Wednesday, 9th October 2024

ರಾಜ್ಯ ಬಿಜೆಪಿ ಅದೇಕೆ ಈ ರೀತಿ ವರ್ತಿಸುತ್ತಿದೆ ?

ವರ್ತಮಾನ

maapala@gmail.com

ಕಾಂಗ್ರೆಸ್ ಮಾಡುತ್ತಿರುವ ಆರೋಪಗಳು, ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆ ಕುರಿತಂತೆ ರಾಜ್ಯ ಬಿಜೆಪಿ ನೀಡುತ್ತಿರುವ ಪ್ರತಿಕ್ರಿಯೆಗಳನ್ನು ನೋಡಿದರೆ ಪಕ್ಷದ ನಾಯಕರು ಏಕೋ ಆತ್ಮವಿಶ್ವಾಸ ಕಳೆದು ಕೊಂಡಂತೆ ಕಾಣುತ್ತಿದೆ.

ಒಂದು ವಾರದಿಂದ ಅತಿ ಹೆಚ್ಚು ಚರ್ಚೆಗೆ ಗ್ರಾಸವಾಗಿರುವುದು ಎರಡು ಸಂಗತಿಗಳು. ಮೊದಲನೆಯದ್ದು ಕಾಂತಾರ ಸಿನಿಮಾ, ಎರಡನೆಯದ್ದು ಕಾಂಗ್ರೆಸ್ ಆರೋಪಗಳಿಗೆ ರಾಜ್ಯ ಬಿಜೆಪಿ ನೀಡುತ್ತಿರುವ ಕೌಂಟರ್. ಈ ಪೈಕಿ ಕಾಂತಾರ ಸಿನಿಮಾ ಬಗ್ಗೆ ಪಾಸಿಟಿವ್ ಚರ್ಚೆಯಾಗುತ್ತಿದ್ದರೆ, ಬಿಜೆಪಿಯ ಕೌಂಟರ್ ಅಟ್ಯಾಕ್ ಬಗ್ಗೆ ಸಾಕಷ್ಟು ಟೀಕೆ, ವ್ಯಂಗ್ಯ ಜತೆಗೆ ಆಕ್ರೋಶವೂ ವ್ಯಕ್ತ ವಾಗುತ್ತಿದೆ.

ಬುದ್ಧಿವಂತರ ಪಕ್ಷ ಎನಿಸಿಕೊಳ್ಳುತ್ತಿದ್ದ ಬಿಜೆಪಿ ಏಕೆ ಹೀಗೆ ಆಡುತ್ತಿದೆ? ಅಧಿಕಾರ ಕಳೆದುಕೊಳ್ಳುವ ಆತಂಕದಿಂದ ಇಷ್ಟೊಂದು ಹತಾಶೆಗೆ ಒಳಗಾಗಿದೆಯೇ? ಕಾಂಗ್ರೆಸ್ ನೆಲಕಚ್ಚುತ್ತಿದೆ ಎಂದು ಹೇಳಿಕೊಳ್ಳುತ್ತಲೇ ಆ ಪಕ್ಷದ ಬಗ್ಗೆ ಅಷ್ಟೊಂದು ಭಯ ಬಂದಿದೆಯೇ? ಬಿಜೆಪಿ ಸರಕಾರದ ವಿರುದ್ಧ ಕಾಂಗ್ರೆಸ್ ಮಾಡುತ್ತಿರುವ ಆರೋಪಗಳು, ರಾಹುಲ್ ಗಾಂಧಿ ನೇತೃತ್ವದಲ್ಲಿ ರಾಜ್ಯದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆ ಬಿಜೆಪಿ ವಿರುದ್ಧ ಅಷ್ಟೊಂದು ತೀವ್ರಗತಿಯಲ್ಲಿ ಜನಾಭಿಪ್ರಾಯ ಮೂಡಿಸುತ್ತಿದೆಯೇ? ಹೀಗೆ ಸಾಲು ಸಾಲು ಪ್ರಶ್ನೆಗಳನ್ನು ಹುಟ್ಟುಹಾಕುತ್ತಿದೆ.

ಇದಕ್ಕೆ ಮೂಲ ಕಾರಣ ಕಾಂಗ್ರೆಸ್‌ನ ಭಾರತ ಜೋಡೋ ಯಾತ್ರೆ ವಿರುದ್ಧ ಮತ್ತು ಕಾಂಗ್ರೆಸ್ ಸರಕಾರದ ಭ್ರಷ್ಟಾಚಾರದ ಕುರಿತು ಬಿಜೆಪಿ ನೀಡಿರುವ ಎರಡು ಜಾಹೀರಾತು. ಹಾಗೆಂದು ಜಾಹೀರಾತು ಕೊಡುವುದರಲ್ಲಿ ತಪ್ಪೇನೂ ಇಲ್ಲ. ಆದರೆ, ಅದಕ್ಕೆ ಅನುಸರಿಸಿರುವ ಮಾರ್ಗದ ಬಗ್ಗೆ ಆ ಪಕ್ಷದ ಒಂದು ವರ್ಗವೂ ಒಳಗೊಂಡಂತೆ ರಾಜಕೀಯ ವಲಯದಲ್ಲಿ ಸಾಕಷ್ಟು ಚರ್ಚೆ ಆರಂಭವಾಗಿದೆ.

ಎಂತಹ ಕಠಿಣ ಪರಿಸ್ಥಿತಿಯಲ್ಲೂ ಎದೆಗುಂದದೆ ಹೋರಾಟ ಮಾಡಿ ಅಧಿಕಾರಕ್ಕೆ ಬಂದ ಪಕ್ಷ ಈ ಮಟ್ಟಕ್ಕೆ ಇಳಿದಿದೆಯೇ
ಎಂದು ಪ್ರಶ್ನಿಸುವಂತಾಗಿದೆ. ಏಕೆಂದರೆ, ಬಿಜೆಪಿ ನೀಡಿರುವ ಜಾಹೀರಾತಿನಲ್ಲಿ ತನ್ನ ವಿರುದ್ಧ ಕಾಂಗ್ರೆಸ್ ಮಾಡುತ್ತಿರುವ
ಆರೋಪಗಳನ್ನು ನಿರಾಕರಿಸಿ, ತನ್ನನ್ನು ಸಮರ್ಥಿಸಿಕೊಂಡು ತಾನು ಭ್ರಷ್ಟ ಅಲ್ಲ ಎಂದು ಹೇಳುವ ಬದಲು ತನಗಿಂತಲೂ
ಕಾಂಗ್ರೆಸ್ ಅತಿ ದೊಡ್ಡ ಕಳ್ಳ ಎಂದು ಹೇಳಿಕೊಳ್ಳುವಂತಿದೆ.

ಬಿಜೆಪಿ ಮತ್ತು ಪಕ್ಷದ ಸರಕಾರಕ್ಕೆ ತನ್ನ ಮೇಲೆ ವಿಶ್ವಾಸ ಇದ್ದಿದ್ದರೆ ಅಧಿಕಾರಕ್ಕೆ ಬಂದ ಮೇಲೆ ಏನೆಲ್ಲ ಮಾಡಿದ್ದೇವೆ?
ಯಾವ ರೀತಿ ಜನಪರ ಕಾರ್ಯಕ್ರಮಗಳನ್ನು ರೂಪಿಸಿದ್ದೇವೆ ಎಂಬುದನ್ನು ಅಂಕಿ ಅಂಶಗಳ ಸಹಿತ ವಿವರಿಸಿ, ಕಾಂಗ್ರೆಸ್‌ನ
ಆರೋಪಗಳು ಸತ್ಯಕ್ಕೆ ದೂರ ಎಂಬುದನ್ನು ತೋರಿಸಿಕೊಡಲು ಸಾಕಷ್ಟು ಮಾರ್ಗಗಳಿದ್ದವು. ಕಾಂಗ್ರೆಸ್ ವಿರುದ್ಧ ಋಣಾತ್ಮಕ
ಟೀಕೆಗಳನ್ನು ಮಾಡುವ ಬದಲು, ತನ್ನನ್ನು ಧನಾತ್ಮಕವಾಗಿ ಸಮರ್ಥಿಸಿಕೊಳ್ಳಲು ಅವಕಾಶವಿತ್ತು. ಆದರೆ, ಬಿಜೆಪಿ ತನ್ನನ್ನು
ಸಮರ್ಥಿಸಿಕೊಳ್ಳುವ ಬದಲು ಕಾಂಗ್ರೆಸನ್ನು ದೂರುವುದಕ್ಕೆ ಹೆಚ್ಚು ಸಮಯ, ಬುದ್ಧಿಶಕ್ತಿಯನ್ನು ವ್ಯರ್ಥ ಮಾಡುತ್ತಿದೆ.

ತಂತ್ರಗಾರಿಕೆಯಲ್ಲಿ ಸಂಪೂರ್ಣ ಎಡವಿ ಕಾಂಗ್ರೆಸನ್ನು ಜನರ ಮುಂದೆ ಬೆತ್ತಲು ಮಾಡಲು ಹೋಗಿ ತಾನೇ ಬೆತ್ತಲಾಗುವ
ಹಂತಕ್ಕೆ ಬಂದು ತಲುಪಿದೆ. ಬಿಜೆಪಿ ಸರಕಾರದ ವಿರುದ್ಧ ಕೆಂಪಣ್ಣ ನೇತೃತ್ವದ ಗುತ್ತಿಗೆದಾರರ ಸಂಘ ಮಾಡಿದ್ದ 40 ಪರ್ಸೆಂಟ್ ಕಮಿಷನ್ ಸರಕಾರ ಎಂಬ ಆರೋಪವನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಕ್ಯೂಆರ್ ಕೋಡ್ ಪೋಸ್ಟರ್ ಅಭಿಯಾನ ಆರಂಭಿಸಿದಾಗ ಬಿಜೆಪಿ ಮತ್ತು ಸರಕಾರದ ಕಡೆಯಿಂದ ಬಂದ ಪ್ರತಿಕ್ರಿಯೆ ಈ ವಿವಾದವನ್ನು ಮತ್ತಷ್ಟು ಹೆಚ್ಚು ಮಾಡಿ ಮೈಮೇಲೆ
ಎಳೆದುಕೊಳ್ಳುವಂತೆ ಮಾಡಿತು.

ನಂತರ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಪಾದಯಾತ್ರೆ ರಾಜ್ಯಕ್ಕೆ ಬಂದ ಮೇಲಂತೂ ಬಿಜೆಪಿ ನಡೆದುಕೊಳ್ಳು ತ್ತಿರುವ ರೀತಿ ಆ ಪಕ್ಷವನ್ನೇ ಮುಜುಗರಕ್ಕೆ ತಳ್ಳಿತು. ಪ್ರತಿಪಕ್ಷಗಳು, ಆ ಪಕ್ಷಗಳ ಬಗ್ಗೆ ಅನುಕಂಪ ಹೊಂದಿದವರು ಮಾತ್ರವಲ್ಲ, ಬಿಜೆಪಿ ಪರವಾಗಿರುವವರೂ ಪಕ್ಷದ ನಡೆಯನ್ನು ಟೀಕಿಸುವಂತೆ ಮಾಡಿತು.

ಭಾರತ್ ಜೋಡೋ ಯಾತ್ರೆ ಬಗ್ಗೆ ರಾಜ್ಯ ಬಿಜೆಪಿಗೇಕೆ ಅಷ್ಟೊಂದು ಭಯ? ಹೀಗೊಂದು ಪ್ರಶ್ನೆ ಇದೀಗ ಸಾರ್ವತ್ರಿಕವಾಗಿ ಕೇಳಿ ಬಂದಿದೆ. ಏಕೆಂದರೆ, ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆಯಿಂದ ರಾಜ್ಯದಲ್ಲಿ ಕಾಂಗ್ರೆಸ್‌ಗೆ ಹೆಚ್ಚು ಲಾಭ ವಾಗುತ್ತದೆ ಎಂಬ ದೊಡ್ಡ ನಿರೀಕ್ಷೆ ಆ ಪಕ್ಷದವರಿಗೇ ಇಲ್ಲ. ಇತ್ತೀಚೆಗೆ ನಡೆದ ಸಿದ್ದರಾಮೋತ್ಸವದ ಕುರಿತಾಗಿ ಆ ಪಕ್ಷದ
ಶಾಸಕರು, ಮುಖಂಡರಲ್ಲಿದ್ದ ಕುತೂಹಲ, ಹುಮ್ಮಸ್ಸು ಭಾರತ್ ಜೋಡೋ ಯಾತ್ರೆ ಸಂದರ್ಭದಲ್ಲಿ ಕಂಡುಬರುತ್ತಿಲ್ಲ.

ಕೆಪಿಸಿಸಿ ಅಧ್ಯಕ್ಷರ ಕಟ್ಟಪ್ಪಣೆ, ರಾಹುಲ್ ಯಾತ್ರೆಗೆ ಸಹಕರಿಸದೇ ಇದ್ದಲ್ಲಿ ಮುಂದಿನ ಚುನಾವಣೆಯಲ್ಲಿ ಎಲ್ಲಿ ಟಿಕೆಟ್ ಕೈತಪ್ಪು ತ್ತದೋ ಎಂಬ ಕಾರಣಕ್ಕೆ ಬಹುತೇಕರು ಈ ಯಾತ್ರೆಯಲ್ಲಿ ಪಾಲ್ಗೊಂಡಿzರೆ. ರಾಹುಲ್ ಪಾದಯಾತ್ರೆ ನಮಗೆ ಮುಖ್ಯವಲ್ಲ, ಪಾದಯಾತ್ರೆಯ ಜತೆಗೆ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ತಮ್ಮ ಕ್ಷೇತ್ರಕ್ಕೆ ಬರುವುದು ಮುಖ್ಯ ಎಂದು ಆ ಪಕ್ಷದ ಶಾಸಕರೇ ಹೇಳಿಕೊಳ್ಳುತ್ತಿದ್ದಾರೆ.

ಏಕೆಂದರೆ, ರಾಹುಲ್ ಗಾಂಧಿ ಬಂದು ಹೋದರೆ ಕ್ಷೇತ್ರದಲ್ಲಿ ಮತಗಳಿಕೆ ಪ್ರಮಾಣ ಹೆಚ್ಚಾಗಬಹುದು ಎಂಬ ನಿರೀಕ್ಷೆ ಆ ಪಕ್ಷ ದವರಿಗೇ ಇಲ್ಲ. ಹೀಗಿರುವಾಗ ರಾಹುಲ್ ಯಾತ್ರೆ ಬಗ್ಗೆ ಬಿಜೆಪಿ ಅಷ್ಟೇಕೆ ತಲೆಕೆಡಿಸಿಕೊಂಡಿದೆಯೋ ಅರ್ಥವಾಗುತ್ತಿಲ್ಲ.
ಅಷ್ಟಕ್ಕೂ ರಾಹುಲ್ ನೇತೃತ್ವದ ಭಾರತ್ ಜೋಡೋ ಯಾತ್ರೆ ನಡೆಯುತ್ತಿರುವುದು ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಸರಕಾರದ ವಿರುದ್ಧ. ಆದರೆ, ನರೇಂದ್ರ ಮೋದಿಯವರಾಗಲಿ, ಬಿಜೆಪಿಯ ರಾಷ್ಟ್ರೀಯ ನಾಯಕರಾಗಲಿ ಇದರ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿಲ್ಲ.

ಭಾರತ್ ಜೋಡೋ ಹೆಸರಿನಲ್ಲಿ ರಾಹುಲ್ ಯಾತ್ರೆಗೆ ಮುಂದಾಗುತ್ತಿದ್ದಂತೆ, ಭಾರತವನ್ನು ಒಡೆದು ಮೂರು ರಾಷ್ಟ್ರಗಳನ್ನು ಸೃಷ್ಟಿಸಿದ, ಚೀನಾ ಮತ್ತು ಪಾಕಿಸ್ತಾನಕ್ಕೆ ಭಾರತದ ಭೂಭಾಗವನ್ನು ದಾನವಾಗಿ ನೀಡಿದ ಕಾಂಗ್ರೆಸ್ ಅದು ಹೇಗೆ ಭಾರತವನ್ನು ಜೋಡಿಸುತ್ತದೆ? ಧರ್ಮದ ಆಧಾರದ ಮೇಲೆ ದೇಶ ವಿಭಜಿಸಿದ, ಅದೇ ಧರ್ಮದ ಆಧಾರದ ಮೇಲೆ ಜನರನ್ನು ವಿಭಜಿಸಿ ವೋಟ್ ಬ್ಯಾಂಕ್ ಸೃಷ್ಟಿಸಿಕೊಂಡು ಈಗಲೂ ಅದನ್ನೇ ಅವಲಂಬಿಸಿರುವ ಕಾಂಗ್ರೆಸ್ ದೇಶದ ಜನರನ್ನು ಹೇಗೆ ಒಗ್ಗೂಡಿಸಲು ಸಾಧ್ಯ ಎಂಬ ಪ್ರಶ್ನೆಗಳನ್ನು ಮುಂದಿಟ್ಟು ಆರಂಭದ ಯಾತ್ರೆಯ ತೀವ್ರತೆಗೆ ಪೆಟ್ಟು ಕೊಟ್ಟಿತ್ತು.

ನಂತರದಲ್ಲಿ ರಾಹುಲ್ ಏನೇ ಟೀಕೆ ಮಾಡಿದರೂ ಅದಕ್ಕೆ ತಿರುಗೇಟು ಕೂಡ ನೀಡದೆ ನಿರ್ಲಕ್ಷ್ಯ ಮಾಡುತ್ತಿದೆ. ಏಕೆಂದರೆ, ಅವರಿಗೆ ತಮ್ಮ ಶಕ್ತಿ, ಕೆಲಸದ ಬಗ್ಗೆ ವಿಶ್ವಾಸವಿದೆ. ಆದರೆ, ರಾಜ್ಯ ಬಿಜೆಪಿ ನಾಯಕರಲ್ಲಿ ಆ ವಿಶ್ವಾಸದ ಕೊರತೆ ಎದ್ದು ಕಾಣುತ್ತಿದೆ. ಅದು ಎಷ್ಟರ ಮಟ್ಟಿಗೆ ಎಂದರೆ, ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಜಾರಿಗೆ ತಂದಿರುವ ಜನಪರ ಯೋಜನೆಗಳನ್ನು ಸಮರ್ಥವಾಗಿ ಜನರ ಮುಂದಿಡಲು ಸಾಧ್ಯವಾಗದಷ್ಟು.

ಇಲ್ಲದೇ ಇದ್ದರೆ, ೨೦೧೩ರಲ್ಲಿ ಬಿ.ಎಸ್.ಯಡಿಯೂರಪ್ಪ ಬಿಜೆಪಿಯನ್ನು ಒಡೆದು ಕೆಜೆಪಿ ಕಟ್ಟಿದ ಬಳಿಕವೂ ವಿಧಾನಸಭೆ ಚುನಾವಣೆಯಲ್ಲಿ ೪೦ ಸೀಟುಗಳನ್ನು ಗೆಲ್ಲುವಷ್ಟರ ಮಟ್ಟಿಗೆ ಯಶಸ್ವಿಯಾದ, 2018ರ ವಿಧಾನಸಭೆ ಚುನಾವಣೆಯಲ್ಲಿ 104 ಸ್ಥಾನಗಳೊಂದಿಗೆ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮುವಂತೆ ನೋಡಿಕೊಂಡ ಬಿಜೆಪಿ ನಾಯಕರು, ಈ ಬಾರಿ ಏಕೋ ಪಕ್ಷ ಮತ್ತು ಸರಕಾರದ ವಿರುದ್ಧದ ಆರೋಪಗಳಿಗೆ ತೀರಾ ಅತಿಯಾಗಿ ವರ್ತಿಸುತ್ತ ತಮ್ಮ ಕಾಲ ಮೇಲೆ ತಾವೇ ಚಪ್ಪಡಿ ಕಲ್ಲು
ಎಳೆದುಕೊಳ್ಳುತ್ತಿರುವಂತೆ ಕಾಣಿಸುತ್ತಿದೆ.

ಏಕೆಂದರೆ ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆ ಆರಂಭಿಸಿದ್ದು ತಮಿಳುನಾಡಿನ ಕನ್ಯಾಕುಮಾರಿಯಿಂದ. ನಂತರ
ಅಲ್ಲಿಂದ ಕೇರಳಕ್ಕೆ ಬಂದು ರಾಜ್ಯ ಪ್ರವೇಶಿಸಿದರು. ಆ ಎರಡೂ ರಾಜ್ಯಗಳಲ್ಲಿ ರಾಹುಲ್ ಯಾತ್ರೆ ಅಷ್ಟೊಂದು ಸುದ್ದಿ ಮಾಡಲೇ
ಇಲ್ಲ. ಅದರಿಂದ ಹೆಚ್ಚು ಪರಿಣಾಮವೂ ಆಗಿರಲಿಲ್ಲ. ಆದರೆ, ಯಾತ್ರೆ ಕರ್ನಾಟಕ ಪ್ರವೇಶಿಸುತ್ತಿದ್ದಂತೆ ಅದು ರಾಷ್ಟ್ರ ಮಟ್ಟದಲ್ಲಿ
ಭಾರೀ ಸುದ್ದಿಯಾಯಿತು. ಹಾಗೆ ಸುದ್ದಿಯಾಯಿತು ಎನ್ನುವುದಕ್ಕಿಂತಲೂ ರಾಜ್ಯ ಬಿಜೆಪಿ ಕಡೆಯಿಂದ ಅದಕ್ಕೆ ಬಂದ ಪ್ರತಿಕ್ರಿಯೆ
ಯಾತ್ರೆಯ ಜನಪ್ರಿಯತೆಯನ್ನು ಹೆಚ್ಚಿಸಿತು.

ರಾಹುಲ್ ಯಾತ್ರೆ ಕರ್ನಾಟಕದಲ್ಲಿ ಕಾಂಗ್ರೆಸನ್ನು ಮತ್ತೆ ಅಧಿಕಾರಕ್ಕೆ ತರುತ್ತದೆ ಎಂಬ ಅಭಿಪ್ರಾಯ ಮೂಡಿಸುವಂತೆ ಮಾಡಿತು.
ಅಷ್ಟರ ಮಟ್ಟಿಗೆ ಭಾರತ್ ಜೋಡೋ ಯಾತ್ರೆಗೆ ಪ್ರಚಾರ ಸಿಗುವಂತೆ ಬಿಜೆಪಿಯೇ ನೋಡಿಕೊಂಡಿತು. ಹಾಗೆಂದು ಇಲ್ಲಿ ಬಿಜೆಪಿ ಸೋಲು ಒಪ್ಪಿಕೊಳ್ಳುತ್ತಿದೆ ಎಂದು ಅರ್ಥವಲ್ಲ. ಸೋಲು ಒಪ್ಪಿಕೊಳ್ಳುತ್ತಿರುವವರು ನಾಯಕತ್ವ ವಹಿಸಿಕೊಂಡಿರುವವರು. ಪಕ್ಷದಲ್ಲಿ ಅತ್ಯಂತ ಪರಿಣಾಮಕಾರಿ ತಂತ್ರಗಾರಿಕೆ ರೂಪಿಸುವ ಸಾಮರ್ಥ್ಯ ಹೊಂದಿರುವ ಚಾಣಾಕ್ಷರಿದ್ದಾರೆ. ಆದರೆ, ಅವರನ್ನು ಬಳಸಿಕೊಳ್ಳುವ ಪ್ರಯತ್ನಕ್ಕೆ ನಾಯಕರು ಮುಂದಾಗುತ್ತಿಲ್ಲ.

ಅದರ ಬದಲಾಗಿ ಯಾರನ್ನೋ ನಂಬಿ ಕುಳಿತು, ಅವರು ಹೇಳಿದಂತೆ ಕೇಳಿ ತಮ್ಮನ್ನು ತಾವೇ ಅಪಾಯಕ್ಕೆ ಒಡ್ಡಿಕೊಳ್ಳುತ್ತಿzರೆ. ಅದರ ಬದಲು ಪಕ್ಷದ ರಾಷ್ಟ್ರೀಯ ನಾಯಕರತ್ತ, ಕಾಂಗ್ರೆಸ್ ಮತ್ತು ಅದು ನಡೆಸುತ್ತಿರುವ ಭಾರತ್ ಜೋಡೋ ಯಾತ್ರೆ ಕುರಿತು
ಅವರ ಪ್ರತಿಕ್ರಿಯೆ, ಕಾಂಗ್ರೆಸ್‌ನ ಆರೋಪಗಳಿಗೆ ಆ ನಾಯಕರು ನೀಡುತ್ತಿರುವ ತಣ್ಣನೆಯ ತಿರುಗೇಟುಗಳನ್ನು ಒಮ್ಮೆ
ಗಮನಿಸಿದರೆ ನಾವೆಲ್ಲಿ ಎಡವಿದ್ದೇವೆ ಮತ್ತು ಎಡವುತ್ತಿದ್ದೇವೆ ಎಂಬುದು ಅರ್ಥವಾಗಬಹುದು.

ಲಾಸ್ಟ್ ಸಿಪ್: ರಾಜ್ಯದಲ್ಲಿ ಬಿಜೆಪಿಯ ಪರಿಸ್ಥಿತಿ ಉಗುರಲ್ಲಿ ಹೋಗುವುದಕ್ಕೆ ಕೊಡಲಿ ತೆಗೆದುಕೊ ಎನ್ನುವಂತಾಗಿದೆ!