ಶಶಾಂಕಣ
shashidhara.halady@gmail.com
ಸಿನಿಮಾ ಎಂದರೆ ಒಂದೋ ಮನರಂಜನೆ ಸಿನಿಮಾ, ಅದಲ್ಲದಿದ್ದರೆ ಕಲಾತ್ಮಕ ಸಿನಿಮಾ ಎಂದು ಸ್ಥೂಲವಾಗಿ ವಿಭಾಗ ಮಾಡುವ ದಿನಗಳಿದ್ದವು. ಆದರೆ ಈಚಿನ ವರ್ಷಗಳಲ್ಲಿ ಈ ವರ್ಗೀಕರಣದ ನಡುವಿನ ರೇಖೆ ಮಾಸಿದ ಉದಾಹರಣೆಗಳು ಹಲವು. ಅಂತರಾಷ್ಟ್ರೀಯ ಮಟ್ಟದಲ್ಲಿ ನೋಡಿದರೆ, ಪಕ್ಕಾ ಕಲಾತ್ಮಕ ಸಿನಿಮಾಗಳು ಇತ್ತ ಕಮರ್ಷಿಯಲ್ ಆಗಿಯೂ ಯಶಸ್ವಿಯಾಗುತ್ತವೆ, ಅತ್ತ ತಾಂತ್ರಿಕವಾಗಿಯೂ ಅತ್ಯುತ್ತಮ ಗುಣಮಟ್ಟದಲ್ಲಿ ಇರುತ್ತವೆ.
ಈಗ ಕನ್ನಡ ಚಿತ್ರರಂಗಕ್ಕೆ ‘ಕಾಂತಾರ’ ಪ್ರವೇಶ ನೀಡಿದೆ! ಇದನ್ನು ಕಮರ್ಷಿಯಲ್, ಕಲಾತ್ಮಕ, ಪ್ರಾದೇಶಿಕ, ಸ್ಥಳೀಯ, ಸಾಂಪ್ರದಾಯಿಕ, ವಿಶಿಷ್ಟ, ವಿಭಿನ್ನ ಎಂದು ವರ್ಗೀಕರಿಸಲು ಅಸಾಧ್ಯ, ವರ್ಗೀಕರಿಸಲೂ ಬಾರದು. ಏಕೆಂದರೆ ‘ಕಾಂತಾರ’ವು ಈ ಎಲ್ಲವನ್ನೂ ಒಳಗೊಂಡಿದೆ, ಎಲ್ಲರನ್ನೂ ಒಳಗೊಳ್ಳುತ್ತಿದೆ. ಸಾವಿರಾರು ಜನರನ್ನು ಥಿಯೇಟರಿಗೆ ಕರೆಸಿಕೊಂಡು, ಸಿನಿಮಾ ನೋಡುವಂತೆ ಮಾಡಿದ ‘ಕಾಂತಾರ’ವು, ಕನ್ನಡ ಚಿತ್ರರಂಗದಲ್ಲಿ ಒಂದು ಹೊಸ ಅಧ್ಯಾಯ ಬರೆದಿದೆ.
ಚಿತ್ರಗಳ ಯಶಸ್ಸಿನ ಮಾನದಂಡದಲ್ಲಿ ಹೊಸ ಶಕೆಯನ್ನೇ ಆರಂಭಿಸಿದೆ. ರಾಶಿ ರಾಶಿ ಹೊಗಳಿಕೆಗೆ ಪಾತ್ರವಾಗಿದೆ, ರಾಶಿ ಜನರ ಮನ ಗೆದ್ದಿದೆ. ಪ್ರದರ್ಶನಗೊಂಡಲ್ಲ ಹೌಸ್ ಫುಲ್ ಎನಿಸಿದೆ. ಮುಂದಿನ ದಿನಗಳಲ್ಲಿ, ಮುಂದಿನ ವಾರಗಳಲ್ಲಿ ‘ಕಾಂತಾರ’ದ ಪ್ರಭಾವ, ಪ್ರವಾಹ ಇನ್ನಷ್ಟು ಹೆಚ್ಚಲಿದೆ, ಅದರಲ್ಲಿ ಅನುಮಾನ ಬೇಡ. ‘ಕಾಂತಾರ’ದ ರೂವಾರಿ ರಿಷಭ್ ಶೆಟ್ಟಿ ಅವರ ಈ ಒಂದು ಅಪರೂಪದ ಪ್ರಯತ್ನವನ್ನು, ಯಶಸ್ಸನ್ನು, ಅಕ್ಷರ ರೂಪದಲ್ಲಿ ಹಿಡಿದಿಡಲು, ಚಿತ್ರಿಸಲು ಸುಲಭ ದಲ್ಲಿ ಸಾಧ್ಯವಿಲ್ಲ.
ಕರಾವಳಿ ಜನರ ನಂಬಿಕೆ ಮತ್ತು ದಂತ ಕಥೆಗಳನ್ನು ‘ಕಾಂತಾರ’ದ ಪ್ರಭಾವಳಿಯಲ್ಲಿ ಹಿಡಿದಿಟ್ಟು, ಈ ಒಂದು ಕಲಾತ್ಮಕ ಸಿನಿಮಾವನ್ನು ಅವರು ರೂಪಿಸಿದ ಪರಿ, ಈ ಕಾಲಘಟ್ಟದ ಒಂದು ವಿಸ್ಮಯ. ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದ
ಕಲಾತ್ಮಕ ಪರಿಭಾಷೆಯಲ್ಲಿ ಎದ್ದು ನಿಲ್ಲುವ, ಮುಂದಿನ ದಿನಗಳಲ್ಲಿ ಹಲವು ಪುರಸ್ಕಾರ ಪ್ರಶಸ್ತಿಗಳಿಗೆ ಭಾಜನವಾಗಲಿರುವ ‘ಕಾಂತರ’ವು ಅದೇ ಸಮಯದಲ್ಲಿ ಬಾಕ್ಸ್ ಆಫೀಸ್‌ನಲ್ಲಿಯೂ ಯಶಸ್ವಿಗೊಳ್ಳುತ್ತಿರುವುದು ಮತ್ತೊಂದು ವಿಸ್ಮಯ.
ಜನರ ನಂಬಿಕೆಯನ್ನು ಪ್ರಧಾನ ತಳಹದಿಯನ್ನಾಗಿ ತೆಗೆದುಕೊಂಡು, ಅದಕ್ಕೆ ಸುಂದರ ಕಲಾಕೃತಿಯ ಸ್ವರೂಪ ನೀಡುವುದಿದೆ ಯಲ್ಲ ಅದು, ರಿಷಭ್ ಶೆಟ್ಟಿಯಂತಹ ಒಬ್ಬ ಅಸಾಧಾರಣ ನಿರ್ದೇಶಕನಿಂದ ಮಾತ್ರ ಸಾಧ್ಯ. ದೈವಗಳ ಮೇಲೆ ಇರುವ ಜನಸಾಮಾನ್ಯರ ಗಾಢ ಮತ್ತು ಪ್ರಾಮಾಣಿಕ ನಂಬಿಕೆ, ಪಂಜರ್ಲಿ, ಗುಳಿಗಳಂತಹ ದೈವಗಳು ಆ ಭಾಗದ ಜನರ ದಿನಚರಿಯ
ಮೇಲೆ ಬೀರುತ್ತಿರುವ ಪ್ರಭಾವ – ಈ ಲೈವ್ ವಿಷಯದ ಜೊತೆಯ ೨೦ನೆಯ ಶತಮಾನದಲ್ಲಿ ದಟ್ಟವಾಗಿದ್ದ ‘ಧಣಿ’ಗಳ ಪಶು ಶಕ್ತಿ, ಬಡವರ ಶೋಷಣೆ, ಅರಣ್ಯ ಇಲಾಖೆಯ ದರ್ಪ, ಸರಕಾರದ ಕಾನೂನಿನ ಕಬಂಧ ಬಾಹುಗಳ ನಡುವೆ ಸಿಕ್ಕಿಬೀಳುವ
ಜನಸಾಮಾನ್ಯ – ಈ ಎ ವಿದ್ಯಮಾನಗಳು, ಕೊನೆಗೆ ಮೇಳೈಸಿದ್ದು ‘ಕಾಂತಾರ’ ಎಂಬ ಕಲಾತ್ಮಕ ಸೃಷ್ಟಿಯಲ್ಲಿ.
ನಿಜ, ನಾನು ‘ಕಾಂತಾರ’ವನ್ನು ಒಂದು ಕಲಾತ್ಮಕ ಚಿತ್ರವೆಂದೇ ಪ್ರಧಾನವಾಗಿ ಪರಿಗಣಿಸುತ್ತೇನೆ. ಅದೇಕೆಂದು ಹೆಚ್ಚಿನ ವಿವರಗಳಿಗೆ ಹೋಗುವ ಮುಂಚೆ, ಒಂದು ಕಮರ್ಷಿಯಲ್ ಸಿನಿಮಾವಾಗಿ, ಅಪ್ಪಟ ಮನರಂಜನೆಯ ಸಿನಿಮಾವಾಗಿ, ಮಾಸ್ ಪುಲ್ಲರ್ ಆಗಿ ‘ಕಾಂತಾರ’ ಏಕೆ ಮುನ್ನೆಲೆಗೆ ಬರುತ್ತದೆ ಎಂಬುದನ್ನು ನೋಡಲೇಬೇಕು. ಇಂದು ಸಿನಿಮಾ ಜಗತ್ತಿನಲ್ಲಿ ನೇರ ನೇರ ಎನ್ನುವ ಒಂದು ತಿಳಿವಳಿಕೆ ಇದೆ.
ಅದೇನೆಂದರೆ ನಿರ್ಮಾಪಕರು ಹಾಕಿದ ದುಡ್ಡು ವಾಪಸು ಬರಬೇಕು, ಜತೆಗೆ ಖ್ಯಾತ ತಾರಾಗಣ, ಅಬ್ಬರದ ಸಂಗೀತ, ತಂತ್ರಜ್ಞಾನ ಮತ್ತು ಕಥೆಯ ಸಹಾಯದಿಂದ (ಉದಾ : ಬಾಹುಬಲಿ) ಅಪಾರ ಯಶಸ್ಸು ಗಳಿಸಬೇಕು, ಮಾತ್ರವಲ್ಲ ಒಟ್ಟು ಗಳಿಕೆಯಲ್ಲಿ ಹೊಸ ದಾಖಲೆ ನಿರ್ಮಿಸಬೇಕು… ಇಂತಹ ತಿಳಿವಳಿಕೆಗಳೇ ಮೆರೆಯುತ್ತಿರುವ ಕಾಲ ಇದು. ಓ.ಟಿ.ಟಿ. ಆಕರ್ಷಣೆಯ ಹಿನ್ನೆಲೆಯಲ್ಲಿ, ಜನರು ಮನೆಯಿಂದ ಹೊರ ಬಂದು ಥಿಯೇಟರ್ ನಲ್ಲಿ ಹಣಕೊಟ್ಟು ಸಿನಿಮಾ ನೋಡುವಂತೆ ಮಾಡಲು
ತಂತ್ರಜ್ಞಾನದ ಔನ್ನತ್ಯವನ್ನು ಬಳಸಿ, ಅತಿ ರೋಚಕ ಸನ್ನಿವೇಶಗಳನ್ನು, ದೃಶ್ಯಗಳನ್ನು ರೂಪಿಸುವುದು ಈ ಉದ್ದೇಶ ಸಫಲತೆ ಗಾಗಿ ಬಳಕೆಯಾಗುತ್ತಿರುವ ಪ್ರಮುಖ ತಂತ್ರ. ಗ್ರಾಫಿಕ್ಸ್, ಕೃತಕ ದೃಶ್ಯಗಳು, ನೈಜತೆಗೆ ಅತಿ ಹತ್ತಿರವಾಗುವ, ನೈಜತೆಯನ್ನು ಮೀರಿಸುವ ಅಸಾಧಾರಣ ಸನ್ನಿವೇಶಗಳನ್ನು ರೂಪಿಸಿ, ಪ್ರೇಕ್ಷಕರನ್ನು ನಿಬ್ಬೆರಗಾಗಿಸುವ ಮೂಲಕ ಇನ್ನಷ್ಟು ಜನರು ನೋಡುವಂತೆ ಮಾಡುವ ತಂತ್ರ ಈಗ ಸಾಧಾರಣ ಎನಿಸಿದ್ದು, ಯಶಸ್ವಿಯೂ ಆಗಿದೆ.
ಆದರೆ ಕಮರ್ಷಿಯಲ್ ಆಗಿಯೂ ಯಶಸ್ವಿಯ ಹಾದಿಯಲ್ಲಿ ಸಾಗುತ್ತಿರುವ ‘ಕಾಂತಾರ’ದಲ್ಲಿ ಅಂತಹ ಕೃತಕ ಸನ್ನಿವೇಶಗಳ ಭರಾಟೆ ಅತಿ ಕಡಿಮೆ ಮಟ್ಟದಲ್ಲಿದೆ. ಇದು ಇಂದಿನ ತಂತ್ರeನ ಯುಗದಲ್ಲಿ ಸಣ್ಣ ಅಚ್ಚರಿಯೂ ಹೌದು. ಗಗ್ಗರ ಧರಿಸಿದ ಹಂದಿ,
ಕೆಲವು ಸಾಹಸ ದೃಶ್ಯಗಳಂತಹ ಕೆಲವೇ ಕೆಲವು ಸನ್ನಿವೇಶಗಳನ್ನು ಹೊರತುಪಡಿಸಿದರೆ, ಹೆಚ್ಚಿನ ದೃಶ್ಯಗಳು ಸಹಜತೆಯ ಮೆರುಗುನಲ್ಲಿ ಮನ ಸೆಳೆಯುತ್ತವೆ.
ಕಾಡಿನ ನಿಗೂಢತೆಯ ಬೆರಗನ್ನೂ ಹೊಂದಿರುವ ‘ಕಾಂತಾರ’, ಜನರ ಮೆಚ್ಚುಗೆಯನ್ನು ಗಳಿಸುತ್ತಿರುವ ರೀತಿ ಅಭೂತಪೂರ್ವ. ಮಲೆನಾಡು, ಕರಾವಳಿಯವರ ಅಸ್ಮಿತೆಗೆ ಹತ್ತಿರ ಎನಿಸುವ ಕಥಾ ಹತ್ತಿರ ಹೊಂದಿರುವ ಈ ಸಿನಿಮಾವು, ಆ ಒಂದು ನಿಟ್ಟಿನಲ್ಲಿ
ಆ ಭಾಗದ ಜನರಿಗೆ ಇಷ್ಟವಾಗಿದ್ದು ಸಹಜ. ಆದರೆ ಇದನ್ನು ಒಂದು ಪ್ರಾದೇಶಿಕ ಸಿನಿಮಾ ಎಂದು ಹೇಳಿದರೆ ತಪ್ಪಾಗುತ್ತದೆ, ಅಲ್ಲಿನ ಕಲಾಸೃಷ್ಟಿಗೆ ಅಪಚಾರ ಮಾಡಿದಂತಾಗುತ್ತದೆ. ಈಗ ‘ಕಾಂತಾರ’ವು ಬಯಲು ಸೀಮೆಯ ಜನರನ್ನು ಸಹ ತಲುಪಿದೆ, ನಗರದ ಜನರಿಗೂ ಅರ್ಥವಾಗಿದೆ.
ಬೆಂಗಳೂರು ಸೇರಿದಂತೆ ನಗರಗಳ ಜನರು ‘ಕಾಂತಾರ’ ನೋಡಲು ಸಾಲುಗಟ್ಟೆ ನಿಂತಿದ್ದಾರೆ. ಮಾಲ್‌ಗಳಲ್ಲಿನ ಆಧುನಿಕ
ಸಿನಿಮಾಗಳಲ್ಲಿ ಕಾಂತಾರದ ಶೋಗಳು ಪೂರ್ತಿಯಾಗಿ ಬುಕ್ ಆಗುತ್ತಿವೆ. ಉತ್ತರ ಕರ್ನಾಟಕದ ಜನರು ಕಾಂತಾರದ ಹೊಸತನಕ್ಕಾಗಿ ಇಷ್ಟಪಡುತ್ತಿದ್ದಾರೆ. ಹಾಗಿದ್ದರೆ ಗಲ್ಲಾ ಪೆಟ್ಟಿಗೆಯಲ್ಲಿ ಯಶಸ್ವಿಯಾಗಲು ‘ಕಾಂತಾರ’ಅನುಸರಿಸಿದ ಸೂತ್ರ ಯಾವುದು? ಇಲ್ಲ ಖಂಡಿತ ಇಲ್ಲ , ‘ಕಾಂತಾರ’ದ ಯಶಸ್ಸಿನಲ್ಲಿ ಯಾವುದೇ ಸಿದ್ಧ ಸೂತ್ರಗಳ ಬಳಕೆಯಾಗಿಲ್ಲ. ಒಂದು
ರೀತಿಯಲ್ಲಿ ಇದು ‘ಪಾತ್ ಬ್ರೇಕಿಂಗ್’ ಸಿನಿಮಾ, ಹೊಸ ಹಾದಿಯನ್ನು ಹುಡುಕಿಕೊಂಡಿರುವ ಅಸಾಧಾರಣ ಕಲಾಕೃತಿ. ಕಾಂತಾರವನ್ನು ಈಗಿರುವಂತೆ ಮನೋಜ್ಞವಾಗಿ ರೂಪಿಸಲು ರಿಷಭ್ ಶೆಟ್ಟಿಯಿಂದ ಮಾತ್ರ ಸಾಧ್ಯ; ಅವರಲ್ಲಿ ಹುದುಗಿರುವ ಅಸಾಧಾರಣ ನಿರ್ದೇಶಕನಿಂದ ಮಾತ್ರ ಸಾಧ್ಯ.
ಹಾಗಾದರೆ, ಕಮರ್ಷಿಯಲ್ ಆಗಿಯೂ ಯಶಸ್ಸು ಗಳಿಸಿರುವ ‘ಕಾಂತಾರ’ವನ್ನು ಹೇಗೆ ನೋಡಬೇಕು? ಯಾವ ರೀತಿಯಲ್ಲಿ ವಿಶ್ಲೇಷಿಸಬೇಕು? ಇಂದಿಗೂ ವಾಸ್ತವ ಎನಿಸಿರುವ, ಇಂದಿಗೂ ಕರಾವಳಿಯ ಪ್ರಜ್ಞಾ ಪ್ರವಾಹದಲ್ಲಿ ಪ್ರಸ್ತುತ ಎನಿಸಿರುವ ದೈವಗಳು, ಕಾಲಕಾಲಕ್ಕೆ ಅವುಗಳಿಗೆ ಶ್ರದ್ಧೆಯಿಂದ ನಡೆಸುತ್ತಿರುವ ಕೋಲಗಳು, ಆ ಪವಿತ್ರ ದೈವ ಆವಾಹನೆಗೊಂಡ ವ್ಯಕ್ತಿಯು ಹೇಳುವ ವಾಣಿಯನ್ನು ‘ದೈವ ವಾಕ್ಯ’ ಎಂದೇ ಸ್ವೀಕರಿಸುವ ಸಾವಿರಾರು ಕುಟುಂಬಗಳು, ಇವೆಲ್ಲವನ್ನೂ ಒಳಗೊಂಡೇ ಕಾಂತಾರವನ್ನು ನೋಡಬೇಕು, ಆಗ ಈ ಚಲನಚಿತ್ರದ ವೀಕ್ಷಣೆಗೆ ಹೊಸ ಅರ್ಥ ಮೂಡುತ್ತದೆ.
ಈ ‘ಭಕ್ತಿ ಮತ್ತು ನಿಗೂಢ ವಿಸ್ಮಯದ ಪರಂಪರೆ’ಯನ್ನು, ಮೂಲಕ್ಕೆ ಬದ್ಧವಾಗಿ ನಿರ್ದೇಶಕ ರಿಷಬ್ ಶೆಟ್ಟಿ ದುಡಿಸಿಕೊಂಡ ರೀತಿ ಅದ್ಭುತ. ಅದು ಅವರ ಕಲಾ ಪ್ರತಿಭೆಗೆ ಒಂದು ಸಾಕ್ಷಿ. ದೈವದ (ಇದನ್ನು ಇಂಗ್ಲಿಷ್ ಸಬ್‌ಟೈಟಲ್‌ನಲ್ಲಿ ‘ಡೆಮಿ ಗಾಡ್’ ಎಂದೇ ಕರೆಯಲಾಗಿದೆ) ಮೇಲಿನ ಜನರ ನಂಬಿಕೆಯನ್ನು, ಆ ಪವಿತ್ರ ನಂಬಿಕೆಗೆ ಅಪಚಾರವಾಗ ದಂತೆ ಕಥೆಯಲ್ಲಿ ಬಳಸಿಕೊಂಡಿರುವ ರೀತಿ, ಕೊನೆಯಲ್ಲಿ ಎರಡು ದೈವಗಳು ಸಂಗಮವಾಗಿ, ಇಡೀ ಕಥೆಗೆ ಹೊಸ, ವಿಭಿನ್ನ ಮತ್ತು ಅರ್ಥಪೂರ್ಣ ಆಯಾಮ ನೀಡುವ ರೀತಿ ಅಸಾಧಾರಣ. ಬಣ್ಣ ಬಣ್ಣದ ಮುಖವರ್ಣಿಕೆಯ ‘ಪಂಜುರ್ಲಿ’ ದೈವದ ಕುಣಿತವು ದೊಡ್ಡ ಪರದೆಯಲ್ಲಿ ಮೂಡಿಸುವ
ಅಲೌಕಿಕ ದೃಶ್ಯ ಕಾವ್ಯದ ಪರಿಣಾಮವು ಅಲಾಯಿದ.
ಆ ದೈವ ಮೈಮೇಲೆ ಆವಾಹನೆಗೊಂಡ ಪಾತ್ರಧಾರಿ, ಚಿತ್ರದ ಆರಂಭದಲ್ಲಿ ಕಾಡಿನಲ್ಲಿ ಮಾಯವಾಗುವುದು ಮತ್ತು ಅದೇ ಜಾಗದಲ್ಲಿ ಆತನ ಮಗನು ಚಿತ್ರದ ಕೊನೆಯಲ್ಲಿ ಅದೇ ದೈವವನ್ನು ದಟ್ಟ ಕಾಡಿನ ನಡುವೆ ಭೇಟಿಯಾಗುವುದು, ಇಬ್ಬರೂ ಪ್ರಸನ್ನಭಾವದಿಂದ ನರ್ತಿಸಿ, ಮುಗುಳ್ನಗೆಯೊಂದಿಗೆ ಕಾಂತಾರದಲ್ಲಿ ಲೀನವಾಗುವ ಸನ್ನಿವೇಶ, ಇವೆಲ್ಲವೂ ಸೇರಿ ಒಟ್ಟೂ
ಕಲಾಕೃತಿಗೆ ನೀಡುವ ವಿಶೇಷ ಅರ್ಥ ಇವೆಲ್ಲವೂ ನೋಡುಗರನ್ನು ಹಿಡಿದಿರುವ ಪರಿ, ಬೆರಗಾಗಿಸುವ ಪರಿ ಅನನ್ಯ. ಅದೊಂದು ‘ಮಾಯಕ’ ಲೋಕ!
ಕಾಡಿನ ಸೆರಗಿನ ಹಳ್ಳಿಯಲ್ಲಿ ಧ್ವನಿಗಳ ದಬ್ಬಾಳಿಕೆ; ಅದೇ ಸಮಯದಲ್ಲಿ ನಾಗರಿಕ ಜಗತ್ತಿನ ಪ್ರಗತಿಯ ಪ್ರತೀಕವಾಗಿ ಅರಣ್ಯ ಇಲಾಖೆಯವರು ಆ ಪುಟ್ಟ ಹಳ್ಳಿಯ ಗ್ರಾಮೀಣ ಜನರನ್ನು ಒಕ್ಕಲೆಬ್ಬಿಸಲು ನಡೆಸುವ ಪ್ರಯತ್ನ. ಇವೆರಡು ದಬ್ಬಾಳಿಕೆಗಳನ್ನು
ಸಿನಿಮಾದಲ್ಲಿ 1970ರ ದಶಕದ ಆಸುಪಾಸಿನವು ಎಂದು ಚಿತ್ರಿಸಿದ್ದರೂ, ಇದು ಇಂದಿಗೂ ಮಲೆನಾಡು ಮತ್ತು ಕರಾವಳಿಯ ಕೆಲವು ಹಳ್ಳಿಗಳನ್ನು ಕಾಡುತ್ತಿರುವ ಕಠೋರ ವಾಸ್ತವ! ಆದ್ದರಿಂದಲೇ ಚಿತ್ರವು ಪ್ರೇಕ್ಷಕರಿಗೆ ಬೇಗ ಕನೆಕ್ಟ್ ಆಗುತ್ತದೆ.
ನಾಲ್ಕಾರು ಜೀಪುಗಳಲ್ಲಿ ಜನರನ್ನು ತುಂಬಿಸಿಕೊಂಡು ಬಂದು, ಅಮಾಯಕ ಹಳ್ಳಿಯವರ ಮೇಲೆ ಆಕ್ರಮಣ ಮಾಡುವ ಧಣಿಗಳ ಕ್ರೌರ್ಯವಂತೂ, 1970-80ರ ದಶಕದ ವಾಸ್ತವ ಘಟನೆಗಳ ಅಪ್ಪಟ ಮರು ಚಿತ್ರಣದಂತಿದೆ. ಅರಣ್ಯ ಇಲಾಖೆಯವರು
ಜನಸಾಮಾನ್ಯರನ್ನು ನಿರಂತರವಾಗಿ ಪೀಡಿಸುತ್ತಾ, ಕಾಡಿನಿಂದ ಸೌದೆ ಸಂಗ್ರಹಿಸಬೇಡಿ, ಸೊಪ್ಪನ್ನು ತರಬೇಡಿ ಎಂದು ಜಬರ್ದಸ್ಟ್ ಮಾಡುವ ಕಿರುಕುಳ ಸಹ ಕಳೆದ ನಾಲ್ಕೈದು ದಶಕಗಳಿಂದ ನಡೆಯುತ್ತಿರುವ ಪ್ರಕ್ರಿಯೆ. ಇವೆರಡೂ ಶೋಷಣೆಗಳು
‘ಕಾಂತಾರ’ದುದ್ದಕ್ಕೂ ‘ವಿಕೆಡ್’ ರೂಪದಲ್ಲಿ ಚಿತ್ರಣ ಗೊಂಡಿರುವುದು, ಒಟ್ಟು ಕಥೆಗೆ ಹೊಂದಿಕೊಂಡಿದೆ.
ಈ ಕ್ರೌರ್ಯವನ್ನು, ಶೋಷಣೆಯನ್ನು ಎದುರಿಸಲು ಆ ಹಳ್ಳಿಯ ಜನರಿಗೆ ಸಹಾಯ ಮಾಡುವುದು, ದೈವ ಸ್ವರೂಪಿ ಪಂಜುರ್ಲಿ ಮತ್ತು ಗುಳಿಗ. ನಿರ್ದೇಶಕನಾಗಿ, ಕಥೆಗಾರನಾಗಿ, ನಟನಾಗಿ, ‘ಕಾಂತಾರ’ದಲ್ಲಿ ರಿಷಭ್ ಶೆಟ್ಟಿ ಗಳಿಸಿರುವ ಯಶಸ್ಸು
ಅಸಾಧಾರಣ. ಈ ಚಿತ್ರದ ಇತರ ಕೆಲವು ಪಾತ್ರಗಳು ತಮ್ಮದೇ ರೀತಿಯಲ್ಲಿ ಯಶ ಗಳಿಸಿದ್ದರೂ, ರಿಷಭ್ ಶೆಟ್ಟಿಯವರ ಸತ್ವಭರಿತ ಮತ್ತು ಡ್ರಾಮ್ಯಾಟಿಕ್ ನಟನೆಯ ಎದುರು ಇತರ ಪಾತ್ರಗಳು ತುಸು ಮಂಕಾಗಿ ಕಂಡರೆ ಅಚ್ಚರಿಯಿಲ್ಲ.
ನಾಯಕ ನಟ ರಿಷಭ್ ಶೆಟ್ಟಿಯ ಲಘು ಹಾಸ್ಯದ ಸಂಭಾಷಣೆಗಳು ಚಿತ್ರದ ಆರಂಭದಲ್ಲಿ ಪ್ರೇಕ್ಷಕನಿಗೆ ನಗು ತರಿಸಬಹುದು, ಮುಖ್ಯವಾಗಿ ಮೊದಲರ್ಧದಲ್ಲಿರುವ ಹಲವು ಹಾಸ್ಯಸನ್ನಿವೇಶಗಳು ಕಚಗುಳಿಯಿಡಬಹುದು. ಆದರೆ, ಆ ಹಾಸ್ಯವು ಸಹಜ, ಆ ಹಳ್ಳಿಯ, ಆ ಸಮಾಜದ ಪ್ರಾಥಮಿಕ ಅಭಿವ್ಯಕ್ತಿ! ಮತ್ತು ಒಟ್ಟೂ ಸಿನಿಮಾದ ಚೌಕಟ್ಟನ್ನು ಮೀರುವುದಿಲ್ಲ ಎಂಬುದು
ಗಮನಾರ್ಹ. ಕೋಳಿಪಡೆ, ಕಂಬಳ, ಆಲೆಮನೆ, ಹಂದಿಬೇಟೆ ಇಲ್ಲಿವೆ.
ಹಾಗೆ ನೋಡಿದರೆ, ಕಾಂತಾರದಲ್ಲಿ ಇರುವ ಎಲ್ಲವೂ ಮುಖ್ಯ, ಎಲ್ಲರೂ ಮುಖ್ಯ, ಇಲ್ಲಿನ ಕಾಡು, ರಸ್ತೆ, ಮರ, ಕಲ್ಲು, ಬಯಲು, ಬೆಟ್ಟ ಎಲ್ಲವೂ ಕಲಾಕೃತಿಯ ಭಾಗಗಳಂತೆ ಮೇಳೈಸಿವೆ. ಒಂದರ ಹಿಂದೆ ಒಂದರಂತೆ ಎರಡು ದೈವಗಳನ್ನು ಆವಾಹಿಸಿ ಕೊಂಡು, ಆಯಾ ದೈವಗಳ ವಿಶಿಷ್ಟ ಶೈಲಿ ಯನ್ನು ಬಿಂಬಿಸುತ್ತಾ, ವಿಭಿನ್ನ ದೃಶ್ಯ ಚೌಕಟ್ಟುಗಳನ್ನು ಅಭಿವ್ಯಕ್ತಿಸುವ ರಿಷಭ್ ಶೆಟ್ಟಿಯ ಅಭಿನಯವು, ಇಡೀ ಚಿತ್ರಕ್ಕೆ ಕೊನೆಯ ಇಪ್ಪತ್ತು ನಿಮಿಷಗಳಲ್ಲಿ ಒದಗಿಸಿಕೊಡುವ ಕ್ಲೈಮ್ಯಾಕ್ಸ್ ಅತ್ಯಪರೂಪದ್ದು. ಆ
ಇಪ್ಪತ್ತು ನಿಮಿಷಗಳಲ್ಲಿ ಅಬ್ಬರವಿದೆ, ಸಾಹಸವಿದೆ, ರೋಚಕತೆಯಿದೆ, ತಂತ್ರಜ್ಞಾನದ ಸೂಕ್ತ ಉಪಯೋಗವಿದೆ, ಸಂಗೀತ ಮತ್ತು ಶಬ್ದಗಳ ಔನ್ನತ್ಯವಿದೆ; ಜತೆಗೆ, ಗುಳಿಗ ಮತ್ತು ಪಂಜುರ್ಲಿ ದೈವಗಳು ತೆರೆಯ ಮೇಲೆ ಮಾಡುವ ಮೋಡಿಯಿದೆ, ಜಾದೂ ಇದೆ. ಇವೆಲ್ಲವೂ ಸೇರಿ ಪ್ರೇಕ್ಷಕನ್ನು ಬೆರಗಾಗಿಸುವ ಪರಿಯಲ್ಲಿ, ಆ ಕ್ಲೈಮ್ಯಾಕ್ಸ್ ತುರೀಯಾವಸ್ಥೆ ತಲುಪಿದೆ.
ಈ ಕ್ಲೈಮ್ಯಾಕ್ಸ್‌ನ ಶಿಖರಪ್ರಾಯವಾಗಿ, ಎರಡು ದೈವಗಳ (ಡೆಮಿ ಗಾಡ್)ಗಳ ವಿಲೀನವಿದೆ, ಸಂಗಮವಿದೆ. ಆ ನಿಗೂಢ ಕಾಡು ಕಾಂತಾರ, ಕಾಡಿನ ನಡುವಿನ ಅಮಾಯಕ ಸಮಾಜ, ಅಲ್ಲಿನ ಮಣ್ಣಿನ ಮಕ್ಕಳು, ಪ್ರಕೃತಿ, ಒಟ್ಟು ಆ ಕಥನಕ್ಕೆ ಬೇರೆಯೇ
ಲೋಕದ ಆಯಾಮವನ್ನು ಕಟ್ಟಿಕೊಡುವುದು, ಕೊನೆಯಲ್ಲಿ ನಡೆಯುವ ಈ ಎರಡು ದೈವಗಳ ಮಿಲನ. ಅಲೌಕಿಕ ಲೋಕದ ಪ್ರತಿನಿಽಗಳಾಗಿರುವ ದೈವಗಳನ್ನು ನಂಬದೇ ಇರುವವರು ಇರಬಹುದು, ಇದ್ದಾರೆ.
ಆದರೆ ದೈವ ಮೈ ಮೇಲೆ ಆವಾಹನೆಯಾಗಿ, ‘ದೈವವಾಣಿ’ಯನ್ನು ನುಡಿಯುತ್ತದೆ ಎಂದು ಇಂದಿಗೂ ನಂಬಿಕೊಂಡು ಬಂದಿರುವ ಆ ಸ್ಥಳೀಯ ಸಮಾಜದ ಸ್ಥಾನದಲ್ಲಿ ನಿಂತು, ‘ಕಾಂತಾರ’ ವನ್ನು ಅವಲೋಕಿಸಿದರೆ, ಕೊನೆಯ ಕ್ಲೈಮ್ಯಾಕ್ಸ್ ಸನ್ನಿವೇಶವು ಪ್ರೇಕ್ಷಕನ ಮನದಲ್ಲಿ ಸೃಷ್ಟಿಸುವ ರಸ, ಭಾವ ಉನ್ನತ ಮಟ್ಟದ್ದು. ಆದ್ದರಿಂದಲೇ ಆರಂಭದಲ್ಲಿ ಹೇಳಿದ್ದು ‘ಕಾಂತಾರ’ ಚಿತ್ರವು ಒಂದು ಕಲಾತ್ಮಕ ಚಿತ್ರವಾಗಿಯೂ ಮನಸ್ಸನ್ನು ತಟ್ಟುತ್ತದೆ, ನಮ್ಮೊಳಗಿನ ಅದಾವುದೋ ತಂತಿಯನ್ನು ಮೀಟಿ, ಝೇಂಕಾರದ
ಕಂಪನಗಳನ್ನು ಹೊರಡಿಸುತ್ತದೆ ಎಂದು. ಕಲಾತ್ಮಕ ಚಿತ್ರವಾಗಿ ‘ಕಾಂತಾರ’ವು ಇನ್ನಷ್ಟು ಪ್ರಸಿದ್ಧಿಯಾಗಲಿದೆ, ಉನ್ನತ ಪ್ರಶಸ್ತಿಗಳಿಗೆ ಭಾಜನವಾಗಲಿದೆ, ಅದರಲ್ಲಿ ಸಂಶಯವಿಲ್ಲ.
ನೀವಿನ್ನೂ ‘ಕಾಂತಾರ’ ನೋಡಿಲ್ಲವೇ? ಹಾಗಿದ್ದರೆ ಒಮ್ಮೆ ನೋಡಿ. ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ರೂಪುಗೊಂಡ ಅನನ್ಯ ಮತ್ತು ವಿಶಿಷ್ಟ ಚಿತ್ರಗಳ ಸಾಲಿಗೆ ಸೇರಿರುವ ‘ಕಾಂತಾರ’ದ ಪ್ರಭಾವಳಿಯನ್ನು ಒಮ್ಮೆ ಪ್ರವೇಶಿಸಿ ಬನ್ನಿ, ಅದೊಂದು ಮಾಯಕ
ಲೋಕ.