Saturday, 14th December 2024

ಕನ್ನಡ -ಮರಾಠಿ ಭಾಷಾಬಾಂಧವ್ಯ ಅನನ್ಯ

ಸೌಹಾರ್ದ ವೇದಿಕೆ

ಡಾ.ಆರ್‌.ನಾಗರಾಜು

ಕನ್ನಡಿಗರು ಮತ್ತು ಮರಾಠಿಗರ ನಡುವೆ ಸಾಂಸ್ಕೃತಿಕವಾಗಿ, ವಾಣಿಜ್ಯಿಕವಾಗಿ ಅವಿನಾಭಾವ ಸಂಬಂಧವಿದೆ. ಎಷ್ಟೋ ಜನ ಕನ್ನಡ ಕಲಾವಿದರಿಗೆ ಮರಾಠಿ ನೆಲವೂ, ಮರಾಠಿಗರಿಗೆ ಕನ್ನಡ ನೆಲವೂ ಆಶ್ರಯ ನೀಡಿರುವುದು ಇಲ್ಲಿ ಉಲ್ಲೇಖನೀಯ. ಕನ್ನಡಿಗರು ಮತ್ತು ಮರಾಠಿಗರ ನಡುವೆ ಸಾಕಷ್ಟು ವಿವಾಹ ಬಾಂಧವ್ಯ ಗಳು ಬೆಸೆಯಲ್ಪಟ್ಟಿವೆ.

ಪ್ರಾಚೀನ ಕಾಲದಿಂದಲೂ ಕನ್ನಡ- ಮರಾಠಿ ಭಾಷೆಗಳು ಮಾತ್ರವಲ್ಲದೆ ಆ ಭಾಷಿಕರ ನಡುವೆಯೂ ಹೊಕ್ಕಳು ಬಳ್ಳಿಯ ಸಂಬಂಧವಿದೆ. ಚರಿತ್ರೆ, ಸಂಗೀತ-ಸಾಹಿತ್ಯ, ಭಾಷೆ-ಸಂಸ್ಕೃತಿ, ನೆಲ-ಜಲ, ಉಡುಗೆ-ತೊಡುಗೆ, ಊಟ-ಉಪಚಾರ, ಜಾತ್ರೆ-ಉತ್ಸವ ಹೀಗೆ ವಿವಿಧ ಆಯಾಮಗಳಿಂದಲೂ ಈ ಎರಡೂ ಭಾಷಿಕರನ್ನು
ಪ್ರತ್ಯೇಕ ನೆಲೆಯಲ್ಲಿ ನೋಡುವ ಅಗತ್ಯವೇ ಇಲ್ಲ. ಏಕೆಂದರೆ ಈ ಎರಡೂ ಜನಾಂಗದ ಮೂಲವು ಒಂದೇ ಆಗಿದೆ. ಭಾಷೆ ಬೇರೆ ಬೇರೆ ಆಗುವುದಕ್ಕಿಂತ ಮೊದಲೇ ಮರಾಠಿಗರು ಕನ್ನಡವನ್ನು ಮಾತನಾಡುತ್ತಿದ್ದರು.

ಮಹಾರಾಷ್ಟ್ರದವರು ‘ಯದು’ ಮೂಲದವರು, ಕನ್ನಡಿಗರು ‘ತುರುವಸು’ (ಕದಂಬ) ಮೂಲದವರು ಎಂದು ಋಗ್ವೇದದಲ್ಲಿ ಉಲ್ಲೇಖವಿದೆ. ಅಲ್ಲದೆ ಕನ್ನಡ-ಮರಾಠಿ ಬಾಂಧವ್ಯವನ್ನು ‘ಸಹೋದರ ಸಂಬಂಧಿ’ ಎಂದು ಬಣ್ಣಿಸಲಾಗಿದೆ. ಪಶುಪಾಲನೆಯು ಈ ಇಬ್ಬರ ಉದ್ಯೋಗವಾಗಿತ್ತು; ಹೀಗಾಗಿ ಇಬ್ಬರನ್ನೂ ‘ಹಟ್ಟಿ ಜನಾಂಗ’ ವೆಂದು ಗುರುತಿಸಲಾಗುತ್ತದೆ. ಈ ವಿಚಾರದ ಹಿನ್ನೆಲೆಯಲ್ಲಿ ಬಾಲ ಗಂಗಾಧರ ತಿಲಕರು, ‘ಮಹಾರಾಷ್ಟ್ರ ಬೇರೆ ಅಲ್ಲ, ಕರ್ನಾಟಕ ಬೇರೆ ಅಲ್ಲ; ಇಬ್ಬರ ಭಾಷೆಯೂ
ಕನ್ನಡವೇ ಆಗಿತ್ತು’ ಎಂದಿದ್ದಾರೆ. ಇಂದಿಗೂ ಮಹಾರಾಷ್ಟ್ರದ ಬಹುತೇಕ ಗ್ರಾಮಗಳ ಹೆಸರುಗಳು ಕನ್ನಡ ಮೂಲದವೇ ಆಗಿವೆ ಎನ್ನುತ್ತಾರೆ ಪ್ರಮುಖ ಚಿಂತಕ ರಾಜವಾಡೆಯವರು.

ಕನ್ನಡ ಭಾಷಿಕ ಬುಡಕಟ್ಟು ಜನಾಂಗವು ಮಹಾರಾಷ್ಟ್ರದ ವಿವಿಧೆಡೆ ಇಂದಿಗೂ ವಾಸಿಸುತ್ತಿರುವುದನ್ನು ಕಾಣಬಹುದು. ‘ಕಾವೇರಿಯಿಂದಮಾ ಗೋದಾವರಿ ವರಮಿರ್ದ ನಾಡದಾ ಕನ್ನಡದೊಳ್ ಭಾವಿಸಿದ ಜನಪದಂ’ ಎಂದು ‘ಕವಿರಾಜಮಾರ್ಗ’ಕಾರ ಹೇಳಿದ ಮಾತಿನ ಪ್ರಕಾರ, ಕರ್ನಾಟಕದ ಕಾವೇರಿ ನದೀಮುಖಜ
ಭೂಮಿಯಿಂದ ಮಹಾರಾಷ್ಟ್ರದ ಗೋದಾವರಿ ನದೀಮುಖಜ ಭೂಮಿಯವರೆಗಿನ ಪ್ರದೇಶವನ್ನು ಕ್ರಿ.ಪೂ. ೨ನೇ ಶತಮಾನದಿಂದ ಕ್ರಿ.ಶ. ೧೩ನೇ ಶತಮಾನದ ವರೆಗೂ ಕನ್ನಡದ ಅರಸರು ಆಳಿದ್ದು, ತದನಂತರ ಮರಾಠಿಗರು ಪ್ರವರ್ಧಮಾನಕ್ಕೆ ಬಂದರು. ಕ್ರಿ.ಪೂ.೨೦೦ರಿಂದ ಕ್ರಿ.ಶ.೨೨೫ರವರೆಗೆ ಶಾತವಾಹನರು, ತದನಂತರ ವಾಕಟಕರ ಅರಸರು ಆಳಿದರು. ಆಗ ಮರಾಠಿ ಅಸ್ತಿತ್ವದಲ್ಲಿರಲಿಲ್ಲ. ಈ ಸಂದರ್ಭದಲ್ಲಿ ಪ್ರಾಕೃತ ಆಡಳಿತ ಭಾಷೆಯಾದರೆ, ಕನ್ನಡ ಆಡುಭಾಷೆ ಯಾಗಿತ್ತು. ಕ್ರಿ.ಶ. ೬ ಮತ್ತು ೭ನೇ ಶತಮಾನದಲ್ಲಿ ಮರಾಠಿ ಭಾಷೆ ಜನ್ಮ ತಳೆದರೆ, ಅದಕ್ಕೆ ೧೦೦೦ ವರ್ಷಗಳ ಹಿಂದೆ ಕನ್ನಡ ಭಾಷೆ ಜನ್ಮ ತಳೆದಿತ್ತು ಎಂದು ಗುರುತಿಸಲಾಗಿದೆ.

೧೪ನೇ ಶತಮಾನದಲ್ಲಿ ವಿಜಯನಗರ ಅರಸರು ಕನ್ನಡ ಸಾಮ್ರಾಜ್ಯವನ್ನು ಕಟ್ಟಿದರೆ, ೧೭ನೇ ಶತಮಾನದಲ್ಲಿ ಭೋಸ್ಲೆ ಮನೆತನವು ಮರಾಠಿ ಸಾಮ್ರಾಜ್ಯವನ್ನು ಕಟ್ಟಿತು. ಅಂದರೆ, ಕನ್ನಡ ಸಾಮ್ರಾಜ್ಯ ಉದಯಿಸಿದ ೩೦೦ ವರ್ಷಗಳ ನಂತರ ಮರಾಠಿ ಸಾಮ್ರಾಜ್ಯವು ಉದಯಿಸಿತು. ನಂತರ ಭಾಷಾಮೂಲವೂ ಬೇರೆ ಬೇರೆ ಆಯಾಮಗಳನ್ನು ಪಡೆಯುತ್ತಾ ಹೋಯಿತು. ಕನ್ನಡವು ದ್ರಾವಿಡಜನ್ಯ ವಾದರೆ, ಮರಾಠಿ ಆರ್ಯಜನ್ಯವಾಗಿದೆ. ಕನ್ನಡ-ಮರಾಠಿ ಭಾಷಾಮೂಲ ಬೇರೆಬೇರೆಯಾ
ದರೂ ಜನಾಂಗದ ಮೂಲ ಒಂದೇ ಆಗಿದೆ.

ಇಂದಿಗೂ ಕನ್ನಡ-ಮರಾಠಿ ಭಾಷಾಸಂಪತ್ತು ಸಮೃದ್ಧವಾಗಿ ಬೆಳೆದು ನಿಂತಿದೆ. ಮರಾಠಿಯ ದಂಡಕಾರಣ್ಯ ಕನ್ನಡದ ದಾಂಡೇಲಿಯಾಗಿದೆ. ಮರಾಠಿಗರು ಯಾದವ ವಂಶದವರಾಗಿದ್ದಾರೆ. ಈ ‘ಯಾದವ’ ಎನ್ನುವುದು ಕನ್ನಡದ ಮೂಲಪದವಾಗಿದ್ದು ಅದು ಈಗ ಮರಾಠಿಯಲ್ಲಿ ‘ಜಾಧವ’ ಎಂದು ರೂಪಾಂತರಗೊಂಡಿದೆ. ಕರ್ನಾಟಕ ಮತ್ತು ಮಹಾರಾಷ್ಟ್ರದ ಸಾಕಷ್ಟು ಜನರು ಈಗ ‘ಜಾಧವ’ ಎಂಬ ಅಡ್ಡಹೆಸರನ್ನು ಇಟ್ಟುಕೊಂಡಿದ್ದಾರೆ. ಮಹಾರಾಷ್ಟ್ರದ ದಂಡಕಾರಣ್ಯ, ಕರ್ನಾಟಕದ
ಕಿಷ್ಕಿಂಧೆ ಇವೆರಡೂ ಶ್ರೀರಾಮನಿಗೆ ಪ್ರಿಯವಾದ ಸ್ಥಳಗಳಾಗಿದ್ದವು.

ಬಾಂಬೆ, ಬೊಂಬಾಯಿ, ಮುಂಬೈ, ಮುಂಬಾಯಿ ಎಂದೆಲ್ಲ ಕರೆಯಲ್ಪಡುವ ನೆಲೆಯು ಸಪ್ತದ್ವೀಪ ಪ್ರದೇಶವಾಗಿದ್ದು ಇಲ್ಲಿ ಕನ್ನಡನಾಡಿನ ಬೆಸ್ತರು, ಮಿಂಗುಲಿಗರು,
ಸುಣಗಾರರು, ಬಾರಕೇರಾ, ಡೋಲಿ, ಅಂಬಿಗ ಮತ್ತು ಗಂಗಾಮತಸ್ಥರು ಮರಾಠಿಯ ‘ಕೋಳಿ ಕೋಲಿ’ ಎಂಬ ಅಡ್ಡಹೆಸರು (ಉಪನಾಮ) ಇಟ್ಟು ಕೊಂಡು ವಾಸಿಸು ತ್ತಿದ್ದರು. ಬ್ರಿಟಿಷ್ ಆಡಳಿತದಲ್ಲಿ ‘ರೈತವಾರಿ’ ಪದ್ಧತಿಯನ್ನು ಜಾರಿಗೆ ತಂದ ಪತ್ರಾಂಕಿತ ಅಧಿಕಾರಿ ಗವರ್ನರ್ ಸರ್ ಥಾಮಸ್ ಮನ್ರೋ ಅವರಿಗೆ ಬಾಂಬೆಯಲ್ಲಿ ಕೊಟ್ಟ ಅಭಿನಂದನಾ ಪತ್ರವು ಕನ್ನಡ ಭಾಷೆಯಲ್ಲಿದೆ.

ಇದು ಲಂಡನ್ ವಸ್ತುಸಂಗ್ರಹಾಲಯದಲ್ಲಿ ರಾರಾಜಿಸುತ್ತಿರುವುದನ್ನು ಇಂದಿಗೂ ಕಾಣಬಹುದು. ಅಲ್ಲದೆ, ಮರಾಠಿ ಮೂಲದವರು ಕನ್ನಡದಲ್ಲಿ, ಕನ್ನಡ ಮೂಲದವರು ಮರಾಠಿಯಲ್ಲಿ ಕಾರ್ಯಸಾಽಸಿ, ಕನ್ನಡ-ಮರಾಠಿ ಸಂಬಂಧವನ್ನು ಆಕಾಶದೆತ್ತರಕ್ಕೆ ಒಯ್ದಿರುವುದನ್ನೂ ಕಾಣಬಹುದು. ಛತ್ರಪತಿ ಶಿವಾಜಿ ಮಹಾರಾಜ ಕನ್ನಡ
ಮೂಲದವನು. ಆತನ ಊರು ಗದಗ ಜಿಲ್ಲೆಯ ಕುರ್ತಕೋಟಿ ಪಕ್ಕದಲ್ಲಿರುವ ಬೆಳ್ಳಟ್ಟಿ ಸೊರಟೂರು ಎಂದು ಗುರುತಿಸಲಾಗುತ್ತದೆ. ಹಿಂದೂ ಸಾಮ್ರಾಜ್ಯವನ್ನು ಕಟ್ಟಿದ ಈತ ಎಲ್ಲಾ ಯುದ್ಧಗಳನ್ನೂ ಗೆದ್ದು ತಮಿಳುನಾಡಿನ ತಂಜಾವೂರಿನವರೆಗೂ ತನ್ನ ಸಾಮ್ರಾಜ್ಯವನ್ನು ವಿಸ್ತರಿಸಿದ್ದ. ತಂಜಾವೂರು ಯುದ್ಧವನ್ನು ಗೆದ್ದು
ಹಂಪೆಗೆ ಬಂದ ಶಿವಾಜಿ, ಹಾಳುಬಿದ್ದಿದ್ದ ಹಂಪೆಯನ್ನು ಕಂಡು ದುಃಖಿತನಾಗುತ್ತಾನೆ.

ಆಳುವ ಅರಸರಿಲ್ಲದೆ ಮರುಗುತ್ತಿದ್ದ ಅಲ್ಲಿನ ಜನರು ಶಿವಾಜಿಯನ್ನು ಕಂಡು, ‘ನೀವೇ ಇಲ್ಲಿನ ರಾಜರಾಗಿ ಆಳ್ವಿಕೆ ಮಾಡಿ’ ಎಂದು ಗೋಗರೆಯುತ್ತಾರೆ. ಆಗ
ಶಿವಾಜಿಯು, ‘ನಾನು ಇಡೀ ದೇಶದಲ್ಲಿ ಹಿಂದೂ ಸಾಮ್ರಾಜ್ಯವನ್ನು ಕಟ್ಟಬೇಕಿರುವುದರಿಂದ ನಾನು ಆಳಲಾರೆ; ನನ್ನ ಮಗನನ್ನು ಕಳಿಸಿಕೊಡುತ್ತೇನೆ’ ಎಂದು ಹೇಳಿಬಂದು ಬೆಳವಡಿ ಮಲ್ಲಮ್ಮನ ಮೇಲೆ ಯುದ್ಧಮಾಡಿ ಸೋಲನುಭವಿಸುತ್ತಾನೆ. ಆದರೆ ಶಿವಾಜಿಯ ವಂಶದ ಕನ್ನಡ ಮೂಲವನ್ನು ತಿಳಿದು ಮಲ್ಲಮ್ಮ ಅವನಿಗೆ ಪ್ರಾಣಭಿಕ್ಷೆ ನೀಡುತ್ತಾಳೆ.

‘ಕನ್ನಡಿಗರು ವೀರರು, ಧೀರರು, ಶೂರರು’ ಎಂದು ‘ಕವಿರಾಜಮಾರ್ಗ’ದಲ್ಲಿ ಹೇಳಿರುವಂತೆ, ಶಿವಾಜಿಯ ರಕ್ತದ ಕಣಕಣಗಳಲ್ಲಿ ಕನ್ನಡ ಜನಾಂಗದ ರಕ್ತ ಹರಿಯುತ್ತಿದ್ದುದರಿಂದ ಅವನು ವೀರ-ಧೀರ-ಶೂರನಾಗಿ ಇತಿಹಾಸದಲ್ಲಿ ಉಳಿದ. ಅಲ್ಲದೆ, ಈಗಿನ ಬೆಳಗಾವಿ ಜಿಲ್ಲೆ ಗೋಕಾಕ ತಾಲೂಕಿನ ಕಲ್ಲೋಳಿಯಲ್ಲಿ ಆಂಜನೇಯನ ದೇವಸ್ಥಾನವನ್ನು ಕಟ್ಟಿಸಿ, ತನ್ನ ಕನ್ನಡ ವಂಶದ ಮೂಲವನ್ನು ಇನ್ನಷ್ಟು ವಿಸ್ತರಿಸಿದ. ಇನ್ನು, ಮರಾಠಿ ಮೂಲದ ಪುರಂದರದಾಸರು, ಜಯದೇವಿ ತಾಯಿ ಲಿಗಾಡೆ, ದ.ರಾ.ಬೇಂದ್ರೆ ಮುಂತಾದವರು ಕನ್ನಡ ನಾಡು-ನುಡಿಯನ್ನು ಅಪ್ಪಿಕೊಂಡು, ಅನುಭಾವ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ನಿರಂತರ ಸೇವೆ ಸಲ್ಲಿಸಿ, ಕನ್ನಡಿಗರಾಗಿಯೇ ಉಳಿದಿದ್ದನ್ನು ಕಾಣಬಹುದು.

೧೨ನೇ ಶತಮಾನದಲ್ಲಿ, ಕನ್ನಡದ ಶರಣ ಸಿದ್ದರಾಮನು ‘ಸೊನ್ನಲಿಗೆ’ ಎಂದು ಹೆಸರು ಪಡೆದಿದ್ದ ಮಹಾರಾಷ್ಟ್ರದ ಈಗಿನ ‘ಸೊಲ್ಲಾಪುರ’ದಲ್ಲಿ ಶರಣ ಕಾಯಕದಲ್ಲಿ ತೊಡಗಿ ಮರಾಠಿಗರ ಮನವನ್ನು ಗೆದ್ದ. ಅಲ್ಲದೆ, ಕನ್ನಡದ ಅನೇಕ ಪದಗಳು ಮರಾಠಿಯಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿವೆ: ಕನ್ನಡದ ‘ಗೌಡ’ ಪದವು
ಮರಾಠಿಯಲ್ಲಿ ‘ಗೌಡರ್’ ಆಗಿ, ‘ಪಟೇಲ’ ಪದವು ‘ಪಾಟೀಲ’ ಮತ್ತು ಪಾಟೀದಾರ’ನಾಗಿ, ‘ಅಮ್ಮ’ ಎಂಬುದು ‘ಅವ್ವ’ ಆಗಿ, ‘ಅಜ್ಜಿ’ ಎಂಬುದು ‘ಆಯಿ’ ಆಗಿ ರೂಪಾಂತರ ಗೊಂಡಿವೆ. ಕನ್ನಡದ ‘ಹೊಯ್ಸಳ’ (ಭೋಸ್ಲೆ), ‘ಕಂದಗುಡ್ಡ’ (ಕಂದಗಡ), ‘ಕೋಳಿ’ (ಗೋಗಡಿ) ಪದಗಳನ್ನೂ ಹೀಗೆಯೇ ಉದಾಹರಿಸಬಹುದು.

ವರ್ತಮಾನದಲ್ಲಿ ಎರಡೂ ಭಾಷೆಗಳು ಭಿನ್ನ ಭಿನ್ನವಾದರೂ, ಭಾವನೆಗಳು ಒಂದೇ. ಈಗೀಗ ಕನ್ನಡ-ಮರಾಠಿ ಬಾಂಧವ್ಯವು ನಿರಂತರವಾಗಿ ವಿಸ್ತರಿಸುತ್ತಿದ್ದು, ಐತಿಹಾಸಿಕ, ಭಾಷಿಕ, ಧಾರ್ಮಿಕ, ಸಾಹಿತ್ಯಕ, ಶೈಕ್ಷಣಿಕ ನಂಟುಗಳು ಇದರಲ್ಲಿ ಸೇರಿವೆ. ನಡೆ-ನುಡಿ-ಗುಡಿಗಳು ನಾಡಿನ ಜನರ ಬದುಕಿನ ನಾಡಿಗಳಾಗಿವೆ, ಸಂತಸದ ಬೀಡುಗಳಾಗಿವೆ. ಶಿವಾಜಿ ಮಾತ್ರವಲ್ಲದೆ ಕನ್ನಡದ ನೆಲಮೂಲವನ್ನು ಹೊಂದಿರುವ ವಿಠಲ, ಪಾಂಡುರಂಗ, ಜ್ಞಾನೇಶ್ವರರನ್ನು ಮಹಾರಾಷ್ಟ್ರದಲ್ಲಿ
ಆರಾಽಸುತ್ತಾರೆ. ಕನ್ನಡದ ಹೆಸರನ್ನು ಹೊಂದಿರುವ ಮರಾಠಿ ದೇವತೆಗಳಾದ ಕೊಲ್ಹಾಪುರ ಮಹಾಲಕ್ಷ್ಮಿ, ತುಳಜಾಭವಾನಿ, ಗುಡ್ಡಾಪುರ ದಾನಮ್ಮ, ಘತ್ತರಗಿ
ಭಾಗಮ್ಮ, ಸವದತ್ತಿ ಎಲ್ಲಮ್ಮ, ಗಾಣಗಾಪುರ ದತ್ತಾತ್ರೇಯ, ಅಂಬಾಭವಾನಿಯನ್ನು ಕನ್ನಡಿಗರು ಮತ್ತು ಮರಾಠಿಗರು ಭಕ್ತಿಯಿಂದ ಪೂಜಿಸುತ್ತಾರೆ.

ಕನ್ನಡ ಮತ್ತು ಮರಾಠಿಯ ನಡುವೆ ಸಾಂಸ್ಕೃತಿಕವಾಗಿ, ವಾಣಿಜ್ಯಿಕವಾಗಿ ಅವಿನಾಭಾವ ಸಂಬಂಧವಿದೆ. ಎಷ್ಟೋ ಜನ ಕನ್ನಡ ಕಲಾವಿದರಿಗೆ ಮರಾಠಿ ನೆಲವೂ, ಮರಾಠಿಗರಿಗೆ ಕನ್ನಡ ನೆಲವೂ ಆಶ್ರಯ ನೀಡಿರುವುದು ಇಲ್ಲಿ ಉಲ್ಲೇಖನೀಯ. ಬೆಳಗಾವಿ, ಸೊಲ್ಲಾಪುರ, ಕೊಲ್ಹಾಪುರ, ಸತಾರ, ಬಾಂಬೆ, ಸಾಂಗ್ಲಿ, ಮೀರಜ್, ಪೂನಾ, ನಾಗಪುರ, ಗಡ್‌ಹಿಂಗ್ಲಜ್ ಮುಂತಾದ ಪ್ರದೇಶಗಳಲ್ಲಿನ ವ್ಯಾಪಾರ – ವಹಿವಾಟುಗಳಲ್ಲಿ ಕನ್ನಡಿಗರು -ಮರಾಠಿಗರು ಸಮನಾಗಿ ತೊಡಗಿಸಿಕೊಂಡಿ ರುವುದನ್ನು ಕಾಣಬಹುದು.

ಮಹಾರಾಷ್ಟ್ರದ ಮೀರಜ್, ಸಾಂಗ್ಲಿ ಮುಂತಾದ ಪ್ರದೇಶಗಳ ಆಸ್ಪತ್ರೆಗಳಿಗೆ ಕನ್ನಡಿಗರೂ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ ಮುಂತಾದ ಕಡೆಗಳ ಆಸ್ಪತ್ರೆಗಳಿಗೆ ಮರಾಠಿಗರೂ ಹೆಚ್ಚು ಹೋಗುವುದು ವಾಡಿಕೆ. ಕನ್ನಡಿಗರು ಮತ್ತು ಮರಾಠಿಗರ ನಡುವೆ ಸಾಕಷ್ಟು ವಿವಾಹ ಬಾಂಧವ್ಯಗಳು ಬೆಸೆಯಲ್ಪಟ್ಟಿವೆ. ದಲಿತ ಸಾಹಿತ್ಯದ ನೆಲೆಯಲ್ಲಿ ನೋಡಿದಾಗಲೂ ಇಂಥದೊಂದು ನಂಟನ್ನು ಕಾಣಬಹುದು. ಮರಾಠಿಯ ಶರಣಕುಮಾರ ಲಿಂಬಾಳೆ ಅವರ ‘ಅಕ್ಕರಮಾಸಿ’ (ಅಕ್ರಮ ಸಂತಾನ), ಲಕ್ಷ್ಮಣ ಗಾಯಕ್ವಾಡ್ ಅವರ ‘ಉಚಲ್ಯಾ’ ಮತ್ತು ಕನ್ನಡದ ಡಾ.ಸಿದ್ದಲಿಂಗಯ್ಯನವರ ‘ಹೊಲೆಮಾದಿಗರ ಹಾಡು’, ದೇವನೂರು ಮಹಾದೇವ ಅವರ ‘ಕುಸುಮ ಬಾಲೆ’ ಈ ೪ ಕೃತಿಗಳನ್ನು ಒಟ್ಟಿಗೆ ನೋಡಿದಾಗ ಇದು ಮನವರಿಕೆಯಾಗುತ್ತದೆ.

ನೂರಾರು ವರ್ಷಗಳ ಇತಿಹಾಸ ಹೊಂದಿರುವ ಮರಾಠಿಯು, ಸಾವಿರಾರು ವರ್ಷಗಳ ಇತಿಹಾಸವಿರುವ ಕನ್ನಡ ಭಾಷೆಯ ಅಂಗಳದಲ್ಲಿ ಅರಳಿದೆ; ಕನ್ನಡಿಗರ ಹಬ್ಬ-ಹರಿದಿನಗಳನ್ನು ಮರಾಠಿಗರೂ ಆಚರಿಸುತ್ತಾರೆ, ಕನ್ನಡಿಗರ ವೇಷಭೂಷಣಗಳನ್ನು ಧರಿಸುತ್ತಾರೆ. ಹೀಗೆ ಕೌಟುಂಬಿಕ, ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ,
ವಾಣಿಜ್ಯಿಕ ಬಾಂಧವ್ಯಗಳನ್ನು ಹೊಂದಿರುವ ಕನ್ನಡಿಗರು ಮತ್ತು ಮರಾಠಿಗರ ಮಧ್ಯೆ ಕಿಡಿ ಹಚ್ಚಿ, ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿರುವ ಪಟ್ಟಭದ್ರ ಹಿತಾಸಕ್ತಿಗಳು ಈ ಅನುಪಮ ನಂಟಿಗೆ ಧಕ್ಕೆ ಉಂಟುಮಾಡುತ್ತಿರುವುದನ್ನು ವರ್ತಮಾನದಲ್ಲಿ ಕಾಣಬಹುದು. ಆದರೆ ಕನ್ನಡಿಗರು ಮತ್ತು ಮರಾಠಿಗರು ಇದನ್ನು ನಿರ್ಲಕ್ಷಿಸಿ ಅನನ್ಯ
ಬಾಂಧವ್ಯವನ್ನು ಹೀಗೇ ಮುಂದುವರಿಸಿಕೊಂಡು ಬಾಳಿ ತೋರಿಸಬೇಕಾಗಿದೆ.

(ಲೇಖಕರು ಅಧ್ಯಾಪಕರು)