ಇದೇ ಅಂತರಂಗ ಸುದ್ದಿ
ವಿಶ್ವೇಶ್ವರ ಭಟ್ – vbhat@me.com
ಬೆಂಗಳೂರಿನಲ್ಲಿ ಸುಮಾರು ಇಪ್ಪತ್ತೈದು ವರ್ಷಗಳ ಹಿಂದೆ ವಿಶ್ವ ಬಂಟರ ಸಮಾವೇಶ ನಡೆದಿತ್ತು. ಜೀವರಾಜ್ ಆಳ್ವ ನೇತೃತ್ವದಲ್ಲಿ ಈ ಕಾರ್ಯಕ್ರಮವನ್ನು ಸಂಘಟಿಸಲಾಗಿತ್ತು. ಈ ಕಾರ್ಯಕ್ರಮದ ಉದ್ಘಾಟನೆಗೆ ಆಗಷ್ಟೇ ‘ಮಿಸ್ ವರ್ಲ್ಡ್’ ಕಿರೀಟ ಧರಿಸಿದ ಐಶ್ವರ್ಯ ರೈ ಅವರನ್ನು ಆಮಂತ್ರಿಸಲಾಗಿತ್ತು.
ಐಶ್ವರ್ಯ ಕಂಡ ತಕ್ಷಣ ಪುಳಕಿತರಾದ ಕೆಲವು ಪತ್ರಕರ್ತರು, ಹೇಗಿದ್ದರೂ ಅವರು ಮಂಗಳೂರಿನವರು ಮತ್ತು ಕನ್ನಡದಲ್ಲಿ ಬಲ್ಲವರೆಂದು, ಕನ್ನಡದಲ್ಲಿ ಮಾತಾಡಲಾರಂಭಿಸಿದರು. ಆದರೆ ಐಶ್ವರ್ಯ ರೈ, ‘ನನ..ಗೆ … ಕ …ನ್ನ…ಡ ಬ .. ರೊಲ್ಲ’ ಎಂದು ಹೇಳಿ
ತಬ್ಬಿಬ್ಬುಗೊಳಿಸಿದ್ದರು. ಸಾಮಾನ್ಯವಾಗಿ ಕನ್ನಡದವರ ಹತ್ತಿರ ಹೋಗಿ, ನಮ್ಮ ಮಾತೃಭಾಷೆಯಲ್ಲಿ ಮಾತಾಡಿದಾಗ, ಅವರು ‘ನನಗೆ ಕನ್ನಡ ಬರೊಲ್ಲ, ಸ್ಸಾರಿ’ ಎಂದು ಹೇಳಿದರೆ ಅದರಿಂದಾಗುವ ಬೇಸರ ಅಷ್ಟಿಷ್ಟಲ್ಲ.
ಕೆಲವರಿಗೆ ನಿಜಕ್ಕೂ ಕನ್ನಡ ಬರುವುದಿಲ್ಲ ಮತ್ತು ಇನ್ನು ಕೆಲವರಿಗೆ ಕನ್ನಡ ಗೊತ್ತಿದ್ದೂ ಬರೊಲ್ಲ ಎಂದು ಸೋಗು ಹಾಕುತ್ತಾರೆ. ಈ ಎರಡೂ ಪ್ರಸಂಗಗಳಲ್ಲಿ ಬೇಸರವಾಗುತ್ತದೆ. ಬಾಲಿವುಡ್ ಜನಪ್ರಿಯ ನಟಿ ದೀಪಿಕಾ ಪಡುಕೋಣೆ ಮೂಲತಃ ಕನ್ನಡದವರು. ಅವರ ತಂದೆ ಪ್ರಕಾಶ ಪಡುಕೋಣೆ ಸಹ ಕನ್ನಡದವರು. ದೀಪಿಕಾ ನಟಿಸಿದ ಮೊದಲ ಸಿನಿಮಾ ಕೂಡ ಕನ್ನಡದ್ದೇ. ಆದರೆ ಅವರ ಬಳಿ ಕನ್ನಡದಲ್ಲಿ ಮಾತಾಡಿದರೆ, ನಿಮಗೆ ನಿರಾಸೆಯಾದೀತು.
ಈ ವಿಷಯದಲ್ಲಿ ನಮ್ಮ ಕ್ರಿಕೆಟ್ ಆಟಗಾರರಾದ ಅನಿಲ್ ಕುಂಬ್ಳೆ, ಜಾವಗಲ್ ಶ್ರೀನಾಥ್, ವೆಂಕಟೇಶ ಪ್ರಸಾದ ಅವರೇ ವಾಸಿ. ಅವರು ಅಚ್ಚ ಕನ್ನಡದಲ್ಲಿ ಮಾತಾಡುತ್ತಾರೆ. ಸ್ವಲ್ಪವೂ ನಖರಾ ಮಾಡುವುದಿಲ್ಲ. ಅಂತಾರಾಷ್ಟ್ರೀಯ ಪಂದ್ಯಗಳಲ್ಲೂ ಅವರು ಮೈದಾನದಲ್ಲೂ ತಮ್ಮ ತಮ್ಮ ಕನ್ನಡದಲ್ಲಿ ಮಾತಾಡಿದ್ದುಂಟು. ‘ನನಗೆ ಕನ್ನಡದಲ್ಲಿ ಫ್ಲೂಯೆನ್ಸಿ ಇಲ್ಲ.. ಹೀಗಾಗಿ ಇಂಗ್ಲೀಷಿನಲ್ಲಿ ಮಾತಾಡುತ್ತೇನೆ’ ಎಂದು ಸಹ ಇವರು ಹೇಳುವುದಿಲ್ಲ. ಅಸ್ಖಲಿತ ಕನ್ನಡದಲ್ಲಿಯೇ ಮಾತಾಡುತ್ತಾರೆ.
ಕನ್ನಡ ಗೊತ್ತಿದ್ದೂ, ಕನ್ನಡ ಬರೊಲ್ಲ ಎಂದು ಸೋಗು ಹಾಕುವವರು ಆತ್ಮಸಾಕ್ಷಿ ಇಲ್ಲದವರು. ಬೇರೆ ಸಂಸ್ಕೃತಿಗೆ ಗುಲಾಮರಾದ ವರು. ನಾನು ಕೆಲವು ವರ್ಷಗಳ ಹಿಂದೆ, ಅಂತಾರಾಷ್ಟ್ರೀಯ ಸಮಾವೇಶವೊಂದರಲ್ಲಿ ಪಾಲ್ಗೊಳ್ಳಲು, ಬೆಲ್ಜಿಯಂ ರಾಜಧಾನಿ ಬ್ರುಸೆಲ್ಸ ನಲ್ಲಿರುವ ಯೂರೋಪಿಯನ್ ಯೂನಿಯನ್ (ಇಯು) ಪ್ರಧಾನ ಕಚೇರಿಗೆ ಹೋಗಿದ್ದೆ. ಅಲ್ಲಿ ಮಲ್ಲಿ ಎಂ.ಪಿ. ಎಂಬು ವವರನ್ನು ಭೇಟಿ ಮಾಡಿದ್ದೆ. ಅವರು ಇಯು ಮಾಧ್ಯಮ ಕಾರ್ಯದರ್ಶಿ ಅವರಿಗೆ ಮೂರನೇ ಸಹಾಯಕರಾಗಿದ್ದರು. ಅವರನ್ನು ನೋಡಿದರೆ ಅಪ್ಪಟ ಕನ್ನಡಿಗರು ಎಂದು ಹೇಳಬಹುದಿತ್ತು.
ನಾನು ಕನ್ನಡದವನೆಂದು ಪರಿಚಯಿಸಿಕೊಂಡೆ. ಆದರೆ ಅವರು ಇಂಗ್ಲೀಷಿನಲ್ಲಿ ಮಾತಾಡುತ್ತಿದ್ದರು. ಆರಂಭಿಕ ಮಾತುಕತೆಯ ನಂತರ, ನನಗೆ ತಡೆದುಕೊಳ್ಳಲಾಗಲಿಲ್ಲ. ‘ನೀವು ಕನ್ನಡದವರಾ?’ ಎಂದು ಕೇಳಿದೆ. ಅದಕ್ಕೆ ಅವರು ಇಂಗ್ಲೀಷಿನಲ್ಲಿ, ‘ನನ್ನ ಪೂರ್ತಿ ಹೆಸರು ಮಲ್ಲಿಕಾರ್ಜುನ ಮಾಲಿಪಾಟೀಲ, ನಾನು ಮೂಲತಃ ಧಾರವಾಡದವನು, ಆದರೆ ಇಲ್ಲಿ ಕಳೆದ ಇಪ್ಪತ್ತೆರಡು ವರ್ಷಗಳಿಂದ ವಾಸವಾಗಿದ್ದೇನೆ, ಹೀಗಾಗಿ ನನಗೆ ಕನ್ನಡ ಮರೆತು ಹೋಗಿದೆ’ ಎಂದು ಹೇಳಿದರು.
ಅದಾದ ಬಳಿಕ ನಾನು ಅವರ ಜತೆ ಅರ್ಧ ಗಂಟೆ ಇದ್ದೆ. ಅವರು ಅಪ್ಪಿತಪ್ಪಿಯೂ ಕನ್ನಡದಲ್ಲಿ ಮಾತಾಡಲು ಉತ್ಸುಕತೆ ತೋರಲಿಲ್ಲ. ಹಾಗೆಂದು ಅವರ ಇಂಗ್ಲಿಷ್ ಅಷ್ಟೇನೂ ಸೊಗಸಾಗಿರಲಿಲ್ಲ. ‘ನಿಮ್ಮ ಮನೆಯವರು ಬೆಲ್ಜಿಯಂನವರಾ?’ ಎಂದು ಬೇಕೆಂದೇ ಕೇಳಿದೆ. ‘ನೋ..ನೋ.. ಶಿ ಈಸ್ ಫ್ರಮ್ ಸೌದತ್ತಿ’ ಎಂದರು. ಹಾಗಾದ್ರೆ ಮನೆಯಲ್ಲಿ ಖಂಡಿತವಾಗಿಯೂ ಅವರು ಕನ್ನಡದ ಮಾತಾಡುತ್ತಾರೆ ಎಂಬುದು ಖಾತ್ರಿಯಾಗಿ ಹೋಯಿತು. ನಮ್ಮವರೇ ನಮ್ಮ ಭಾಷೆ ಬರೊಲ್ಲ ಎಂದು ಅಭಿಮಾನದಿಂದ ಹೇಳುವುದು ಅದೆಂಥ ಆತ್ಮಸಂತಸ ನೀಡಬಹುದು, ನನಗಂತೂ ಅರ್ಥವಾಗಿಲ್ಲ.
೧೯೬೪ರ ಜೂನ್ ತಿಂಗಳ ‘ಕಸ್ತೂರಿ’ ಮಾಸಪತ್ರಿಕೆಯಲ್ಲಿ ಕುಲಮರ್ವ ಬಾಲಕೃಷ್ಣ ಅವರು ಖ್ಯಾತ ಕ್ರಿಕೆಟಿಗ, ಭಾರತ ತಂಡದ ಬಲಗೈ ಆರಂಭಿಕ ಆಕ್ರಮಣಕಾರಿ ಬ್ಯಾಟ್ಸಮನ್ ಬುಧಿ ಕುಂದರನ್ (ಇವರ ಹೆಸರಿನಲ್ಲಿಯೇ ‘ರನ್’ ಇದ್ದುದು ಕಾಕತಾಳೀಯ) ಅವರ ಬಗ್ಗೆ ಒಂದು ಸಂದರ್ಶನ ಲೇಖನ ಬರೆದಿದ್ದಾರೆ. ಕುಲಮರ್ವ ಬಾಲಕೃಷ್ಣ ಕುಂದರನ್ ಅವರನ್ನು ಸಂದರ್ಶಿಸಬಯಸಿದ್ದು ಅವರು ತಮ್ಮೂರಿನವರು, ದಕ್ಷಿಣ ಕನ್ನಡದವರು, ತುಳು ಭಾಷಿಕರು ಎಂಬ ಕಾರಣಕ್ಕೆ.
ಮೂಲತಃ ಕುಂದರನ್ ದಕ್ಷಿಣ ಕನ್ನಡದ ಮೂಲ್ಕಿಯವರು. ಆದರೆ ಮುಂಬೈಯಲ್ಲಿ ವಿದ್ಯಾಭ್ಯಾಸ ಮುಂದುವರಿಸಿದವರು.
ಕುಲಮರ್ವ ಅವರು ಕುಂದರನ್ ಭೇಟಿಯಾಗುತ್ತಿದ್ದಂತೆ, ತುಳುದಲ್ಲಿ ಮಾತಾಡಲು ಆರಂಭಿಸಿದರು. ‘ನನಗೆ ತುಳು ಬರೊಲ್ಲ’ ಎಂದು ಕುಂದರನ್ ಇಂಗ್ಲೀಷಿನಲ್ಲಿ ಹೇಳಿದರು. ‘ಹಾಗಾದರೆ ಕನ್ನಡ ?’ ಎಂದು ಕೇಳಿದರು. ಅದಕ್ಕೆ ಆ ಬ್ಯಾಟ್ಸಮನ್, ‘ನೋ ಕನ್ನಡ’ ಎಂದು ಎಂದು ಹೇಳಿದರು. ತಮ್ಮ ಊರಿನವರಾದರೂ ಇವರಿಗೆ ನಮ್ಮ ಭಾಷೆಯೇ ಬರುವುದಿಲ್ಲವಲ್ಲ ಎಂದು ಕುಲಮರ್ವರಿಗೆ ಆ ಕ್ಷಣದಲ್ಲಿ ಅನಿಸಿರಬೇಕು.
ಶಾಮ್ ಬೆನೆಗಲ್ ನಮ್ಮವರು, ಶಾಂತಾರಾಮ್ ನಮ್ಮವರು, ಗುರುದತ್ತ (ವಸಂತಕುಮಾರ ಶಿವಶಂಕರ ಪಡುಕೋಣೆ) ನಮ್ಮವರು, ಸುನಿಲ್ ಶೆಟ್ಟಿ ನಮ್ಮವರು ಎಂದು ಅಭಿಮಾನದಿಂದ ಕೊಚ್ಚಿಕೊಳ್ಳುತ್ತೇವೆ. ಆದರೆ ಅವರಾರೂ ತಮಗೆ ಕನ್ನಡ ಬರೊಲ್ಲ ಎಂದು ಹೇಳಿದರೆ, ಅದರಿಂದಾಗುವ ಬೇಸರ ಅಷ್ಟಿಷ್ಟಲ್ಲ.
೯೯೬ ವರ್ಕ್ ಕಲ್ಚರ್ !
ಅಲಿಬಾಬಾ ಸಂಸ್ಥೆಯನ್ನು ಕಟ್ಟಿ ಜಗತ್ತಿನ ಶ್ರೀಮಂತ ಉದ್ಯಮಿಗಳಬ್ಬ ಎಂದು ಕರೆಯಿಸಿಕೊಂಡ ಜಾಕ್ ಮಾ ಈಗ ತಲೆಮರೆಯಿಸಿ ಕೊಂಡಿದ್ದಾನೆ. ಈತ ಕಂಪನಿ ಸಂಸ್ಕೃತಿ, ಸಿದ್ಧಾಂತಗಳ ಬಗ್ಗೆ ಉಪದೇಶ ಮಾಡಿದ ಅನೇಕ ಭಾಷಣಗಳಿವೆ. ಆದರೆ ಈತನ ಸಂಸ್ಥೆ ಯಲ್ಲಿ ಕೆಲಸ ಮಾಡಿದ ಅವೆಷ್ಟೋ ಜನ ಅಲ್ಲಿನ ಉಸಿರುಗಟ್ಟಿಸುವ ವಾತಾವರಣದಿಂದ ಬೇಸತ್ತು ಕೆಲಸ ಬಿಟ್ಟು ಬಂದಿದ್ದಾರೆ.
ಈತನ ಮೇಲಿರುವ ಮುಖ್ಯ ಆರೋಪವೆಂದರೆ, ಹತ್ತು ತಾಸು ಕೆಲಸ ಮಾಡಬೇಕು ಎಂದು ಹೇಳಿ, ಅಷ್ಟೇ ಹಣಕ್ಕೆ ಹದಿನಾಲ್ಕು
ತಾಸು ದುಡಿಸಿಕೊಳ್ಳುತ್ತಾನೆಂಬುದು. ಆರಂಭದಲ್ಲಿ ಈತನನ್ನು ಅಭಿಮಾನದಿಂದ ‘ಡ್ಯಾಡಿ ಮಾ’ ಎಂದು ಕರೆಯುತ್ತಿದ್ದರು. ಈಗ
ಈತನನ್ನು‘ಬಿಜಿ ಮಾ’ ಅಂದರೆ Bloodsucking Ghost) ರಕ್ತಹೀರುವ ಭೂತ ಎಂದು ಕರೆಯಲಾಗುತ್ತಿದೆ.
ಇದು ಚೈನಾದ ಎಲ್ಲಾ ದೊಡ್ಡ ಕಂಪೆನಿಗಳ ಹಣೆಬರಹ. ವಾರದಲ್ಲಿ ಆರು ದಿನದಂತೆ, ದಿನಕ್ಕೆ ಕನಿಷ್ಠ ಹನ್ನೆರಡು ತಾಸು ಕೆಲಸ ಮಾಡಲೇ ಬೇಕು. ಇದನ್ನು ಆ ದೇಶದಲ್ಲಿ ೯೯೬ (9am to 9pm, 6 days a week) ವರ್ಕ್ ಕಲ್ಚರ್ ಎಂದು ಕರೆಯುತ್ತಾರೆ. ಎಲ್ಲ ಸಿಬ್ಬಂದಿಯ ನೇಮಕ ಪತ್ರದಲ್ಲಿ ದಿನಕ್ಕೆ ಹತ್ತು ತಾಸು ಕೆಲಸ ಮತ್ತು ವಾರದಲ್ಲಿ ಎರಡು ದಿನ ರಜಾ ಎಂದು ಇದ್ದರೂ, ಆಚರಣೆ ಯಲ್ಲಿ ಮಾತ್ರ ಇದನ್ನು ಕಡ್ಡಾಯವಾಗಿ ಉಲ್ಲಂಘಿಸಲಾಗುತ್ತದೆ. ಕೆಲವು ಬಹುರಾಷ್ಟ್ರೀಯ ಕಂಪೆನಿಗಳಂತೂ ಹದಿನೈದು ತಾಸುಗಳವರೆಗೆ ದುಡಿಸಿಕೊಳ್ಳುತ್ತವೆ. ಇದನ್ನು ಪ್ರಶ್ನಿಸಿದರೆ, ಗೇಟ್ ಪಾಸ್ !
ಕಳೆದ ತಿಂಗಳು ಪಿಂಡುಓಡುವ್ ಎಂಬ ದೊಡ್ಡ ಗಾತ್ರದ ಕಂಪನಿಯ ಮಹಿಳಾ ಉದ್ಯೋಗಿ, ಆಫೀಸಿಯಿಂದ ಮನೆಗೆ ಮರಳುವಾಗ ಕುಸಿದು ಸತ್ತುಹೋದಳು. ಇದು ಅಲ್ಲಿನ ವರ್ಕ್ ಕಲ್ಚರ್ ಬಗ್ಗೆ ದೇಶಾದ್ಯಂತ ಆಕ್ರೋಶವನ್ನು ಮೂಡಿಸಿದೆ. ಯಾವ ಕಂಪನಿಯೂ ಈ ವಿಷಯದಲ್ಲಿ ಸುಬಗ ಅಲ್ಲ. ಎರಡು ವರ್ಷಗಳ ಹಿಂದೆ, ಎ ಕಂಪೆನಿಗಳಲ್ಲಿರುವ ಈ ಕರಾಳ ವರ್ಕ್ ಕಲ್ಚರ್‌ನ್ನು ಪ್ರತಿಭಟಿಸಿ ಅಲ್ಲಿ ಕೆಲಸ ಮಾಡುವ ಸಿಬ್ಬಂದಿಯೆ ಸೇರಿಕೊಂಡು GitHub ಎಂಬ ಪೇಜ್ ತೆರೆದು, ತಮ್ಮ ತಮ್ಮ ಅನುಭವಗಳನ್ನು ಅಲ್ಲಿ
ಹಂಚಿಕೊಳ್ಳಲಾರಂಭಿಸಿದರು.
ಇದು ಅಲ್ಲಿನ ಕಂಪನಿಗಳ ಮುಖವಾಡವನ್ನು ಕಿತ್ತೆಸೆಯುವಂತೆ ಮಾಡಿತು. ಚೈನಾದಲ್ಲಿ ಯಾರೂ ಸರಕಾರದ ವಿರುದ್ಧ ಮಾತಾಡು ವಂತಿಲ್ಲ. ಯಾರೇ ಸೊತ್ತಿದರೂ ಸರಕಾರ ಅವರನ್ನು ಮುಖ – ಮೂತಿ ನೋಡದೇ ಜೈಲಿಗೆ ಹಾಕಿ ಶಿಕ್ಷಿಸುತ್ತದೆ. ಹೀಗಾಗಿ ಜನ ತಮ್ಮ ಆಕ್ರೋಶವನ್ನು ಇಂಥ ಕಂಪನಿಗಳ ವಿರುದ್ಧ ತೀರಿಸಿಕೊಳ್ಳುತ್ತಾರೆ. ಆದರೆ ಈ ಕಂಪನಿಗಳ ಮುಖ್ಯಸ್ಥರು ಅಲ್ಲಿನ ಸರಕಾರದ ಮುಖ್ಯಸ್ಥರ ಚೇಲಾಗಳಾಗಿರುವುದರಿಂದ, ಏನೂ ಮಾಡುವಂತಿಲ್ಲ. ನೌಕರಿ ಬೇಕೆಂದರೆ, ಹದಿನಾಲ್ಕು ತಾಸು ಚಾಕರಿ ಮಾಡಲೇ ಬೇಕು.
ನನ್ನ ಸಾಹಿತ್ಯ ನಷ್ಟವಾದರೂ ಚಿಂತೆಯಿಲ್ಲ
ಕಾವ್ಯದ ಬಗ್ಗೆ ನನ್ನಲ್ಲಿ ಯಾವ ಹೊಸ ಥಿಯರಿ – ಪ್ರಮೇಯವೂ ಇಲ್ಲ. ಇಂಥ ಕಾವ್ಯವೇ ಸರಿ, ಇಂಥದು ತಪ್ಪು ಎಂದು ನಾನು ಹೇಳಲಾರೆ. ನಾನು ಹೇಳಿ ಕೇಳಿ ಮಾಸ್ತರ. ಮಾಸ್ತರ ಆದವನು ಇದು ಹೀಗೆ ಇದು ಹಾಗೆ ಎಂದು ವಿವರಿಸುತ್ತಾನೆಯೇ ಹೊರತು ಇದು ಮೇಲು, ಇದು ಕೀಳು ಎಂದು ತೂಗಲು ಹೊರಟಿಲ್ಲ. ನವ್ಯಕಾವ್ಯದ ಬಗ್ಗೆ ನನ್ನ ದೃಷ್ಟಿಯೂ ಇದೇ.
ಯಾವ ಕಾವ್ಯವೇ ಆಗಲಿ, ಕಾವ್ಯವಾಗಿದ್ದರೆ ಸರಿ ಎನ್ನುತ್ತೇನೆ. ಸಹಾನುಭೂತಿ – ಸ್ವಾನುಭೂತಿಗಳ ಮಿಶ್ರಣವೇ ನೈಜ ಕಾವ್ಯ ಎಂದು ನನ್ನ ಮಟ್ಟಿಗೆ ಹೇಳಬಲ್ಲೆ. ಹಾಗೆಯೇ ನನ್ನ ಕಾವ್ಯಗಳಲ್ಲಿ ಅತಿ ಶ್ರೇಷ್ಠವಾದುದು ಯಾವುದು ಎಂದೂ ನಾನು ಹೇಳಲಾರೆ. ಹತ್ತು – ಹದಿನೆಂಟು ಕವಿತೆಗಳನ್ನು ಆರಿಸಿ ಕೇಳಿದರೆ, ಇದು ಇದಕ್ಕಿಂತ ಒಳ್ಳೇದು ಎಂದು ವಿವರಿಸಬಹುದಷ್ಟೇ. ನಾನು ಬರೆದಿದ್ದರಲ್ಲಿ ಹಲವು ಕವಿತೆಗಳನ್ನು ಇಂದು ಪುನಃ ಓದುವಾಗ ನಾನು ಮೊದಲಿನಷ್ಟು ಆನಂದದಿಂದ ಪುಳಕಿತನಾಗುತ್ತೇನೆ. ನಾನು ಬರೆದಿದ್ದೆ ಶಾಶ್ವತ ಎಂದೂ ನಾನು ಸಾಧಿಸುವುದಿಲ್ಲ.
ನನ್ನ ಎಲ್ಲ ಸಾಹಿತ್ಯ ನಷ್ಟವಾಗಿ ಹೋಗಿ ಕೇವಲ ಎಂಟು – ಹತ್ತು ಪಂಕ್ತಿ ಉಳಿದುಕೊಂಡು ಅದರ ಕರ್ತನಾರೆಂಬುದು ಮರೆತು ಹೋದರೂ ಅಡ್ಡಿಯಿಲ್ಲ. ಅದನ್ನು ಓದಿದವರು ಹೊಂದುವ ಆನಂದ ನನಗೆ ಸ್ವರ್ಗದಲ್ಲಿ ಮುಟ್ಟುತ್ತದೆಂದು ನಾನು ನಂಬಿದ್ದೇನೆ. ಅದು ಸಪ್ತ ಸ್ವರ್ಗಕ್ಕೂ ಹೆಚ್ಚು ತೂಕ. ಈ ಸಾಲುಗಳನ್ನು ನಾನು ಸುಮಾರು ನಲವತ್ತೆರಡು ವರ್ಷಗಳ ಹಿಂದೆ ನೋಟ್ ಬುಕ್ (ಪಟ್ಟಿ)ನಲ್ಲಿ ಬರೆದಿಟ್ಟುಕೊಂಡಿದ್ದೆ. ಚೆಂದವಾದ ಸಾಲುಗಳನ್ನು ಓದಿದಾಗ ಅವುಗಳನ್ನು ಬರೆದಿಟ್ಟುಕೊಳ್ಳುವಂತೆ ಹೇಳುತ್ತಿದ್ದು ದನ್ನು ಶಿರಸಾ ಪಾಲಿಸುತ್ತಿದ್ದೆ. ಇತ್ತೀಚೆಗೆ ನಾನು ಹಾಗೆ ಬರೆದಿಟ್ಟುಕೊಂಡ ಕೆಲವು ನೋಟ್ ಬುಕ್ಸ್ ಸಿಕ್ಕಿದವು. ನನಗೆ ಅನರ್ಘ್ಯ ರತ್ನಗಳು ಸಿಕ್ಕಷ್ಟು ಸಂತಸವಾದವು.
ಅಂದ ಹಾಗೆ ಮೇಲಿನ ಸಾಲುಗಳನ್ನು ಹೇಳಿದವರು ವರಕವಿ ದ.ರಾ.ಬೇಂದ್ರೆ !
ಅದು ರಂಗಭೂಮಿ ಅಲ್ಲ, ಹುಚ್ಚಾಸ್ಪತ್ರೆ
ಒಮ್ಮೆ ಮಾಸ್ಟರ್ ಹಿರಣ್ಣಯ್ಯ ಅವರ ಜತೆಗೆ ವೇದಿಕೆ ಹಂಚಿಕೊಂಡಿದ್ದೆ. ಆ ದಿನ ಅವರು ಅದ್ಭುತವಾಗಿ ಮಾತಾಡಿದರು. ಕಾರ್ಯಕ್ರಮ ಮುಗಿದ ಬಳಿಕ ಹಲವರು ಅವರನ್ನು ಸುತ್ತುವರಿದು ಅಭಿನಂದಿಸಿದರು.
ಅವರಬ್ಬ, ‘ಹಿರಣ್ಣಯ್ಯನವರೇ, ನೀವು ರಂಗಭೂಮಿಯ ನಟರಾಗುವ ಬದಲು, ಲೋಕಸಭಾ ಸದಸ್ಯರಾಗಿದ್ದರೆ, ಎಷ್ಟು
ಚೆನ್ನಾಗಿತ್ತು. ನಿಮ್ಮ ಮಾತಿನಿಂದ ಇಡೀ ಲೋಕಸಭೆ ತಲೆದೂಗುವಂತೆ ಮಾಡಬಹುದಾಗಿತ್ತು. ಲೋಕಸಭೆಗಿಂತ ದೊಡ್ಡ ರಂಗಭೂಮಿ ಯಾವುದಿದೆ? ಈಗಲೂ ಕಾಲ ಮಿಂಚಿಲ್ಲ, ಲೋಕಸಭಾ ಚುನಾವಣೆಗೆ ಸ್ಪರ್ಧಿಸಿ’ ಎಂದು ಹೇಳಿದ. ಅದಕ್ಕೆ ತಟ್ಟನೆ ಹಿರಣ್ಣಯ್ಯನವರು ಹೇಳಿದರು – ‘ಅಲ್ಲಯ್ಯಾ, ನಾನು ಲೋಕಸಭಾ ಸದಸ್ಯನಾಗಿದ್ದಿದ್ದರೆ ಮೂರ್ಖನ ಹಾಗೆ ಬಾಯಿಮುಚ್ಚಿ ಕುಳಿತು ಎದ್ದು ಬರಬೇಕಾಗುತ್ತಿತ್ತು.
ನಮ್ಮ ರಾಜ್ಯದಿಂದ ಹೋದ ಒಬ್ಬನೇ ಒಬ್ಬ ಲೋಕಸಭಾ ಸದಸ್ಯ ಮಾತಾಡಿದ್ದನ್ನು ನೀವೆಲ್ಲ ಕೇಳಿದ್ದೀರಾ, ನೋಡಿದ್ದೀರಾ? ಇಲ್ಲಿ
ನೀವೆಲ್ಲ ನನ್ನ ಮಾತನ್ನು ಕೇಳಿದಿರಿ ಎಂದು ಅಲ್ಲಿ ಯಾರು ಕೇಳುತ್ತಾರೆ? ಅಲ್ಲಿದ್ದವರಿಗೆ ಮಾತನ್ನು ಕೇಳುವ ವ್ಯವಧಾನ ಇಲ್ಲ.
ಲೋಕಸಭಾ ಸದಸ್ಯನಾದರೆ ಪಕ್ಷದ ನಾಯಕರು ಹೇಳಿದಂತೆ ಮೂಕನಾಗಿ ಇರಬೇಕಾಗುತ್ತದೆ. ನಾನು ಹಾಗೆ ಇರುವುದುಂಟಾ?
ಅಷ್ಟಕ್ಕೂ ಲೋಕಸಭೆ ಅನ್ನೋದು ರಂಗಭೂಮಿ ಅಲ್ಲ.
ಅದೊಂದು ಹುಚ್ಚಾಸ್ಪತ್ರೆ. ಹೀಗಾಗಿ ನಾನು ನನ್ನ ಪಾಡಿಗೆ ನಾಟಕ ಮಾಡಿಕೊಂಡಿರುತ್ತೇನೆ. ಅದೇ ನನಗೆ ಇಷ್ಟ. ನನಗೆ ಮೂಕನ
ಪಾತ್ರ ಮಾಡಿ ಗೊತ್ತಿಲ್ಲ.’
ನಗರಕ್ಕೆ ಸೆಕ್ಸ್ ವಾಲೆ ಆಗಮನ !
ಆಗ ನಾನು ‘ವಿಜಯ ಕರ್ನಾಟಕ’ ಪತ್ರಿಕೆಯ ಸಂಪಾದಕನಾಗಿz. ನಾನು ಶಿವಮೊಗ್ಗ ಪ್ರವಾಸದಲ್ಲಿದ್ದೆ. ಬೆಳಗ್ಗೆ ಪತ್ರಿಕೆ ನೋಡಿದರೆ, ಒಂದು ಸುದ್ದಿ ಪ್ರಕಟವಾಗಿತ್ತು. ‘ನಗರಕ್ಕೆ ಸೆಕ್ಸ್ ವಾಲೆ ಆಗಮನ’ ಎಂಬ ಶೀರ್ಷಿಕೆಯಡಿಯಲ್ಲಿ, ಎರಡು ಪ್ಯಾರಾ, ಸಿಂಗಲ್ ಕಾಲಂ ಸುದ್ದಿ ಪ್ರಕಟವಾಗಿತ್ತು. ಮೊದಲ ಪ್ಯಾರಾದಲ್ಲಿ ‘ಬೆಂಗಳೂರಿನಲ್ಲಿ ಸಮಾವೇಶವೊಂದರಲ್ಲಿ ಪಾಲ್ಗೊಳ್ಳಲು ದಕ್ಷಿಣ ಆಫ್ರಿಕಾ ನಿಯೋಗದ ಸೆಕ್ಸ್ ವಾಲೆ ಆಗಮಿಸಲಿದ್ದಾರೆ’ ಎಂದಿತ್ತು.
ಆ ಸುದ್ದಿಯನ್ನು ಬರೆದ ಉಪಸಂಪಾದಕ ಆ ಹೆಸರನ್ನು ಕೇಳಿಯೇ ಇಲ್ಲ ಎಂಬುದು ಖಾತ್ರಿಯಾಯಿತು. ತಕ್ಷಣ ನಾನು ಆ ಸುದ್ದಿ ಯನ್ನು ಬರೆದವರು ಯಾರು ಎಂಬುದನ್ನು ತಿಳಿದುಕೊಂಡೆ. ನಂತರ ಅದನ್ನು ಬರೆದವರಿಗೆ ಕೇಳಿದಾಗ, ‘ಸಾರ್, ಇಂಗ್ಲೀಷಿನಲ್ಲಿ Sexwale ಅಂತ ಇದ್ದುದರಿಂದ ಹಾಗೆ ಬರೆದೆ. ಅದರಲ್ಲಿ ತಪ್ಪೇನಿದೆ?’ ಎಂದು ವಾದಿಸಿದರು. ನನಗೆ ತುಸು ಕೋಪ ಬಂತು.
‘ಅವರು ಸೆಕ್ಸ್ ವಾಲೆ ಅಲ್ಲ ಮಾರಾಯ, ಅವರ ಹೆಸರಿನ ಸ್ಪೆಲ್ಲಿಂಗ್ Sexwale ಎಂದಿರಬಹುದು, ಆದರೆ ಅವರ ಹೆಸರನ್ನು ಸೆಸ್ವಾಲೆ ಎಂದು ಉಚ್ಚರಿಸುತ್ತಾರೆ. ನೀನು ಆ ಹೆಸರನ್ನು ಕೇಳಿಯೇ ಇಲ್ಲವಾ?’ ಎಂದು ಕೇಳಿದೆ. ‘ಇಲ್ಲ, ನಾನು ಅವರ ಹೆಸರನ್ನು ಕೇಳಿಲ್ಲ, ಸ್ಸಾರಿ’ ಎಂದರು. ಮೊಸಿಮಾ ಗೇಬ್ರಿಯಲ್ ಸೆಸ್ವಾಲೆ ದಕ್ಷಿಣ ಆಫ್ರಿಕಾದ ಉದ್ಯಮಿ ಮತ್ತು ರಾಜಕಾರಣಿ. ವರ್ಣಭೇದ ನೀತಿ
ವಿರೋಧಿ ಹೋರಾಟಗಾರರೂ ಹೌದು. ನೆಲ್ಸನ್ ಮಂಡೇಲಾ ಅವರ ಜತೆಗೆ ಇವರನ್ನೂ ರಾಬನ್ ಐಲ್ಯಾಂಡಿನಲ್ಲಿ ಬಂಧಿಸಿಡ ಲಾಗಿತ್ತು. (ನಾನು ರಾಬನ್ ಐಲ್ಯಾಂಡಿಗೆ ಹೋದಾಗ, ಅಲ್ಲಿನ ಚಿತ್ರ ಸಂಗ್ರಹಾಲಯದಲ್ಲಿ ಮಂಡೇಲಾ ಜತೆ ಸೆಸ್ವಾಲೆ ಫೋಟೋ ನೋಡಿ, ನಮ್ಮ ಪತ್ರಿಕೆಯಲ್ಲಿ ಅವಾಂತರ ಸೃಷ್ಟಿಸಿದ್ದ ‘ಸೆಕ್ಸ್ ವಾಲೆ’ ಎಂದು ಜತೆಗಿದ್ದ ಸಂಪಾದಕ ಮಿತ್ರ ರವಿ ಹೆಗಡೆ
ಅವರಿಗೆ ಹೇಳಿ ನಕ್ಕಿದ್ದೆ.) ಮಂಡೇಲಾ ಸೆರೆಮನೆಯಿಂದ ಬಿಡುಗಡೆಯಾದಾಗ, ಇವರೂ ಅವರ ಜತೆ ಬಿಡುಗಡೆಯಾಗಿದ್ದರು.
ಅನಂತರ ನಡೆದ ಚುನಾವಣೆಯಲ್ಲಿ ಸೆಸ್ವಾಲೆ ಆರಿಸಿ ಬಂದು, ದಕ್ಷಿಣ ಆಫ್ರಿಕಾದ ಗೌಟೆಂಗ್ ಪ್ರಾಂತ್ಯದ ಮುಖ್ಯಸ್ಥರಾಗಿದ್ದರು. ಆನಂತರ ಸುಮಾರು ಐದು ವರ್ಷಗಳ ಕಾಲ ಅವರು ಮಂತ್ರಿಯೂ ಆಗಿದ್ದರು. ಆ ಸಂದರ್ಭದಲ್ಲಿಯೇ ಅವರು ಬೆಂಗಳೂರಿಗೂ ಬಂದಿದ್ದರು. ಇವರು ‘ಟೋಕಿಯೋ’ ಸೆಸ್ವಾಲೆ ಎಂದೇ ಪ್ರಸಿದ್ಧರಾಗಿದ್ದರು. ಮೂಲತಃ ಕರಾಟೆ ಪಟುವಾಗಿದ್ದರಿಂದ ಅವರ ಹೆಸರಿಗೆ ಬಾಲಂಗೋಚಿಯಂತೆ ‘ಟೋಕಿಯೋ’ ತಗುಲಿಕೊಂಡಿದ್ದಿರಬಹುದು.