥಿತಿ ಬೆಳೆದು ಕನ್ನಡ ಅನ್ನವನ್ನು ಹುಟ್ಟಿಸಲಾರದೆಂಬ ಧೋರಣೆಯನ್ನು ಬೆಳೆಸಿದೆ.
ಇದರ ಪ್ರಭಾವದಿಂದ, ಪ್ರಾಥಮಿಕ ಹಂತದಿಂದಲೇ ಕನ್ನಡ ಮೈಲಿಗೆಯಾಗಿದೆ. ಕನ್ನಡಮಾತೆ ಮುಟ್ಟಾದವಳಂತೆ ಮೈಲಿಗೆಗೊಂಡಿದ್ದಾಳೆ. ಕನ್ನಡ ಮಾತನಾಡು ವುದು, ಕೇಳುವುದು, ಬರೆಯುವುದು ಎಂದರೆ ನಖಶಿಖಾಂತ ಉರಿದು ಹೋಗುವ ಪೋಷಕರು ಪರೀಕ್ಷೆಯಲ್ಲಿ ಕೇವಲ ಪಾಸಾಗಲು ಮೂವತ್ತೋ ಮೂವತ್ತೈದೋ ಅಂಕಗಳು ಬಂದರೆ ಸಾಕೆಂದೇ ಭಾವಿಸಿ ವರ್ಷಗಳು ಸಂದಿವೆ. ಈ ಮನೋಭಾವದಿಂದ ಎಲ್ಲ ಭಾರತೀಯ ಭಾಷೆಗಳು ಇಂಗ್ಲಿಷಿನ ಹೊಡೆತಕ್ಕೆ ಕ್ಷೀಣಿಸಿದೆ.
ಕೇವಲ ಇಂಗ್ಲಿಷಿನ ಹೊಡೆತ ಮಾತ್ರವಲ್ಲ, ನಮ್ಮಲ್ಲಿರುವ ಭಾಷಾ ತಿರಸ್ಕಾರ, ನಿರ್ಲಕ್ಷ್ಯ ಮನೋಭಾವದಿಂದಲೂ ಕನ್ನಡಕ್ಕೆ ಹೊಡೆತ ಬಿದ್ದು ಕ್ಷೀಣಿಸಿದೆ. ಇಂಗ್ಲಿಷನ್ನು ಕಲಿಸಲು ವಹಿಸುವ ಎಚ್ಚರದಷ್ಟೇ ಎಚ್ಚರದಿಂದ ಕನ್ನಡವನ್ನು ಕಲಿಸಿದರೆ ಈಗಲೂ ಕನ್ನಡ ಸಶಕ್ತವಾಗುತ್ತದೆಂಬುದು ಯಾರಿಗೆ ಗೊತ್ತಿಲ್ಲ ಹೇಳಿ? ಕನ್ನಡ ಬೋಽಸುವವರಿಗೂ ಕನ್ನಡ ಬೇಡಾಗಿದೆ.
ಕನ್ನಡದ ಬಗ್ಗೆ ಅಷ್ಟೊಂದು ಆಸಕ್ತಿ, ಅಭಿರುಚಿಯಿಲ್ಲದ ಶಿಕ್ಷಕರು ಎಂಥಾ ಪಾಠ ಮಾಡಿಯಾರು? ಕನ್ನಡ ಸಾಹಿತ್ಯವನ್ನು ಓದುವುದಿಲ್ಲ. ಪ್ರಕಟಣೆಯಾಗುವ ಹೊಸ ಪುಸ್ತಕಗಳ ಕಿಂಚಿತ್ತೂ ಪರಿಚಯವಿಲ್ಲ. ಹಳೆಯದಾಗಲಿ, ಹೊಸ ಲೇಖಕರ ಪರಿಚಯವಂತೂ ಇಲ್ಲವೇ ಇಲ್ಲ. ಪತ್ರಿಕೆಗಳ ಪುಟ ತಿರುವಿ ಹಾಕುವ ಅಭ್ಯಾಸವಿಲ್ಲ. ಮಕ್ಕಳಿಗೆ ತರಗತಿಯಲ್ಲಿ ಹಳೆಯ ಮತ್ತು ಹೊಸ ಪುಸ್ತಕಗಳ ಪರಿಚಯ ಮಾಡುವುದಿಲ್ಲ. ವೃತ್ತಿಗೆ ಸೇರುವಾಗಿನ ಜ್ಞಾನದ ವೃತ್ತಿ ಮುಗಿಸುವವರಲ್ಲಿ ಸೃಷ್ಟಿಶೀಲತೆ ಹೇಗೆ ಹುಟ್ಟಿಕೊಂಡೀತು? ಸೃಜನಶೀಲತೆ ಹೇಗೆ ಹೊಳೆದೀತು? ಹೋಗಲಿ, ಕೊನೆಪಕ್ಷ ವೃತ್ತಿಯಲ್ಲಿ ಕಮಿಟೆಡ್ ಆಗಿರಬೇಕೆಂಬ ಮನೋಭಾವವೂ ಇಲ್ಲ. ತಾನು ಬೋಽಸುವ ಭಾಷೆಯ ಬಗ್ಗೆ ತೀರಾ ಎಂಬಷ್ಟು ಅಲ್ಲದಿದ್ದರೂ ಒಂದು ಪ್ರಮಾಣದವರೆಗಿನ ಜ್ಞಾನ ಇರಲೇಬೇಕಾಗುತ್ತದೆ.
ಒಂದು ಭಾಷೆಯನ್ನು ಕಲಿಯುವುದಕ್ಕೂ, ಭಾಷೆಯ ಬಗೆಗೆ ತಿಳಿಯುವುದಕ್ಕೂ ಭಾಷೆಯ ಮೂಲಕ ಕಲಿಯುವುದಕ್ಕೂ ಹಲವು ವ್ಯತ್ಯಾಸಗಳಿವೆ. ಈ ಹಿನ್ನೆಲೆಯಲ್ಲಿ ಕನ್ನಡ ಪ್ರೇಮ- ಇಂಗ್ಲಿಷ್ ವಿರೋಧವನ್ನು ಅರ್ಥೈಸಬೇಕು. ಕನ್ನಡವನ್ನು ಬೋಧಿಸುವ ಕನ್ನಡ ಅಧ್ಯಾಪಕರು ಬೋಧನೆಯ ಸಂದರ್ಭದಲ್ಲಿ ಕಷ್ಟವನ್ನು ಅನುಭವಿಸ ಬೇಕು. ಪದಗಳ ಅರ್ಥ, ವಾಕ್ಯರಚನೆ, ರೂಪನಿಷ್ಪತ್ತಿ, ಭಾಷೆ ಮತ್ತು ವ್ಯಾಕರಣ ಸಂಬಂಧ, ವಸ್ತು ವಿಷಯಗಳ ನಿರೂಪಣೆಯಲ್ಲಿ ಆಸಕ್ತಿ ಮತ್ತು ಕುತೂಹಲ ಇರುವುದೇ ಅಂಥ ಸಂದರ್ಭಗಳಲ್ಲಿ. ಅದೇ ಇಲ್ಲದೇ ಹೋದರೆ ಇದ್ದ ಜ್ಞಾನದ ಪಾಠ ಬೋಧನೆ ಮುಗಿದು ಬಿಡುತ್ತದೆ. ಈ ಗೊತ್ತಿಲ್ಲ ಎಂಬುದು ಪರಮ ಜ್ಞಾನದ
ಸಂಕೇತವೂ ಅಹುದು. ಅeನದ ಸಂಕೇತವೂ ಅಹುದು.
ಆದರೆ, ಗೊತ್ತಿಲ್ಲ ಎಂಬುದು ಗೊತ್ತು ಮಾಡಿಕೊಳ್ಳುವುದಕ್ಕೆ ಹೇತುವಾಗುತ್ತದೆ. ಕೊನೆಯ ಪಕ್ಷ ಗೊತ್ತಿಲ್ಲ ಎಂಬುದಾದರೂ ಗೊತ್ತಾಗಬೇಕು. ಪಾಠಾಂಶಗಳನ್ನು ಬೋಽಸುವುದು ಪ್ರಧಾನವೆಂದೇ ಭಾವಿಸಿದರೂ ಭಾಷೆಯನ್ನು ಕಲಿಸುವುದು ಕನ್ನಡದಂಥ ಒಂದು ಭಾಷೆಯ ಜೀವ ಮತ್ತು ಜೀವಂತಿಕೆಯನ್ನು ಉಳಿಸಿ ಮುಂದಿನ ತಲೆಮಾರಿಗೆ ವರ್ಗಾಯಿಸುವ ಹೊಣೆಯೂ ತರಗತಿಯಲ್ಲಿ ನಡೆಯುತ್ತದೆ. ಈ ವರ್ಗಾಯಿಸುವ ಪ್ರಕ್ರಿಯೆ ನಿರಂತರವಾಗಿ ನಡೆಯುವಂಥದ್ದು. ಕೇವಲ ಸಂವಹನ ಕ್ಕಷ್ಟೇ ಭಾಷೆಯಲ್ಲ, ನುಡಿಯಲ್ಲಿರುವಂತೆಯೂ ನಡೆಯಲ್ಲಿಯೂ ಭಾಷೆಯಿದೆ. ಮನುಷ್ಯ ಮೌನದಲ್ಲೂ ಸಂವಹನ ನಡೆಸುವಷ್ಟು ವಿಕಾಸವನ್ನು ಹೊಂದಿದ ಜೀವಿ ಯಾಗಿದ್ದಾನೆ.
ನಿತ್ಯದ ಬದುಕಿಗೆ ಮಾತ್ರ ಭಾಷೆಯನ್ನು ಬಳಸುವುದು ಮಾತ್ರವಲ್ಲದೇ ಸಾಹಿತ್ಯವನ್ನು ಓದುವಷ್ಟು ಜ್ಞಾನ ಪರಿಜ್ಞಾನ ಶಿಷ್ಟ ಭಾಷೆಯ ಕಲಿಕೆಯ ಮೂಲಕವೇ ಆಗಬೇಕು. ಮಕ್ಕಳು ಆ ಹಾದಿಯ ಸಾಗಬೇಕಿದೆ. ಮುಖ್ಯವಾಗಿ ನಾವು ಸಾಗಿಸಬೇಕಿದೆ. ಇದು ಒಂದು ದಿನಕ್ಕೋ ತಿಂಗಳಿಗೋ ವರ್ಷಕ್ಕೋ ಆಗುವಂಥ ಕಾರ್ಯವಲ್ಲ, ಅನೂಚಾನವಾಗಿ ಆಗುವಂಥದ್ದು. ಕೇವಲ ಒಬ್ಬನಿಂದ ಆಗುವಂಥದ್ದಲ್ಲ. ಎಲ್ಲರೂ ಸೇರಿ ಮಾಡಬೇಕಾದ ಕಾರ್ಯವಿದು.
ಮಾತೃಭಾಷಾ ಬೋಧನೆಯ ಮುಖ್ಯ ಉದ್ದೇಶವೇ ದೇಶೀ ಸಂಸ್ಕೃತಿಯನ್ನು ಉಳಿಸಿಕೊಳ್ಳುವುದು. ಬುದ್ಧಿ- ಭಾವಗಳನ್ನು ವಿಕಸನಗೊಳಿಸುವುದು. ಸೃಷ್ಟಿಶೀಲತೆ ಯನ್ನು ಬೆಳೆಸುವುದು. ಪ್ರತಿಯೊಂದು ಮಗುವಿನ ಬುದ್ಧಿ ವಿಕಾಸ ಭಾವಪ್ರಕಾಶದ ದೃಷ್ಟಿಯಿಂದ ಮಾತೃಭಾಷೆಯ ಬೋಧನೆಯಾಗಬೇಕು. ಯಾಕೆಂದರೆ ಭಾಷೆ ಯೆಂದರೆ, ಸಾಂಸ್ಕೃತಿಕ ಅನುಭವ. ಕನ್ನಡ ಮೈಲಿಗೆಯಾದರೆ ಕನ್ನಡ ಸಂಸ್ಕೃತಿಯೂ ನಾಶವಾದಂತೆ. ಆದ್ದರಿಂದ ಕನ್ನಡ ಮೈಲಿಗೆಯಾಗ ದಂತೆ ಉಳಿಸಿಕೊಳ್ಳ ಬೇಕಿದೆ. ಸಂಸ್ಕೃತಿಯನ್ನು ಮುಂದಿನ ಜನಾಂಗಕ್ಕೆ ರವಾನಿಸುವ ದೃಷ್ಟಿಯಿಂದ ಮಾತೃಭಾಷೆಯ ಬೋಧನೆಯಾಗಬೇಕು. ಈ ಹಿನ್ನೆಲೆಯಲ್ಲಿ ಕನ್ನಡದ ಬೋಧನೆ ಗಿಂತ ಕನ್ನಡದಲ್ಲಿ ಬೋಧನೆಯಾಗಬೇಕಾದ ಅಗತ್ಯ, ಅನಿವಾರ್ಯತೆ ಅತ್ಯವಶ್ಯವಾಗಿದೆ.