Wednesday, 11th December 2024

ಎಂದೆಂದೂ ಕನ್ನಡವೇ ನಮ್ಮ ಉಸಿಗಾಗಿರಲಿ !

ಯಶೋ ಬೆಳಗು

yashomathy@gmail.com

ನವಮೌಲ್ಯಗಳ ಶೋಧನೆಯ ನವೋದಯದ ಕಾಲದಲ್ಲಿ ಕಾಣಿಸಿಕೊಂಡ ಬೌದ್ಧಿಕ ಜಾಗೃತಿಯು ರಾಷ್ಟ್ರೀಯತೆಯ ಜತೆಗೆ ಅದಕ್ಕೆ ಪೂರಕವಾದ ಕರ್ನಾಟಕತ್ವದ ಜಾಗೃತಿಗೂ ಕಾರಣವಾಗಿತ್ತು. ಕರ್ನಾಟಕದ ಇತಿಹಾಸದ ಬಗೆಗಿನ ಪುಸ್ತಕಗಳು ಏಕೀಕರಣದ ಅವಶ್ಯಕತೆಯನ್ನು ಮನವರಿಕೆ ಮಾಡಿಕೊಡುವಲ್ಲಿ ಯಶಸ್ವಿಯಾದವು.

ಭಾಷೆಯೆಂಬುದು ನದಿಯಂತೆ, ವ್ಯಾಕರಣವೆಂಬುದು ಅದಕ್ಕೆ ಅಡ್ಡಲಾಗಿ ಕಟ್ಟುವ ಅಣೆಕಟ್ಟಿನಂತೆ ಎಂದು ಹೇಳುತ್ತಾರೆ. ಭಾಷೆ ಯಾವುದೇ ಅಡೆತಡೆಯಿಲ್ಲದೆ ಸಂವಹನಕ್ಕೆ ಸ್ವತಂತ್ರವಾಗಿ ಬಳಸುವ ಒಂದು ಸಾಧನವಾಗಿದೆ. ಸಂಜ್ಞೆಗಳಿಂದಲೂ, ಆಂಗಿಕ ವಾಗಿಯೂ, ಶಬ್ದಗಳಿಂದಲೂ ಭಾವನೆಗಳನ್ನು ವ್ಯಕ್ತಪಡಿಸಬಹುದಾಗಿದೆ.

ಮಗುವಿನ ಮೊದಲ ಭಾಷೆ ಅಳುವೇ ಅಲ್ಲವೇ? ಬಲ್ಲವರೇ ಬಲ್ಲರು ಹರೆಯದ ಕಣ್ಣಭಾಷೆಯ ಸೂಚನೆಯನ್ನು. ದುಃಖದ ಭಾಷೆಯಾಗಿ ಕಣ್ಣೀರು ಧಾರೆಯಾದರೆ, ಗೃಹಿಣಿಯ ಅಸಹನೆಯ ಭಾಷೆಯ ಪ್ರತೀಕವಾಗಿದೆ ಅಡುಗೆಮನೆಯಲ್ಲಿ ಮೂಡುವ ಪಾತ್ರೆಗಳ ಸದ್ದು. ಸೇಡು ದಹಿಸುವ ಭಾಷೆಯಾದರೆ, ಪ್ರೀತಿ ಬದುಕಿನ ಭಾಷೆ. ಮಮತೆ-ವಾತ್ಸಲ್ಯ ಅಮ್ಮನ ಭಾಷೆ. ಮೌನ ಸಮ್ಮತಿಯ ಭಾಷೆ. ಶಾಂತಿಯ ಭಾಷೆ ಸಹನೆಯಾದರೆ, ನಗುವೇ ಸ್ನೇಹದ ಭಾಷೆ. ಚೆಲುವು ಹೆಣ್ಣಿನ ಭಾಷೆಯಾದರೆ, ಆಳುವ ಭಾಷೆ ಗಂಡಿನದ್ದು.

ಪ್ರತಿಯೊಂದು ಜೀವಿಗೂ ಅದರದೇ ಆದ ಭಾಷೆಯ ಸೊಗಸಿದೆ. ಮನೆಯ ಮೇಲೆ ಕೂಗಿ ಕರೆಯುವ ಕಾಗೆಯ zಂದಾದರೆ, ಕಾಡಲಿ ಘರ್ಜಿಸುವ ಹುಲಿಯದ್ದು ಮತ್ತೊಂದು, ನೀರಲ್ಲಿ ಮಿಂದೇಳುವ ಆಮೆ, ಮೀನು, ಮೊಸಳೆಗಳ ಭಾಷೆಯನ್ನು ಬಲ್ಲವ ರಾರು? ಮಳೆಯ ದೊಂದು ಭಾಷೆಯಾದರೆ, ಸಿಡಿಲಿನದೊಂದು ಭಾಷೆ. ಗಾಳಿಯದ್ದೊಂದು ಭಾಷೆಯಾದರೆ, ನೀರಿನದ್ದೊಂದು ಭಾಷೆ. ದುಂಬಿಗೆ ಝೇಂಕಾರದ ಭಾಷೆಯಾದರೆ, ಹೂವಿಗೆ ಪರಿಮಳದ ಭಾಷೆ. ಶಕ್ತಿಗೊಂದು ಭಾಷೆ. ಯುಕ್ತಿಗೊಂದು ಭಾಷೆ. ಅವರವರು ನಂಬಿದ ದೇವರುಗಳಿಗೆ ಅವರವರದ್ದೇ ಭಾಷೆ. ಭಾಷೆ ಹಲವು ಭಾವ ಒಂದೇ!

ನವೆಂಬರ್ ೧ ಎಂದರೆ ಕರ್ನಾಟಕದೆಡೆ ನಾಡಹಬ್ಬದ ಸಂಭ್ರಮ! ಕನ್ನಡ ಭಾಷೆ ಕಾಲದಿಂದ ಕಾಲಕ್ಕೆ ರೂಪಾಂತರಗೊಳ್ಳುತ್ತ, ನವೀಕರಣಗೊಳ್ಳುತ್ತ ಎಲ್ಲ ಸ್ಥಿತ್ಯಂತರಗಳನ್ನೂ ದಾಟಿ ಇಂದು ಇಷ್ಟರ ಮಟ್ಟಿಗೆ ಉಳಿದುಕೊಂಡಿದೆ. ಕನ್ನಡವೆಂದರೆ ಕೇವಲ ಒಂದು ವರ್ಗಕ್ಕೆ, ಒಂದು ಪ್ರಾಂತ್ಯಕ್ಕೆ ಸೀಮಿತವಾದ ಭಾಷೆಯಲ್ಲ. ಕೇವಲ ಪಠ್ಯಪುಸ್ತಕದ ಭಾಷೆಯಲ್ಲ, ವ್ಯಾಕರಣ ತುಂಬಿದ ಗ್ರಂಥವಲ್ಲ. ಪ್ರತಿಯೊಬ್ಬ ಕನ್ನಡಿಗನ ರಕ್ತದಲ್ಲೂ ಆಳವಾಗಿ ಬೇರೂರಿರುವ ಭಾಷೆ.

ಅದನ್ನು ಉಳಿಸಿ, ಬೆಳೆಸುತ್ತ ಮುಂದಿನ ಪೀಳಿಗೆಗೆ ಸುರಕ್ಷತೆಯಿಂದ ದಾಟಿಸುವುದು ನಮ್ಮ-ನಿಮ್ಮೆಲ್ಲರ ಕರ್ತವ್ಯ. ಹಾಗೆಯೇ ಸಾಧ್ಯವಾದಷ್ಟೂ ಅದರ ಇತಿಹಾಸವನ್ನೂ ಅರಿಯುವ ಪ್ರಜ್ಞೆ ಎಲ್ಲರಲ್ಲಿ ಮೂಡಿಸುವ ಅಗತ್ಯವೂ ಸಾಕಷ್ಟಿದೆ. ಕನ್ನಡ ಪ್ರೇಮ ವೆಂದರೆ ಅನ್ಯಭಾಷೆಯ ದ್ವೇಷವೆಂದರ್ಥವಲ್ಲ. ಆದರೆ ಕರ್ನಾಟಕದಲ್ಲಿ ಪ್ರಥಮ ಆದ್ಯತೆ ಕನ್ನಡಕ್ಕೆ! ನಂತರ ಉಳಿದದ್ದು ಅನ್ನುವ ಮನೋಭಾವನೆ ಎಲ್ಲರಲ್ಲಿ ಮೂಡಿದರೆ ಅಷ್ಟರ ಮಟ್ಟಿಗೆ ಕನ್ನಡ ಉಳಿಯುತ್ತದೆ. ಹಾಗೆಯೇ ಕನ್ನಡ ಕೇವಲ ಕನ್ನಡಿಗರಿಂದ ಮಾತ್ರ ಬೆಳೆದಿಲ್ಲ.

ನಿತ್ಯೋತ್ಸವದ ಕವಿ, ವರಕವಿಗಳಂಥ ಅನ್ಯಭಾಷೆಯ ಅನೇಕ ಜ್ಞಾನವಂತರಿಂದಲೂ ಕನ್ನಡ ಭಾಷೆ ಸಾಕಷ್ಟು ಶ್ರೀಮಂತ ಗೊಂಡಿದೆ ಅನ್ನುವುದನ್ನೂ ಮರೆಯುವಂತಿಲ್ಲ. ಅದರೆಡೆಗೆ ಗೌರವಪೂರಿತ ಮೆಚ್ಚುಗೆಯನ್ನು ವ್ಯಕ್ತಪಡಿಸೋಣ. ಚರಿತ್ರೆಯ ಪುಟಗಳನ್ನು ತಿರುವಿಹಾಕಿದಾಗ ತಿಳಿದದ್ದು ಕರ್ನಾಟಕ ಎಂಬ ಶಬ್ದದ ಉಲ್ಲೇಖ ಕ್ರಿ.ಪೂ. ೩-೪ನೇ ಶತಮಾನದಲ್ಲಿದ್ದ ಪಾಣಿನಿಯ ಸಂಸ್ಕೃತ ವ್ಯಾಕರಣ ಗ್ರಂಥ ದಲ್ಲಿ ಕಂಡುಬರುತ್ತದೆ. ಅದರಲ್ಲಿ ಆತನು ಕರ್ಣಾಟಕ ಎಂಬ ಒಂದು ಗೋತ್ರದ ಜನರ ವಿಚಾರವನ್ನು ಉಲ್ಲೇಖಿಸಿದ್ದಾನೆ. ಆದರೆ ಒಂದು ಪ್ರದೇಶವಾಗಿ ಈ ಶಬ್ದದ ಮೊದಲ ಉಲ್ಲೇಖ ದೊರೆಯುವುದು ಮಹಾ ಭಾರತದ ಭೀಷ್ಮಪರ್ವದಲ್ಲಿ.

ಆದರೆ ಈ ಕರ್ನಾಟಕ ಎಂಬ ಶಬ್ದ ಮಹಾಭಾರತದ ಕುಂಭಕೋಣಂ ಆವೃತ್ತಿಯಲ್ಲಷ್ಟೇ ಇದೆ. ಪುಣೆ ಆವೃತ್ತಿಯಲ್ಲಿ ಕುಂತಳ ಅಥವಾ ಉನ್ನತ್ಯಕ ಎಂಬ ಶಬ್ದ ಕರ್ಣಾಟಕಕ್ಕೆ ಪರ್ಯಾಯವಾಗಿ ಬಳಕೆಯಾಗಿದೆ. ಉನ್ನತ್ಯಕ ಎಂದರೆ ಎತ್ತರದ ನೆಲ ಎಂಬ ಅರ್ಥವಿದೆ. ಅಲ್ಲದೆ ಪ್ರಾಚೀನ ಸಂಸ್ಕೃತ ಕೃತಿಗಳಾದ ‘ಮಾರ್ಕಂಡೇಯ ಪುರಾಣ’, ಭಾಗವತ ಮತ್ತು ವರಾಹಮಿಹಿರನ ‘ಬೃಹತ್ ಸಂಹಿತಾ’ದಲ್ಲಿ ಕರ್ಣಾಟಕವು ಪ್ರಮುಖವಾಗಿ ಉಲ್ಲೇಖಿತವಾಗಿದೆ.

‘ಕವಿರಾಜಮಾರ್ಗ’ದಲ್ಲಿ ಬರುವ ‘ಕಾವೇರಿಯಿಂದಮಾ ಗೋದಾವರಿವರಮಿರ್ದ ನಾಡದಾ ಕನ್ನಡ’ ಎಂಬ ಮಾತನ್ನು
ಆಧರಿಸಿ ಕನ್ನಡ ಎಂಬುದೇ ಮೂಲತಃ ಈ ನಾಡಿನ ಹೆಸರಾಗಿದ್ದು ಅದೇ ಸಂಸ್ಕೃತದಲ್ಲಿ ‘ಕರ್ಣಾಟ’ ಆಯಿತು ಎಂಬ ಹೇಳಿಕೆ ಯಿದೆ. ಹಾಗೆಯೇ ಕಮ್+ನಾಡು ಕಮ್ಮಿತ್ತು ನಾಡು ಎಂದರೆ ಸುವಾಸನೆಯ ಪ್ರದೇಶ. ಕರ್ನಾಟಕವು ಶ್ರೀಗಂಧ ವೃಕ್ಷಗಳಿಂದ ತುಂಬಿದ್ದು ಇಲ್ಲಿನ ಮಲಯಮಾರುತವು ಸುಗಂಧಿತವಾಗಿದ್ದು ಅದರಿಂದಲೇ ಈ ಹೆಸರು ಬಂದಿರಬೇಕೆಂದು ಒಂದು ಜಿಜ್ಞಾಸೆ ಯಾದರೆ ಕರಿ+ನಾಡು ಕರ್ ನಾಡು ಕಪ್ಪು ಮಣ್ಣಿನ ನೆಲ ಎಂಬ ಕಾರಣದಿಂದಲೇ ಇದಕ್ಕೆ ಕರುನಾಡೆಂಬ ಹೆಸರು ಬಂದು ಮುಂದೆ ಕರ್ನಾಟಕವಾಯಿತೆಂಬ ಹೇಳಿಕೆಯೂ ಇದೆ.

ಆದರೆ ವಿದ್ವಾಂಸರ ವಾದದ ಪ್ರಕಾರ ‘ಕರುನಾಡು’ ಎಂದರೆ ದೊಡ್ಡ ನೆಲ ಅಥವಾ ಎತ್ತರದ ಪ್ರದೇಶ ಎಂಬುದರಿಂದಲೇ ಈ ಹೆಸರು ಬಂತೆಂಬುದು. ಕರ್ನಾಟಕದ ಬಹುಭಾಗ ದಖ್ಖಣದ ಪ್ರಸ್ಥಭೂಮಿಯಲ್ಲಿ ಇದ್ದು, ಇದು ಎತ್ತರದ ನೆಲವಾಗಿದೆ. ಈ ನಾಡು ಘಟ್ಟದ ಮೇಲಿನದಾಗಿರುವುದರಿಂದ ತಮಿಳರು ‘ಕರುನಾಟರ್’ ಎಂದಿರುವ ಶಬ್ದದ ಅರ್ಥವು ಮಹಾಭಾರತದ ಉನ್ನತ್ಯಕ ಎಂಬ ಶಬ್ದದ ಅರ್ಥಕ್ಕೆ ಪೂರಕವಾಗಿದೆ ಎಂದು ಸಮರ್ಥಿಸಿಕೊಳ್ಳುತ್ತಾರೆ.

ಅದೇನೇ ಇರಲಿ. ಶಾತವಾಹನರು, ಕದಂಬರು, ಗಂಗರು, ಚಾಲುಕ್ಯರು, ರಾಷ್ಟ್ರಕೂಟರು, ಹೊಯ್ಸಳರು, ಸೆವುಣರು,
ಒಡೆಯರು, ವಿಜಯನಗರ ಅರಸರು, ಮೊಘಲರು, ಮರಾಠರು, ಪೋರ್ಚುಗೀಸರು, ಫ್ರೆಂಚರು, ಬ್ರಿಟಿಷರ ಆಳ್ವಿಕೆಗಳನ್ನೆಲ್ಲ ದಾಟಿ ಇಂದು ಸ್ವತಂತ್ರ ಭಾರತ ಜನನಿಯ ತನುಜಾತೆಯಾಗಿ, ಮುಕುಟಮಣಿಯಾಗಿ ಮೆರೆಯುತ್ತಿದೆ. ಕಲೆ-ಸಂಸ್ಕೃತಿಯ ನೆಲವೀಡಾಗಿ ಕಂಗೊಳಿಸುತ್ತಿದೆ. ಆದರೆ ಸ್ವಾತಂತ್ರ್ಯಪೂರ್ವದಲ್ಲಿ ಕನ್ನಡಿಗರ ಸ್ಥಿತಿ ತೀರಾ ದಯನೀಯವಾಗಿತ್ತು. ಮುಂಬೈ ಪ್ರಾಂತ್ಯದಲ್ಲಿದ್ದ ಕನ್ನಡ ಪ್ರದೇಶಗಳಲ್ಲಿ ದೀರ್ಘಕಾಲ ಮರಾಠಿಯೇ ಆಡಳಿತ ಭಾಷೆಯೂ, ಶಿಕ್ಷಣ ಮಾಧ್ಯಮವೂ ಆಗಿತ್ತು. ಡೆಪ್ಯುಟಿ ಚೆನ್ನಬಸವಪ್ಪನವರಂಥ ಶಿಕ್ಷಣ ತಜ್ಞರು ಇದರ ವಿರುದ್ಧ ಸೆಣಸಿ ಕನ್ನಡ ಮಾಧ್ಯಮವನ್ನು ತರಬೇಕಾಯಿತು.

ಕನ್ನಡ ಭಾಷಿಕರೇ ಇರುವ ಜಮಖಂಡಿ, ಮುಧೋಳ ಮುಂತಾದ ಸಂಸ್ಥಾನಗಳಲ್ಲಿ ಅರಸರು ಮರಾಠಿಗರಾಗಿದ್ದುದರಿಂದ ಮರಾಠಿಯೇ ಆಡಳಿತ ಭಾಷೆಯಾಗಿ ಕನ್ನಡವು ಸಾರ್ವಜನಿಕ ಕ್ಷೇತ್ರದಿಂದ ಮಾಯವಾಗುವ ಸ್ಥಿತಿ ಒದಗಿತ್ತು. ಭಾರತದ ನಾನಾ
ಭಾಗಗಳಲ್ಲಿ ತನ್ನ ಪ್ರಭೆಯನ್ನು ಬೀರಿದ ಕರ್ನಾಟಕವು ಒಡೆದು ಚೂರುಚೂರಾಗಿ ಹೋಗಿ ಕರ್ನಾಟಕದ ಅಸ್ತಿತ್ವವೇ ಅಳಿಸಿ ಹೋದಂತಾಗಿತ್ತು. ಒಂದು ಕಡೆ ಕನ್ನಡಿಗರು ಮರಾಠರ ಪ್ರಾಬಲ್ಯಕ್ಕೆ ಒಳಗಾಗಿ ತಾವು ಕನ್ನಡಿಗರೆಂಬುದನ್ನೇ ಮರೆಯುತ್ತ ಬಂದಿದ್ದರು. ಅಚ್ಚ ಕನ್ನಡಿಗರ ಮನೆಗಳಲ್ಲಿ ಕನ್ನಡಕ್ಕಿಂತ ಮರಾಠಿ ಭಾಷೆಯ ಬಳಕೆಯೇ ಹೆಚ್ಚಾಗಿತ್ತು.

ಇನ್ನೊಂದು ಕಡೆ ನಿಜಾಮ ರಾಜ್ಯದಲ್ಲಿ ಮುಸಲ್ಮಾನರ ಆಡಳಿತಕ್ಕೆ ಸಿಕ್ಕು ಕನ್ನಡಿಗರು ಉರ್ದು ಭಾಷೆಯನ್ನೇ ಹೆಚ್ಚುಹೆಚ್ಚಾಗಿ ಕಲಿಯುತ್ತ ಬರುವಂತಾಯ್ತು. ಪೂರ್ವಕ್ಕೆ ತೆಲುಗರು, ತಮಿಳರು ತಮ್ಮ ಪ್ರಭಾವವನ್ನು ಬೀರಿ ಕರ್ನಾಟಕದಲ್ಲಿ ಕನ್ನಡದ
ಪ್ರಜ್ಞೆಯೇ ಇಲ್ಲದಂತೆ ಕನ್ನಡಿಗರು ತಮ್ಮ ವ್ಯಕ್ತಿತ್ವವನ್ನೇ ಮರೆಯುವಂಥ ದುಸ್ಥಿತಿಯಲ್ಲಿ ಮೇಲೇಳಲಾರದಂತೆ ಕುಸಿದು ಹೋಗಿತ್ತು.

ಕರ್ನಾಟಕದ ಅಂದಿನ ದುಸ್ಥಿತಿಯನ್ನು ಕಂಡು 1917ರಲ್ಲಿ ಆಲೂರು ವೆಂಕಟರಾಯರು ‘ಛೇ, ಕರ್ನಾಟಕವೆಲ್ಲಿದೆ?… ನಾಲ್ಕಾರು ಕಡೆ ಹರಿದು ಹಂಚಿಹೋದ ಕರ್ನಾಟಕವನ್ನು ಹೊಲಿದು ಅಖಂಡವಾಗಿ ಮಾಡುವವರಾರು? ಅಷ್ಟೊಂದು
ಅಭಿಮಾನವು ನಮ್ಮಲ್ಲಿ ಎಲ್ಲುಂಟು?’ ಎಂದು ಉದ್ಗರಿಸಿದ್ದರು. ಅವರು 1907ರಲ್ಲಿ ಏಕೀಕರಣಕ್ಕೆ ಒತ್ತಾಯಿಸಿ ವಂಗಭಂಗದ ಪ್ರತಿಭಟನಾ ಚಳವಳಿಯ ಹಿನ್ನೆಲೆಯಲ್ಲಿ ‘ವಾಗ್ಭೂಷಣ’ ಪತ್ರಿಕೆಯಲ್ಲಿ ಏಕೀಕರಣವನ್ನು ಒತ್ತಾಯಿಸಿ ಒಂದು ಲೇಖನವನ್ನು ಬರೆದರಲ್ಲದೆ, ಅದೇ ವರ್ಷ ಹಾಗೂ ಮರುವರ್ಷ ಅಖಿಲ ಕರ್ನಾಟಕ ಗ್ರಂಥಕರ್ತರ ಸಮ್ಮೇಳನವನ್ನು ಧಾರವಾಡದಲ್ಲಿ ನಡೆಸಿ ಈ ವಿಚಾರಕ್ಕೆ ಬುದ್ಧಿಜೀವಿಗಳ ಬೆಂಬಲ ಪಡೆದರು.

ಅಖಿಲ ಕರ್ನಾಟಕ ಸಾಹಿತ್ಯ ಪರಿಷತ್ತು ಬೆಂಗಳೂರಲ್ಲಿ ಅರಸರ ಆಶ್ರಯದಲ್ಲಿ 1915ರಲ್ಲಿ ಸ್ಥಾಪನೆಗೊಂಡಾಗ ಈ ಬೇಡಿಕೆಗೆ ಹೆಚ್ಚಿನ ಬಲ ಬಂದಿತು. ಪರಿಷತ್ತಿನ ಆಶ್ರಯದಲ್ಲಿ ಪ್ರತಿವರ್ಷ ಸಾಹಿತ್ಯ ಸಮ್ಮೇಳನ ನಡೆಸಿ ಏಕೀಕರಣದ ಬೇಡಿಕೆಯನ್ನೂ ಮಂಡಿಸಲಾಗುತ್ತಿತ್ತು. ಈ ಏಕೀಕರಣದ ಕಲ್ಪನೆ ಮೂಲತಃ ಲೇಖಕರ ಹಾಗೂ ಪತ್ರಿಕಾಕರ್ತರ ಮನದಲ್ಲಿ ಉದಯಿಸಿ, ಮುಂದೆ ರಾಜಕಾರಣಿಗಳ ಮನಸ್ಸನ್ನೂ ಸೆಳೆಯುವಲ್ಲಿ ಯಶ ಕಂಡಿತು.

ಪಾರಂಪರಿಕ ಮೌಲ್ಯಗಳನ್ನು ಪ್ರಶ್ನಿಸಿ ನವಮೌಲ್ಯಗಳ ಶೋಧನೆಯ ನವೋದಯದ ಕಾಲದಲ್ಲಿ ಕಾಣಿಸಿಕೊಂಡ ಬೌದ್ಧಿಕ ಜಾಗೃತಿಯು ರಾಷ್ಟ್ರೀಯತೆಯ ಜತೆಗೆ ಅದಕ್ಕೆ ಪೂರಕವಾದ ಕರ್ನಾಟಕತ್ವದ ಜಾಗೃತಿಗೂ ಕಾರಣವಾಗಿತ್ತು. ಕರ್ನಾಟಕದ ಇತಿಹಾಸದ ಬಗ್ಗೆ ಪ್ರಕಟವಾದ ಪುಸ್ತಕಗಳು ಕರ್ನಾಟಕ ಏಕೀಕರಣದ ಅವಶ್ಯಕತೆಯನ್ನು ಮನವರಿಕೆ ಮಾಡಿಕೊಡಲು ಕಾರಣವಾಗಿದ್ದವು. 1890ರಲ್ಲಿ ಧಾರವಾಡ ದಲ್ಲಿ ಸ್ಥಾಪಿತವಾದ ಕರ್ನಾಟಕ ವಿದ್ಯಾವರ್ಧಕ ಸಂಘ ಈ ನಿಟ್ಟಿನಲ್ಲಿ ವಿಶೇಷ ಕೆಲಸ ಮಾಡಿತು. ಇದರ ಹಿಂದೆಯೇ ಅಖಿಲ ಕರ್ನಾಟಕ ಮಟ್ಟದ ಸಮ್ಮೇಳನಗಳ ಒಂದು ಪ್ರವಾಹವೇ ಕಾಣಿಸಿತು.

ಧಾರವಾಡದಿಂದ ಆರಂಭಿಸಿ ನಾಡಹಬ್ಬದ ಆಚರಣೆ ಎಡೆ ಆಗುತ್ತಿತ್ತು. ಪುತ್ತೂರಿನಲ್ಲಿ ಶಿವರಾಮ ಕಾರಂತರು ಏರ್ಪಡಿಸುತ್ತಿದ್ದ ನಾಡಹಬ್ಬ ವಿಶಿಷ್ಟವಾದುದಾಗಿತ್ತು. ಕರ್ನಾಟಕ ಸಂಘಗಳು ನಾಡು-ನುಡಿಗಳ ಅಭಿಮಾನ ಜಾಗೃತಿಗೆ ಸಾಕಷ್ಟು ದುಡಿದವು. ಖಾದಿ, ಆಯುರ್ವೇದ, ಇತಿಹಾಸ, ಕೈಗಾರಿಕೆ ಮತ್ತು ವಾಣಿಜ್ಯ, ಅಂಗ ಸಾಧನೆ, ಪತ್ರಿಕೋದ್ಯಮ, ವಾಚನಾಲಯ, ಗ್ರಂಥಾಲಯ ಮತ್ತು ಇನ್ನೂ ಅನೇಕ ಕ್ಷೇತ್ರಗಳಲ್ಲಿ ಆಸ್ಥೆಯುಳ್ಳವರ ಸಮ್ಮೇಳನಗಳು ಅಖಿಲ ಕರ್ನಾಟಕ ಮಟ್ಟದಲ್ಲಿ ಕರ್ನಾಟಕ ಪ್ರಾಂತೀಯ ಕಾಂಗ್ರೆಸ್ ಸಮಿತಿಯ ನಂತರ ಪ್ರತಿವರ್ಷ ನಡೆಯಲು ಆರಂಭವಾದವು.

ಕರ್ನಾಟಕದ ಏಕೀಕರಣದ ಅವಶ್ಯಕತೆಯು ಜನತೆಗೆ ಭಾಸವಾದುದಕ್ಕೆ ಇವು ಸಾಕ್ಷ್ಯ ನೀಡುತ್ತವೆ. ಹೀಗೆ ಇತಿಹಾಸಕಾರರು, ಹೋರಾಟಗಾರರು, ಬಂಡಾಯಗಾರರು, ಕೃಷಿಕರು, ಕವಿಗಳು, ಸಾಹಿತಿಗಳು, ಪತ್ರಿಕೋದ್ಯಮಿಗಳು, ಚಿತ್ರೋದ್ಯಮಿಗಳು, ಚಿತ್ರ ಕಲಾವಿದರು, ರಂಗಕರ್ಮಿಗಳು, ಸಂಗೀತಗಾರರು, ನೃತ್ಯ ಕಲಾವಿದರು, ಚಿತ್ರಕಲೆ, ಶಿಲ್ಪಕಲಾ ನಿಪುಣರೆಲ್ಲರೂ ತಮ್ಮ
ಶ್ರಮದ ಮೂಲಕ ನಮ್ಮ ಶ್ರೀಗಂಧದ ನಾಡನ್ನು ಕಟ್ಟಿ ಶ್ರೀಮಂತಗೊಳಿಸಿದ್ದಾರೆ.

ಅಂತಿಮವಾಗಿ ನವೆಂಬರ್ 1, 1956ರಂದು ಕರ್ನಾಟಕ ರಚನೆಯಾಗಿ ಕನ್ನಡಿಗರಿಗೊಂದು ಅಸ್ತಿತ್ವ ದೊರಕಿಸಿಕೊಟ್ಟಿದೆ. ನಾಡಹಬ್ಬ ವಿಜೃಂಭಿಸಲಿ.