Wednesday, 11th December 2024

ಕನ್ನಡ ಪತ್ರಿಕೋದ್ಯಮ: ಒಂದು ಅವಲೋಕನ

ದಾಸ್ ಕ್ಯಾಪಿಟಲ್‌

dascapital1205@gmail.com

ಈಚೆಗೆ ಕೆಲವು ಪತ್ರಿಕೆಗಳಲ್ಲಿ ಭಾವಚಿತ್ರಗಳೂ ಬರುತ್ತಿವೆ. ನಮ್ಮ ದೇಶದ ಭಾರೀ ಇಂಗ್ಲಿಷ್ ಪತ್ರಿಕೆಗಳಲ್ಲಿ ಬರುವ ಭಾವಚಿತ್ರಗಳೇ ತೆನಾಲಿ
ರಾಮಕೃಷ್ಣನ ಚಿತ್ರಗಳಂತೆಯೂ, ಪಂಚ್ ಮೊದಲಾದ ಇಂಗ್ಲಿಷ್ ಹಾಸ್ಯ ಪತ್ರಿಕೆಗಳಲ್ಲಿರುವ ಅಣಕುಚಿತ್ರಗಳಿಗೆ ಪ್ರತಿಯಾದ ವಿಕಾರಗಳಂತೆಯೂ ಇರುವಲ್ಲಿ, ಕನ್ನಡ ಪತ್ರಿಕೆಗಳ ಚಿತ್ರವೈಭವವನ್ನು ವರ್ಣನೆ ಮಾಡುವುದು ಅನಾವಶ್ಯಕ.

ಒಂದು ವೇಳೆ ಈ ಚಿತ್ರಗಳನ್ನು ನೋಡಿದರೆ ಚಿತ್ರಿತರಾದವರಿಗೂ ಅವರ ಬಂಧುಮಿತ್ರರಿಗೂ ನಗು ಬಂದೀತೋ ಅಳು ಬಂದೀತೋ ಊಹಿಸುವುದು ಕಷ್ಟ. ಚಿತ್ರಗಳನ್ನು ಅಚ್ಚು ಮಾಡುವುದು ವೆಚ್ಚದ ಕೆಲಸ. ನುಣುಪಿನ ಕಾಗದ, ಒಳ್ಳೆಯ ಮಸಿ, ಚೊಕ್ಕಟವಾದ ಪಡಿಯಚ್ಚು, ನಯವಾದ ಯಂತ್ರ,
ನಾಜೂಕಾದ ಕೈಗಾರಿಕೆ- ಇವುಗಳಲ್ಲಿ ಯಾವುದಿಲ್ಲದಿದ್ದರೂ ಚಿತ್ರವು ಅಂದವಾಗುವುದಿಲ್ಲ. ಈಚೆಗೆ ಬೆಂಗಳೂರಿನ ಒಂದೆರಡು ಪತ್ರಿಕೆಗಳವರು ಪ್ರಕಟಿಸಿರುವ ಭಾವಚಿತ್ರಭರಿತಗಳಾದ ವಿಶೇಷ ಸಂಚಿಕೆಗಳು ಅಂದವಾಗಿವೆ…!

ಶುದ್ಧ ತಮಾಷೆಯಂತೆ ಈ ಮಾತುಗಳು ಭಾಸವಾದರೂ ಸ್ಮಯವೇನಲ್ಲ! ಅಹುದು. ೧೯೨೮ರ ಜುಲೈ ೩೧ ರಂದು ಬಾಗಲಕೋಟೆಯಲ್ಲಿ ಸಮಾವೇಶ ಗೊಂಡ ಅಖಿಲ ಕರ್ನಾಟಕ ಪತ್ರಕರ್ತರ ಪ್ರಥಮ ಸಮ್ಮೇಳನದಲ್ಲಿ ಅಧ್ಯಕ್ಷ ಸ್ಥಾನದಿಂದ ಪತ್ರಿಕಾ ಭೀಷ್ಮ ಜನಮಾನ್ಯರಾದ ಡಿವಿಜಿಯವರು ಆಡಿದ ಭಾಷಣದ ಕೆಲ ಮಾತುಗಳಿವು. ಕ್ಷಣಮಾತ್ರದಲ್ಲಿ ಆಗುವ ಮಾಹಿತಿ ಸ್ಫೋಯುಗದ ಇತ್ತೀಚಿನ ಕಾಲದಲ್ಲಿ ಈ ಮಾತುಗಳು ಸ್ಥಿತ್ಯಂತರವನ್ನು ಅಭಿವ್ಯಕ್ತಿಸುತ್ತದೆ. ಕೇವಲ ೮೯ ವರ್ಷ ಗಳಲ್ಲಿ ಜಗತ್ತಿನ ಪತ್ರಿಕೋದ್ಯಮದೊಂದಿಗೆ ಕನ್ನಡ ಪತ್ರಿಕೋದ್ಯಮವೂ ದಾಪುಗಾಲಿನೊಂದಿಗೆ ತಲುಪಬೇಕಾದ ಗಮ್ಯವನ್ನು ತಲುಪಿದೆ ಎಂಬುದರಲ್ಲಿ ಎರಡು ಮಾತಿಲ್ಲ.

ಕನ್ನಡದ ಪತ್ರಿಕೆಯೂ ಕಾಲ-ಸನ್ನಿವೇಶಕ್ಕೆ ಹೊಂದಿಕೊಳ್ಳುತ್ತಾ ಜನಮನಕ್ಕೆ ಹತ್ತಿರವಾಗುವಂತೆ ಬದುಕುತ್ತಿವೆ. ಅಸಾಮಾನ್ಯ ಮಜಲುಗಳನ್ನು
ದಾಟಿ ಮಾಧ್ಯಮಕ್ರಾಂತಿಗೆ ಮುನ್ನುಡಿಯನ್ನು ಬರೆದಿವೆ. ಇದೊಂದು ನಿರಂತರವಾದ ಪ್ರವಾಹದಂಥ ಪ್ರಕ್ರಿಯೆ. ನೀರು ಮಡುಗಟ್ಟಿ ಪಾಚಿ ಬೆಳೆಯುವ ಮಾತು ಹಾಗಿರಲಿ, ಪ್ರವಾಹದ ವಿರುದ್ಧ ಈಜಬಲ್ಲ ಗಟ್ಟಿಕುಳಗಳು ಮಾತ್ರ ಬದುಕುವ ಮಹಾನದಿ ಇದೆಂದು ಪತ್ರಿಕೋದ್ಯಮದ ಈವರೆಗಿನ ಅನೇಕ
ಪ್ರಯೋಗಗಳು ಅರಿವು ಮೂಡಿಸಿದೆ. ಈ ಪತ್ರಿಕೋದ್ಯಮದ ಇತಿಹಾಸವೇ ಸಂಘರ್ಷಮಯವಾದದ್ದು. ತನ್ನ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕಾಗಿನ ಹೋರಾಟ ಗಳೇ ಇವುಗಳ ಸಂಘರ್ಷಕ್ಕೆ ಕಾರಣವೆಂಬುದೂ ಚರಿತ್ರೆಯನ್ನು ಸೇರುತ್ತಲೇ ಇರುವ ಸಂಗತಿಯಾಗಿದೆ. ಪರಿವರ್ತನೆ ಪತ್ರಿಕೋದ್ಯಮದ ಅಂತಃ ಸ್ಸತ್ತ್ವ.

ಅಬಾಲವೃದ್ಧರಾದಿಯಾಗಿ ಓದಲು ಪ್ರೇರೇಪಿಸುವ ಪತ್ರಿಕೆಗಳು ಸಮಕಾಲೀನ ಜಗತ್ತಿಗೆ, ಜನರ ಮನೋಭಿಲಾಷೆಗೆ, ಸ್ಥಳೀಯತೆಗೆ ಗಹನತೆಯನ್ನು ನೀಡುತ್ತಿರುತ್ತವೆ. ಕೇವಲ ಸುದ್ದಿಗಳು ಆಕರ್ಷಕವಾಗುವುದಿಲ್ಲ. ನಾವೀನ್ಯ ವಿನ್ಯಾಸಗಳು ಪತ್ರಿಕೆಗೆ ಕಾಲಕಾಲಕ್ಕೆ ಆಗುತ್ತಿರಬೇಕು. ಸೃಷ್ಟಿಶೀಲತೆಯನ್ನು
ಪ್ರದರ್ಶಿಸಬೇಕು. ಜನರಿಗೆ ಹೇಳುವುದನ್ನೇ, ಕೊಡುವುದನ್ನೇ ಜನರಿಗೆ ಹೊಸ ರೀತಿಯಲ್ಲಿ ಹೇಗೆ ಪ್ರಸ್ತುತಿ ಪಡಿಸಬಹುದು ಎಂಬುದನ್ನು ಸದಾ ನಿತ್ಯ ನೂತನವಾಗುವಂತೆ ಹಂಬಲಿಸ ಬೇಕು. ಯಾಕೆಂದರೆ ಪತ್ರಿಕೋದ್ಯಮ ಈಗ ಲಾಭಗಳಿಕೆಯ ಒಂದು ಸ್ಪರ್ಧಾತ್ಮಕ ಉದ್ಯಮ. ಪತ್ರಿಕಾವೃತ್ತಿ-ಪತ್ರಿಕೋದ್ಯೊಗವಾಗಿದ್ದ ಪತ್ರಿಕಾ ಕ್ಷೇತ್ರ ಪತ್ರಿಕೋದ್ಯಮವಾಗಿ ಬೆಳೆದದ್ದು ಎಂಬತ್ತರ ದಶಕದ ಅನಂತರದಲ್ಲಿ, ಅಲ್ಲಿಯವರೆಗೆ ಅದೊಂದು ಉದ್ಯಮ ವಾಗಿ ಪರಿಗಣಿಸಲು ಅದರ ತತ್ತ್ವಾದರ್ಶಗಳ ಅನುಮತಿ ನೀಡಿರಲಿಲ್ಲ.

ಹೇಗೆ ಈಗ ಶಿಕ್ಷಣ ಒಂದು ಲಾಭ ಗಳಿಕೆಯ ಉದ್ಯಮ ಆಗಿದೆಯೋ ಹಾಗೆ! ಯಾವಾಗ ಅವಸಾನದಲ್ಲಿ ಮುಖನೆಟ್ಟಿದ್ದ ಬೆನೆಟ್ ಆಂಡ್ ಕೋಲ್ ಮನ್ ಕಂಪೆನಿಯ ಸಾರಥ್ಯವನ್ನು ಸಮೀರ್ ಜೈನ್ ವಹಿಸಿಕೊಂಡರೋ (1986) ಅಲ್ಲಿಂದ ಭಾರತೀಯ ಪತ್ರಿಕೋದ್ಯಮದ ಒಟ್ಟೂ ಚಿತ್ರಣವೇ ಬದಲಾ ಯಿತು. ಉದಾರೀಕರಣ, ಖಾಸಗೀಕರಣಗಳ ಗೋಡೆಯಿಲ್ಲದ ಜಗತ್ತಿನಲ್ಲಿ ಜಾಹೀರಾತೆಂಬ ಚಿನ್ನದ ಮೊಟ್ಟೆ ಇಡುವ ಕೋಳಿಗೆ ಆಕರ್ಷಣೆ ಗೊಂಡು ಪತ್ರಿಕೋದ್ಯೋಗ ಪತ್ರಿಕೋದ್ಯಮವಾಗಿ ಬೆಳೆದದ್ದು ಕೇವಲ ಎರಡು-ಮೂರು ದಶಕಗಳ ಕ್ಷಿಪ್ರ ಬೆಳವಣಿಗೆ.

ಸುಮಾರು ೨೩೯ ವರ್ಷಗಳ ಭಾರತೀಯ ಪತ್ರಿಕೋದ್ಯಮ ಮತ್ತು ಸುಮಾರು ೧೮೦ ಮಿಕ್ಕಿದ ವರ್ಷಗಳ ಕನ್ನಡ ಪತ್ರಿಕೋದ್ಯಮದಲ್ಲಿ ಇದು ಸಣ್ಣ ಅವಽ. ತಿರುಮಲೆ ತಾತಾಚಾರ್ಯ ಶರ್ಮ, ಎಂ.ವೆಂಕಟಕೃಷ್ಣಯ್ಯ, ಡಿವಿಜಿ, ಆರ್.ಆರ್ .ದಿವಾಕರ್, ಮೊಹರೆ ಹಣಮಂತರಾವ್, ಸಿದ್ಧವನಹಳ್ಳಿ
ಕೃಷ್ಣಶರ್ಮ, ಖಾದ್ರಿ ಶಾಮಣ್ಣ, ಟಿ.ಎಸ್. ರಾಮಚಂದ್ರ ರಾವ್, ಶಾಮರಾಯರು… ಮುಂತಾದ ದಿಗ್ಗಜರನ್ನು ಕಂಡ ಕನ್ನಡ ಪತ್ರಿಕೋದ್ಯಮಕ್ಕಂತೂ ಬದಲಾವಣೆಯ ಗಾಳಿ ಪತ್ರಿಕಾವೃತ್ತಿಯ ಉನ್ನತಿಯ ಗಾಳಿ ಆಯಿತೇ ಹೊರತು ಉದ್ಯಮದ ಗಾಳಿ ಆಗಲಿಲ್ಲ.

ಆದರೆ, ಜಾಗತೀಕರಣದ ಪ್ರಭಾವದಿಂದಾಗಿ ದೇಶದ ಅಥವಾ ಜಗತ್ತಿನ ಇತರ ಭಾಗದ ಪತ್ರಿಕೋದ್ಯಮ ಯಾವ ಹಾದಿ ಹಿಡಿಯಿತೋ ಆ ಹಾದಿ
ಯಿಂದ ಹೊರತುಪಡಿಸಿಕೊಳ್ಳಲು ಕನ್ನಡ ಪತ್ರಿಕೋದ್ಯಮಕ್ಕೆ ಈಗಲೂ ಸಾಧ್ಯವಿಲ್ಲ. ಆದರೆ ಪತ್ರಿಕೆಯೊಂದು product ಆಗಿ, ಓದುಗ ಒಬ್ಬ ಗ್ರಾಹಕ ಆದಲ್ಲಿಂದ ಕನ್ನಡ ಪತ್ರಿಕೋದ್ಯಮದ ಗತಿ ಮತ್ತು ಹಾದಿಗಳೆರಡೂ ಬದಲಾಗಿಬಿಟ್ಟವು. ಆದ್ಯತೆಯೇ ಬದಲಾದ ಮೇಲೆ ಪ್ರಯತ್ನ ಮತ್ತು ಫಲಿತಾಂಶ ಬದಲಾಗಲೇ ಬೇಕು. ಆಗ ಬಿಸಿನೆಸ್ ಮ್ಯಾನೇಜ್ಮೆಂಟಿನ ಪರಿಭಾಷೆಯಲ್ಲಿ ಪತ್ರಿಕೆಯ ಒಟ್ಟೂ ಚಲನೆ ಸಾಗಬೇಕಾಗಿ ಬಂತು.

ಪತ್ರಿಕೆಗಳಿಗೂ ಮ್ಯಾಗಜಿನ್‌ಗಳಿಗೂ ಇರುವ ಅಂತರ ಕಡಿಮೆಯಾಯಿತು. ಬಹುತೇಕ ಪತ್ರಿಕೆಗಳು ನಿತ್ಯ ಪುರವಣಿಗಳನ್ನು ಪ್ರಕಟಿಸಿದವು. ಸುದ್ದಿ ಬರೆವಣಿಗೆ, ಪ್ರಸ್ತುತಿ, ಒಳ ಮತ್ತು ಹೊರ ವಿನ್ಯಾಸ, ಅಕ್ಷರ ರಚನೆ ಬಣ್ಣಗಳ ಹೊಂದಿಕೆ- ಇವುಗಳಲ್ಲಿ ಆಕರ್ಷಣೆಯೇ ಪ್ರಮುಖವಾದ ಅಂಶವಾಗುವಂತೆ ಪತ್ರಿಕೆಗಳು ಬದಲಾದವು. ಸುದ್ದಿಯನ್ನು ಸುದ್ದಿಯಾಗಿ ಕೊಡುವುದಕ್ಕಿಂತ ಸಂಪಾದಕೀಕರಣಗೊಳಿಸಿ ಕೊಡುವುದನ್ನು ರೂಢಿಗೊಳಿಸಿದರು. ಓದುಗಸ್ನೇಹೀ ವಿನ್ಯಾಸಕ್ಕೆ ಪ್ರಥಮ ಆದ್ಯತೆ ಬಂತು. ಸಂಕ್ಷಿಪ್ತತೆಯೇ ಸುದ್ದಿಯ ಜೀವಾಳ ಎಂಬ ಮಾತು ನಿಜಾರ್ಥದಲ್ಲಿ ಅನುಷ್ಠಾನಕ್ಕೆ ಬಂತು.

ಪ್ರತಿ ಜಿಲ್ಲೆ ಸುದ್ದಿಗಾಗಿ ಅಂತ ಒಂದು ಪುಟವನ್ನು ಮೀಸಲಿಡುವಷ್ಟು ವಿಸ್ತಾರವನ್ನು ಪಡೆಯಿತು. ಹಲವು ಕಡೆಗಳಿಂದ ಸುದ್ದಿ ಏಕಕಾಲದಲ್ಲಿ ಪ್ರಕಟ ಗೊಂಡು, ಪ್ರಸಾರವಾಗುವಷ್ಟು ವೇಗವನ್ನು ಪತ್ರಿಕಾ ಪ್ರಪಂಚ ಪಡೆಯಿತು. Content ಅಷ್ಟೇ ಪ್ಯಾಕೇಜಿಂಗಿಗೂ ಮಹತ್ವ ಬಂತು. ಇವೆಲ್ಲ ಬದಲಾವಣೆಗಳಾದವು, ಆಗುತ್ತಲೇ ಇವೆ. ಪತ್ರಿಕೆಗಳು ಜನಮಾನಸದಿಂದ ದೂರವಾಗುತ್ತಲೂ ಇದೆ, ಹೊಸ ಪತ್ರಿಕೆಗಳ ಉದಯವೂ ಆಗುತ್ತಿದೆ. ಇರುವ ಸ್ಥಿತಿಯನ್ನೇ ಪರಿವರ್ತಿಸಿಕೊಂಡು ಮತ್ತೆ ಹೊಸರೂಪದಲ್ಲಿ ಪತ್ರಿಕೆಗಳು ಜನರನ್ನು ಆಕರ್ಷಿಸುತ್ತಲೂ ಇದೆ. ಪರಿಣಾಮವಾಗಿ ಒಳ್ಳೆಯದೂ ಆಗಿದೆ, ವ್ಯತಿರಿಕ್ತವೂ ಆಗಿವೆ. ಸಮಾಜದ ಅಭಿವೃದ್ಧಿಯ ದೃಷ್ಟಿಯಿಂದ ಒಳ್ಳೆಯದೇ ಅತ್ಯಧಿಕ.

ವರ್ತಮಾನಕ್ಕೆ ಸ್ಪಂದಿಸುತ್ತಾ, ನೆಲವನ್ನು ಪ್ರೀತಿಸುತ್ತ, ಆಕಾಶಕ್ಕೆ ಮುಖಮಾಡಿ, ರಾಷ್ಟ್ರಪ್ರಗತಿಯ ಊರ್ಧ್ವಚಿಂತನೆಯನ್ನು ಹೊತ್ತು ಅದಮ್ಯವಾದ ಹಂಬಲದೊಂದಿಗೆ ಜಗತ್ತಿಗೆ ತೆರೆದುಕೊಳ್ಳುತ್ತಿರುವ ಕನ್ನಡ ಪತ್ರಿಕೋದ್ಯಮ ಸೃಷ್ಟಿಶೀಲತೆಯನ್ನು ತನ್ನ ನಿತ್ಯದ ಸಂಚಿಕೆಯಲ್ಲಿ ಅನಾವರಣ ಮಾಡುತ್ತಿದೆ ಎಂಬುದು ಸರ್ವವೇದ್ಯ. ಹೊಸ ಮನ್ವಂತರಕ್ಕೆ ನಿತ್ಯವೂ ಮುಂದಾಗುತ್ತಿದೆ. ಇದರಿಂದ ಅಪೇಕ್ಷಿತ ಪರಿವರ್ತನೆಗಳಾಗಿವೆ. ನೈತಿಕತೆ ಹಾದಿಯನ್ನು ಔನ್ನತ್ಯಗೊಳಿಸಿಕೊಂಡು, ಘನ ಪರಂಪರೆಯ ಸೌಧವನ್ನು ಕಟ್ಟುವ ಸೂಚನೆಗಳನ್ನು ನಿತ್ಯವಿನ್ಯಾಸದಲ್ಲಿ ರೂಢಿಸಿಕೊಂಡಿದೆ. ಈ ಬಗೆಯ ನಿತ್ಯದ ಪರಿವರ್ತನೆಗಳು ಪ್ರತಿ ಪತ್ರಿಕೆಗೆ ಹೊಸ ಹುಟ್ಟೇ ಆಗಿರುತ್ತದೆ. ಸಮುದಾಯದ ಕಾಳಜಿ ಮತ್ತು ಜತನತೆ ಇಂತಹ ಹುಟ್ಟಿನಲ್ಲಿರುತ್ತದೆ. ಸುದ್ದಿಗಳನ್ನು ರಂಜನೀಯಗೊಳಿಸಿ ಓದುಗರ ದಾರಿ ತಪ್ಪಿಸುವಂತ ಹೊರತಾದ ಜವಾಬ್ದಾರಿಯನ್ನು ಆರಂಭದಿಂದಲೂ ಹೊತ್ತಿರುವ ಕನ್ನಡ ಪತ್ರಿಕೋದ್ಯಮ ಇನ್ನಷ್ಟು ಪ್ರಬುದ್ಧತೆಯನ್ನು ಮೆರೆಯುತ್ತಿದೆ.

ಬಹುಮುಖ್ಯವಾಗಿ ಈ ದೇಶ, ಈ ಬದುಕು ದೊಡ್ಡದು ಎಂದು ಹಂಬಲಿಸುವ ಧ್ವನಿಯಿದೆ. ಆಲೋಚನಾ ಕ್ರಮದಲ್ಲಿ ಸಂಕುಚಿತತೆ ಇರದೇ ನಮ್ಮದನ್ನು ಗೌರವಿಸುತ್ತಲೇ ಲೋಕದೃಷ್ಟಿಯನ್ನು ಹೊಂದಿದೆ. ಸೈದ್ಧಾಂತಿಕವಾಗಿ ಹಂಗಿಲ್ಲದ empathy ಯನ್ನು ಮೂಲಸತ್ತ್ವವನ್ನಾಗಿಸಿಕೊಂಡು ಉತ್ತಮ ಪಬ್ಲಿಕ್ ರಿಲೇಷ ಹೊಂದು ತ್ತಿದೆ. ಓದುಗರ ವಿಶ್ವಾಸಾರ್ಹತೆ ಪತ್ರಿಕೆಗಳಿಗೆ ಬಹು ಮುಖ್ಯ. ನಾವು ಓದುವ ಪತ್ರಿಕೆ ನಮ್ಮ ಚಿಂತನಾ ಸಾಮರ್ಥ್ಯವನ್ನು
ಎತ್ತರಿಸಬೇಕು.

ಹೀಗೆ, ನಮಗೆ ನಾವು ಬದಲಾಗುವ ಆನಂದಕ್ಕೆ ಪತ್ರಿಕೆ ಆಸ್ಪದವೀಯಬೇಕು. ಸದ್ಯದ ಮಟ್ಟಿಗೆ ಕನ್ನಡ ಪತ್ರಿಕೋದ್ಯಮ ಈ ಹಾದಿಯಲ್ಲಿ ಸಾಗುತ್ತಿದೆ. 1842 ರಲ್ಲಿ ಮಂಗಳೂರು ಸಮಾಚಾರದೊಂದಿಗೆ ಆರಂಭಗೊಂಡ ಕನ್ನಡ ಪತ್ರಿಕೋದ್ಯಮ 180 ವಸಂತಗಳನ್ನು ದಾಟಿ ಸಾಗುತ್ತಿದೆ. ಈ ಹಿನ್ನೆಲೆ ಯಲ್ಲಿ ಮೇಲಿನ ಮಾತುಗಳೂ ಒಳಗೊಂಡು, ಕನ್ನಡ ಪತ್ರಿಕೋದ್ಯಮದ ಆದರ್ಶ ಮತ್ತು ಭರವಸೆಯು ಹೊಸಹುಮ್ಮಸ್ಸು, ಹೊಸಚೈತನ್ಯ ದಿಂದ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ತನ್ನ ಅಸ್ತಿತ್ವವನ್ನು ವಿಶೇಷವಾಗಿ ರೂಪಿಸಿಕೊಳ್ಳುತ್ತಾ, ಉತ್ಕರ್ಷದ ಹಾದಿಯಲ್ಲಿ ನಮ್ಮ ನಮ್ಮ
ಬೌದ್ಧಿಕ ಮತ್ತು ಮಾನಸಿಕ ಆರೋಗ್ಯದ ಮಟ್ಟವನ್ನು ಹದಗೊಳಿಸುತ್ತಾ ತಾನೂ ಬೆಳೆಯುತ್ತಾ ನಮ್ಮನ್ನು ಬೆಳೆಸುತ್ತಿದೆ.

ಭವಿಷ್ಯದ ಭರವಸೆಯನ್ನು ಗಟ್ಟಿಗೊಳಿಸುತ್ತಾ ದಿಟ್ಟ ಹೆಜ್ಜೆಯಿಡುತ್ತಿದೆ. ಸಮಕಾಲೀನ ಕನ್ನಡ ಜಗತ್ತನ್ನು ವಿಭಿನ್ನವಾದ ಮತ್ತು ವಿಶಿಷ್ಟವಾದ ದೃಷ್ಟಿಕೋನ ದಿಂದ ವಿಶ್ಲೇಷಿಸುವ ಕನ್ನಡ ಪತ್ರಿಕೋದ್ಯಮವು ಕನ್ನಡದ ಸಮಗ್ರ ಇತಿಹಾಸವನ್ನು ಹೇಳುವ ಜ್ವಲಂತ ಸಾಕ್ಷಿಗಳಲ್ಲಿ ಪ್ರಧಾನವಾದುದು. ಒಂದು ಜೀವಂತ ಭಾಷೆ ಮತ್ತದರ ಸಂಸ್ಕೃತಿಯನ್ನು ಉಳಿಸಿ ಬೆಳೆಸಿ ಪೋಷಿಸುವಲ್ಲಿ ಪತ್ರಿಕೆಗಳ ಪಾತ್ರ ಮಹತ್ತರವಾದುದು. ಕನ್ನಡದ ಜಗತ್ತಿಗೆ
ಇವು ಅತ್ಯಗತ್ಯವಾದುದು.

ಕನ್ನಡದ ಉಳಿವಿನ ಚಿಂತನೆಯ ಬಗ್ಗೆ ಎಲ್ಲೂ ಕೂಗು ಕೇಳಿಬರುತ್ತಿರುವ ಈ ಸಂದರ್ಭದಲ್ಲಿ ನಮ್ಮ ಮಕ್ಕಳು ಕನ್ನಡದ ಪತ್ರಿಕೆಗಳನ್ನು ಓದುವ ವ್ಯವಸ್ಥೆ ಯನ್ನು ಶಾಲಾ-ಕಾಲೇಜುಗಳಲ್ಲಿ, ಮನೆಗಳಲ್ಲಿ, ಸಾರ್ವಜನಿಕ ಗ್ರಂಥಾಲಯಗಳಲ್ಲಿ ಇನ್ನೂ ಹೆಚ್ಚಾಗಿ ಮಾಡಿಕೊಳ್ಳಬೇಕಾಗಿದೆ. ಸರಕಾರ ಇದಕ್ಕೆ ಯೋಜನೆಗಳನ್ನು ರೂಪಿಸಬೇಕಿದೆ. ವರ್ತಮಾನಕ್ಕೆ ಭೂತದ ಸ್ಪರ್ಶದೊಂದಿಗೆ ಕನ್ನಡ ನೆಲವನ್ನು ಸಾಂಸ್ಕೃತಿಕವಾಗಿ ಶ್ರೀಮಂತಗೊಳಿಸುವ ಪತ್ರಿಕೋ ದ್ಯಮದ ಶ್ರಮವನ್ನು ನಾವು ಗೌರವಿಸುವುದೆಂದರೆ ಪತ್ರಿಕೆಯನ್ನು ನಿತ್ಯವೂ ಕೊಂಡು ಓದುವುದು.