ಕಸ್ತೂರಿಕಂಪು
ಲಕ್ಷ್ಮೀ ಕಿಶೋರ್ ಅರಸ್
ಬ್ರಿಟಿಷರ ಬಿಗಿಮುಷ್ಟಿಯಿಂದ ಬಿಡಿಸಿಕೊಂಡು ಭಾರತವು ಸ್ವತಂತ್ರವಾದ ನಂತರ, ಮೈಸೂರು ಸಂಸ್ಥಾನವು ಭಾರತದ ಒಕ್ಕೂಟ ವನ್ನು ಸೇರಿಕೊಂಡಿತು. ಈ ಸಂಸ್ಥಾನವನ್ನು ಆಳುತ್ತಿದ್ದ ಮಹಾರಾಜರಾದ ಜಯಚಾಮರಾಜೇಂದ್ರ ಒಡೆಯರು ರಾಜ್ಯದ ರಾಜ ಪ್ರಮುಖ ರೆನಿಸಿಕೊಂಡರು.
ಏಕೀಕರಣ ಚಳವಳಿಯ ಫಲಶ್ರುತಿಯಾಗಿ ೧೯೫೬ರ ನವೆಂಬರ್ ೧ರಂದು, ರಾಜ್ಯಗಳ ಪುನರ್‌ಸಂಘಟನೆಯ ಕಾಯ್ದೆಯನುಸಾರ, ಅಂದಿನ ಮೈಸೂರು ಸಂಸ್ಥಾನದ ಸುತ್ತಲ ಕೊಡಗು, ಮದರಾಸು, ಹೈದರಾಬಾದ್, ಮಹಾರಾಷ್ಟ್ರ ಪ್ರಾಂತ್ಯಗಳ ಕನ್ನಡ ಭಾಷಿಕ ಪ್ರದೇಶಗಳು ಸೇರಿಕೊಂಡು ವಿಶಾಲ ಮೈಸೂರು ರಾಜ್ಯ ಅಸ್ತಿತ್ವಕ್ಕೆ ಬಂತು. ಡಿ.ದೇವರಾಜ ಅರಸು ಅವರು ರಾಜ್ಯದ ಮುಖ್ಯಮಂತ್ರಿ
ಯಾಗಿದ್ದಾಗ, ೧೯೭೩ರ ನವೆಂಬರ್ ೧ರಂದು ರಾಜ್ಯಕ್ಕೆ ‘ಕರ್ನಾಟಕ’ ಎಂದು ಮರುನಾಮಕರಣವಾಯಿತು. ಇಂಥ ನೆಲೆಯಲ್ಲಿ
ನೆಲೆಸಿರುವ ನಾವೇ ಧನ್ಯರು.
ಪ್ರಪಂಚದ ಆಡುಭಾಷೆಗಳಲ್ಲೇ ಕನ್ನಡ ಅತ್ಯಂತ ಸುಂದರ; ಇದು ಸುಲಿದ ಬಾಳೆಯ ಹಣ್ಣಿನಂತೆ ಸುಲಲಿತ, ಕಬ್ಬಿನಂತೆ ರಸಭರಿತ
ಎಂದು ಕವಿಗಳು ಹೇಳಿದ್ದಾರೆ. ಕನ್ನಡ ಭಾಷೆಯ ಲಿಪಿ, ಸಂಸ್ಕೃತಿ, ವೈಭವಕ್ಕೆ ಸುಮಾರು ೨೦೦೦ಕ್ಕೂ ಅಧಿಕ ವರ್ಷಗಳ ಇತಿಹಾಸ ವಿದೆ. ಕನ್ನಡ ನಾಡು-ನುಡಿಯನ್ನು ಕಟ್ಟಿ ಬೆಳೆಸುವಲ್ಲಿ ಹಲವಾರು ಮಹನೀಯರ ಕೊಡುಗೆಯಿದೆ. ಕನ್ನಡನಾಡನ್ನು ಆಳಿರುವ ಹಲವಾರು ರಾಜವಂಶಗಳೂ ಕನ್ನಡ ಭಾಷೆಯ ಬೆಳವಣಿಗೆಗೆ ಕಾರಣವಾಗಿವೆ.
ವಿಶ್ವದ ನಾನಾ ಪ್ರದೇಶಗಳಲ್ಲಿ ಕನ್ನಡ ಭಾಷೆಯ ಲಿಪಿಗಳು ದೊರೆತಿದ್ದು, ಇದು ಕನ್ನಡಕ್ಕಿದ್ದ ಪ್ರಾಮುಖ್ಯವನ್ನು ಸಾಬೀತು ಪಡಿಸುತ್ತದೆ. ಜಗತ್ತಿನಲ್ಲಿ ಗಣನೀಯ ಸಂಖ್ಯೆಯ ಜನರು ಬಳಸುವ ೨೯ನೇ ಆಡುಭಾಷೆ ಎಂಬ ಸ್ಥಾನ ಕನ್ನಡಕ್ಕಿದೆ. ಬ್ರಾಹ್ಮೀ ಲಿಪಿಯನ್ನು ಆಧರಿಸಿ ರೂಪುಗೊಂಡಿರುವ ಕನ್ನಡ ಭಾಷೆಯು ದ್ರಾವಿಡ ಭಾಷೆಗಳ ಪೈಕಿ ತನ್ನದೇ ಆದ ಸ್ಥಾನವನ್ನು ಪಡೆದು ಕೊಂಡಿದೆ. ಹರಪ್ಪ ನಾಗರಿಕತೆಯ ಪ್ರದೇಶದಲ್ಲಿ ಉತ್ಖನನ ನಡೆಸಿದಾಗ ದೊರೆತ ಚಿನ್ನದ ನಾಣ್ಯಗಳು ಕರ್ನಾಟಕ ಮೂಲದವು ಎಂಬುದು ಸಾಬೀತಾಗಿದೆ. ಒಂದು ಕಾಲಕ್ಕೆ ಕನ್ನಡದ ಅಸ್ಮಿತೆ ಮತ್ತು ಅಸ್ತಿತ್ವ ಎಲ್ಲಿಯವರೆಗೂ ವ್ಯಾಪಿಸಿತ್ತು ಎಂಬುದಕ್ಕೆ ಇದೊಂದು ಪುಟ್ಟ ಉದಾಹರಣೆಯಷ್ಟೇ.
ಕನ್ನಡ ನೆಲ ಹಾಗೂ ಸಿಂಧೂ ಕಣಿವೆಯ ನಾಗರಿಕತೆಯ ನಡುವೆ ಸಂಬಂಧವಿದ್ದುದನ್ನು ಇತಿಹಾಸತಜ್ಞರು ತಿಳಿಸಿದ್ದಾರೆ. ಹಲ್ಮಿಡಿ ಶಾಸನ, ಇತ್ತೀಚೆಗೆ ದೊರೆತ ತಾಳಗುಂದ ಶಾಸನ ಹಾಗೂ ಬನವಾಸಿಯಲ್ಲಿ ದೊರೆತ ತಾಮ್ರದ ನಾಣ್ಯಗಳು ಕರುನಾಡಿನ ಗತವೈಭವವನ್ನು ಸಾರಿ ಸಾರಿ ಹೇಳುವ ದ್ಯೋತಕಗಳು ಎಂದರೆ ಅತಿಶಯೋಕ್ತಿಯಲ್ಲ. ಪ್ರಪಂಚದ ಎಲ್ಲಾ ಭಾಷೆಗಳನ್ನು ಮತ್ತು ಅವುಗಳ ಉತ್ತಮಿಕೆಗಳನ್ನು ಅರಗಿಸಿಕೊಳ್ಳುವಶಕ್ತಿಯಿದೆ ಕನ್ನಡ ಭಾಷೆಗೆ. ಇಂಥದೇ ಅಭಿಪ್ರಾಯವನ್ನು ಕುಮುದೇಂದುಮುನಿ ಅವರು ತಮ್ಮ ಗ್ರಂಥದಲ್ಲಿ ಉಲ್ಲೇಖಿಸಿದ್ದೂ ಇದೆ. ಜೈನಧರ್ಮದ ಆದಿ ತೀರ್ಥಂಕರ ವೃಷಭದೇವನು ‘ಬ್ರಾಹ್ಮೀ’ ಮತ್ತು ‘ಸುಂದರಿ’ ಎಂಬ ಹೆಸರಿನ ತನ್ನ ಕುಮಾರಿಯರಿಗೆ ಕನ್ನಡದ ಅಕ್ಷರ ಮತ್ತು ಅಂಕಲಿಪಿಗಳನ್ನು ವಿವರಿಸಿದ ಕಾರಣ, ಅಕ್ಷರ ಲಿಪಿಗೆ ‘ಬ್ರಾಹ್ಮೀ’ಲಿಪಿ ಎಂದೂ, ಅಂಕಲಿಪಿಗೆ ‘ಸುಂದರಿ’ಲಿಪಿ ಎಂದೂ ಕರೆಯಲಾಗುತ್ತದೆ ಎನ್ನುತ್ತಾರೆ ಬಲ್ಲವರು.
ರಾಷ್ಟ್ರಕೂಟರ ಪ್ರಸಿದ್ಧ ದೊರೆ ಅಮೋಘವರ್ಷ ನೃಪತುಂಗನ ಆಸ್ಥಾನದಲ್ಲಿದ್ದ ಕವಿ ಶ್ರೀವಿಜಯನ ‘ಕವಿರಾಜಮಾರ್ಗ’ ಕೃತಿ ಯಲ್ಲಿ ‘ಕಾವೇರಿಯಿಂದ ಗೋದಾವರಿವರೆಗೂ ಹಬ್ಬಿದ್ದ’ ನಾಡಾಗಿತ್ತು ನಮ್ಮ ಕರುನಾಡು ಎಂಬ ಉಲ್ಲೇಖವಿದೆ. ಇನ್ನು ಜರ್ಮನಿಯ ಫರ್ಡಿನೆಂಡ್ ಕಿಟೆಲ್‌ರಂಥ ವಿದೇಶಿ ವಿದ್ವಾಂಸರು, ಅಷ್ಟು ದೂರದಿಂದ ಇಲ್ಲಿಗೆ ಧರ್ಮಪ್ರಚಾರಕ್ಕೆಂದು ಬಂದವರು, ಕನ್ನಡದ ಸೊಬಗು-ಸೌಂದರ್ಯಕ್ಕೆ ಮನಸೋತು ‘ಕನ್ನಡ ಪದಕೋಶ’ ರಚಿಸುವ ತಪಸ್ಸಿನಲ್ಲಿ ವ್ಯಸ್ತರಾಗಿ ಅದನ್ನು ಕಾರ್ಯ ರೂಪಕ್ಕೆ ತಂದಿದ್ದನ್ನು ಪಠ್ಯಗಳಲ್ಲಿ ಓದಿದ್ದೇವೆ.
ಹೇಳುತ್ತ ಹೋದರೆ, ಕನ್ನಡದ ಹೆಗ್ಗಳಿಕೆಯನ್ನು ಅನಾವರಣಗೊಳಿಸುವ ಇಂಥ ಸಾಕಷ್ಟು ಪುರಾವೆಗಳು ಸಿಗುತ್ತವೆ. ‘ಉಚ್ಚರಿಸಿ ದ್ದನ್ನೇ ಬರೆಯುವ ಮತ್ತು ಬರೆದಿದ್ದನ್ನೇ ಉಚ್ಚರಿಸಲಾಗುವ’ ಕನ್ನಡ ವರ್ಣ ಮಾಲೆಯು ತಾರ್ಕಿಕವಾಗಿಯೂ, ವೈಜ್ಞಾನಿಕ ವಾಗಿಯೂ ನಿಷ್ಕೃಷ್ಟವಾದುದು ಎಂಬುದು ಸಾಬೀತಾಗಿದೆ. ವಿಶ್ವಮಾನವ ಸಂದೇಶವನ್ನು ಜಗದ ಮುಂದೆ ಹರವಿಟ್ಟ ರಸಋಷಿ ಮತ್ತು ರಾಷ್ಟ್ರಕವಿ ಕುವೆಂಪು ಅವರು ಕನ್ನಡದ ಹೆಮ್ಮೆ. ಎಂಟು ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆದು ಬೀಗುತ್ತಿರುವುದೂ ಕನ್ನಡ ಸಾರಸ್ವತ ಲೋಕವೇ. ಎರಡನೇ ಶತಮಾನದಲ್ಲಿ ಗ್ರೀಕ್ ವಿದ್ವಾಂಸನೊಬ್ಬ ತನ್ನ ಬರಹದಲ್ಲಿ ಕನ್ನಡ ಭಾಷೆಯನ್ನು ಬಳಸಿರುವ ಕುರುಹುಗಳಿವೆ. ಭಾರತದ ಶಾಸೀಯ ಸಂಗೀತ ಪರಂಪರೆಯಲ್ಲಿ ‘ಕರ್ನಾಟಕ ಸಂಗೀತ’ವು ತನ್ನದೇ ವಿಶಿಷ್ಟ ಸ್ಥಾನವನ್ನು ಗುರುತಿಸಿಕೊಂಡಿರುವುದನ್ನು ಬಿಡಿಸಿ ಹೇಳಬೇಕಿಲ್ಲ. ಈಗ ಹೇಳಿ, ಈ ಮಣ್ಣಿನಲ್ಲಿ ಹುಟ್ಟಿದ್ದಕ್ಕೆ ನಾವು ಹೆಮ್ಮೆ ಪಡಬೇಕಲ್ಲವೇ?
(ಲೇಖಕರು ಸಹಾಯಕ ಪ್ರಾಧ್ಯಾಪಕರು)