ಅಭಿಮತ
ರುದ್ರಯ್ಯ ಎಸ್.ಎಸ್.
rssmath17@gmail.com
ಕೇದಾರನಾಥ ದೇವಾಲಯದ ಬಾಗಿಲನ್ನು ತೆರೆಯಬೇಕಾದರೆ ಅಲ್ಲಿ ಕನ್ನಡಿಗರು ಇರಲೇ ಬೇಕು. ಅಷ್ಟೆ ಅಲ್ಲ ಅಲ್ಲಿನ ಪ್ರಧಾನ ಅರ್ಚಕರ ಜತೆಗೆ ಪೂಜೆ ಮಾಡುವ ಅರ್ಚಕರು ಕನ್ನಡಿಗರೇ ಆಗಿರಬೇಕು. ಅದೇ ರೀತಿ ಪುಣ್ಯ ಕ್ಷೇತ್ರ ಕಾಶಿಯಲ್ಲಿ ಕರ್ನಾಟಕದಿಂದ ಹೋದ ಪ್ರತಿಯೊಬ್ಬರ ಕಣ್ಣಿಗೂ ಜಂಗಮವಾಡಿಮಠ ಎಂಬ ಕನ್ನಡದ ನಾಮ ಫಲಕ ಕಾಣಸಿಗುತ್ತದೆ.
ಹಿಂದೂಗಳ ಆರಾಧ್ಯ ದೈವ ಸಾಕ್ಷಾತ್ ಶಿವ ನೆಲೆ ನಿಂತ ಪವಿತ್ರ ಕ್ಷೇತ್ರ ಕಾಶಿ ಹಾಗೂ ಚಾರ್‌ಧಾಮ್‌ಗಳಲ್ಲಿ ಪ್ರಮುಖವಾದ ಕೇದಾರ ಕ್ಷೇತ್ರಗಳು ಕನ್ನಡ ನಾಡಿನೊಂದಿಗೆ ವಿಶೇಷ ನಂಟು ಹೊಂದಿವೆ. ವರ್ಷದಲ್ಲಿ 6 ತಿಂಗಳು ದರ್ಶನಕ್ಕೆ ಅವಕಾಶವಿರುವ ಭೂಲೋಕದ ಸ್ವರ್ಗದಂತಿರುವ ಕೇದಾರನಾಥದ ಬಾಗಿಲನ್ನು ತೆರೆಯಲು, ಮುಚ್ಚಲು ಕನ್ನಡಿಗರು ಇರಲೇ ಬೇಕು ಎಂದರೆ ಅಚ್ಚರಿಯಾದೀತು!
ಉತ್ತರ ಪ್ರದೇಶ ಮತ್ತು ಉತ್ತರಾಖಂಡ ರಾಜ್ಯಗಳಲ್ಲಿರುವ ಪ್ರಸಿದ್ಧ ಐತಿಹಾಸಿಕ ಎರಡು ತಿರ್ಥಕ್ಷೇತ್ರಗಳಲ್ಲಿ ಕರ್ನಾಟಕದ ಹೆಗ್ಗುರುತು ಚಾಚೂ ತಪ್ಪದೆ ಚಿರಸ್ಥಾಯಿಯಾಗಿ ನೆಲೆ ನಿಂತಿದೆ ಎಂದರೆ ಯಾವ ಕನ್ನಡಿಗನಿಗೆ ಹೆಮ್ಮೆ ಆಗುವುದಿಲ್ಲ ಹೇಳಿ? ಹೌದು, ಒಂದು ವರ್ಷದಲ್ಲಿ 6 ತಿಂಗಳುಗಳ ಕಾಲ ದರ್ಶನಕ್ಕೆ ಅವಕಾಶವಿರುವ ಭೂಲೋಕದ ಸ್ವರ್ಗ ದಂತಿರುವ ಕೇದಾರನಾಥ ದೇವಾಲಯದ ಬಾಗಿಲನ್ನು ತೆರೆಯಬೇಕಾದರೆ ಅಲ್ಲಿ ಕನ್ನಡಿಗರು ಇರಲೇ ಬೇಕು. ಅಷ್ಟೇ ಅಲ್ಲ ಅಲ್ಲಿನ ಪ್ರಧಾನ ಅರ್ಚಕರ ಜತೆಗೆ ಪೂಜೆ ಮಾಡುವ ಅರ್ಚಕರು ಕನ್ನಡಿಗರೇ ಆಗಿರಬೇಕು. ಅದೇ ರೀತಿ ಪುಣ್ಯ ಕ್ಷೇತ್ರ ಕಾಶಿಯಲ್ಲಿ ಕರ್ನಾಟಕದಿಂದ ಹೋದ ಪ್ರತಿಯೊಬ್ಬರ ಕಣ್ಣಿಗೂ ಜಂಗಮವಾಡಿಮಠ ಎಂಬ ಕನ್ನಡದ ನಾಮ ಫಲಕ ಕಾಣಸಿಗುತ್ತದೆ.
ಪರಮ ದಯಾಳು ಶಿವನ ಸಾನ್ನಿಧ್ಯ ಹೊಂದಿರುವ ಭೂ ಲೋಕದ ಸ್ವರ್ಗದಂತಿರುವ ಕೇದಾರನಾಥ ದೇವಾಲಯವು ಹಿಮದ ತಪ್ಪಲಿನ ನಿಸರ್ಗದ ಮಡಿಲಲ್ಲಿ ಸ್ವಚ್ಛಂದವಾಗಿದೆ. ಈ ಕಾರಣಕ್ಕಾಗಿಯೇ ಪ್ರಕೃತಿ ಪ್ರೇಮಿಗಳು, ಶಿವನ ಆರಾಧಕರು ಹಾಗೂ ನೆಮ್ಮದಿ-ಶಾಂತಿ ಬಯಸಿ ಬರುವ ಭಕ್ತರು ಈ ಕ್ಷೇತ್ರಕ್ಕೆ ಭೇಟಿ ನೀಡಲು ಬಯಸುತ್ತಾರೆ. ಆದರೆ ಚಳಿಗಾಲದ ಸಂದರ್ಭದಲ್ಲಿ ಹಿಮದ ರಾಶಿಯಿಂದಾಗಿ ಸಂಪೂರ್ಣ ದೇವಸ್ಥಾನದ ಜತೆಗೆ ಸುತ್ತಲಿನ ಪ್ರದೇಶ ಹಿಮದಿಂದ ಆವೃತವಾಗುವುದರಿಂದ ದೇವಸ್ಥಾನವನ್ನು 6 ತಿಂಗಳು ಮುಚ್ಚಲ್ಪ
ಡುತ್ತದೆ. ಆಗ ಜ್ಯೋತಿರ್ಲಿಂಗರೂಪದಲ್ಲಿರುವ ಕೇದಾರ ನಾಥೇಶ್ವರನನ್ನು ಪಂಚಮುಖಿ ಮೂರ್ತಿ ರೂಪದಲ್ಲಿ ಊಖಿಮಠದಲ್ಲಿ ಆರಾಧನೆ ಮಾಡಲಾಗುತ್ತದೆ.
ಈ ಊಖಿಮಠವು ಪಂಚಪೀಠಗಳಲ್ಲಿ ಒಂದಾದ ಕೇದಾರ ಪೀಠವಾಗಿದ್ದು, ಇದರ ಪೀಠಾಽಪತಿಗಳು ಕರ್ನಾಟಕದವರೇ ಆಗಿರಬೇಕು ಎಂದು ಪರಂಪರೆ ಇದೆ ಮತ್ತು ಇವರೇ ದೇವಾಲಯದ ಪ್ರಧಾನ ಅರ್ಚಕರಾಗಿರುತ್ತಾರೆ. ಇದು ವೀರಶೈವ ಲಿಂಗಾಯತ ಪರಂಪರೆಯಲ್ಲಿ ಬರುವ
ಶ್ರದ್ಧಾ ಕೇಂದ್ರವಾಗಿದ್ದು ಇಂದಿಗೂ ವೈರಾಗ್ಯ ಸಿಂಹಾಸನದ ಆಚಾರ-ವಿಚಾರ ಪರಂಪರೆಗಳಲ್ಲಿ ರಾಜಿ ಇಲ್ಲದೆ ಸ್ವಲ್ಪವೂ ವ್ಯತ್ಯಾಸವಾಗದೇ ಮುನ್ನಡೆಸಿಕೊಂಡು ಬರಲಾಗುತ್ತಿದೆ. ಇದಕ್ಕೆಲ್ಲ ಕಾರಣಿಕರ್ತರು ಆ ಪೀಠವನ್ನು ಅಲಂಕರಿಸಿರುವ ಜಗದ್ಗುರುಗಳು.
ಪ್ರಸ್ತುತ ೩೨೪ನೇ ಪೀಠಾಧೀಶರಾದ ಶ್ರೀ ವೈರಾಗ್ಯ ಸಿಂಹಾಸನಾಽಶ್ವರ ಶ್ರೀ 1008 ಜಗದ್ಗುರು ರಾವಲ್ ಪದವಿ ವಿಭೂಷಿತ ಭೀಮಾ ಶಂಕರಲಿಂಗ ಭಗವತ್ಪಾದರು ಈ ಪರಂಪರೆಗೆ ಹೆಚ್ಚಿನ ಪ್ರಾಶಸ್ತ್ಯ ಕೊಟ್ಟು ಮುನ್ನಡೆಸುತ್ತಿದ್ದಾರೆ. ಇವರು ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಹೂವಿನಹಳ್ಳಿಯವರು. ಹಿಮ ಕರಗುವ ಕಾಲಮಾನದಲ್ಲಿ ಹಿಂದೂ ಪಂಚಾಂಗದ ಪ್ರಕಾರ ಸರಿಯಾದ ಮುಹೂರ್ತವನ್ನು ನಿಗದಿಪಡಿಸಿ 6 ತಿಂಗಳ ಕಾಲ ಭಕ್ತರ ದರ್ಶನಕ್ಕಾಗಿ ದೇವಾಲಯದ ಬಾಗಿಲನ್ನು ತೆರೆಯಲಾಗುತ್ತದೆ. ದೇವಸ್ಥಾನವನ್ನು ಮುಚ್ಚುವ ಹಾಗೂ ತೆರೆಯುವ ಧಾರ್ಮಿಕ ಹಕ್ಕು ಕೇದಾರ ಪೀಠದ ಜಗದ್ಗುರುಗಳಿಗೆ ಮಾತ್ರ ಇದೆ.
ಈ ಪದ್ಧತಿ ಇತ್ತೀಚೆಗೆ ಬೆಳೆದಿದ್ದಲ್ಲ. ಅನಾದಿ ಕಾಲದಿಂದಲೂ ಇದೇ ರೀತಿ ಇದ್ದು ಬ್ರಿಟಿಷರ ಆಡಳಿತದಲ್ಲಿನ ಕೆಲವು ಉಲ್ಲೇಖಗಳು ಈಗಲೂ
ಮಠದಲ್ಲಿ ಕಾಣಸಿಗುತ್ತವೆ. ಇನ್ನು ಹಿಮಾಲಯದ 22 ಕ್ಷೇತ್ರಗಳ ಪೈಕಿ ಶ್ರೀ ಕೇದಾರನಾಥ, ರುದ್ರನಾಥ, ಮಧ್ಯ ಮಹೇಶ್ವರ, ತುಂಗನಾಥ, ಕಲ್ಲೇಶ್ವರ ಈ ಐದು ದೇವಸ್ಥಾನಗಳಲ್ಲಿ ಕೇದಾರ ಜಗದ್ಗುರುಗಳ ಶಿಷ್ಯರಾದ ದಕ್ಷಿಣ ಭಾರತದ ಜಂಗಮ ವಂಶದವರೇ ಅನಾದಿಕಾಲ ದಿಂದಲೂ ಅರ್ಚಕರಾಗಿ ಪೂಜಾ ಕೈಂಕರ್ಯ ನಿರ್ವಹಿಸುತ್ತಿದ್ದಾರೆ.
ಇಷ್ಟೇ ಅಲ್ಲದೆ 6 ತಿಂಗಳು ಕೇದಾರನಾಥನ ಶಿರದ ಮೇಲಿರುವ ಸುವರ್ಣ ಕಿರೀಟ ಉಳಿದ 6 ತಿಂಗಳು ಜಗದ್ಗುರುಗಳ ಶಿರದಲ್ಲಿ ಇರುತ್ತದೆ. ಈ ಸಾಮರ್ಥ್ಯ ಮತ್ತು ಹಕ್ಕು ಜಗದ್ಗುರುಗಳಿಗೆ ಮಾತ್ರ ಇದೆ. ಇವರನ್ನು ಉತ್ತರ ಭಾರತದಲ್ಲಿ ‘ಬುಲಂದರ್ ಕೇದಾರನಾಥ್’ ಎನ್ನುತ್ತಾರೆ ಅಂದರೆ ಮಾತನಾಡುವ ಕೇದಾರನಾದ ಎಂದರ್ಥ ಸಾಮಾನ್ಯವಾಗಿ ದೇವಸ್ಥಾನ ತೆರೆದಾಗ ಹೆಚ್ಚಿನ ಕಾರ್ಯಕ್ರಮಕ್ಕೆ ತೆರಳದ ಗುರುಗಳು, ದೇಗುಲದ ಬಾಗಿಲು ಮುಚ್ಚಿದ ನಂತರ ಶಿವನ ಶಿರದ ಮೇಲೆ ವಿರಾಜಮನವಾಗಿದ್ದ ಬಂಗಾರದ ಕಿರೀಟದ ಸಮೇತ ದೇಶಾ
ದ್ಯಂತ ಭಕ್ತರು ಏರ್ಪಡಿಸುವ ಕಾರ್ಯಕ್ರಮ, ಸಂಗೀತಯುಕ್ತ ಇಷ್ಟಲಿಂಗ ಪೂಜೆಗಳಲ್ಲಿ ಭಾಗಿಯಾಗುತ್ತಾರೆ.
ಕೆಲವು ಕಾರಣಾಂತಗಳಿಂದ ಕೇದಾರ ಕ್ಷೇತ್ರಕ್ಕೆ ಹೋಗಲು ಆಗದವರು ಗುರುಗಳ ತಲೆ ಮೇಲಿರುವ ಕಿರೀಟದ ದರ್ಶನ ಮಾಡಿ ಧನ್ಯ ರಾದೆವು ಎಂದು ಪುನೀತಭಾವ ತೋರುತ್ತಾರೆ. ಟೆಹರೀ ಗಢವಾಲದ ಮಹಾರಾಜರು ಈ ಪೀಠದ ಅನನ್ಯ ಭಕ್ತರಾಗಿದ್ದು, ಕೇದಾರ ಪೀಠಕ್ಕೆ ಉತ್ತರಾಧಿಕಾರಿಗಳಾಗಿ ಬಂದವರಿಗೆ ಮಹಾರಾಜರು ಮೊದಲು ತಿಲಕೋತ್ಸವವನ್ನು ಮಾಡಿ ‘ರಾವಲ್’ ಎಂಬ ಉಪಾಧಿಯನ್ನು
ಕೊಟ್ಟು ರಾಜ ಪೋಷಾಕಿನಲ್ಲಿ ಮೆರವಣಿಗೆ ಮಾಡಿದ ನಂತರವೇ ಸಮಾನ ಪೀಠಾಚಾರ್ಯರಿಂದ ಪಟ್ಟಾಭಿಷೇಕ ನಡೆಯುತ್ತದೆ.
ಪರೀಕ್ಷಿತನ ಪುತ್ರನಾದ ಜನಮೇಜಯ ಭೂಪಾಲನು ಕೊಟ್ಟ ಸಮಸ್ತ ಭೂಮಿಯು ಕ್ರಿ.ಶ. 1894 ರವರೆಗೆ ಪೀಠದ ಆಚಾರ್ಯರ ಸ್ವಾಧೀನ ದಲ್ಲಿಯೇ ಇತ್ತು. ಈ ಭೂಮಿಯಲ್ಲಿ ಒಂದು ಸಾವಿರ ಗ್ರಾಮಗಳಿದ್ದವಂತೆ. ನಂತರ ಬಂದ ಬ್ರಿಟಿಷ್ ಸರಕಾರ 143 ಗ್ರಾಮಗಳನ್ನು ಮಠಕ್ಕೆ ಬಿಟ್ಟು ಉಳಿದದ್ದನ್ನು ಸ್ವಾಧೀನ ಮಾಡಿಕೊಳ್ಳುತ್ತಾರೆ. ಸ್ವಾತಂತ್ರ್ಯ ನಂತರ ಆಸ್ತಿಯನ್ನು ಭಾರತ ಸರಕಾರಕ್ಕೆ ಬಿಟ್ಟುಕೊಟ್ಟು ಕೇವಲ ಧಾರ್ಮಿಕ ಹಕ್ಕನ್ನು ಮಾತ್ರ ಉಳಿಸಿಕೊಳ್ಳುತ್ತಾರೆ. ಬಾಣಾಸುರನ ಮಗಳು ರಾಜಕುಮಾರಿ ಉಷಾದೇವಿ ಪೀಠದ ಗುರುಗಳಿಂದ ಕಲಿತ ವಿದ್ಯೆಗೆ ಪ್ರತಿಯಾಗಿ ಮಠವನ್ನು ಜೀರ್ಣೋದ್ದಾರ ಮಾಡಿದ್ದರಿಂದ ಉಷಾಮಠ ಎಂದು ರೂಢಿಯಲ್ಲಿದದ್ದು ಈಗ ಉಖಿಮಠವಾಗಿದೆ. ಇದು ಈ ಪೀಠದ ಸಂಕ್ಷಿಪ್ತ ಇತಿಹಾಸ.
ಇನ್ನೂ ಹಿಂದೂಗಳ ಧಾರ್ಮಿಕ ರಾಜಧಾನಿ ಕಾಶಿಯಲ್ಲಿ ಗೋದೌಲಿಯಾ ರಸ್ತೆಯ ಮೂಲಕ ವಿಶ್ವನಾಥ ಮಂದಿರ ತಲುಪುವ ದಾರಿಯಲ್ಲಿ ಸಿಗುವ ಕನ್ನಡದ ಮಠ ಎಂದರೆ ಅದು ಜಂಗಮವಾಡಿ ಮಠ. ಈ ಮಠವು ಗುರುಕುಲವನ್ನು ನಡೆಸುತ್ತಿದ್ದು, ಅನೇಕರಿಗೆ ವಿಶೇಷ ಶಾಸ್ತ್ರಾ ಧ್ಯಯನ ಸೌಲಭ್ಯ ನೀಡುತ್ತಿದೆ. ಬಂದ ಭಕ್ತರಿಗೆ ವಸತಿ, ಊಟದ ವ್ಯವಸ್ಥೆ ಕೂಡ ಮಠದಲ್ಲಿದೆ. ಪಂಚಾಚಾರ್ಯ ಪೀಠಗಳಂದಾದ ಕಾಶಿ ಪೀಠದ ಕೇಂದ್ರವು ಇದಾಗಿದ್ದು, ಇಂದಿಗೂ ಕಾಶಿಗೆ ಭೇಟಿ ನೀಡುವ ಪ್ರತಿಯೊಬ್ಬ ಕರ್ನಾಟಕದ ಪ್ರಜೆಗೂ ಅನ್ನ-ಆಶ್ರಯ ಕಲ್ಪಿಸುವ ತಾಣವಾಗಿದೆ. ಪ್ರಸ್ತುತ ಪೀಠಾಧೀಶರಾದ ಶ್ರೀ ಜ್ಞಾನ ಸಿಂಹಾಸನಾಧೀಶ್ವರ 1008 ಜಗದ್ಗುರು ಡಾ.ಚಂದ್ರಶೇಖರ ಭಗವತ್ಪಾದರು
ಕರ್ನಾಟಕದ ಗುಳೇದಗುಡ್ಡದವರಾಗಿದ್ದು, ಮಠದ ನಾಮ-ಲಕ ಹಾಗೂ ಸುತ್ತಲಿನ ವಾತಾವರಣದಲ್ಲಿ ಕನ್ನಡದ ಕಂಪನ್ನು ಬಿತ್ತರಿಸಿದ್ದಾರೆ.
ಈ ಕನ್ನಡಿಗರ ಹೆಮ್ಮೆಯ ಪೀಠಕ್ಕೆ ತನ್ನದೇ ಆದ ಇತಿಹಾಸ, ಹಿರಿಮೆ- ಗರಿಮೆಗಳಿವೆ. ಇಂದು ಹಿಂದೂ ಸಮುದಾಯವೆಲ್ಲವೂ ಎದೆ ತಟ್ಟಿ ಹೇಳುವ ಕಾಶಿ ನರೇಶನಿಂದ ದಾನವಾಗಿ ಪಡೆಯಲ್ಪಟ್ಟ ಸುಮಾರು 1350 ಎಕರೆ ಪ್ರದೇಶದಲ್ಲಿ ವಿಶಾಲವಾಗಿ ತಲೆ ಎತ್ತಿ ನಿಂತಿರುವ ಹಿಂದೂ ಬನಾರಸ್ ವಿಶ್ವ ವಿದ್ಯಾಲಯ ನಿರ್ಮಾಣಕ್ಕಾಗಿ ಅಂದಿನ ಕಾಲದಲ್ಲಿ ಪಂಡಿತ್ ಮದನ್ ಮೋಹನ್ ಮಾಳವೀಯ ಅವರಿಗೆ 80
ಎಕರೆ ಭೂಮಿ ಧಾನ ಮಾಡಿದ ಶ್ರೇಷ್ಠ ಮಠ ಇದೇ ಕನ್ನಡಿಗರ ಹೆಮ್ಮೆಯ ಮಠವಾಗಿದೆ.
ಅದೇ ರೀತಿ ಮಠದ ಪಕ್ಕಕ್ಕಿರುವ ಅನ್ನಪೂರ್ಣ ಬನಾರಸ್ ಸೀರೆಯ ಅಂಗಡಿಯು ಸಹ ಕನ್ನಡ ಫಲಕ ಹೊಂದಿದೆ. ಇನ್ನೂ ಪಂಚಗಂಗಾ ಘಾಟ್‌ನಲ್ಲಿರುವ ಗೋಕರ್ಣ ಪರ್ತಗಾಳಿ ಮಠ, ಹೀಗೆ ಪಟ್ಟಿ ಬೆಳೆಯುವ ಅನೇಕ ಕನ್ನಡಿಗರ ಮಠಗಳು ಇನ್ನೂ ಇವೆ. ಕಾಶಿಯಲ್ಲಿರುವ ಸುಮಾರು ೮೮ ಘಾಟಗಳಲ್ಲಿ ಕರ್ನಾಟಕ ಘಾಟ್ ಕೊಡ ಒಂದಾಗಿದ್ದು, ಇದನ್ನು 1928 ರಲ್ಲಿ ಮೈಸೂರಿನ ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಹನುಮಾನ್ ಘಾಟ್‌ನ ಪಾರ್ಶ್ವ ಭಾಗ ಖರೀದಿಸಿ ಮೈಸೂರು ಘಾಟ್ ನಿರ್ಮಿಸಿದ್ದರು ಅದುವೇ ಈಗ ಕರ್ನಾಟಕ ಘಾಟ್ ಎಂದು ಮರು ನಾಮಕರಣಗೊಂಡಿದೆ.
ಹೀಗೆ ದೂರದ ಅಪರಿಚಿತ ನಾಡಲ್ಲಿ ನಮ್ಮವರು ಅಚಾನಕ್ ಭೇಟಿಯಾದರೇ ಸಾಕು ಎಷ್ಟು ಸಂತಸವಾಗುತ್ತದೆ. ಅಂತಹದರಲ್ಲಿ ಹಿಂದೂ ಗಳ ಶ್ರದ್ಧಾ ಕೇಂದ್ರಕ್ಕೆ ವಿಶ್ವನಾಥನ ದರ್ಶನ ಪಡೆಯಲು ದಯಮಾಡಿಸುವ ಕರ್ನಾಟಕದ ಜನರಿಗೆ ಅಲ್ಲಿನ ಕೆಲ ಮನೆಗಳ ಫಲಕ,
ದೇವಸ್ಥಾನ, ಮಠಗಳ ಫಲಕದಲ್ಲಿ ಕನ್ನಡ ಕಂಡಾಗ ಅದನ್ನು ನೋಡಿದ ಕ್ಷಣವೇ ನಮ್ಮತನದ ಭಾವ ಮೂಡುವ ಜತೆಗೆ ಸುತ್ತಲೂ ಕನ್ನಡಿಗರಿಂದ ಕೂಡಿದ ಕನ್ನಡದ ವಾತಾವರಣ ಇದ್ದಾಗ ನಮ್ಮವರು ಎಂದು ಕುಣಿದು ಕುಪ್ಪಳಿಸುವಷ್ಟು ರೋಮಾಂಚನವಾಗುವುದಿಲ್ಲವೆ. ಆದ್ದರಿಂದಲೇ ಹೇಳಿದ್ದು ಕಾಶಿ ಮತ್ತು ಕೇದಾರ ಕನ್ನಡಿಗರ ಹೆಮ್ಮೆ ಎಂದು.
ರಾಷ್ಟ್ರಕವಿ ಕುವೆಂಪು ಅವರು ಹೇಳಿದ ಹಾಗೆ ‘ಎಲ್ಲಾದರೂ ಇರು, ಎಂತಾದರೂ ಇರು, ಎಂದೆಂದಿಗು ನೀ ಕನ್ನಡವಾಗಿರು’ ಎಂಬ ಸಾಲಿನಂತೆ ಈ ಪೀಠಗಳು ಕಾರ್ಯನಿರ್ವಹಿಸುತ್ತಿವೆ. ಕರ್ನಾಟಕದಲ್ಲಿಯೇ ಇದ್ದುಕೊಂಡು ಕನ್ನಡ ನಾಡಿನ ನೀರು, ಗಾಳಿ, ಆಹಾರ ಸೇವಿಸಿ ಬದುಕು ಕಟ್ಟಿಕೊಂಡಿರುವ ಅದೆಷ್ಟೋ ಮಂದಿ ಕನ್ನಡ ಬರುವುದಿಲ್ಲ, ಕನ್ನಡ ಮಾತನಾಡುವುದಿಲ್ಲ ಎನ್ನುವ ಪ್ರಸ್ತುತ ದಿನಮಾಗಳಲ್ಲಿ ಹೊರ
ರಾಜ್ಯಗಳಲ್ಲಿಯೂ ಕನ್ನಡದ ಕಂಪನ್ನು ಕಂಡಾಗ ಹೆಮ್ಮೆ ಆಗಲೇ ಬೇಕಲ್ಲವೇ. ಅದೇ ರೀತಿ ಕನ್ನಡ ಭಾಷೆ ಉಳಿಸುವ ಬೆಳೆಸುವ ನೆಪದಲ್ಲಿ ಹುಟ್ಟಿಕೊಂಡಿರುವ ಕೆಲ ನಕಲಿ ಹೋರಾಟಗಾರಾರ ಮಧ್ಯೆ ದೇಶದ ಇತರೆ ಪ್ರಮುಖ ಪ್ರದೇಶದಲ್ಲಿಯೂ ಕನ್ನಡಿಗರ ಸಾಮರ್ಥ್ಯ ಮತ್ತು ಅಸ್ತಿತ್ವವನ್ನು ಎತ್ತಿ ತೋರಿಸುವ ಇಂತಹ ವಿಷಯಗಳು ಪ್ರತಿಯೊಬ್ಬ ಕನ್ನಡಿಗನಿಗೂ ಹೆಮ್ಮೆ ಆಗಲೇ ಬೇಕು.
ಆದರೆ ಹೆಮ್ಮೆ ಪಡುವ ಇಂತಹ ವಿಷಯಗಳು ಅದೆಷ್ಟೋ ಕನ್ನಡಿಗರಿಗೆ ಗೊತ್ತಿಲ್ಲ ಎನ್ನುವುದೇ ವಿಷಾದದ ಸಂಗತಿ. ಅದು ನಮ್ಮ ತಪ್ಪಲ್ಲ ಬಿಡಿ. ಆಧುನಿಕತೆಯ ಭರಾಟೆಯಲ್ಲಿ ನಮ್ಮ ತನವನ್ನೇ ಮಾರಿಕೊಂಡ ನಮಗೆ ನಮ್ಮ ಮೂಲ ಸೊಗಡು ಸಂಪ್ರದಾಯಗಳು ಎಲ್ಲಿ ನೆನಪಿರಬೇಕು ಹಾಗೂ ಅದನ್ನು ತಿಳಿದುಕೊಳ್ಳಲು ಸಮಯವಾದರೂ ಎಲ್ಲಿದೆ ಹೇಳಿ. ಹಾಗಾಗಿ ಸ್ವಲ್ಪ ಮಟ್ಟಿಗಾದರೂ ಇಂತಹ ವಿಷಯ ಗಳು ಕನ್ನಡಿಗರಿಗೆ ತಿಳಿಯಲಿ ಎಂಬುದೇ ಈ ಲೇಖನದ ಆಶಯ.