ಸಂಸ್ಮರಣೆ
ನಂ.ಶ್ರೀಕಂಠ ಕುಮಾರ್
ಡಾ.ಕೆ.ಶಿವರಾಮ ಕಾರಂತರು ಬದುಕಿನ ಕೊನೆಯವರೆವಿಗೂ ಬಿಡುವಿಲ್ಲದೆ ಜ್ಞಾನದ ಅನ್ವೇಷಣೆ ಹಾಗೂ ಬರವಣಿಗೆ ಯಲ್ಲಿ ತೊಡಗಿಸಿಕೊಂಡು ಸಂತೃಪ್ತ ಬದುಕಿನ ಕಾರಂತರು ತೊಂಬತ್ತೈದು ವರ್ಷಗಳ ಸುದೀರ್ಘ ಜೀವನ ನಡೆಸಿ ಡಿಸೆಂಬರ್ 9, 1997ರಲ್ಲಿ ಸಾರ್ಥಕ ಬದುಕನ್ನು ಮುಗಿಸಿದವರು. ಅವರು ನಮ್ಮಿಂದ ಕಣ್ಮರೆಯಾಗಿ ಬರೋಬ್ಬರಿ 25 ವರ್ಷಗಳು ಸಂದ ಸಂದರ್ಭದಲ್ಲಿ ಒಂದು ಮೆಲುಕು.
ಎಲ್ಲರ ಪ್ರೀತಿಯ ಅಜ್ಜ, ಕಾರಂತಜ್ಜ. ಕನ್ನಡ ಸಾಹಿತ್ಯ ಲೋಕದ ವಿಸ್ಮಯ ವ್ಯಕ್ತಿತ್ವದ ಸಾಹಿತಿ, ದಿಗ್ಗಜ ಡಾ.ಕೆ.ಶಿವರಾಮ ಕಾರಂತರು. ಆಡು ಮುಟ್ಟದ ಸೊಪ್ಪಿಲ್ಲ, ಇವರು ಬರೆಯದ ವಿಷಯವಿಲ್ಲ. ಕಾದಂಬರಿಯ ಬರವಣಿಗೆ ಅವರ ಪ್ರಮುಖವಾದರೂ ಯಕ್ಷಗಾನ, ನಾಟಕ, ಬಾಲ ಸಾಹಿತ್ಯ, ಮಕ್ಕಳಿಗಾಗಿ ಸಣ್ಣ ಕಥೆಗಳು, ಹಿರಿಯರಿಗಾಗಿ ಹರಟೆ, ವಿಡಂಬನೆ ಗಳು ಶಿಲ್ಪ ಮತ್ತು ವಾಸ್ತು, ಪತ್ರಿಕೋದ್ಯಮ, ವಿಜ್ಞಾನ ಸಾಹಿತ್ಯ ಹೀಗೆ ಅವರು ಪ್ರತಿಭೆಯ ನಾನಾ ಪ್ರಕಾರಗಳಲ್ಲಿ ಕನ್ನಡ ಸಾಹಿತ್ಯಲೋಕಕ್ಕೆ ಕೊಡುಗೆಯನ್ನು ನೀಡಿದ್ದಾರೆ.
ಅಷ್ಟೇ ಅಲ್ಲ ಸಾಹಿತ್ಯೇತರ ಹಲವಾರು ಕ್ಷೇತ್ರಗಳಲ್ಲೂ ಅವರ ಕೊಡುಗೆ ಮಹತ್ವದ್ದು ಆಗಿದೆ. ಇಂತಹ ವ್ಯಕ್ತಿತ್ವವನ್ನು ಬೇರೊಬ್ಬ ರಲ್ಲಿ ಕಾಣಲು ಸಾಧ್ಯವಿಲ್ಲ ಎನ್ನಬಹುದು. ಅವರು ನಮ್ಮಿಂದ ಕಣ್ಮರೆಯಾಗಿ ಬರೋಬ್ಬರಿ 25 ವರ್ಷಗಳು ಸಂದು ಹೋದವು. ಇಂದಿನ ತಲೆಮಾರಿಗೆ ಅವರನ್ನು ನೆನಪಿಸಿಕೊಳ್ಳಲೂ ಸವುಡಿಲ್ಲವಾಗಿರುವುದು ದುರದೃಷ್ಟಕರ. ಶೇಷ ಕಾರಂತರು-ಲಕ್ಷ್ಮೀ ದಂಪತಿಗೆ ಹನ್ನೆರಡು ಮಕ್ಕಳು. ಶಿವರಾಮ ಕಾರಂತರು ಐದನೇ ಯವರು. ಕಾರಂತರು ಹುಟ್ಟಿದ್ದು ಅಕ್ಟೋಬರ್ 10, 1902ರಂದು ಉಡುಪಿ ಜಿಲ್ಲೆಯ ಕೋಟ ಎಂಬ ಹಳ್ಳಿಯಲ್ಲಿ. ಒಂದೆಡೆ ಪಶ್ಚಿಮ ಘಟ್ಟದ ಸಾಲು ಹಾಗೂ ಮತ್ತೊಂದೆಡೆ ಅರಬ್ಬಿ ಸಮುದ್ರದ ಸುಂದರವಾದ ಕಡಲಿನ ದಂಡೆ.
ಹಾಗಾಗಿ ಬಾಲ್ಯದಿಂದಲೇ ಕಾರಂತರಿಗೆ ಪರಿಸರ ಪ್ರಜ್ಞೆ ಮೂಡಿರಬಹುದು. ಕಾರಂತರು ಪ್ರಾಥಮಿಕ ಓದಿದ್ದು ಕೋಟದ ಸರಕಾರಿ ಶಾಲೆಯಲ್ಲಿ. ನಂತರ ಪ್ರೌಢ ಶಿಕ್ಷಣಕ್ಕಾಗಿ ಹತ್ತಿರದ ಕುಂದಾಪುರಕ್ಕೆ ತೆರಳಬೇಕಾಯಿತು. ಅಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ತೇರ್ಗಡೆ ಗೊಂಡು ಮುಂದಿನ ಹೆಚ್ಚಿನ ಶಿಕ್ಷಣಕ್ಕಾಗಿ ಮಂಗಳೂರಿಗೆ ತೆರಳಿದರು. ಅದೇ ಸಂದರ್ಭದಲ್ಲಿ ದೇಶಾದ್ಯಂತ ಸ್ವಾತಂತ್ರ ಚಳವಳಿಯು ತೀವ್ರವಾಗಿತ್ತು. ಕಾರಂತರು ರಾಷ್ಟ್ರಪ್ರೇಮ ಹಾಗೂ ಮಹಾತ್ಮ ಗಾಂಧೀಜಿಯವರ ಆದರ್ಶವನ್ನು ಒಪ್ಪಿಕೊಂಡು ಸ್ವಾತಂತ್ರ್ಯ ಚಳವಳಿಯಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಹಾಗಾಗಿ ಶಿಕ್ಷಣವನ್ನು ಅರ್ಧ ದಲ್ಲಿಯೇ ನಿಲ್ಲಿಸಬೇಕಾಯಿತು.
ಆಗ ಅವರ ವಯಸ್ಸು ಇನ್ನೂ ಹತ್ತೊಂಬತ್ತು ವರ್ಷ. ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿದ್ದ ಅಂದಿನ ರಾಷ್ಟ್ರೀಯ ಕಾಂಗ್ರೆಸ್‌ನ ಧ್ಯೇಯವನ್ನು ಅನುಸರಿಸಿದರು. ಮಹಾತ್ಮ ಗಾಂಽಜಿರವರ ಕರೆಯ ಮೇರೆಗೆ ವಿದೇಶಿ ವಸ್ತುಗಳನ್ನು ಬಹಿಷ್ಕರಿಸುವ ಜನಜಾಗೃತಿ ಕಾರ್ಯದಲ್ಲಿ ಪೂರ್ಣವಾಗಿ ತಮ್ಮನ್ನು ತೊಡಗಿಸಿ ಕೊಂಡರು. ಕುಂದಾಪುರವನ್ನು ತಮ್ಮ ಕಾರ್ಯ ಕ್ಷೇತ್ರವನ್ನಾಗಿಸಿಕೊಂಡು ಸ್ನೇಹಿತರ ಸಹಕಾರದಿಂದ 1921ರಲ್ಲಿ ಖಾದಿ ಭಂಡಾರವನ್ನು ಪ್ರಾರಂಭಿಸಿದರು.
ಮದ್ಯಪಾನ, ಮೂಢನಂಬಿಕೆಗಳನ್ನು ನಿವಾರಿಸಲು ರಂಗಭೂಮಿಯನ್ನು ಆಯ್ಕೆ ಮಾಡಿಕೊಂಡರು. ಸ್ವತಃ ನಾಟಕಗಳನ್ನು ಬರೆದು ನಿರ್ದೇಶಿಸಿ, ಅಭಿನಯಿಸಿ ಜಾಗೃತಿ ಮೂಡಿಸಲು ಮುಂದಾದರು. ಕಾರಂತರದ್ದು ಸಂಪ್ರದಾಯಬದ್ಧ ಕುಟುಂಬ. ಅವರು ಮಂಗಳೂರಿನಲ್ಲಿದ್ದಾಗ ಅಂತರ್ಜಾತೀಯ ವಿವಾಹ ಬಂಧನಕ್ಕೆ ಒಳಗಾಗಿ ಲೀಲಾ ಎಂಬಾಕೆಯನ್ನು 1936ರಲ್ಲಿ ಬಾಳಸಂಗಾತಿ ಯನ್ನಾಗಿ ಮಾಡಿಕೊಂಡು ನಾಲ್ಕು ಮಕ್ಕಳನ್ನು ಪಡೆದು ಸುಮಾರು ೫೦ವರ್ಷಗಳ ದಾಂಪತ್ಯ ಜೀವನ ನಡೆಸಿದರು.
ಮುಂದೆ ಕಾರಂತರ ಆಸಕ್ತಿ ರಂಗಭೂಮಿಯಿಂದ ಚಲನ ಚಿತ್ರರಂಗದೆಡೆಗೆ ಹೊರಳಿತು. ಆಗ ಅವರು ಪುತ್ತೂರಿನಲ್ಲಿ ನೆಲೆಸಿದ್ದು, ಕಾರಂತರು ಚಲನಚಿತ್ರ ರಂಗ ಕುರಿತು ಅಧ್ಯಯನ ನಡೆಸಿ ಹಲವು ಲೇಖನಗಳನ್ನು ಪ್ರಕಟಿಸಿದರು. ಪಾಶ್ಚಾತ್ಯದಲ್ಲಿನ ಚಲನಚಿತ್ರದ ಹುಟ್ಟು, ಬೆಳವಣಿಗೆ ಹಾಗೂ ಸ್ವದೇಶದ ಚಲನಚಿತ್ರಗಳ ವಿಮರ್ಶೆಗಳಲ್ಲದೇ, ತಾಂತ್ರಿಕವಾಗಿಯೂ ಅನೇಕ ಸಂಗತಿಗಳನ್ನು ತಿಳಿಸುವ ವೈಜ್ಞಾನಿಕ ಶಬ್ದಕೋಶವನ್ನು ಸಹ ಬರೆದರು. ಚಲನಚಿತ್ರ ರಂಗದ ಬಗ್ಗೆ ಆಸಕ್ತಿಯಿಂದಾಗಿ ಜರ್ಮನ್ ಮತ್ತು ರಷ್ಯಾ ದೇಶಗಳಿಂದ ತಾಂತ್ರಿಕ ವಿವರಗಳನ್ನು ಸಂಗ್ರಹಿಸಿ ಸಿನಿ ಕ್ಯಾಮೆರಾವನ್ನು ಕೊಂಡು ಅಸ್ಪಶ್ಯತಾ ನಿವಾರಣೆಯ ಬಗ್ಗೆ ತಾವೇ ಚಿತ್ರಕಥೆ
ಯನ್ನು ರಚಿಸಿ, ಗೆಳೆಯ ನೆರವು ಪಡೆದು ಅವರಿಂದಲೇ ಅಭಿನಯ ಮಾಡಿಸಿ ತಾವೇ ಚಿತ್ರೀಕರಣ ಮಾಡಿ ಡೊಮಿಂಗೋ ಎಂದು ಚಿತ್ರಕ್ಕೆ ಹೆಸರಿಸಿ ಬೆಳ್ತಂಗಡಿಯ ಮಕ್ಕಳ ಕೂಟದಲ್ಲಿ ಪ್ರದರ್ಶಿಸಲು ಪ್ರಯತ್ನ ಮಾಡಿದರು.
ಮತ್ತೆ ಕಾರಂತರೇ ನಟ, ನಿರ್ದೇಶಕ, ಛಾಯಾಗ್ರಹಕರಾಗಿ ಭೂತರಾಜ್ಯ ಎಂಬ ಅತಿಮಾನುಷ ಕಲ್ಪನೆಯ ಚಲನಚಿತ್ರವನ್ನು ತೆಗೆದು ಮಂಗಳೂರಿನಲ್ಲಿ ಚಿತ್ರ ಪ್ರದರ್ಶನ ಮಾಡಿದರು. ಆದರೆ ಚಿತ್ರ ಯಶಸ್ವಿಯಾಗಲಿಲ್ಲ. ನಂತರ 1977ರಲ್ಲಿ ನಟಿ ಮಿನುಗುತಾರೆ
ಕಲ್ಪನಾ ಅವರೊಂದಿಗೆ ಸ್ಥಳೀಯ ಕಲಾವಿದರನ್ನೂ ಸೇರಿಸಿ ಮಲೆಯ ಮಕ್ಕಳು ಎಂಬ ಕಪ್ಪು ಬಿಳುಪು ಚಿತ್ರವನ್ನು ತೆರೆಗೆ ತಂದರು. ಇವರ ಅನುಭವವನ್ನು ಪರಿಗಣಿಸಿ ಕೇಂದ್ರ ಸರಕಾರವು ರಾಷ್ಟ್ರೀಯ ಚಲನಚಿತ್ರ ದೋರಣೆಯ ನಿಯಮವನ್ನು ರೂಪಿಸಲು ಸಮಿತಿಯನ್ನು ರಚಿಸಿ ಕಾರಂತರನ್ನು ಅಧ್ಯಕ್ಷರನ್ನಾಗಿ ನೇಮಿಸಿತು.
ಕಾರಂತರು ಕನ್ನಡ ಭಾಷೆಯ ಸೇವೆಗಾಗಿ 1923ರಲ್ಲಿ ವಸಂತ ಎಂಬ ಮಾಸ ಪತ್ರಿಕೆಯನ್ನು ಕುಂದಾಪುರದಿಂದ ಪ್ರಕಟಿಸಿ ಪತ್ರಿಕೋದ್ಯಮಿಯೂ ಆದರು. ತಮ್ಮ ಪತ್ತೆದಾರಿ ಕಾದಂಬರಿಗಳಾದ ಭೂತ, ವಿಚಿತ್ರಕೂಟ, ಬರಹವನ್ನು ವಸಂತ ಪತ್ರಿಕೆಯಲ್ಲಿ ಪ್ರಕಟಿಸಿ ಮೆಚ್ಚುಗೆಗಳಿಸಿದರು. ನಂತರ ಕಾರಂತರು ತಮ್ಮ ಹೆಚ್ಚಿನ ಆಸಕ್ತಿಯಾದ ಕಾದಂಬರಿ ಬರವಣಿಗೆಯಲ್ಲಿ ತೊಡಗಿಸಿ ಕೊಂಡರು.
ಸಮಾಜದ ವಾಸ್ತವಗಳಿಗೆ ಕನ್ನಡಿ ಹಿಡಿದರು. ಚೋಮನ ದುಡಿ, ಬೆಟ್ಟದ ಜೀವ, ಮರಳಿ ಮಣ್ಣಿಗೆ, ಅಳಿದಮೇಲೆ, ಮೈಮನಗಳ ಸುಳಿ
ಯಲ್ಲಿ ಹೀಗೆ ಸುಮಾರು ನಲವತ್ತೇಳಕ್ಕೂ ಮೀರಿ ಮಹತ್ವದ ಕಾದಂಬರಿಗಳನ್ನು ಬರೆದರು. ಜತೆಗೆ ಮೂವತ್ತೊಂದು ನಾಟಕಗಳು, ಹಲವಾರು ಅನುವಾದಿತ ಕೃತಿಗಳು, ಆಂಗ್ಲಕೃತಿಗಳು, ಸಣ್ಣಕಥೆಗಳು, ವಿಶ್ವಕೋಶ, ಆತ್ಮಕಥೆ ರಚಿಸಿ ಕನ್ನಡ ಸಾಹಿತ್ಯಲೋಕದಲ್ಲಿ ತಮ್ಮದೇ ಆದ ವಿಶಿಷ್ಟ ಛಾಪನ್ನು ಮೂಡಿಸಿದರು.
ಅವರ ಚೋಮನದುಡಿ ಕಾದಂಬರಿಯು ಚಲನಚಿತ್ರವಾಗಿ ರಾಷ್ಟ್ರೀಯ ಮನ್ನಣೆಗಳಿಸಿತು. ಮೂಕಜ್ಜಿಯ ಕನಸುಗಳು
ಕಾದಂಬರಿಯು ಕನ್ನಡ ಭಾಷೆಗೆ ಮೂರನೇ ಜ್ಞಾನಪೀಠ ಪ್ರಶಸ್ತಿಯನ್ನು ತಂದುಕೊಟ್ಟಿತು. ಕನ್ನಡದ ಕೀರ್ತಿ ಪತಾಕೆಯು ದೇಶ-ವಿದೇಶಗಳಲ್ಲೂ ಹರಡುವಂತೆ ಇಂಗ್ಲಿಷಿನಲ್ಲಿ ಬರೆದಿರುವ ಕೃತಿಗಳು ಆಂಗ್ಲಭಾಷೆಯ ಮೇಲಿನ ಕಾರಂತರ ಪ್ರಬುದ್ಧತೆಗೆ ಸಾಕ್ಷಿಯಾಗಿದೆ. ಹಾಗಾಗಿ ವಿದೇಶಗಳಲ್ಲೂ ಪ್ರತಿಷ್ಠಿತ ಸಂಘ-ಸಂಸ್ಥೆಗಳಿಂದ ಗೌರವಿಸಲ್ಪಟರು.
ಕಾರಂತರು ಕಾದಂಬರಿಯ ರಚನೆಯಷ್ಟೇ ಆಸಕ್ತಿಯನ್ನು ಪ್ರಾಚೀನ ಯಕ್ಷಗಾನ ಕಲೆಯಲ್ಲೂ ಹೊಂದಿದ್ದರು. ಅವರು
ಮಲೆನಾಡಿನಾದ್ಯಂತ ಪ್ರವಾಸ ಮಾಡಿ ಯಕ್ಷಗಾನ ಪ್ರಸಂಗಗಳು, ರಾಗತಾಳ, ವೇಷಭೂಷಣಗಳ ಕುರಿತು ವ್ಯಾಪಕವಾದ
ವಿಶೇಷ ಅಧ್ಯಯನ, ಸಂಶೋಧನೆಯನ್ನು ನಡೆಸಿ ಯಕ್ಷಗಾನ ಬಯಲಾಟ ಎಂಬ ಗ್ರಂಥವನ್ನು ರಚಿಸಿದರು. ಈ ಗ್ರಂಥಕ್ಕೆ
ಕೇಂದ್ರ ಸಾಹಿತ್ಯ ಅಕಾಡಮಿಯ ಪ್ರಶಸ್ತಿಯು ಲಭಿಸಿತು.
ಯಕ್ಷಗಾನ ಕಲೆಗೆ ರಾಷ್ಟ್ರ ಮನ್ನಣೆ ದೊರಕಿಸಿ ಕೇಂದ್ರ ಸರಕಾರದ ಸಂಗೀತ ನಾಟಕ ಅಕಾಡೆಮಿಯ ನೆರವಿನಿಂದ ಬ್ರಹ್ಮಾವರದಲ್ಲಿ ಯಕ್ಷಗಾನ ಶಿಕ್ಷಣ ನೀಡುವ ಶಾಲೆಯನ್ನು ತೆರೆದರು. ತಾವೇ ಸ್ವತಃ ಗೆಜ್ಜೆಕಟ್ಟಿ ಕುಣಿದು ತೋರಿಸುತ್ತಿದ್ದರು. ವಿಶೇಷವಾಗಿ ಯಕ್ಷಗಾನ ಕಲೆಯನ್ನು ಜಾಗತಿಕ ಮಟ್ಟದಲ್ಲಿ ಗುರುತಿಸುವಂತೆ ಮಾಡಿದವರು ಕಾರಂತರು. ಕಾರಂತರ ವಿಶೇಷ ಕಾರ್ಯಕ್ರಮವೆಂದರೆ ಪುತ್ತೂರಿನಲ್ಲಿ ದಸರಾ ಉತ್ಸವ ಆಚರಣೆ. ಹಲವಾರು ಕ್ಷೇತ್ರಗಳ ಪ್ರಸಿದ್ಧರನ್ನು ಆಹ್ವಾನಿಸಿ ಉಪನ್ಯಾಸ ಏರ್ಪಡಿಸುವುದು, ಅದೇ ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸುತ್ತಿದ್ದರು.
ಕೈಗಾ ಅಣುಸ್ಥಾವರ ಸ್ಥಾಪನೆಯಿಂದ ಆಗುವ ದುಷ್ಪರಿಣಾಮದ ಬಗ್ಗೆ ಜನಜಾಗೃತಿ ಉಂಟುಮಾಡಿ ಗಮನ ಸೆಳೆದರು. ಸಾರ್ವಜನಿಕ ಭಾಷಣಗಳು, ತಮ್ಮ ಬರಹಗಳು ಹಾಗೂ ನ್ಯಾಯಾಂಗದ ಮೂಲಕ ಹೋರಾಟದ ದನಿ ಎತ್ತಿದರು. ಪರಿಸರ ರಕ್ಷಣೆಗಾಗಿ ಇವರು ಮಾಡಿದ ಹೋರಾಟಕ್ಕಾಗಿ ಕೇಂದ್ರ ಸರಕಾರವು ದೇಶದ ಅತ್ಯುನ್ನತ ಪ್ರಶಸ್ತಿಯಾದ ಇಂದಿರಾ ಗಾಂಽ ಪರ್ಯಾವರಣ ಪುರಸ್ಕಾರ ನೀಡಿ ಗೌರವಿಸಲಾಯಿತು. ಈ ಹೋರಾಟದ ಹಿನ್ನೆಲೆಯಲ್ಲಿ ಕಾರಂತರು ಉತ್ತರಕನ್ನಡ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಸೋಲು ಅನುಭವಿಸಿದರು.
ಇದು ಕನ್ನಡಿಗರ ದುರ್ದೈವೇ ಸರಿ. ಒಮ್ಮೆ ಕಾರಂತರ ಸ್ನೇಹಿತರು ಭೇಟಿಯಾಗಿ ಕಾರಂತರ ಜೀವನ ವೃತ್ತಾಂತವನ್ನು ಬರೆಯುತ್ತೇ ವೆಂದು ಉತ್ಸುಕತೆಯನ್ನು ತೋರಿದಾಗ ನೀವು ನನ್ನನ್ನು ಕೊಲ್ಲಬೇಕಿಲ್ಲ! ನನ್ನ ಆತ್ಮಹತ್ಯೆಯನ್ನು ನಾನೇ ಮಾಡಿ ಕೊಳ್ಳುತ್ತೇನೆ ಎಂದು ಹೇಳಿದರಂತೆ. ಆನಂತರ ಕಾರಂತರು ತಮ್ಮ ಆತ್ಮಕಥನವನ್ನು ಬರೆದರು. ಕಾರಂತರಿಗೆ ಲಭಿಸಿದ ಪ್ರಶಸ್ತಿ, ಪುರಸ್ಕಾರಗಳು ಅನೇಕ. 1959ರಲ್ಲಿ ಯಕ್ಷಗಾನ ಬಯಲಾಟ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, 1962ರಲ್ಲಿ ಗೌರವ ಡಿ.ಲಿಟ್, 1966ರಲ್ಲಿ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, 1968ರಲ್ಲಿ ಭಾರತ ಸರಕಾರವು ನೀಡುವ ಶ್ರೇಷ್ಠ ಪದ್ಮಭೂಷಣ ಪ್ರಶಸ್ತಿಗೂ ಭಾಜನರಾದರು. ಅಲ್ಲದೇ 1975ರಲ್ಲಿ ದೇಶಾದ್ಯಂತ ಕೇಂದ್ರ ಸರಕಾರವು ತುರ್ತು ಪರಿಸ್ಥಿತಿ ಹೇರಿದ ಹಿನ್ನೆಲೆಯಲ್ಲಿ ಪದ್ಮಭೂಷಣ ಪ್ರಶಸ್ತಿಯನ್ನು ಹಿಂದಿರುಗಿಸಿ ತಮ್ಮ ಪ್ರತಿಭಟನೆಯನ್ನು ದಾಖಲಿಸಿದರು.
1978ರಲ್ಲಿ ಮೂಕಜ್ಜಿಯ ಕನಸುಗಳು ಕೃತಿಗಾಗಿ ದೇಶದ ಸಾಹಿತ್ಯ ಲೋಕದ ಶ್ರೇಷ್ಠ ಜ್ಞಾನಪೀಠ ಪ್ರಶಸ್ತಿ ಲಭಿಸಿತು. 1990ರಲ್ಲಿ ಮಧ್ಯಪ್ರದೇಶದ ಸರಕಾರದಿಂದ ಕೊಡುವ ತುಲಸೀ ಸಮ್ಮಾನ್ ಗೌರವ ಪ್ರಶಸ್ತಿ, 1992ರಲ್ಲಿ ಮೈಮನಗಳ ಸುಳಿಯಲ್ಲಿ ಕೃತಿಗಾಗಿ ರಾಜ್ಯದ ಪಂಪ ಪ್ರಶಸ್ತಿಯು ಲಭಿಸಿತು. ಮೈಸೂರಿನಲ್ಲಿ ನಡೆದ ಎರಡು ಅದ್ದೂರಿ ಕನ್ನಡ ಸಮ್ಮೇಳನದಲ್ಲಿ ಭಾಗವಹಿಸಿದ ಹೆಗ್ಗಳಿಗೆ
ಅವರದ್ದು. 1955ರ ಕನ್ನಡ ಸಾಹಿತ್ಯ ಸಮ್ಮೇಳನ ಮತ್ತು 1985ರ ಪ್ರಥಮ ವಿಶ್ವಕನ್ನಡ ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸಿದ್ದರು ಎಂಬುದು ಮೈಸೂರಿಗರಿಗೆ ಹೆಮ್ಮೆಯ ಸಂಗತಿ.
ತಮ್ಮ ಬದುಕಿನ ಕೊನೆಯವರೆವಿಗೂ ಬಿಡುವಿಲ್ಲದೆ ಜ್ಞಾನದ ಅನ್ವೇಷಣೆ ಹಾಗೂ ಬರವಣಿಗೆಯಲ್ಲಿ ತೊಡಗಿಸಿಕೊಂಡು ಸಂತೃಪ್ತ ಬದುಕಿನ ಡಾ. ಕೆ. ಶಿವರಾಮ ಕಾರಂತರು ತೊಂವತ್ತೈದು ವರ್ಷಗಳ ಸುದೀರ್ಘ ಜೀವನ ನಡೆಸಿ ಡಿಸೆಂಬರ್ ೯, 1997ರಲ್ಲಿ ಸಾರ್ಥಕ ಬದುಕಿನೊಂದಿಗೆ ಕೊನೆಗೊಂಡಿತು. ಕಡಲತೀರದ ಭಾರ್ಗವ ಕಾರಂತರ ನೆನಪಿನಲ್ಲಿ ಉಡುಪಿ ಜಿಲ್ಲೆ, ಕುಂದಾಪುರ ತಾಲ್ಲೂಕಿನ ಸಾಲಿಗ್ರಾಮದಲ್ಲಿ ಸ್ಮತಿಶಾಲೆ ಎಂಬ ಸಂಗ್ರಹಾಲಯವನ್ನು ಸ್ಥಾಪಿಸಲಾಗಿದ್ದು ಕಾರಂತರು ಉಪಯೋಗಿಸುತ್ತಿದ್ದ ಲೇಖನಿ, ಅವರ ಕಾದಂಬರಿಯ ಹಳೆಯ ಪ್ರತಿಗಳು, ಯಕ್ಷಗಾನ ದಿರಿಸುಗಳು, ಸ್ಮರಣಿಕೆಗಳು ಮೊದಲಾದವುಗಳನ್ನು ವೀಕ್ಷಿಸ ಬಹುದು. ಅವರ ಆಪ್ತ ಸಹಾಯಕಿಯಾದ ಶ್ರೀಮತಿ ಬಿ. ಮಾಲಿನಿ ಮಲ್ಯರವರ ಮಾರ್ಗದರ್ಶನದಲ್ಲಿ ಉತ್ತಮವಾಗಿ ನಿರ್ವಹಣೆ ಮಾಡುತ್ತಿರುವುದು ಸಂತಸದ ವಿಷಯ.