Thursday, 19th September 2024

ಸಂಯಮದ ಕಟ್ಟೆ ಒಡೆದರೆ..

ಅಗ್ನಿಪಥ

ತುರುವೇಕೆರೆ ಪ್ರಸಾದ್

ಅಂಗಡಿ-ಮುಂಗಟ್ಟು, ಕಚೇರಿಗಳಲ್ಲಿ ಕನ್ನಡ ನಾಮಫಲಕಗಳನ್ನು ಕಡ್ಡಾಯವಾಗಿ ಹಾಕಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಬೆಂಗಳೂರಿ ನಲ್ಲಿ ಬೀದಿಗಿಳಿದು ಹೋರಾಟ ನಡೆಸಿತು. ಇಂಥ ಹೋರಾಟಗಳು ನಡೆದಾಗೆಲ್ಲಾ ರಾಜಕೀಯದವರು/ಆಡಳಿತ ವ್ಯವಸ್ಥೆ ಒಂದಿಷ್ಟು ಕಣ್ಣೊರೆಸುವ ನಾಟಕವಾಡಿ ಆ ವಿಷಯವನ್ನು ಮರೆಸಿಬಿಡುವುದು ವಾಡಿಕೆ. ಈಗಿನ ಹೋರಾಟ ಸ್ವಲ್ಪ ಅಹಿತಕರವಾಗಿತ್ತು ಎನ್ನುವುದನ್ನು ಬಿಟ್ಟರೆ, ಹೀಗೊಂದು ಕೆಚ್ಚಿನ ಹೋರಾಟದ ಅಗತ್ಯವಂತೂ ಇತ್ತು.

ಕನ್ನಡಿಗರ ಸಂಯಮಕ್ಕೂ ಒಂದು ಮಿತಿಯಿದೆ. ಕನ್ನಡಪರ ಹೋರಾಟಗಳ ಬಗ್ಗೆ ಈಚೆಗೆ ಬರಹಗಾರರು/ಸಾಹಿತಿಗಳು ಗಂಭೀರ ಗಮನ ಹರಿಸದೆ, ‘ಇವೆಲ್ಲಾ ನಾಮ್-ಕೆ-ವಾಸ್ತೆ ನಗೆಪಾಟಲ ಪ್ರಸಂಗಗಳು, ಕೆಲಸವಿಲ್ಲದವರು ಆಗಾಗ್ಗೆ ಇಂಥ ಪ್ರಹಸನ ನಡೆಸುತ್ತಾರೆ’ ಎಂಬಂತಾಗಿದೆ. ನಾಮಫಲಕವು ಒಳಗಿನ ವ್ಯವಹಾರ, ಭಾಷೆ, ಭಾವನೆ ಎಲ್ಲವನ್ನೂ ಬಿಂಬಿಸುವ ಒಂದು ಸಂಪರ್ಕ ಸಾಧನ; ಅದೇ ಕನ್ನಡದಲ್ಲಿಲ್ಲ ಎಂದಮೇಲೆ ಒಳಗೆ ಕನ್ನಡಕ್ಕೆ ನೆಲೆ-ಬೆಲೆ ಇದೆ, ಕನ್ನಡಿಗರಿಗೆ ಆದ್ಯತೆಯಿದೆ, ಕನ್ನಡದಲ್ಲೇ ವ್ಯವಹಾರವಿದೆ ಎಂದು ನಂಬಲಾದೀತೇ? ಇದೇ ರೀತಿಯಲ್ಲಿ ಎಷ್ಟೋ ಉತ್ಪನ್ನಗಳ ಮೇಲೆ ಕನ್ನಡದ
ಹೆಸರೇ ಇರುವುದಿಲ್ಲ; ಇದ್ದರೂ ಎಲ್ಲೋ ಮೂಲೆಯಲ್ಲಿರುತ್ತದೆ. ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ ಸಂಸ್ಥೆಯ ಮೈಸೂರು ಶ್ರೀಗಂಧದ ಧೂಪದ ಪೆಟ್ಟಿಗೆಯ ಹೊರಹೊದಿಕೆಯ ಮುಂಭಾಗ- ಹಿಂಭಾಗ ಸಂಪೂರ್ಣ ಇಂಗ್ಲಿಷ್‌ಮಯ.

ನಾಲ್ಕು ಪಾರ್ಶ್ವಗಳಲ್ಲಿ ತೆಲುಗು-ತಮಿಳು-ಹಿಂದಿಯಲ್ಲಿ ‘ಧೂಪ್’ ಎಂದು ಮುದ್ರಿಸಲಾ ಗಿದ್ದು, ಹತ್ತರಲ್ಲಿ ಒಂದು ಎಂಬಂತೆ ಒಂದೆಡೆ ಕನ್ನಡದಲ್ಲಿ ಮುದ್ರಿಸ ಲಾಗಿದೆ. ಇಲ್ಲಿ ಕನ್ನಡಕ್ಕೆ ಪ್ರಾಶಸ್ತ್ಯ ಎಲ್ಲಿಂದ ಬಂತು? ಕನ್ನಡದ ಕಂಪನ್ನು ನಾಡಿನಾದ್ಯಂತ ಪಸರಿಸಬೇಕಾದ ಸಂಸ್ಥೆಯೇ ಹೀಗೆ ನಡೆದು ಕೊಂಡರೆ ಮಿಕ್ಕವರಿಗೆ ಹೇಳುವ ನೈತಿಕ ಹಕ್ಕು ನಮಗೆಲ್ಲಿರುತ್ತದೆ? ಇನ್ನು, ಪ್ರಖ್ಯಾತ ಪುಸ್ತಕ ಮಳಿಗೆಯೊಂದು ತನ್ನ ವೆಬ್‌ಸೈಟ್‌ನಲ್ಲಿನ ಪುಸ್ತಕದ ಶೀರ್ಷಿಕೆ ಗಳನ್ನೆಲ್ಲಾ (ಇಂದಿಗೂ) ಇಂಗ್ಲಿಷ್‌ನಲ್ಲೇ ಉಲ್ಲೇಖಿಸಿದ್ದು, ಇದನ್ನು ಸರಿಪಡಿಸಿಕೊಳ್ಳುವಂತೆ ಪತ್ರ ಬರೆದರೂ ಪ್ರತಿಕ್ರಿಯಿಸಿಲ್ಲ. ಇಂಥ ಧಾರ್ಷ್ಟ್ಯಕ್ಕೆ
ಏನನ್ನಬೇಕು? ರಾಜಧಾನಿ ಬೆಂಗಳೂರಿನಲ್ಲೇನೋ ಇಂಥ ಕನ್ನಡ ಪರ ಹೋರಾಟ, ಪ್ರತಿಭಟನೆ, ಅಭಿಯಾನಗಳು ಆಗಾಗ ನಡೆದು, ಮಲಗಿರುವ ವ್ಯವಸ್ಥೆ ಯನ್ನು ಬಡಿದೆಬ್ಬಿಸುವ ಕೆಲಸ ಮಾಡುತ್ತಿವೆ; ಆದರೆ ಗ್ರಾಮೀಣ ಪ್ರದೇಶಗಳಲ್ಲಿ ಹೀಗೆ ಕನ್ನಡವನ್ನು ಕಾಯುವವರೇ ಇಲ್ಲ.

ಬಹುತೇಕ ಸಂಘಟನೆಗಳು ನವೆಂಬರ್‌ನಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆಗಷ್ಟೇ ಸೀಮಿತವಾಗಿದ್ದು, ಸಂಘಟಿತ ಹೋರಾಟ ಎಲ್ಲೂ ಕಂಡುಬರುತ್ತಿಲ್ಲ. ಇಂಥ ವಿಷಮ ಪರಿಸ್ಥಿತಿಯಲ್ಲಿ ಹಳ್ಳಿಗಳಲ್ಲಿ ಕನ್ನಡದ ಉಳಿವು ಮತ್ತು ವಾತಾವರಣವನ್ನು ಕಾಯ್ದಿಟ್ಟುಕೊಳ್ಳುವುದು ಹೇಗೆ? ಎಂಬುದೇ ಯಕ್ಷಪ್ರಶ್ನೆ. ಸಾಮಾನ್ಯ ಸಂಪರ್ಕ, ಸಂಸ್ಕೃತಿ ಸಂವಹನೆ ಮತ್ತು ಸಾಹಿತ್ಯ ರಚನೆಗಾಗಿ ಭಾಷೆಯನ್ನು ಬಳಸಬಹುದಾಗಿದೆ; ಆದರೆ ಗ್ರಾಮೀಣ ಪ್ರದೇಶಗಳಲ್ಲಿ ಮೂಲ ಭೂತ ವಾದ ಸಂಸ್ಕೃತಿ ಸಂವಹನೆಗೇ ದೊಡ್ಡ ಪೆಟ್ಟು ಬೀಳುತ್ತಿದ್ದು, ಸಂಪರ್ಕ ಭಾಷೆಯ ಸ್ಥಾನವನ್ನು ಮತ್ತಾ ವುದೋ ಭಾಷೆ ಕ್ರಮಿಸಿಕೊಳ್ಳುತ್ತಿದೆ.

ಭಾಷೆಯೊಂದಿಗಿನ ಸಾಹಿತ್ಯಕ ಅನುಸಂಧಾನವಂತೂ ದೂರವೇ ಉಳಿಯುವಂತಾಗಿದೆ. ‘ಜನರ ಸಾಹಿತ್ಯವು ಜನರ ಬಾಳುವೆಯ ಜಾಡನ್ನು ಅನುಸರಿಸಿ ನಡೆಯುತ್ತದೆ’ ಎನ್ನುತ್ತಾರೆ ಮಾಸ್ತಿ ವೆಂಕಟೇಶ ಅಯ್ಯಂಗಾರ್. ಇಂಥ ಪರಿಸ್ಥಿತಿಯಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಕನ್ನಡ ಪರಿಸರ ಹೇಗೆ ಉಳಿದೀತು ಎಂದು ಯೋಚಿಸಬೇಕು. ನಾನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಜಿಲ್ಲಾ ಜಾಗೃತಿ ಸಮಿತಿಯ ಸದಸ್ಯನಾಗಿದ್ದ ಸಂದರ್ಭದಲ್ಲಿ, ಪಟ್ಟಣದಾದ್ಯಂತದ ಅಂಗಡಿ-
ಮುಂಗಟ್ಟುಗಳ ಮುಂಭಾಗದಲ್ಲಿ ಕನ್ನಡ ನಾಮಫಲಕಗಳನ್ನು ಹಾಕಬೇಕು ಎಂದು ಆಗ್ರಹಿಸಿ, ವಿವಿಧ ಕನ್ನಡಪರ ಸಂಘಟನೆಗಳ ಬೆಂಬಲದೊಂದಿಗೆ ಒಂದು ಅಭಿಯಾನ ನಡೆಸಿದೆವು.

ಸಾಮಾನ್ಯ ಜನರು ನಮ್ಮ ಮನವಿಗೆ ಸ್ಪಂದಿಸಿದರು. ಮುಸಲ್ಮಾನ ಬಂಧುವೊಬ್ಬರು ನಾವು ಮನವಿ ಮಾಡಿದ ಅರ್ಧ ದಿನದಲ್ಲಿ ತಮ್ಮ ಮೊಬೈಲ್ ಅಂಗಡಿಯ ಇಂಗ್ಲಿಷ್ ನಾಮ-ಲಕವನ್ನು ತೆಗೆಸಿ ಕನ್ನಡದಲ್ಲಿ ನಾಮಫಲಕ ಹಾಕಿ ಅಭಿಮಾನ ಮೆರೆದರು. ಆದರೆ, ಕೆಲವು ಖಾಸಗಿ ಕಾನ್ವೆಂಟ್‌ಗಳು,
ಮಠಗಳು ನಡೆಸುವ ಕೆಲವು ಶಾಲೆಗಳು, ಉದ್ಯಮ ಘಟಕಗಳು (ಉದಾಹರಣೆಗೆ ಪೆಟ್ರೋಲ್ ಬಂಕ್) ಇವ್ಯಾವುವೂ ನಮ್ಮ ಮನವಿಗೆ ಸೊಪ್ಪು ಹಾಕಲಿಲ್ಲ. ಲಿಖಿತವಾಗಿ ತಿಳಿವಳಿಕೆ ಕೊಟ್ಟರೂ ಇವರೆಲ್ಲಾ ಇಂದಿಗೂ ನಾಮಫಲಕಗಳನ್ನು ಕನ್ನಡಕ್ಕೆ ಬದಲಾಯಿಸಿಲ್ಲ. ನಾನೊಬ್ಬ ಜಿಲ್ಲಾ ಸಮಿತಿಯ ಸದಸ್ಯ ಬಿಟ್ಟರೆ ತಾಲೂಕು ಜಾಗೃತಿ ಸಮಿತಿ, ಕನ್ನಡ ಕಾಯಕ ಪಡೆ ಯಾವುದೂ ಅಸ್ತಿತ್ವಕ್ಕೆ ಬರಲಿಲ್ಲ.

ಹೀಗಾಗಿ ಸ್ಥಳೀಯ ಕನ್ನಡ ಪರ ಸಂಘಟನೆಗಳಿಗೆ ಬೆಂಬಲ ನೀಡುವಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮೊದಲಾದ ಸರಕಾರಿ/ ಸ್ವಾಯತ್ತ ಸಂಸ್ಥೆಗಳು ಇಂದಿಗೂ ವಿಫಲವಾಗಿವೆ. ಇಷ್ಟರ ಮಧ್ಯೆಯೂ ನಮ್ಮ ಕನ್ನಡ ಕೆಲಸವನ್ನು ಪ್ರಾಽಕಾರದ ಲಕ್ಷ್ಮಣರೇಖೆಯ ಒಳಗೇ
ಮಾಡಬೇಕಿತ್ತು. ಜಾಗೃತಿ ಸಮಿತಿಯ ಸದಸ್ಯರು ಯಾವ ಕಚೇರಿಗೂ ಹೋಗುವಂತಿರಲಿಲ್ಲ, ಯಾವ ಪರಿಶೀಲನೆಯನ್ನೂ ಮಾಡುವಂತಿರಲಿಲ್ಲ; ಕನ್ನಡ ಅನುಷ್ಠಾನ ಕುರಿತು ಲೋಪದೋಷಗಳಿದ್ದರೆ ಅಧ್ಯಕ್ಷರ (ಜಿಲ್ಲಾಽಕಾರಿಗಳ) ಗಮನಕ್ಕೆ ತಂದು ಅವರ ಜತೆ ಹೋಗಬೇಕು.

ಜಿಲ್ಲಾಧಿಕಾರಿಗಳಿಗೆ ಅಷ್ಟು ಸಮಯ ಇರುತ್ತದೆಯೇ? ಜಾಗೃತಿ ಸಮಿತಿಯ ಸದಸ್ಯರು ಲೆಟರ್‌ಹೆಡ್ ಮುದ್ರಿಸಿಕೊಳ್ಳುವಂತಿಲ್ಲ, ಮೊಹರು ಬಳಸುವಂತಿಲ್ಲ ಎಂಬ ಕಟ್ಟುಪಾಡುಗಳು ಬೇರೆ. ಕಚೇರಿಗೇ ಹೋಗುವಂತಿಲ್ಲ, ಏನೂ ಪರಿಶೀಲಿಸುವಂತಿಲ್ಲ ಎಂದರೆ ಅಲ್ಲಿನ ಕನ್ನಡ ಅನುಷ್ಠಾನ ಕುರಿತ ಸಂಗತಿಗಳು ನಮಗೆ ತಿಳಿಯು ವುದಾದರೂ ಹೇಗೆ? ಲೋಕೋಪಯೋಗಿ ಇಲಾಖೆಯ ಎಷ್ಟೋ ನಮೂನೆಗಳು ಆಂಗ್ಲಭಾಷೆಯಲ್ಲೇ ಇದ್ದವು. ರೈತರು ಪದೇಪದೆ ಬೀಜ, ಗೊಬ್ಬರ, ನೇಗಿಲು, ಕುಳ ಎಂದು ಎಡತಾಕುವ ಕೃಷಿ ಇಲಾಖೆಯ ಎಷ್ಟೋ ವ್ಯಾವಹಾರಿಕ ನಮೂನೆಗಳು ಇಂಗ್ಲಿಷ್‌ನಲ್ಲಿದ್ದವು (ಈಗಲೂ ಇರಬಹುದು). ಅವನ್ನು ಪ್ರಾಧಿಕಾರದ ಗಮನಕ್ಕೆ ತರೋಣವೆಂದರೆ, ಆ ಅಭಿಮಾನಶೂನ್ಯ ಅಽಕಾರಿಗಳು ಆ ನಮೂನೆಗಳ ಫೋಟೋ ತೆಗೆಯಲೂ ಬಿಡುತ್ತಿರಲಿಲ್ಲ.

ಇಷ್ಟೇ ಅಲ್ಲ, ಕನ್ನಡ ಶಾಲೆ ಮುಚ್ಚಿದರೆ,  ‘ಯಾಕೆ ಮುಚ್ಚಿತು?’ ಎಂದು ಕೇಳುವವರಿಲ್ಲ. ‘ಊರ ತುಂಬಾ ನಾಯಿಕೊಡೆಗಳಂತೆ ಇಂಗ್ಲಿಷ್ ಶಾಲೆಗಳಿವೆ, ಇನ್ನೊಂದು ಕಾನ್ವೆಂಟ್‌ಗೆ ಯಾಕೆ ಅನುಮತಿಸುತ್ತಿದ್ದೀರಿ?’ ಎಂದು ದನಿಯೇರಿಸುವವರಿಲ್ಲ. ಇಂಗ್ಲಿಷ್‌ನಲ್ಲಿ ಪ್ರಚಾರ ಫಲಕಗಳನ್ನು ಹಾಕಬೇಡಿ, ಕನ್ನಡದಲ್ಲೇ ಹಾಕಿ ಎಂದು ಹೇಳೋರಿಲ್ಲ. ರಾಷ್ಟ್ರೀಕೃತ ಬ್ಯಾಂಕುಗಳ ತುಂಬಾ ಕನ್ನಡ ಬಾರದ ಅಧಿಕಾರಿಗಳು. ಅವರೊಂದಿಗೆ ಗ್ರಾಮೀಣರಿಗೆ ದಿನನಿತ್ಯದ
ವ್ಯವಹಾರ ನಡೆಸುವುದೇ ಕಷ್ಟ. ಕಡ್ಡಾಯವಾಗಿ ಒಂದಿಷ್ಟು ಕನ್ನಡ ಕಲಿಯಿರಿ ಎಂದು ಅವರನ್ನು ಮನವೊಲಿಸುವವರಿಲ್ಲ.

ಅಬ್ದುಲ್ ರೆಹಮಾನ್ ಪಾಷಾ ಅವರು ಇಂಥ ಕನ್ನಡ ಬಾರದವರಿಗೆ ಸರಳ ಕನ್ನಡ ಕಲಿಸಲು ಒಂದು ತರಬೇತಿಯ ಕ್ರಮವನ್ನೇ ರೂಪಿಸಿದ್ದರು. ಇಂಥ ವನ್ನೆಲ್ಲಾ ಅನುಷ್ಠಾನಗೊಳಿಸುವವರು ಯಾರು? ಇಂಥ ಪರಿಸ್ಥಿತಿಯಲ್ಲಿ ಗ್ರಾಮೀಣ ಪ್ರದೇಶದಲ್ಲಿ ಕನ್ನಡದ ಅಸ್ತಿತ್ವವನ್ನು ಉಳಿಸಿಕೊಳ್ಳುವುದು ಹೇಗೆ? ‘ಕಾನೂನು ಮಾಡುವುದಷ್ಟೇ ನಮ್ಮ ಜವಾಬ್ದಾರಿ, ಕನ್ನಡದ ಅನುಷ್ಠಾನವೆಲ್ಲಾ ‘ಕರವೇ’ಯಂಥ ಖಾಸಗಿ ಸಂಘಟನೆಗಳ ಕೆಲಸ’ ಎಂದು ಸರಕಾರಗಳು ಕೈಕಟ್ಟಿ ಕುಳಿತರೆ ಕನ್ನಡಮ್ಮನ ಉತ್ಸವಕ್ಕೆ ಹೆಗಲು ಕೊಡುವವರು ಯಾರು? ನಾಡು-ನುಡಿಯ ವಿಷಯ ಬಂದಾಗ ಜನರು ಈ ನಾಡಿನ ಕೆಲವು ಸಂಘ-ಸಂಸ್ಥೆಗಳನ್ನು, ವ್ಯಕ್ತಿಗಳನ್ನು ನೆನಪಿಸಿಕೊಳ್ಳುತ್ತಾರೆ.

ಅವೆಲ್ಲಾ ಖಾಸಗಿ ಸಂಸ್ಥೆಗಳು. ಆದರೆ ದಶಕಗಳ ಕಾಲ ಅಸ್ತಿತ್ವದಲ್ಲಿರುವ ಸರಕಾರಿ ಸಂಸ್ಥೆಗಳನ್ನಾಗಲಿ, ಅಲ್ಲಿ ಕೆಲಸ ಮಾಡಿದವರನ್ನಾಗಲಿ ಒಬ್ಬರೂ ಸ್ಮರಿಸುವುದಿಲ್ಲ. ಅವರ‍್ಯಾರೂ ಸಾಮಾನ್ಯ ಜನರಿಗೆ ಗೊತ್ತಿರುವುದಿಲ್ಲ. ಇದು ನಮ್ಮ ಕನ್ನಡದ ಉಳಿವು, ಅಭಿವೃದ್ಧಿಗೆಂದೇ ಸ್ಥಾಪಿಸಿರುವ ಸರಕಾರಿ/ಅರೆ ಸರಕಾರಿ ಸಂಸ್ಥೆಗಳ ಸ್ಥಿತಿ. ಸರಕಾರವು ಈಗಲಾದರೂ ಗ್ರಾಮೀಣ ಪ್ರದೇಶಗಳಲ್ಲಿನ ತಹಸೀಲ್ದಾರ್, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಸ್ಥಳೀಯ ಪಂಚಾಯಿತಿಯ ಅಧಿಕಾರಿಗಳು, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳನ್ನು ಸಮನ್ವಯಗೊಳಿಸಿ, ಕನ್ನಡಪರ ಸಂಘಟನೆಗಳ ಚಟುವಟಿಕೆಗಳಿಗೆ ಮೇಲುಸ್ತು ವಾರಿ ನಡೆಸಿ ಬೆಂಬಲಿಸುವಂತೆ ಮಾಡಿ ದರೆ, ಕನ್ನಡ ಫಲಕಗಳಲ್ಲಷ್ಟೇ ಅಲ್ಲದೆ ಎಲ್ಲರ ಹೃದಯಗಳಲ್ಲೂ ಕನ್ನಡ ಮೆರೆದೀತು, ಮಿನುಗೀತು!

(ಲೇಖಕರು ಹವ್ಯಾಸಿ ಬರಹಗಾರರು)

Leave a Reply

Your email address will not be published. Required fields are marked *