Thursday, 3rd October 2024

ಅಪ್ಪಟ ಕನ್ನಡದ ಗವಿಪುರ, ಗುಟ್ಟಹಳ್ಳಿಯವರಿಗೂ ಇಂಗ್ಲಿಷ್ ರೋಗ

ಇದೇ ಅಂತರಂಗ ಸುದ್ದಿ

vbhat@me.com

ಲಂಡನ್‌ನಲ್ಲಿ ಮೂವತ್ತೆಂಟು ವರ್ಷಗಳಿಂದ ವಾಸವಾಗಿರುವ ಕನ್ನಡಿಗ ಪದ್ಮನಾಭರಾವ್ ಕೆಲ ವರ್ಷದ ಹಿಂದೆ ಭೇಟಿಯಾಗಿದ್ದರು. ಉದ್ಯೋಗ ನಿಮಿತ್ತ ಅವರು ಅಲ್ಲಿ ನೆಲೆಸಿದ್ದರೂ ಮನಸ್ಸು ಅಪ್ಪಟ ಗಾಂಧಿಬಜಾರು, ಸಂಪಿಗೆ ರಸ್ತೆ. ತಾಯ್ನಾಡಿನ ಜತೆಗೆ ಸತತ ಸಂಪರ್ಕ, ಒಡನಾಟ ಇಟ್ಟುಕೊಂಡವರು. ಇಲ್ಲಿನ ಆಗು-ಹೋಗುಗಳ ಬಗ್ಗೆ ಸೂಕ್ಷ್ಮ ಒಳನೋಟ ಹೊಂದಿದವರು. ಅವರೊಂದಿಗೆ ಉಭಯಕುಶಲೋಪರಿ ಮಾತಾಡುವಾಗ ಒಂದು ಸಂಗತಿಯನ್ನು ಪ್ರಸ್ತಾಪಿಸಿದರು. ಅದು ನಮ್ಮೆಲ್ಲರ ಸಂವೇದನೆ, ಅನುಭವಕ್ಕೆ ಬಂದಿರಬಹುದಾದ ವಿಷಯವೇ. ಆದರೆ ಹೊರಗಿನವರಾಗಿ ನಮ್ಮನ್ನು ನೋಡಿದವರು ಹೇಳಿದರೆ ಅದರ ಮಹತ್ವವೇ ಬೇರೆ.

ಪದ್ಮನಾಭರಾವ್ ಹೇಳಿದರು- ‘ಕನ್ನಡಿಗರ ಇಂಗ್ಲಿಷ್ ವ್ಯಾಮೋಹ ಜಾಸ್ತಿಯಾಗುತ್ತಿದೆ. ನಾನು ಲಂಡನ್‌ಗೆ ಹೋದ ದಿನಗಳಿಂದಲೂ ಕುತೂಹಲದಿಂದ ಗಮನಿಸು ತ್ತಿದ್ದೇನೆ. ವರ್ಷದಿಂದ ವರ್ಷಕ್ಕೆ ಈ ಗೀಳು ಹೆಚ್ಚಾಗುತ್ತಿದೆ. ಕನ್ನಡಿಗರೆಲ್ಲರಿಗೂ ಇಂಗ್ಲಿಷ್ ಮಾತಾಡುವ ಚಪಲ. ತಮ್ಮೊಂದಿಗೆ ಮಾತನಾಡುವವನಿಗೆ ಕನ್ನಡ ಬರುತ್ತೆ ಎಂಬುದು ಚೆನ್ನಾಗಿ ಗೊತ್ತಿದ್ದರೂ ಇಂಗ್ಲಿಷಿನಲ್ಲಿಯೇ ಮಾತಾಡುತ್ತಾರೆ. ಇನ್ನು ಪಂಚತಾರಾ ಹೋಟೆಲ್, ಪಾರ್ಟಿ, ಏರ್ ಪೋರ್ಟ್, ವಿಮಾನದಲ್ಲಿ ಭೇಟಿಯಾದಾಗ ಕನ್ನಡದಲ್ಲಿ ಮಾತಾಡಿದರೆ ತಮ್ಮ ಸ್ಥಾನಮಾನ, ಪ್ರತಿಷ್ಠೆಗೆ ಧಕ್ಕೆಯಾಗುವುದು ಎಂದು ಭಾವಿಸಿದವರಂತೆ, ಕಡ್ಡಾಯವಾಗಿ ಇಂಗ್ಲಿಷಿನಲ್ಲಿ ಮಾತಾಡಬೇಕೆಂಬ ನಿಯಮವನ್ನು ಚಾಚೂತಪ್ಪದೇ ಪಾಲಿಸುವವರಂತೆ ಇಂಗ್ಲಿಷಿನಲ್ಲಿ ಮಾತಾಡುತ್ತಾರೆ.

ಮೊನ್ನೆ ಒಂದು ಪಾರ್ಟಿಯಲ್ಲಿ ಇಬ್ಬರು ಕನ್ನಡಿಗರು ತಾವು ಕನ್ನಡ ಶಾಲೆಯಲ್ಲಿ ಕಲಿತ ದಿನಗಳನ್ನು ಇಂಗ್ಲಿಷಿನಲ್ಲಿ ಮೆಲುಕು ಹಾಕುವುದುನ್ನು ಕೇಳುವುದಕ್ಕೆ ಬಹಳ
ತಮಾಷೆಯಾಗಿತ್ತು. You know I was expert in Buguri ಅಂತ ಒಬ್ಬ ಹೇಳುತ್ತಿದ್ದ. I was fond of chinnidandu ಅಂತ ಮತ್ತೊಬ್ಬ ಹೇಳುತ್ತಿದ್ದ. I never forget Vidyarthi Bhavan dosa ಎಂದು ಇಬ್ಬರೂ ಮೆಲ್ಲುತ್ತಿದ್ದರು. ಸುಮಾರು ಇಪ್ಪತ್ತು ನಿಮಿಷಗಳ ಅವರ ಸಂಭಾಷಣೆಯಲ್ಲಿ ಅಪ್ಪಿ-ತಪ್ಪಿಯೂ ಕನ್ನಡ ಇಣುಕಲಿಲ್ಲ. ಥೇಮ್ಸ್ ನದಿಯಲ್ಲಿ ಅದನ್ನು ತೊಳೆದುಕೊಂಡು ಬಂದವರಂತೆ ಇಂಗ್ಲಿಷಿನಲ್ಲಿ ಠಸ್ಸು-ಪುಸ್ಸು ಅನ್ನುತ್ತಿದ್ದರು. ಇದು ನನಗೆ ಅರ್ಥವೇ ಆಗದ ಸಂಗತಿ.’ ನಾನು ಎರಡೂ ಕಿವಿ ಹಾಗೂ ಮನಸ್ಸನ್ನು ಅವರಿಗೇ ಅರ್ಪಿಸಿ ಕುಳಿತಿದ್ದೆ. ‘ಬೆಂಗಳೂರಿನಲ್ಲಿ ಹೋಗುವಾಗ ಯಾರ ಹತ್ತಿರವಾದರೂ ಕನ್ನಡದಲ್ಲಿ ದಾರಿ ಕೇಳಿದರೂ ಇಂಗ್ಲಿಷಿನಲ್ಲಿಯೇ ಹೇಳುತ್ತಾರೆ. ನಾನು ಕನ್ನಡದವನೆಂದು ಗೊತ್ತಿದ್ದರೂ ಕನ್ನಡದಲ್ಲಿ ಮಾತಾಡುವುದಿಲ್ಲ.

ಗವಿಪುರ, ಗುಟ್ಟಹಳ್ಳಿ, ಬಸವನಗುಡಿಯಂಥ ಅಪ್ಪಟ ಕನ್ನಡದ ಪ್ರದೇಶಗಳಲ್ಲಿಯೂ ಇಂಗ್ಲಿಷ್ ರೋಗ. ನನಗಂತೂ ಇಡೀ ಬೆಂಗಳೂರು ನಗರವನ್ನು ನೋಡಿದರೆ ಬೃಹತ್, ಭವ್ಯ ಇಂಗ್ಲಿಷ್ ಟ್ಯೂಶನ್ ಕ್ಲಾಸಿನಂತೆ ಗೋಚರಿಸುತ್ತದೆ. ಐದಾರು ವರ್ಷಗಳ ಹಿಂದೆ ಹೀಗಿರಲಿಲ್ಲ. ಈಗ ಎಲ್ಲರ ನಾಲಗೆಯ ಮೇಲೂ ಇಂಗ್ಲಿಷ್ ಪದಗಳ ಭೂತನರ್ತನ. ನಾನು ಇಂಗ್ಲಿಷಿನಲ್ಲಿ ಮಾತಾಡುತ್ತಿದ್ದೇನೆಂಬ ಹುಸಿ ಹಮ್ಮು. ನಾನೂ ಜಗತ್ತಿನ ಅನೇಕ ದೇಶಗಳಿಗೆ ಹೋಗಿದ್ದೇನೆ. ಆ ಯಾವ ದೇಶಗಳಲ್ಲೂ ಕಾಣದ ವಿಚಿತ್ರ ಗೀಳು ಬೆಂಗಳೂರನ್ನು ಆವರಿಸಿಕೊಂಡಿದೆ. ಎಲ್ಲರಿಗೂ ಇಂಗ್ಲಿಷ್ ಮಾತಾಡುವ ಖಯಾಲಿ.

ಹಾಗಂತ ಇವರೆಲ್ಲ ಇಂಗ್ಲಿಷಿನಲ್ಲಿ ಪ್ರಯಾಸಪಟ್ಟು ಪಾಸಾದವರಿರ ಬಹುದು. ನಾಲ್ಕು ಸಾಲು ಇಂಗ್ಲಿಷ್ ಕೇಳಿದರೆ, ಅವರದು ಹೈಬ್ರಿಡ್ ಇಂಗ್ಲಿ ಷ್ ಎಂದು ತಟ್ಟನೆ ಗೊತ್ತಾಗುತ್ತದೆ. ಪರವಾಗಿಲ್ಲ, ಆದರೆ ಅವರಿಗೆ ಆ ಹರುಕು ಮುರುಕು ಭಾಷೆಯೇ ಇಷ್ಟ. ಬೆಂಗಳೂರಿನಲ್ಲಿ ಕನ್ನಡದ ಭವಿಷ್ಯ ನೆನೆದರೆ ಆತಂಕವಾಗುತ್ತದೆ.’ ಬೆಂಗಳೂರಿನ ಇಂಗ್ಲಿಷ್ ಗಾಳಿ ಅವರನ್ನು ಕಂಗೆಡಿಸಿತ್ತು. ಎಲ್ಲರಲ್ಲೂ ಹೊಕ್ಕಿರುವ ಇಂಗ್ಲಿಷ್ ಭೂತದಿಂದ ಅವರು ವಿಹ್ವಲರಾಗಿದ್ದರು. ‘ಕನ್ನಡಿಗರೇ ಕನ್ನಡವನ್ನು
ಸಾಯಿಸಲು ಹೊರಟಂತಿದೆ. ಕನ್ನಡ ಕಲಿತರೆ ಇಲ್ಲೇ ಸಾಯಬೇಕು, ಒಳ್ಳೆಯ ಉದ್ಯೋಗ, ಉತ್ತಮ ಜೀವನಕ್ಕೆ ಇಂಗ್ಲಿಷ್ ಬೇಕೇಬೇಕು ಎಂಬ ‘ಬಹುದೊಡ್ಡ ಸತ್ಯ’ವನ್ನು ಎಲ್ಲರೂ ಅರಿತವರಂತೆ, ಜ್ಞಾನೋದಯ ಹೊಂದಿದವರಂತೆ ವರ್ತಿಸುತ್ತಿದ್ದಾರೆ.

ನನಗೆ ಎಲ್ಲವೂ ಗೋಜಲು ಗೋಜ ಲಾಗಿ, ತಮಾಷೆಯಾಗಿ, ಕ್ರೂರ ಅಣಕವಾಗಿ, ಸ್ವಾಭಿಮಾನ ಹೀನತೆಯ ಪರಾಕಾಷ್ಠೆಯಾಗಿ ಕಾಣುತ್ತಿದೆ. ಯಾರಿಗೆ ಗೊತ್ತು, ನಾನೇ ತಪ್ಪಿರಬಹುದು, ಅಪ್ರಸ್ತುತನಾಗಿರಬಹುದು’ ಎಂದು ಪದ್ಮನಾಭರಾವ್ ಮ್ಲಾನವದನರಾದರು. ನಾನು ಗಮನವಿಟ್ಟು ಆಲಿಸುತ್ತಲೇ ಇದ್ದೆ. ಅವರು ಮಾತಿನ
ಮಧ್ಯೆ ಅಪ್ಪಿತಪ್ಪಿಯೂ ಒಂದೇ ಒಂದು ಇಂಗ್ಲಿಷ್ ಪದ ಬಳಸಲಿಲ್ಲ. ಅಂದಹಾಗೆ ಪದ್ಮನಾಭರಾವ್ ಲಂಡನ್‌ನ ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ಉನ್ನತ ಹುದ್ದೆಯಲಿರುವ, ಶುದ್ಧ ವಿಕ್ಟೋರಿಯನ್ ಇಂಗ್ಲಿಷಿನಲ್ಲಿ ವ್ಯವಹರಿಸುವವರು.‘ಮಾತೃಭಾಷೆ ಅಂದ್ರೆ ಸೈಕಲ್ಲೋ, ಈಜೋ ಕಲಿತಂತೆ. ಒಮ್ಮೆ ಕಲಿತರೆ ಮರೆತು
ಹೋಗಲ್ಲ. ಕನ್ನಡ ಗೊತ್ತಿಲ್ಲದವನ ಬಳಿ ಇಂಗ್ಲಿಷ್ ಮಾತಾಡಬೇಕಾದುದು ಕರ್ಮ.

ಆದರೆ ಕನ್ನಡದವನ ಜತೆ ಇಂಗ್ಲಿಷಿನಲ್ಲಿ ಮಾತಾಡೋದು ಯಾವ ಕರ್ಮ ಸ್ವಾಮಿ!? ಇದು ಈ ಜನ್ಮಕ್ಕೆ ವಾಸಿಯಾಗದ ಏಡ್ಸ್‌ಗಿಂತ ಭಯಂಕರ ಕಾಯಿಲೆ. ಏಡ್ಸ್‌ಗಾದರೂ ಔಷಧ ಕಂಡು ಹಿಡಿಯುತ್ತಿದ್ದಾರೆ. ಆದರೆ ಈ ಕಾಯಿಲೆಗೆ ಔಷಧವಿಲ್ಲ. ಕನ್ನಡಿಗನ ಬಾಯಲ್ಲಿ ಇಂಗ್ಲಿಷ್ ಹುಳ ಬಿದ್ದೋಗ ಎಂದು ಯಾರೋ, ಎಂದೋ ಹಾಕಿದ ಶಾಪ ಈಗ ಎಲ್ಲರನ್ನೂ ತಟ್ಟಿದೆ.’ ಎಂದರು. ‘ಬ್ರಿಟಿಷ್ ಮಹಿಳೆಯನ್ನು ಮದುವೆಯಾಗಿ, ಮಕ್ಕಳೆಲ್ಲ ಅಲ್ಲೇ ಬೆಳೆದರೂ, ಮನೆಯಲ್ಲಿ ಇಂಗ್ಲಿಷ್ ಮಾತಾಡಿ ಕೊಂಡು, ನಿಮ್ಮ ಕನ್ನಡವನ್ನು ಇಷ್ಟು ಚೆಂದವಾಗಿ, ಸುರಕ್ಷಿತವಾಗಿ ಇಟ್ಟುಕೊಂಡಿದ್ದೀರಲ್ಲ, ಏನಿದರ ರಹಸ್ಯ?’ ಎಂದು ಕೇಳಿದೆ.

‘ಇದರಲ್ಲೇನು ಬಂತು ರಹಸ್ಯ? ಇದೇನು ಮಹಾ? ಮಾತೃಭಾಷೆ ಹೇಗೆ ಮರೆಯುತ್ತೆ? ನಿಮ್ಮ ಹೆಸರು, ತಾಯಿ ಹೆಸರು ಮರೆತು ಹೋಗುತ್ತಾ? ನನಗೆ ಕನ್ನಡ ಭಾಷೆ ನೆನಪಿಟ್ಟುಕೊಳ್ಳುವುದು ಕಷ್ಟ ಅಲ್ಲ, ಮರೆಯುವುದೇ ಕಷ್ಟ. ಕೆಲವು ದೊಡ್ಡ ಮಂದಿ ಆರಂಭದಲ್ಲಿ ಕಾಟಾಚಾರಕ್ಕೆ ಎರಡು ಸಾಲು ಕನ್ನಡದಲ್ಲಿ ಹೇಳಿ, ದಯವಿಟ್ಟು ಕ್ಷಮಿಸಿ, ನಾನು ಇಂಗ್ಲಿಷಿನಲ್ಲಿ ಮಾತಾಡುತ್ತೇನೆಂದು ಹೇಳುವುದನ್ನು ಕೇಳಿದ್ದೇನೆ. ಇವರು ಮಹಾನ್ ನಾಟಕಕಾರರು, ಸೋಗಲಾಡಿಗಳು. ಅದಿರಲಿ, ನನಗೆ ಅನಿಸುತ್ತದೆ, ಬೆಂಗಳೂರಿನಲ್ಲಿ ಕನ್ನಡದ ಬಗ್ಗೆ ಅಂಟಿಕೊಂಡ ಕೀಳರಿಮೆಯ ಮೈಲಿಗೆ ತೊಡೆಯಲು ದೊಡ್ಡ ಚಳವಳಿಯೇ ಆಗಬೇಕು. ಇಲ್ಲದಿದ್ದರೆ ಈಗ ನಾಲಗೆ ಮೇಲಿರುವ ಇಂಗ್ಲಿಷ್ ಪದಗಳೆಲ್ಲ ಕ್ರಮೇಣ ರಕ್ತಗತವಾಗಬಹುದು.’

ಪದ್ಮನಾಭರಾವ್ ಅವರು ಬೆಂಗಳೂರಿನಲ್ಲಿರುವ ಸದ್ಯದ ಸ್ಥಿತಿ-ಗತಿಗೆ ಭೂತಕನ್ನಡಿ ಹಿಡಿದಿದ್ದರು. ಅವರ ಮಾತು ಕೇಳಿದ ಬಳಿಕ ಎಲ್ಲರ ಮನೆಗಳಿಗೂ ಇಂಗ್ಲಿಷ್ ಮೋರಿ ನೀರು ನುಗ್ಗಿದಂತೆ, ಎಲ್ಲರ ಮನೆಗಳನ್ನು ಇಂಗ್ಲಿಷ್ ರಾಜಾ ಕಾಲುವೆ ಮೇಲೆ ನಿರ್ಮಿಸಿದಂತೆ ಭಾಸವಾಯಿತು! ಹಾಗಾದರೆ ಇದು ಬಗೆಹರಿಯುವ, ಬಗೆಹರಿಸಬಹುದಾದ ಸಮಸ್ಯೆಯಾ? ಈ ಅಕ್ರಮವನ್ನೇ ಸಕ್ರಮವಾಗಿ ಮಾಡಬಹುದಾ ಅಥವಾ ಅಕ್ರಮ ಕಟ್ಟಡವನ್ನು ನೆಲಸಮ ಮಾಡಬಹುದಾ? ಹಾಗೆ ನೆಲಸಮ ಮಾಡುವುದಾದರೆ ಎಷ್ಟೂಂತ ನೆಲಸಮ ಮಾಡುವುದು? ಇಡೀ ನಗರವನ್ನೇ ಹಾಗೆ ಮಾಡಬೇಕಾದೀತು! ಎಲ್ಲರೂ ಇಂಗ್ಲಿಷ್ ಹಿಂದೆ ಜಿದ್ದಿಗೆ ಬಿದ್ದಿರುವುವವರ ಹಾಗೆ ಬಿದ್ದರೆ ಏನು ಮಾಡಲಾದೀತು? ಎಲ್ಲ ಭಾಷೆಗಳಂತೆ ಇಂಗ್ಲಿಷ್ ಸಹ ಒಂದು ಭಾಷೆಯೇ ಹೊರತು, ಜಗತ್ತಿನ ಎಲ್ಲ ಜ್ಞಾನ ಸಂಪತ್ತನ್ನು ಹುದುಗಿಸಿಕೊಂಡಿರುವ ಗಣಿ ಎಂದು ಎಲ್ಲರೂ ಭಾವಿಸಿದ್ದಾರಾ? ಇಂಗ್ಲಿಷ್ ಪ್ರತಿಷ್ಠೆ, ಸ್ಥಾನಮಾನ, ಹಮ್ಮು-ಬಿಮ್ಮಿನ ಪ್ರತೀಕವಾ? ಪದ್ಮನಾಭರಾವ್ ಕೇಳಿದ ಪ್ರಶ್ನೆಗಳಿಗೆ ಉತ್ತರಗಳಿರಲಿಲ್ಲ.

ಅವರ ಮಾತುಗಳಲ್ಲಿ ಆಕ್ರೋಶವಿರಲಿಲ್ಲ. ಆದರೆ ಮಡುಗಟ್ಟಿದ ಸಾತ್ವಿಕ ಸಿಟ್ಟಿತ್ತು. ಅವರು ಹೇಳಿದ ಮಾತುಗಳು, ಅನುಭವಗಳು ಹೊಸತೇನೂ ಆಗಿರಲಿಲ್ಲ. ಅವು ನನ್ನ ಅನುಭವಗಳೂ ಹೌದು. ನಿಮ್ಮವೂ ಆಗಿರಲಿಕ್ಕೆ ಸಾಕು. ಆದರೆ ಉತ್ತರ ಕಂಡುಕೊಳ್ಳುವ ಉಲುಕಿತನವಿದ್ದರೂ, ಎಲ್ಲರ ನಡೆಯೂ ಪ್ರಶ್ನಾರ್ಥಕವಾಗಿಯೇ ಉಳಿದರೆ ಏನು ಮಾಡುವುದು? ಈ ಪ್ರಶ್ನೆಗಳು ಕಾವು ಪಡೆದು ಮೊಟ್ಟೆಯಿಡುತ್ತಿರುವಾಗ, ೨೦೧೬ರಲ್ಲಿ ಉಜ್ಬೆಕಿಸ್ತಾನದ ರಾಜಧಾನಿ ತಾಷ್ಕೆಂಟ್, ಬುಖಾರ,
ಸಮರಖಂಡ್ ಮುಂತಾದ ಊರುಗಳಲ್ಲಿ ಪ್ರವಾಸ ಮಾಡುವಾಗ ಎದುರಾದ ಎಷ್ಟೋ ಪ್ರಸಂಗಗಳು ಮುಖಾಮುಖಿಯಾಗಿ ಈ ಯೋಚನೆಯ ಸವಾರಿಯನ್ನು
ಬೇರೆ ದಿಕ್ಕಿನತ್ತ ಸಾಗುವಂತೆ ಮಾಡಿತು.

ಉಜ್ಬೆಕಿಸ್ತಾನದಲ್ಲಿ ಪ್ರವಾಸ ಮಾಡುವಾಗ ಎದುರಾದ ಬಹುಮುಖ್ಯ ಸಮಸ್ಯೆಯೇನೆಂದರೆ ಭಾಷೆಯದು. ಇತ್ತೀಚಿನ ವರ್ಷಗಳಲ್ಲಿ ನಾನು ಯಾವುದೇ ದೇಶದಲ್ಲೂ ಈ ಸಮಸ್ಯೆಯನ್ನು ಇಷ್ಟೊಂದು ತೀವ್ರವಾಗಿ ಎದುರಿಸಿದ್ದಿಲ್ಲ. ಆಫ್ರಿಕಾದ ರವಾಂಡ ದಂಥ ದೇಶದಲ್ಲಿ ತಿರುಗುವಾಗಲೂ ಭಾಷೆ ಒಂದು ಸಮಸೆಯಾಗಿ ಕಾಡಲಿಲ್ಲ. ಸಂಪರ್ಕ ಭಾಷೆಯಾಗಿ ಇಂಗ್ಲಿಷು ನೆರವಿಗೆ ಬಂದಿತ್ತು. ರವಾಂಡದ ಕಾಡುಗಳಲ್ಲಿ ಅಲೆಯುವಾಗ, ಅಲ್ಲಿನ ಬುಡಕಟ್ಟು ಜನರಿಗೆ ನನಗೆ ಫ್ರೆಂಚ್ ಬರುವಷ್ಟೇ, ಅವರಿಗೆ ಇಂಗ್ಲಿಷ್ ಬರುತ್ತಿ ದ್ದುದರಿಂದ, ಚೂರುಪಾರು ಮಾತುಕತೆಗೆ ಸಲೀಸಾಗದಿದ್ದರೂ ತೊಡಕಂತೂ ಆಗಿರಲಿಲ್ಲ.

ಇನ್ನು ಎಸ್ತೋನಿಯಾ, ಐಸ್‌ಲ್ಯಾಂಡ್, ಫಿನ್‌ಲ್ಯಾಂಡ್ ಮುಂತಾದ ದೇಶಗಳಲ್ಲಿ ಸುತ್ತುವಾಗಲೂ ಭಾಷೆ ಸಮಸ್ಯೆಯಾಗಿ ಕಾಡಲಿಲ್ಲ. ಆದರೆ ಉಜ್ಬೇಕಿಸ್ತಾನದಲ್ಲಿ ಹೆಜ್ಜೆ ಹೆಜ್ಜೆಗೆ ಈ ಸಮಸ್ಯೆ ಕಾಡಿತು. ಕಾರಣವಿಷ್ಟೇ, ಆ ದೇಶದಲ್ಲಿ ಬಹುತೇಕ ಮಂದಿಗೆ ಇಂಗ್ಲಿಷ್ ಗೊತ್ತೇ ಇಲ್ಲ. ಅದರ ಬಗ್ಗೆ ಪಶ್ಚಾತ್ತಾಪವೂ ಇಲ್ಲ. ಅದಕ್ಕಿಂತ ಹೆಚ್ಚಾಗಿ ತಮಗೆ ಇಂಗ್ಲಿಷ್ ಗೊತ್ತಿಲ್ಲವೆಂಬುದನ್ನೇ ಬಹಳ ಅಭಿಮಾನದಿಂದ ಹೇಳಿಕೊಳ್ಳುತ್ತಾರೆ. ಇಂಗ್ಲಿಷಿನಲ್ಲಿ ಮಾತಾಡಿದರೆ ಕ್ಯಾಕರಿಸಿ ನೋಡುತ್ತಾರೆ. ದಾಕ್ಷಿಣ್ಯ ಬಿಟ್ಟು, ‘ನೋ ಇಂಗ್ಲಿಷ್, ಉಜ್ಬೆಕ್’ ಅಂತಾರೆ. ‘ಇಲ್ಲ ನನಗೆ ಉಜ್ಬೆಕ್ ಬರಲ್ಲ’ ಎಂದು ಇಂಗ್ಲಿಷಿನಲ್ಲಿ ಹೇಳಿದರೆ, ಮುಲಾಜಿಲ್ಲದೇ ಜಾಗ ಖಾಲಿ ಮಾಡುತ್ತಾರೆ.

ಟ್ಯಾಕ್ಸಿಯವನಿಗೂ ಇಂಗ್ಲಿಷ್ ಬರೊಲ್ಲ, ಹೋಟೆಲ್‌ನಲ್ಲಿ ವೇಟರ್‌ಗೂ ಇಂಗ್ಲಿಷ್ ಬರಲ್ಲ. ಪೊಲೀಸರಿಗೂ ಊಹುಂ… ಗೊತ್ತಿಲ್ಲ. ಹೆಲ್ಪ್‌ಡೆಸ್ಕ್‌ನಲ್ಲಿ ಕುಳಿತಿರುವ ಪರಿಚಾರಿಕೆಯರ ಜತೆಗೂ ಉಜ್ಬೆಕ್‌ನಲ್ಲೇ ಮಾತಾಡಬೇಕು. ದಾರಿಹೋಕರ ಹತ್ತಿರ ಯಾವುದಾದರೂ ಮಾಹಿತಿ ಕೇಳಬೇಕೆಂದರೆ, ಇಂಗ್ಲಿಷಿನಲ್ಲಿ ಮಾತನಾಡಿ
ದರೆ ಪ್ರಯೋಜನವಾಗೊಲ್ಲ. ಅಲ್ಲಲ್ಲಿ ಕೆಲವರು ಮಾತ್ರ ಇಂಗ್ಲಿಷ್ ನ್ನು ಅರ್ಥ ಮಾಡಿಕೊಳ್ಳಬಲ್ಲರು. ಅವರನ್ನೇ ದುಭಾಷಿಯಾಗಿ ಇಟ್ಟುಕೊಳ್ಳಬೇಕು. ನಮ್ಮ ಜತೆಗೆ ಮೊದಲಿನಿಂದ ಕೊನೆಯತನಕ ತಕ್ಕಮಟ್ಟಿಗಿನ ಇಂಗ್ಲಿಷ್ ಬಲ್ಲ ಗೈಡ್ ಇದ್ದ. ಹೀಗಾಗಿ ನಾವು ಬಚಾವ್. ಇಲ್ಲದಿದ್ದರೆ ಬಾಯಿಯಿದ್ದೂ ಮೂಕರು!

ವಿಚಿತ್ರ ಅಂದ್ರೆ ನಮಗೆ ಉಜ್ಬೆಕ್ ಭಾಷೆ ಬರೊಲ್ಲ. ಅವರಿಗೆ ಅದೊಂದು ಭಾಷೆಯನ್ನು ಬಿಟ್ಟು ಬೇರೆ ಯಾವುದೂ ಗೊತ್ತಿಲ್ಲ. ಇನ್ನು ಸಂಜ್ಞೆಯೂ ಡಿಟ್ಟh ಆಗುವುದಿಲ್ಲ. ಹೂಂ, ಉಹುಂ, ಅಂದ್ರೆ ಅವರಿಗೇನೂ ಅರ್ಥವಾಗುವುದಿಲ್ಲ. ಇಂಥ ಜನರ ನಡುವೆ ಹೇಗೆ ವ್ಯವಹರಿಸೋದು? ಇನ್ನು ದಾರಿ, ಬೀದಿ, ಕಟ್ಟಡದ ಹೆಸರು, ಸೂಚನಾ ಫಲಕಗಳೆಲ್ಲ ಉಜ್ಬೆಕ್ ಭಾಷೆಯಲ್ಲೇ. ಅಲ್ಲಲ್ಲಿ ಅದನ್ನೇ ಹೋಲುವ ರಷಿಯನ್ ಬೋರ್ಡ್‌ಗಳು. ಹೋಟೆಲ್‌ಗೆ ಹೋಗಿ ಮೆನುಕಾರ್ಡ್ ತೆಗೆದು ಕೊಂಡರೂ ಉಜ್ಬೆಕ್‌ನಲ್ಲಿ ಎಲ್ಲ ಆಹಾರಗಳ ವಿವರಗಳು. ಊಟ, ತಿಂಡಿಗೆ ಆರ್ಡರ್ ತೆಗೆದುಕೊಳ್ಳಲು ಇಂಗ್ಲಿಷ್ ಬಲ್ಲ ವೇಟರ್‌ಗಾಗಿ ಕಾಯಬೇಕು. ಕೆಲವು ಹೋಟೆಲ್‌ಗಳಲ್ಲಿ ಅವರೂ ಇಲ್ಲ. ದರ್ಶಿನಿ ಗಳಲ್ಲಿ ತಿಂಡಿ ಪದಾರ್ಥಗಳ ಚಿತ್ರ ಅಂಟಿಸಿರುತ್ತಾರಲ್ಲ, ಹಾಗೆ ಅವನ್ನು ತೋರಿಸಿ ನಮಗೇನು ಬೇಕು ಎನ್ನುವುದನ್ನು ಹೇಳಬೇಕು.

ಉಜ್ಬೇಕಿಸ್ತಾನದ ಜನಸಂಖ್ಯೆ ಸುಮಾರು ಮೂರು ಕೋಟಿ. ಆ ಪೈಕಿ ಎರಡೂ ಮುಕ್ಕಾಲು ಕೋಟಿ ಜನರ ಮಾತೃಭಾಷೆ ಹಾಗೂ ಏಕೈಕ ಭಾಷೆ ಉಜ್ಬೆಕ್. ಸುಮಾರು ಹದಿನೈದು ಲಕ್ಷ ಮಂದಿ ರಷಿಯನ್ ಮಾತಾಡುತ್ತಾರೆ. ಐದು ಲಕ್ಷ ಮಂದಿ ಪರ್ಶಿಯನ್, ಟರ್ಕಿಶ್ ಭಾಷೆ ಬಲ್ಲವರಾದರೆ, ಕೇವಲ ಐದು ಲಕ್ಷ ಮಂದಿ
ಮಾತ್ರ ಇಂಗ್ಲಿಷ್ ಮಾತಾಡಬಲ್ಲರು. ‘ನಮಗೆ ಇಂಗ್ಲಿಷ್ ಗೊತ್ತಿಲ್ಲ, ನಾವು ಇಂಗ್ಲಿಷ್ ಮಾತಾಡುವುದಿಲ್ಲ, ನೋ ಇಂಗ್ಲಿಷ್ ಪ್ಲೀಸ್’ ಎಂಬ ಫಲಕಗಳನ್ನು ಅಲ್ಲಲ್ಲಿ ಕಾಣಬಹುದು. ಅಲ್ಲದೇ ಈ ಮಾತುಗಳನ್ನು ಕೇಳಬಹುದು. ಆ ಬಗ್ಗೆ ಅವರಲ್ಲಿ ಕೀಳರಿಮೆಯಾಗಲಿ, ವಿಷಾದವಾಗಲಿ, ಹಿಂಜರಿಕೆಯಾಗಲಿ ಸ್ವಲ್ಪವೂ ಇಲ್ಲ. ‘ನಮಗೆ
ಇಂಗ್ಲಿಷ್ ಬರೊಲ್ಲ, ಏನೀಗ?’ ಎಂಬ ಧಾಷ್ಟ್ಯ ಬೇರೆ. ಉಜ್ಬೆಕಿಗಳ ಉತ್ಕಟ ಮಾತೃಭಾಷಾ ಪ್ರೇಮವನ್ನು ಕಂಡು ತಡೆದುಕೊಳ್ಳಲಾಗಲಿಲ್ಲ.

‘ನಿಮಗೆ ಇಂಗ್ಲಿಷ್ ಕಲಿಯಬೇಕೆಂದು ಅನಿಸುವುದಿಲ್ಲವಾ? ಬೇರೆ ದೇಶದವರೊಂದಿಗೆ ಹೇಗೆ ಮಾತಾಡುತ್ತೀರಿ? ಅದೊಂದು ಕೊರತೆ ಎಂದು ಅನಿಸುವುದಿಲ್ಲವಾ?’ ಎಂದು ಅಲ್ಲಲ್ಲಿ ಜನರನ್ನು ಕೇಳಿದೆ. ಒಬ್ಬೇ ಒಬ್ಬ ಸಹ ಇಂಗ್ಲಿಷ್ ಬರದಿರುವುದು ನ್ಯೂನತೆ ಎಂಬುದನ್ನು ಒಪ್ಪಿಕೊಳ್ಳಲಿಲ್ಲ ಹಾಗೂ ಇಂಗ್ಲಿಷ್ ಕಲಿಯಬೇಕು ಎಂದೂ ಹೇಳಲಿಲ್ಲ. ಎಂಜಿನಿಯರಿಂಗ್ ಓದಿದ ಯುವಕನೊಬ್ಬ ತನ್ನ ಲಟ್ಕಾಸಿ ಇಂಗ್ಲಿಷಿನಲ್ಲಿ, ‘ಅದೂ (ಇಂಗ್ಲಿಷ್) ಒಂದು (ಉಜ್ಬೆಕ್ ಥರಾ) ಭಾಷೆ ತಾನೇ? ನನ್ನ ಭಾಷೆ
ಯಲ್ಲಿ ಇಲ್ಲದಿರುವುದಕ್ಕಿಂತ ವಿಶೇಷವೇನಾದರೂ ಇಂಗ್ಲಿಷಿನಲ್ಲಿ ಇದೆಯಾ? ನನಗೆ ಇಂಗ್ಲಿಷಿನ ಅಗತ್ಯವೇ ಕಂಡುಬಂದಿಲ್ಲ. ನಾವು ಯಾವುದರಲ್ಲೂ ಕಮ್ಮಿ ಇಲ್ಲ. ನಾನು ಉಜ್ಬೆಕ್ ಭಾಷಾ ಮಾಧ್ಯಮದಲ್ಲಿ ಓದಿ ಎಂಜಿನಿಯರಿಂಗ್ ಮುಗಿಸಿದ್ದೇನೆ’ ಎಂದು ಅತೀವ ಹೆಮ್ಮೆಯಿಂದ ಹೇಳಿದ.

ಅಲ್ಲಿ ಅನೇಕ ವರ್ಷಗಳಿಂದ ನೆಲೆಸಿರುವ ಭಾರತೀಯ ಸ್ನೇಹಿತರನ್ನು ಈ ಬಗ್ಗೆ ಕೇಳಿದೆ. ಅವರಲ್ಲೊಬ್ಬ ಹೇಳಿದ್ದೇನು ಗೊತ್ತಾ? ‘ಈ ಉಜ್ಬೆಕಿಗಳು ಹೆಂಡತಿ, ಮಕ್ಕಳನ್ನು ಬಿಟ್ಟಾರು, ಆದರೆ ಮಾತೃ ಭಾಷೆಯನ್ನು ಮಾತ್ರ ಬಿಡಲಾರರು. ಇವರಿಗೆ ಇಂಗ್ಲಿಷ್ ಕಲಿಯಬೇಕೆಂದರೆ ಮೊದಲು ಉಜ್ಬೆಕ್ ಕಲಿಯಬೇಕು. ಆನಂತರ
ನಮ್ಮ ಇಂಗ್ಲಿಷ್‌ನ್ನು ಮರೆಯಿಸಿ ಉಜ್ಬೆಕ್‌ನ್ನು ಮಾತ್ರ ನಮಗೆ ಕಲಿಸಿ ಹೋಗುತ್ತಾರೆ, ಅಂಥ ಜನ!’

ಭಾಷೆ ವಿಚಾರದಲ್ಲಿ ಉಜ್ಬೆಕಿಗಳು, ಇಸ್ರೇಲಿನ ಯಹೂದಿಗಳಂತೆ. ಹೀಬ್ರೂ ಕಲಿಯದೇ ನಮ್ಮ ದೇಶಕ್ಕೆ ಬರಲೇಬೇಡಿ ಎಂದು ಎಲ್ಲ ಬಹುರಾಷ್ಟ್ರೀಯ ಕಂಪನಿಗಳಿಗೆ ತಾಕೀತು ಮಾಡಿದ್ದು ಗೊತ್ತೇ ಇದೆ. ಬಾಟಲಿಗಳ ಮೇಲೆ ಹೀಬ್ರೂ ಭಾಷೆಯಲ್ಲಿ ನಿಮ್ಮ ಬ್ರ್ಯಾಂಡ್‌ಗಳ ಹೆಸರನ್ನು ಬರೆದರೆ ಮಾತ್ರ ಪ್ರವೇಶ ಎಂದು ಕೋಕ್ ಮತ್ತು ಪೆಪ್ಸಿಗಳಿಗೆ ಹೇಳಿ ಅವುಗಳ ಕಿವಿ ಹಿಂಡಿದ ಮೊದಲ ದೇಶ ಅಂದ್ರೆ ಇಸ್ರೇಲ್. ‘ನಮ್ಮ ಹಣ, ಲಾಭ ಬೇಕು, ಆದರೆ ನಮ್ಮ ಭಾಷೆ ಬೇಡವಾ?’ ಎಂದು ತಪರಾಕಿ ಕೊಟ್ಟು ಹೇಳಿದ್ದೂ ಇಸ್ರೇಲೇ.

ನಾವು ಉಜ್ಬೆಕಿಗಳು, ಯಹೂದಿಗಳಾಗುವುದು ದೂರವೇ ಉಳಿಯಿತು. ಅವರ ಮಾತೃಭಾಷೆ ಪ್ರೇಮದಲ್ಲಿ ನಾಕಾಣೆ ಪ್ರೇಮ ತೋರಿದ್ದರೆ ಕನ್ನಡಕ್ಕೆ ಈ ಗತಿ ಬರುತ್ತಿರಲಿಲ್ಲ. ಛೆ!

ಪೋಚೆಮುಚ್ಕಾ!

ಪದಕೋಶ(ಡಿಕ್ಷನರಿ)ಗಳಲ್ಲಿ ಎಷ್ಟೊಂದು ಪದಗಳಿವೆಯೆಂದರೆ, ಅವುಗಳನ್ನು ಬಳಸುವ ಅವಕಾಶವೇ ಸಿಗುವುದಿಲ್ಲ. ಆಸೆಗೆ ಬಿದ್ದು ಬಳಸೋಣವೆಂದರೆ, ಅವು ಬೇರೆಯವರಿಗೆ ಅರ್ಥವಾಗುವುದೇ ಇಲ್ಲ. ಅರ್ಥವನ್ನು ಕಂಸ(ಬ್ರಾಕೆಟ್)ದಲ್ಲಿ ಕೊಟ್ಟರೂ ಹಾಳಾದ್ದು ನೆನಪಿನಲ್ಲಿ ಉಳಿಯುವುದಿಲ್ಲ. ಆದರೂ ಈ ಶಬ್ದಗಳು ತಮ್ಮ ಅಸ್ತಿತ್ವ ಕಾಪಾಡಿಕೊಂಡು ಬಂದಿವೆ. ಪದಕೋಶವಿಲ್ಲದಿದ್ದರೆ ಅವು ಎಂದೋ ನಶಿಸಿ ಹೋಗುತ್ತಿದ್ದವು. ಸಂವಾದ, ಚರ್ಚೆ, ವಿಚಾರ ಸಂಕಿರಣದಂಥ ಕಾರ್ಯಕ್ರಮಗಳಲ್ಲಿ ಸಭಿಕರಿಗೆ ಪ್ರಶ್ನೆ ಕೇಳಲು ಅವಕಾಶ ನೀಡಿದರೆ, ಯಾರೋ ಒಬ್ಬಾತ ಒಂದಕ್ಕಿಂತ ಹೆಚ್ಚು ಪ್ರಶ್ನೆಗಳನ್ನು ಕೇಳುತ್ತಾನೆ.

ಎದ್ದು ನಿಲ್ಲುವಾಗಲೇ ತಾನು ಮೂರು ಪ್ರಶ್ನೆಗಳನ್ನು ಕೇಳಬೇಕೆಂದಿರುವೆ ಎಂದೇ ಆರಂಭಿಸುತ್ತಾನೆ. ಅಷ್ಟಾದರೂ ಆತನ ಪ್ರಶ್ನೆ ಕೇಳುವ ವಾಂಛೆ ಮುಗಿಯುವುದಿಲ್ಲ. ಪದೇಪದೆ ಎದ್ದು ನಿಂತು ಬಾಯಿ ಹಾಕುತ್ತಾನೆ. ‘ಬೇರೆಯವರಿಗೆ ಅವಕಾಶ ಕೊಡಿ’ ಎಂದರೂ ಸುಮ್ಮನಾಗದೇ ಪ್ರಶ್ನೆ ಕೇಳಲು ಹಾತೊರೆಯುತ್ತಾನೆ. ಈ ಸ್ವಭಾವದ ಮನುಷ್ಯರನ್ನು ಏನಂತ ಕರೆಯೋದು? ಕನ್ನಡ ದಲ್ಲಿ ಅಂಥವರನ್ನು ಏನೆನ್ನೋದು? ‘ಪ್ರಶ್ನೆ ಕೇಳೋದರಲ್ಲಿ ಮುಂಗಾಲಪುಟಕಿ’ ಎನ್ನಬಹುದು. ಆದರೆ ಒಂದು ಪದದಲ್ಲಿ ಹೇಳಲು ಯಾವುದಾದರೂ ಪದವಿದೆಯಾ? ಗೊತ್ತಿಲ್ಲ. ಇಂಗ್ಲಿಷ್ ನಲ್ಲಿ ಒಂದು ಪದವಿದೆ. ಆದರೆ ಅದರ ಮೂಲ ರಷಿಯನ್-Pಟ್ಚeಛಿಞ್ಠ್ಚehZ- ಪೋಚೆಮುಚ್ಕಾ! ಡಿಕ್ಷನರಿಯಲ್ಲಿ ಈ ಪದದ ಅರ್ಥ ಅ mಛ್ಟಿoಟ್ಞ ಡಿeಟ Zoho Z ಟಠಿ ಟ್ಛ ಟ್ಠಿಛಿoಠಿಜಿಟ್ಞo. ಕನ್ನಡದಲ್ಲಿ ಮುಚ್ಕಾ ಅಂದರೆ, ‘ಪ್ರಶ್ನೆ ಕೇಳಬೇಡ, ತೆಪ್ಪಗಿರು’ ಎಂದರ್ಥ. ಅಂದರೆ ಪ್ರಶ್ನೆ ಕೇಳುವವನಿಗೆ ಸುಮ್ಮನಿರು ಎಂದು ಹೇಳಿದಂತೆ. ಇಷ್ಟೆಲ್ಲ ಪದಗಳಿದ್ದೂ ಪ್ರಯೋಜನವೇನು? Hope I am not Pochemuchka!

ಭಾಷಾತಜ್ಞ ಹಾಗೂ ಸಂಬಂಧ
ಭಾಷಾತಜ್ಞ ರಿಚರ್ಡ್ ಲೆಡರರ್ ನನ್ನ ಪ್ರೀತಿಪಾತ್ರ ಲೇಖಕನಾನೂ ಹೌದು. ಆತನ The Miracle Of Language ಬರಹಗಾರರಿಗೆ, ಪತ್ರಕರ್ತರಿಗೆ, ಭಾಷಾ ಪ್ರೇಮಿಗಳಿಗೆ ಅತ್ಯುತ್ತಮ ಓದು. ಆತ ಬರೆದ Crazy English ಹಾಗೂMore Anguished English ಭಾಷಾ ಪ್ರಿಯರ ಅಚ್ಚುಮೆಚ್ಚಿನ ಕೃತಿಗಳು.

ಒಬ್ಬಾತ ಮೇಲಿಂದ ಮೇಲೆ ಹುಡುಗಿಯರನ್ನು ಪ್ರೀತಿಸಿದರೂ, ಹೆಚ್ಚು ಕಾಲ ಯಾರೊಂದಿಗೂ ಸಂಬಂಧ ಉಳಿಯುತ್ತಿರಲಿಲ್ಲ. ಎರಡು-ಮೂರು ತಿಂಗಳಾಗುತ್ತಿದ್ದಂತೆ ಬಿಟ್ಟು ಹೋಗುತ್ತಿದ್ದರು. ಅಂತೂ ಕೊನೆಗೊಬ್ಬಳು ಸಿಕ್ಕಳು. ‘ಇದನ್ನು ಭಾಷಾತಜ್ಞರಾದ ನೀವು ಹೇಗೆ ಹೇಳುತ್ತೀರಾ?’ಎಂದು ಲೆಡರರ್‌ನನ್ನು ಯಾರೋ ಕೇಳಿದ ರಂತೆ. ಅದಕ್ಕೆ ಆತ ಹೇಳಿದನಂತೆ-“In the long list of commas, she became his fullstop.