ಗಂಟಾಘೋಷ
ಗುರುರಾಜ್ ಗಂಟಿಹೊಳೆ
೨೦೨೨ರಲ್ಲಿ ಕಾಂಗ್ರೆಸ್ ತೊರೆದು ಸಮಾಜವಾದಿ ಪಕ್ಷದ ಬೆಂಬಲದೊಂದಿಗೆ ರಾಜ್ಯಸಭಾ ಸದಸ್ಯರಾದ ಹಿರಿಯ ವಕೀಲ ಕಪಿಲ್ ಸಿಬಲ್, ಕಾಂಗ್ರೆಸ್‌ನ ‘ಒಡೆದು ಆಳುವ ನೀತಿ’ಗೆ ಅಂಟಿಕೊಂಡೇ ಬೆಳೆದುಬಂದವರು. ೩೭೦ನೇ ವಿಽಯ ವಿಚಾರದಲ್ಲಿ ದೇಶದ್ರೋಹದ ಮಾತಾಡಿದ್ದ ಇವರು, ಭಾರತವು ವಿಶ್ವದಲ್ಲಿ ಬಲಿಷ್ಠ ರಾಷ್ಟ್ರವಾಗಿ ಹೊರಹೊಮ್ಮುತ್ತಿರುವ ಈ ಸಂದರ್ಭದಲ್ಲಿ ಒಬ್ಬ ರಾಷ್ಟ್ರವಾದಿಯಾಗಿ ದೇಶಭಕ್ತಿ ಯಿಟ್ಟುಕೊಂಡು ಮಾತಾಡಬೇಕೇ ವಿನಾ ದೇಶವಿಭಜನೆಯ ದೃಷ್ಟಿಯಿಂದಲ್ಲ.
ಅಸ್ಸಾಂ ಮ್ಯಾನ್ಮಾರ್‌ನ ಒಂದು ಭಾಗವಾಗಿತ್ತೇ? ಇದು ಬಹುಶಃ ಬಹಳಷ್ಟು ವಿವಾದವನ್ನು ಹುಟ್ಟುಹಾಕಿದ ಹೇಳಿಕೆ. ಹಿರಿಯ ವಕೀಲ ಕಪಿಲ್ ಸಿಬಲ್ ಅವರು ಕಳೆದ ಡಿಸೆಂಬರ್ ೫ರಂದು, ೧೯೫೫ರ ಪೌರತ್ವ ಕಾಯ್ದೆಯ ೬ಎ ಸೆಕ್ಷನ್‌ನ ಸಿಂಧುತ್ವವನ್ನು ಪ್ರಶ್ನಿಸುವ ಅರ್ಜಿಯ ವಿಚಾರಣೆಯ ವೇಳೆ ಈ ವಿಷಯವನ್ನು ಸುಪ್ರೀಂ ಕೋರ್ಟ್ ಮುಂದೆ ಪ್ರಸ್ತಾಪಿಸಿದರು. ಸಾಕಷ್ಟು ವಿವಾದಕ್ಕೆ ಆಸ್ಪದ ಕೊಟ್ಟ ಈ ಹೇಳಿಕೆಯ ಕುರಿತಾಗಿ ರಾಜಕೀಯವಾಗಿ, ಭೌಗೋ ಳಿಕವಾಗಿ ಮತ್ತು ಐತಿಹಾಸಿಕ ಹಿನ್ನೆಲೆಯಲ್ಲಿ ಚರ್ಚೆ ನಡೆಯುತ್ತಲೇ ಇದೆ. ೧೯೬೬ರ ಜನವರಿ ೧ ಮತ್ತು ೧೯೭೧ರ ಮಾರ್ಚ್ ೧ರ ನಡುವೆ ಅಸ್ಸಾಂನಲ್ಲಿ ಭಾರತೀಯ ಪೌರತ್ವ ನೀಡಲಾದ, ಬಾಂಗ್ಲಾ ವಲಸಿಗರ ಸಂಖ್ಯೆಯನ್ನೊಳಗೊಂಡಂತಿರುವ ವಿವರವಾದ ಮಾಹಿತಿ ಕಲೆಹಾಕುವಂತೆ ಕೇಂದ್ರ ಮತ್ತು ಅಸ್ಸಾಂ ಸರಕಾರಕ್ಕೆ ಸುಪ್ರೀಂ ಕೋರ್ಟ್ ಸೂಚನೆ ನೀಡಿತ್ತು.
ಈ ಸಲುವಾಗಿ ಕೋರ್ಟ್‌ನಲ್ಲಿ ವಾದ-ಪ್ರತಿವಾದ ನಡೆಯುತ್ತಿದ್ದವು. ‘ಯಾವುದೇ ವಲಸೆಯನ್ನು ಎಂದಿಗೂ ಮ್ಯಾಪ್ ಮಾಡಲಾಗದು. ಅಸ್ಸಾಂ ಇತಿಹಾಸ ವನ್ನು ನೋಡಿದರೆ, ಯಾರು ಯಾವಾಗ ಬಂದರು ಎಂದು ಕಂಡುಹಿಡಿಯುವುದು ಅಸಾಧ್ಯ. ಮೂಲತಃ ಮ್ಯಾನ್ಮಾರ್‌ನ ಭಾಗವಾಗಿದ್ದ ಅಸ್ಸಾಂ ೧೮೨೪ ರಲ್ಲಿ ಬ್ರಿಟಿಷರ ವಶವಾಗಿತ್ತು. ಅಸ್ಸಾಂ ಅನ್ನು ಬ್ರಿಟಿಷರಿಗೆ ಹಸ್ತಾಂತರಿಸುವ ಒಪ್ಪಂದಕ್ಕೆ ಒಳಗಾದ ಭೂಪ್ರದೇಶದ ಭಾಗವನ್ನು ವಶಪಡಿಸಿಕೊಂಡಿತು’ ಎಂದು ಕಪಿಲ್ ಗೊಂದಲದ ಹೇಳಿಕೆ ನೀಡಿದ್ದರು.
ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಕೂಡ ಕಪಿಲ್ ರ ಹೇಳಿಕೆಯನ್ನು ಅಲ್ಲಗಳೆದು, ‘ಅಸ್ಸಾಂನ ಇತಿಹಾಸ ಗೊತ್ತಿಲ್ಲದವರು ಮಾತಾಡ ಬಾರದು. ಅಸ್ಸಾಂ ಎಂದಿಗೂ ಮ್ಯಾನ್ಮಾರ್‌ನ ಭಾಗವಾಗಿರಲಿಲ್ಲ. ಮ್ಯಾನ್ಮಾರ್‌ನಿಂದ ಬಂದ ಜನರು ಅಸ್ಸಾಮಿಗರೊಂದಿಗೆ ಘರ್ಷಣೆ ಮಾಡಿದರು. ಅಲ್ಪಾವಧಿಗಷ್ಟೇ ಅದು ಮ್ಯಾನ್ಮಾರ್ ಪಾಲಾಗಿತ್ತು. ಅಸ್ಸಾಂ ಮ್ಯಾನ್ಮಾರ್‌ನ ಭಾಗ ಎನ್ನುವ ಯಾವುದೇ ಡೇಟಾವನ್ನು ನಾನೆಂದಿಗೂ ನೋಡಿಲ್ಲ. ಅವರು ತಪ್ಪು ಇತಿಹಾಸ ಪುಸ್ತಕವನ್ನು ಓದಿದ್ದಾರೆ’ ಎಂದು ತಿರುಗೇಟು ನೀಡಿದ್ದಾರೆ.
ಕಪಿಲ್ ಓರ್ವ ಹಿರಿಯ ವಕೀಲ ಮತ್ತು ರಾಜ್ಯಸಭಾ ಸದಸ್ಯ. ೨೦೦೪ರ ಸಾರ್ವತ್ರಿಕ ಚುನಾವಣೆಯಲ್ಲಿ ದೆಹಲಿಯ ಚಾಂದಿನಿ ಚೌಕ್ ಕ್ಷೇತ್ರದಿಂದ ಕಾಂಗ್ರೆಸ್ ನಿಂದ ಆಯ್ಕೆಯಾದ ಅವರು, ೨೦೨೨ರಲ್ಲಿ ಕಾಂಗ್ರೆಸ್ ತೊರೆದು ಸಮಾಜವಾದಿ ಪಕ್ಷದ ಬೆಂಬಲದೊಂದಿಗೆ ಸ್ವತಂತ್ರ ಅಭ್ಯರ್ಥಿಯಾಗಿ ರಾಜ್ಯಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಿದರು. ಕಾಂಗ್ರೆಸ್‌ನ ‘ಒಡೆದು ಆಳುವ ನೀತಿ’ಗೆ ಅಂಟಿಕೊಂಡೇ ಬೆಳೆದುಬಂದ ಇವರು ಆರ್ಟಿಕಲ್ ೩೭೦ರ ವಿಚಾರದಲ್ಲಿ ದೇಶದ್ರೋಹದ ಮಾತಾಡಿದ್ದರು.
ರಾಮಮಂದಿರ ವಿಷಯದಲ್ಲೂ ಮುಸ್ಲಿಮರ/ವಕ್ ಬೋರ್ಡ್‌ನ ಪರವಾಗಿ ವಾದ ಮಂಡಿಸಿದ್ದರು. ಆಧುನಿಕ ಅಸ್ಸಾಂ ಅನ್ನು ಪ್ರಾಚೀನ ಕಾಲದಲ್ಲಿ ‘ಕಾಮರೂಪ’ ಎನ್ನುತ್ತಿದ್ದರು. ‘ಪ್ರಾಗ್ಜ್ಯೋತಿಷ’ ಇದರ ರಾಜಧಾನಿಯಾಗಿತ್ತು. ಕಾಮರೂಪ ರಾಜ್ಯವು ಉತ್ತರ ಮತ್ತು ಪಶ್ಚಿಮ ಬಂಗಾಳದವರೆಗೆ, ಚೀನಾದ ಗಡಿ ಪ್ರದೇಶಗಳವರೆಗೆ ಮತ್ತು ದವಕದವರೆಗೆ ವಿಸ್ತರಿಸಲ್ಪಟ್ಟಿತ್ತು. ೧೯೫೦ರಲ್ಲಿ ಪೂರ್ವ ಬಂಗಾಳ ಮತ್ತು ಅಸ್ಸಾಂ ಪ್ರಾಂತ್ಯವನ್ನು ವಿಭಜಿಸಲಾಯಿತು. ಶತಮಾನಗಳಿಂದಲೂ ಅಸ್ಸಾಂನ ಮೇಲೆ ದಾಳಿಗಳಾಗಿವೆ. ೧೮೨೧ರಲ್ಲಿ ೩ನೇ ಬರ್ಮಾ ಆಕ್ರಮಣದವರೆಗೂ ಎಂದಿಗೂ ಇದು ವಸಾಹತು ಆಗಿರಲಿಲ್ಲ, ಅಂದರೆ ಬಾಹ್ಯಶಕ್ತಿಯ ವಸಾಹತಿಗೆ ಒಳಪಟ್ಟಿರಲಿಲ್ಲ.
೧೮೨೪ರ ಮೊದಲ ಆಂಗ್ಲೋ-ಬರ್ಮಿಯನ್ ಯುದ್ಧದ ವೇಳೆ ಬ್ರಿಟಿಷರು ಅಸ್ಸಾಂಗೆ ಪ್ರವೇಶಿಸಿದರು. ೧೮೨೬ರಲ್ಲಿ ಯಾಡಂಬೂ ಒಪ್ಪಂದದ ನಂತರ
ಬ್ರಿಟಿಷರ ಸ್ವಾಧೀನ ಸ್ಥಾಪನೆಯೊಂದಿಗೆ ವಸಾಹತುಶಾಹಿ ಯುಗ ಪ್ರಾರಂಭವಾಯಿತು. ಪ್ರಾಚೀನ ಅಸ್ಸಾಂ, ಕಾಮರೂಪ ರಾಜ್ಯದಲ್ಲಿ ಪುಷ್ಯವರ್ಮನ್
ರಾಜವಂಶ ಸ್ಥಾಪನೆಯೊಂದಿಗೆ ಪ್ರಾರಂಭವಾಗಿತ್ತು. ೪ನೇ ಶತಮಾನದಲ್ಲಿ ಸಮುದ್ರಗುಪ್ತನ ಅಲಹಾಬಾದ್ ಶಾಸನದ ಆರಂಭಿಕ ಉಲ್ಲೇಖವು, ಕಾಮರೂಪ ಮತ್ತು ದವಕ ಗಡಿಯ ರಾಜ್ಯಗಳೆನ್ನುತ್ತದೆ. ಚೀನಿ ಪ್ರವಾಸಿಗ ಹ್ಯೂಯೆನ್ ತ್ಸಾಂಗ್ ೭ನೇ ಶತಮಾನದಲ್ಲಿ ಈ ರಾಜ್ಯಕ್ಕೆ ಭೇಟಿ ನೀಡಿದರು. ನಂತರ ಭಾಸ್ಕರ ವರ್ಮನ್ ಆಳ್ವಿಕೆ ನಡೆಸಿದರು. ಇಂದಿನ ಭೂತಾನ್, ಬಾಂಗ್ಲಾದೇಶ ಮತ್ತು ನೇಪಾಳದ ಗಡಿಯನ್ನು ಹಂಚಿಕೊಂಡಿದೆ ಈಗಿನ ಅಸ್ಸಾಂ. ಅಂದು ಭಾಸ್ಕರ
ವರ್ಮನ ರಾಜಕೀಯ ಉತ್ತುಂಗವನ್ನು ತಲುಪಿತು. ಪುಷ್ಯವರ್ಮನ್ (೩೫೦-೩೭೪) ವರ್ಮನ್ ರಾಜವಂಶವನ್ನು ಸ್ಥಾಪಿಸಿದರು.
ಸಮುದ್ರ ವರ್ಮನ್ (೩೭೪-೩೯೮) ನಂತರ ಅಧಿಪತಿಯಾದ ಕಲ್ಯಾಣ ವರ್ಮನ್ (೪೨೨-೪೪೬) ದವಕವನ್ನು ಮತ್ತು ಮಹೇಂದ್ರ ವರ್ಮನ್ (೪೭೦-೪೯೪) ಮತ್ತಷ್ಟು ಪೂರ್ವಪ್ರದೇಶಗಳನ್ನು ಆಕ್ರಮಿಸಿಕೊಂಡರು. ನಾರಾಯಣ ವರ್ಮನ್ (೪೯೪-೫೧೮) ಮತ್ತು ಅವನ ಮಗ ಭೂತಿ ವರ್ಮನ್ (೫೧೮-೫೪೨) ಅಶ್ವಮೇಧ ಯಾಗ ಕೈಗೊಂಡರು ಎಂದು ಇತಿಹಾಸದಲ್ಲಿ ಉಲ್ಲೇಖವಿದೆ. ಮೊದಲು ಹರ್ಷವರ್ಧನನನ್ನು ಭೇಟಿ ಮಾಡಲು ಬಂದಿದ್ದ ಚೀನಿ ಪ್ರವಾಸಿಗ ಹ್ಯೂಯೆನ್ ತ್ಸಾಂಗ್, ಅಲ್ಲಿ ರಾಜ ಇಲ್ಲದಿದ್ದ ಕಾರಣ ಕಾಮರೂಪದಲ್ಲಿದ್ದ ಭಾಸ್ಕರ ವರ್ಮನ್‌ನಲ್ಲಿಗೆ ಬಂದು ೧ ತಿಂಗಳು ನೆಲೆಸಿದ್ದ. ಈ ವಿಷಯ ತಿಳಿದ ಹರ್ಷವರ್ಧನ, ಹ್ಯೂಯೆನ್ ತ್ಸಾಂಗ್‌ನನ್ನು ತನಗೆ ಬಿಟ್ಟುಕೊಡುವಂತೆ ಕೇಳಿದಾಗ, ‘ನನ್ನ ಶಿರವನ್ನು ಕೊಡುತ್ತೇನೆ, ಆತನನ್ನು ಬಿಟ್ಟುಕೊಡುವುದಿಲ್ಲ’ ಎಂದಿದ್ದ ಭಾಸ್ಕರ ವರ್ಮನ್. ನಂತರ ಹರ್ಷವರ್ಧನ ರಾಜತಾಂತ್ರಿಕ ಮಾರ್ಗದಲ್ಲಿ ತ್ಸಾಂಗ್‌ನನ್ನು ಕರೆತಂದ ಮತ್ತು ಆತ ಸುಮಾರು ೭-೮ ವರ್ಷ
ಇಲ್ಲಿಯೇ ಇದ್ದ ಎನ್ನುತ್ತದೆ ಇತಿಹಾಸ. ನಂತರ ಮುಘಲ್ ಮತ್ತು ಅಹೋಮ್ ವಂಶಸ್ಥರ ನಡುವೆ ಯುದ್ಧ ನಡೆದು ಅಹೋಮ್‌ಗಳು ಗೆಲ್ಲುತ್ತಾರೆ.
ಕೆಲ ದಶಕಗಳ ನಂತರ ಬರ್ಮಿಸ್ ರಾಜ (೧೮೧೭-೧೮೨೧) ಅಸ್ಸಾಂ ಅನ್ನು ವಶಪಡಿಸಿಕೊಂಡು ಪ್ರಜೆಗಳ ಮೇಲೆ ದೌರ್ಜನ್ಯ ನಡೆಸಿದ. ತದನಂತರ ಆಂಗ್ಲೋ-ಬರ್ಮಿಯನ್ ಯುದ್ಧವಾಗಿ ಯಾಡಂಬೊ ಒಪ್ಪಂದದ ಮೇಲೆ ಬರ್ಮಿಯನ್ ಅದನ್ನು ಬಿಟ್ಟುಕೊಟ್ಟಿತು. ಈಗಿರುವ ಪ್ರಶ್ನೆಯೆಂದರೆ, ಇಷ್ಟು ಆಳ್ವಿಕೆಯನ್ನು ಮ್ಯಾನ್ಮಾರ್ ಅಸ್ಸಾಂನ ಅಧೀನದಲ್ಲಿತ್ತು ಎನ್ನಲಾದೀತೇ? ಮುಘಲ್ ಸಾಮ್ರಾಜ್ಯವು ಅಹೋಮ್ ಸಾಮ್ರಾಜ್ಯದ ಮೇಲೆ ಸುಮಾರು ೧೭ ಬಾರಿ ದಾಳಿ ನಡೆಸಿದೆ. ಆದರೆ ಪ್ರಮುಖವಾಗಿ ೧೬೧೫-೧೬೮೨ರವರೆಗೆ ಅಹೋಮ್ ಸಾಮ್ರಾಜ್ಯ ಕಾಮರೂಪದಲ್ಲಿ ಆಳ್ವಿಕೆ ನಡೆಸಿತ್ತು. ಅದರಲ್ಲೂ ಲಚಿತ್ ಬೋರ್ -ಕಾನ್ ಸುದೀರ್ಘಕಾಲ ಆಳ್ವಿಕೆ ನಡೆಸಿ, ಮುಘಲರನ್ನು ಎದುರಿಸಿದ್ದ.
ಪಠ್ಯಪುಸ್ತಕಗಳಲ್ಲಿ ಮುಘಲರ ಆಳ್ವಿಕೆಯ ಬಗ್ಗೆ ಬಹಳಷ್ಟು ಉಲ್ಲೇಖವಿದೆ. ಆದರೆ ಅವರ ಆಳ್ವಿಕೆಯಿಂದ ಇಂದಿನ ಅಸ್ಸಾಂ ಅನ್ನು ಉಳಿಸಿಕೊಂಡ ಅಹೋಮ್‌ನ ಬಲಿಷ್ಠ ಸೇನಾನಿ ಲಚಿತ್ ಬೋರ್ -ಕಾನ್ ಬಗ್ಗೆ ಎಲ್ಲೂ ಉಲ್ಲೇಖವಿಲ್ಲ. ಸೈರಾಘಾಟ್ ಎಂಬಲ್ಲಿ ನಡೆದ ಯುದ್ಧದಲ್ಲಿ, ತನ್ನ ಸೇನೆಯ ಸುಮಾರು ಹತ್ತುಪಟ್ಟು ದೊಡ್ಡದಾದ ಮುಘಲರ ಸೇನೆಯನ್ನು ಈತ ತನ್ನ ಯುದ್ಧ ತಂತ್ರ ಮತ್ತು ಶೌರ್ಯದಿಂದ ಸಂಪೂರ್ಣ ಸೋಲಿಸಿ ಓಡಿಸಿದ. ಕೊನೆಯದಾಗಿ ೧೬೮೨ರಲ್ಲಿ ನಡೆದ ಇಟಾಕುಲಿ ಯುದ್ಧದಲ್ಲಿ ಮುಘಲ್ ಜನರಲ್ ಜಯಂತ್ ಸಿಂಗ್ ಸೋತು ಆತ್ಮಸಮರ್ಪಣೆ ಮಾಡಿಕೊಂಡ.
ಅಹೋಮ್ ಸಾಮ್ರಾಜ್ಯ ಸುಮಾರು ೧೮೨೬ರವರೆಗೆ ಆಳಿತು. ಭಾರತ ತನ್ನ ಗಡಿಯನ್ನು ೭ ದೇಶಗಳೊಂದಿಗೆ ಹಂಚಿಕೊಂಡಿದೆ. ಆದರೆ ಕಾಂಗ್ರೆಸ್ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಅಕ್ಸಾಯ್ ಚಿನ್, ಪಾಕ್ ಆಕ್ರಮಿತ ಕಾಶ್ಮೀರ, ಕೋಕೋ ಐಲ್ಯಾಂಡ್, ಕಚತೀವು ಐಲ್ಯಾಂಡ್‌ನಂಥ ಭಾರತದ ಕೆಲ ಭೂಭಾಗ ಗಳನ್ನು ಚೀನಾ, ಬಾಂಗ್ಲಾದೇಶ, ಪಾಕಿಸ್ತಾನ, ಮ್ಯಾನ್ಮಾರ್, ಶ್ರೀಲಂಕಾ ಮುಂತಾದ ದೇಶಗಳಿಗೆ ಬಿಟ್ಟುಕೊಟ್ಟಿದೆ ಎಂಬುದು ಖೇದಕರ. ಪ್ರಧಾನಿ ನೆಹರುರ ಕೆಲ ತಪ್ಪುಗಳಿಗೆ ಭಾರತ ಇಂದಿಗೂ ಬೆಲೆ ತೆರುತ್ತಿದೆ. ಏಕೆಂದರೆ ಅವರು ತಮ್ಮ ಪಟ್ಟ ಉಳಿಸಿಕೊಳ್ಳುವ ಹಪಹಪಿಯಲ್ಲಿ ಬ್ರಿಟಿಷರಿಗೆ ಗುಲಾಮರಾಗಿ, ನಮ್ಮ ದೇಶದ ಹಲವಾರು ಭೂಭಾಗಗಳನ್ನು ನೆರೆರಾಷ್ಟ್ರಗಳಿಗೆ ಉಡುಗೊರೆಯಾಗಿತ್ತರು. ಈ ಪೈಕಿ ಕೆಲವು ಉಗ್ರರ ಅಡಗುತಾಣವಾಗಿ ಭಾರತಕ್ಕೆ ಮಗ್ಗುಲು ಮುಳ್ಳಾಗಿ ಚುಚ್ಚುತ್ತಿವೆ.
ಲಾರ್ಡ್ ಮೌಂಟ್ ಬ್ಯಾಟನ್ ಜತೆ ಸಭೆ ನಡೆಸಿದ ನೆಹರು, ಗ್ರೇಟ್ ಕೋಕೋ ದ್ವೀಪವನ್ನು ಬಂಜರು ಭೂಮಿಯಾಗಿ ಪರಿಗಣಿಸಿ ಬಿಟ್ಟುಕೊಟ್ಟರು. ನಂತರ ಅದನ್ನು ಬರ್ಮಾಕ್ಕೆ ಗುತ್ತಿಗೆ ನೀಡಲಾಯಿತು. ಇನ್ನು ನೇಪಾಳದ ಅಂದಿನ ಪ್ರಧಾನಿ ಮಾತುಂಗ ಪ್ರಸಾದ್, ನೇಪಾಳವನ್ನು ಭಾರತದಲ್ಲಿ ವಿಲೀನ ಗೊಳಿಸಲು ಬಯಸಿದ್ದರು. ಆದರೆ ಚೀನಾಕ್ಕೆ ಬೇಸರವಾಗಬಹುದು ಎಂಬ ಕಾರಣಕ್ಕೆ ಅದನ್ನೂ ತಿರಸ್ಕರಿಸಿದರು. ಈಗ ಅದೇ ಚೀನಾ, ನೇಪಾಳವನ್ನು ಮುಂದಿಟ್ಟುಕೊಂಡು ಭಾರತದ ಮೇಲೆ ಎರಗಲು ಹೊಂಚುಹಾಕುತ್ತಿದೆ. ೧೯೫೨ರಲ್ಲಿ ೨೨,೦೦೦ ಚ.ಕಿ.ಮೀ. ಕಾಬೋ ಕಣಿವೆಯನ್ನು ಶಾಂತಿಯ ಪ್ರತೀಕವಾಗಿ ದಾನ ಮಾಡಿದರು. ಅದು ಈಗ ಬೋಡೋ ಉಗ್ರರ ನೆಲೆಯಾಗಿದೆ. ಅಷ್ಟೇಕೆ, ಟಿಬೆಟ್ ಅನ್ನು ಉಳಿಸಿಕೊಂಡಿದ್ದರೆ, ಚೀನಾ-ಭಾರತದ ಮಧ್ಯೆ ಗಡಿ ಸಮಸ್ಯೆಯೇ ಇರುತ್ತಿರಲಿಲ್ಲ. ನೆಹರು ತಮ್ಮ ಹುಸಿ ಇಮೇಜ್ ಉಳಿಸಿಕೊಳ್ಳಲು ಭಾರತವನ್ನು ವಿಭಜಿಸಿ ಮತ್ತೊಂದು ಮುಸ್ಲಿಂ ರಾಷ್ಟ್ರಕ್ಕೆ ಅಡಿಗಲ್ಲು ಹಾಕಿದರು.
೧೯೭೪ರಲ್ಲಿ ಇಂದಿರಾ ಗಾಂಧಿಯವರು ಸಮೃದ್ಧವಾದ ಕಚತೀವು ದ್ವೀಪವನ್ನು ಶ್ರೀಲಂಕಾಕ್ಕೆ ಉಡುಗೊರೆಯಾಗಿತ್ತರು. ಇನ್ನು ಬಲೂಚಿಸ್ತಾನ ಮತ್ತು ಗ್ವಾದರ್ ಬಂದರು; ಅಂದು ನೆಹರು ಒಪ್ಪಿದ್ದರೆ, ಇಂದಿನ ಹಲವು ಸವಾಲುಗಳಿಗೆ ಅಂದೇ ಪರಿಹಾರ ಸಿಗುತ್ತಿತ್ತು. ಒಂದು ಕಾಲಕ್ಕೆ ಶ್ರೀಮಂತವಾಗಿದ್ದ ಕೋಲ್ಕತಾ ಇಂದು ಆರ್ಥಿಕ ಮುಗ್ಗಟ್ಟನ್ನು ಎದುರಿಸುತ್ತಿದೆ. ಏಕೆಂದರೆ ಅಲ್ಲಿ ಕೈಗಾರಿಕಾ ಅಭಿವೃದ್ಧಿಕಾರ್ಯಗಳು ನಡೆಯುತ್ತಿಲ್ಲ. ಉದ್ಯಮಗಳಿಗೆ ಅಲ್ಲಿನ ಸಿಎಂ ಮಮತಾ ಬ್ಯಾನರ್ಜಿ ಅನುವು ಮಾಡಿಕೊಡುತ್ತಿಲ್ಲ. ಅವರು ಹಿಂದಿನಿಂದಲೂ ಮುಸ್ಲಿಮರನ್ನು ಓಲೈಸಿಕೊಂಡೇ ಬಂದವರು, ಬಾಂಗ್ಲಾದ ಅಕ್ರಮ ವಲಸಿಗರಿಂದಲೇ ವೋಟು ಗಿಟ್ಟಿಸಿ ಮೆರೆದವರು. ಹಾಗಾಗಿಯೇ ಪೌರತ್ವ ಕಾಯ್ದೆಯನ್ನು ಅವರು ವಿರೋಧಿಸಿದ್ದು ಹಾಗೂ ಅಕ್ರಮ ವಲಸಿಗರನ್ನು ಸ್ವಾಗತಿಸಿ ಅವರಿಗೆ ಬೇಕಾದ ಮೂಲಸೌಕರ್ಯಕ್ಕೆ ಹೆಚ್ಚಿನ ಪ್ರಾಮುಖ್ಯ ಕೊಟ್ಟು ಸಲಹುತ್ತಿದ್ದಾರೆ. ಇದು ಕಟುಸತ್ಯ.
ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್‌ಗಡ ಮತ್ತು ತೆಲಂಗಾಣ ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿ ಮೂರರಲ್ಲಿ ಗೆದ್ದು ಬೀಗಿದೆ. ಈ ಫಲಿತಾಂಶವೇ ಸನಿಹದಲ್ಲಿರುವ ಲೋಕಸಭೆ ಚುನಾವಣೆಗೆ ನಿರ್ಣಾಯಕವೇ ಎಂಬ ಲೆಕ್ಕಾಚಾರವೂ ನಡೆಯುತ್ತಿದೆ. ಇಂಥ ವೇಳೆ ಕಪಿಲ್ ಸಿಬಲ್ ಅವರು ಅಸ್ಸಾಂ ರಾಜ್ಯದ ಬಗ್ಗೆ ನೀಡಿರುವ ಹೇಳಿಕೆ ಜನರಲ್ಲಿ ಗೊಂದಲವುಂಟುಮಾಡಿದೆ. ಭಾರತವು ವಿಶ್ವದಲ್ಲಿ ಬಲಿಷ್ಠ ರಾಷ್ಟ್ರವಾಗಿ ಹೊರಹೊಮ್ಮುತ್ತಿರುವ ಈ ಸಂದರ್ಭದಲ್ಲಿ ಇವರೊಬ್ಬ ರಾಷ್ಟ್ರವಾದಿಯಾಗಿ ದೇಶಭಕ್ತಿಯಿಟ್ಟುಕೊಂಡು ಮಾತಾಡಬೇಕೇ ವಿನಾ ದೇಶವಿಭಜನೆಯ ದೃಷ್ಟಿಯಿಂದಲ್ಲ. ಭಾರತಕ್ಕೆ ಆಗುತ್ತಿರುವ ಅಕ್ರಮ
ವಲಸೆಯನ್ನು ಹೇಗೆ ನಿಯಂತ್ರಿಸಬೇಕು ಎಂಬ ದೃಷ್ಟಿಯಿಂದ ಈ ಸಮಸ್ಯೆಯನ್ನು ಚರ್ಚಿಸಬೇಕೇ ಹೊರತು, ಇತಿಹಾಸವನ್ನು ಮತ್ತಷ್ಟು ಕೆದಕಿ ಸಮಸ್ಯೆ ಯನ್ನು ಬಿಗಡಾಯಿಸಬಾರದು.