Friday, 13th December 2024

ಯಾವುದಿದು ಕಪಾಲ ಸಾಮುದ್ರಿಕ !

ಹಿಂದಿರುಗಿ ನೋಡಿದಾಗ

ಕಪಾಲ ಸಾಮುದ್ರಿಕ!

ಹೆಸರು ಕೇಳಿದರೆ ಆಶ್ಚರ್ಯವಾಗುತ್ತದೆ. ಆದರೆ ಇದು ಹೊಸದಲ್ಲ. ಸುಮಾರು ನಾಲ್ಕು ಶತಮಾನಗಳಷ್ಟು ಹಳೆಯದು. ಮನುಷ್ಯನ ಜ್ಞಾನವಿಕಾಸ ಪಥದಲ್ಲಿ ಹುಸಿ ವಿಜ್ಞಾನ ಮತ್ತು ನೈಜ ವಿಜ್ಞಾನಗಳು ಜತೆಜತೆಯಾಗಿ ಬೆಳೆದು ಬಂದಿವೆ. ಜ್ಯೋತಿಷ, ಹಸ್ತ ಸಾಮುದ್ರಿಕಗಳು ಹುಸಿ ವಿಜ್ಞಾನಗಳಾದರೂ ಸಹ ಇಂದಿಗೂ ಅಸ್ತಿತ್ವದಲ್ಲಿವೆ. ಆದರೆ ಕಪಾಲ ಸಾಮುದ್ರಿಕವು ಹುಸಿ ವಿಜ್ಞಾನ ವೆಂದು ಸಂಪೂರ್ಣವಾಗಿ ನಿರೂಪಿತವಾಗಿದೆ.

ಆದರೂ ಅದು ಹುಸಿ ವಿಜ್ಞಾನ ಮತ್ತು ನೈಜ ವಿಜ್ಞಾನಗಳ ಕೊಂಡಿಯಾಗಿ ಕೆಲಸವನ್ನು ಮಾಡಿದ ಕಾರಣದಿಂದ, ತನ್ನ ಐತಿಹಾಸಿಕ ಮಹತ್ವವನ್ನು ಉಳಿಸಿಕೊಂಡಿದೆ. ಕಪಾಲ ಸಾಮುದ್ರಿಕ, ಫ್ರೇನಾಲಜಿ, ಎರಡು ಗ್ರೀಕ್ ಶಬ್ದಗಳಿಂದ ರೂಪುಗೊಂಡಿದೆ. ಫ್ರೇನ್ ಎಂದರೆ ಮನಸ್ಸು ಅಥವಾ ಮೈಂಡ್ ಎಂದರ್ಥ. ಲೋಗೋಸ್ ಎಂದರೆ ಜ್ಞಾನ. ಹಸ್ತ ಸಾಮುದ್ರಿಕದಲ್ಲಿ ಒಬ್ಬ ವ್ಯಕ್ತಿಯ ಅಂಗೈ ರೇಖೆಗಳನ್ನು ಅಧ್ಯಯನ ಮಾಡಿ ಅವನ ಭೂತ, ವರ್ತಮಾನ ಹಾಗೂ ಭವಿಷ್ಯಗಳನ್ನು ಹೇಗೆ ಹೇಳುತ್ತಾರೋ, ಹಾಗೆಯೇ ಒಬ್ಬ ಮನುಷ್ಯನ ಕಪಾಲದ ಬಾಹ್ಯಾ ಲಕ್ಷಣಗಳಲ್ಲಿ ಅಧ್ಯಯನ ಮಾಡಿ, ಆ ವ್ಯಕ್ತಿಯ ಬಗ್ಗೆ ಸಮಗ್ರ ಮಾಹಿತಿಯನ್ನು ನೀಡುವ ಜ್ಞಾನ ಶಾಖೆಯೇ ಕಪಾಲ ಸಾಮುದ್ರಿಕ.

ರೋಮ್ ಸಾಮ್ರಾಜ್ಯದ ಪತನದ ನಂತರ ಯೂರೋಪಿನಲ್ಲಿ ಕಗ್ಗತ್ತಲ ಯುಗವು ಆರಂಭವಾಯಿತು. ಸ್ವಿಸ್ ದೇಶದ ಪಾದ್ರಿ ಜೊಹಾನ್ ಕ್ಯಾಸ್ಪರ್ ಲೆವೇಟರ್ (೧೭೪೧-೧೮೦೧) ಮುಖ ಸಾಮುದ್ರಿಕ (ಫ್ಸಿಯಾಗ್ನಮಿ) ಎಂಬ ಹೊಸ ವಿಜ್ಞಾನವನ್ನು ಆರಂಭಿಸಿ ಅದನ್ನು ಜನಪ್ರಿಯಗೊಳಿಸಿದ. ಒಬ್ಬ ವ್ಯಕ್ತಿಯ ಮುಖ ಮತ್ತು ಶರೀರದ ಲಕ್ಷಣಗಳನ್ನು ಅನುಸರಿಸಿ ಆತನ ಸಮಗ್ರ ವ್ಯಕ್ತಿತ್ವವನ್ನು ಹೇಳಲು ಸಾಧ್ಯ ಎನ್ನುವುದೇ ಮುಖಸಾಮುದ್ರಿಕದ ತಿರುಳು. ಇದು ಜನಸಾಮಾನ್ಯರಲ್ಲಿ ಮುಖ ವಾಚನ ಅಥವಾ ಫೇಶಿಯಲ್ ರೀಡಿಂಗ್ ಎಂದು ಜನಪ್ರಿಯವಾಯಿತು.

ಮುಖ ಸಾಮುದ್ರಿಕದ ಬಗ್ಗೆ ಪರ-ವಿರೋಧ ಚರ್ಚೆಗಳು ನಡೆಯುತ್ತಿರುವ ವೇಳೆ ಜರ್ಮನ್ ನರಾಂಗರಚನ ವಿಜ್ಞಾನಿ, ಫ್ರಾಂಜ಼್ ಜೋಸೆಫ್ ಗಾಲ್ (೧೭೫೮-೧೮೨೮) ಕಪಾಲ ಸಾಮುದ್ರಿಕ ಎಂಬ ಹೊಸ ಪರಿಕಲ್ಪನೆಯನ್ನು ಮಂಡಿಸಿದ. ಗಾಲ್ ಜರ್ಮನಿಯ ಟೀ-ನ್‌ಬ್ರಾನ್ ಎಂಬ ಹಳ್ಳಿಯಲ್ಲಿ ಹುಟ್ಟಿದ. ೧೨ ಮಕ್ಕಳ ತುಂಬು ಕುಟುಂಬದಲ್ಲಿ ಎರಡನೆಯವನಾಗಿ ಹುಟ್ಟಿದ ಗಾಲ್ಫ್, ತನ್ನ ಬಾಲ್ಯದಲ್ಲಿಯೇ ತನ್ನ ಸೋದರರ ಬಗ್ಗೆ ಕುತೂಹಲವನ್ನು ತಳೆದ. ಒಬ್ಬ ವ್ಯಕ್ತಿಯ ಬುದ್ಧಿವಂತಿಕೆಯು ಆತನ ದೈಹಿಕ ಲಕ್ಷಣಗಳಲ್ಲಿ ವ್ಯಕ್ತವಾಗಿರುತ್ತದೆ ಎಂದು ನಂಬಿದ್ದ ಗಾಲ್, ತನ್ನ ಸೋದರರು ಹಾಗೂ ತನ್ನ ಸಹಪಾಠಿಗಳ ದೈಹಿಕ ಲಕ್ಷಣಗಳನ್ನು ಅತ್ಯಂತ ಸೂಕ್ಷ್ಮವಾಗಿ ಗಮನಿಸಲಾರಂಭಿಸಿದ.

ಅವನ ಸಹಪಾಠಿಯೊಬ್ಬನ ಅಸಾಧಾರಣ ವಾಕ್ಪಟುತ್ವಕ್ಕೆ ಈ ಭಿನ್ನ ಸ್ವರೂಪದ ಕಪಾಲವೇ ಕಾರಣ ಎನ್ನುವ ತೀರ್ಮಾನಕ್ಕೆ ಬಂದ. ಹಾಗೆಯೇ ಅಪಾರ ನೆನಪಿನ ಶಕ್ತಿಯಿದ್ದ ತನ್ನ ಗೆಳೆಯನ ಮುಖ-ತಲೆಯನ್ನು ಅಧ್ಯಯನ ಮಾಡಿದ. ನೆನಪಿನ ಶಕ್ತಿಯೂ ಯಾವ ರೂಪದಲ್ಲಿ ಅಭಿವ್ಯಕ್ತ ವಾಗಿದೆ ಎಂದು ಹುಡುಕಲಾರಂಭಿಸಿದ. ಪಾದ್ರಿಯಾಗಬೇಕೆಂದುಕೊಂಡಿದ್ದವನು ಸ್ಟ್ರಾಸ್‌ಬರ್ಗ್ ವಿಶ್ವವಿದ್ಯಾನಿಲಯವನ್ನು ಸೇರಿ ವೈದ್ಯಕೀಯ ಪದವಿಯನ್ನು ಪಡೆದ. ಒಬ್ಬ ವ್ಯಕ್ತಿಯ ಮುಖ, ಕಪಾಲ ಲಕ್ಷಣಗಳು ವ್ಯಕ್ತಿಯ ಬುದ್ಧಿವಂತಿಕೆ ಹಾಗೂ ವ್ಯಕ್ತಿತ್ವವನ್ನು ಸೂಚಿಸುತ್ತದೆ ಎಂದು ನಂಬಿದ್ದ ಗಾಲ್, ೩೦೦ ಕಪಾಲಗಳನ್ನು ಅಧ್ಯಯನ ಮಾಡಿದ.

ಅವಯವ ವಿಜ್ಞಾನ (ಆರ್ಗನಾಲಜಿ) ಮತ್ತು ಕಪಾಲಪರೀಕ್ಷೆ (ಕ್ರೇನಿಯೋಸ್ಕೋಪಿ ಎಂಬ ಎರಡು ವಿಜ್ಞಾನ ಶಾಖೆಗಳನ್ನು ಹುಟ್ಟು ಹಾಕಿದ. ಮುಂದೆ ಈ ಎರಡೂ ಶಾಖೆಗಳು ಸೇರಿಕೊಂಡು ಕಪಾಲ ಸಾಮುದ್ರಿಕಕ್ಕೆ ಎಡೆ ಮಾಡಿಕೊಟ್ಟವು. ೧೮೧೯ರಲ್ಲಿ ನರಮಂಡದ, ವಿಶೇಷವಾಗಿ ಮಿದುಳಿನ ಸಮಗ್ರ ಅಂಗರಚನೆ ಮತ್ತು ಅಂಗಕ್ರಿಯಾ ವಿಜ್ಞಾನ; ಮನುಷ್ಯರ ಹಾಗೂ ಪ್ರಾಣಿಗಳ ಶಿರ ಲಕ್ಷಣಗಳ ಅಧ್ಯಯನದಿಂದ ಅವರ ಹಲವು ಬೌದ್ಧಿಕ ಸಾಮರ್ಥ್ಯಗಳ ಹಾಗೂ ನೈತಿಕ ಗುಣ ಲಕ್ಷಣಗಳನ್ನು ತಿಳಿಯುವಿಕೆ ಎಂಬ ಉದ್ದ ಹೆಸರಿನ ಪುಸ್ತಕವನ್ನು ಬರೆದ. ಈ ಪುಸ್ತಕದಲ್ಲಿ ಆರಂಭದಲ್ಲಿ ತನ್ನ ಕಪಾಲ ಸಾಮುದ್ರಿಕದ ಹಿಂದಿರುವ ಬಹಳ ಮುಖ್ಯ ವಾದ ಪರಿಕಲ್ಪನೆಗಳನ್ನು ಪಟ್ಟಿ ಮಾಡಿದ.

ಮನಸ್ಸಿನ ಅಂಗ ಮಿದುಳು 
ಮಿದುಳು ಎನ್ನುವುದು ಒಂದು ಸಮಗ್ರ ರಚನೆಯಲ್ಲ; ಬದಲಿಗೆ ಹಲವು ಭಿನ್ನ ಭಿನ್ನ ಕೆಲಸಗಳನ್ನು ಮಾಡುವ ವಿವಿಧ ಅಂಗಗಳ / ಅವಯವಗಳ (ಬ್ರೇನ್ ಆರ್ಗನ್ಸ್) ಸಮಷ್ಟಿ ರಚನೆಯಾಗಿದೆ. ಈ ವಿವಿಧ ಅಂಗಗಳು, ಮಿದುಳಿನ ನಿರ್ದಿಷ್ಟ ಭೌಗೋಳಿಕ ಸ್ಥಾನ ಗಳಲ್ಲಿರುತ್ತವೆ. ಮಿದುಳಿನ ವಿವಿಧ ಅಂಗಗಳ ಗುಣಲಕ್ಷಣಗಳು ಏಕರೂಪವಾಗಿರಬಹುದು; ಆದರೆ ಅವುಗಳ ಸಾಪೇಕ್ಷ ಗಾತ್ರವು ಆ ಅಂಗದ ಶಕ್ತಿ ಅಥವ ಪ್ರಬಲತೆಯನ್ನು ಸೂಚಿಸುತ್ತದೆ.

ಕಪಾಲವು ಮಗುವಿನ ಮಿದುಳಿನ ಮೇಲೆ ಬೆಳೆಯುವ ಕಾರಣ, ಕಪಾಲದ ಭೌತಿಕ ಲಕ್ಷಣಗಳನ್ನು ಅಧ್ಯಯನ ಮಾಡುವುದರ ಮೂಲಕ, ಮಿದುಳಿನ ರಚನೆಯಲ್ಲಿ ಪಾಲುಗೊಂಡಿರುವ ಮಿದುಳಿನ ಅಂಗಗಳ ಬೌದ್ಧಿಕ ಲಕ್ಷಣಗಳನ್ನು ಪತ್ತೆಹಚ್ಚಲು ಸಾಧ್ಯ ವಾಗುತ್ತದೆ.

ಫ್ರಾಂಜ಼್ ಜೋಸೆಫ್ ಗಾಲ್ಫ್, ಮನುಷ್ಯನ ಮಿದುಳು ವಾಸ್ತವದಲ್ಲಿ ೨೭ ಅಂಗಗಳ ಸಮಷ್ಟಿ ರಚನೆಯೆಂದ. ಈ ಒಂದೊಂದು ಅಂಗವು ಮನುಷ್ಯನ ಒಂದೊಂದು ಬೌದ್ಧಿಕ ಆಯಾಮವನ್ನು ಪ್ರತಿನಿಧಿಸುತ್ತದೆ ಎಂದ. ಅದು ಕಾಮದಿಂದ ಹಿಡಿದು, ಧಾರ್ಮಿಕ ಮನೋಭಾವದಿಂದ ಹಿಡಿದು, ಬೌದ್ಧಿಕ ಪ್ರತಿಭೆಯಿಂದ ಹಿಡಿದು, ಕೊಲೆ-ಸುಲಿಗೆ-ದರೋಡೆಕೋರ ಲಕ್ಷಣಗಳನ್ನೆಲ್ಲ ನಿಯಂತ್ರಿಸು ತ್ತದೆ ಎಂದ. ಈ ೨೭ ಬೌದ್ಧಿಕ ಆಯಾಮಗಳಲ್ಲಿ, ೧೯ ಬೌದ್ಧಿಕ ಆಯಾಮಗಳು ಪ್ರಾಣಿಗಳಲ್ಲಿಯೂ ಇರುತ್ತವೆ ಎಂದ. ಈ ೨೭ ಅಂಗಗಳ ಬಾಹ್ಯಾಲಕ್ಷಣ ಗಳು ಕಪಾಲದ ರಚನೆಯಲ್ಲಿ ವ್ಯಕ್ತವಾಗಿರುತ್ತವೆ ಎಂದು ನಂಬಿದ್ದ ಗಾಲ್ಫ್, ವ್ಯಕ್ತಿಯ ಕಪಾಲವನ್ನು ವ್ಯಾಸಮಾಪಕದಿಂದ (ಕ್ಯಾಲಿಪರ್ಸ್) ಅಳೆದು, ಅವನ್ನು ಅರ್ಥೈಸುವ ಕಪಾಲ ಪರೀಕ್ಷೆಯನ್ನು ಕ್ರಮಬದ್ಧಗೊಳಿಸಿದ. ಕಪಾಲದ ಮೇಲ್ಮೈ ಲಕ್ಷಣಗಳನ್ನು ಸೂಕ್ಷ್ಮವಾಗಿ ಗಮನಿಸಿದ.

ಅಂಗೈಯಿಂದ ತಡವಿ ತಡವಿ ಅವುಗಳ ರಚನೆಯಲ್ಲಿರಬಹುದಾದ ಸೂಕ್ಷ್ಮ ಭಿನ್ನತೆಗಳನ್ನು ಲೆಕ್ಕಹಾಕಿದ. ಈ ೨೭ ಮಿದುಳೀನ ಅಂಗಗಳಿಗೆ ಹೆಸರನ್ನು ನೀಡಿದ. ಅವುಗಳನ್ನು ನಿಖರವಾಗಿ ಗುರುತಿಸಲು ಸಂಖ್ಯೆಯನ್ನೂ ನೀಡಿದ. ಒಂದು ಕಪಾಲ ನಕ್ಷೆಯನ್ನು ಸಿದ್ಧಪಡಿಸಿದ. ಈ ಬಗ್ಗೆ ಯೂರೋಪಿನಾದ್ಯಂತ ಭಾಷಣಗಳನ್ನು ನೀಡಿದ. ಗಾಲ್ಫ್ ಯೂರೋಪಿನಾದ್ಯಂತ ಅಸಂಖ್ಯ ಅಭಿಮಾನಿ
ಗಳನ್ನು ಗಳಿಸಿದ. ಅವರಲ್ಲಿ ಜರ್ಮನಿಯ ವೈದ್ಯ ಜೊಹಾನ್ ಗ್ಯಾಸ್ಪರ್ ಸ್ಪುರ್ಜ಼ೀಮ್ (೧೭೭೬-೧೮೩೨) ಮುಖ್ಯನಾಗಿದ್ದ.
ಗಾಲ್ ಸಹಾಯಕನಾಗಿ ಅವನೊಡನೆ ಎಲ್ಲ ಕಡೆ ಹೋದ ಸುರ್ಜ಼ೀಮ್, ಅವಯವ ವಿಜ್ಞಾನ ಮತ್ತು ಕಪಾಲ ಪರೀಕ್ಷೆಗಳೆರಡನ್ನೂ ಸಮನ್ವಯಗೊಳಿಸಿ ಕಪಾಲ ಸಾಮುದ್ರಿಕ (-ನಾಲಜಿ) ಎಂಬ ಹೆಸರನ್ನು ಜನಪ್ರಿಯಗೊಳಿಸಿದ.

ಮುಂದಿನ ದಿನಗಳಲ್ಲಿ ಗಾಲ್ಫ್ ನಿಂದ ಪ್ರತ್ಯೇಕವಾಗಿ ತಾನೇ ಕಪಾಲ ಸಾಮುದ್ರಿಕವನ್ನು ಜನಪ್ರಿಯಗೊಳಿಸಲಾರಂಭಿಸಿದ. ಗಾಲ್
ನಮೂದಿಸಿದ ೨೭ ಮಿದುಳ ಅವಯವಗಳ ಸಂಖ್ಯೆಯನ್ನು ೩೨ಕ್ಕೆ ಹೆಚ್ಚಿಸಿದ. ತನ್ನದೇ ಆದ ಕಪಾಲ ನಕ್ಷೆಯನ್ನು ಬಿಡುಗಡೆ
ಮಾಡಿದ. ಜಾರ್ಜ್ ಕೂಂಬೆ (೧೭೮೮-೧೮೫೮) ಎಂಬ ಸ್ಕಾಟಿಷ್ ವಕೀಲನು ಕಪಾಲ ಸಾಮುದ್ರಿಕವನ್ನು ಜನಪ್ರಿಯಗೊಳಿಸಿ, ಎಡಿನ್‌ಬರೋ -ನಾಲಜಿಕಲ್ ಸೊಸೈಟಿಯನ್ನು ೧೮೨೦ರಲ್ಲಿ ಸ್ಥಾಪಿಸಿದ. ಜೊತೆಗೆ ದಿ ಕಾನ್‌ಸ್ಟಿಟ್ಯೂಶನ್ ಆಫ್ ಮ್ಯಾನ್ ಎಂಬ ಪುಸ್ತಕವನ್ನೂ ಬರೆದ. ಅದರ ೩ ಲಕ್ಷಕ್ಕೂ ಹೆಚ್ಚು ಪ್ರತಿಗಳು ಮಾರಾಟವಾದವು.

ಕೂಂಬೆ, ಮಿದುಳ ಅವಯವಗಳ ಸಂಖ್ಯೆಯನ್ನು ೩೫ ಕ್ಕೆ ಏರಿಸಿದ. ಆನಂತರ ಬಂದ ಎಚ್.ಲುಂಡಿ ಈ ಸಂಖ್ಯೆಯನ್ನು ೩೯ಕ್ಕೆ ಏರಿಸಿದ. ಹೀಗೆ ಗಾಲ್ ಆರಂಭಿಸಿದ ಕಪಾಲ ಸಾಮುದ್ರಿಕವನ್ನು ಅಸಂಖ್ಯ ಜನರು ತಮಗೆ ಸರಿಕಂಡಂತೆ, ತಮ್ಮದೇ ಆದ
ರೀತಿಯಲ್ಲಿ ವ್ಯಾಖ್ಯಾನಿಸಿ, ಜನಪ್ರಿಯಗೊಳಿಸಿದರು. ಕಪಾಲ ಸಾಮುದ್ರಿಕವು ಎಷ್ಟು ಜನಪ್ರಿಯವಾಯಿತೋ ಅಷ್ಟೇ ವಾದ-ವಿವಾದಗಳಿಗೆ ಎಡೆಕೊಟ್ಟಿತ್ತು. ಕಪಾಲಸಾಮುದ್ರಿಕವು ವರ್ಣಭೇದ ನೀತಿಗೆ (ರೇಸಿಸಂ) ಇಂಬುಕೊಟ್ಟಿತು. ಹೆಂಗಸರ ಮಿದುಳು ಪೂರ್ಣವಾಗಿ ಬೆಳೆದಿರುವುದಿಲ್ಲ ಎಂದು ಲಿಂಗ ತಾರತಮ್ಯಕ್ಕೆ ಎಡೆ ಮಾಡಿಕೊಟ್ಟಿತು.

ಮಕ್ಕಳ ಜನ್ಮದತ್ತ ಪ್ರತಿಭೆಗೆ ಆದ್ಯತೆಯನ್ನು ದೊರೆಯುತ್ತಿಲ್ಲ, ಅರ್ಹ ಮಕ್ಕಳು ವಂಚಿತರಾಗುತ್ತಿದ್ದಾರೆ ಎಂಬ ಹುಯಿಲೆದ್ದಿತು. ಕಪಾಲ ಸಾಮುದ್ರಿಕವನ್ನು ಅಧ್ಯಯನ ಮಾಡುವುದರ ಮೂಲಕ ಯಾರು ಕಳ್ಳರು, ಯಾರು ಸುಳ್ಳರು, ಯಾರು ಕೊಲೆಗಡುಕರು ಎಂಬುದನ್ನು ಗುರುತಿಸಬಹುದೆಂಬ ವಿಚಾರವು, ಅಪರಾಧ ವಿಜ್ಞಾನದ (ಕ್ರಿಮಿನಾಲಜಿ) ಮೇಲೆ ಪ್ರಭಾವವನ್ನು ಬೀರಿ, ಮುಗ್ದರಿಗೆ ಶಿಕ್ಷಯಾಗುವ ಭಯವು ತೀವ್ರವಾಯಿತು. ಗಾಲ್ಫ್ ಸಿದ್ದಾಂತದ ಮೇಲೆ ಇಟಾಲಿಯನ್ ಮನೋವೈದ್ಯ ಬಿಯಾಜಿಯೊ ಮಿರಾಗ್ಲಿಯ (೧೮೨೩-೧೮೮೫) ಮನೋರೋಗಗಳ ನೂತನ ವರ್ಗೀಕರಣವನ್ನು ಮಾಡಿದ. ಕಪಾಲ ಸಾಮುದ್ರಿಕವು ಮನೋವಿಜ್ಞಾನದ ಆಳ-ಹರಹುಗಳನ್ನು ನಿರ್ಧರಿಸುತ್ತದೆ ಎಂಬ ಕಲ್ಪನೆಯು ಸಾಹಿತಿಗಳನ್ನೂ ಬಿಡಲಿಲ್ಲ.

ಈ ಹಿನ್ನೆಲೆಯಲ್ಲಿ ಅನೇಕ ಸಾಹಿತ್ಯ ಕೃತಿಗಳು ರಚನೆಯಾಗಿ ಹುಸಿ ವಿಜ್ಞಾನವನ್ನು ಜನಪ್ರಿಯಗೊಳಿಸಿದವು. ಕಪಾಲ ಸಾಮುದ್ರಿಕವು ಅವೈಜ್ಞಾನಿಕ ಎನ್ನುವುದಕ್ಕೆ ಅಗತ್ಯ ಪುರಾವೆಯನ್ನು ಇಬ್ಬರು ವೈದ್ಯ ವಿಜ್ಞಾನಿಗಳು ಒದಗಿಸಿದರು. ಮೊದಲನೆಯವರು ಫ್ರೆಂಚ್ ವೈದ್ಯರಾಗಿದ್ದ ಮೇರಿ ಜೀನ್ ಪಿಯರಿ ಫ್ಲೌರೆನ್ಸ್ (೧೭೯೪-೧೮೬೭) ಹಾಗೂ ಎರಡನೆಯವರು ಫ್ರೆಂಚ್ ವೈದ್ಯ ಮತ್ತು ಅಂಗರಚನ ವಿಜ್ಞಾನಿಯಾಗಿದ್ದ ಪಾಲ್ ಬ್ರೋಕ (೧೮೨೪-೧೮೮೦). ಫ್ಲೌರೆನ್ಸ್ ಬಹಳ ಸರಳವಾದ ಪ್ರಯೋಗವನ್ನು ಮಾಡಿದ. ಗಾಲ್ ಅನ್ವಯ ಮನುಷ್ಯರ ೨೭ ಮಿದುಳಿನ ಅವಯವಗಳಲ್ಲಿ, ೧೯ ಅವಯವಗಳು ಪ್ರಾಣಿಗಳಲ್ಲಿಯೂ ಇವೆಯಲ್ಲವೆ!

ಅವನು ಪಾರಿವಾಳ ಮತ್ತು ಮೊಲಗಳನ್ನು ತೆಗೆದುಕೊಂಡ. ಕಪಾಲ ನಕ್ಷೆಯ ಪ್ರಕಾರ, ಪಾರಿವಾಳ ಮತ್ತು ಮೊಲದ ಮಿದುಳಿನ ನಿರ್ದಿಷ್ಟ ಭಾಗವನ್ನು ಸುಟ್ಟುಹಾಕಿದ! ಆಗ ಕಪಾಲ ನಕ್ಷೆಯ ಅನ್ವಯ, ಆ ಪಾರಿವಾಳದ ನಿರ್ದಿಷ್ಟ ಕಾರ್ಯವು ನಷ್ಟವಾಗ ಬೇಕಾಗಿತ್ತು. ಆದರೆ ಹಾಗೆ ಆಗಲಿಲ್ಲ! ಮತ್ಯಾವುದೋ ಕಾರ್ಯಸಾಮರ್ಥ್ಯವು ನಷ್ಟವಾಯಿತು. ಇಂತಹ ಹಲವು ಪ್ರಯೋಗಗಳನ್ನು
ಮಾಡಿ ಕಪಾಲ ಸಾಮುದ್ರಿಕಕ್ಕೆ ಹುರುಳಿಲ್ಲವೆಂದ. ಪಾಲ್ ಬ್ರೋಕ, ಮಾತಿನ ಉತ್ಪಾದನೆಗೆ ಕಾರಣವಾಗುವ ಭಾಗ, ಮಿದುಳಿನ ಎಡ ಅರೆಗೋಳದಲ್ಲಿ ನಮ್ಮ ಮಾತಿನ ಸಾಮರ್ಥ್ಯವನ್ನು ನಿರ್ಧರಿಸುವ ಪ್ರದೇಶವಿಂದೆ ಎನ್ನುವುದನ್ನು ನಿರೂಪಿಸಿದ.

ಇದುವೇ ಬ್ರೋಕಾ ಕ್ಷೇತ್ರ ಎಂದು ಪ್ರಸಿದ್ಧವಾಗಿದೆ. ಫ್ಲೌರೆನ್ಸ್ ಮತ್ತು ಬ್ರೋಕಾ ಅವರ ಪ್ರಯೋಗಗಳಿಂದ ಮಿದುಳಿನ ೨೭  ಅವಯವ ಗಳು ಇಲ್ಲ. ಇಡೀ ಮಿದುಳು ಒಂದು ಅಂಗವಾಗಿ ಕಾರ್ಯವನ್ನು ನಿರ್ವಹಿಸುತ್ತದೆ. ಒಬ್ಬ ವ್ಯಕ್ತಿಯ ಒಂದೊಂದು ಕೆಲಸವನ್ನು ಮಿದುಳಿನ ಒಂದೊಂದು ಭಾಗವು ನಿರ್ವಹಿಸುತ್ತದೆ. ಬ್ರೋಕಾ ಮಾತಿನ ಕ್ಷೇತ್ರವನ್ನು ಕಂಡುಹಿಡಿದ. ಫ್ಲೌರೆನ್ಸ್ ದೇಹದ ಸಮತೋಲನೆ, ಉಸಿರಾಟ, ರಕ್ತಪರಿಚಲನೆಯ ಕೇಂದ್ರಗಳನ್ನು ಪತ್ತೆ ಹಚ್ಚಿದ. ಹೀಗೆ ಹಲವು ವಿಜ್ಞಾನಿಗಳು ಹಲವು ಕ್ಷೇತ್ರಗಳನ್ನು ಪತ್ತೆಹಚ್ಚಿದರು.

ಜರ್ಮನ್ ನರಮನೋವೈದ್ಯ ಕಾರ್ಬೀನಿಯನ್ ಬ್ರಾಡ್ಮನ್ (೧೯೧೮-೧೮೬೮) ಮಿದುಳಿನಲ್ಲಿ ೫೨ ಕ್ಷೇತ್ರಗಳನ್ನು ಗುರುತಿಸಿದ. ಇವು ತಮ್ಮದೇ ಆದ ಕಾರ್ಯಗಳನ್ನು ನಿರ್ವಹಿಸುತ್ತಿದ್ದವು. ಆ ಕ್ಷೇತ್ರಗಳು ಇಂದು ಬ್ರಾಡ್ಮನ್ ಕ್ಷೇತ್ರಗಳೆಂದು ಪ್ರಸಿದ್ಧವಾಗಿವೆ. ಅಧ್ಯಯನ ಗಳು ಮುಂದುವರೆಯುತ್ತಿವೆ.