Sunday, 13th October 2024

’ಕಾರ್ಗಿಲ್’ ಗೆಲುವಿನ ಶ್ರೇಯಸ್ಸು, ಮಡಿದ ಸೈನಿಕರಿಗೇ ಸಲ್ಲಬೇಕು

ತನ್ನಿಮಿತ್ತ

ಕಿರಣ್ ಕುಮಾರ ವಿವೇಕವಂಶಿ

ಮರೆವು ನಮಗಿರುವ ಒಳ್ಳೆಯ ಹಾಗೂ ಕೆಟ್ಟ ಗುಣ! ಈ ದೇಶದ ಪರಂಪರೆ, ಇತಿಹಾಸ, ಘನತೆ, ಶ್ರೇಷ್ಠತೆಯನ್ನು ಮರೆತರೆ ಮರೆವು ಕೆಟ್ಟದ್ದು. ಆದರೆ ಕಹಿ ಘಟನೆಗಳನ್ನು ಮರೆಯುವುದಾದರೆ ಅದು ಒಳ್ಳೆಯದೇ ಅಲ್ಲವೆ? ಯುದ್ಧದಂತಹ ವೀರಗಾಥೆಗಳನ್ನು ಮರೆತರೆ ಅದಕ್ಕಿಂತ ಖೇದಕರ ಸಂಗತಿ ಏನಿದೆ? ಯುದ್ಧ ವೆಂದರೆ ಕೇವಲ ಎರಡು ರಾಷ್ಟ್ರಗಳ ನಡುವಿನ ಕಿತ್ತಾಟವಲ್ಲ ಅಥವಾ ಸೈನಿಕರು ದಾಳಿಮಾಡಿ ಎದುರಾಳಿಗಳನ್ನು ನಾಶ ಮಾಡುವುದೆಂದಲ್ಲ.

ಸರಕಾರವೊಂದು ಸಾಕಷ್ಟು ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು. ತನ್ನನ್ನು ಮಾನಸಿಕವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ ಸನ್ನದ್ಧಗೊಳಿಸಿಕೊಳ್ಳಬೇಕು. ಭಾರತ ಅಣ್ವಸ ಪ್ರಯೋಗಿಸಿ 15 ದಿನದಲ್ಲಿ, ಪಾಕಿಸ್ತಾನ ಅಣು ಪರೀಕ್ಷೆ ನಡೆಸಿತು. ಪರಿಣಾಮ ಜಗತ್ತಿನ ರಾಷ್ಟ್ರಗಳು ಭಾರತ ಮತ್ತು ಪಾಕಿಸ್ತಾನದ ಮೇಲೆ ನಿರ್ಬಂಧ ಹೇರಿದವು. ಭಾರತ ಹಿರಿಯಣ್ಣನಾಗಿ ಪಾಕಿಸ್ತಾನವನ್ನು ತಬ್ಬಿಕೊಳ್ಳಲು, ಸ್ನೇಹಿದ ಮಾತುಗಳನ್ನಾಡಲು ಕೈ ಚಾಚಿತು.

ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ 1999ರ ಫೆಬ್ರವರಿ 20ನೇ ತಾರೀಖು ಭಾರತದಿಂದ ಪಾಕಿಸ್ತಾನದತ್ತ ಬಸ್ ಒಂದನ್ನು ಹೊರಡಿಸಿದರು. ಸ್ವತಃ ಅಟಲ್‌ಜಿ ಎಲ್ಲ ಒತ್ತಡಗಳನ್ನು ಮೀರಿ ಪಾಕಿಸ್ತಾನಕ್ಕೆ ಹೊರಟರು. ಲಾಹೋರ್ ಒಪ್ಪಂದಕ್ಕೆ ಸಹಿ ಹಾಕಿ, ಶಿಮ್ಲಾ ಒಪ್ಪಂದಕ್ಕೆ ಬದ್ಧರಾಗಿರುವ ಭರವಸೆಯನ್ನು ಒಬ್ಬರಿಗೊಬ್ಬರು ನೀಡಿಕೊಂಡರು. ಜಂಟಲ್‌ಮನ್ ಒಪ್ಪಂದದ ಕರಾರುಗಳನ್ನು ಮರೆತು ಲಾಹೋರ್ ಘೋಷಣೆಗೆ ಅಂಕಿತಕ್ಕೆ ಬಿದ್ದ ವಾರಗಳಲ್ಲಿ ಅಂದರೆ 1999 ಮಾರ್ಚ್ 28ರ ವೇಳೆಗೆ, ಕಾರ್ಗಿಲ್ ಬೆಟ್ಟಗಳತ್ತ ಪಾಕಿಸ್ತಾನಿ ಸೇನೆ ದಾಳಿಗೆಂದು ಕಾಲಿಟ್ಟಿತ್ತು.

ಭಾರತದೊಂದಿಗೆ 1948, 1965, 1971ರ ಮೂರು ನೇರ ಯುದ್ಧಗಳಲ್ಲಿ ಸೋಲುಂಡ ಮೇಲೆ ಈ ಬಾರಿ ಛದ್ಮಯುದ್ಧದ ಮಾರ್ಗಹಿಡಿಯಿತು. ಪಾಕಿ ಸೈನ್ಯ ಹಾಗೂ ಐಎಸ್‌ಐಗಳು ಸಮರ್ಥ ಯೋಜನೆಗಳನ್ನು ರೂಪಿಸಿ ದ್ದವು. ಪಾಕಿಸ್ತಾನದ ಸೇನಾ ಮುಖ್ಯಸ್ಥ ಪರ್ವೇಜ್ ಮುಷರ- ತಡಮಾಡಲಿಲ್ಲ. ಶತ್ರುಗಳಿಗೆ ತಿಳಿಯುವ ಮುನ್ನ ಎತ್ತರದ ಗುಡ್ಡಗಳನ್ನು ವಶ ಪಡಿಸಿಕೊಳ್ಳುವುದೇ ಈ ಯೋಜನೆಯ ಗುರಿಯಾಗಿತ್ತು. ಮರುದಿನವೇ ಸೇನೆ ಜಾಟ್ ರೆಜಿಮೆಂಟ್‌ನ ಕ್ಯಾಪ್ಟನ್ ಸೌರಭ್ ಕಾಲಿಯಾರನ್ನು ಕಳುಹಿಸಿತು. ಆರು ಜನರ ತಂಡದೊಂದಿಗೆ ’ಬಜರಂಗ್’ ಪೋಸ್ಟಿನತ್ತ ಹೊರಟರು.

ಶತ್ರುಗಳಿರುವುದು ಖಾತ್ರಿಯಾಗಿ ತಂಡ ಕದನಕ್ಕಿಳಿಯಿತು. ಶತ್ರುಗಳ ಸಂಖ್ಯೆಯನ್ನು ಅಂದಾಜಿಸಲು ಎಡವಿದ್ದ ತಂಡ ಸೆರೆ ಸಿಕ್ಕಿತು. ಮೇ 24ರಂದು ವ್ಯವಸ್ಥಿತ ದಾಳಿ ಎಂದರಿತ ಸೇನೆ ಪ್ರಧಾನಿ, ರಕ್ಷಣಾ ಸಚಿವರು, ವಿದೇಶಾಂಗ ಸಚಿವರು, ಐಬಿ, ರಾಗಳು ಮತ್ತು ಮೂರು ಸೇನೆಯ ಮುಖ್ಯಸ್ಥರು ಮಹತ್ವದ ಸಭೆ ನಡೆಸಿತು.
ಅನುಮತಿ ದೊರೆತ ನಂತರ ಕೊನೆಯಲ್ಲಿ ಎದ್ದುನಿಂತು ನಿಶ್ಚಿತ ಗೆಲುವಿನ ಭರವಸೆಯಿಂದ ಇಡೀಯ ಹೋರಾಟವನ್ನು ‘ಆಪರೇಷನ್ ವಿಜಯ’ ಎಂದು ಕರೆದರು. ಯುದ್ಧ ಬಹಳ ಜೋರಾಗಿಯೇ ಶುರುವಾಯಿತು. ದಾಳಿ-ಪ್ರತಿದಾಳಿಗಳು ನಡೆದವು.

ವಿಮಾನಗಳ ಹಾರಾಟ, ಹೆಲಿಕಾಪ್ಟರ್‌ಗಳ ಸದ್ಧು, ಮದ್ದು-ಗುಂಡುಗಳ ಸಿಡಿತ, ರಾಷ್ಟ್ರಕ್ಕಾಗಿ ಪ್ರಾಣಕೊಡುವ ಸೈನಿಕನ ತುಡಿತ ಎಲ್ಲವೂ ಜೋರಾಗಿಯೇ
ನಡೆದಿತ್ತು. ತೋಲೋಲಿಂಗ್, ಟೈಗರ್ ಹಿಲ್, ಪಾಯಿಂಟ್ 5140, 4700, 5100, ಲೋನ್ ಹಿಲ್ ಮತ್ತು ಥ್ರೀ ಪಿಂಪಲ್ಸ್‌ಗಳನ್ನು ಸೇರಿದಂತೆ ಹಲವಾರು ಪ್ರದೇಶಗಳನ್ನು ಜುಲೈ 15ರ ಹೊತ್ತಿಗೆ ಅವರ ಕಪಿಮುಷ್ಟಿಯಿಂದ ವಶಪಡಿಸಿಕೊಳ್ಳಲಾಯಿತು. ಸುಮಾರು 527 ಯೋಧರ ಬಲಿದಾನದ ಬಳಿಕ 1999ರ ಜುಲೈ 26ಕ್ಕೆ ಕಾರ್ಯಾಚರಣೆ ನಿಲ್ಲಿಸಿ ಆಪರೇಷನ್ ವಿಜಯದ ಸಂಭ್ರಮಾಚರಣೆಯಲ್ಲಿ ತೊಡಗಿತ್ತು.

ಕ್ಯಾಪ್ಟನ್ ಸೌರಭ್ ಕಾಲಿಯಾ, ಕ್ಯಾಪ್ಟನ್ ವಿಕ್ರಂ ಬಾತ್ರಾ, ಗ್ರೇನೇಡಿಯರ್ ಯೋಗೇಂದರ್ ಸಿಂಗ್ ಯಾದವ್, ಕ್ಯಾಪ್ಟನ್ ಅಮೋಲ್ ಕಾಲಿಯಾ, ರಾಜೇಶ್ ಅಧಿಕಾರಿ, ಅಜಯ್ ಅಹುಜಾ, ಮೇಜರ್ ವಿವೇಕ್ ಗುಪ್ತಾ, ಕೆಂಗುರುಸೆ, ಲೆಫ್ಟಿನೆಂಟ್ ಮನೋಜ್ ಕುಮಾರ್ ಪಾಂಡೆ ಸೇರಿದಂತೆ ಸಾವಿರಾರು ಯೋಧರ ಸಾಹಸ ಮತ್ತು ತ್ಯಾಗದ ಪ್ರತೀಕವಾಗಿ ಗೆಲುವು ಪ್ರಾಪ್ತವಾಯಿತು. ಸತ್ಯ, ಧರ್ಮ, ನಿಸ್ವಾರ್ಥ, ಕರ್ತವ್ಯ ಬದ್ಧತೆ, ತ್ಯಾಗ, ಶೌರ್ಯಗಳಲ್ಲಿ ಭಾರತೀಯ ಸೈನಿಕರಿಗೆ ಸರಿಸಮ
ಮತ್ತಾರೂ ಇಲ್ಲ.