ಕಳಕಳಿ
ಡಾ.ಮಂಜುನಾಥ ಬಾಳೆಹಳ್ಳಿ
manjubp70@gmail.com
ಅನಂತ್‌ನಾಗ್ ಅಭಿನಯದ ‘ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಾಸರಗೋಡು’ ಚಲನಚಿತ್ರವು ಅರ್ಥಗರ್ಭಿತವಾಗಿ ಮೂಡಿಬಂದಿದೆ. ಹೌದು, ಕನ್ನಡ ಶಾಲೆಗಳು ಉಳಿಯಬೇಕಿದೆ, ಬೆಳೆಯಬೇಕಿದೆ. ಅಮೆರಿಕದ ವಾಷಿಂಗ್ಟನ್, ಕ್ಯಾಲಿಫೋರ್ನಿಯಾ ಮುಂತಾದ ಪ್ರದೇಶಗಳಲ್ಲಿ ಹಾಗೂ ದುಬೈ, ಆಸ್ಟ್ರೇಲಿಯಾ ಮೊದಲಾದ ದೇಶಗಳಲ್ಲಿ ಕನ್ನಡ ಸಂಘಗಳು ಹಲವಾರು ಪ್ರಾಯೋಜಕರನ್ನು ಒಗ್ಗೂಡಿಸಿ ಕನ್ನಡ ಶಾಲೆಗಳನ್ನು ನಡೆಸುತ್ತಿವೆ, ಕನ್ನಡ ವನ್ನು ಕಲಿಸುತ್ತಿವೆ.
ನಾಡಿನಿಂದ ಬಹುದೂರವಿದ್ದ ಕಾರಣ, ಕನ್ನಡತನವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಇಂಥ ಪ್ರಯತ್ನಗಳನ್ನು ಅವು ಸತತವಾಗಿ ಮಾಡುತ್ತಿವೆ. ಆದರೆ,
ನಾವು ಕನ್ನಡ ನಾಡಲ್ಲೇ ಇದ್ದು, ಕನ್ನಡ ಭಾಷಾ ಮಾಧ್ಯಮವಿದ್ದು, ರಾಜ್ಯಭಾಷೆಯೂ ಅದೇ ಆಗಿದ್ದೂ ಕನ್ನಡ ಶಾಲೆಯನ್ನು ಉಳಿಸಿ ಬೆಳೆಸಬೇಕೆಂದು ಕೂಗುವುದು ವಿಪರ್ಯಾಸವಾಗಿದೆ, ಅನಿವಾರ್ಯವಾಗಿದೆ. ಯಾಕೆ ಹೀಗೆ? ಹಳ್ಳಿಯ ಮೂಲೆ ಮೂಲೆಗಳಲ್ಲಿ ಮೆರೆದಿದ್ದ ಕನ್ನಡ ಶಾಲೆಗಳನ್ನು ಮುಚ್ಚುವ ಪರಿಸ್ಥಿತಿ ಒದಗಿರುವುದೇಕೆ? ದೇಶಕ್ಕೆ ಸ್ವಾತಂತ್ರ್ಯ ಸಿಗುವುದಕ್ಕೂ ಮುನ್ನ ಹಾಗೂ ನಂತರ ಆರಂಭಗೊಂಡ ಕನ್ನಡ ಶಾಲೆಗಳು, ಆಯಾ ಹಳ್ಳಿಗಳ ಸೊಗಡನ್ನು ಒಳಗೊಳ್ಳುತ್ತಾ ಬಂದು, ಹಳ್ಳಿಯ ಸಾಮೂಹಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಕೇಂದ್ರಗಳೇ ಆಗಿದ್ದವು. ಆಗ ಅದು ಅನಿವಾರ್ಯವೂ ಆಗಿತ್ತು.
ಬಸ್/ಸಾರಿಗೆ ವ್ಯವಸ್ಥೆ ಇರಲಿಲ್ಲ. ಈಗಿನಂತೆ ಮನೆಮನೆಗೆ ಕಾರು-ಬೈಕುಗಳು ಇರಲಿಲ್ಲ. ಕಾಲ್ನಡಿಗೆಯಲ್ಲಿ ನಾಲ್ಕಾರು ಕಿ.ಮೀ. ನಡೆದು ಶಾಲೆಗೆ ಹೋಗ ಬೇಕಿತ್ತು. ಶಿಕ್ಷಕರು ಕೂಡ ಮಳೆ, ಚಳಿ, ಗಾಳಿಯಲ್ಲಿ ನಡೆದೇ ಬರುತ್ತಿದ್ದರು. ಶಾಲೆಗೆ ಹೋಗುವುದೇ ಒಂದು ಸಂಭ್ರಮವಾಗಿತ್ತು. ಆಟ, ಹರಟೆ, ಜಗಳ, ಮಸ್ತಿ ಮಾಡುತ್ತಾ ಶಾಲೆ ಸೇರುತ್ತಿದ್ದ ಕಾಲವದು. ಆದರೀಗ ಸಾರಿಗೆ ವ್ಯವಸ್ಥೆಗಳಾಗಿವೆ. ಮಕ್ಕಳು ಇಂಗ್ಲಿಷ್ ಶಾಲೆಗಳೆಡೆಗೆ ಮುಖ ಮಾಡಿದ್ದಾರೆ. ಇಂದಿನ ಸ್ಪರ್ಧಾ ತ್ಮಕ ಯಗದಲ್ಲಿ ಮಕ್ಕಳು ಆಂಗ್ಲ ಶಾಲೆಗಳಲ್ಲಿ ಕಲಿತರೆ ಮುಂದೆ ಬಂದಾವು ಎಂಬ ಕನಸು, ಭ್ರಮೆ ಪೋಷಕರಲ್ಲಿದೆ. ಆ ಯೂನಿಫಾರಂ, ಷೂ, ಟೈಗಳು ಅವರ ಮನಸ್ಸಿಗೆ ಅದೇನು ಮುದ ನೀಡುತ್ತವೋ? ತಮ್ಮ ಮಕ್ಕಳು ಇಂಗ್ಲಿಷ್ ಶಾಲೆ ಸೇರಿದ್ದಾರೆಂದರೆ ಹೆಮ್ಮೆ, ಕನ್ನಡ ಶಾಲೆಯಲ್ಲಾದರೆ ಹಾಗೆ ಅಂದು ಕೊಳ್ಳಲು ನಾಚಿಕೆ!
ಕನ್ನಡ ಶಾಲೆ ಏಕೆ ಬೇಕು?
ಮನೆಮನೆಯಲ್ಲಿನ ಆಡುಭಾಷೆ ಕನ್ನಡ. ಐದನೇ ತರಗತಿಯವರೆಗಾದರೂ ಕನ್ನಡ ಓದಿದರೆ, ಮಕ್ಕಳಿಗೆ ಗೊಂದಲ ವಾಗುವುದಿಲ್ಲ. ಇಂದಿಗೂ ಕನ್ನಡ, ಕನ್ನಡತನ ಉಳಿದಿರುವುದು ಕನ್ನಡ ಶಾಲೆಗಳಿಂದ ಮಾತ್ರವೇ. ‘Deeper the root, taller the tree’ ಎಂಬುದೊಂದು ಮಾತಿದೆ. ತಾಯಿಬೇರು ಗಟ್ಟಿ ಯಾದರೆ, ಮರ ಹೆಮ್ಮರವಾದೀತು. ಕನ್ನಡ ಶಾಲೆ ತಾಯಿಬೇರು. ಹೆಮ್ಮರವಾಗಿ ಬೆಳೆದ ಎಷ್ಟೋ ಕಲಾವಿದರು, ಸಾಹಿತಿಗಳು, ಜ್ಞಾನಪೀಠ ಪುರಸ್ಕೃತರು, ಸಂಗೀತಗಾರರು, ಅಷ್ಟೇಕೆ ಸದನದಲ್ಲಿರುವ ಬಹುತೇಕ ಎಲ್ಲಾ ಶಾಸಕರು/ಮಂತ್ರಿ ಮಹೋದಯರು ಕನ್ನಡ ಶಾಲೆಯಲ್ಲಿ ಕಲಿತವರೇ.
ಏಕೆಂದರೆ, ಒತ್ತಡರಹಿತ ಸ್ಥಿತಿಯಲ್ಲಿ ಮಾತ್ರ ಆವಿಷ್ಕಾರಗಳಾಗಿವೆ, ವಿಕಸನಗಳಾಗಿವೆ. ಕಲೆ ಸುರಿಸುವುದೂ ಇಂಥ ಸ್ಥಿತಿಯಲ್ಲೇ. ಮಲೆನಾಡು, ಕರಾವಳಿ, ಬಯಲುಸೀಮೆ ಹೀಗೆ ತಂತಮ್ಮ ಕ್ಷೇತ್ರದ ಸೊಗಡನ್ನು ಎರಕ ಹೊಯ್ದಿದ್ದು ಕನ್ನಡ ಶಾಲೆಗಳೇ. ಕನ್ನಡ ಶಾಲೆಗಳಲ್ಲಿ ಆವರಣವನ್ನು ಗುಡಿಸುವ, ಸ್ವಚ್ಛಗೊಳಿಸುವ ಕಾರ್ಯದ ಜತೆಗೆ, ಗಿಡನೆಟ್ಟು ವನಮಹೋತ್ಸವ ಆಚರಿಸುವ ಕಾರ್ಯಕ್ರಮಗಳಲ್ಲೂ ಮಕ್ಕಳನ್ನು ತೊಡಗಿಸಲಾಗುವುದು. ಇಂಥ ನಡೆಗಳಿಂದ ಸ್ವಚ್ಛತೆ, ಪರಿಸರ ಸಂರಕ್ಷಣೆ, ದೇಶಪ್ರೇಮ ಮೊದಲಾದ ಪ್ರಜ್ಞೆಗಳು ಮಕ್ಕಳ ‘ಡಿಎನ್‌ಎ’ನಲ್ಲಿ ಬಂದಾವು, ಉಳಿದಾವು. ಇದು ಅತಿಶಯ ಎನಿಸಿದರೂ ಸತ್ಯ.
ಯಾವ ಆಂಗ್ಲ ಶಾಲೆಗಳಲ್ಲಿ ಮಕ್ಕಳು ಕಸ ಗುಡಿಸುತ್ತಾರೆ? ಅಷ್ಟೆಲ್ಲಾ ಶುಲ್ಕ ಕೊಟ್ಟ ನಂತರವೂ ಅವರು ಹಾಗೆ ಕಸ ಗುಡಿಸಲು ಪೋಷಕರು ಬಿಟ್ಟಾರೆಯೇ? ಜತೆಗೆ ಅದು-ಇದು ಸರಿಯಿಲ್ಲ ಎಂದು ಮಕ್ಕಳು ಗೊಣಗುತ್ತಿರುತ್ತಾರೆ. ಇಂಗ್ಲಿಷ್ ಶಾಲೆಗಳಲ್ಲಿ ಕನ್ನಡ ಐಚ್ಛಿಕ ಭಾಷೆ. ಹಾಗಾಗಿ ಅದರ ಕುರಿತು ಅಸಡ್ಡೆ. ನಮ್ಮ ಮನೆಯ ಮಕ್ಕಳನ್ನೂ ಒಳಗೊಂಡಂತೆ, ಅನೇಕ ಮಕ್ಕಳು ಬರೆಯುವ ಕನ್ನಡವನ್ನು ನೋಡಿದರೆ ಮನಸ್ಸಿಗೆ ಖೇದವಾಗುತ್ತದೆ. ಇದಕ್ಕೆ ಹಲವು
ಕಾರಣಗಳಿರಬಹುದು. ಮನೆಯಲ್ಲಿ ಮಾತಾಡುವುದು ಮಾತ್ರ ಕನ್ನಡ; ಇನ್ನು ಕೆಲವೊಂದು ಮನೆಗಳಲ್ಲಿ ಪೂರ್ತಿ ಇಂಗ್ಲಿಷ್.
ಹೀಗಾಗಿ ಕನ್ನಡವನ್ನು ಬರೆಯಲು ಬಾರದು, ಅಭಿವ್ಯಕ್ತಿಯಲ್ಲಿ ಗೊಂದಲ. ‘ಅಬ್ಬಾ, ಕನ್ನಡ ಪರೀಕ್ಷೆ ಮುಗೀತು; ಇನ್ನು ಮುಂದಿನ ತರಗತಿಗಳಲ್ಲಿಲ್ಲ’ ಎಂದು ಕೆಲ ಮಕ್ಕಳು ಹೇಳುವಾಗ ಕರುಳು ‘ಚುರ್’ ಎನ್ನುತ್ತದೆ. ಆದರೆ ಕನ್ನಡ ಶಾಲೆಯಲ್ಲಿ ಕನ್ನಡದ ಕಲಿಕೆ, ಆಡುವಿಕೆ, ಬರೆಯುವಿಕೆ ಸರಳವಾಗಿ, ಸುಲಲಿತವಾಗಿ ನೆರವೇರುತ್ತದೆ. ಶಿಕ್ಷಕರು ಕೂಡ ಕಲಿಸುವುದರ ಜತೆಗೆ ಮಕ್ಕಳನ್ನು ಪ್ರೀತಿಸುತ್ತಾರೆ. ಅವರ ಗದರಿಕೆಯ ಹಿಂದೆಯೂ ಪ್ರೀತಿ ವ್ಯಕ್ತವಾಗುತ್ತದೆ. ಮಕ್ಕಳಲ್ಲಿ ಅಂತರ್ಗತವಾಗಿರುವ ಕಲೆಗಳು ಮತ್ತು ಶಕ್ತಿಗಳು, ಅವರ ಆಸಕ್ತಿಗಳನ್ನು ಶಿಕ್ಷಕರು ಗುರುತಿಸಿ ಅವನ್ನು ಮತ್ತಷ್ಟು ಪುಟಗೊಳಿಸುತ್ತಾರೆ.
ಕನ್ನಡ ನಾಡಿನಲ್ಲಿ ಕೆಲಸ ಮಾಡುವ ಉತ್ತರ ಭಾರತದ ಹಿಂದಿ ಮಾತಾಡುವ ಜನರು ಕನ್ನಡವನ್ನು ಕಲಿಯಬೇಕು ಎಂಬುದೋ, ಅವರಿಗೆ ಕನ್ನಡವನ್ನು ಕಲಿಸಬೇಕು ಎಂಬುದೋ, ಕನ್ನಡ ನಾಡಿನಲ್ಲಿ ಕನ್ನಡದ ನಾಮಫಲಕಗಳನ್ನು ಕಡ್ಡಾಯಗೊಳಿಸುವ ಕಾರ್ಯಕ್ರಮಗಳೋ ಎಲ್ಲವೂ ಸರಿ, ತಪ್ಪಿಲ್ಲ. ಆದರೆ ಕನ್ನಡ ಶಾಲೆಗಳ ಅಸಡ್ಡೆ ಯಾಕೆ? ಕನ್ನಡ ಶಾಲೆಗಳನ್ನು ಉಳಿಸಿದರೆ ಅದು ಕೂಡ ಕನ್ನಡವನ್ನು ಕಟ್ಟುವ ಕಾಯಕವಲ್ಲವೇ? ಉಳ್ಳವರಿಂದ, ಪ್ರಭಾವಶಾಲಿ ಗಳಿಂದ ಎಲ್ಲೆಲ್ಲೂ ತಲೆಯೆತ್ತುತ್ತಿವೆ ಇಂಗ್ಲಿಷ್ ಶಾಲೆಗಳು.
ಇಂಥ ದೊಂದು ಪರಿಸ್ಥಿತಿ ರೂಪುಗೊಂಡಿರುವುದೇಕೆ ಎಂಬ ಕುರಿತು ಎಲ್ಲರೂ ಆಲೋಚಿಸಬೇಕು. ಇಂಥ ಪ್ರಭಾವಶಾಲಿಗಳು ಸ್ನಾತಕ ಹಾಗೂ ಸ್ನಾತಕೋ ತ್ತರ, ಮೆಡಿಕಲ್, ಎಂಜಿನಿಯರಿಂಗ್ ಇತ್ಯಾದಿ ವೃತ್ತಿಪರ ಶಿಕ್ಷಣದ ಕಾಲೇಜುಗಳನ್ನು ತೆರೆಯಲಿ. ಅದು ತೊಂದರೆಯಿಲ್ಲ, ಉತ್ತಮವೇ. ಆದರೆ ಒಂದರಿಂದ ಐದು ಅಥವಾ ಏಳನೆಯ ತರಗತಿಯವರೆಗಾದರೂ ಮಕ್ಕಳು ಕನ್ನಡ ಶಾಲೆಯಲ್ಲಿ ಓದಲು ಅನುವು ಮಾಡಿಕೊಡಬೇಕು. ಅಲ್ಲಿ ಯಾವ ಜಾತಿ-ಧರ್ಮಗಳ ಹೇರುವಿಕೆ ಇರುವುದಿಲ್ಲ. ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಪ್ರೀತಿ ಮತ್ತು ಅನುಬಂಧ ಅಲ್ಲಿ ಗಟ್ಟಿಯಾಗಿರುತ್ತದೆ. ಅದೇ ವೃತ್ತಿಪರ ಕಾಲೇಜುಗಳಲ್ಲಿ ಇಂಥ ಸಂಬಂಧ ಮತ್ತು ಅನ್ಯೋನ್ಯ ಭಾವನೆ ಕಾಣಸಿಗದು.
ತಾಯಿಬೇರನ್ನೇ ಕಿತ್ತು, ಮರವು ಹೆಮ್ಮರವಾಗಬೇಕೆಂದು ಬಯಸಿದರೆ ಅದು ಬರೀ ಭ್ರಮೆಯಾಗುತ್ತದೆ. ‘ಕನ್ನಡವನ್ನು ಉಳಿಸಿ-ಬೆಳೆಸಿ’ ಎಂಬ ಆಂದೋಲನ ಬರೀ ಬೂಟಾಟಿಕೆ ಆಗಬಾರದು. ಕನ್ನಡ ಶಾಲೆಗಳನ್ನು ಉಳಿಸಿ, ಮಕ್ಕಳಲ್ಲಿ ಕನ್ನಡತನವನ್ನು ಬೆಳೆಸಿದರೆ, ಅವರೆಂದಿಗೂ ಕನ್ನಡ ಪ್ರೇಮಿಗಳೇ ಆಗಿರುತ್ತಾರೆ. ಹಾಗಾದರೆ ಕನ್ನಡ ಶಾಲೆಗಳನ್ನು ಉಳಿಸುವ ಬೆಳೆಸುವ ಜವಾಬ್ದಾರಿ ಯಾರದ್ದು? ಅದು ಶಿಕ್ಷಕರದ್ದು, ಸುತ್ತಲಿನ ನಾಗರಿಕರದ್ದು ಹಾಗೂ ಸರಕಾರದ್ದು.
ಹೀಗೆ ಅದು ಒಂದು ಸಮುದಾಯದ ಜವಾಬ್ದಾರಿ. ಅದು ಒಂದು ಆಂದೋಲನದ ರೀತಿಯಲ್ಲಿ ಪುನರುಜ್ಜೀವನಗೊಳ್ಳಬೇಕಿದೆ.
ಎಲ್ಲಾ ವ್ಯವಸ್ಥೆಗಳು ಮನೆ ಬಾಗಿಲಲ್ಲಿ ಒದಗಿದರೆ ಪ್ರಾಯಶಃ ಏಳನೆಯ ತರಗತಿಯವರೆಗೆ ಯಾವ ಸಮಸ್ಯೆಗಳೂ ಇರುವುದಿಲ್ಲ. ಹಾಗಂತ, ಹೀಗೆ ಬರೆಯು ತ್ತಿರುವ ನಾನು ಆಂಗ್ಲಶಾಲೆಗಳ ವಿರೋಧಿಯಲ್ಲ. ಅಲ್ಲಿ ಅಳವಡಿಸಿಕೊಂಡಿರುವ ಉತ್ತಮ ಅಂಶಗಳನ್ನು ಕನ್ನಡ ಶಾಲೆಗಳಲ್ಲೂ ಅಳವಡಿಸಿಕೊಳ್ಳ ಬಹುದು. ಉದಾಹರಣೆಗೆ, ಶಿಕ್ಷಕ-ಪೋಷಕ ಭೇಟಿಗಳು. ಮಕ್ಕಳ ಸರ್ವತೋಮುಖ ಬೆಳವಣಿಗೆಯಲ್ಲಿ ಶಿಕ್ಷಕರು ಮತ್ತು ಪೋಷಕರು ಹೇಗೆ ಭಾಗಿಗಳಾಗ ಬೇಕು ಎಂಬುದನ್ನು ಇಂಥ ಭೇಟಿಗಳು ತಿಳಿಹೇಳುತ್ತವೆ. ಮಕ್ಕಳಲ್ಲಿ ವಾಕ್ ಚಾತುರ‍್ಯ, ವಿಷಯ ಪ್ರಸ್ತುತಪಡಿಸುವ ಕಲೆಗಳನ್ನು ಉತ್ತಮ ಗೊಳಿಸುವುದು, ಒಟ್ಟಾರೆ ಒಬ್ಬ ಸಬಲ ವ್ಯಕ್ತಿಯಾಗಿ ವಿದ್ಯಾರ್ಥಿಯನ್ನು ಮಾರ್ಪಡಿಸುವುದು ಇಂಥ ಭೇಟಿಗಳ ಗುರಿಯಾಗಬೇಕು.
(ಲೇಖಕರು ಹವ್ಯಾಸಿ ಬರಹಗಾರರು)